Homeಮುಖಪುಟಕೊರೋನಾ: ಭವಿಷ್ಯದ ಸುಳ್ಳು ಸುದ್ದಿಗಳು

ಕೊರೋನಾ: ಭವಿಷ್ಯದ ಸುಳ್ಳು ಸುದ್ದಿಗಳು

ಸಾಬರಿಂದ ಹಬ್ಬಿತು ವೈರಸ್ ಎಂದು ಇನ್ನೊಂದು ಸುಳ್ಳುಸುದ್ದಿ ಹರಡಿಸುತ್ತಾರೆ. ಆದರೆ ಅದಕ್ಕೆ ಕಾರಣ ಅವರು ಸಾಬರಾಗಿರುವುದು ಅಲ್ಲದೇ ಇನ್ನೊಂದು ಬಹುಮುಖ್ಯ ಕಾರಣವಿದೆ.

- Advertisement -
- Advertisement -

ಮುಂದಿನೆರಡು ತಿಂಗಳಿನಲ್ಲಿ, ಕೊರೊನಾ ಹತೋಟಿಗೆ ಬಂದರೆ, ಬಿಜೆಪಿ ಹಬ್ಬಿಸುವ ಸುಳ್ಳುಸುದ್ಧಿಗಳು ಇಂತಿರಲಿವೆ:

– ಭಾರತಕ್ಕೆ ಬರಲು ಹೆದರಿತೆ ಕೊರೋನಾ? ನೋಡಿ ಮೋದಿ ಯೋಗದ ಪರಿಣಾಮ!

– ವುಹಾನ್‌ನಲ್ಲಿ ಕೊರೋನಾ ವೈರಸ್ ಗೆಳತಿಯ ವೇಷ ಧರಿಸಿ ವೈರಸ್‌ನನ್ನೇ ಕೊಂದ ಧೋವಲ್!

– ಅಮಿ_ ಶಾ_ ದಡಿಯಲ್ಲಿ ವಿಲವಿಲ ಒದ್ದಾಡಿದ ದಡ್ಡ ಕೊರೋನಾ!

ಕೊರೋನಾಸುರನನ್ನು ಕೊಂದ ಕಾರಣಕ್ಕಷ್ಟೇ ಅಲ್ಲದೇ, ಭಾರತದಲ್ಲಿ ಈ ವೈರಸ್‌ನ ರಗಳೆ ಮುಂದೆ ಹೆಚ್ಚು ಹಬ್ಬದೇ ಹೋದರೆ ಅದಕ್ಕೆ ಇನ್ನೂ ಕೆಲವು ಕಾರಣಗಳಿವೆ. ಅವು ಹೀಗಿವೆ.

ನಮ್ಮ ದೇಶದ ಜಿಡಿಪಿ ಪ್ರವಾಸೋದ್ಯಮದ ಕಾರಣದಿಂದ 9% ನಷ್ಟು ಗಳಿಸುತ್ತದೆ. ಆದರೆ ಚೈನಾದಿಂದ ನಮ್ಮಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಅತ್ಯಂತ ಅಲ್ಪ. (ಉತ್ತರ ಇಟಲಿಯ ಸಮಸ್ಯೆ ಮುಖ್ಯವಾಗಿ ಉಂಟಾದದ್ದೇ ಚೀನಾದ ಪ್ರವಾಸಿಗರ ಕಾರಣದಿಂದ. ಅದು ದಕ್ಷಿಣ ಜರ್ಮನಿಯ ಬವೇರಿಯಾ ಪ್ರಾಂತ್ಯಕ್ಕೆ ದಾಟಿದ್ದು ಶೆಂಗಿಯನ್ ದೇಶಗಳಿಗೆ ಪೋರಸ್ ಗಡಿಗಳಿರುವ ಕಾರಣದಿಂದ). ಮಲೇಷ್ಯಾ ಹೊರತುಪಡಿಸಿದರೆ ಪೂರ್ವ ಏಷ್ಯಾದಿಂದ ಭಾರತಕ್ಕೆ ಬರುವ ಪ್ರವಾಸಿಗರು ಅತ್ಯಂತ ಕಡಿಮೆ. ಯೂರೋಪಿನಿಂದ ಭಾರತಕ್ಕೆ ಬರುವ ಪ್ರವಾಸಿಗರು ಬೇಸಿಗೆಯಲ್ಲಿ ಹೆಚ್ಚು ಬರುತ್ತಾರೆಯೇ ಹೊರತು, ನಮ್ಮ ಚಳಿಗಾಲದಲ್ಲಿ ಅಲ್ಲ.

