Homeಕರ್ನಾಟಕಬಲವಂತವಾಗಿ ಭೂಸ್ವಾಧೀನ; ಬಿಡಿಎ ವಿರುದ್ಧ ಪೊರಕೆ ಹಿಡಿದು ಬೃಹತ್ ಪ್ರತಿಭಟನೆ

ಬಲವಂತವಾಗಿ ಭೂಸ್ವಾಧೀನ; ಬಿಡಿಎ ವಿರುದ್ಧ ಪೊರಕೆ ಹಿಡಿದು ಬೃಹತ್ ಪ್ರತಿಭಟನೆ

- Advertisement -
- Advertisement -

ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಇಂದು (ಫೆಬ್ರವರಿ 6) ಪೊರಕೆ ಚಳವಳಿ ನಡೆಯಿತು.

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಸುತ್ತಮುತ್ತಲ 17 ಗ್ರಾಮಗಳ ರೈತರು, ದಲಿತರು, ಹಿಂದುಳಿದ ವರ್ಗಗಳ ಜನರಿಗೆ ಸೇರಿದ ಭೂಮಿ ಹಾಗೂ ಮನೆಗಳನ್ನು ಹಳೆ ಭೂಸ್ವಾಧೀನ ಕಾಯ್ದೆ ಅಡಿಯಲ್ಲಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಮಗೊಂಡನಹಳ್ಳಿಯಿಂದ ಹಿಡಿದು ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಕಚೇರಿಯವರೆಗೆ ನೂರಾರು ಮಹಿಳೆಯರು ಕೈಯಲ್ಲಿ ಪೊರೆಕೆ ಹಿಡಿದು ನಡೆದು ಬಂದರು. ಸತತವಾಗಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಲಾಯಿತು.

ಕಳೆದ ಸಂಕ್ರಾಂತಿಯಂದು ಇದೇ ರೀತಿಯಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಗಿತ್ತು. ಅಂದು 17 ಗ್ರಾಮಗಳ ಮಹಿಳೆಯರು ಪೂರ್ಣಕುಂಭ ಕಳಶಗಳೊಂದಿಗೆ ಆಗಮಿಸಿದ್ದರು. ಗೋವುಗಳನ್ನು ಅಲಂಕರಿಸಿಕೊಂಡು ರಾಮಗೊಂಡನಹಳ್ಳಿಯಿಂದ ಬಿಡಿಎ ಕಚೇರಿಯವರೆಗೆ ಗೋವುಗಳ ಬೃಹತ್‌ ಜಾಥಾ ನಡೆಸಲಾಗಿತ್ತು.

ಏನಿದು ವಿವಾದ?

17 ಗ್ರಾಮಗಳ ಸುಮಾರು 2,000ಕ್ಕೂ ಹೆಚ್ಚು ಕುಟುಂಬಗಳು ಇರುವ ತುಂಡು ಭೂಮಿಯನ್ನು ನಂಬಿಕೊಂಡು ಕೃಷಿ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಸಣ್ಣ ಪುಟ್ಟ ಮನೆಗಳನ್ನು ನಿರ್ಮಿಸಿಕೊಂಡು, ಹೈನುಗಾರಿಕೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಭೂ ಸ್ವಾಧೀನ ಹೆಸರಿನಲ್ಲಿ ನಮ್ಮನ್ನು ಒಕ್ಕಲೆಬ್ಬಿಸಿ ತಬ್ಬಲಿಗಳಾಗಿ ಮಾಡಬೇಡಿ, ಬೀದಿಪಾಲು ಮಾಡಬೇಡಿ ಎಂದು ಕಳೆದ 3 ವರ್ಷಗಳಿಂದಲೂ ಇಲ್ಲಿನ ನಿವಾಸಿಗಳು ಹೋರಾಟ ನಡೆಸುತ್ತಿದ್ದಾರೆ.

