Homeಮುಖಪುಟರೈತನ ಖಾಸಗಿತನಕ್ಕಿಲ್ಲ ಬೆಲೆ: ಕೃಷಿ ಮಾಹಿತಿ ಕಣಜಕ್ಕೆ ಕನ್ನ ಹಾಕಲಿರುವ ಅಗ್ರಿಸ್ಟ್ಯಾಕ್‌

ರೈತನ ಖಾಸಗಿತನಕ್ಕಿಲ್ಲ ಬೆಲೆ: ಕೃಷಿ ಮಾಹಿತಿ ಕಣಜಕ್ಕೆ ಕನ್ನ ಹಾಕಲಿರುವ ಅಗ್ರಿಸ್ಟ್ಯಾಕ್‌

ರೈತನ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುವ ಈ ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೂ ಅವಕಾಶಗಳಿಲ್ಲದಂತೆ ಸರ್ಕಾರ ನಿಶ್ಯಸ್ತ್ರಗೊಳಿಸಿದೆ..

- Advertisement -
- Advertisement -

”ನಮ್ಮ ಉದ್ದೇಶ ಭಾರತದ ಅತ್ಯಂತ ಅಂಚಿನಲ್ಲಿರುವ ರೈತನಿಗೂ ಬದುಕಲು ಸಾಧ್ಯವಾಗುವವಂತೆ ನೆರವಾಗುವುದು”

ಹೀಗೆ ಹೇಳಿರುವುದು ಕ್ರಾಪ್‌ಡೇಟಾದ ಸಿಇಒ ಸಚಿನ್‌ ಸೂರಿ. ಭಾರತ ಸರ್ಕಾರ ರೂಪಿಸಲು ಹೊರಟಿರುವ ಅಗ್ರಿಸ್ಟ್ಯಾಕ್‌ ಎಂಬ ಡೇಟಾಬೇಸ್‌ಗೆ  ಕ್ರಾಪ್‌ಡೇಟಾ ಮೈಕ್ರೋಸಾಫ್ಟ್‌ನ ಪಾಲುದಾರ ಸಂಸ್ಥೆಯಾಗಿ ರೈತರ ಮಾಹಿತಿ ಕಲೆ ಹಾಕುತ್ತಿದೆ. ಈಗಾಗಲೇ ಕೃಷಿ ಉತ್ಪಾದನೆ, ಮಾರುಕಟ್ಟೆಯ ಸವಾಲುಗಳನ್ನು ಎದುರಿಸುತ್ತಿರುವ ಕೃಷಿ ಕ್ಷೇತ್ರಕ್ಕೆ ತಂತ್ರಜ್ಞಾನದ ಮೂಲಕ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತಿರುವ ಸಂಸ್ಥೆ ಇದು.

ಕ್ರಾಪ್‌ಡೇಟಾ ರೀತಿಯಲ್ಲಿ ಸ್ಟಾರ್‌ ಅಗ್ರಿಬಜಾರ್‌, ಪತಂಜಲಿ ಆರ್ಗ್ಯಾನಿಕ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಅಗ್ರಿಕಲ್ಚರಲ್‌ ಮ್ಯಾನೇಜ್‌ಮೆಂಟ್‌ ಸರ್ವಿಸಸ್‌, ಅಮೆಜಾನ್‌ ಇಂಟರ್ನೆಟ್‌ ಸರ್ವಿಸಸ್‌, ಎಸ್ರಿ ಇಂಡಿಯಾ ಜೊತೆಗೆ ಜೂನ್‌ 1ರಂದು ವಿವಿಧ ಕಾರ್ಯಾಚರಣೆಗಳಿಗಾಗಿ ಭಾರತ ಸರ್ಕಾರದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿವೆ. ಇವೆಲ್ಲವೂ ಅಗ್ರಿಸ್ಟ್ಯಾಕ್‌ ಅಡಿ ಕಾರ್ಯನಿರ್ವಹಿಸಲಿವೆ.

