Homeಕರ್ನಾಟಕಪತ್ರಕರ್ತ ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಬಂಧನ: ಪೊಲೀಸರು ಎಡವಿದ್ದೆಲ್ಲಿ?

ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಬಂಧನ: ಪೊಲೀಸರು ಎಡವಿದ್ದೆಲ್ಲಿ?

- Advertisement -
- Advertisement -

| ವಾಸು ಎಚ್.ವಿ |

ಯಾವುದೋ ತಪ್ಪು ಮಾಹಿತಿಯನ್ನು ಆಧರಿಸಿ ಅಥವಾ ಹಳೆಯ ಕೇಸನ್ನು ಮುಗಿಸುವ ಆತುರದಲ್ಲಿ ಪೊಲೀಸರು ಮೂರ್ತಿಯವರನ್ನು ಕರೆಸಿದ್ದಾರೆ. ಅಲ್ಲಿಂದಾಚೆಗೆ ಏನಾಗಿದೆ ಎಂಬುದು ಇನ್ನೂ ನಿಗೂಢ. ಏಕೆಂದರೆ, ಹಿಂದೆಂದೂ ಮೂರ್ತಿಯವರನ್ನು ವಿಚಾರಣೆಗೂ ಕರೆಯದ ಪೊಲೀಸರು ನ್ಯಾಯಪಥ ಪತ್ರಿಕೆಯ ವಿಚಾರಗೋಷ್ಠಿಗೆ ಬಂದಾಗಲೇ ಬಂಧಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಮ್ಮ ಜೊತೆಯಲ್ಲೇ ಇದ್ದ, ಎರಡು – ಮೂರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದ ವ್ಯಕ್ತಿಯೊಬ್ಬರನ್ನು ಇದ್ದಕ್ಕಿದ್ದಂತೆ ‘25 ವರ್ಷಗಳಿಂದ ತಲೆಮರೆಸಿಕೊಂಡಿದ್ದರು’ ಎಂದು ಹೇಳಿ, ಪುರಾತನ ಕೇಸೊಂದರಲ್ಲಿ ಅರೆಸ್ಟ್ ಮಾಡಿದರೆ ಏನೆನ್ನಿಸಬಹುದು? ಅದಕ್ಕೆ ತಕ್ಕಂತಹ ಪ್ರತಿಕ್ರಿಯೆಗಳೇ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಬಂಧನಕ್ಕೆ ಬಂದಿವೆ. ಆದರೆ, ಅದರಾಚೆಗೆ ಸದರಿ ಕೇಸಿನಲ್ಲಿ ಪೊಲೀಸರು ಹೇಳುತ್ತಿರುವ ಇತರ ತಾಂತ್ರಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ‘ತನಿಖೆಗೆ’ ಹೊರಟರೆ ವಾಸ್ತವ ಸಂಗತಿಗಳು ಏನು ಹೇಳುತ್ತವೆ? ಈ ಲೇಖನ ಪ್ರಕಟವಾಗುತ್ತಿರುವ ಪತ್ರಿಕೆಯನ್ನು ಕಟ್ಟಿ ನಿಲ್ಲಿಸಿದ ವ್ಯಕ್ತಿಗಳಲ್ಲಿ ನರಸಿಂಹಮೂರ್ತಿಯವರು ಒಬ್ಬರು. ಹೀಗಿರುವಾಗ ನಾವು ನಿರ್ಭಾವುಕವಾಗಿ, ನಿಷ್ಠುರವಾಗಿ ಮತ್ತು ಪಕ್ಷಪಾತವಿಲ್ಲದೇ ವರದಿ ಬರೆಯಬಹುದೇ ಎಂಬ ಪ್ರಶ್ನೆ ಏಳುತ್ತದೆ. ಹಾಗಿದ್ದಾಗಲೂ ಪತ್ರಿಕೆಯು ಸತ್ಯಸಂಗತಿಗಳನ್ನು ತಿಳಿಸುವ ಜವಾಬ್ದಾರಿಯನ್ನು ಹೊಂದಿರುವುದರಿಂದ ನರಸಿಂಹಮೂರ್ತಿಯವರ ಬಂಧನದ ಹಿನ್ನೆಲೆಯ ವಾಸ್ತವಾಂಶವನ್ನು ಕೆದಕಲು ಹೊರಟಿತು.

