| ಮಹಾಲಿಂಗಪ್ಪ ಆಲಬಾಳ |

ಎಲೆಕ್ಷನ್ ರೌಂಡ್ ಅಪ್: ಬಾಗಲಕೋಟೆ
ಒಂದು ಕಡೆ ಚುನಾವಣೆಗೆ ನಿಲ್ಲಲು ಆಸಕ್ತಿಯೇ ಇರದ ಸಂಸದ ಪಿ.ಸಿ. ಗದ್ದಿಗೌಡರನ್ನು ಬಿಜೆಪಿ ಒತ್ತಾಯದಿಂದ ಕಣಕ್ಕಿಳಿಸಿದೆ. ಇನ್ನೊಂದು ಕಡೆ ಪಾರಂಪರಿಕ ಲೋಕಲ್ ಕಾಂಗ್ರೆಸ್ ನಾಯಕರ ಅಸಡ್ಡೆಯನ್ನು ಮೆಟ್ಟಿ ಹಾಕಿದ ಯುವತಿಯೊಬ್ಬಳು ಗೆಲ್ಲಲೇಬೇಕೆಂದು ಹಟಕ್ಕೆ ಬಿದ್ದು ಫೀಲ್ಡಿಗೆ ಇಳಿದಿದ್ದಾಳೆ. ಗೆಲುವು ಈ ಯುವತಿಯ ಪರವೇ ನಿಂತಂತಿದೆ.

ಬಾಗಲಕೋಟೆ ಕ್ಷೇತ್ರ ಈ ಸಲ ಗಮನ ಸೆಳೆದಿರುವುದು ಮೂರು ಕಾರಣಗಳಿಂದಾಗಿ. ಒಂದು, ಪುಟು ಪುಟು ಓಡಾಡುತ್ತ ಕ್ಷೇತ್ರದ ತುಂಬೆಲ್ಲ ಪ್ರಚಾರ ಮಾಡುತ್ತ ಜನರನ್ನು ಸೆಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶೆಪ್ಪನವರ್. ಎರಡನೇಯದು, ಬಾದಾಮಿ ಶಾಸಕ ಮಾಜಿ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಗಂಭಿರವಾಗಿ ಪರಿಗಣಿಸಿರುವುದು. ಮೂರನೆಯ ಮತ್ತು ಅತಿ ಮುಖ್ಯ ಕಾರಣ: ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಪರವಿದ್ದ ಪಂಚಮಸಾಲಿ ಸಮಯದಾಯ ಈ ಸಲ ತಮ್ಮದೇ ಸಮುದಾಯದ ವೀಣಾ ಪರ ನಿಂತಿರುವುದು.

ಬಾಗಲಕೋಟೆಯಲ್ಲಿ 2009 ಮತ್ತು 2014ರಲ್ಲಿ ಬಿಜೆಪಿಯಿಂದ ಸಂಸದರಾಗಿರುವ ಗಾಣಿಗ ಸಮುದಾಯದ ಗದ್ದಿಗೌಡರು ಸಂಭಾವಿತರು ಎಂಬ ಬಗ್ಗೆ ಎರಡು ಮಾತಿಲ್ಲ. ಅವರೆಂದೂ ಬಾಗಲಕೋಟೆ ಬಿಜೆಪಿ ಶಾಸಕ ಚರಂತಿಮಠ, ತೇರದಾಳದ ಬಿಜೆಪಿ ಶಾಸಕ ಲಕ್ಷ್ಮಣ ಸವದಿ ತರಹ ಕೋಮು ಉನ್ಮಾದದ ರಾಜಕಾರಣ ಮಾಡಿದವರಲ್ಲ. ಜಮಖಂಡಿ ಶಾಸಕ ಮುರುಗೇಶ ನಿರಾಣಿ, ಹುನಗುಂದದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲರಂತೆ ಬ್ಯುಸಿನೆಸ್ ಇಂಟರೆಸ್ಟ್ ಹೊಂದಿದವರಲ್ಲ. ಆದರೆ, ಅವರು ಮಹಾ ಸೋಮಾರಿ. ಚುನಾವಣೆಯಲ್ಲಿ ಮುಖ ತೋರಿಸುವ ಗದ್ದಿಗೌಡರು ನಂತರ ಎಲ್ಲೂ ಕಾಣಿಸಿಕೊಳ್ಳುವುದೇ ಇಲ್ಲ. ಪಕ್ಷದ ಸಾರ್ವಜನಿಕ ಸಭೆಗಳಲ್ಲೂ ಅವರಿಗೆ ಆಸಕ್ತಿ ಇಲ್ಲವೇ ಇಲ್ಲ. ಇದಕ್ಕಿಂತ ಮಿಗಿಲಾಗಿ 10 ವರ್ಷಗಳಲ್ಲಿ ಬಾಗಲಕೋಟೆಗೆ ಅವರು ಕೊಟ್ಟಿದ್ದು ಶೂನ್ಯ.

