Homeಮುಖಪುಟನಾಗಾರ್ಜುನ ಸಾಗರಕ್ಕಾಗಿ ಆಂಧ್ರ, ತೆಲಂಗಾಣ ಕಿತ್ತಾಟ: ಜಲಾಶಯದ ಬಳಿ ಸಿಆರ್‌ಪಿಎಫ್ ನಿಯೋಜನೆ

ನಾಗಾರ್ಜುನ ಸಾಗರಕ್ಕಾಗಿ ಆಂಧ್ರ, ತೆಲಂಗಾಣ ಕಿತ್ತಾಟ: ಜಲಾಶಯದ ಬಳಿ ಸಿಆರ್‌ಪಿಎಫ್ ನಿಯೋಜನೆ

- Advertisement -
- Advertisement -

ದೇಶದ ಪ್ರಮುಖ ಜಲಾಶಯಗಳಲ್ಲಿ ಒಂದಾದ ನಾಗಾರ್ಜುನ ಸಾಗರ ಅಣೆಕಟ್ಟೆಯ ನೀರಿನ ವಿಚಾರವಾಗಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ನಡುವೆ ಏರ್ಪಟ್ಟಿರುವ ಕಾಳಗ ತಾರಕಕ್ಕೇರಿದ್ದು, ಜಲಾಶಯದ ಬಳಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನೇಮಿಸಲಾಗಿದೆ.

ತೆಲಂಗಾಣ ವಿಧಾನಸಭೆಯ ಮತದಾನದ ಹಿಂದಿನ ದಿನ, ಅಂದರೆ ನವೆಂಬರ್‌ 29ರಂದು ರಾತ್ರಿ ನೀರಿನ ವಿಚಾರವಾಗಿ ಎರಡು ತೆಲುಗು ರಾಜ್ಯಗಳ ನಡುವೆ ಕಿತ್ತಾಟ ಶುರುವಾಗಿದೆ. 2014ರಲ್ಲಿ ತೆಲಂಗಾಣ ಪ್ರತ್ಯೇಖ ರಾಜ್ಯ ರಚನೆಯಾದ ಬಳಿಕ ಶುರುವಾದ ವಿವಾದ ಕಾನೂನಾತ್ಮಕ ಹೋರಾಟಗಳಿಗೆ ಮಾತ್ರ ಸೀಮಿತವಾಗಿ ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೆ, ಈಗ ನೇರಾನೇರಾ ಜಗಳಕ್ಕೆ ಬಂದು ನಿಂತಿದೆ.

‘ನಮ್ಮ ಪಾಲಿನ ನೀರು ಕೊಡಿ’ ಎಂದು ಆಗಾಗ ತೆಲಂಗಾಣ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದ ಆಂಧ್ರ ಪ್ರದೇಶ ಸರ್ಕಾರ, ನವೆಂಬರ್‌ 29ರಂದು ಮಧ್ಯರಾತ್ರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಸುಮಾರು 400 ಮಂದಿ ಪೊಲೀಸರನ್ನು ಅಣೆಕಟ್ಟೆಗೆ ನುಗ್ಗಿಸಿತ್ತು. ಪೊಲೀಸ್ ಸರ್ಪಗಾವಲಿನಲ್ಲಿ ಅಣೆಕಟ್ಟೆಯನ್ನು ಭಾಗಶಃ ವಶಕ್ಕೆ ಪಡೆದ ಆಂಧ್ರ ಪ್ರದೇಶದ ಅಧಿಕಾರಿಗಳು, ಜಲಾಶಯದ ಬಲ ಕಾಲುವೆಯ ಮೂಲಕ ತಮ್ಮ ರಾಜ್ಯಕ್ಕೆ ನೀರು ಹರಿಸಿಕೊಂಡಿದ್ದಾರೆ. ಈ ವೇಳೆ ತೆಲಂಗಾಣದ ಪೊಲೀಸರು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದರು. ಕೆಲ ಪೊಲೀಸರು ಮತ್ತು ಅಧಿಕಾರಿಗಳು ಅಣೆಕಟ್ಟೆಯ ಬಳಿ ತೆರಳಿದರೂ, ಭಾರೀ ಸಂಖ್ಯೆಯಲ್ಲಿದ್ದ ಆಂಧ್ರದ ಪಡೆಯನ್ನು ಎದುರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ, ವಾಪಸ್ ಬಂಧಿದ್ದಾರೆ.

