Homeಮುಖಪುಟದುಂಡಾ ಜಾತಿ ಹಿಂಸಾಚಾರ: ದಲಿತರಿಗೆ ನ್ಯಾಯ ಒದಗಿಸಲು ವಿಫಲವಾಗಿದ್ದ ಬಿಜೆಪಿ ಸರಕಾರ

ದುಂಡಾ ಜಾತಿ ಹಿಂಸಾಚಾರ: ದಲಿತರಿಗೆ ನ್ಯಾಯ ಒದಗಿಸಲು ವಿಫಲವಾಗಿದ್ದ ಬಿಜೆಪಿ ಸರಕಾರ

- Advertisement -
- Advertisement -

ಎಲ್ಲರಿಗೂ ‘ಸಮಾನ ನ್ಯಾಯ’ ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. ತುಳಿತಕ್ಕೊಳಗಾದವರಿಗೆ ನ್ಯಾಯವನ್ನು ನಿರಾಕರಿಸುವ ಸರ್ಕಾರದ ಯಾವುದೇ ಕ್ರಮವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ 2008ರಲ್ಲಿ ತುಮಕೂರು ಜಿಲ್ಲೆಯ ದುಂಡಾ ಗ್ರಾಮದಲ್ಲಿ ಕ್ರೂರ ಜಾತಿ ಹಿಂಸೆಗೆ ಒಳಗಾದ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಲು ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರ ವಿಫಲವಾಗಿರುವುದಾಗಿದೆ.

ದಲಿತರನ್ನು ಜಾತಿ ದೌರ್ಜನ್ಯದಿಂದ ರಕ್ಷಿಸಲು ವಿಫಲರಾದಾಗ ಸಾಮಾಜಿಕ ನ್ಯಾಯಾದ ಎಲ್ಲಾ ಭಾಗಿಗಳು ಮುಚ್ಚಿದಂತಾಗಿದೆ. ಜಾತಿ ದೌರ್ಜನ್ಯ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದಾಗ ಮೇಲ್ಮನವಿ ಸಲ್ಲಿಸಲು ಸರಕಾರ ವಿಫಲವಾಗುತ್ತದೆ. ಸರ್ಕಾರದ ಈ ನಿರಾಸಕ್ತಿಯು ಸಮಾನತೆ ಮತ್ತು ನ್ಯಾಯವನ್ನು ಖಾತ್ರಿಪಡಿಸುವ ಸಂವಿಧಾನದ ಮೂಲ ಮೌಲ್ಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆಯ ಮೂಲ ಆಶಯವನ್ನು ಜಾರಿಗೆ ಸರ್ಕಾರವು ಶ್ರದ್ಧೆ ತೋರದ ಹೊರತು, ಜಾತಿರಹಿತ ಸಮಾಜದ ನಿರ್ಮಾಣ ಕೇವಲ ಕನಸಾಗಿ ಉಳಿಯುತ್ತದೆ ಎಂದು ಸುಪ್ರೀಂಕೋರ್ಟ್ ಹಲವಾರು ಪ್ರಕರಣಗಳಲ್ಲಿ ಅಭಿಪ್ರಾಯಪಟ್ಟಿತ್ತು ಎನ್ನುವುದು ಗಮನಾರ್ಹ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂಡಾ ಗ್ರಾಮದಲ್ಲಿ 2008ರ ಆ.14ರಂದು ಹೇಯ ಜಾತಿ ದೌರ್ಜನ್ಯ ನಡೆದಿತ್ತು. ಗೋಪಾಲ ಕೃಷ್ಣ ಎಂಬ ಸವರ್ಣಿಯನ ಜಮೀನಿಗೆ ದಲಿತ ಸಮುದಾಯದ ಶಿವಮೂರ್ತಿ ಮತ್ತು ದಿಲೀಪ್ ಎಂಬ ದಲಿತ ಯುವಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಜಮೀನಿನ ಮಾಲಕ ಗೋಪಾಲ ಕೃಷ್ಣನ ಮೇಲೆ ಜಮೀನು ವಿವಾದ ಹೊಂದಿದ್ದ ಇನ್ನೋರ್ವ ಸವರ್ಣಿಯ ಜಾತಿಗೆ ಸೇರಿದ ಸುದೀಪ್ ಎಂಬಾತ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಿವಮೂರ್ತಿ ಹಾಗೂ ದಿಲೀಪ್ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ಸುದೀಪ್ ವಿರುದ್ಧ ಶಿವಮೂರ್ತಿ ಮತ್ತು ದಿಲೀಪ್ ದಂಡಿನಶಿವಿರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಲಿತರು ತಮ್ಮ ವಿರುದ್ಧ ದೂರು ದಾಖಲಿಸಲು ಧೈರ್ಯ ಮಾಡಿದ್ದಾರೆ ಎಂದು ಕೋಪಗೊಂಡ ಸುದೀಪ್ ಮತ್ತು ಸವರ್ಣಿಯ ಜನರ ಗುಂಪು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದಲಿತ ಸಮುದಾಯದ ಕೇರಿಗೆ ನುಗ್ಗಿದೆ.  ಅಲ್ಲಿ ದಲಿತ ಸಮುದಾಯದ ಜನರ ಮೇಲೆ ಜಾತಿ ನಿಂದನೆಗಳನ್ನು ಮಾಡಿ ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ  ಸುಮಾರು 12 ಜನರಿಗೆ ಗಂಭೀರ ಗಾಯಗಳಾಗಿತ್ತು. ಈ ವೇಳೆ ಕೇರಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ದಲಿತ ಸಮುದಾಯದ ಗೋವಿಂದರಾಜು ಎಂಬ ಯುವಕ ಹಾಗೂ ಆತನ ತಾಯಿ ಲಕ್ಷ್ಮಮ್ಮ ಅವರಿಗೆ ಗಂಭೀರ ಗಾಯಗಳಾಗಿತ್ತು.