ಈ ತಿಳಿವಳಿಕೆ ಒಪ್ಪಂದದ ಪ್ರಕಾರ ಯಾವ ಸಂಸ್ಥೆ ಏನು ಮಾಡಲಿವೆ ಎಂಬುದನ್ನು ನೋಡೋಣ:

ಸ್ಟಾರ್‌ ಅಗ್ರಿಬಜಾರ್‌ ಸಂಸ್ಥೆಯು ರೈತರ ಮಾಹಿತಿಯನ್ನು ಒಪ್ಪ ಮಾಡುವ ಕೆಲಸ ಮಾಡಲಿದೆ. ಮುಖ್ಯವಾಗಿ, ಭೂಮಿ ಕುರಿತ ವಿವರಗಳನ್ನು ಕಲೆ ಹಾಕುವುದು, ದೂರ ಸಂವೇದನೆ ತಂತ್ರವನ್ನು ಬಳಸಿ, ರಾಜಸ್ಥಾನದ ಕೋಟಾ, ಮಧ್ಯಪ್ರದೇಶದ ಗುಣ ಮತ್ತು ಉತ್ತರ ಪ್ರದೇಶದ ಮಥುರಾದಲ್ಲಿ ಬೆಳೆ ಅಂದಾಜು ಮಾಡಲಿದೆ. ಪ್ರಯೋಗಾರ್ಥ ನಡೆಯಲಿರುವ ಈ ಅಧ್ಯಯನದ ಜೊತೆಗೆ ರೈತರಿಗೆ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಗೆ ಸಂಬಂಧಿಸಿದ ಸಲಹೆ ನೀಡುವುದು, ರೈತರಿಗೆ ಕಟಾವು ಪೂರ್ವ ಮತ್ತು ಕಟಾವಿನ ನಂತರದ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುವುದು ಇದರ ಜವಾಬ್ದಾರಿ.

ಇನ್ನು ಪತಂಜಲಿ ಸಂಸ್ಥೆಯು, ಮಣ್ಣಿನ ಪೌಷ್ಟಿಕತೆ, ಬೆಳೆ ಪ್ರಮಾಣ ಇಳುವರಿಗೆ ಸಂಬಂಧಿಸಿದ ಸಲಹೆ, ಗೊಬ್ಬರ ಕುರಿತ ಸಲಹೆ ಮತ್ತು ರೈತರಿಗೆ ಮೊಬೈಲ್‌ ಅಪ್ಲಿಕೇಷನ್‌ ಬಳಕೆಯ ತರಬೇತಿ ನೀಡಲಿದೆ. ಪ್ರಯೋಗಾರ್ಥವಾಗಿ ಈಗ ಉತ್ತರಾಖಂಡದ ಹರಿದ್ವಾರ್‌, ಉತ್ತರ ಪ್ರದೇಶದ ಹಮೀರ್‌ಪುರ್‌ ಮತ್ತು ಮಧ್ಯಪ್ರದೇಶದ ಮೊರೆನಾದಲ್ಲಿ ಕಾರ್ಯಮಗ್ನವಾಗಿದೆ.

ಅಮೆಜಾನ್‌ ಇಂಟರ್ನೆಟ್‌ ಸರ್ವಿಸಸ್‌ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ನಿರ್ಮಿಸುವಲ್ಲಿ ತೊಡಗಿಸಿಕೊಂಡಿದೆ. ರಾಷ್ಟ್ರ ಮಟ್ಟದ ಆಗ್ರಿ ಡೇಟಾ ಸ್ಟ್ಯಾಕ್‌ ರೂಪಿಸಿದ್ದು, ಇದು ಕೃಷಿ ವಲಯಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮೂಲ ಮಾಹಿತಿಯನ್ನು ಒದಗಿಸಲಿದೆ. ಇದರ ಜೊತೆಗೆ ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲಿರುವ ಪಾಲುದಾರ ಸಂಸ್ಥೆಗಳಿಗೆ ಕ್ಲೌಡ್‌ ಸೇವೆಯನ್ನು ಒದಗಿಸಲಿದೆ. ಅಷ್ಟೇ ಅಲ್ಲ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನವೋದ್ಯಮಗಳಿಗೂ ನೆರವಾಗಲಿದೆ.