ತೆಲಂಗಾಣ ಸರ್ಕಾರ ಮತ್ತು ಅದರ ಅಧಿಕಾರಿಗಳು ಚುನಾಣೆಯಲ್ಲಿ ಮುಳುಗಿರುವಾಗ, ನವೆಂಬರ್ 30 ರಿಂದ ಡಿಸೆಂಬರ್ 1 (ನಿನ್ನೆ) ಮಧ್ಯಾಹ್ನದವರೆಗೆ ಆಂಧ್ರದ ಅಧಿಕಾರಿಗಳು ತಮಗೆ ಬೇಕಾದಷ್ಟು ನೀರನ್ನು ಜಲಾಶಯದಿಂದ ಹರಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಜೊತೆ ಶುಕ್ರವಾರ ಸಭೆ ನಡೆಸಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು, ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೃಷ್ಣಾ ನದಿ ನೀರು ನಿರ್ವಹಣಾ ಮಂಡಳಿ (ಕೆಆರ್‌ಎಂಬಿ) ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದು, ಅಣೆಕಟ್ಟೆ ಬಳಿ ನವೆಂಬರ್ 29ಕ್ಕೂ ಮೊದಲು ಇದ್ದ ಸ್ಥಿತಿಯನ್ನು ಪುನಃಸ್ಥಾಪಿಸಲು ಆಂಧ್ರದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವರದಿಗಳ ಪ್ರಕಾರ, ಕೃಷ್ಣಾ ನದಿ ನೀರು ನಿರ್ವಹಣಾ ಮಂಡಳಿಯ ಸದಸ್ಯರಾಗಿರುವ ಎರಡೂ ರಾಜ್ಯಗಳು ತಾತ್ಕಾಲಿಕವಾಗಿ ಅಣೆಕಟ್ಟಿನ ಭದ್ರತೆಗಾಗಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲು ಒಪ್ಪಿಕೊಂಡಿವೆ. ತೆಲಂಗಾಣದ ಮುಖ್ಯ ಕಾರ್ಯದರ್ಶಿ ಎ. ಸಂತಿ ಕುಮಾರಿ ಅವರು ನವೆಂಬರ್ 29 ರ ರಾತ್ರಿ ಅಣೆಕಟ್ಟೆಯ ಮೇಲೆ ಸುಮಾರು 500 ಮಂದಿ ಆಂಧ್ರ ಪೊಲೀಸ್ ಸಿಬ್ಬಂದಿ ಗುಂಪು ಗುಂಪಾಗಿ ಬಂದು ಕ್ಲೋಸ್-ಸರ್ಕ್ಯೂಟ್ ಟೆಲಿವಿಷನ್ ಕ್ಯಾಮರಾಗಳನ್ನು ನಾಶಪಡಿಸಿದ್ದಾರೆ ಎಂದು ಸಭೆಯಲ್ಲಿ ಆರೋಪಿಸಿದ್ದಾರೆ.