ಗದ್ದಿಗೌಡರ್ ನಿರುಪ್ರದವಿ ಇರಬಹುದು, ಆದರೆ ಸೋಮಾರಿ ಎಂಬುದು ಈ ಸಲ ಹೈಟಾಗಲು ಕಾರಣ ಎದುರಿಗೆ ನಿಂತಿರುವ ಯುವತಿ ಹುಮ್ಮಸ್ಸಿನಿಂದ ಪುಟಿದೇಳುವ, ರಾಜಕೀಯವನ್ನು ಜನಸೇವೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪ್ರಾಕ್ಟಿಕಲ್ ಆಗಿ ಮಾಡಿ ತೋರಿಸಿರುವ ಯುವತಿ.

ಬಾಗಲಕೋಟೆ ಕ್ಷೇತ್ರದಲ್ಲಿ ಗದಗ ಜಿಲ್ಲೆಯಾ ನರಗುಂದವೂ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು ಐದರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದುಬಿಜೆಪಿಗೆ ವರವಾಗಬಹುದೇ ಎಂಬ ಪ್ರಶನೆ ಸಹಜ. 2014ರಲ್ಲಿ ಕಾಂಗ್ರಸ್‍ನಿಂದ ಇಲ್ಲಿ 7 ಶಾಸಕರಿದ್ದರೂ ಗದ್ದಿಗೌಡರ್ ಇಲ್ಲಿ 5,220 ಮತಗಳಿಂದ ಗೆದ್ದಿದ್ದರು. ಆಗ ಮೋದಿಯ ಸೃಷ್ಟಿತ ಹವಾ ಇತ್ತು. ಅದಕ್ಕೂ ಮುಖ್ಯವಾಗಿ ಇಲ್ಲಿ ಸದಾ ಜಾತಿ ರಾಜಕಾರಣವೇ ರ್ಮಯಲುಗೈ ಪಡೆದಿದ್ದು ಬಿಜೆಪಿಗೆ ವರದಾನವಾಗಿತ್ತು.

ಇಲ್ಲಿ ಲಿಂಗಾಯತ/ವೀರಶೈವ ಜಾತಿಗೆ ಸೇರಿದ ಗಾಣಿಗರು, ಪಂಚಮಸಾಲಿಗಳು ಮತ್ತು ರೆಡಿಗಳು ತಲಾ ಒಂದೂವರೆ ಲಕ್ಷದಷ್ಟು ಮತಗಳನ್ನು ಹೊಂದಿದ್ದಾರೆ. ಕಾಂಗ್ರೆಸ್ ರಡ್ಡಿಗಳ ಟಿಕೆಟ್ ಕೊಟ್ಟ ಪರಿಣಾಮ, ಗಾಣಿಗರು ಮತ್ತು ಪಂಚಮಸಾಲಿಗಳು ಒಟ್ಟಾಗಿ ಬಿಜೆಪಿ ನೆರವಿಗೆ ಬರುತ್ತಿದ್ದರು. ಈ ಸಲ ಪಂಚಮಸಾಲಿಗೆ ಸೇರಿದ ಮಹಿಳಾ ಅಭ್ಯರ್ಥಿ ಕಣದಲ್ಲಿ ರಂಗು ಎಬ್ಬಿಸುವ ಮೂಲಕ ಹೊಸ ಜಾತಿ ಸಂಇಕರಣದ ಗೆಲುವಿನತ್ತ ಮುನ್ನುಗುತ್ತಿದ್ದಾರೆ.