ರಾಯಚೂರಿನ ಎಸ್‍ಪಿಯವರು ಪತ್ರಿಕಾಗೋಷ್ಠಿ ನಡೆಸಿದಾಗ ಒಟ್ಟು ನಾಲ್ಕು ಕೇಸುಗಳಲ್ಲಿ ವಿನೋದ್ ಎಂಬ ವ್ಯಕ್ತಿಯು ಭಾಗಿಯೆಂದೂ, ನರಸಿಂಹಮೂರ್ತಿಯೇ ವಿನೋದ್ ಎಂದೂ ಹೇಳಿದರು. ಆ ನಾಲ್ಕು ಕೇಸುಗಳಲ್ಲಿ ಮೂರು ಯಾಪಲದಿನ್ನಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟಿಸಿದ್ದರೆ, ಒಂದು ರಾಯಚೂರು ನಗರದ ನೇತಾಜಿ ನಗರ ಠಾಣೆ (ಸದರ್‍ಬಜಾರ್)ಯ ವ್ಯಾಪ್ತಿಯಲ್ಲಿ ಘಟಿಸಿವೆ. ನೇತಾಜಿ ನಗರ ಠಾಣೆ ಮತ್ತು ಯಾಪಲದಿನ್ನಿ ಠಾಣೆಯ ಒಂದು ಕೇಸು 1994ರಲ್ಲಿ ದಾಖಲಾಗಿದ್ದರೆ, ಉಳಿದವೆರಡು 2001ರಲ್ಲಿ ದಾಖಲಾಗಿವೆ. ವಿನೋದ್ ಅಲ್ಲದೇ ಬಸವರಾಜ್ ಎಂಬ ಹೆಸರಿನ ವ್ಯಕ್ತಿಯೂ ನರಸಿಂಹಮೂರ್ತಿಯೇ ಎಂದು ಪೊಲೀಸರು ಹೇಳಿದ್ದಾರೆನ್ನಲಾಗಿದೆ. ಎಸ್‍ಪಿಯವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಿನೋದ್, ನರಸಿಂಹಮೂರ್ತಿ, ಬಸವರಾಜ್, ಮೂರ್ತಿ ಇತ್ಯಾದಿ ಹೆಸರುಗಳಿವೆ.

ಇವಿಷ್ಟನ್ನು ಇಟ್ಟುಕೊಂಡು ಮೂರ್ತಿಯವರ ಕುಟುಂಬ ಹಾಗೂ ಅವರೊಂದಿಗೆ ಸಂಘಟನೆಯಲ್ಲಿ ಸಂಗಾತಿಗಳಾಗಿದ್ದವರು ಹಾಗೂ ನಕ್ಸಲೀಯ ಚಳವಳಿಯಲ್ಲಿದ್ದು ಮುಖ್ಯವಾಹಿನಿಗೆ ಬಂದಿರುವವರು ಇವರೆಲ್ಲರನ್ನೂ ಮಾತಾಡಿಸಿ ಕೆಳಗಿನ ವರದಿಯನ್ನು ಸಿದ್ಧಪಡಿಸಲಾಗಿದೆ. ಎಸ್‍ಪಿಯವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ, ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ರಾಯಚೂರು ಡಿವೈಎಸ್‍ಪಿಯವರನ್ನು ಪತ್ರಿಕೆಯ ವತಿಯಿಂದ ಮಾತಾಡಿಸಲಾಯಿತು.