ಎಸ್ರಿ ಇಂಡಿಯಾ ಸಂಸ್ಥೆಯು ರಾಷ್ಟ್ರೀಯ ಮಟ್ಟದ ಕೃಷಿ ಜಿಯೋ ಹಬ್‌ ಸ್ಥಾಪಿಸುವುದಕ್ಕೆ  ಕೃಷಿ ಸಚಿವಾಲಯಕ್ಕೆ ನೆರವಾಗಲಿದೆ. ಜಿಐಎಸ್‌ ಟೂಲ್‌ಗಳನ್ನು, ರೈತ ಮತ್ತು ಕೃಷಿಗೆ ಸಂಬಂಧಿಸಿದ ಡೇಟಾ ಸೇವೆಗಳನ್ನು ಬೆಸೆಯುವ ತಂತ್ರಜ್ಞಾನಗಳನ್ನು ಪರಿಚಯಿಸಲಿದೆ.

ಅಗ್ರಿಸ್ಟ್ಯಾಕ್‌ ಯೋಜನೆಯಲ್ಲಿ ಇಷ್ಟು ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮುಂಬರುವ ದಿನಗಳಲ್ಲಿ  ಈ ಪಾಲುದಾರರ ಸಂಖ್ಯೆ ಇನ್ನು ಹೆಚ್ಚಬಹುದು. ಆದರೆ ಬಹಳ ಮುಖ್ಯವಾಗಿ ಕಾಡುತ್ತಿರುವ ಪ್ರಶ್ನೆಗಳು ಹಲವು ಇವೆ. ಇಷ್ಟು ಖಾಸಗಿ ಪಾಲುದಾರರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿರುವಾಗ ಇವರು ಸಂಗ್ರಹಿಸುವ ಮಾಹಿತಿಯ ಗೌಪ್ಯತೆ, ಮಾಹಿತಿಯ ಖಾಸಗಿತನ, ಸುರಕ್ಷತೆ, ರೈತರ ಭೂ ದಾಖಲೆಗಳ ವಿವರಗಳು ಇತ್ಯಾದಿಗಳ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಸರ್ಕಾರ ನೀಡಿದೆಯೇ?


ಇದನ್ನೂ ಓದಿ: ಭಾರತದ ಕೃಷಿ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್‌: ಅಮೆರಿಕದಲ್ಲಾಗಿದ್ದು, ಇಲ್ಲಾಗುವುದಿಲ್ಲ ಎಂಬುದಕ್ಕೆ ಸರ್ಕಾರ ಗ್ಯಾರಂಟಿ ಕೊಡುವುದೆ?