ಸುಮಾರು ಎರಡೂವರೆ ಲಕ್ಷದಷ್ಟಿರು ದಲಿತ ಮತಗಳು ಹೆಚ್ಚೂ ಕಡಿಮೆ ಕಾಂಗ್ರೆಸ್ ಪರವೇ ಇವೆ. ಒಂದು ಲಕ್ಷದಷ್ಟಿರುವ ಎಸ್‍ಟಿ ಮತಗಳಲ್ಲಿ ಎರಡೂ ಪಾರ್ಟಿಗಳು ಸಮಾನವಾಗಿ ಮತ ಪಡೆಯಬಹುದೇನೋ? ಎರಡೂವರೆ ಲಕ್ಷದಷ್ಟಿರುವ ಮುಸ್ಲಿಮರು ಕಾಂಗ್ರೆಸ್ ಪರವೇ. ಎರಡೂವರೆ ಲಕ್ಷದಷ್ಟಿರುವ ಕುರುಬರು ಮತ್ತು ಒಂದೂವರೆ ಲಕ್ಷದಷ್ಟಿರುವ ನೇಕಾರರು ಈ ಸಲ ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಪರ ನಿಲ್ಲುವ ದಟ್ಟ ಸಾಧ್ಯತೆ ಇವೆ. ಸಿದ್ದರಾಮಯ್ಯ ಒಂದು ದಿನ ಮತ್ತು ಸತೀಶ ಜಾರಕಿಹೊಳಿ ಎರಡು ದಿನ ಇಲ್ಲಿ ಪ್ರಚಾರ ಮಾಡಲಿದ್ದು ಅದು ಕಾಂಗ್ರೆಸ್ ಗೆಲುವಿಗೆ ದೊಡ್ಡ ‘ಬೂಸ್ಟ್’

ಜಾತಿ ಮೀರಿದ ಜಾಣೆ
ಜಿಪಂ ಸದಸ್ಯೆ ಆಗಿರುವ ವೀಣಾ ಕಾಶಪ್ಪನವರ್ ಹುನಗುಂದದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಪತ್ನಿ. ವಿಜಯಾನಂದನ ಹುಂಬ ಕ್ಯಾರೆಕ್ಟರ್‍ಗೆ ಈಕೆ ತದ್ವಿರುದ್ಧ. ಎಲ್ಲ ಜನರೊಡನೆ ಆತ್ಮೀಯತೆಯಿಂದ ಬೆರೆಯುವ, ಯುಜನತೆಯ ಮಧ್ಯದಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ವೀಣಾ ಮಾಡಿದ್ದಾರೆ. ಈಲ್ಲಾ ಪಂಚಾಯತಿ ಅಧ್ಯಕ್ಷೆಯಾಗಿ ಅವರು ಮಾಡಿರುವ ಕೆಲಸಗಳು ಗಮನ ಸೆಳೆದಿವೆ. ನೀರಾವರಿ, ಕುಡಿಯುವ ನೀರಿಗೆ ಆದ್ಯತೆ ನೀಡಿದ್ದಾರೆ. ಸರ್ಕಾರಿ ಶಾಲೆಗಳು ಮತ್ತು ಹಾಸ್ಟೇಲ್‍ಗಳ ನಿರ್ವಹಣೆಯಲ್ಲಿ ಗುಣಮಟ್ಟ ತಂದ ಹಿರಿಮೆಯೂ ಅವರಿಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಅಭಿವೃದ್ಧಿ ಕೆಲಸಗಳಲ್ಲಿ ವಿಶೇಷ ಆಸಕ್ತಿ ತೋರಿದ್ದರಿಂದ ಅವರಿಗೆ ಮಹಿಳಾ ಮತದಾರರೂ ಒಲಿದಿದ್ದಾರೆ.
ಹೀಗಾಗಿ, ಈ ಸಲ ಗದ್ದಿಗೌಡರ ಗದ್ದುಗೆಯನ್ನು ಈ ಯುವತಿ ಕಿತ್ತುಕೊಳ್ಳುವ ಚಾನ್ಸ್ ಜಾಸ್ತಿನೇ ಇವೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts