Homeಕರ್ನಾಟಕಸದ್ಯದಲ್ಲೇ ಉಪಚುನಾವಣೆ ಘೋಷಣೆ: ಅನರ್ಹ ಶಾಸಕರಿಗೆ ತ್ರಿಶಂಕು ಸ್ಥಿತಿ ಖಾಯಂ..

ಸದ್ಯದಲ್ಲೇ ಉಪಚುನಾವಣೆ ಘೋಷಣೆ: ಅನರ್ಹ ಶಾಸಕರಿಗೆ ತ್ರಿಶಂಕು ಸ್ಥಿತಿ ಖಾಯಂ..

- Advertisement -
- Advertisement -

| ನೀಲಗಾರ |

ಸಾಮಾನ್ಯವಾಗಿ ಸುಪ್ರೀಂಕೋರ್ಟಿನಲ್ಲಿ ಏನೇ ನಡೆದರೂ ಅದನ್ನು ನ್ಯಾಯಾಂಗದ ವಿದ್ಯಮಾನ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ನೆಲೆಯೂರಿದ ಮೇಲೆ ಸುಪ್ರೀಂಕೋರ್ಟಿನ ತೀರ್ಮಾನಗಳಿಗೂ ರಾಜಕೀಯ ಒಲವಿನ ಆರೋಪ ಹತ್ತಿಕೊಳ್ಳುತ್ತಿದೆ. ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಪದೇಪದೇ ಮುಂದೂಡುತ್ತಿರುವುದು ಕೇಂದ್ರದ ಸೂಚನೆಯ ಮೇರೆಗೇ ಎಂಬುದು ಕೆಲವರ ಗುಮಾನಿ.

ಬಿಜೆಪಿಗೆ ಸೇರಿದ ನಂತರ ಈ ಎಂಎಲ್‍ಎಗಳಿಂದ ಬಿಜೆಪಿ ಪಕ್ಷಕ್ಕೆ ಒಳ್ಳೆಯದೇನೂ ಆಗುವುದಿಲ್ಲ ಎಂಬ ಮಾತನ್ನು ವಿಶ್ವಾಸಮತ ಯಾಚನೆಯ ಸಂದರ್ಭದಲ್ಲೇ ಕೆಲವರು ಆಡಿದ್ದರು. ‘ಹಾಲು ಕುಡಿದ ಮಕ್ಕಳೇ ಬದುಕಲ್ಲ, ವಿಷ ಕುಡಿದ ಮಕ್ಕಳು ಬದುಕ್ತಾರಾ?’, ‘ಇಷ್ಟು ವರ್ಷ ಜೊತೆಯಲ್ಲಿದ್ದು, ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದ ಪಕ್ಷಕ್ಕೇ ನಿಷ್ಠರಾಗಿರದವರು ನಾಳೆ ನಿಮಗೆ ನಿಷ್ಠರಾಗಿರುತ್ತಾರಾ?’ ಎಂದೆಲ್ಲಾ ಡಿ.ಕೆ.ಶಿವಕುಮಾರ್ ಮತ್ತಿತರರು ಬಿಜೆಪಿಯವರನ್ನು ಛೇಡಿಸಿದ್ದರು.

ಆದರೆ ಅಪಾಯ ಬಿಜೆಪಿಯವರಿಗಲ್ಲ, ಬಿಜೆಪಿ ಸೇರಿದ ಶಾಸಕರಿಗೇ ಆಗುವ ಎಲ್ಲಾ ಸಾಧ್ಯತೆಗಳೂ ಕಾಣುತ್ತಿವೆ. ಈ ವರದಿ ಬರೆಯುವ ಹೊತ್ತಿಗೆ ಸುಪ್ರೀಂಕೋರ್ಟಿನಲ್ಲಿ ನಾಲ್ಕನೆಯ ಬಾರಿಗೆ ಅನರ್ಹ ಶಾಸಕರ ‘ಅನರ್ಹತೆ’ ಕುರಿತಾದ ಮೊಕದ್ದಮೆಯನ್ನು ವಿಚಾರಣೆಯಿಲ್ಲದೇ ಮುಂದೂಡಲಾಗಿದೆ. ಇದುವರೆಗೆ ‘ಇದು ತುರ್ತಾಗಿ ತೆಗೆದುಕೊಳ್ಳಬೇಕಾದ ಕೇಸೇನಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳುತ್ತಿತ್ತು. ಆದರೆ, ಈ ಸಾರಿ ರೆಗ್ಯುಲರ್ ಮಾರ್ಗದಿಂದಲೇ ಬಂದ ಕೇಸಿನ ವಿಚಾರಣೆಯಿಂದ ನ್ಯಾಯಮೂರ್ತಿಯೊಬ್ಬರು ಹಿಂದೆ ಸರಿದಿದ್ದರಿಂದ ಮುಂದೂಡಲ್ಪಟ್ಟಿತು. ಅನರ್ಹ ಶಾಸಕ ಬಿ.ಸಿ.ಪಾಟೀಲರ ಹಿರೇಕೆರೂರು ಸೇರಿಕೊಳ್ಳುವ ಹಾವೇರಿ ಜಿಲ್ಲೆಯವರಾದ ಶಾಂತನಗೌಡರ್ ಹಿಂದೆ ಸರಿದರು.