ಹಿಂದೆಯೂ ನಾನು ಉಲ್ಲೇಖಿಸಿದಂತೆ, ಖಾಸಗಿ ಮಾಹಿತಿ ರಕ್ಷಣೆ ಮಸೂದೆ 2019 ಇನ್ನೂ ಜಂಟಿ ಸಂಸದೀಯ ಸಮಿತಿಯ ಎದುರು ಇದೆ. ಕಳೆದ ಎರಡು ವರ್ಷಗಳಿಂದ ಚರ್ಚೆ, ಪರಿಶೀಲನೆ, ಪರಾಮರ್ಶೆಗಳ ನೆಪದಲ್ಲಿ ಇದು ನನೆಗುದಿಗೆ ಬಿದ್ದಿದೆ. ಈ ಮಸೂದೆಯು ಭಾರತೀಯ ನಾಗರಿಕನಿಗೆ ತನ್ನ ಮಾಹಿತಿಯ ತಿದ್ದಲು, ಡಿಲೀಟ್‌ ಮಾಡಲು ಮತ್ತು ಬಳಸುವ ಮುನ್ನ ಅನುಮತಿ ಕೇಳುವ ಹಕ್ಕನ್ನು ನೀಡುತ್ತದೆ. ಡೇಟಾ ಸಂಸ್ಕರಣೆ ನಿಯಂತ್ರಣವನ್ನು ಸೂಚಿಸುತ್ತದೆ. ಆದರೆ ಈ ಮಸೂದೆ ಇನ್ನೂ ಅಂಗೀಕಾರವಾಗದ ಕಾರಣ ಭಾರಿಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿರುವ ರೈತರ ಮಾಹಿತಿಗೆ ಯಾವರೀತಿಯ ರಕ್ಷಣೆಇದೆ ಎಂಬ ಆತಂಕವನ್ನು ಮಾಹಿತಿ ಹಕ್ಕು ಹೋರಾಟಗಾರರು ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯವಾಗಿ ಇಂಟರ್ನೆಟ್‌ ಫ್ರೀಡಮ್‌ ಫೌಂಡೇಷನ್‌ ಸಂಸ್ಥೆ ಅಭಿಯಾನ ನಡೆಸಿದೆ, ಸರ್ಕಾರದ ಮೇಲೆ ಒತ್ತಡವನ್ನು ಹೇರಿದೆ.

ಇಂಟರ್ನೆಟ್‌ ಫ್ರೀಡಮ್‌ ಫೌಂಡೇಷನ್‌ನ ಸದಸ್ಯರಾದ ರೋಹಿನ್‌ ಗರ್ಗ್‌, ಬಹಳ ಮುಖ್ಯವಾದ ಆತಂಕವನ್ನು ಪ್ರಸ್ತಾಪಿಸಿದ್ದಾರೆ. ಅದೇನೆಂದರೆ, ಮಾಹಿತಿ ರಕ್ಷಣೆಗೆ ಸ್ಪಷ್ಟ ನಿರ್ದೇಶನಗಳು ಮತ್ತು ಕಾನೂನು ಇಲ್ಲದಿರುವುದರಿಂದ ರೈತರ ಆರ್ಥಿಕ ಶೋಷಣೆಗೆ ಸುಲಭ ಅವಕಾಶವಾಗುತ್ತದೆ ಎಂಬುದು. ಗ್ರಾಮೀಣ ಪ್ರದೇಶದಲ್ಲಿರುವ ಮೈಕ್ರೋಫೈನಾನ್ಸ್‌ ಸಂಸ್ಥೆಗಳು ರೈತನನ್ನು ಈಗಾಗಲೇ ಸಾಲದ ಸುಳಿಗೆ ಸಿಲುಕಿಸಿವೆ. ಈಗ  ಫಿನ್‌ಟೆಕ್‌ ಸಂಸ್ಥೆಗಳು ಅತ್ಯಂತ ಸೂಕ್ಷ್ಮವಾದ ಮಾಹಿತಿಯನ್ನು ಸಂಗ್ರಹಿಸಿ, ರೈತನ ಅಸಹಾಯಕ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ನೆರವಿನರೀತಿಯಲ್ಲಿ ಮತ್ತೆ ದುಬಾರಿ ಬಡ್ಡಿಯ ಸಾಲದ ಸುಳಿಗೆ ಸಿಲುಕಿಸಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಾರೆ.

