Homeಮುಖಪುಟದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?

ದೇಶದ ಬಂದರುಗಳು ಮತ್ತು ನದಿಗಳು ಮಾರಾಟವಾಗುತ್ತಿರುವುದನ್ನು ನೀವು ಬಲ್ಲಿರೇನು?

ಇನ್ನು ಮುಂದೆ ಮಂಗಳೂರು ಬಂದರಿಗೆ ಸೇರಿದ ಕರಾವಳಿ ಪ್ರದೇಶದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಅದು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ.

- Advertisement -
- Advertisement -

“ಸೌಗಂಧ್ ಮುಝೆ ಇಸ್ ಮಿಟ್ಟೀಕೀ, ಮೈ ದೇಶ್ ನಹೀ ಬಿಕನೆ ದೂಂಗಾ” (ನನಗೆ ಈ ಮಣ್ಣಿನ ಆಣೆ, ನಾನು ದೇಶವನ್ನು ಮಾರಲು ಬಿಡುವುದಿಲ್ಲ) ಎಂಬ ಭಾಷಣ ಕೇಳಿ ಚಪ್ಪಾಳೆ ಹೊಡೆದು ನಿಮ್ಮ ಅಮೂಲ್ಯವಾದ ಮತವನ್ನು ಓರ್ವ ಮೋಡಿಗಾರನಿಗೆ ಹಾಕಿ ನಿಶ್ಚಿಂತೆಯಿಂದ ಮನೆಯಲ್ಲಿ ಮಲಗಿದ್ದಿರಿ ಅಲ್ಲವೇ? ಈಗ ನೋಡಿ ನಮ್ಮ ದೇಶ ಹೇಗೆ ಹೇಗೆ ಮಾರಾಟವಾಗುತ್ತಿದೆ ಎಂದು.

ನಿಮ್ಮ ಮತದ ಆಧಾರದಿಂದ ಗಳಿಸಿದ ಸಂಸತ್ತಿನ ಬಹುಮತದ ಮೇರೆಗೆ ಸರಕಾರ ಯಾವ ಯಾವ ಕಾಯ್ದೆಗಳನ್ನು ತರುತ್ತಿದೆ, ತಂದಿದೆ, ಹಳೆಯ ಕಾಯಿದೆಗಳಿಗೆ ತಿದ್ದುಪಡಿ ಮಾಡಿದೆ, ನಿಯಮಾವಳಿ ರೂಪಿಸಿದೆ ಅಥವಾ ಬದಲಾಯಿಸಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಇದರಲ್ಲಿ ದೇಶದ ಜನತೆಗೆ ಯಾವ ರೀತಿ ಮೋಸವಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಕೋಸ್ಟಲ್ ರೆಗ್ಯುಲೇಷನ್ ಜ಼ೊನ್ (ಸಿ ಅರ್ ಝೆಡ್) ನೋಟಿಫಿಕೇಷನ್ 2019ರಲ್ಲಿ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆ ಮಾಡುವುದರಿಂದ ಪರಿಸರ ಸಂರಕ್ಷಣೆ, ಅಭಿವೃದ್ಧಿ, ಉದ್ಯೋಗವಕಾಶ ಮತ್ತು ಜನರ ಜೀವನ ಗುಣಮಟ್ಟ ಹೆಚ್ಚಳ ಆಗುತ್ತದೆ ಎಂದು ಬಾಯಿಯಲ್ಲಿ ಹೇಳುತ್ತಾ ಕೇರಳ ರಾಜ್ಯದ ಕೊಚ್ಚಿ ನಗರದ ಮಾರಾಡುವಿನ ಕರಾವಳಿ ತೀರದ ನಾಲ್ಕು ದೊಡ್ಡ ಬಿಲ್ಡಿಂಗುಗಳನ್ನು ಜನವರಿ 2020ರಲ್ಲಿ, ನ್ಯಾಯಾಲಯದ ಆದೇಶದ ಮೇರೆಗೆ, ನಗರಪಾಲಿಕೆ ಕೆಡವಿದ ದೃಶ್ಯ ನಿಮಗೆ ನೆನಪಿರಬಹುದು. ಇದನ್ನು ನೀವು ಸ್ವಾಗತಿಸಿರಲೂಬಹುದು.

