Homeಮುಖಪುಟಗಣರಾಜ್ಯೋತ್ಸವ ವಿಶೇಷ: ನಾಗರಿಕರಾಗಿ ತಿಳಿದುಕೊಂಡಿರಬೇಕಾದ ಸಂವಿಧಾನದ ಮುಖ್ಯ ಎಂಟು ಪರಿಚ್ಛೇದಗಳು

ಗಣರಾಜ್ಯೋತ್ಸವ ವಿಶೇಷ: ನಾಗರಿಕರಾಗಿ ತಿಳಿದುಕೊಂಡಿರಬೇಕಾದ ಸಂವಿಧಾನದ ಮುಖ್ಯ ಎಂಟು ಪರಿಚ್ಛೇದಗಳು

ಸ್ವಾತಂತ್ರ್ಯಪೂರ್ವದಲ್ಲಿ ಹಿಂದೂ ಕಾನೂನುಗಳು ಕೂಡ ಭಿನ್ನವಾಗಿದ್ದು ಹಿಂದೂ ಕೋಡ್ ಮೂಲಕ ಒಂದೇ ಬಗೆಯ ಕಾನೂನು ತರುವಾಗ ಹಿಂದೂ ಮೂಲಭೂತವಾದಿಗಳೂ ಉಗ್ರವಾಗಿ ಪ್ರತಿಭಟಿಸಿದ್ದರು, ಆದರೆ ಅದು ನಿಲ್ಲಲಿಲ್ಲ. ಪಕ್ಕಾ ಇಸ್ಲಾಂ ದೇಶಗಳಾದ ಪಾಕಿಸ್ತಾನ, ಸಿರಿಯಾ, ಇರಾನ್, ಮೊರಕ್ಕೊ, ಟ್ಯೂನಿಸಿಯಾಗಳಲ್ಲಿ ಕೂಡ ಬಹುಪತ್ನಿತ್ವದಂತಹ ಪದ್ಧತಿ ಇಲ್ಲ. ಆದರೆ ಧರ್ಮನಿರಪೇಕ್ಷ ದೇಶವಾದ ಭಾರತದಲ್ಲಿ ಇದು ಇನ್ನೂ ಇರುವುದು ವಿಪರ್ಯಾಸ ಎಂಬ ಅಭಿಪ್ರಾಯದ ಹಿಂದೆ ದೀರ್ಘ ರಾಜಕೀಯ ಇತಿಹಾಸ ಅಡಗಿದೆ.

- Advertisement -
- Advertisement -

ಭಾರತದ ಸಂವಿಧಾನ ರಚಿಸಿ ಅಂಗೀಕರಿಸಿ ದಶಕಗಳೇ ಕಳೆದಿದ್ದರೂ ಅದರ ಚರ್ಚೆಗಳು ಮಾತ್ರ ನಿಂತಿಲ್ಲ. ವಿಭಿನ್ನ ವಿಚಾರಧಾರೆಯ ಪ್ರತಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಸಂವಿಧಾನ ಇನ್ನೂ ಹೆಚ್ಚಾಗಿಯೇ ಚರ್ಚೆಯ ವಿಷಯವಾಗುತ್ತದೆ.

ಸಮಾನತೆ, ಸಮತಾವಾದ, ಜಾತ್ಯತೀತತೆ ಇವು ಎಂದಿಗೂ ಸಮಾಜದ ಮೇಲುವರ್ಗ ಅಥವಾ ಆಳುವವರಿಗೆ ಪ್ರಿಯವಾದ ಶಬ್ದಗಳಾಗಿರಲಿಲ್ಲ. ಹೀಗಾಗಿ ಆರಂಭದಲ್ಲಿ ಸಂವಿಧಾನ ರಚನಾ ಸಭೆ ಮಂಡಿಸಿದ ನಮ್ಮ ಸಂವಿಧಾನ ಬಹಳ ವಿರೋಧ ಮತ್ತು ವಿಮರ್ಶೆಗಳನ್ನು ಎದುರಿಸಬೇಕಾಗಿ ಬಂತು. ಒಂದು ಆರೋಗ್ಯಕರ ಮತ್ತು ಜೀವಂತ ಸಮಾಜದ ಲಕ್ಷಣ ಎಂದರೆ ಬದಲಾಗುವ ಕಾಲ ಹಾಗೂ ಅಗತ್ಯಗಳಿಗೆ ತಕ್ಕಂತೆ ಬದಲಾಗುತ್ತಾ ಹೋಗುವುದು ಎಂಬುದನ್ನು ಅರಿತಿದ್ದ ಸಂವಿಧಾನ ತಜ್ಞರು ಎಲ್ಲ ಬಗೆಯ ಮೂಲಭೂತವಾದಿಗಳ ವಿರೋಧದ ನಡುವೆಯೂ ಒಂದು ಹಿರಿದಾದ ಸಂವಿಧಾನವನ್ನೂ ಮಂಡಿಸಿದರು. ನವೆಂಬರ್ 26 1949ರಂದು ಅಂಗೀಕರಿಸಿದಾಗಿನಿಂದ ಇಂದಿನವರೆಗೆ ನೂರಾರು ತಿದ್ದುಪಡಿಗಳನ್ನು ಕಂಡಿರುವ ಸಂವಿಧಾನ ಇಂದು ಮತ್ತೆ ಚರ್ಚೆಗೆ ಬಂದಿದೆ. ವಿಪರ್ಯಾಸವೆಂದರೆ ಯಾವುದೋ ಹೊಸ ಕಾರಣಗಳಿಗಲ್ಲ. ಬದಲಿಗೆ 70 ವರ್ಷಗಳ ಹಿಂದೆ ಯಾವ ಕಾರಣಗಳಿಗೆ ವಿರೋಧಿಸಲ್ಪಟ್ಟಿತ್ತೋ ಅದೇ ಕಾರಣಗಳಿಗೆ. ಆದರೆ ಸಂವಿಧಾನದ ಮೂಲ ಆಶಯಗಳು ಎಂದಿಗೂ ವಿಶಾಲ ದೃಷ್ಟಿಕೋನವುಳ್ಳವಾಗಿದ್ದು ಈ ದೇಶದ ಭದ್ರಬುನಾದಿಯಾಗಿ ಅವು ದೀರ್ಘಕಾಲ ಉಳಿದುಕೊಳ್ಳಲಿವೆ.