ಈ ಬಗ್ಗೆ ಗೋವಿಂದರಾಜು ಅವರ ತಾಯಿ ಲಕ್ಷ್ಮಮ್ಮ ಅವರು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಸವರ್ಣಿಯ ಜಾತಿಯ ಗುಂಪಿನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143, 147, 148, 323, 324 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(10), (11)ರಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರು ಆರೋಪಿ ವಿರುದ್ಧ 2008ರ ಡಿ. 4ರಂದು ತುಮಕೂರು 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ, ವಿಚಾರಣೆ ನಡೆಸಿದ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ 2011ರ ಜೂ.23ರಂದು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ತೀರ್ಪು ಸಂತ್ರಸ್ತರಿಗೆ ಆಘಾತ ಮತ್ತು ನಿರಾಶೆಯನ್ನುಂಟುಮಾಡಿದೆ ಮತ್ತು ಕಂಬಾಲಪಲ್ಲಿಯಲ್ಲಿ ದಲಿತ ಸಮುದಾಯಕ್ಕೆ ಆದ ಅನ್ಯಾಯ ಪುನರಾವರ್ತನೆಯಾಗಿದೆ ಎಂದು ಸಮುದಾಯ ಭಾವಿಸಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆಯ ಕಂಬಾಲಪಲ್ಲಿ ಗ್ರಾಮದಲ್ಲಿ 7ಮಂದಿ ದಲಿತರನ್ನು 2000 ವಿಷವಿಯ ಮಾ.11ರಂದು ಭೀಕರವಾಗಿ ಹತ್ಯೆ ಮಾಡಲಾಯಿತು. ದಲಿತರ ಮೇಲೆ ಹಲ್ಲೆ ನಡೆಸಿ 2 ಮನೆಗಳಿಗೆ ಬೀಗ ಹಾಕಿ ನಂತರ ಮನೆಗೆ ಬೆಂಕಿ ಹಚ್ಚಿ ದಲಿತರನ್ನು ಸುಟ್ಟು ಹಾಕಲಾಗಿತ್ತು. ಕರ್ನಾಟಕವಷ್ಟೇ ಅಲ್ಲ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ಈ ಘೋರ ಕೃತ್ಯದಲ್ಲಿ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಿಂದ ಆರೋಪಿಗಳು ಖುಲಾಸೆಗೊಂಡು ಮುಕ್ತವಾಗಿ ನಡೆದಾಡುತ್ತಿದ್ದಾರೆ.

ದುಂಡಾ ಜಾತಿ ದೌರ್ಜನ್ಯಕ್ಕೆ ಒಳಗಾದ ಗೋವಿಂದರಾಜು ಮತ್ತು ಅವರ ತಾಯಿ ಲಕ್ಷ್ಮಮ್ಮ ಅವರು ತಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ದಲಿತ ಸಂಘಟನೆಗಳೊಂದಿಗೆ ಕೈಜೋಡಿಸಿದ್ದಾರೆ. ವಿಚಾರಣಾ ನ್ಯಾಯಾಲಯದ ಆದೇಶದ ಬಗ್ಗೆ ಅವರು ಹಲವಾರು ಬಾರಿ ಸರ್ಕಾರದ ಗಮನ ಸೆಳೆದಿದ್ದರು. ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಅಂದಿನ ಬಿಜೆಪಿ ಸರಕಾರ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ವಿಫಲವಾಗಿತ್ತು. ದಲಿತ ಸಮುದಾಯದ ಬಗ್ಗೆ ಬಿಜೆಪಿ ಸರಕಾರ ಹೊಂದಿದ್ದ ಸಂಪೂರ್ಣ ನಿರಾಸಕ್ತಿ ಮತ್ತು ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಆದರೂ ದಲಿತ ಸಂಘಟನೆಗಳ ಬೆಂಬಲದೊಂದಿಗೆ 2011ರ ಆ.23ರಂದು ಕರ್ನಾಟಕ ಹೈಕೋರ್ಟ್‌ನಲ್ಲಿಸಂತ್ರಸ್ತರು  ಮೇಲ್ಮನವಿ ಸಲ್ಲಿಸಿದ್ದರು.