ಮುಂದಿನ ವಾರ ಮತ್ತೆ ಕೇಸು ವಿಚಾರಣೆಗೆ ಬರಬಹುದೆಂಬ ನಿರೀಕ್ಷೆಯಿದೆ. ಅದೂ ಮುಖ್ಯ ನ್ಯಾಯಮೂರ್ತಿಯವರು ವಿಚಾರಣಾ ಪೀಠದ ಪುನರ್‍ರಚನೆಯನ್ನು ಅಷ್ಟರೊಳಗೆ ಮಾಡಿದರೆ? ಸಾಮಾನ್ಯವಾಗಿ ಸುಪ್ರೀಂಕೋರ್ಟಿನಲ್ಲಿ ತುರ್ತಾಗಿ ವಿಚಾರಣೆ ನಡೆಯಬೇಕೆಂದು ತೀರ್ಮಾನಿಸಿದರೆ, ಪ್ರತಿ ದಿನವೂ ಹಿಯರಿಂಗ್ ಮಾಡಿ ಕೇಸನ್ನು ಮುಗಿಸಿಬಿಡುತ್ತಾರೆ. ಇಲ್ಲವಾದರೆ, ಅದು ಪದೇಪದೇ ಮುಂದೂಡಲ್ಪಟ್ಟು ಬಹಳ ಕಾಲ ಎಳೆಯಲೂಬಹುದು.

ಹಾಗಾದರೆ ನಮ್ಮ ಗತಿಯೇನು ಎಂಬ ಚಿಂತೆಗೆ ಅನರ್ಹ ಶಾಸಕರು ಬಿದ್ದಿದ್ದಾರೆ. ಪಕ್ಷಾಂತರ ಮಾಡುವ ಉದ್ದೇಶದಿಂದಲೇ, ಗುಂಪಾಗಿ ರಾಜೀನಾಮೆ ಸಲ್ಲಿಸಿರುವ ಸದರಿ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ತಪ್ಪಿತಸ್ಥರು. ಹಾಗಾಗಿ ಅವರನ್ನು ವಿಧಾನಸಭೆಯ ಈ ಅವಧಿ ಮುಗಿಯುವವರೆಗೆ ಅನರ್ಹರೆಂದು ಸ್ಪೀಕರ್ ತೀರ್ಪಿತ್ತಿದ್ದರು. ಇದಕ್ಕೆ ಸುಪ್ರೀಂಕೋರ್ಟಿನಲ್ಲಿ ತಡೆಯಾಜ್ಞೆ ಸಿಕ್ಕರೆ ಸಾಕು ಎಂದು ಅನರ್ಹರಾದ ಶಾಸಕರು ಕಾಯುತ್ತಿದ್ದರು. ತಡೆಯಾಜ್ಞೆ ಸಿಕ್ಕ ತಕ್ಷಣ ಅವರನ್ನು ಮಂತ್ರಿಗಳನ್ನಾಗಿಸಲೆಂದೇ ಹೆಚ್ಚುಕಡಿಮೆ ಅರ್ಧದಷ್ಟು ಸಚಿವ ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲಾಗಿದೆ. ತಡೆಯಾಜ್ಞೆ ಸಿಗದೇ, ಮುಂದಿನ 4 ತಿಂಗಳೊಳಗೆ ಅಂತಿಮ ತೀರ್ಪೂ ಹೊರಬೀಳದಿದ್ದರೆ? ಈಗಾಗಲೇ ಸ್ಪೀಕರ್ ಚುನಾವಣಾ ಆಯೋಗಕ್ಕೆ ಅನರ್ಹತೆಯ ತೀರ್ಪಿನ ಪ್ರತಿ ಕಳಿಸಿಯಾಗಿದೆ ಮತ್ತು 4 ತಿಂಗಳಲ್ಲಿ ಚುನಾವಣೆ ನಡೆಯಲೇಬೇಕು ಮತ್ತು ಈ ಅನರ್ಹರು ಸ್ಪರ್ಧಿಸುವಂತೆ ಇಲ್ಲ.

