ಜಾರ್ಖಂಡ್‌ ಚುನಾವಣೆಗೆ ಧುಮುಕಿದ ಆದಿವಾಸಿ ಪತ್ರಕರ್ತೆ, ಬುಡಕಟ್ಟು ಹೋರಾಟಗಾರ್ತಿ ಬಾರ್ಲಾ…

ಶಾಸಕರು, ಅಧಿಕಾರದಲ್ಲಿರುವವರು ಬುಡಕಟ್ಟು ಜನರ ಹಕ್ಕುಗಳನ್ನು ನಿರ್ಲಕ್ಷಿಸುತ್ತಾರೆ, ಆದ್ದರಿಂದ ನಾನು ಕಾನೂನುಗಳನ್ನು ನಿರ್ಮಿಸುವ ಸ್ಥಳಕ್ಕೆ ಹೋಗಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಬಾರ್ಲಾ.

ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಂಡಿ ನೇತೃತ್ವದ ಜಾರ್ಖಂಡ್ ವಿಕಾಸ್ ಮೋರ್ಚಾ-ಪ್ರಜಾತಂತ್ರಿಕ್ (ಜೆವಿಎಂ-ಪಿ) ಪಕ್ಷದಿಂದ ಖುಂಟಿ ವಿಧಾನಸಭಾ ಕ್ಷೆತ್ರದ ಅಭ್ಯರ್ಥಿಯಾಗಿ ಬುಡಕಟ್ಟು ಪತ್ರಕರ್ತೆ ಮತ್ತು ಖ್ಯಾತ ಸಾಮಾಜಿಕ ಕಾರ್ಯಕರ್ತೆ ದಯಾಮಣಿ ಬಾರ್ಲಾ ಸ್ಪರ್ಧಿಸಲಿದ್ದಾರೆ.

ದಯಾಮಣಿ ಬಾರ್ಲಾ ದೇಶದ ಪ್ರಸಿದ್ಧ ಬುಡಕಟ್ಟು ಕಾರ್ಯಕರ್ತರಲ್ಲಿ ಒಬ್ಬರಾಗಿದ್ದಾರೆ. ಇವರು ಕಳೆದ 25 ವರ್ಷಗಳಿಂದ, ಪ್ರಭುತ್ವ ಮತ್ತು ಹಲವಾರು ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಬುಡಕಟ್ಟು ಜನರ ಭೂ ಹಕ್ಕುಗಳು, ಜನಾಂಗದವರ ಅಸ್ಮಿತೆ ಮತ್ತು ಸಂಸ್ಕೃತಿಯ ಬಗ್ಗೆ ಹೋರಾಡುತ್ತಿದ್ದಾರೆ.

ಪೂರ್ವ ಜಾರ್ಖಂಡ್‌ನಲ್ಲಿ ಆರ್ಸೆಲರ್ ಮಿತ್ತಲ್ ಅವರ ಉಕ್ಕಿನ ಸ್ಥಾವರ ಸ್ಥಾಪನೆ ನಡೆದಿತ್ತು. ಸುಮಾರು 12,000 ಎಕರೆ ಕಾಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆ ಇದಾಗಿತ್ತು. ಇದರಿಂದಾಗಿ ಹಲವಾರು ಗ್ರಾಮಗಳನ್ನು ಸ್ಥಳಾಂತರಿಸಬೇಕಾದ ಪರಿಸ್ತಿತಿ ಬಂದೊದಗಿತ್ತು. ಮುಂಡಾ ಬುಡಕಟ್ಟು ಗುಂಪಿನ ಸದಸ್ಯರಾಗಿರುವ ಬಾರ್ಲಾ ಆಗ ಉಕ್ಕಿನ ಸ್ಥಾವರ ವಿರೋಧಿ ಹೋರಾಟದ ಮೂಲಕ ಚಿರಪರಿಚಿತರಾದ ಅವರು ಪತ್ರಿಕೋದ್ಯಮಕ್ಕಾಗಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.

2014 ರ ಲೋಕಸಭಾ ಚುನಾವಣೆಯಲ್ಲಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಖುಂಟಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು. ಬಾರ್ಲಾ ಭಾರತೀಯ ಸಾಮಾಜಿಕ ಕ್ರಿಯಾ ವೇದಿಕೆಯ (INSAF) ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಚಹಾ ಅಂಗಡಿಯೊಂದನ್ನು ನಡೆಸುವುದರ ಜೊತೆಗೆ ಪತ್ರಕರ್ತ ಹುದ್ದೆ ಮತ್ತು ಹೋರಾಟವನ್ನು ಅವರು ಮುನ್ನಡೆಸುತ್ತಿದ್ದಾರೆ.