ಆಂಧ್ರದ ಅಧಿಕಾರಿಗಳು ಏಕಪಕ್ಷೀಯವಾಗಿ ಅಣೆಕಟ್ಟೆಯ ಹೆಡ್ ರೆಗ್ಯುಲೇಟರ್ ಸ್ಲೂಸ್‌ಗಳನ್ನು ತೆರೆದು 5,000 ಕ್ಯೂಸೆಕ್‌ಗೂ ಹೆಚ್ಚು ನೀರು ಅವರ ರಾಜ್ಯಕ್ಕೆ ಹರಿಸುತ್ತಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯ ಮತದಾನದ ಕರ್ತವ್ಯದಲ್ಲಿ ಪೊಲೀಸರು ಸೇರಿದಂತೆ ಸಂಪೂರ್ಣ ಆಡಳಿತ ಯಂತ್ರ ತೊಡಗಿದ್ದಾಗ ಆಂಧ್ರ ವರ್ತನೆ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸಿದೆ. ಆಂಧ್ರ ಎರಡನೇ ಬಾರಿಗೆ ಇಂತಹ ಮಿತಿ ಮೀರಿದ ವರ್ತನೆ ಮಾಡುತ್ತಿದೆ ಎಂದು ಸಂತಿ ಕುಮಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆಂಧ್ರದ ಅಧಿಕಾರಿಗಳು, ಅಣೆಕಟ್ಟೆಯ ಅರ್ಧ ಭಾಗ ನಮಗೆ ಸೇರಿದ್ದು. ಇಲ್ಲಿ ಯಾವಾಗ ಬೇಕಾದರು ಪೊಲೀಸರನ್ನು ನಿಯೋಜಿಸಲು ಮತ್ತು ನೀರು ಹರಿಸಿಕೊಳ್ಳಲು ನಮಗೆ ಹಕ್ಕಿದೆ ಎಂದಿದ್ದಾರೆ. ಶುಕ್ರವಾರ ಆಂಧ್ರ ಸರ್ಕಾರಕ್ಕೆ ನೋಟಿಸ್ ನೀಡಿರುವ ಕೇಂದ್ರ ಜಲಶಕ್ತಿ ಸಚಿವಾಲಯ, ತಕ್ಷಣ ಅಣೆಕಟ್ಟೆಯ ಗೇಟ್ ಬಂದ್ ಮಾಡಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ.

ನಾಗಾರ್ಜುನ ಸಾಗರದಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ಕ್ರಮವಾಗಿ 512 ಟಿಎಂಸಿ ಮತ್ತು 299 ಟಿಎಂಸಿ ನೀರನ್ನು ತಾತ್ಕಾಲಿಕ ಆಧಾರದ ಮೇಲೆ ಹಂಚಿಕೊಳ್ಳುತ್ತಿವೆ. ತೆಲಂಗಾಣವು 2020-21 ರಿಂದ 50% ನೀರಿನ ಹಂಚಿಕೆಗೆ ಒತ್ತಾಯಿಸುತ್ತಿದೆ. ಅವಿಭಜಿತ ಆಂಧ್ರಪ್ರದೇಶದ ವಿಭಜನೆಯ ದಿನಾಂಕದಿಂದ, ಶ್ರೀಶೈಲಂ ಡ್ಯಾಂ ನಿರ್ವಹಣೆಯನ್ನು ಆಂಧ್ರ ಪ್ರದೇಶ ಮತ್ತು ನಾಗಾರ್ಜುನ ಸಾಗರದ ನಿರ್ವಹಣೆಯನ್ನು ತೆಲಂಗಾಣಕ್ಕೆ ವಹಿಸಲಾಗಿದೆ.

ಇದನ್ನೂ ಓದಿ : 10 ವರ್ಷಗಳಲ್ಲಿ ಶೇ.50 ಮಹಿಳಾ ಮುಖ್ಯಮಂತ್ರಿ ಕಾಂಗ್ರೆಸ್ ಗುರಿ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಕನ್ನಡ “ಲೋಕ” ಲಡಾಯಿ; ಕೇಸರಿಪಡೆಯ ಕಲಹ ಕಾಂಗ್ರೆಸ್‌ಗೆ ವರವಾದೀತೆ?

0
ಉತ್ತರ ಕನ್ನಡದ ಅಷ್ಟೂ ಎಂಟು ವಿಧಾನಸಭಾ ಕ್ಷೇತ್ರಗಳ ಜತೆ ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಸೇರಿಸಿ ರಚಿಸಲಾಗಿರುವ "ಉತ್ತರ ಕನ್ನಡ ಲೋಕಸಭಾ ಕ್ಷೇತ್ರ" ವಿಭಿನ್ನತೆ, ವೈವಿಧ್ಯತೆಗಳ ವಿಶಿಷ್ಟ ಸೀಮೆ. ಭೋರ್ಗರೆವ ಅರಬ್ಬೀ...