ಈ ಸಂದರ್ಭದಲ್ಲಿ ಸಾಮಾನ್ಯವಾಗಿ ನಾಗರಿಕರು ತಿಳಿದಿರಲೇಬೇಕಾದ ಕೆಲವೊಂದು ಪರಿಚ್ಛೇದಗಳನ್ನು (Articles) ಇಲ್ಲಿ ಮತ್ತೆ ಚರ್ಚಿಸಲಾಗಿದೆ.

1) ಪರಿಚ್ಛೇದ 14 – ಸಮಾನತೆಯ ಹಕ್ಕು

ಈ ಪರಿಚ್ಛೇದ ಪ್ರತಿಯೊಬ್ಬ ವ್ಯಕ್ತಿಗೂ ಕಾನೂನಿನ ಎದುರು ಸಮಾನತೆಯ ಹಕ್ಕು ಮತ್ತು ಕಾನೂನಿನ ಅಡಿ ಸಮಾನ ರಕ್ಷಣೆ ನೀಡುವ ಭರವಸೆಯನ್ನು ನೀಡುತ್ತದೆ. ಈ ಹಕ್ಕು ದೇಶದ ನಾಗರಿಕರಲ್ಲದವರಿಗೂ ಸಮಾನವಾಗಿ ಅನ್ವಯಿಸುತ್ತದೆ. ಯಾವುದೇ ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಾನದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ಪ್ರತಿರೋಧಿಸುತ್ತದೆ.

ಸ್ಟೀಫನ್ ಯೂನಿವರ್ಸಿಟಿ ವರ್ಸಸ್ ದೆಹಲಿ ಕೇಸಿನಲ್ಲಿ ಕೋರ್ಟು ವಿವರಿಸುತ್ತ ಕಾನೂನಿನ ಸಮಾನ ರಕ್ಷಣೆ ಎಂಬುದು ರಾಜ್ಯದ ಮೇಲೆ ಒಂದು ಗುರುತರವಾದ ಜವಾಬ್ದಾರಿಯೆಂದು ಹೇಳತ್ತದೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ಸಾಮಾಜಿಕ, ಆರ್ಥಿಕ ಅಸಮತೋಲನಗಳನ್ನು ಹೋಗಲಾಡಿಸದೆ, ಸಮಾಜದಲ್ಲಿ ಸಮಾನತೆಯ ವಾತಾವರಣ ನಿರ್ಮಿಸದೆ ಹೋದರೆ, ಸಂವಿಧಾನದಲ್ಲಿ ಹೇಳುವ ’ಎಲ್ಲರಿಗೂ ಕಾನೂನಿನ ಸಮಾನ ರಕ್ಷಣೆ’ ಎನ್ನುವುದು ಮರೀಚಿಕೆ ಆಗುತ್ತದೆ ಎಂದು ಹೇಳಿದೆ. ಇಂದ್ರಾ ಸಹಾನಿ ಕೇಸಿನಲ್ಲಿ ನಿರ್ದಿಷ್ಟವಾಗಿ ಈ ಹಕ್ಕು ಕೇವಲ ಭಾರತೀಯರಿಗೆ ಮಾತ್ರವಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ ಮತ್ತು ನಿಗಮಗಳೂ (corporation) ಕೂಡ ನ್ಯಾಯಿಕ ವ್ಯಕ್ತಿ ಆಗಿರುವುದರಿಂದ ಅವು ಕೂಡ ಈ ರಕ್ಷಣೆ ಹೊಂದಿರುತ್ತವೆ ಎಂದು ಹೇಳಲಾಗಿದೆ.