ಇನ್ನೊಂದು ಸಮಸ್ಯೆ; ಈ ಹೊಸ ವ್ಯವಸ್ಥೆಯೊಂದಿಗೆ ಸಾಕ್ಷರತೆ ಮತ್ತು ಡಿಜಿಟಲ್‌ ವ್ಯವಸ್ಥೆಯ ತಿಳಿವಳಿಕೆ ಇಲ್ಲದ ರೈತನ ಹೇಗೆ ವ್ಯವಹರಿಸುತ್ತಾನೆ ಎಂಬುದು. ಉತ್ತರ ಪ್ರದೇಶದ ಬಂಡಾ ಸಮೀಪದಲ್ಲಿರುವ ಅಟ್ಘಾರ್‌ ಹಳ್ಳಿಯಲ್ಲಿ ಕ್ರಾಪ್‌ಡೇಟಾ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದೆ. ಈ ಎರಡು ಹೆಕ್ಟೇರ್‌ ಭೂಮಿ ಹೊಂದಿರುವ ಸಿದ್ಧಾರ್ಥ ರಾಣಾ ಅವರಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಈ ಬಗ್ಗೆ ಸಿಟಿಜನ್‌.ಇನ್‌ ವರದಿಗಾರರಿಗೆ ರಾಣಾ ಅವರು ಹೇಳಿದ ಮಾತುಗಳು ಹೀಗಿವೆ: ಪಂಚಾಯ್ತಿ ಸದಸ್ಯರು ವಿಜ್ಞಾನಿಗಳ ಜೊತೆಗೆ ಬಂದರು. ಅವರು ನನ್ನ ಫೋನ್‌ ನಂಬರ್‌, ಆಧಾರ್‌ ಕಾರ್ಡ್‌ ನಂಬರ್‌ ತೆಗೆದುಕೊಂಡರು. ನನ್ನ ಬೆಳೆ, ನಾನು ಹೇಗೆ ಕೃಷಿ ಮಾಡುತ್ತೇನೆ. ಎಷ್ಟು ಬೆಲೆ ಸಿಗುತ್ತದೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಆನ್‌ಲೈನ್‌ನಲ್ಲಿ ನನ್ನ ಹೆಸರಿನಲ್ಲಿ ಖಾತೆ ತೆಗೆದರು. ಜೊತೆಗೆ ನನ್ನ ಹೊಲದ ಫೋಟೋವನ್ನು ಎಲ್ಲ ಕಡೆಯಿಂದಲೂ ತೆಗೆದುಕೊಂಡರು.ಹೊಸ ಬೆಳವಣಿಗೆಗಳಿಂದ ಬೆಳೆ ಮಾರುವುದು ಸುಲಭವಾಗಿದೆ. ಆದರೆ ಈ ವ್ಯವಸ್ಥೆಯ ಆತಂಕಗಳಿವೆ. ಮೊದಲನೆಯದಾಗಿ, ಇಡೀ ವ್ಯವಸ್ಥೆಗೆ ಒಂದು ಮುಖವಿಲ್ಲ. ಯಾರನ್ನೂ ಕೇಳಬೇಕು? ಯಾರು ಇದಕ್ಕೆ ಜವಾಬ್ದಾರಿ ಎಂಬುದು ತಿಳಿಯುವುದಿಲ್ಲ. ಏನಾದರೂ ತಪ್ಪಾದರೆ ಹತ್ತುಹನ್ನೆರಡು ಬಾರಿ ಕರೆ ಮಾಡಬೇಕು. ಎರಡನೆಯದಾಗಿ ನಾನು ಮಂಡಿಯಲ್ಲಿ ವ್ಯವಹಾರ ಮಾಡಿದಂತೆ ಫೋನ್‌ಗಳಲ್ಲಿ ಮಾತನಾಡುವುದಕ್ಕೆ ಬರುವುದಿಲ್ಲ. ಅಂತಹ ತಿಳಿವಳಿಕೆ ನನಗಿಲ್ಲ” .