ಇವರಲ್ಲಿ ಮೂರ್ನಾಲ್ಕು ಜನ ಸ್ಪರ್ಧಿಸುವ ಆಲೋಚನೆಯಲ್ಲೂ ಇದ್ದಂತಿಲ್ಲ. ಮಸ್ಕಿಯ ಪಾಟೀಲ್, ಹುಣಸೂರಿನ ವಿಶ್ವನಾಥ್ ಮತ್ತು ಅಥಣಿಯ ಮಹೇಶ್ ಕುಮಟಳ್ಳಿ ಮತ್ತೆ ಶಾಸಕರಾಗದೇ ಬೇರೆ ರೀತಿಯಲ್ಲಿ ಅಧಿಕಾರವನ್ನು ಪಡೆದುಕೊಳ್ಳುವ ಬಯಕೆ ಹೊಂದಿರುವಂತೆ ಕಾಣುತ್ತಿದೆ. ಇವರಲ್ಲಿ ಮೊದಲಿಬ್ಬರು ತಮ್ಮ ಮಕ್ಕಳಿಗೆ ಟಿಕೆಟ್ ಬಯಸುವ ಸಾಧ್ಯತೆ ಇದ್ದು, ಅನರ್ಹತೆ ಮುಂದುವರೆದರೆ ಎಲ್ಲರೂ ತಮ್ಮ ಕುಟುಂಬದ ಸದಸ್ಯರನ್ನು ಫೀಲ್ಡಿಗಿಳಿಸುವ ಸಾಧ್ಯತೆಯೇ ಹೆಚ್ಚು. ಆದರೆ, ಸ್ವತಃ ತಾವೇ ಸ್ಪರ್ಧಿಸಿದರೆ ಇರುವ ಖದರ್ ಮಗನೋ, ಹೆಂಡತಿಯೋ ಸ್ಪರ್ಧಿಸಿದರೆ ಇರುವುದಿಲ್ಲ. ಉದಾಹರಣೆಗೆ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರ ಕುಟುಂಬದವರು ಕೆ.ಆರ್.ಪೇಟೆ ಮತದಾರರ ಜೊತೆಗೆ ಯಾವ ಸಂಬಂಧವನ್ನೂ ಇಟ್ಟುಕೊಂಡಿಲ್ಲ. ತಮ್ಮ ರಾಜೀನಾಮೆಗೆ ದೇವೇಗೌಡರ ಕುಟುಂಬ ರಾಜಕಾರಣವು ಕಾರಣ ಎಂದು ಇವರಲ್ಲಿ ಹೆಚ್ಚಿನವರು ಟೀಕಿಸಿದ್ದಾರೆ. ಇವರುಗಳ ಕುಟುಂಬಸ್ಥರು ನಿಂತರೆ ಅದೇ ನೆಗೆಟಿವ್ ಅಂಶವಾಗಿಬಿಡುವ ಸಾಧ್ಯತೆಯೂ ಇದೆ. ಇವೆಲ್ಲವೂ ಅನರ್ಹರ ಆತಂಕವನ್ನು ಹೆಚ್ಚಿಸುತ್ತಿದೆ.