ಸೇವೆ ಆಧಾರಿತ ಎಕಾನಮಿಯ ದೇಶವಾದ ನಮ್ಮಿಂದ ಯುರೋಪಿಗೋ, ಅಮೇರಿಕಾಕ್ಕೋ ಹೋಗುವ ಜನಗಳು ಬಹಳ ಕಡಿಮೆ. ಉತ್ಪನ್ನಾಧರಿತ ದೇಶವಾದ ಚೈನಾದಿಂದ ಹೊರದೇಶಗಳಿಗೆ ಭೇಟಿ ಕೊಡುವ ಜನರೂ, ವಸ್ತುಗಳೂ ಬಹಳ ಹೆಚ್ಚು. (ನಾವು ಹೆಚ್ಚೆಂದರೆ ಸಾಫ್ಟ್ ವೇರ್ ವೈರಸ್ ಉಂಟುಮಾಡಿ ಹರಡಬಹುದಷ್ಟೇ! ಆದರೆ ಕಮ್ಯೂನಲ್ ವೈರಸ್ ಹರಡುವುದರಲ್ಲೇ ಬಿಝಿಯಾದ ನಮ್ಮ ಸಾಫ್ಟ್-ವೇರ್ ಇಂಜಿನೀರುಗಳಿಗೆ ಅಷ್ಟು ತಲೆಯಾಗಲೀ ವ್ಯವಧಾನವಾಗಲೀ ಇಲ್ಲ.) ಹಾಗಾಗಿ, ಬಹುಷಃ ನಮ್ಮ ದೇಶಕ್ಕೆ ಈ ವೈರಸ್ ಹೆಚ್ಚು ಬಂದಿರದೇ ಇರಬಹುದು.

ಸಾಬರಿಂದ ಹಬ್ಬಿತು ವೈರಸ್ ಎಂದು ಇನ್ನೊಂದು ಸುಳ್ಳುಸುದ್ದಿ ಹರಡಿಸುತ್ತಾರೆ. ಆದರೆ ಅದಕ್ಕೆ ಕಾರಣ ಅವರು ಸಾಬರಾಗಿರುವುದು ಅಲ್ಲದೇ ಇನ್ನೊಂದು ಬಹುಮುಖ್ಯ ಕಾರಣವಿದೆ.

ಜಗತ್ತಿನ ಏರ್-ಟ್ರಾಫಿಕ್ ಟ್ರಾನ್ಸಿಟ್‌ಗಳಲ್ಲಿ (ಅಂದರೆ ಬೆಂಗಳೂರಿನಿಂದ ಸಾಗರಕ್ಕೆ ಹೋಗುವಾಗ ಸಿಗರೇಟ್ ಸೇದಲು ಬಸ್ ನಿಲ್ಲುವ ಕೆ.ಬಿ ಕ್ರಾಸೋ ಅರಸಿಕೆರೆಯೋ ಅಂಥ ಜಾಗ ಅಂತಿಟ್ಟುಕೊಳ್ಳಿ.) ದುಬೈ ಅತ್ಯಂತ ಮುಖ್ಯ ಏರ್ಪೋರ್ಟ್. ಅದು ಜಗತ್ತಿನ ಅತೀದೊಡ್ಡ ಟ್ರಾನ್ಸಿಟ್ ಏರ್ಪೋರ್ಟ್ಗಳ ಪೈಕಿ ಒಂದು. ವರ್ಷಕ್ಕೆ ಹತ್ತು ಕೋಟಿ ಜನ ಆ ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಾರೆ. 12 ನಿಮಿಷಕ್ಕೆ ಒಂದು ಕಿಲೋಮೀಟರ್ ನಡೆಯುವ ನನಗೆ ನಾಲ್ಕು ಕಿಲೋಮೀಟರ್‌ಗಳಷ್ಟಿರುವ ಆ ಏರ್ಪೋರ್ಟ್ನ ತುದಿಯಿಂದ ತುದಿಗೆ ತಲುಪಲು ಗಂಟೆಗಿಂತ ಹೆಚ್ಚು ಹಿಡಿದಿತ್ತು. ಅಂಥ ವಿಸ್ತಾರ ಜಾಗದಲ್ಲಿ ಎಷ್ಟು ಜನಕ್ಕೆ ಹಬ್ಬುವುದೆಂದು ಗೊತ್ತಾಗದೇ ಜಾತಿಧರ್ಮ ಮೀರಿ ಕೊರೊನಾ ಕೈಲಾದಷ್ಟು ಜನರಿಗೆ ಅಂಟಿಕೊಳ್ಳುತ್ತದೆ. ಕೈತೊಳೆಯದ ಜನ ಇನ್ನಷ್ಟು ಹಬ್ಬಿಸುತ್ತಾರೆ. ಮಿಡಲ್ ಈಸ್ಟ್ನಲ್ಲಿ ಸಾಬರಿರುವುದರಿಂದ ಅದು ಅವರ ಗಡ್ಡಕ್ಕೂ ಅಂಟಿಕೊಳ್ಳುವ ಸಾಧ್ಯತೆಯಿದೆ ಹೊರತು, ಅವರು ಸಾಬರೆಂದು ಕೊರೋನಾಕ್ಕೆ ಗೊತ್ತಾಗುವುದಿಲ್ಲ. ಅದು ಗೊತ್ತಾಗುವುದು ನಮ್ಮ ಬಿಜೆಪಿಗಳಿಗೆ ಮಾತ್ರ.