2) ಪರಿಚ್ಛೇದ 15

ಇದೇ ಪರಿಚ್ಚೇದ ಮುಂದುವರೆದು ಹೆಂಗಸರು ಮಕ್ಕಳು ಜಾತಿ ಜನಾಂಗ ಹಾಗೂ ಹಿಂದುಳಿದ ವರ್ಗಗಳ ಜನರನ್ನು ಮೇಲೆತ್ತಲು ಕೈಗೊಳ್ಳುವ ಸರ್ಕಾರದ ಶ್ರಮಗಳಿಗೆ ಯಾರೂ ತಡೆಯೊಡ್ಡಬಾರದು ಎಂದು ಹೇಳುತ್ತದೆ. ಈ ಒಂದು ಷರತ್ತು ಸರಿಯಾಗಿ ಜನರಿಗೆ ತಲುಪದೇ ಇರುವ ಕಾರಣದಿಂದ ಇಂದಿಗೂ ಸಾಮಾನ್ಯ ಜನರಲ್ಲಿ ಮೀಸಲಾತಿ ಹಾಗೂ ಅನೇಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ತಪ್ಪು ಕಲ್ಪನೆ ಇದೆ. ಈ ವ್ಯಾಖ್ಯಾನವನ್ನು ಮೇಲೆ ಹೇಳಿದ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಓದಿದಾಗ ಸರಿಯಾದ ಅರ್ಥ ಸಿಗುತ್ತದೆ.

ಇಂದಿಗೂ ಮೇಲ್ಜಾತಿಯ ಜನರ ಬಾವಿಯಿಂದ ನೀರು ತಂದಾಗ, ದೇವಸ್ಥಾನಗಳಲ್ಲಿ ಪ್ರವೇಶಿಸಿದಾಗ ಹೊಡೆತ ತಿಂದು ಸಾಯುವ ಸಾವಿರಾರು ನಿದರ್ಶನಗಳು ಸಮಾಜದಲ್ಲಿ ನಡೆಯುತ್ತಲೇ ಇದ್ದರೂ, ಅವುಗಳನ್ನು ನಗಣ್ಯಗೊಳಿಸಿ ಎಲ್ಲ ಸರಿಯಾಗಿಯೇ ಇದೆ, ಮೀಸಲಾತಿ ತೆಗೆದರೆ ಮಾತ್ರ ನಿಜವಾದ ಪ್ರಗತಿ ಸಾಧ್ಯ ಎಂದು ಜನ ಮಾತನಾಡಲು ಕಾರಣವೇ ಈ ಪರಿಚ್ಛೇದವನ್ನು ತಪ್ಪು ತಪ್ಪಾಗಿ ವಿವರಿಸಿರುವುದು. ಆದ್ದರಿಂದಲೇ ನಂತರ ಸಕಾರಾತ್ಮಕ ಅಥವಾ ಧನಾತ್ಮಕ ಭೇದಭಾವ ಎಂಬ ಶಬ್ದ ಬಂದಿದ್ದು. ಹೆಂಗಸರಿಗೆ ಹೆರಿಗೆ ಸಮಯದಲ್ಲಿ ವಿಶೇಷ ಸವಲತ್ತುಗಳು, ಮೀಸಲಾತಿಯ ಜೊತೆ ಒಳಮೀಸಲಾತಿಯ ಚಾಲನೆ, ವಿದ್ಯಾಲಯಗಳಲ್ಲಿ ಮೀಸಲಾತಿ ಇವೆಲ್ಲ ಇದೇ ಚಿಂತನೆಯ ಭಾಗವಾಗಿವೆ. ಒಂದು ಸಮಾನ ವಾತಾವರಣವನ್ನು ನಿರ್ಮಿಸಲು ಸಂವಿಧಾನ ಅನುವು ಮಾಡಿರುವ ಈ ಹಕ್ಕುಗಳು ಕೇವಲ ದೇಶದ ನಾಗರಿಕರಿಗೆ ಮಾತ್ರ ಲಭ್ಯವಿದೆ.

3) ಪರಿಚ್ಛೇದ 21 – ಪ್ರಾಣ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು

21ನೇ ಪರಿಚ್ಛೇದದ ಮುಖ್ಯ ಉದ್ದೇಶ ನಾಗರಿಕರ ಪ್ರಾಣ ಮತ್ತು ಸ್ವಾತಂತ್ರ್ಯದ ರಕ್ಷಣೆ. ಆದರೆ ಈ ಎರಡು ಶಬ್ದಗಳು ಕಳೆದ ದಶಕಗಳಲ್ಲಿ ಹೊರಬಂದ ಸುಪ್ರೀಂಕೋರ್ಟ್‌ನ ಹಲವು ತೀರ್ಮಾನಗಳಲ್ಲಿ ಹೊಸಹೊಸ ಪರಿಭಾಷೆಗಳನ್ನು ಕಂಡುಕೊಂಡಿವೆ.