ರಾಣಾ ಅವರಂತ ಲಕ್ಷಾಂತರ ರೈತರು ಭಾರತದಲ್ಲಿದ್ದಾರೆ. ಅಗ್ರಿಸ್ಟ್ಯಾಕ್‌ನಂತಹ ಮೆಗಾ ಯೋಜನೆಯನ್ನು ಜಾರಿಗೆ ತರುವ ರೈತ ಸಮುದಾಯದೊಂದಿಗೆ ಸಮಾಲೋಚನೆ ನಡೆಸಿದ್ದರೆ, ಖಂಡಿತವಾಗಿಯೂ ಇಂತಹ ಆತಂಕ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲವೇನೊ. ಮಜ್ದೂರ್‌ ಕಿಸಾನ್‌ ಶಕ್ತಿ ಸಂಘಟನೆಯ ಸದಸ್ಯರಾದ ನಚಿಕೇತ್‌ ಉಡುಪ ಅಭಿಪ್ರಾಯವೂ ಇದೆ. ” ಇಡೀ ವ್ಯವಸ್ಥೆಯಲ್ಲಿ ರೈತರು ಬಹುಮುಖ್ಯಪಾಲುದಾರರು. ಸರ್ಕಾರ ಅವರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು” ಎನ್ನುತ್ತಾರೆ. ” ಮಧ್ಯವರ್ತಿಗಳನ್ನು ಕಿತ್ತುಹಾಕುವ ಸರ್ಕಾರದ ಉತ್ಸಾಹ ವ್ಯಾಪಾರಿಗಳನ್ನು ದುಷ್ಟರಂತೆ ಬಿಂಬಿಸುವ ಪ್ರಯತ್ನ ಎನ್ನುತ್ತಾರೆ ಅವರು. ಅವರ ಪ್ರಕಾರ ರೈತ ಮತ್ತು ಗ್ರಾಹಕರನ್ನು ಬೆಸೆಯುವ ಕೆಲಸವನ್ನು ವ್ಯಾಪಾರಿಗಳು/ಮಧ್ಯವರ್ತಿಗಳು ಮಾಡುತ್ತಾರೆ. ಈಗ ಆನ್‌ಲೈನ್‌ ಮಧ್ಯವರ್ತಿಯ ಜಾಗವನ್ನು ಪಡೆದುಕೊಂಡಿದೆ. ಆದರೆ ವ್ಯಕ್ತಿಯೊಬ್ಬ ಮಧ್ಯವರ್ತಿಯಾಗಿದ್ದಾಗ, ಯಾವುದೇ ತಪ್ಪು ನಡೆದರೆ ಆತನನ್ನು ಹೊಣೆಯಾಗಿಸುವ, ಪ್ರಶ್ನಿಸುವ ಅವಕಾಶ ರೈತನಿಗೆ ಇರುತ್ತದೆ. ಆದರೆ ಆನ್‌ಲೈನ್‌ ವಹಿವಾಟಿನಲ್ಲಿ ಯಾರನ್ನು ಹೊಣೆಯಾಗಿಸುವುದು” ಎಂದು ನಚಿಕೇತ್ ಪ್ರಶ್ನಿಸುತ್ತಾರೆ.