ಇನ್ನೊಂದು ತರ್ಕವಿದೆ. ಇದು ಅನೇಕ ಬಾರಿಯ ವಯಕ್ತಿಕ ಅನುಭವದ್ದು. ಯೂರೋಪಿನಿಂದ ಮತ್ತು ಅಮೆರಿಕಾದಿಂದ ದುಬೈನ ಟ್ರಾನ್ಸಿಟ್‌ವರೆಗೆ ಅತ್ಯಂತ ಒಳ್ಳೆಯ ರೀತಿಯಲ್ಲಿ ಮೇಂಟೇನ್ ಮಾಡಲಾದ ಬೋಯಿಂಗ್ 747 ಜಂಬೋಜೆಟ್‌ಗಳಂತಹ ವಿಮಾನಗಳು ಬರುತ್ತವೆ. ಅಲ್ಲಿಂದ ಇಂಡಿಯಾಕ್ಕೆ ಮತ್ತು ಏಷ್ಯಾದ ದೇಶಗಳಿಗೆ ಬರುವ ವಿಮಾನಗಳು -ಸ್ಯಾನಿಟೇಷನ್‌ನ ದೃಷ್ಟಿಯಿಂದ – ಅಷ್ಟು ಉತ್ತಮವಾಗಿರದ ಏರ್ ಬಸ್ ವಿಮಾನಗಳು.

ಝೀ ಟಿವಿಯ ಸುಧೀರ್ ಚೌಧರಿಯಂಥವರು ಚೀಪ್ (pun intended) ಎಡಿಟರ್ ಆಗಿರುವ, ಆಕ್ಸೆಂಟೆಡ್ ಇಂಗ್ಲಿಷ್ ಮಾತಾಡುವ ನಿರೂಪಕಿ ಇರುವ ವಿಯೋನ್ ಟಿ.ವಿಯ ವರದಿ ಚೈನಾದ ಕುರಿತು ದೊಡ್ಡ ಕಾನ್ಸ್-ಪಿರಸಿ ಥಿಯರಿಯನ್ನು ಹಬ್ಬಿಸುತ್ತಿದೆ. Ravi Belagere ತನಿಖಾ ಪತ್ರಕರ್ತರು ಇದನ್ನು ಹಂಚಿಕೊಳ್ಳುತ್ತಾರೆ. (ನಾನಿಲ್ಲಿ ಚೈನಾವನ್ನು ಖಂಡಿತಾ ಸಪೋರ್ಟ್ ಮಾಡುತ್ತಿಲ್ಲ. ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗಿ, ಅವರ ಮನೆಗೆ ಹೋದರೆ ಬಾಗಿಲಲ್ಲಿ ಮಾತಾಡಿಸಿ ಕಳುಹಿಸುವ ದೇಶ ಅದು.) ಆದರೆ ಜಾಗತಿಕ ಡಿಪ್ಲೊಮಸಿ ಮತ್ತು ಎಕನಾಮಿಕ್ಸ್ನ ಕನಿಷ್ಟ ನರಮಂಡಲ ಗೊತ್ತಿದ್ದರೆ ಅಂಥ ಥಿಯರಿಯನ್ನು ಯಾರೂ ನಂಬುವುದಿಲ್ಲ. ಮಾಸ್ಕ್ ಮಾರಿ ಶ್ರೀಮಂತವಾಗುತ್ತದೆ ಚೈನಾ ಎನ್ನುತ್ತಾರೆ ಜನ. ಅಡಿಗೆಮನೆಗೆ ಬೆಂಕಿ ಹಾಕಿ ಅಕ್ಕಿ ಮಾರಲಾಗುವುದಿಲ್ಲ. ಐಫೋನ್ ಕೊಳ್ಳುವವರೆಲ್ಲ ಸತ್ತು ಹೋದರೆ ಅದನ್ನು ಮಾಡುವ ಚೈನಾ ಅದನ್ನು ಅಂಡಿಗೆ ಹಾಕಿಕೊಳ್ಳಬೇಕಷ್ಟೇ.

