ಎಪಿಎಂಸಿ ಕಾಯ್ದೆ ತಿದ್ದುಪಡಿಯ ವಿರುದ್ಧ ಲಾಕ್‌ಡೌನ್‌ ನಡುವೆಯೇ ಬೀದಿಗಿಳಿದ ರೈತರು

ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಗರಿಬೊಮ್ಮನಹಳ್ಳಿಯಲ್ಲಿ ಲಾಕ್‌ಡೌನ್‌ ನಡುವೆಯೆ ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಜರುಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ನಿಯಂತ್ರಕ ಪಾತ್ರವನ್ನು ಕಡಿಮೆ ಮಾಡುವ ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ 2017ರ ಸೆಕ್ಷನ್‌ 8 ಅನ್ನು ತಿದ್ದುಪಡಿ ಮಾಡಬಾರದು ಎಂದು ರೈತರು ಆಗ್ರಹಿಸಿದ್ದಾರೆ.

ರೈತ ಮುಖಂಡ ಜೆ.ಎಂ ವೀರಸಂಗಯ್ಯ ಮಾತನಾಡಿ “ಎಪಿಎಂಸಿಯನ್ನು ಅಭಿವೃದ್ದಿಪಡಿಸುವ ಬದಲಾಗಿ ಉದ್ದಿಮೆದಾರರು ಆನ್‌ಲೈನ್‌ ಮೂಲಕ ತಾವು ಇದ್ದಲಿಂದಲೇ ರೈತರಿಂದ ನೇರವಾಗಿ ಕೊಳ್ಳಬಹುದು ಎಂಬ ತಿದ್ದುಪಡಿ ಮಾಡುವುದು ಮಾರಕವಾಗಿದೆ. ಇದರಿಂದ ರೈತರು ಸಂಪೂರ್ಣವಾಗಿ ನಾಶವಾಗುತ್ತಾರೆ. ಇದು ದಳ್ಳಾಳಿಗಳ ಪರವಾಗಿ, ವ್ಯಾಪರಸ್ಥರ ಪರವಾಗಿದೆಯೇ ಹೊರತು ರೈತರ ಪರವಾಗಿಲ್ಲ” ಎಂದು ಕಿಡಿಕಾರಿದ್ದಾರೆ.

APMC ಕಾಯ್ದೆಗೆ ತಿದ್ದುಪಡಿ: ರೈತರ ಸರ್ವನಾಶಕ್ಕೆ ದಾರಿ – ಜೆ.ಎಂ ವೀರಸಂಗಯ್ಯ

APMC ಕಾಯ್ದೆಗೆ ತಿದ್ದುಪಡಿ: ರೈತರ ಸರ್ವನಾಶಕ್ಕೆ ದಾರಿ – ಜೆ.ಎಂ ವೀರಸಂಗಯ್ಯ

Posted by Naanu Gauri on Tuesday, May 12, 2020

ರೈತರು ಎಪಿಎಂಸಿ ಮಾರುಕಟ್ಟೆಗೆ ತಮ್ಮ ಬೆಳೆಗಳನ್ನು ತರುವುದರಿಂದ ಅವರಿಗೆ ಬೆಲೆಯ ಖಾತ್ರಿ ಇರುತ್ತದೆ. ಇಲ್ಲಿ ಎಲ್ಲಾ ರೈತರ ಬೆಳೆಗಳಿಗೆ ಒಂದೇ ಬೆಲೆ ಇರುವುದರಿಂದ ಉದ್ದಿಮೆದಾರರು ಅದೇ ಬೆಲೆಗೆ ಕೊಳ್ಳುತ್ತಾರೆ. ಇದನ್ನು ಬಿಟ್ಟು ಹೊಸ ತಿದ್ದುಪಡಿಯಿಂದ ರೈತರು ಇರುವಲ್ಲಿಯೇ ಕೊಳ್ಳಲು ಹೋದರೆ ಅಲ್ಲಿ ವ್ಯಾಪರಸ್ಥರ ಕೈ ಮೇಲಾಗಿ ಬೆಲೆಗಳಲ್ಲಿ ಏರಿಳಿತ ಕಂಡುಬರುತ್ತದೆ. ರೈತರು ತಮ್ಮ ಬೆಳೆ ನಾಶವಾಗುವ ಭಯದಲ್ಲಿ ಸಿಕ್ಕಷ್ಟು ಬೆಲೆಗೆ ಮಾರಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾರುಕಟ್ಟೆಯನ್ನೇ ಮುಚ್ಚುವ ಯೋಜನೆ: ಹೆಚ್‌ಡಿಕೆ ಕಿಡಿ