ಕೆ.ಎಸ್‌ ಪುಟ್ಟಣ್ಣಯ್ಯ, ದೇವನೂರುರವರೊಂದಿಗೆ ನರಸಿಂಹಮೂರ್ತಿ

ನರಸಿಂಹಮೂರ್ತಿಯವರು ಕೆಂಗೇರಿ ಹತ್ತಿರದ ಕುಂಬಳಗೋಡಿನ ಬಳಿಯ ದೊಡ್ಡಿಪಾಳ್ಯದವರು. 1986ರಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಕೊನೆಗೊಳಿಸಿಕೊಂಡವರು ಆಗಿನಿಂದಲೂ ಉದ್ಯಮಶೀಲ ಮನೋಭಾವ ಹಾಗೂ ಅನ್ಯಾಯ ಕಂಡಲ್ಲಿ ಪ್ರಶ್ನಿಸುವ ಸ್ವಭಾವವನ್ನು ಹೊಂದಿರುವುದನ್ನು ಜೊತೆಗಾರರೆಲ್ಲರೂ ಒತ್ತಿ ಹೇಳುತ್ತಾರೆ. ಅಲ್ಲಿಂದಾಚೆಗೆ ರೇಷ್ಮೆ ನೂಲು ತೆಗೆಯುವ (ರೀಲಿಂಗ್) ಸಣ್ಣ ಘಟಕವನ್ನು ಸ್ಥಾಪಿಸಲು ತರಬೇತಿಗೆ ಹೋಗಿ ಬಂದು ಸಾಲ ತೆಗೆದುಕೊಂಡು 1994ರವರೆಗೆ ಅದನ್ನು ನಡೆಸಿದ್ದಾರೆ ಮತ್ತು ಪಿಯರ್‍ಲೆಸ್ ಎಂಬ ಕಂಪೆನಿಯ ಏಜೆಂಟರಾಗಿ ಪಾಲಿಸಿಗಳನ್ನೂ ಮಾಡಿಸುತ್ತಿದ್ದರು. ಇದೇ ಅವಧಿಯಲ್ಲಿ ಪಕ್ಕದೂರಿನ ಹುಡುಗಿಯನ್ನು ಅಂತರ್ಜಾತಿ ಮದುವೆಯಾದ್ದರಿಂದ ಮಧ್ಯೆ ಮೂರ್ನಾಲ್ಕು ತಿಂಗಳು ಊರಿನಿಂದ ದೂರ ಇದ್ದರು.

ರೇಷ್ಮೆ ನೂಲು ತೆಗೆಯುವ ಉದ್ದಿಮೆ ನಡೆಸುವ ಸಂದರ್ಭದಲ್ಲೇ ಪಿವೈಸಿ ಎಂಬ ಸಂಘಟನೆಯ ಸಂಪರ್ಕಕ್ಕೆ ಬಂದ ಮೂರ್ತಿ ಬೆಂಗಳೂರಿನಲ್ಲಿ ಆಗಾಗ್ಗೆ ಸಂಘಟನೆಯ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ ಮತ್ತು ರಾಯಚೂರಿಗೂ ಹೋಗಿ ಬಂದಿದ್ದಾರೆ.