ಆದರೆ, ಅಸಲೀ ಸಮಸ್ಯೆ ಅದಲ್ಲ. ಈ ಅನರ್ಹ ಶಾಸಕರಿಗೆ ಅಪಾಯವಿರುವುದು ಬಿಜೆಪಿ ಹೈಕಮಾಂಡ್‍ನಿಂದ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಸದರಿ ಶಾಸಕರು ನೆಚ್ಚಿಕೊಂಡಿರುವ ಬಿ.ಎಸ್.ಯಡಿಯೂರಪ್ಪನವರ ರೆಕ್ಕೆಗಳನ್ನು ಈಗಾಗಲೇ ಬಹುತೇಕ ಕತ್ತರಿಸಿಯಾಗಿದೆ. ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರ ಪರಿಸ್ಥಿತಿ ಏನಾಗಬಹುದೆಂಬ ಕುರಿತು ಯಾರಿಗೂ ಖಾತ್ರಿಯಿಲ್ಲ. ಸಚಿವಸಂಪುಟ ರಚನೆಯಲ್ಲಾಗಲೀ, ಖಾತೆ ಹಂಚಿಕೆಯಲ್ಲಾಗಲೀ, ಉಪಮುಖ್ಯಮಂತ್ರಿಗಳು ಯಾರಾಗಬೇಕು ಎಂಬುದರ ಕುರಿತಾಗಲೀ ಯಡ್ಡಿಯ ಮಾತು ನಡೆಯಲಿಲ್ಲ. ಅಥಣಿಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಸ್ಕಿಯಲ್ಲೂ ಬಿಜೆಪಿಯ ಬೇರೆ ಅಭ್ಯರ್ಥಿ, ರಾಣಿಬೆನ್ನೂರಿನಲ್ಲಿ ಬಿಜೆಪಿಯ ಮೂಲ ಅಭ್ಯರ್ಥಿ ಹೀಗೆ ಕೆಲವು ಯೋಜನೆಗಳು ಕರ್ನಾಟಕ ಬಿಜೆಪಿಯ ಹಾಲಿ ಹೈಕಮಾಂಡ್ ಬಿ.ಎಲ್.ಸಂತೋಷ್ ತಲೆಯಲ್ಲಿದೆಯೆಂದು ಬಿಜೆಪಿಯ ಮೂಲಗಳು ಪಿಸುಗುಡುತ್ತಿವೆ. ಹೀಗಾಗಿ ಈಗಿನ 105ರ ಜೊತೆಗೆ 8 ತಮ್ಮವರನ್ನೇ ಗೆಲ್ಲಿಸಿಕೊಂಡರೆ, ಉಳಿದವರ ಮೇಲಿನ ಅವಲಂಬನೆ ತಪ್ಪುತ್ತದೆ. ಇನ್ನಷ್ಟು ಜನ ಕಾಂಗ್ರೆಸ್-ಜೆಡಿಎಸ್ ಶಾಸಕರೂ (ಸ್ಪೀಕರ್ ಬದಲಾಗಿರುವುದರಿಂದ ಅನರ್ಹರಾಗುವ ಭೀತಿಯೂ ಇಲ್ಲದೇ) ಬಿಜೆಪಿಗೆ ಬಂದರೆ ಅಲ್ಲಿಗೆ, ಯಾರೂ ಬಿಜೆಪಿಯನ್ನು ಬ್ಲ್ಯಾಕ್‍ಮೇಲ್ ಮಾಡುವಷ್ಟು ಪ್ರಬಲರಾಗಿರುವುದಿಲ್ಲ. ಈಗಾಗಲೇ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಮೂರ್ನಾಲ್ಕು ಜನ ಜೆಡಿಎಸ್ ಶಾಸಕರು, ಭೀಮಾನಾಯ್ಕರ ಜೊತೆಗೆ ಮೂರು ಜನ ಕಾಂಗ್ರೆಸ್ ಶಾಸಕರು ಸಿದ್ಧರಾಗಿದ್ದಾರೆ ಎಂಬ ವರ್ತಮಾನವಿದೆ.