ಇದೇ ಕಾಯಿದೆಯಡಿ ಗೋವಾ ರಾಜ್ಯದ ಸಂಪೂರ್ಣ 53 ಕಿ.ಮೀ. ಉದ್ದದ ಕರಾವಳಿಯನ್ನು ಮೊರ್ಮುಗಾವ್ ಪೋರ್ಟ್ ಟ್ರಸ್ಟಿ (ಎಂಪಿಟಿ) ಗೆ ಹಸ್ತಾಂತರಿಸಿದೆ ಎಂಬ ಸುದ್ದಿ ಇದೆ ಆದರೆ ಎಂಪಿಟಿ ತನಗೆ ಕೇಂದ್ರ ಸರಕಾರದ ಈ ಸುತ್ತೋಲೆ ಸಿಕ್ಕೇ ಇಲ್ಲ ಎಂದು ಹೇಳಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಬುಲ್ಡೋಜರ್ ಮೂಲಕ ಪಾರಿತಗೊಂಡ ಮೇಜರ್ ಪೋರ್ಟ್ ಅಥಾರಿಟೀಸ್ ಆಕ್ಟ್ 2021ರ ಸೆಕ್ಷನ್ 21, 22(2) ಮತ್ತು 22(3)ರ ಪ್ರಕಾರ ಯಾವುದೇ ಬಂದರಿನ ಆಡಳಿತ ಮಂಡಳಿ (ಬೋರ್ಡ್) ಅದಕ್ಕೆ ಸೇರಿದ ಎಲ್ಲಾ ಆಸ್ತಿಗಳ ಅಭಿವೃದ್ಧಿಯನ್ನು ತನ್ನ ಮನಸೋ ಇಚ್ಛೆ ಮಾಡಬಹುದು. ಇದಕ್ಕೆ ಯಾವುದೇ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ಪರವಾನಗಿ ಬೇಕಿಲ್ಲ ಅಥವಾ ಸ್ಥಳೀಯ ಕಾನೂನು ಅಡ್ಡ ಬರುವುದಿಲ್ಲ ಎಂದು ಹೇಳುತ್ತದೆ.

ಹಲವು ರಾಜ್ಯಗಳಲ್ಲಿರುವ ಬಂದರಿನ ಸಮಗ್ರ ಆಸ್ತಿಯನ್ನು, ರಾಜ್ಯ ಸರಕಾರದ ಸಮ್ಮತಿಯಿಲ್ಲದೇ, ಕೇಂದ್ರ ಸರಕಾರ ಈ ದೊಡ್ಡ ಬಂದರುಗಳ ಪೋರ್ಟ್ ಟ್ರಸ್ಟಿನ ಸುಪರ್ದಿಗೆ ಈಗಾಗಲೇ ವರ್ಗಾಯಿಸಿದೆ. ಇದರಲ್ಲಿ ನಮ್ಮ ಕರ್ನಾಟಕದ ಹೊಸ ಮಂಗಳೂರು ಬಂದರೂ ಸಹ ಸೇರಿದೆ. ಅಂದರೆ ಇನ್ನು ಮುಂದೆ ಮಂಗಳೂರು ಬಂದರಿಗೆ ಸೇರಿದ ಕರಾವಳಿ ಪ್ರದೇಶದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಅದು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ಕರಾವಳಿಯ “ಬೀಚ್” ಇನ್ನು ಮುಂದೆ “ಕ್ಲೋಸ್”. ಕರಾವಳಿಯ ಮೀನುಗಾರರ ಜೀವನ ನೀರುಪಾಲು.