ಈ ಹಕ್ಕನ್ನು ರಾಜ್ಯವು/ಪ್ರಭುತ್ವವು ವ್ಯಕ್ತಿಯ ಮೇಲೆ ನಡೆಸಬಹುದಾದ ದಬ್ಬಾಳಿಕೆಯ ವಿರುದ್ಧ ಉಪಯೋಗಿಸಬಹುದಾಗಿದೆ. ಅಂದರೆ ಯಾವುದೇ ಸಾಮಾನ್ಯ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ಪ್ರಾಣ ಅಥವಾ ಸ್ವಾತಂತ್ರ್ಯಕ್ಕೆ ಧಕ್ಕೆ ಆದಾಗ ಇದು ಅನ್ವಯಿಸುವುದಿಲ್ಲ. ಪ್ರಾಣ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಶಬ್ದಗಳು ಪಡೆದ ಹೊಸ ಅರ್ಥಗಳಲ್ಲಿ ಇವೆಲ್ಲವೂ ಅಡಗಿವೆ

ವಿದೇಶಕ್ಕೆ ಹೋಗುವ ಸ್ವಾತಂತ್ರ್ಯ
ಗೌಪ್ಯತೆಯ (Right to Privacy) ಸ್ವಾತಂತ್ರ್ಯ
ಏಕಾಂತ ಸೆರೆವಾಸದ ವಿರುದ್ಧದ ಸ್ವಾತಂತ್ರ್ಯ
ಕೈಕೋಳ ಧರಿಸಲು ಒಪ್ಪದೇ ಇರುವ ಸ್ವಾತಂತ್ರ್ಯ
ವಾಸದ ಸ್ವಾತಂತ್ರ್ಯ
ರಕ್ಷಣಾಧೀನ (custodial) ಸಾವಿನ ವಿರುದ್ಧದ ಸ್ವಾತಂತ್ರ್ಯ
ಸೂಕ್ತ ಸಮಯದಲ್ಲಿ ವೈದ್ಯಕೀಯ ನೆರವಿನ ಸ್ವಾತಂತ್ರ್ಯ ಮುಂತಾದವು.

ಈ ಎಲ್ಲ ಹೊಸ ವಿವರಣೆ ಹಾಗೂ ಅರ್ಥ ವಿಸ್ತರಣೆಯ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ’ಮೇನಕಾ ಗಾಂಧಿ ವರ್ಸಸ್ ಭಾರತ ಒಕ್ಕೂಟ’ ಕೇಸಿನಿಂದ. ಈ ವಿವರಣೆ ಇನ್ನಷ್ಟು ವಿಸ್ತಾರಗೊಂಡಿದ್ದು ’ಬಂಧುವಾ ಮುಖ್ತಿ ಮೋರ್ಚಾ ವರ್ಸಸ್ ಭಾರತ ಒಕ್ಕೂಟ ಮತ್ತು ಇತರರು’ ಕೇಸಿನಲ್ಲಿ: “ಅನುಚ್ಛೇದ 21, ಮನುಷ್ಯರಿಗೆ ಘನತೆಯಿಂದ ಬದುಕುವ ಮತ್ತು ಶೋಷಣೆಯ ವಿರುದ್ಧ ದನಿ ಎತ್ತುವ ಸ್ವಾತಂತ್ರ್ಯ ನೀಡುತ್ತದೆ” ಎಂದು ಹೇಳಲಾಯಿತು. ಇನ್ನೂ ಕೆಲವು ಬಾರಿ ಮುಂದೆ ಹೋಗಿ ನ್ಯಾಯಾಲಯಗಳು ರಾಜ್ಯನೀತಿ ನಿರ್ದೇಶಕ ತತ್ವಗಳ ಹರಿವನ್ನೂ ವಿಸ್ತಾರಗೊಳಿಸಿ ಅದನ್ನೂ ಅನುಚ್ಛೇದ 21ರ ಅಡಿಯಲ್ಲಿ ವಿವರಿಸಿ ಕಲುಷಿತ ನೀರು ಮತ್ತು ಗಾಳಿಯಿಂದ ರಕ್ಷಣೆ, ಕಾನೂನಿನಡಿ ವಿಚಾರಣಾದಿನ ಅವಧಿಯಲ್ಲಿ ಆಪಾದಿತನಿಗೆ ರಕ್ಷಣೆ, ಮಗುವಿಗೆ ಸರ್ವಾಂಗೀಣ ಬೆಳವಣಿಗೆಯ ರಕ್ಷಣೆ, ಸಾಂಸ್ಕೃತಿಕ ಪರಂಪರೆಯ ರಕ್ಷಣೆಯ ಮುಂತಾದ ಸ್ವಾತಂತ್ರ್ಯಗಳನ್ನು ನೀಡಿದೆ.

