2024ರಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಒಟ್ಟು 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರ ಎಷ್ಟು ಮಂದಿ ಮತದಾನ ಮಾಡಿದ್ದಾರೆ ಎಂಬುದರ ಅಧಿಕೃತ ದಾಖಲೆಯೇ ಭಾರತೀಯ ಚುನಾವಣಾ ಆಯೋಗದ (ಇಸಿಐ) ಬಳಿಯಿಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ತನಿಖಾ ಪತ್ರಿಕೋದ್ಯಮ ಸಂಸ್ಥೆಯಾದ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ (The Reporters’ Collective) ತನ್ನ ‘ಎಲೆಕ್ಷನ್ ಆಡಿಟ್’ (Election Audit) ಸರಣಿಯ ಎರಡನೇ ಭಾಗದಲ್ಲಿ ಚುನಾವಣಾ ಆಯೋಗದ ಆಂತರಿಕ ವರದಿಗಳನ್ನು ವಿಶ್ಲೇಷಿಸಿ ಈ ಮಹತ್ವದ ವರದಿಯನ್ನು ಪ್ರಕಟಿಸಿದೆ.
ವರದಿಯ ಪ್ರಮುಖ ಅಂಶಗಳು:
- 530 ಕ್ಷೇತ್ರಗಳ ದಾಖಲೆಗಳ ಪರಿಶೀಲನೆ : ಮಹಾರಾಷ್ಟ್ರ, ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ 2024ರಲ್ಲಿ ಚುನಾವಣೆ ನಡೆದ 467 ವಿಧಾನಸಭಾ ಹಾಗೂ 63 ಲೋಕಸಭಾ ಕ್ಷೇತ್ರಗಳ (ಒಟ್ಟು 530 ಕ್ಷೇತ್ರಗಳ) ಚುನಾವಣಾಧಿಕಾರಿಗಳ (Returning Officers) ಆಂತರಿಕ ವರದಿಗಳು ಮತ್ತು 4,212 ಭೌತಿಕ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 200 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯ ನಂತರದ ಮತದಾನದ ಲೆಕ್ಕವೇ ನಮೂದಾಗಿಲ್ಲ ಎಂದು ರಿಪೋಟರ್ಸ್ ಕಲೆಕ್ಟಿವ್ ತಂಡ ತಿಳಿಸಿದೆ.
- ರಾಜ್ಯವಾರು ವಿವರ : ಸಂಜೆ 5ರ ನಂತರದ ಮತದಾನದ ದಾಖಲೆ ಇಲ್ಲದ ಕ್ಷೇತ್ರಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 114 ಕ್ಷೇತ್ರಗಳಲ್ಲಿ (ಸುಮಾರು ಶೇ. 40) ಹಾಗೂ 48 ಲೋಕಸಭಾ ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಈ ದಾಖಲೆಯಿಲ್ಲ. ಜಮ್ಮು-ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 44 ಕ್ಷೇತ್ರಗಳು ಹಾಗೂ 1 ಲೋಕಸಭಾ ಕ್ಷೇತ್ರದಲ್ಲಿ, ಮತ್ತು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 22 ಹಾಗೂ 1 ಲೋಕಸಭಾ ಕ್ಷೇತ್ರದಲ್ಲಿ ಈ ಮಾಹಿತಿ ಲಭ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
- ಕ್ಯೂ ಸ್ಲಿಪ್ (Queue Slip) ದಾಖಲೆಯೂ ನಾಪತ್ತೆ : ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗುವ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ನೀಡಲಾಗುವ ‘ಕ್ಯೂ ಸ್ಲಿಪ್’ಗಳ ಸಂಖ್ಯೆಯನ್ನು 530 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ದಾಖಲಿಸಿಯೇ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಸ್ಲಿಪ್ಗಳ ಲೆಕ್ಕವಿಲ್ಲದಿದ್ದರೆ, ನಿಗದಿತ ಸಮಯದ ನಂತರ ಅಕ್ರಮವಾಗಿ ಯಾರಾದರೂ ಮತ ಚಲಾಯಿಸಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುವುದು ಅಸಾಧ್ಯ.