ಇದೇ ರೀತಿ ಇನ್ನೆರಡು ಕಾಯಿದೆ ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ 2020 ಮತ್ತು ನ್ಯಾಷನಲ್ ವಾಟರ್ವೇಸ್ ಆಕ್ಟ್ 2016 ಇವನ್ನು ಒಟ್ಟಾರೆ ಸೇರಿಸಿ ನೋಡಿದಾಗ ಕರ್ನಾಟಕದ ಹಲವಾರು ನದಿಗಳನ್ನು ರಾಷ್ಟ್ರೀಯ ಜಲಮಾರ್ಗ ಎಂದು ಘೋಷಿಸಲಾಗಿದೆ. ಇದರಲ್ಲಿ ನಮ್ಮ ಭೀಮಾ, ಘಟಪ್ರಭಾ, ಕಬಿನಿ, ಕಾಳೀನದಿ, ಕೃಷ್ಣಾ, ಮಲಪ್ರಭಾ, ನೇತ್ರಾವತಿ, ಶರಾವತಿ, ತುಂಗಭದ್ರಾ, ಉದಯಾವರ ಮುಂತಾದ ನದಿಗಳು ಸೇರಿವೆ. ನಮ್ಮ ನದಿಗಳು ರಾಷ್ಟ್ರೀಯ ಜಲಮಾರ್ಗ ಆದರೆ ತಪ್ಪೇನು, ರಾಷ್ಟ್ರೀಯ ಹೆದ್ದಾರಿಗಳು ನಮ್ಮ ರಾಜ್ಯದಲ್ಲಿ ಇಲ್ಲವೇ ಎಂದು ನೀವು ಅನ್ನಬಹುದು. ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ ನಿಯಮದ ಪ್ರಕಾರ ಈ ರಾಷ್ಟ್ರೀಯ ನದಿಗಳು ರಾಜ್ಯದ ಸ್ವತ್ತು ಆಗುವುದಿಲ್ಲ. ಇವು ಕೇಂದ್ರ ಸರಕಾರದ ಸಂಸ್ಠೆಯಾದ “ಇನ್ಲ್ಯಾಂಡ್ ವಾಟರ್ವೇ ಅಥಾರಿಟಿ ಆಫ್ ಇಂಡಿಯಾ”ದ ಸ್ವತ್ತು ಆಗುತ್ತದೆ. ಇದೇ ಕಾಯಿದೆಯ ಸೆಕ್ಷನ್ 2ರ ಪ್ರಕಾರ “ಅಪರ್ಟುನೆಂಟ್ ಲ್ಯಾಂಡ್” ಅಂದರೆ ನದಿಯ ಎರಡೂ ಬದಿಯಲ್ಲಿ ಹೊಂದಿಕೊಂಡಿರುವಂತಹ ಜಮೀನು, ಅದನ್ನು ಮಾರ್ಕ್ ಮಾಡಿರಲಿ ಅಥವಾ ಬಿಟ್ಟಿರಲಿ, ಅದೂ ಸಹ ಇನ್ಲ್ಯಾಂಡ್ ವಾಟರ್ವೇ ಅಥಾರಿಟಿ ಆಫ್ ಇಂಡಿಯಾದ ಸ್ವತ್ತು ಆಗುತ್ತದೆ. ಈ ನೆಲವನ್ನೂ ಸಹ ಅಥಾರಿಟಿಯವರು ತಮ್ಮ ಮನಸೋ ಇಚ್ಛೆ ಅಭಿವೃದ್ಧಿ ಮಾಡಬಹುದು ಮತ್ತು ಇದರಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ನದಿ ತೀರದ ಜನರ ಪಾಡು ನೀರು ಪಾಲು.