ಬೆಂಗಳೂರು ಅಭಿವೃದ್ದಿಯ ಹೆಸರು ಹೇಳಿ ಇರುವ ಮನೆಗಳನ್ನು ಹೊಡೆದುಹಾಕಿ ಲೇಔಟ್ ನಿರ್ಮಾಣ ಮಾಡಿ ಇನ್ನೊಬ್ಬರಿಗೆ ಸೈಟ್‌ ಕೊಡುವಂತಹದ್ದು ಯಾವ ನ್ಯಾಯ? ನಮ್ಮನ್ನು ನಮ್ಮ ಮೂಲಸ್ಥಳದಿಂದ ದಯವಿಟ್ಟು ಒಕ್ಕಲೆಬ್ಬಿಸಬೇಡಿ ಎಂದು ಜನರು ಬೇಡಿಕೊಂಡರೂ ಸರ್ಕಾರ ಅವರ ಗೋಳು ಕೇಳಲು ಸಿದ್ದವಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಕೆ.ಶಿವರಾಮ ಕಾರಂತ ಬಡಾವಣೆಯನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ವು ಡಿಸೆಂಬರ್ 30, 2008ರಲ್ಲಿ ಹೊರಡಿಸಲಾಗಿದ್ದ ಪೂರ್ವಭಾವಿ ಅಧಿಸೂಚನೆಯ ಅವಧಿ ಮುಗಿದಿದ್ದರೂ ಅದನ್ನೇ ಮುಂದುಮಾಡಿ LAA 1894ರ ಅಡಿಯಲ್ಲಿ 3546 ಎಕರೆ ಮತ್ತು 12 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.

ಆದರೆ ಭೂಮಿಯನ್ನು ಕಳೆದುಕೊಂಡವರಿಗೆ, ʼಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ- 2013ʼ (LARR 2013)ರ ಅನ್ವಯ ಪರಿಹಾರವನ್ನು ಒದಗಿಸಬೇಕು ಎಂದು ದಿನಾಂಕ 03.11.2022 ರಂದು ತನ್ನ ತೀರ್ಪಿತ್ತು ಸರ್ವೋಚ್ಛ ನ್ಯಾಯಾಲಯವು ಭೂಮಿಯನ್ನು ಕಳೆದುಕೊಳ್ಳುವವರ ಹಕ್ಕುಗಳನ್ನು ಎತ್ತಿಹಿಡಿದಿದೆ. ಆ ಪ್ರಕಾರ LARR 2013ಯು ಜಾರಿಗೆ ಬಂದ ನಂತರ  LAA 1894 ಅನ್ನು ಅನ್ವಯಿಸಲಾಗುವುದಿಲ್ಲ. ಆದರೂ ಹಳೆಯ ಕ್ರೂರ ಮತ್ತು ಶೋಷಣೆಯ ಪ್ರತೀಕವಾಗಿರುವ, ವಸಾಹತುಶಾಹಿ ಪಳೆಯುಳಿಕೆ ಭೂಸ್ವಾಧೀನ ಕಾಯಿದೆ- 1894ರಡಿಯಲ್ಲಿ ಭೂಮಿ ವಶಪಡಿಸಿಕೊಂಡು ನಮ್ಮನ್ನು ಬೀದಿಗೆ ತಳ್ಳಲಾಗುತ್ತಿದೆ ಎನ್ನುತ್ತಿದ್ದಾರೆ ಇಲ್ಲಿನ ನಿವಾಸಿಗಳು.