ಕೊನೆಯ ಗಂಟೆಯ ಮತದಾನ ಏಕೆ ಮಹತ್ವದ್ದು?
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮತಗಟ್ಟೆ ಅಧಿಕಾರಿಗಳು ಪ್ರತಿ ಎರಡು ಗಂಟೆಗೊಮ್ಮೆ ವಿದ್ಯುನ್ಮಾನ ಮತಯಂತ್ರದಲ್ಲಿ (EVM) ದಾಖಲಾದ ಮತಗಳ ಸಂಖ್ಯೆಯನ್ನು ಮತ್ತು ಮತಗಟ್ಟೆಗೆ ಪ್ರವೇಶಿಸಿದ ಮತದಾರರ ಸಹಿ ಪಡೆಯುವ ‘ಫಾರ್ಮ್ 17A’ (Register of Voters) ದಾಖಲೆಯನ್ನು ತಾಳೆ ನೋಡಬೇಕು. ಇದನ್ನು ಪ್ರಿಸೈಡಿಂಗ್ ಆಫೀಸರ್ ಡೈರಿಯಲ್ಲಿ ಬರೆಯಬೇಕು. ಸಂಜೆಯ ವೇಳೆಗೆ ಅನೇಕ ರಾಜಕೀಯ ಪಕ್ಷಗಳ ಏಜೆಂಟರು ಮತಗಟ್ಟೆಗಳಿಂದ ತೆರಳುವುದರಿಂದ, ಕೊನೆಯ ಗಂಟೆಯಲ್ಲಿ ಬೋಗಸ್ ಮತದಾನ ನಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ಎರಡು ಗಂಟೆಗಳ ಲೆಕ್ಕಾಚಾರ ಅತ್ಯಂತ ನಿರ್ಣಾಯಕವಾಗಿರುತ್ತದೆ.
ಮಹಾರಾಷ್ಟ್ರದ 76 ಲಕ್ಷ ಮತಗಳ ಏರಿಕೆಯ ಗೊಂದಲ:
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ದಿನ ಸಂಜೆ 5 ಗಂಟೆಗೆ ಶೇ. 58.22ರಷ್ಟಿದ್ದ ಮತದಾನ ಪ್ರಮಾಣ, ಮರುದಿನ ಶೇ. 66.05ಕ್ಕೆ ಏರಿಕೆಯಾಗಿತ್ತು. ಅಂದರೆ ಕೊನೆಯ ಒಂದು ಗಂಟೆಯಲ್ಲಿ ಸುಮಾರು 76 ಲಕ್ಷ ಮತಗಳು ಚಲಾವಣೆಯಾಗಿವೆ ಎಂದು ಹೇಳಲಾಗಿತ್ತು. ಆದರೆ, ಆಯೋಗದ ಆಂತರಿಕ ದಾಖಲೆಗಳ ಪ್ರಕಾರ, 5 ಗಂಟೆಯ ನಂತರದ ಮಾಹಿತಿ ಲಭ್ಯವಿರುವ 174 ಕ್ಷೇತ್ರಗಳಲ್ಲಿ ಕೇವಲ 50.87 ಲಕ್ಷ ಮತಗಳು ಮಾತ್ರ ಚಲಾವಣೆಯಾಗಿವೆ. ಉಳಿದ 114 ಕ್ಷೇತ್ರಗಳ ದಾಖಲೆಯೇ ಇಲ್ಲದಿರುವಾಗ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಕೊನೆಯ ಗಂಟೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಯಾವ ಆಧಾರದ ಮೇಲೆ ಸಮರ್ಥಿಸಿಕೊಂಡರು ಎಂಬ ಪ್ರಶ್ನೆ ಎದ್ದಿದೆ.