ಗೋವಾ ರಾಜ್ಯದ ಜಿ ಆರ್ ಇ ಎಂಬ ಸಂಸ್ಥೆ ಮತ್ತು ರಾಷ್ಟ್ರೀಯ ಮೀನುಗಾಗರ ಸಂಘ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಿ ಅರ್ ಝೆಡ್ ನೋಟಿಫಿಕೇಷನ್ 2019, ಮೇಜರ್ ಪೋರ್ಟ್ ಅಥಾರಿಟೀಸ್ ಆಕ್ಟ್ 2021 ಮತ್ತು ನ್ಯಾಷನಲ್ ವಾಟರ್ವೇಸ್ ಆಕ್ಟ್ 2016 ಇವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ಲ್ಯಾಂಡ್ ವಾಟರ್ವೇ ಅಥಾರಿಟೀಸ್ ಆಕ್ಟ್ ಸೆಕ್ಷನ್ 26ರ ಅನ್ವಯ “ಸಾರ್ವಜನಿಕ ಅವಶ್ಯಕತೆಗೆ” ಬೇಕಾದಷ್ಟು ನದಿ ತೀರದ ಜಮೀನನ್ನು ಅಥಾರಿಟಿ ಅಧಿಗ್ರಹಿಸಬಹುದು ಮತ್ತು ಅವರಿಂದ ಸಾಧ್ಯವಾಗದೇ ಇದ್ದಲ್ಲಿ ರಾಜ್ಯ ಸರಕಾರ ಅದನ್ನು ಅಧಿಗ್ರಹಿಸಿ ಅಥಾರಿಟಿಗೆ ಹಸ್ತಾಂತರಿಸಬೇಕು. ಆದರೆ ಈ ಜಮೀನಿನ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಅಥವಾ ರಾಜ್ಯ ಸರಕಾರದ ನಿಯಂತ್ರಣವಾಗಲೀ ಇರುವುದಿಲ್ಲ ಮತ್ತು ಸ್ಥಳೀಯ ಜನರ ಉಪಯೋಗಕ್ಕಾಗಲೀ ಸಿಗುವುದಿಲ್ಲ. ಅಂದರೆ ಒಂದು ರಾಜ್ಯದೊಳಗೆ ಕೇಂದ್ರ ತನ್ನದೇ ಆದ ರಾಜ್ಯವನ್ನು ಸ್ಥಾಪಿಸಿ ವಿಸ್ತರಿಸುತ್ತಿದೆ. ಹಂತಹಂತವಾಗಿ ರಾಜ್ಯದ ಆಸ್ತಿ ಮತ್ತು ಅಧಿಕಾರವನ್ನು ಕೇಂದ್ರ ಕಬಳಿಸುತ್ತಾ ಬಂದಿದೆ. ಸಂವಿಧಾನದ ಆರ್ಟಿಕಲ್ 1 ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ರಾಜ್ಯಗಳು ಕೇಂದ್ರ ಶಾಸಿತ ಪ್ರದೇಶಗಳಾಗುತ್ತಿವೆ.

ಅಷ್ಟೇ ಅಲ್ಲ, ಈ ಪೋರ್ಟ್ ಮತ್ತು ಏರ್ಪೋರ್ಟ್‌‌ಗಳನ್ನು ಕೇಂದ್ರ ಸರಕಾರ ಯಾವ ಆಪ್ತಮಿತ್ರರಿಗೆ ಮಾರಾಟ ಮಾಡುತ್ತಿದೆ, ಸರಕಾರದ ಎಲ್ಲಾ ಆಸ್ತಿಗಳನ್ನು ಕೊಂಡುಕೊಳ್ಳುವಷ್ಟು ಹಣ ಯಾರ ಹತ್ತಿರ ಇದೆ ಎಂಬುದನ್ನು ನಾನು ಬಿಡಿಸಿ ಹೇಳಬೇಕಿಲ್ಲ.

ಜಣ ಜಣ ಜಣ ಕಾಂಚಾಣದಲ್ಲಿ

ಅಂಬದಾನಿ ಲಾಂಛನದಲ್ಲಿ

ದೇವರು ದಿಂಡಿರ ಭಜನೆಯಲ್ಲಿ

ಮಂದಿರ ಮಸೀದಿ ಗದ್ದಲದಲ್ಲಿ

ಎಲ್ಲ ಮಾಯ ನಾಳೆ ನಾವು ಮಾಯ

ಎಲ್ಲಾ ಮಾಯ ನಾಳೆ ನೀವು ಮಾಯ….

  •   ಜಿ.ಆರ್.ವಿದ್ಯಾರಣ್ಯ

ಇದನ್ನೂ ಓದಿ: ಕಾಡನ್ನೂ ಖಾಸಗೀಕರಣಗೊಳಿಸುತ್ತಿರುವ ಸರ್ಕಾರ: ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...