ಬದನವಾಳು ಸತ್ಯಾಗ್ರಹದಲ್ಲಿ ಲೇಖಕ ನಾಗೇಶ್‌ ಹೆಗಡೆಯವರೊಂದಿಗೆ

ರಾಯಚೂರು ಆಗ ‘ತೀವ್ರ ಸಂಘರ್ಷ’ ನಡೆಯುತ್ತಿದ್ದ ಪ್ರದೇಶವಾಗಿತ್ತು. ಪಿವೈಸಿ, ಪಿವಿಕೆಗಳಲ್ಲದೇ ರೈತಕೂಲಿಸಂಘ ಹಳ್ಳಿಗಳಲ್ಲಿ ರೈತಕೂಲಿಗಳ ನಡುವೆ ಸಂಘಟನೆ ಕಟ್ಟುತ್ತಿತ್ತು. ಈ ಸಂಘಟನೆಗಳು ನಕ್ಸಲ್ಬರಿ ಚಳವಳಿಯನ್ನು ಎತ್ತಿ ಹಿಡಿಯುತ್ತಿದ್ದವು. ಇವರಲ್ಲೇ ಕೆಲವರು ಭೂಗತರಾಗಿದ್ದದ್ದೂ ಹೌದು. ಮೊನ್ನೆ ಎಸ್‍ಪಿಯವರು ನಡೆಸಿದ ಪತ್ರಿಕಾಗೋಷ್ಠಿಯಲ್ಲೂ ಅದರ ಪ್ರಸ್ತಾಪ ಬಂದಿತು. ಬಡವರ, ಅದರಲ್ಲೂ ದಲಿತ ಸಮುದಾಯಕ್ಕೆ ಸೇರಿದವರು ತೀವ್ರವಾದ ಶೋಷಣೆಗೆ ಒಳಗಾಗಿ ಮೇಲೆ ಹೇಳಲಾದ ಸಂಘಟನೆಗಳು ಅವರಿಗೆ ದನಿಯಾಗಿದ್ದವು. ಬಹುಬೇಗ ಸಂಘರ್ಷ ತೀವ್ರವಾಯಿತು ಮತ್ತು ‘ನಕ್ಸಲೀಯ’ರ ಪ್ರವೇಶವಾಯಿತು. ಅದನ್ನು ತೋರಿಸುತ್ತಾ ಬಂಧನಗಳು, ಕೇಸುಗಳು ಶುರುವಾದವು. ಆಂಧ್ರದ ಕೆಲವು ಭೂಗತ ನಕ್ಸಲೀಯರೂ ಇಲ್ಲಿ ಬರಲು ಶುರು ಮಾಡಿದರು. ಅಂತಹವರಲ್ಲಿ ಒಬ್ಬರು ಭಾಸ್ಕರ್. ಅವರನ್ನು ಅವರ ಹೆಂಡತಿಯ ಕಣ್ಣೆದುರೇ ಪೊಲೀಸರು ಕೊಂದರು. ಬಹುಶಃ ಇದು ನಡೆದದ್ದು 1997ರಲ್ಲಿ. ವಿನೋದ್ ಎಂಬ ಆಂಧ್ರದ ವ್ಯಕ್ತಿಯೂ ಇದರ ಭಾಗವಾಗಿ ಬಂದು ಹೋಗಿರುವ ಸಾಧ್ಯತೆಯಿದೆ.

ಆದರೆ ಮೂರ್ತಿ ಇಲ್ಲಿ ರೇಷ್ಮೆ ರೀಲಿಂಗ್ ಸಣ್ಣ ಉದ್ದಿಮೆಯ ಸಮಸ್ಯೆಯಲ್ಲಿ ಸಿಲುಕಿಕೊಂಡರು. ಯಾವ ಪ್ರಮಾಣಕ್ಕೆಂದರೆ 1995ರಲ್ಲಿ ಒಂದಷ್ಟು ಭೂಮಿಯನ್ನು ಮಾರಿ ಸಾಲ ತೀರಿಸಬೇಕಾಯಿತು. ಅವರು ಮತ್ತು ಅವರ ಅಣ್ಣ ಇಬ್ಬರೂ ತಂದೆಯನ್ನು ಒಪ್ಪಿಸಿ ಅದೇ ಹಣದಲ್ಲಿ 1996ರಲ್ಲಿ ಕೆಂಗೇರಿಯಲ್ಲಿ ಮನೆಯನ್ನೂ ಖರೀದಿಸಿದರು. ಕೆಂಗೇರಿ ಬಸ್‍ನಿಲ್ದಾಣದ ಸಮೀಪ ಅಂಗಡಿ ನಿವೇಶನವನ್ನು ಖರೀದಿಸಿ, ಬಟ್ಟೆ ಅಂಗಡಿ ಹಾಗೂ ಚಪ್ಪಲಿ ಅಂಗಡಿಯನ್ನು ಇಬ್ಬರೂ ಸೇರಿ ನಿರ್ವಹಿಸಲಾರಂಭಿಸಿದರು. 1998ರಲ್ಲಿ ಅಣ್ಣ ತಮ್ಮಂದಿರಿಬ್ಬರ ಜಂಟಿ ಖಾತೆಯನ್ನು ತೆರೆದು ಸಾಲವನ್ನೂ ತೆಗೆದುಕೊಂಡು ತಮ್ಮ ಬಿಸಿನೆಸ್‍ಅನ್ನು ನಡೆಸಿದ್ದಾರೆ.