ಸದರಿ ಲೇಔಟ್‌ ನಿರ್ಮಾಣಕ್ಕೆ ತೀರ ಅಗತ್ಯವಿದಲ್ಲಿ ಮಾತ್ರವೇ ನಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ಈ ಪ್ರಕ್ರಿಯೆಯು LARR 2013 ಕಾಯ್ದೆಯಡಿಯಲ್ಲಿ ಉಲ್ಲೇಖಿಸಲಾಗಿರುವ ಕಾರ್ಯವಿಧಾನಗಳನ್ನು ಅನುಸರಿಸಿಯೇ ಭೂಸ್ವಾಧೀನ ಪಡಿಸಿಕೊಳ್ಳಬೇಕೆಂಬ ಮನವಿಯನ್ನು ರಾಜ್ಯ ಸರ್ಕಾರದ ಬಳಿ ಸಲ್ಲಿಸುತ್ತಲೇ ಬಂದಿದ್ದೇವೆ. ಆಶ್ಚರ್ಯವೆಂಬಂತೆ ಹಾಗೂ ಗೊಂದಲಕಾರಿಯಾಗಿ BDAಯು ದಿನಾಂಕ 30.10.2018 ರಂದು LARR 2013ರ ನಿಬಂಧನೆಗಳಡಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿತು. ಆದರೂ ನ್ಯಾಯಮೂರ್ತಿ ಅಬ್ದುಲ್ ನಜೀರ್ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ದಿನಾಂಕ 03.12.2020ರಂದು ನೀಡಿದ ಆದೇಶದ ಮೂಲಕ ಭೂಮಿಯ ಡಿನೋಟಿಫಿಕೇಶನ್‌ಗಾಗಿ ಅರ್ಜಿಗಳನ್ನು ಪರಿಗಣಿಸಲು ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿಯನ್ನು ಸ್ಥಾಪಿಸಿತು. ಮಾತ್ರವಲ್ಲ ವಸಾಹತುಶಾಹಿ ಕಾಲದ LAA 1894ರ ಪ್ರಕಾರವೇ ಪರಿಹಾರ ನೀಡಬೇಕೆಂದು ತೀರ್ಪಿತ್ತಿತು. ಸರ್ವೋಚ್ಛ ನ್ಯಾಯಾಲದ ಈ ಪೀಠವು ನಮ್ಮ ಮನವಿಯನ್ನು ಆಲಿಸದೆಯೇ ಇಂದಿಗೂ ವಿವಿಧ ಆದೇಶಗಳನ್ನು ನೀಡುತ್ತಲಿದೆ. ಯಾವ ಕಾರಣಕ್ಕೆ ಹೀಗೆ ಎಂದು ನಾವು ಅರಿಯಲು ಸಾಧ್ಯವಾಗುತ್ತಿಲ್ಲವಾದರೂ, ಇದರರ್ಥ LARR, 2013ರ ಅಡಿಯಲ್ಲಿ ನಾವು ಪರಿಹಾರವನ್ನು ಪಡೆದುಕೊಳ್ಳುವ ನಮ್ಮ ಕಾನೂನಾತ್ಮಕ ಹಕ್ಕನ್ನು ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಮಹಾನದಿ ಕೋಲ್‌ ಫೀಲ್ಡ್ಸ್‌ ಪ್ರಕರಣದಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ನೀಡಿದ ತೀರ್ಪೇ ದೇಶದ ಕಾನೂನು. ಇದರನ್ವಯ ಸದರಿ ಪ್ರಕರಣ ಸೇರಿದಂತೆ, ಭೂಸ್ವಾಧೀನ ಪ್ರಕರಣಗಳೆಲ್ಲವುಗಳಲ್ಲಿಯೂ ಭೂಮಿ ಕಳೆದುಕೊಳ್ಳುವವರ ಹಿತಾಸಕ್ತಿಗಳನ್ನೂ – ಹಕ್ಕುಗಳನ್ನೂ ರಕ್ಷಿಸಲಾಗಿದೆ ಎಂಬುದನ್ನು ಕರ್ನಾಟಕ ರಾಜ್ಯ ಸರ್ಕಾರವು ಖಚಿತಪಡಿಸಿಕೊಳ್ಳಬೇಕಿದೆ. ಹಾಗಾಗಿ  ಸದ್ಯ ಚಾಲ್ತಿಯಲ್ಲಿರುವ ಆದೇಶಗಳ ತುರ್ತು ಮರು-ಪರಿಶೀಲನೆಗೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಬೇಕೆಂದು ಕೂಡ ನಾವು ಒತ್ತಾಯಿಸುತ್ತೇವೆ ಎಂದು ನಿವಾಸಿಗಳು ಮನವಿ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...