PC : Telegraph India

4) ಪರಿಚ್ಛೇದ 32- ಸಾಂವಿಧಾನಿಕ ಪರಿಹಾರಗಳ ಹಕ್ಕು

ಯಾವುದೇ ವ್ಯಕ್ತಿಗೆ ತನ್ನ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎನಿಸಿದಾಗ ಸುಪ್ರೀಂಕೋರ್ಟಗೆ ಹೋಗಿ ನ್ಯಾಯ ಕೇಳುವ ಸ್ವಾತಂತ್ರ್ಯವನ್ನು 32ನೇ ಪರಿಚ್ಛೇದ ನೀಡುತ್ತದೆ. ಜನರಿಗೆ ತಮ್ಮ ಹಕ್ಕುಗಳನ್ನು ಸಕಾರಣವಿಲ್ಲದೇ ಹತ್ತಿಕ್ಕಲಾಗಿದೆ ಎನಿಸಿದಾಗ, ನ್ಯಾಯಾಲಯಗಳ ದೀರ್ಘ ಪ್ರಕ್ರಿಯೆಯಿಂದ ನ್ಯಾಯ ದೊರಕುವುದು ವಿಳಂಬವಾಗಬಹುದು ಅನ್ನಿಸಿದಾಗ ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋಗಿ ತಮ್ಮ ಹಕ್ಕುಗಳ ರಕ್ಷಣೆ ಕೋರಬಹುದು. ಆದರೆ ಸುಪ್ರೀಂ ಕೋರ್ಟ್ ಕೆಲವೊಮ್ಮೆ ಈ ಜವಾಬ್ದಾರಿಯನ್ನು ತನ್ನ ಅಧೀನ ನ್ಯಾಯಾಲಯಗಳಿಗೆ ಅವುಗಳ ವ್ಯಾಪ್ತಿಯನುಸಾರ ವಹಿಸಿಕೊಡಬಹುದು.

ಈ ಪರಿಚ್ಛೇದದ ಕುರಿತು ಡಾ.ಬಿ.ಆರ್ ಅಂಬೇಡ್ಕರ್ “ಸಂವಿಧಾನದ ಅತ್ಯಂತ ಪ್ರಮುಖ ಮತ್ತು ಮಹತ್ವವಾದ ಪರಿಚ್ಛೇದ ಯಾವುದು ಎಂದು ಯಾರಾದರೂ ನನ್ನನ್ನು ಕೇಳಿದರೆ, ಯಾವ ಒಂದು ಪರಿಚ್ಛೇದವಿಲ್ಲದೇ ಈ ಸಂವಿಧಾನ ಶೂನ್ಯವಾಗುತ್ತದೆ ಎಂದರೆ ನಾನು 32ನೇ ಪರಿಚ್ಛೇದವನ್ನು ಹೆಸರಿಸುತ್ತೇನೆ. ಇದು ಈ ಸಂವಿಧಾನದ ಹೃದಯ ಮತ್ತು ಆತ್ಮ ಆಗಿದೆ ಇದರ ಮಹತ್ವವನ್ನು ಮನಗಂಡಿದ್ದಕ್ಕಾಗಿ ನಾನು ಬಹಳ ಸಂತಸಗೊಂಡಿದ್ದೇನೆ” ಎಂದಿದ್ದರು.

ಎಂಥದೇ ಪ್ರಮುಖ ಸಂಗತಿಯಿರಲಿ, ಸುಪ್ರೀಂಕೋರ್ಟು ಕೆಲವರಿಗೆ ಮಾತ್ರ ಪರವಾಗಿ ವರ್ತಿಸುತ್ತದೆ ಎಂಬ ಆರೋಪಗಳು ಬರುವುದನ್ನೂ ನಾವು ನೋಡಿರುತ್ತೇವೆ. ಆದರೆ ಸರಿಯಾದ ರೀತಿಯಲ್ಲಿ ಬಳಕೆಯಾಗುವ ಸನ್ನಿವೇಶದಲ್ಲಿ, ಈ ಒಂದು ಪರಿಹಾರವಿಲ್ಲದೆ ಹೋಗಿದ್ದರೆ ಸಂವಿಧಾನದ ಉಳಿದ ಎಲ್ಲ ಕೊಡುಗೆಗಳೂ ವ್ಯರ್ಥವಾಗಿರುತ್ತಿದ್ದವು.

5) ಪರಿಚ್ಛೇದ 44 – ಏಕರೂಪ ನಾಗರಿಕ ಸಂಹಿತೆ

ಏಕರೂಪ ನಾಗರಿಕ ಸಂಹಿತೆ ಅಥವಾ Uniform Civil Code ಎಂಬ ಶಬ್ದವನ್ನು ಬಹಳ ಸಲ ಬಳಸಲಾಗುತ್ತದೆ ಆದರೆ ಅದರ ನಿಜವಾದ ಉದ್ದೇಶ ಪ್ರಸ್ತುತತೆಗಳಿಗಿಂತ ಅದರ ಬಗೆಗಿನ ವಿವಾದಗಳಿಗೇ ಹೆಚ್ಚಿನ ಮಹತ್ವ ನೀಡಲಾಗಿದ್ದು, ಅದರ ಸ್ವರೂಪವೇ ಬದಲಾಗಿ ಹೋಗಿದೆ.

