Homeಕರ್ನಾಟಕಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲ್ಲ: ಕೇಂದ್ರ ಸರ್ಕಾರ

ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲ್ಲ: ಕೇಂದ್ರ ಸರ್ಕಾರ

- Advertisement -
- Advertisement -

ಎತ್ತಿನಹೊಳೆ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವುದಾಗಿ ‘ಡೆಕ್ಕನ್‌ ಹೆರಾಲ್ಡ್‌’ ವರದಿ ಮಾಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ಬಳಿಯ ಎತ್ತಿನಹೊಳೆ ಮೂಲಕ ನೀರನ್ನು ಮೇಲೆತ್ತುವ ಯೋಜನೆ ಇದಾಗಿದೆ.

ಎತ್ತಿನಹೊಳೆ ಯೋಜನೆಗೆ ಕೇವಲ 13.93 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಲಾಗುತ್ತಿದೆ. ಇದರಿಂದ ಪರಿಸರದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

“ಇದು ಕುಡಿಯುವ ನೀರು ಸರಬರಾಜು ಯೋಜನೆಯಾಗಿದೆ. ಹೀಗಾಗಿ ಇದು ಪರಿಸರ ಪ್ರಭಾವ ಮೌಲ್ಯಮಾಪನ (EIA) ಅಧಿಸೂಚನೆ 2006 ಮತ್ತು ಅದರ 2009ರ ತಿದ್ದುಪಡಿಯ ನಿಬಂಧನೆಯನ್ನು ಕಡೆಗಣಿಸುವುದಿಲ್ಲ” ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಹಾಗಾಗಿ ಪರಿಸರ ಸಂಬಂಧಿತ ಅನುಮತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ರಾಜ್ಯಸಭೆಯಲ್ಲಿ ಇತ್ತೀಚಿನ ಅಧಿವೇಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ಜೆಡಿಯುನ ಅನೀಲ್ ಪ್ರಸಾದ್ ಹೆಗ್ಡೆ ಅವರ ಪ್ರಶ್ನೆಗೆ ಉತ್ತರಿಸುತ್ತಾ ಸಚಿವರು ಈ ಮಾತುಗಳನ್ನಾಡಿದ್ದಾರೆ.

ಮೊದಲ ಹಂತಕ್ಕೆ ಅಗತ್ಯವಿರುವ 13.93 ಹೆಕ್ಟೇರ್ ಅರಣ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಂತ-1ಕ್ಕೆ ಅನುಮತಿಯನ್ನು ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಕೆಲವು ಷರತ್ತುಗಳೊಂದಿಗೆ ಜನವರಿ 29, 2016ರಂದು ಪಡೆಯಲಾಗಿದೆ. ಹಂತ-2ಕ್ಕೆ ಕೆಲವು ಷರತ್ತುಗಳೊಂದಿಗೆ ಸೆಪ್ಟೆಂಬರ್ 15, 2016ರಂದು ಕ್ಲಿಯರೆನ್ಸ್ ಪಡೆಯಲಾಗಿದೆ. ಎತ್ತಿನಹೊಳೆ ನೀರಾವರಿ ಯೋಜನೆಯು ರಾಜ್ಯ ಸರ್ಕಾರ ಹಣದಿಂದ ನಡೆಯುತ್ತಿದೆ.

ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಹಾಸನ, ತುಮಕೂರು, ರಾಮನಗರ ಮತ್ತು ಬೆಂಗಳೂರು ಸೇರಿದಂತೆ ಏಳು ಬರಪೀಡಿತ ಜಿಲ್ಲೆಗಳ 29 ತಾಲ್ಲೂಕುಗಳ 6,557 ಗ್ರಾಮಗಳಿಗೆ ಮತ್ತು 38 ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದೆಂದು ಸರ್ಕಾರ ಹೇಳುತ್ತದೆ. ಅದಕ್ಕಾಗಿ ಪಶ್ಚಿಮ ಘಟ್ಟಗಳಲ್ಲಿ ಹರಿಯುವ ತೊರೆಗಳಿಂದ 24.01 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಈ ಭಾಗಕ್ಕೆ ತರುವುದಾಗಿ ತಿಳಿಸಿದೆ.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಆಂಜನೇಯ ರೆಡ್ಡಿ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿದರು. “ಡೆಕ್ಕನ್‌ ಹೆರಾಲ್ಡ್‌ನಲ್ಲಿ ಮಾಡಲಾಗಿರುವ ವರದಿಯು ಅನಗತ್ಯವಾಗಿತ್ತು ಅನಿಸುತ್ತದೆ. ಎತ್ತಿನಹೊಳೆ ವಿಚಾರ ಸದ್ಯ ಚರ್ಚೆಯಲ್ಲಿಲ್ಲ. ಕರ್ನಾಟಕ ಸಲ್ಲಿಸಿರುವ ವರದಿಯನ್ನು ಆಧಾರಿಸಿ ಯಾವುದೇ ಅರಣ್ಯನಾಶವಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಈ ಕುರಿತು ಯಾವುದೇ ಅಧ್ಯಯನ ನಡೆದಿಲ್ಲ. ಕುಡಿಯುವ ನೀರಿನ ಯೋಜನೆ ಎಂದು ಹೇಳಿ ವಿನಾಯಿತಿ ಪಡೆದಿದ್ದಾರೆ. ರಾಜ್ಯ ಸರ್ಕಾರದ ಸಂಪೂರ್ಣ ಹಣ ವಿನಿಯೋಗಿಸುತ್ತಿರುವುದರಿಂದ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವುದಿಲ್ಲ” ಎಂದು ವಿವರಿಸಿದರು.

