ಅಂಗಡಿಯೊಂದು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಹಂಚಿಕೊಂಡಿರುವ ಅನೇಕರು “ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬದ ಅಂಗಡಿಯನ್ನು ಸುಟ್ಟು ಹಾಕಲಾಗಿದೆ” ಎಂದು ಬರೆದುಕೊಂಡಿದ್ದಾರೆ.
ಕೋಮುದ್ವೇಷ ಪೂರಿತ ಮತ್ತು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ‘ಸುದರ್ಶನ್ ನ್ಯೂಸ್‘ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು “ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ. ಲಕ್ಷ್ಮೀಪುರದಲ್ಲಿ ಹಿಂದೂ ವ್ಯಕ್ತಿ ರಾಜನ್ ಚಂದ್ರ ಅವರ ಅಂಗಡಿ ಸುಟ್ಟು ಬೂದಿಯಾಗಿದೆ. ರಾಜನ್ ಚಂದ್ರ ಮತ್ತು ಅವರ ಕುಟುಂಬದವರು ನೋವು ತೋಡಿಕೊಂಡಿದ್ದಾರೆ. ಅವರ ಏಕೈಕ ಜೀವನೋಪಾಯದ ಮೂಲವಾದ ಅಂಗಡಿ ಸುಟ್ಟು ಹೋಗಿದೆ” ಎಂದು ಬರೆದುಕೊಂಡಿದೆ.
बांग्लादेश में हिंदुओं पर हमले…
लक्ष्मीपुर में हिंदू दुकानदार राजन चंद्रा की दुकान को जलाकर राख कर दिया गया है…
राजन चंद्रा और उनका परिवार तड़प रहा है, बिलख रहा है और उनकी रोटी का एकमात्र साधन उनकी दुकान धू-धूकर जल रही है…#bangladeshnews #dhaka #BangladeshCrisis… pic.twitter.com/qNwN1nTC0O
— Sudarshan News (@SudarshanNewsTV) August 7, 2024
ಇನ್ನೂ ಅನೇಕರು ಇದೇ ರೀತಿಯ ಬರಹಗಳೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗಾದರೆ, ಈ ವಿಡಿಯೋ ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಅಂಗಡಿ ಸುಟ್ಟು ಹಾಕಿದ್ದಕ್ಕೆ ಸಂಬಂಧಿಸಿದ್ದಾ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲು ನಾವು ವಿಡಿಯೋ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ bd-bulletin.com ಎಂಬ ಸುದ್ದಿವೆಬ್‌ಸೈಟ್‌ನಲ್ಲಿ ವಿಡಿಯೋ ಸಂಬಂಧಿತ ವರದಿ ಪ್ರಕಟಿಸಿರುವುದು ಕಂಡು ಬಂದಿದೆ.
ವರದಿಯಲ್ಲಿ ಹೇಳಿದಂತೆ, ಬಾಂಗ್ಲಾದೇಶದ ಲಕ್ಷ್ಮೀಪುರದ ಮಜುಚೌಧುರಿಹತ್‌ನ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸುಮಾರು 15 ಅಂಗಡಿಗಳು ಸುಟ್ಟು ಹೋದ ವಿಡಿಯೋ ಇದಾಗಿದೆ.
ಜನರು ಫಜ್ರ್ ನಮಾಝ್ (ಬೆಳಗ್ಗಿನ ಪ್ರಾರ್ಥನೆ) ಮುಗಿಸಿ ಹೊರ ಬರುತ್ತಿದ್ದಾಗ ಮಜುಚೌಧುರಿಹತ್ ಮಾರುಕಟ್ಟೆಯ ದಕ್ಷಿಣ ಭಾಗದಲ್ಲಿ ಬೆಂಕಿ ಅನಾಹುತ ಸಂಭವಿಸಿ ಅಂಗಡಿಗಳು ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ತಕ್ಷಣ ಅವರು ಅಗ್ನಿಶಾಮದಳಕ್ಕೆ ಕರೆ ಮಾಡಿದ್ದಾರೆ. ಆದರೆ, ಅದು ಒಂದು ಗಂಟೆ ತಡವಾಗಿ ಆಗಮಿಸಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿದೆ. ಅಗ್ನಿ ಅನಾಹುತಕ್ಕೆ ಕಾರಣ ಏನೆಂದು ತನಿಖೆ ನಡೆಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
songbadprokash.com ಎಂಬ ಮತ್ತೊಂದು ಬಾಂಗ್ಲಾದೇಶದ ಸುದ್ದಿ ವೆಬ್‌ಸೈಟ್‌ನಲ್ಲೂ ಜುಲೈ 11, 2024ರಂದು ಈ ಘಟನೆಯ ಕುರಿತು ವರದಿ ಪ್ರಕಟಗೊಂಡಿದೆ. ಈ ವರದಿಯಲ್ಲೂ “ಲಕ್ಷ್ಮೀಪುರದ ಮಜುಚೌಧುರಿಹತ್‌ನ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಅಂಗಡಿಗಳು ಸುಟ್ಟು ಹೋಗಿವೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ.
ನಮಗೆ ಲಭ್ಯವಾದ ಎರಡೂ ಮಾಧ್ಯಮ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಅಂಗಡಿಗಳು ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿರುವುದಕ್ಕೆ ಸಂಬಂಧಿಸಿದ್ದು ಎಂದು ಹೇಳಿದೆ. ಹಾಗಾಗಿ, ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಎಂಬ ಸುದ್ದಿ ಸುಳ್ಳು.
ಇದನ್ನೂ ಓದಿ : FACT CHECK : ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿರುವುದು ನಿಜಾನಾ?