ಪೊಲೀಸ್‌ ಅಧಿಕಾರಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದು

ಈ ಹೊತ್ತಿಗೆ ದೊಡ್ಡಿಪಾಳ್ಯದ ಸುತ್ತಮುತ್ತ ಬಿಎಂಐಸಿ (ನೈಸ್ ರಸ್ತೆ) ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳುತ್ತಾರೆಂಬ ವರ್ತಮಾನ ಕಿವಿಗೆ ಬಿದ್ದಿದೆ. ಭೂಮಿ ಕಳೆದುಕೊಳ್ಳುತ್ತಿದ್ದವರಲ್ಲಿ ಮೂರ್ತಿಯವರ ಅಕ್ಕ ಸಹಾ ಒಬ್ಬರು. ಅದರ ಕುರಿತು ಅಧ್ಯಯನ ನಡೆಸುತ್ತಾ ಹೋದಂತೆ, ಅದು ರಸ್ತೆ ಕಟ್ಟುವುದಕ್ಕಿಂತ ಜಮೀನು ಕಿತ್ತುಕೊಂಡು ಲಾಭ ಮಾಡುವ ಉದ್ದೇಶದ್ದೆಂದು ಮನವರಿಕೆಯಾಗಿದೆ. ಆಗ ಕರ್ನಾಟಕ ವಿಮೋಚನಾ ರಂಗದೊಂದಿಗೆ ಬಿಎಂಐಸಿ ವಿರೋಧಿ ಒಕ್ಕೂಟವನ್ನು ಕಟ್ಟುವುದರಲ್ಲಿ ಮೂರ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಚ್.ಎಸ್.ದೊರೆಸ್ವಾಮಿಯವರು, ರೈತಸಂಘ, ಮಂಡ್ಯದ ಡಾ.ಸಿ.ಬಂದೀಗೌಡರಂತಹವರು ಮುಂಚೂಣಿಯಲ್ಲಿದ್ದ ಹೋರಾಟ ಅದು. ಈ ಹೋರಾಟದ ಕಾರಣಕ್ಕೇ ಪೆರಿಫೆರಲ್ ರಸ್ತೆಯನ್ನು ದಾಟಿ ಟೌನ್‍ಶಿಪ್‍ಗಳನ್ನು ಕಟ್ಟಲು ಅಶೋಕ್ ಖೇಣಿಗೆ ಸಾಧ್ಯವಾಗಿಲ್ಲ. ಅವರು ಭೂಗತರಾಗಿ ಕೆಲವು ಕೃತ್ಯಗಳನ್ನು ನಡೆಸಿದರು ಎಂದು ಹೇಳಿ ಹೂಡಲಾದ ಎರಡು ಕೇಸುಗಳು 2001ರದ್ದು ಎಂದು ಎಸ್‍ಪಿ ಹೇಳಿದ್ದಾರೆ. ಆದರೆ, ಇದೇ ಅವಧಿಯಲ್ಲಿ ಮೂರ್ತಿ ಬಹಿರಂಗವಾಗಿ ಬಿಎಂಐಸಿ ವಿರೋಧಿ ಹೋರಾಟದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರಲ್ಲದೇ, ಅಣ್ಣ ಮತ್ತು ತಮ್ಮ ಪಾಲು ಮಾಡಿಕೊಂಡು ಬಿಸಿನೆಸ್‍ನ ವಿಸ್ತರಣೆಯಲ್ಲೂ ತೊಡಗಿದ್ದರು.