ಇಡೀ ದೇಶಕ್ಕೆ ಬಂದೇ ದಂಡ ಪ್ರಕ್ರಿಯಾ ಸಂಹಿತೆ (Criminal Procedure Code) ಇರಬೇಕಾದರೆ ಸಿವಿಲ್ ಪ್ರಕ್ರಿಯೆ ಯಾಕಿರಬಾರದು ಎಂದು ಅದರ ಸಮರ್ಥಕರ ಪ್ರಶ್ನೆ. ಆದರೆ ಈ ಪರಿಚ್ಛೇದವನ್ನು ಕೇವಲ ಮುಸ್ಲಿಂ ಸಮುದಾಯವನ್ನು ತೊಂದರೆಗೊಳಿಸಲು ಬಳಸಲಾಗುತ್ತದೆ ಎಂಬುದು ಹಲವರ ವಾದ. ಏಕರೂಪ ನಾಗರಿಕ ಸಂಹಿತೆಯ ಅಡಿಯಲ್ಲಿ ಮದುವೆ, ವಿಚ್ಛೇದನ ದತ್ತು ತೆಗೆದುಕೊಳ್ಳುವುದು, ಆಸ್ತಿ ಹಂಚಿಕೆ, ಮಕ್ಕಳ ಪಾಲನೆ ಎಲ್ಲಕ್ಕೂ ಒಂದೇ ತರಹದ ಕಾನೂನುಗಳನ್ನು ಮಾಡಿ ಅವು ಎಲ್ಲ ಧರ್ಮದವರಿಗೂ ಒಂದೇ ರೀತಿ ಇರುವಂತೆ ಮಾಡಬೇಕು ಎನ್ನುವುದು ಒಂದು ವಾದ ಆದರೆ ಈ ಎಲ್ಲಾ ಅಂಶಗಳು ಇಸ್ಲಾಂ ಧರ್ಮದಲ್ಲಿ ಧಾರ್ಮಿಕ ಆಚರಣೆಯ ರೂಪದಲ್ಲಿ ಆಗಲೇ ಇದ್ದು ಇವುಗಳನ್ನು ಕೆಣಕುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಆದಂತೆ ಎಂಬುದು ದೀರ್ಘವಾದ ಎದುರು ವಾದ.

ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂ ಕಾನೂನುಗಳು ಕೂಡ ಭಿನ್ನವಾಗಿದ್ದು ಹಿಂದೂ ಕೋಡ್ ಮೂಲಕ ಒಂದೇ ಬಗೆಯ ಕಾನೂನು ತರುವಾಗ ಹಿಂದೂ ಮೂಲಭೂತವಾದಿಗಳೂ ಉಗ್ರವಾಗಿ ಪ್ರತಿಭಟಿಸಿದ್ದರು, ಆದರೆ ಅದು ನಿಲ್ಲಲಿಲ್ಲ. ಪಕ್ಕಾ ಇಸ್ಲಾಂ ದೇಶಗಳಾದ ಪಾಕಿಸ್ತಾನ, ಸಿರಿಯಾ, ಇರಾನ್, ಮೊರಕ್ಕೂ, ಟ್ಯೂನಿಸಿಯಾಗಳಲ್ಲಿ ಕೂಡ ಬಹುಪತ್ನಿತ್ವದಂತಹ ಪದ್ಧತಿ ಇಲ್ಲ. ಆದರೆ ಧರ್ಮನಿರಪೇಕ್ಷ ದೇಶವಾದ ಭಾರತದಲ್ಲಿ ಇದು ಇನ್ನೂ ಇರುವುದು ವಿಪರ್ಯಾಸ ಎಂಬ ಅಭಿಪ್ರಾಯದ ಹಿಂದೆ ದೀರ್ಘ ರಾಜಕೀಯ ಇತಿಹಾಸ ಅಡಗಿದೆ.

6. ಪರಿಚ್ಛೇದ 112 ಮತ್ತು 202 – ವಾರ್ಷಿಕ ಆಯವ್ಯಯ

ಮಾತನಾಡುವಾಗ ಬಜೆಟ್ ಎಂಬ ಶಬ್ದ ಎಷ್ಟು ಸಾಮಾನ್ಯವಾಗಿದೆ ಎಂದರೆ ಅದರ ಬಗ್ಗೆ ಅಕ್ಷರ ಬಲ್ಲದವರೂ ಮಾತಾಡುತ್ತಾರೆ. ಆದರೆ ’ಬಜೆಟ್ ಎಂಬ ಶಬ್ದ ಸಂವಿಧಾನದಲ್ಲಿ ಬಳಕೆ ಆಗಿಲ್ಲ. ಅಲ್ಲಿ ವಾರ್ಷಿಕ ಆಯವ್ಯಯ ಎಂದು ಮಾತ್ರ ಇದೆ. ಪ್ರತಿ ವರ್ಷದ ಏಪ್ರಿಲ್ 1 ರಿಂದ ಮುಂದಿನ ವರ್ಷದ ಮಾರ್ಚ್ 31ರ ವರೆಗಿನ ಅವಧಿಯನ್ನು ಆರ್ಥಿಕ ವರ್ಷ ಎಂದು ಅಥವಾ ಹಣಕಾಸು ವರ್ಷ ಎಂದು ಕರೆಯಲಾಗುತ್ತದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆ ವರ್ಷದ ಆದಾಯ ಮತ್ತು ಮುಂದಿನ ವರ್ಷಕ್ಕೆ ನಿಗದಿ ಮಾಡಿದ ಖರ್ಚಿನ ವಿವರಗಳಿರುತ್ತವೆ. ಈ ಹಣಕಾಸನನ್ನು