ಘೋರ ಘಟನೆಯ ಹದಿನೈದು ವರ್ಷಗಳ ನಂತರ ಕರ್ನಾಟಕ ಉಚ್ಚ ನ್ಯಾಯಾಲಯವು ವಾದಗಳನ್ನು ಆಲಿಸಿ ಮತ್ತು ಸಾಕ್ಷ್ಯಾಧಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅ.31, 2023ರಂದು ತನ್ನ ತೀರ್ಪನ್ನು ನೀಡಿತು. ಈ ಅಪರಾಧಗಳಲ್ಲಿ ಎಲ್ಲಾ 11 ವ್ಯಕ್ತಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿತು. ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು  ಕೆಳಹಂತದ ವಿಚಾರಣಾ ನ್ಯಾಯಾಲಯವು ಸೂಕ್ತವಾಗಿ ಪರಿಗಣಿಸಲಿಲ್ಲ ಮತ್ತು ಎಲ್ಲಾ ಆರೋಪಿಗಳು ಅಪರಾಧಗಳಲ್ಲಿ ತಪ್ಪಿತಸ್ಥರು ಎಂದು ತೋರಿಸುವ ಸ್ಪಷ್ಟ ಪುರಾವೆಗಳಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅಧಿಕಾರದಲ್ಲಿದ್ದ ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ದಲಿತ ಸಮುದಾಯದ ಆರೋಪ. ತುಮಕೂರು ಜಿಲ್ಲಾ ನ್ಯಾಯಾಲಯ ನೀಡಿದ ಖುಲಾಸೆ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬಿಜೆಪಿ ಸರ್ಕಾರ ವಿಫಲವಾಗಿರುವುದು ಗಂಭೀರ ಜಾತಿ ದೌರ್ಜನ್ಯ ನಡೆಸುವ ಅಪರಾಧಿಗಳು ಕಾನೂನು ಕ್ರಮಗಳಿಂದ ಪಾರಾಗಲು ಅನುವು ಮಾಡಿಕೊಡುವುದನ್ನು ಪ್ರತಿಬಿಂಬಿಸುತ್ತದೆ.

ಹೈಕೋರ್ಟ್ ತೀರ್ಪು ಸಂತ್ರಸ್ತ ದಲಿತರ ಕುಟುಂಬಗಳಿಗೆ ನೆಮ್ಮದಿ ತಂದಿದ್ದರೂ, ವಿಚಾರಣಾ ನ್ಯಾಯಾಲಯದ ಖುಲಾಸೆ ಆದೇಶದ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸದಿರುವುದು ಬಿಜೆಪಿ ಸರ್ಕಾರದ ಪರಿಣಾಮಕಾರಿತ್ವ ಮತ್ತು ನ್ಯಾಯದ ಬದ್ಧತೆಯ ಬಗ್ಗೆ ದಲಿತರಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಿಜೆಪಿ ಸರಕಾರ  ಪ್ರಕರಣದಲ್ಲಿ ದಲಿತರಿಗೆ ನ್ಯಾಯವನ್ನು ನಿರಾಕರಿಸಿದೆ ಮತ್ತು ದುಂಡಾ ಗ್ರಾಮದಲ್ಲಿ ನಡೆದ ಜಾತಿ ದೌರ್ಜನ್ಯವನ್ನು ನಿರ್ಲಕ್ಷಿಸಿದೆ ಎಂದು ದಲಿತರು ಆರೋಪಿಸಿದ್ದಾರೆ.

ಇದನ್ನು ಓದಿ: ಸುಳ್ಳು ಸುದ್ದಿ ಪ್ರಸಾರ: 9 ಯೂಟ್ಯೂಬ್ ಚಾನೆಲ್‌ಗಳ ಹೆಸರು ಬಿಡುಗಡೆ ಮಾಡಿದ ಪಿಐಬಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...