ಆಗ್ರಿಸ್ಟ್ಯಾಕ್‌ ಯೋಜನೆಯಡಿ ಪ್ರತಿ ರೈತನಿಗೆ ಗುರುತಿನ ಸಂಖ್ಯೆ ನೀಡಲಾಗುತ್ತಿದೆ. ಈ ಗುರುತಿನ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಿಸಲಾಗುತ್ತದೆ. ಈ ಮೂಲಕ ಎಲ್ಲ ಸರ್ಕಾರಿ ಸೌಲಭ್ಯ ಮತ್ತು ಯೋಜನೆಗಳೊಂದಿಗೆ ಬೆಸೆಯಲಾಗುತ್ತಿದೆ. ಇನ್ನು ಹಲವು ಲೋಪಗಳೊಂದಿಗೆ ಗುದ್ದಾಡುತ್ತಿರುವ ಆಧಾರ್‌ ವ್ಯವಸ್ಥೆ ಮಾಡಿರುವ ಅವಾಂತರವನ್ನು ನಮ್ಮ ಕಣ್ಣ ಮುಂದೆ ಇದೆ. ಯಾರೂ ಬೇಕಾದರೂ ಅಧಾರ್‌ವಿವರಗಳನ್ನು ಗೂಗಲ್‌ ಸರ್ಚ್‌ ಮೂಲಕ ಕಂಡುಕೊಳ್ಳಬಹುದು ಎಂಬ ಆಘಾತಕಾರಿ ಸುದ್ದಿಗಳು ಮಾಹಿತಿ ಸುರಕ್ಷತೆ, ಆನ್‌ಲೈನ್‌ ಖಾಸಗಿತನದ ವಿಷಯದಲ್ಲಿ ಹೋರಾಡುತ್ತಿರುವ ಎಲ್ಲರ ನಿದ್ರೆಗೆಡಿಸಿದೆ. ಸಾಕ್ಷರತೆಯ ಕೊರತೆ ಇರುವ , ಡಿಜಿಟಲ್‌ ಸಾಕ್ಷರತೆಯ ಗಂಧಗಾಳಿಯೂ ಇಲ್ಲದ ರೈತರು ಈ ರೀತಿಯ ಸವಾಲುಗಳನ್ನು ಹೇಗೆ ಎದುರಿಸಬಹುದು. ಖಾಸಗಿತನ ಎಂಬುದನ್ನು ಹೇಗೆ ಗ್ರಹಿಸಿಕೊಳ್ಳಬಲ್ಲರು ಮತ್ತು ಅಧಿಕಾರ ಅಥವಾ ವ್ಯವಸ್ಥೆಯನ್ನು ಹೇಗೆ ಪ್ರಶ್ನಿಸಬಲ್ಲರು ಎಂಬ ಪ್ರಶ್ನೆ ಕಾಡುತ್ತದೆ.

ಖಾಸಗಿ ಸಹಭಾಗಿತ್ವದ ಅಗ್ರಿಸ್ಟ್ಯಾಕ್‌ನಲ್ಲಿ ಪ್ರತಿಯೊಬ್ಬರೂ ಲಭ್ಯವಾಗಲಿರುವ ದೊಡ್ಡ ಮಾಹಿತಿ ಕಣಜದ ಲಾಭ ಪಡೆಯುವುದಕ್ಕೆ, ತಮ್ಮ ಉದ್ಯಮ ಉದ್ದೇಶಗಳ ಈಡೇರಿಕೆಗೆ ತೊಡಗಿಸಿಕೊಂಡಿದ್ದಾರೆಯೇ ಹೊರತು. ರೈತನ ಏಳಿಗೆ, ದೇಶದ ಕೃಷಿ ವಲಯದ ಪ್ರಗತಿಗೆ ಇದು ಎಷ್ಟರ ಮಟ್ಟಿಗೆ ಸಹಕಾರಿಯಾಗಬಲ್ಲದು ಎಂಬ ಪ್ರಶ್ನೆಗೆ ಉತ್ತರವಂತು ಕಾಣುತ್ತಿಲ್ಲ.