1) ಏಕೀಕೃತ ನಿಧಿ ಮತ್ತು 2) ಆಪತ್ಕಾಲೀನ ನಿಧಿ ಎಂದು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದ್ದು, ದೇಶದ ಅಥವಾ ರಾಜ್ಯದ ಎಲ್ಲಾ ಖರ್ಚುಗಳನ್ನು ಏಕೀಕೃತ ನಿಧಿಯಿಂದಲೇ ತೂಗಿಸಲಾಗುತ್ತದೆ. ಆಪತ್ಕಾಲೀನ ನಿಧಿ ಹೆಸರೇ ಸೂಚಿಸುವಂತೆ ನೈಸರ್ಗಿಕ ಪ್ರಕೋಪಗಳಂತಹ ಅವಧಿಯಲ್ಲಿ ಬಳಸಲಾಗುತ್ತದೆ.

7) ಪರಿಚ್ಛೇದ 226 – ಹೈಕೋರ್ಟಿನ ಅಧಿಕಾರಗಳು

ಪರಿಚ್ಛೇದ 226ರ ಅಡಿಯಲ್ಲಿ ಹೈಕೋರ್ಟುಗಳು ಯಾವುದೇ ವ್ಯಕ್ತಿ ಅಥವಾ ಅಧಿಕಾರಿ ಮತ್ತು ಸರ್ಕಾರವೂ ಸೇರಿದಂತೆ, ನಿರ್ದೇಶನ, ಆದೇಶ ಅಥವಾ ರಿಟ್‌ಗಳನ್ನು ಹೊರಡಿಸಬಹುದು. ಈ ರಿಟ್‌ಗಳು 5 ಬಗೆಗಳಲ್ಲಿದ್ದು, ಅದರಲ್ಲಿ ಮೂಲಭೂತ ಹಕ್ಕು ಹಾಗೂ ಶಾಸನಬದ್ಧ ಹಕ್ಕು ಎರಡನ್ನೂ ಜಾರಿಗೊಳಿಸುವ ಅಧಿಕಾರ ಇರುವುದರಿಂದ ಹೈಕೋರ್ಟಿನ ಕಾರ್ಯವ್ಯಾಪ್ತಿ ಸುಪ್ರೀಂ ಕೋರ್ಟ್‌ಗಿಂತ ಹೆಚ್ಚಿನದ್ದಾಗಿದೆ.

8) ಪರಿಚ್ಛೇದ 356 – ತುರ್ತುಪರಿಸ್ಥಿತಿ

ತುರ್ತುಪರಿಸ್ಥಿತಿ ಎಂಬ ಶಬ್ದ ಕೂಡ ಈಗ ಸಾಮಾನ್ಯವಾದದ್ದೆ. ಆದರೆ ಅದನ್ನು ಹೇರುವುದರ ಹಿಂದೆ ಇರಬೇಕಾದ ಸಂದರ್ಭಗಳ ಬಗ್ಗೆ ಬಹಳ ಜನರಿಗೆ ಗೊತ್ತೇ ಇರುವುದಿಲ್ಲ. ರಾಷ್ಟ್ರಪತಿ ಆಡಳಿತ ಎನ್ನುವುದು ಈ ದೇಶದಲ್ಲಿ ಬಳಕೆಗಿಂತ ದುರ್ಬಳಕೆ ಜಾಸ್ತಿ ಆಗಿದೆ. ಕೇಂದ್ರ ಸರ್ಕಾರಗಳು ಈ ಪರಿಚ್ಛೇದವನ್ನು ರಾಜ್ಯ ಸರ್ಕಾರಗಳನ್ನು ನಿಯಂತ್ರಿಸಲು ಇರುವ ಅಸ್ತ್ರದಂತೆ ಬಳಸುತ್ತ ಬಂದಿವೆ. “ರಾಜ್ಯಗಳ ಆಡಳಿತದಲ್ಲಿ ಸಾಂವಿಧಾನಿಕ ಕುಸಿತ” ಆದ ಸಂದರ್ಭಗಳಲ್ಲಿ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಿ ಪರೋಕ್ಷವಾಗಿ ರಾಜ್ಯಗಳನ್ನು ಹತೋಟಿಗೆ ತೆಗೆದುಕೊಳ್ಳುವುದು ಅತ್ಯಂತ ಸಾಮಾನ್ಯವಾಗಿ ನಡೆಯುತ್ತ ಬಂದಿರುವುದರಿಂದ, ಈ ತುರ್ತು ಪರಿಸ್ಥಿತಿ ಎಂಬುದು ಜನರಿಗೆ ಸಹಜ ಬೆಳವಣಿಗೆಯಂತೆ ಕಾಣುತ್ತದೆ. ಆದರೆ ಎಸ್.ಆರ್ ಬೊಮ್ಮಾಯಿ ವರ್ಸಸ್ ಭಾರತ ಒಕ್ಕೂಟ ಕೇಸಿನಲ್ಲಿ, ಕರ್ನಾಟಕದ ಬೊಮ್ಮಾಯಿ ಸರ್ಕಾರವನ್ನು ಕೇಂದ್ರ ಸರ್ಕಾರ ಕಿತ್ತುಹಾಕಿದಾಗ ಸುಪ್ರೀಂ ಕೋರ್ಟು ಮಹತ್ತರ ತೀರ್ಪು ನೀಡಿ “ರಾಜ್ಯ ಸರ್ಕಾರಗಳನ್ನು ಅಸಿಂಧುಗೊಳಿಸುವ ರಾಷ್ಟ್ರಪತಿಗಳ ಅಧಿಕಾರ ಅಸೀಮವಾದುದಲ್ಲ ಸಂಸತ್ತಿನ ಎರಡು ಮನೆಗಳ ಒಪ್ಪಿಗೆ ಪಡೆದ ನಂತರ ಅದನ್ನು ಚಲಾಯಿಸಬೇಕು” ಎಂದು ಹೇಳಿತ್ತು. ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆ ಸೇರಿದಂತೆ ಇನ್ನು ಅನೇಕ ಮಹತ್ವದ ವಿಚಾರಗಳಿಂದಾಗಿ ಈ ತೀರ್ಪು ಮಹತ್ವ ಪಡೆದಿದೆ.