ಅಷ್ಟಕ್ಕೂ ಮೀರಿ ಬ್ಲ್ಯಾಕ್‍ಮೇಲ್ ಮಾಡಲು ಸಿದ್ಧರಾದರೆ, ಡಿ.ಕೆ.ಶಿವಕುಮಾರ್‍ರಿಗೆ ಆಗಿರುವ ಪರಿಸ್ಥಿತಿ ಬರುತ್ತದೆ ಎಂದು ತೋರಿಸಲು ಹೈಕಮಾಂಡ್ ಹೇಗೂ ಇ.ಡಿ. ಐ.ಟಿ.ಗಳ ಗುಮ್ಮ ಇದ್ದೇ ಇರುತ್ತದೆ. ಈಗ ಕ್ಯಾಂಪ್ ಬದಲಾಯಿಸಿರುವವರಲ್ಲಿ ಹೆಚ್ಚಿನವರು ಕೋಟಿ ಕೋಟಿ ಕುಳಗಳೇ ಆಗಿದ್ದು, ಅವರಿಗೆ ತನಿಖಾ ಸಂಸ್ಥೆಗಳ ದಾಳಿಯಿಂದ ರಕ್ಷಣೆ ಕೊಡುವುದೇ ಸಚಿವಗಿರಿ ಇದ್ದಂತೆ, ಹಾಗಾಗಿ ತೆಪ್ಪಗಿರಿ ಎಂದು ಹೇಳಲಾಗುತ್ತೆ. ಅನರ್ಹ ಶಾಸಕರು ‘ಸಚಿವಗಿರಿಯೂ ಬೇಡ, ಶಾಸಕ ಸ್ಥಾನವೂ ಬೇಡ ಎಂದು ಹೇಳುವ ಪರಿಸ್ಥಿತಿ ಬರುತ್ತದೆ ನೋಡಿ’ ಎಂದು ಗರ್ಭಗುಡಿಯ ಜೊತೆ ಸಂಬಂಧ ಹೊಂದಿರುವ ಬಿಜೆಪಿ ನಾಯಕರೊಬ್ಬರು ಹೇಳಿದ್ದು ನೂರು ಕೋಟಿ ಕುಳವೊಂದಕ್ಕೆ ಈಗಾಗಲೇ ತಲುಪಿದೆ.

ಅದರ ಫಲವಾಗಿಯೇ ಮೂರು ದಿನಗಳ ಕೆಳಗೆ ಪ್ಯಾಲೇಸ್ ರಸ್ತೆಯ ಸುಧಾಕರ್ ಗೆಸ್ಟ್‍ಹೌಸ್‍ನಲ್ಲಿ ಮಾಜಿ ಕಾಂಗ್ರೆಸ್ ಶಾಸಕರು ಸಭೆ ಸೇರಿದ್ದರು ಎಂಬ ಗುಮಾನಿಯಿದೆ. ಹಾಗೇನೂ ಇಲ್ಲ, ಸದರಿ ಕೋಟಿ ಕುಳ ಬೇರೆ ಯಾರಿಗೂ ಈ ವಿಚಾರವನ್ನು ಹೇಳಿಲ್ಲ, ಎಲ್ಲರೂ ಹೆದರಿಕೊಂಡರೆ ಕೆಲಸ ಕೆಡುತ್ತೆ ಎಂಬ ಕಾರಣಕ್ಕೆ ‘ಸುಮ್ಮನೇ ಸೇರೋಣ’ ಎಂದಷ್ಟೇ ಹೇಳಿ ಎಲ್ಲರನ್ನೂ ಸೇರಿಸಿದ್ದಾರೆಂದು, ಗರ್ಭಗುಡಿಯ ಮೀಡಿಯೇಟರ್ ಮೂಲಗಳು ಹೇಳುತ್ತಿವೆ.

ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈ ಎಲ್ಲಾ ಅನುಮಾನಗಳು ಪ್ರಬಲವಾಗುತ್ತಿವೆ. ಸಾಮಾನ್ಯವಾಗಿ ಸುಪ್ರೀಂಕೋರ್ಟಿನಲ್ಲಿ ಏನೇ ನಡೆದರೂ ಅದನ್ನು ನ್ಯಾಯಾಂಗದ ವಿದ್ಯಮಾನ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಮೋದಿ ಸರ್ಕಾರ ನೆಲೆಯೂರಿದ ಮೇಲೆ ಸುಪ್ರೀಂಕೋರ್ಟಿನ ತೀರ್ಮಾನಗಳಿಗೂ ರಾಜಕೀಯ ಒಲವಿನ ಆರೋಪ ಹತ್ತಿಕೊಳ್ಳುತ್ತಿದೆ. ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಪದೇಪದೇ ಮುಂದೂಡುತ್ತಿರುವುದು ಕೇಂದ್ರದ ಸೂಚನೆಯ ಮೇರೆಗೇ ಎಂಬುದು ಕೆಲವರ ಗುಮಾನಿ.

ಹೀಗಾಗಿಯೇ ಯಡಿಯೂರಪ್ಪನವರಿಗೆ ಇಷ್ಟವಿದ್ದರೂ, ಬಿಜೆಪಿಯ ಹೈಕಮಾಂಡೇ ಅನರ್ಹ ಶಾಸಕರಿಗೆ ಫಿಟ್ಟಿಂಗ್ ಇಟ್ಟಿದೆ ಎಂಬ ಆತಂಕ ಆ ಶಾಸಕರಲ್ಲಿ ಮನೆ ಮಾಡುತ್ತಿದೆ. ಯಾವುದಕ್ಕೂ ಮುಂದಿನ ಎರಡು ತಿಂಗಳಲ್ಲಿ ಎಲ್ಲವೂ ಸ್ಪಷ್ಟವಾಗಿಬಿಡುತ್ತದೆ.