“ನನ್ನ ಜೀವನವು ಹೋರಾಟಗಳಿಂದ ತುಂಬಿದೆ. ನನ್ನ ಹೆತ್ತವರ ಒಡೆತನದ ಜಮೀನನ್ನು ಜನರು ಕಸಿದುಕೊಳ್ಳುವುದನ್ನು ನಾನು ನೋಡಿದೆ. ನನ್ನ ಹೆತ್ತವರನ್ನು ನಂತರ ಬಂಧಿತ ಕಾರ್ಮಿಕರನ್ನಾಗಿ ಮಾಡಲಾಯಿತು. ಅವರು ನಮ್ಮಿಂದ ಭೂಮಿಯನ್ನು ತೆಗೆದುಕೊಂಡಾಗ, ನಮ್ಮ ಇಡೀ ಕುಟುಂಬವು ಚದುರಿಹೋಯಿತು. ನಮಗೆ ಆಹಾರವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನಾನು ನನ್ನ ಶಿಕ್ಷಣವನ್ನು ಬಿಡಲಿಲ್ಲ. ನಾನು ಕೂಲಿಯಾಗಿ ಕೆಲಸ ಮಾಡುವ ಮೂಲಕ ಹಣವನ್ನು ಸಂಗ್ರಹಿಸಬೇಕಾಗಿದ್ದಾಗಲೂ ಅದನ್ನು ಮುಂದುವರಿಸಿದೆ. ನಾನು ಬ್ರೆಡ್ ತುಂಡುಗಾಗಿ ಪರದಾಡಿದ ಸಮಯಗಳನ್ನು ನೋಡಿದ್ದೇನೆ” ಎನ್ನುತ್ತಾರೆ ಬಾರ್ಲಾ.

ಅವರು ಪೂರ್ಣಪ್ರಮಾಣದಲ್ಲಿ ಹೋರಾಟಕ್ಕೆ ಧುಮುಕಿದ್ದು 1995 ರಲ್ಲಿ. “ಟೊರ್ಪಾದ ಕೊಯೆಲ್ ಕರೋದಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಸರ್ಕಾರ ಘೋಷಿಸಿತ್ತು. ಅಣೆಕಟ್ಟು 245 ಹಳ್ಳಿಗಳ ಅಸ್ತಿತ್ವಕ್ಕೆ ಧಕ್ಕೆ ತಂದಿತು. ಸುಮಾರು 2.5 ಲಕ್ಷ ಜನರು ಸ್ಥಳಾಂತರಗೊಳ್ಳುತ್ತಿದ್ದರು ಮತ್ತು 27,000 ಎಕರೆ ಕಾಡು ಭೂಮಿಯನ್ನು ಮುಳುಗಿಸಬಹುದಿತ್ತು. ಆಗ ಇದರ ಅರ್ಥವೇನೆಂದು ನನಗೆ ತಿಳಿಯಿತು. ನಮ್ಮ ಭೂಮಿಯನ್ನು ಕಳೆದುಕೊಳ್ಳುವ ದೊಡ್ಡ ಹುನ್ನಾರ ನಡೆಯುತ್ತಿತ್ತು. ನಿಮ್ಮ ಸಂಸ್ಕೃತಿ, ನಿಮ್ಮ ಪರಂಪರೆ, ನಿಮ್ಮ ಗುರುತನ್ನು ನೀವು ಕಳೆದುಕೊಳ್ಳುತ್ತೀರಿ. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಅರಿವಿಗೆ ಬಂತು. ಅಂದಿನಿಂದ, ನಾನು ಸ್ಥಳಾಂತರದ ವಿರುದ್ಧ, ಬುಡಕಟ್ಟು ಹಕ್ಕುಗಳಿಗಾಗಿ, ಜಾರ್ಖಂಡ್ ಮತ್ತು ಹೊರಗಡೆ ಅನೇಕ ಚಳುವಳಿಗಳಲ್ಲಿ ಭಾಗವಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಶಾಸಕರು, ಅಧಿಕಾರದಲ್ಲಿರುವವರು ಬುಡಕಟ್ಟು ಜನರ ಹಕ್ಕುಗಳನ್ನು ನಿರ್ಲಕ್ಷಿಸುತ್ತಾರೆ, ಆದ್ದರಿಂದ ನಾನು ಕಾನೂನುಗಳನ್ನು ನಿರ್ಮಿಸುವ ಸ್ಥಳಕ್ಕೆ ಹೋಗಲು ನಿರ್ಧರಿಸಿದ್ದೇನೆ ಎಂದು ಅವರು ತಮ್ಮ ಚುನಾವಣಾ ಉದ್ದೇಶವನ್ನು ಬಿಡಿಸಿ ಹೇಳಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here