"ಮತದಾನದ ದಿನದಂದೇ ಅಕ್ರಮಗಳನ್ನು ಪತ್ತೆಹಚ್ಚಲು ಈ ಎರಡು ಗಂಟೆಗಳ ವರದಿಗಳು ಸಹಕಾರಿಯಾಗಿರುತ್ತವೆ. ಸಂಜೆ 5ರ ನಂತರದ ಕಾಲಂ ಅನ್ನು ಖಾಲಿ ಬಿಟ್ಟು, ನಂತರ ಒಟ್ಟು ಮತಗಳ ಸಂಖ್ಯೆಗೆ ಹೊಂದುವಂತೆ ತಿದ್ದುವುದು ಲೆಕ್ಕಪತ್ರಗಳಲ್ಲಿ ವಂಚನೆ ಎಸಗಿದಂತೆಯೇ ಸರಿ," ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಅಭಿಪ್ರಾಯಪಟ್ಟಿದ್ದಾರೆ.
ಕೊಪ್ರಿ-ಪಚ್ಪಖಾಡಿ ಕ್ಷೇತ್ರದ ಅಸಹಜ ಅಂಕಿಅಂಶ: ಮಹಾರಾಷ್ಟ್ರದ ಕೊಪ್ರಿ-ಪಚ್ಪಖಾಡಿ ಕ್ಷೇತ್ರದಲ್ಲಿ ಸಂಜೆ 5 ಗಂಟೆಯವರೆಗೆ 1.13 ಲಕ್ಷ ಮತಗಳು ಚಲಾವಣೆಯಾಗಿದ್ದವು. ಆದರೆ ದಿನದ ಅಂತ್ಯಕ್ಕೆ ಒಟ್ಟು ಮತಗಳ ಸಂಖ್ಯೆ 2.03 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ 366 ಮತಗಟ್ಟೆಗಳಲ್ಲಿ ಕೊನೆಯ ಒಂದು ಗಂಟೆಯಲ್ಲಿ 89,878 ಮತಗಳು ಚಲಾವಣೆಯಾಗಿವೆ. ಇದರ ಪ್ರಕಾರ, ಪ್ರತಿ ಮತಗಟ್ಟೆಯಲ್ಲಿ ಪ್ರತಿ ನಿಮಿಷಕ್ಕೆ ಸರಾಸರಿ 4 ಮತದಾರರು (ಒಬ್ಬ ಮತದಾರ ಗುರುತಿನ ಚೀಟಿ ತೋರಿಸಿ, ಸಹಿ ಹಾಕಿ, ಶಾಯಿ ಹಚ್ಚಿಸಿಕೊಂಡು ಮತ ಚಲಾಯಿಸಲು ಕೇವಲ 15 ಸೆಕೆಂಡ್) ಮತ ಚಲಾಯಿಸಿರಬೇಕು, ಇದು ವಾಸ್ತವದಲ್ಲಿ ಅಸಾಧ್ಯ ಎಂದು ವರದಿ ಬೊಟ್ಟು ಮಾಡಿದೆ.
ಈ ಕುರಿತು ಸ್ಪಷ್ಟನೆ ಕೋರಿ ‘ದಿ ರಿಪೋರ್ಟರ್ಸ್ ಕಲೆಕ್ಟಿವ್’ ಕಳುಹಿಸಿದ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಚುನಾವಣಾ ಆಯೋಗವು ಅದನ್ನು ‘ಸಾರ್ವಜನಿಕ ಕುಂದುಕೊರತೆ’ (Public Grievance) ಎಂದು ಪರಿಗಣಿಸಿ, ತನ್ನದೇ ದಾಖಲೆಗಳನ್ನು ತನಗೇ ನೀಡುವಂತೆ ಕೇಳಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Courtesy : reporters-collective.in


