ಹರಿಯಾಣದಲ್ಲಿ ಬಿಜೆಪಿ ನಾಯಕರಿಗೆ ಮತ್ತೆ ಮುಖಭಂಗ: ಮುಂದುವರೆದ ರೈತರ ಪ್ರತಿಭಟನೆ

ಹರಿಯಾಣದಲ್ಲಿ ಎರಡನೇ ದಿನವೂ ಬಿಜೆಪಿ, ಅದರ ಮಿತ್ರ ಪಕ್ಷಗಳು ಮತ್ತು ರಾಜ್ಯದ ಬಿಜೆಪಿ ನಾಯಕರ ವಿರುದ್ಧ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ- ಜೆಜೆಪಿ ನಾಯಕರು ನಡೆಸಲು ನಿರ್ಧರಿಸಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಕಪ್ಪು ಧ್ವಜಗಳನ್ನು ತೋರಿಸಿ ಕಾರ್ಯಕ್ರಮದಿಂದ ವಾಪಸ್ ತೆರಳುವಂತೆ ಮಾಡಲಾಗುತ್ತಿದೆ.

ರಾಜ್ಯ ಸಹಕಾರ ಸಚಿವ ಬನ್ವಾರಿ ಲಾಲ್ ಹಾಜರಿದ್ದ ಫತೇಹಾಬಾದ್ ಜಿಲ್ಲೆಯ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪ್ರತಿಭಟನಾಕಾರರು ಕಪ್ಪು ಧ್ವಜಗಳನ್ನು ಹಾರಿಸಿ ಪ್ರತಿಭಟನೆ ನಡೆಸಿದ್ದಾರೆ. ಜಜ್ಜರ್‌ನಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿಯೂ ಇದೇ ರೀತಿ ಪ್ರತಿಭಟನೆ ನಡೆಸಲಾಗಿದೆ.

ಹಿಸಾರ್ ಮತ್ತು ಯಮುನಾನಗರ್ ಜಿಲ್ಲೆಗಳಲ್ಲಿ ಶನಿವಾರ ನಡೆಸಿದ್ದ ತಯಾರಿಯನ್ನೇ ಪೊಲೀಸರು ಇಲ್ಲಿಯೂ ಮಾಡಿಕೊಂಡಿದ್ದರು. ರೈತರು ಪ್ರತಿಭಟನೆ ನಡೆಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಬ್ಯಾರಿಕೇಡ್‌ಗಳನ್ನು ತಳ್ಳಿ ಪ್ರತಿಭಟನೆ ನಡೆಸಿದ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ಇದನ್ನೂ ಓದಿ: ಜ.26 ರ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ, ವಿಶ್ವಸಂಸ್ಥೆ ಬಳಿ ಹೋಗುವುದಿಲ್ಲ-ರಾಕೇಶ್ ಟಿಕಾಯತ್

ಬಿಜೆಪಿ ಕಾರ್ಯಕರ್ತರನ್ನು ಒಳಗೊಂಡ ಜಜ್ಜರ್ ಕಾರ್ಯಕ್ರಮದಲ್ಲಿ ಸಂಸದ ಡಾ.ಅರವಿಂದ್ ಶರ್ಮಾ, ಪ್ರದೇಶದ ಉಸ್ತುವಾರಿ ವಿನೋದ್ ತಾವ್ಡೆ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಓಂ ಪ್ರಕಾಶ್ ಧನ್ಖಾದ್ ಭಾಗವಹಿಸಬೇಕಿತ್ತು.

ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಯುವುದನ್ನು ರಹಸ್ಯವಾಗಿಡಲಾಗಿತ್ತು. ಆದರೆ, ಹೇಗೊ ಮಾಹಿತಿ ಪಡೆದ ರೈತರು ಕಾರ್ಯಕ್ರಮ ಸ್ಥಳವನ್ನು ತಲುಪಲು ಯಶಸ್ವಿಯಾಗಿ, ಪ್ರತಿಭಟನೆ ನಡೆಸಿದ್ದಾರೆ.

ಈ ತಿಂಗಳಿನಲ್ಲಿ ಬಿಜೆಪಿ ರಾಜ್ಯದಾದ್ಯಂತ ಸರಣಿ ಕಾರ್ಯಕ್ರಮಗಳನ್ನು ಯೋಜಿಸಿದೆ, ಈ ಕಾರ್ಯಕ್ರಮಗಳನ್ನು ಗುರಿಯಾಗಿಸಿಕೊಂಡಿರುವ ರೈತರು ಕಾರ್ಯಕ್ರಮಗಳ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹರಿಯಾಣದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಬಿಜೆಪಿ-ಜನ್ನಾಯಕ್ ಜನತಾ ಪಕ್ಷದ ಮುಖಂಡರಿಗೆ ಅವಕಾಶ ನೀಡದಂತೆ ರೈತರು ಈ ಹಿಂದೆ ಕರೆ ನೀಡಿದ್ದರು.

ಕಳೆದ 8 ತಿಂಗಳಿನಿಂದ ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ದೆಹಲಿಯ ಸಿಂಘು, ಟಿಕ್ರಿ, ಗಾಝಿಪುರ್‌ ಮತ್ತು ರಾಜಸ್ಥಾನದ ಶಹಾಜಾನ್‌ಪುರ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶಗಳಲ್ಲಿಯೂ ಪ್ರತಿಭಟನೆ ನಡೆಯುತ್ತಿದೆ.


ಇದನ್ನೂ ಓದಿ: ಕೇಂದ್ರ ಚರ್ಚೆ ನಡೆಸಲು ಬಯಸಿದರೆ, ರೈತರಿಗೆ ಷರತ್ತು ವಿಧಿಸುವಂತಿಲ್ಲ- ರಾಕೇಶ್ ಟಿಕಾಯತ್

LEAVE A REPLY

Please enter your comment!
Please enter your name here