“ಈವರೆಗೆ ಒಂದೇ ಒಂದು ಊರಿಗೆ ಎತ್ತಿನಹೊಳೆ ಮೂಲಕ ನೀರು ಹರಿದುಬಂದಿಲ್ಲ. ಆದರೆ 13,000 ಕೋಟಿ ರೂ. ಖರ್ಚಾಗಿದೆ. 24,000 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ವಿನಿಯೋಗಿಸುತ್ತಿದ್ದಾರೆ. ಈ ಯೋಜನೆ ಆರಂಭವಾದಾಗಿನಿಂದಲೂ ವೈಜ್ಞಾನಿಕ ಸಂಸ್ಥೆಗಳು ವಿರೋಧಿಸುತ್ತಾ ಬಂದಿವೆ. ಗುತ್ತಿಗೆದಾರರ ಜೇಬು ತುಂಬಿಸುವ ಯೋಜನೆ ಇದಾಗಿದೆ. ಅನಗತ್ಯ ಕೆಲಸಗಳನ್ನು ಕೈಗೊಂಡು ಹಣವನ್ನು ಲೂಟಿ ಮಾಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರದ ನೀರಿನಲ್ಲಿ ಪ್ಲೋರೈಡ್, ನೈಟ್ರೇಡ್ ಇದೆ, ಹೀಗಾಗಿ ತಕ್ಷಣ ಎತ್ತಿನಹೊಳೆಯ ನೀರು ಹರಿಸಬೇಕೆಂದು ಹೇಳುತ್ತಿದ್ದರು. ಹತ್ತು ವರ್ಷವಾದರೂ ನೀರು ಬಂದಿಲ್ಲ. ಹೀಗಿರುವ 24,000 ಕೋಟಿ ರೂ.ಗಳನ್ನು ಹೆಚ್ಚಿಸಿಕೊಂಡು ಮುಂದಿನ ಚುನಾವಣೆಗಾಗಿ ಹಣ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.

“ಕಳೆದ ಕೆಲವು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಕೃಷಿ ಭೂಮಿ ಹಾಗೂ ಕುಡಿಯುವ ನೀರಿನ ಮುಂದಾಲೋಚನೆಯಲ್ಲಿ ಕೆರೆ ಕುಂಟೆಗಳನ್ನು ಪಾರಂಪರಿಕವಾಗಿ ನಿರ್ಮಾಣ ಮಾಡಲಾಗಿದೆ. ನಂದಿ ಬೆಟ್ಟವನ್ನು ಕೇಂದ್ರವಾಗಿಟ್ಟುಕೊಂಡು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿದು ಹೋಗುವಂತೆ ವೈಜ್ಞಾನಿಕ ಕ್ರಮ ಅನುಸರಿಸಿರುವುದನ್ನು ಕಾಣಬಹುದು. ಉತ್ತರ ಪಿನಾಕಿನಿ, ದಕ್ಷಿಣಿ ಪಿನಾಕಿನಿ, ಅರ್ಕಾವತಿ, ಚಿತ್ರಾವತಿ, ಪಾಲಾರ್‌ ನದಿ ಪಾತ್ರದಲ್ಲಿ ಕೆರೆಗಳನ್ನು ನಿರ್ಮಿಸಲಾಗಿತ್ತು. ಇಂತಹ ಅದ್ಭುತವಾದ ಕೆರೆಗಳ ಜಾಲ ಇಂದು ಕಣ್ಮರೆಯಾಗುತ್ತಿದೆ. ಇವುಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಾಸರಿಗಿಂತ ದುಪ್ಪಟ್ಟು ಮಳೆಯಾಗಿದೆ. ದುರಾದೃಷ್ಟವಶಾತ್‌ ನೀರನ್ನು ತಮಿಳುನಾಡು, ಆಂಧ್ರಪ್ರದೇಶಕ್ಕೆ ಹರಿಬಿಟ್ಟಿದ್ದೇವೆಯೇ ಹೊರತು, ಕರೆಗಳಲ್ಲಿ ಹಿಡಿದಿಟ್ಟಲು ಯೋಚಿಸಲಿಲ್ಲ. ರಾಜಕಾಲುವೆ, ಕೆರೆಗಳು ಒತ್ತುಯಾಗಿವೆ. ಕೆಲವು ಕಡೆ ಮಾಯವಾಗಿವೆ, ಕೆಲವು ಕಡೆ ಹೂಳು ತುಂಬಿಕೊಂಡಿವೆ. ಈ ಜಲಮೂಲಗಳನ್ನು ಪುನರುಜ್ಜೀವನ ಮಾಡಿಕೊಂಡರೆ ನೀರಿನ ಅಭಾವವಾಗದು” ಎಂದು ಅಭಿಪ್ರಾಯಪಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...