ಪ್ರಜಾಸತ್ತೆಯೊಳಗೆ ವಿಕೇಂದ್ರಿಕರಣ ಬಹಳ ಮಹತ್ವದ ಕಲ್ಪನೆ. ಆದರೆ ಪ್ರಸ್ತುತ ಸರ್ಕಾರ ಪ್ರತಿಯೊಂದನ್ನು ಕೇಂದ್ರೀಕರಿಸುವುದಕ್ಕೆ ಪ್ರಯತ್ನಿಸಿದೆ. ಆಧಾರ್‌ ವ್ಯವಸ್ಥೆಯೊಂದು ಪ್ರತಿ ಸರ್ಕಾರಿ ಸೇವೆ ಪಡೆಯಲು ಕಡ್ಡಾಯಗೊಳಿಸಿದ್ದು ಇಂಥದ್ದೇ ಹೆಜ್ಜೆ. ಈಗ ರೈತರ ಮಾಹಿತಿಯನ್ನು ಕೇಂದ್ರೀಕರಿಸಿ, ನಿಯಂತ್ರಿಸಲು ಹೊರಟಿದೆ. ಆಧಾರ್‌ ಮಾದರಿಯಲ್ಲೇ ರೈತರಿಗೆ ಗುರುತಿನ ಚೀಟಿಯನ್ನು ಕೊಡಲು ಹೊರಟಿದೆ. ಆದರೆ ಆಧಾರ್‌ ಮಾಹಿತಿ ಸುರಕ್ಷತೆ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಕಳೆದ ಎರಡು ಮೂರು ವರ್ಷಗಳಲ್ಲಿ ಹೊರಬಿದ್ದ ಸುದ್ದಿಗಳೇ ಹೇಳುತ್ತವೆ. ಡಿಜಿಟಲ್‌  ಮಾಹಿತಿಯ ಸುರಕ್ಷತೆಯ ಬಗ್ಗೆ ಭರವಸೆ ಮೂಡಿಸುವ ಒಂದೇ ಒಂದು ನಡೆಯನ್ನು ಈ ಸರ್ಕಾರ ಅನುಸರಿಸಿಲ್ಲ. ಆದರೆ ಎಲ್ಲ ರೀತಿಯ ಮಾಹಿತಿಯನ್ನು ಬಾಚುವ ಯೋಜನೆಗಳನ್ನು ಜಾರಿಗೆ ತರುತ್ತಿದೆ (ಸೆ. 27ಕ್ಕೆ ರಾಷ್ಟ್ರೀಯ ಹೆಲ್ತ್‌ ಮಿಷನ್‌ ಜಾರಿಗೆ ಬರುತ್ತಿರುವುದನ್ನು ಗಮನಿಸಿ).  ಸರ್ಕಾರಕ್ಕಿಂತ ಹೆಚ್ಚು ಖಾಸಗಿ ಸಂಸ್ಥೆಯ ಪಾಲ್ಗೊಳ್ಳುವಿಕೆ ಇನ್ನಷ್ಟು ಭಯ ಹುಟ್ಟಿಸುವಂತಹದ್ದು. ರೈತನ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುವ ಈ ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೂ ಅವಕಾಶಗಳಿಲ್ಲದಂತೆ ಸರ್ಕಾರ ನಿಶ್ಯಸ್ತ್ರಗೊಳಿಸಿದೇ ಎಂಬುದನ್ನು ಹೇಗೆ ಅರಗಿಸಿಕೊಳ್ಳಲುಸಾಧ್ಯ?!

(ಮಾಹಿತಿ : ವಿವಿಧ ಮೂಲಗಳಿಂದ)


ಇದನ್ನೂ ಓದಿ: ವಿವಾದಾತ್ಮಕ ಕೃಷಿ ಕಾಯ್ದೆಗಳ ಹಿಂದೆ ಮೈಕ್ರೋಸಾಫ್ಟ್, ಅಮೆಜಾನ್ ಕಂಪನಿಗಳ ಲಾಬಿ: ಕುಮಾರ್ ಎಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದರಲ್ಲಿ ಲಾಭ ಇದೆ. ಸಣ್ಣ ಪುಟ್ಟ ತೊಂದರೆ ಇದ್ರ್ ಸರಿ ಮಾಡ್ತಾರೆ. ಯಾರ ದಾಟ್ ಲೀಕ್ ಆದ್ರೆ ಯಾಕೆ ಹೆದರುತ್ತೀರಿ. ಕಳ್ಳರು ಮಾತ್ರ ಡಾಟ ಲೀಕ್ ಆಯ್ತು ಅಂತ ಹೊಯ್ಕೋಳ್ಳೋದು

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...