ಅನರ್ಹರು ಪ್ರಬಲರಾಗುವುದು ಯಾವಾಗ?

ಅನರ್ಹ ಶಾಸಕರು ಅರ್ಹರಾದರೆ ಏನಾಗಬಹುದು? ಇದರಲ್ಲಿ ಎರಡು ಸಾಧ್ಯತೆಗಳಿವೆ. ಈ ಶಾಸಕರುಗಳು ಸ್ಪೀಕರ್‍ಗೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಅರ್ಜಿ ಮತ್ತು ಅವರ ವಿರುದ್ಧದ ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ನೀಡಲಾಗಿದ್ದ ದೂರು ಎರಡೂ ಸ್ಪೀಕರ್ ಟೇಬಲ್ ಮೇಲಿದ್ದವು. ಎರಡನೆಯದ್ದನ್ನು ಕೈಗೆತ್ತಿಕೊಂಡ ಸ್ಪೀಕರ್ ಅವರೆಲ್ಲರನ್ನೂ ಅನರ್ಹರೆಂದು ಘೋಷಿಸಿದರು. ಅದಕ್ಕಾಗಿ ಉಪರಾಷ್ಟ್ರಪತಿ (ರಾಜ್ಯಸಭೆಯ ಸ್ಪೀಕರ್) ವೆಂಕಯ್ಯನಾಯ್ಡು ಅವರು ನೀಡಿದ್ದ ತೀರ್ಪು, ವಿವಿಧ ಸುಪ್ರೀಂಕೋರ್ಟು ತೀರ್ಪುಗಳನ್ನೆಲ್ಲಾ ಉಲ್ಲೇಖಿಸಿದ್ದರು. ಅನರ್ಹರಾಗಿದ್ದರಿಂದ ರಾಜೀನಾಮೆ ಅರ್ಜಿಯನ್ನು ವಿಲೇವಾರಿ ಮಾಡುವ ಪ್ರಶ್ನೆ ಉದ್ಭವಿಸಲಿಲ್ಲ.

ಇದರ ನಂತರ ಅವರೆಲ್ಲರನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಉಚ್ಚಾಟಿಸಿವೆ. ಉಚ್ಚಾಟನೆಯನ್ನು ಪಕ್ಷವೇ ಮಾಡಿದರೆ, ಅವರಿಗೆ ಯಾವ ಪಕ್ಷಾಂತರ ನಿಷೇಧ ಕಾಯ್ದೆಯೂ ಅನ್ವಯಿಸುವುದಿಲ್ಲ. ಈಗ ಸುಪ್ರೀಂಕೋರ್ಟ್ ಸ್ಪೀಕರ್ ಆದೇಶವನ್ನು ರದ್ದುಗೊಳಿಸಿ ಅನರ್ಹರನ್ನು ಅರ್ಹರೆಂದು ಘೋಷಿಸಿದರೆ, ಇವರೆಲ್ಲರೂ ಮತ್ತೆ ಹಾಲಿ ಶಾಸಕರಾಗುತ್ತಾರೆ. ಒಂದು ರೀತಿಯಲ್ಲಿ ಪಕ್ಷೇತರ ಸ್ಥಾನಮಾನ ಅವರದ್ದಾಗುತ್ತದೆ.