ಸಂವಿಧಾನದಲ್ಲಿ ಈ ಅಂಶಗಳು ದಿನನಿತ್ಯದ ಬಳಕೆಯಲ್ಲಿ ಸುಳಿದಾಡುತ್ತಿರುವುದರಿಂದ ಇವುಗಳನ್ನು ಎಲ್ಲರೂ ಸ್ವಲ್ಪ ಮಟ್ಟಿಗಾದರೂ ತಿಳಿದಿರುವುದು ಅಗತ್ಯವೆನಿಸಿಕೊಳ್ಳುತ್ತದೆ. ಅದೇ ರೀತಿ ಸಂವಿಧಾನದ ವಿಷಯಗಳ ಪಟ್ಟಿಯಲ್ಲಿ ಕೇಂದ್ರ, ರಾಜ್ಯಗಳಿಗೆ ನಿರ್ದಿಷ್ಟವಾದ ವಿಷಯಗಳ ಮೇಲೆ ಕಾನೂನು ಮಾಡುವ ಅಧಿಕಾರವಿದ್ದು ಕೆಲವೊಂದು ವಿಷಯಗಳನ್ನು ಮಾತ್ರ ಸಾಮಾನ್ಯ ಪಟ್ಟಿಯಲ್ಲಿ ಇಡಲಾಗಿದೆ.

ರಾಜ್ಯಗಳ ಪಟ್ಟಿಯಲ್ಲಿರುವ ಕೃಷಿಯಂತಹ ವಿಷಯಗಳ ಮೇಲೆ ಕೇಂದ್ರ ಕಾನೂನು ಮಾಡಲು ಹೊರಟಾಗ ರಾಜ್ಯ ಹಾಗೂ ಕೇಂದ್ರಗಳ ಸಂಬಂಧ ಹಾಳಾಗುತ್ತದೆ. ತನ್ನ ಸ್ವಾಯತ್ತತೆಯ ಮೇಲೆ ಕೇಂದ್ರದ ಹತೋಟಿಯನ್ನು ತಡೆಯಲು ರಾಜ್ಯಗಳು ಪ್ರಯತ್ನಪಡುವುದು ಅನೇಕ ಸಲ ವಿಪರೀತ ಪರಿಸ್ಥಿತಿಗಳನ್ನು ಹುಟ್ಟುಹಾಕುತ್ತದೆ.
ಸಂವಿಧಾನದ ಪ್ರತಿಯೊಂದು ಅಂಶವೂ ಮಹತ್ವದ್ದೇ ಇದ್ದರೂ, ಕನಿಷ್ಟ ಪಕ್ಷ ಇಷ್ಟನ್ನಾದರೂ ತಿಳಿದಿರುವುದು ನಮ್ಮ ಹಿತದೃಷ್ಟಿಯಿಂದ ನಮಗೇ ಒಳ್ಳೆಯದು.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಮೊದಲ ದಿನವೇ ವಲಸೆ, ಹವಾಮಾನ ಬದಲಾವಣೆ, ಕೋವಿಡ್ ನಿರ್ವಹಣೆಯ ನೀತಿಗಳ ಬದಲಾವಣೆಗೆ ಸಹಿ ಹಾಕಿದ ಬೈಡನ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...