ಜರ್ಮನಿಯಲ್ಲಿ ಮೂರು ವರ್ಷದಿಂದ ನಾನು ವಾಸಿಸುತ್ತಿರುವ ಬಿಲ್ಡಿಂಗ್‌ನಲ್ಲಿ ಸುಮಾರು 20-25 ಜನ ಚೈನೀಸ್ ಹುಡುಗರನ್ನು ಮಾತಾಡಿಸಲು ಪ್ರಯತ್ನಿಸಿದ್ದೇನೆ. ರಾಜಕೀಯ ಮಾತಾಡಲು ಪ್ರಯತ್ನಿಸಿದರೆ ಒಂದೋ ಹೆದರುತ್ತಾರೆ. ಅಥವಾ I don’t want to spek about it ಎಂದು ನೇರವಾಗಿ ಹೇಳುವಷ್ಟು ಹೆದರುತ್ತಾರೆ. ಒಬ್ಬ ಹುಡುಗ ಮಾತ್ರ ಅಡಿಗೆ ಮನೆಯ ಕಿಟಕಿ ಬಾಗಿಲುಗಳ ಮುಚ್ಚಿ ಕಥೆಗಳನ್ನು ಹೇಳಿದ. ಅದೆಲ್ಲ ನಾವು ಆ ದೇಶದ ಬಗ್ಗೆ ನಂಬಿರುವಂಥದ್ದೇ. ಅಂಥದ್ದೇ ಡಿಕ್ಟೇಟೋರಿಯಲ್ ದೇಶ ನಾವಾಗಲು ಕಾದುಕುಳಿತಿದ್ದೇವೆ. ಬೆಳಿಗ್ಗೆ ಚೈನಾದಂಥ ಆಡಳಿತ ಬರಬೇಕು ಎಂದು ಕೂಗುತ್ತೇವೆ. ಮಧ್ಯಾಹ್ನ ಆ ದೇಶ ಜಗತ್ತಿಗೆ ನ್ಯೂಸ್ ಕೊಡುತ್ತಿಲ್ಲ ಅಂಥ ಬೊಬ್ಬಿರಿಯುತ್ತೇವೆ. ಸಂಜೆ ನಮ್ಮ ಬಗ್ಗೆ ಅಮೇರಿಕನ್ ಮೀಡಿಯಾ ತಪ್ಪಾಗಿ ಬಿಂಬಿಸುತ್ತಿದೆ ಎಂದು ಕನ್ನಡ ಮೀಡಿಯಾಗಳು ಊಳಿಡುತ್ತವೆ.

ಇದೆಲ್ಲ ಬಿಟ್ಟು-

ಒಂದೊಮ್ಮೆ, ಇನ್ಕ್ಯುಬೇಷನ್ ಅವಧಿ ಹೆಚ್ಚಿರುವ ಈ ವೈರಸ್ ಬಂದಿದ್ದು, ಜನರಿಂದ ಜನಕ್ಕೆ ಹರಡಿ ಅದು ಕಾಣಿಸಿಕೊಂಡರೆ, ಅದು ಮುಂದೆರಡು ತಿಂಗಳಿನಲ್ಲಿ – ಈ ಸರ್ಕಾರ ಹಿಂದೂಮುಂದೂ ಯೋಚಿಸದ ರೀತಿಯಲ್ಲಿ ಲಾಕ್ ಡೌನ್ ಮಾಡಿ, ಟೆಸ್ಟುಗಳನ್ನೂ ಸರಿಯಾಗಿ ಮಾಡದೇ ಜನರಿಂದ ಜನರಿಗೆ ಹಬ್ಬುವಂತೆ ಮಾಡಿದ್ದರಲ್ಲಿ ಸಾಬರಿಗೆ ಬಂದಿದ್ದರೆ ಅದು ಕೊರೋನಾದ ತಪ್ಪೇ ಹೊರತು ಸಾಬರದ್ದಲ್ಲ ಎಂದು ಅರ್ಥ.

ಪುಣ್ಯಕ್ಕೆ ಸಾಬರಲ್ಲಿ ಮುಕ್ಕಾಲು ಪಾಲು ಜನ ಕುಡಿಯುವುದಿಲ್ಲ. ಹೆಂಡ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸುತಿರುವ ಹಿಂದುಗಳಿಗೆ ಹೆಂಡ ಕೊಡುತ್ತಿರುವ ನಾವು ಸಾಬರಿಗೆ ಅದನ್ನೂ ಕೊಡದೇ ಮಜಾ ನೋಡುತ್ತಿದ್ದೆವು. ಆ ಅವಕಾಶ ಮಾತ್ರ ಬಿಜೆಪಿಗೆ ತಪ್ಪಿಹೋಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....