ಇಲ್ಲಿಂದಾಚೆಗೆ ಮೂರ್ತಿಯವರ ಬಿಸಿನೆಸ್ ವ್ಯವಹಾರವೂ ವಿಸ್ತರಿಸಿದೆ ಹಾಗೂ ಅದರ ಏರುಪೇರಿಗೆ ತಕ್ಕಂತೆ ಸಂಘಟನೆಯ ಚಟುವಟಿಕೆಗಳೂ ಕಡಿಮೆ ಅಥವಾ ಹೆಚ್ಚಾಗಿದೆ. ಅಂದರೆ ನರಸಿಂಹಮೂರ್ತಿಯವರು ಉದ್ದಕ್ಕೂ ಸಾಮಾಜಿಕ ಚಳವಳಿ ಮತ್ತು ಬದುಕು ನಡೆಸಲು ಬಿಸಿನೆಸ್ ನಡೆಸುತ್ತಾ ಬಂದಿದ್ದಾರೆ. ಈ ಬಿಸಿನೆಸ್‍ಗೆ ಸಂಬಂಧಿಸಿದ ಬಹುತೇಕ ದಾಖಲಾತಿಗಳನ್ನು ತನ್ನ ಬಳಿ ಇದ್ದು, ಕೆಲವನ್ನು ಸಂಬಂಧಿಸಿದ ಬ್ಯಾಂಕ್ ಅಥವಾ ಏಜೆನ್ಸಿಗಳಿಂದ ಪಡೆದುಕೊಳ್ಳಬಹುದೆಂದು ಅವರ ಅಣ್ಣ ಮುನಿಕೃಷ್ಣಪ್ಪ ಹೇಳುತ್ತಾರೆ.

ಈ ಮಧ್ಯೆ ದಿ ಸಂಡೇ ಇಂಡಿಯನ್, ಗೌರಿ ಲಂಕೇಶ್ ಪತ್ರಿಕೆ, ಬಿಸಿನೆಸ್ ಗುರು ಪತ್ರಿಕೆಗಳಲ್ಲಿ ಸಾಕಷ್ಟು ಕಾಲ ವರದಿಗಾರರಾಗಿ ಲೇಖನಗಳನ್ನು ಬರೆದಿದ್ದಾರೆ; ಸಂದರ್ಶನಗಳನ್ನು ನಡೆಸಿದ್ದಾರೆ. 2016ರ ನಂತರ ಅವರು ಸ್ವರಾಜ್ ಅಭಿಯಾನ ಮತ್ತು ಸ್ವರಾಜ್ ಇಂಡಿಯಾ ಸಂಘಟನೆಯ ಜೊತೆಗೆ ತೊಡಗಿಸಿಕೊಂಡಿದ್ದಾರೆ.

ನಕ್ಸಲೀಯರ ಸಶಸ್ತ್ರ ಹೋರಾಟದ ಹಾದಿಯ ಜೊತೆಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದರಿಂದಲೇ ಮೂರ್ತಿ ಭಿನ್ನ ಹಾದಿ ತುಳಿದರು ಎಂಬುದು ಅವರ ಕೆಲವು ಆಪ್ತ ಸಂಗಾತಿಗಳ ಹೇಳಿಕೆ. ಹೀಗಿರುವುದರಿಂದಲೇ ಬೇರೆ ಬೇರೆ ಸಮಯದಲ್ಲಿ ಭೂಗತವಾಗಿ ಇಂತಹ ಕೃತ್ಯಗಳನ್ನು ಮಾಡಿದ್ದಾರೆಂಬುದನ್ನು ಅವರ್ಯಾರೂ ನಂಬಲು ಸಿದ್ಧರಿಲ್ಲ.

ಹಾಗಾದರೆ ರಾಯಚೂರು ಪೊಲೀಸರು ಏನೂ ಇಲ್ಲದೇ ಈ ಬಂಧನಕ್ಕೆ ಮುಂದಾದರೆ?