ಆಗ ಅನರ್ಹ ಶಾಸಕರ ಬಲ ಹೆಚ್ಚಾಗುತ್ತದೆ. ಅವರೆಲ್ಲರೂ ಒಗ್ಗಟ್ಟಾಗಿದ್ದರೆ, ಸರ್ಕಾರದ ಅಳಿವುಉಳಿವನ್ನು ತೀರ್ಮಾನಿಸುವುದು ಅವರ ಕೈಯ್ಯಲ್ಲಿರುತ್ತದೆ. ಚುನಾವಣೆಯನ್ನೆದುರಿಸುವ ದರ್ದೂ ಇರುವುದಿಲ್ಲ. ಟೋಟಲಿ ಸೇಫ್.ಇಂತಹ ಸಂದರ್ಭದಲ್ಲಿ ಬಿಜೆಪಿಯ ಹೈಕಮಾಂಡ್ ಏನು ಮಾಡಬಹುದು? ವಿಧಾನಸಭೆ ವಿಸರ್ಜನೆ ಮಾಡಲು ಯಡಿಯೂರಪ್ಪನವರಿಗೆ ಸೂಚಿಸುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ, ಅನರ್ಹ ಶಾಸಕರು ಆಡಿಸಿದ ಹಾಗೆ ಆಡುತ್ತಾ ಕೂರುವ ಸರ್ಕಾರವನ್ನು ಬಿಜೆಪಿ ಏಕೆ ನಡೆಸುತ್ತದೆ?

ಅನಿರೀಕ್ಷಿತವಾದ ಬೆಳವಣಿಗೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲದೊಂದಿಗೆ ಬಿಜೆಪಿ ಸರ್ಕಾರವನ್ನು ಮುಂದುವರೆಸುವ ಸಾಧ್ಯತೆಯೂ ಇದೆ. ಒಕ್ಕಲಿಗರ ಪಕ್ಷವನ್ನು ಹಂತಹಂತವಾಗಿ (ಜೆಡಿಯುಗೆ ಮಾಡಿದಂತೆ) ಆಪೋಶನ ತೆಗೆದುಕೊಳ್ಳಲು ಸಾಧ್ಯವಾಗುವುದಿದ್ದರೆ ಬಿಜೆಪಿ ಅದನ್ನೇ ಮಾಡುತ್ತದೆ. ಹೆಚ್ಚು ಬಾಲ ಬಿಚ್ಚದಂತೆ ಇ.ಡಿ., ಐಟಿ ಮತ್ತು ಕುಮಾರಸ್ವಾಮಿಯವರ ಮೇಲಿರುವ ಸಿಬಿಐ ಕೇಸುಗಳನ್ನು ಬಳಸುತ್ತಾ, ದಕ್ಷಿಣ ಕರ್ನಾಟಕದಲ್ಲಿ ಸಾಮ್ರಾಜ್ಯ ವಿಸ್ತರಣೆ ಮಾಡಿಕೊಳ್ಳಲು ಮುಂದಾಗಬಹುದು.

ಹೇಗೇ ನೋಡಿದರೂ ಅನರ್ಹ ಶಾಸಕರ ತ್ರಿಶಂಕುಸ್ಥಿತಿಯಂತೂ ಖಾಯಂ. ಕರ್ನಾಟಕದಲ್ಲಿ ಅತ್ಯಂತ ತಳಮಟ್ಟದಿಂದ ಪಕ್ಷ ಕಟ್ಟಿ, ಜಾತಿ ಬಲವನ್ನು ಕೊಟ್ಟು ಸರ್ಕಾರ ರಚನೆಗೆ ಕಾರಣವಾದ ಯಡಿಯೂರಪ್ಪನವರನ್ನೇ ಮೂಲೆಗುಂಪು ಮಾಡುತ್ತಿರುವ ತ್ರೈಕಮ್ಯಾಂಡ್, ಹಣ ಅಧಿಕಾರದ ಆಸೆಗೆ ಬೇರೆ ಪಕ್ಷದಿಂದ ವಲಸೆ ಬಂದ ಶಾಸಕರ ಹಿತದ ಕುರಿತು ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ.

ದೇವೇಗೌಡರು ನಿನ್ನೆ ಹೇಳಿರುವ ಹಾಗೆ ಫೆಬ್ರವರಿಯಲ್ಲಿ ಮಧ್ಯಂತರ ಚುನಾವಣೆ ಬರುತ್ತದೋ, ದೇವೇಗೌಡರ ಪಕ್ಷವೇ ಬಿಜೆಪಿಗೆ ಸಹಾಯ ಮಾಡುತ್ತದೆಯೋ ಎಂಬುದು ಗೊತ್ತಾಗಲು ಬಹಳ ಕಾಲ ಕಾಯುವ ಅವಶ್ಯಕತೆಯಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಇದು ನಿಸರ್ಗದ ನಿಯಮ. ಈ ನಿಯಮವನ್ನು ಕೋಟಿಗಟ್ಟಳೆ ಹಣ ಬದಲಾಯಿಸಲು ಸಾಧ್ಯವಿಲ್ಲ.

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...