“ಪ್ರಧಾನ ಮಂತ್ರಿಗಳ ಆದೇಶದ ಮೇರೆಗೆ ಎಪಿಎಂಸಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಹೊರಟಿದೆ. ಆದರೆ, ಈ ತಿದ್ದುಪಡಿಯಿಂದ 600 ಕೋಟಿ ರೂ ರಾಜ್ಯ ಸರ್ಕಾರಕ್ಕೆ ಕಡಿತ ಆಗುತ್ತದೆ. ಅಲ್ಲದೆ, ಇದು ಎಪಿಎಂಸಿ ಮಾರುಕಟ್ಟೆಯನ್ನೇ ಮುಚ್ಚುವ ಯೋಜನೆ” ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

“ಮಹಾರಾಷ್ಟ್ರದಲ್ಲಿ ಇಂತಹ ಯೋಜನೆಗಳನ್ನ ಜಾರಿಗೆ ತಂದು ಅದು ಫೇಲ್ ಆಗಿದೆ. ಹೀಗಾಗಿ ಇದೀಗ ಆ ರಾಜ್ಯದಲ್ಲಿ ಮತ್ತೆ ಮೊದಲಿನ ಹಾಗೆ ಮಾಡಲು ಮುಂದಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಸರ್ಕಾರ ರೈತರ ಬುಡಕ್ಕೆ ತರಲು ಹೊರಟಿದ್ದಾರೆ. ಎಪಿಎಂಸಿ ಅಧಿಕಾರ ಮೊಟಕುಗೊಳಿಸಿ ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದ್ದಾರೆ.

ರೈತನ ಹೊಲದಲ್ಲೇ ಯಾರೋ ಬಂದು ಬೆಳೆ ಖರೀದಿ ಮಾಡಿ ಮೋಸ ಮಾಡಿ ಹೋದ್ರೆ ರೈತರಿಗೆ ಹೇಗೆ ನ್ಯಾಯ ಕೊಡಿಸುತ್ತೀರಾ? ಇದರ ಅವಶ್ಯಕತೆ ಏನಿದೆ? ತರಾತುರಿಯಲ್ಲಿ ಯಾಕೆ ಜನ ವಿರೋಧಿ ಕಾನೂನುಗಳನ್ನ ತರ್ತೀರಾ? ಉಳ್ಳವರಿಗೆ ಸಂತೃಪ್ತಿಗೊಳಿಸಲು ಈ ರೀತಿ ಮಾಡ್ತಿದ್ದೀರಾ? ಹಾಗೆ ಹೊಸ ಕಾನೂನು ಜಾರಿಗೆ ತರಲೇ ಬೇಕು ಎಂದರೆ ತಕ್ಷಣ ಅಧಿವೇಶನ ಕರೆಯಿರಿ” ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.


ಇದನ್ನೂ ಓದಿ: ಮಣಿವಣ್ಣನ್ ವರ್ಗಾವಣೆ ರದ್ದುಗೊಳಿಸದಿದ್ದರೆ ಹೋರಾಟ – ಕಾರ್ಮಿಕ ಸಂಘಟನೆಗಳ ಎಚ್ಚರಿಕೆ 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಕಾರ್ಮಿಕರ ಬದುಕನ್ನು ಮೂರಾಬಟ್ಟೆ ಮಾಡಿದ ಮನುವಾದಿಗಳ ಕಣ್ಣು ಈಗ ರೈತರ ಮೇಲೆ ಬಿದ್ದಿದೆ.

LEAVE A REPLY

Please enter your comment!
Please enter your name here