ರಾಯಚೂರು ಪೊಲೀಸರು ತಪ್ಪು ಮಾಡಿರಬಹುದು. ಆದರೆ, ತಪ್ಪು ಲೆಕ್ಕಾಚಾರದಿಂದಲಾದರೂ ಮೂರ್ತಿಯವರನ್ನು ವಿಚಾರಣೆಗೆ ಕರೆದೊಯ್ಯಲು ಕಾರಣವಿಲ್ಲವೇ? ಇರಲು ಸಾಧ್ಯವಿದೆ. 1992ರ ನಂತರ ಸುಮಾರು 2001ರವರೆಗೆ ರಾಯಚೂರಿನ ಹೋರಾಟಗಳಿಗೆ ಹೋಗಿ ಬರುತ್ತಿದ್ದವರು ಯಾರೇ ಇರಲಿ, ಅವರೆಲ್ಲರ ಫೋಟೋಗಳನ್ನು ಅಲ್ಲಿನ ಪೊಲೀಸರು ಕಡ್ಡಾಯವಾಗಿ ತೆಗೆಯುತ್ತಿದ್ದರು. ಆಗ ಈಗಿನಷ್ಟು ವಿಡಿಯೋ ಮಾಡುವುದು ಇರಲಿಲ್ಲವಾದರೂ, ಇಂತಹ ‘ಸಂಘರ್ಷಮಯ’ ವಾತಾವರಣದಲ್ಲಿ ಪೊಲೀಸರು ನಿಗಾ ಇಡುವುದು ಮಾಮೂಲಿ. ಆ ರೀತಿ ಕಾರ್ಯಕ್ರಮಕ್ಕೆ ಹೋಗಿ ಬಂದಾಗ ಮೂರ್ತಿಯವರ ಫೋಟೋ ಸಹಾ ತೆಗೆದಿರಲು ಸಾಧ್ಯ. ಆಂಧ್ರದಿಂದ ಬಂದು ಹೋಗಿರಬಹುದಾದ ವಿನೋದ್ ಅಥವಾ ಬಸವರಾಜ್ ಅಥವಾ ಪೊಲೀಸರಿಗೆ ಸಿಕ್ಕಿರದ ಇನ್ನಾರೋ ವ್ಯಕ್ತಿಯನ್ನು ಇವರೇ ಎಂದು ಭಾವಿಸಿರುವ ಸಾಧ್ಯತೆ ಇದೆ. ಇಲ್ಲದಿದ್ದರೆ ಈ ಮಧ್ಯೆ ಹಲವು ಸಾರಿ ರಾಯಚೂರಿಗೆ ಬಂದು ಹೋಗಿರುವ, ಬೆಂಗಳೂರಿನಲ್ಲಿ ಕೇವಲ ವ್ಯವಹಾರ ಮಾಡಿಕೊಂಡಿರುವುದಲ್ಲದೇ ಹಲವಾರು ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗಿರುವ ಮತ್ತು ಸಿಓಡಿ ಪೊಲೀಸ್ ಕ್ವಾರ್ಟರ್ಸ್ ಮುಂದೆಯೇ ಮನೆ ಮಾಡಿಕೊಂಡು ವಾಸವಾಗಿರುವ ಮೂರ್ತಿಯನ್ನು ಇದುವರೆಗೆ ಕನಿಷ್ಠ ವಿಚಾರಣೆಗೂ ಪೊಲೀಸರು ಕರೆಸಲಿಲ್ಲವೇಕೆ?

ಯಾವುದೋ ತಪ್ಪು ಮಾಹಿತಿಯನ್ನು ಆಧರಿಸಿ ಅಥವಾ ಹಳೆಯ ಕೇಸನ್ನು ಮುಗಿಸುವ ಆತುರದಲ್ಲಿ ಪೊಲೀಸರು ಮೂರ್ತಿಯವರನ್ನು ಕರೆಸಿದ್ದಾರೆ. ಅಲ್ಲಿಂದಾಚೆಗೆ ಏನಾಗಿದೆ ಎಂಬುದು ಇನ್ನೂ ನಿಗೂಢ. ಏಕೆಂದರೆ, ಹಿಂದೆಂದೂ ಮೂರ್ತಿಯವರನ್ನು ವಿಚಾರಣೆಗೂ ಕರೆಯದ ಪೊಲೀಸರು ನ್ಯಾಯಪಥ ಪತ್ರಿಕೆಯ ವಿಚಾರಗೋಷ್ಠಿಗೆ ಬಂದಾಗಲೇ ಬಂಧಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಂದರೆ ಗೌರಿ ಲಂಕೇಶರ ಮಾಧ್ಯಮ ಪರಂಪರೆಯನ್ನು ಮುಂದುವರೆಸುವ ಗೌರಿ ಮೀಡಿಯಾ ಟ್ರಸ್ಟ್‍ನ ಕಾರ್ಯದರ್ಶಿಯಾಗಿದ್ದರಿಂದಲೇ ಈ ರೀತಿ ಗುರಿ ಮಾಡಿರಬಹುದು ಎಂಬ ಅನಿಸಿಕೆ ಮೂಡಲು ಕಾರಣವಾಗಿದೆ.

ಮೂರ್ತಿ ಅಂತ ಇನ್ನೂ ಒಬ್ಬರಿದ್ದರು

ಹೌದು, ನಕ್ಸಲೀಯ ಚಳವಳಿಯಲ್ಲಿದ್ದು ಹೊರಬಂದಿರುವವರು ನೀಡುವ ಮಾಹಿತಿ ಇದು. ಕುಪ್ಪುಸ್ವಾಮಿ ಅಲಿಯಾಸ್ ಮೂರ್ತಿ ಎನ್ನುವ, ಸಾಕೇತ್‍ರಾಜನ್‍ರಿಗಿಂತ ಹಿರಿಯರಾದ ವ್ಯಕ್ತಿ ಕರ್ನಾಟಕದ ನಕ್ಸಲೀಯ ಚಳವಳಿಯಲ್ಲಿ ಸಕ್ರಿಯವಾಗಿದ್ದರು. ಕೆಲವು ಕಾಲದ ಹಿಂದೆ ಕೇರಳದಲ್ಲಿ ಪೊಲೀಸರ ಗುಂಡಿಗೆ ಬಲಿಯಾದರು. ಬೆಂಗಳೂರು ಮೂಲದ ಅವರು ರಾಯಚೂರು ಚಳವಳಿಯ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು ಎನ್ನಲಾಗಿದೆ. ಅವರ ಹೆಸರು ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಹೆಸರು ತಳಕುಹಾಕಿಕೊಂಡಿರುವ ಸಾಧ್ಯತೆಯೂ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಗೌರಿ ಲಂಕೇಶರ ಹೆಸರು ಮನುವಾದಿಗಳನ್ನು ದುಃಸ್ವಪ್ನದಂತೆ ಕಾಡುತ್ತಿದೆ. ನ್ಯಾಯ ಪಥ ಮತ್ತೊಂದು ಗೌರಿಲಂಕೇಶ್ ಆಗುವುದನ್ನು ತಡೆಯುವುದಕ್ಕಾಗಿ, ಗೌರಿಯವರ ಹೆಸರೇಳುವ ಹೋರಾಟಗಾರರನ್ನು ಜೈಲಿಗೆ ತಳ್ಳಲು ಮನುವಾದಿಗಳ ಸರ್ಕಾರ ನಿರ್ಧರಿಸಿರುವಂತಿದೆ.

  2. ಒಂದು ಕಡೆ ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಎನ್ನುತ್ತಾರೆ. ಇನ್ನೊಂದು ಕಡೆ ಮುಖ್ಯವಾಹಿನಿಯಲ್ಲಿ ಇರುವವರನ್ನೇ ನಕ್ಸಲರೆಂದು ಆರೋಪಿಸಿ ಜೈಲಿಗೆ ತಳ್ಳುತ್ತಾರೆ. ಒಟ್ಟಿನಲ್ಲಿ ಸರಕಾರವನ್ನು ವಿರೋಧಿಸುವವರು, ಬಡವರ ಪರ ಇರುವವರನ್ನು ಹಣಿಯುವುದೇ ಸರಕಾರ ಉದ್ದೇಶವಾದಂತಿದೆ. ಇದೊಂದು ಬೆದರಿಕೆ ತಂತ್ರ.

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...