Homeಮುಖಪುಟರಾಜಕೀಯ ಆರ್ಥಿಕ ವಿಶ್ಲೇಷಕ ಧ್ರುವ್‌ ರಾಠೀ ಯೂಟ್ಯೂಬ್‌ ಚಾನೆಲ್‌ಗೆ 1 ಕೋಟಿ ಚಂದಾದಾರರು!

ರಾಜಕೀಯ ಆರ್ಥಿಕ ವಿಶ್ಲೇಷಕ ಧ್ರುವ್‌ ರಾಠೀ ಯೂಟ್ಯೂಬ್‌ ಚಾನೆಲ್‌ಗೆ 1 ಕೋಟಿ ಚಂದಾದಾರರು!

ಈ ಹತ್ತು ವರ್ಷಗಳಲ್ಲಿ ಅವರು ಮಾಡಿದ 521 ವಿಡಿಯೋಗಳು 135 ಕೋಟಿ ವೀಕ್ಷಣೆ ಪಡೆದಿವೆ.

- Advertisement -
- Advertisement -

ಕೇವಲ 28 ವರ್ಷದ ಯುವಕ ತನ್ನ ಯೂಟ್ಯೂಬ್‌ ಚಾನೆಲ್ ಆರಂಭಿಸಿದ ಹತ್ತೇ ವರ್ಷಗಳಲ್ಲಿ ಬರೋಬ್ಬರಿ 1 ಕೋಟಿ ಚಂದಾದಾರರನ್ನು ಪಡೆದಿದ್ದಾರೆ. ಈ ಹತ್ತು ವರ್ಷಗಳಲ್ಲಿ ಅವರು ಮಾಡಿದ 521 ವಿಡಿಯೋಗಳು 135 ಕೋಟಿ ವೀಕ್ಷಣೆ ಪಡೆದಿವೆ. ಭಾರತದ ಹಲವು ಮುಖ್ಯವಾಹಿನಿ ಮಾಧ್ಯಮಗಳಿಗೆ ಅಷ್ಟೊಂದು ಚಂದಾದಾರರು ಮತ್ತು ವೀಕ್ಷಣೆಗಳನ್ನು ಪಡೆಯಲು ಸಾಧ್ಯವಾಗದಿರುವಾಗ ಆ ಯುವಕ ಮಾಡಿದ ಪವಾಡವಾದರೂ ಏನು? ಇಷ್ಟೊಂದು ಸಣ್ಣ ವಯಸ್ಸಿಗೆ ಇಂತಹ ದೊಡ್ಡ ಸಾಧನೆ ಹೇಗೆ ಸಾಧ್ಯವಾಯಿತು? ಅಷ್ಟಕ್ಕೂ ಆ ಯುವಕ ಯಾರು ಎಂಬುದನ್ನು ನೋಡೋಣ.

ಅವರ ಹೆಸರು ಧ್ರುವ್‌ ರಾಠೀ. ಹರಿಯಾಣದಲ್ಲಿ ಹುಟ್ಟಿ ಪ್ಲಸ್ ಟು ವರೆಗಿನ ಶಿಕ್ಷಣವನ್ನು ಪಡೆದ ನಂತರ, ಜರ್ಮನಿಯಲ್ಲಿ ಬಿ.ಇ ಮೆಕಾನಿಕಲ್ ಇಂಜಿನಿಯರ್ ಮತ್ತು ಮಾಸ್ಟರ್ಸ್ ಇನ್ ರಿನ್ಯುಬಲ್ ಎನರ್ಜಿಯಲ್ಲಿ ಪಿ.ಜಿ ಶಿಕ್ಷಣ ಪಡೆದಿದ್ದಾರೆ. ಓದಿನ ನಡುವೆಯೇ ಸುಳ್ಳು ಸುದ್ದಿಗಳನ್ನು ಬಯಲು ಮಾಡುವುದು, ಪರಿಸರದ ಜಾಗೃತಿ ಮೂಡಿಸುವುದು, ಸಾಮಾಜಿಕ, ರಾಜಕೀಯ, ಆರ್ಥಿಕ ವಿಶ್ಲೇಷಣೆಗಳ ಕುರಿತು ಮುಖ್ಯವಾಗಿ ಮುಖ್ಯವಾಹಿನಿ ಮಾಧ್ಯಮ ಮಾತನಾಡದ ವಿಚಾರಗಳ ಕುರಿತು ವಿಡಿಯೋ ಮಾಡುವುದು ಅವರ ಹವ್ಯಾಸ. ಆದರೆ ಆ ಹವ್ಯಾಸವೇ ಈಗ ಪೂರ್ಣಾವಧಿ ಸ್ವತಂತ್ರ ಪತ್ರಕರ್ತನ ಮಟ್ಟಕ್ಕೆ ಅವರನ್ನು ಬೆಳೆಸಿದೆ. ಅವರು ಕೊಡುವ ಮಹತ್ವದ ಕಂಟೆಂಟ್‌ಗಳ ಕಾರಣದಿಂದ ಅವರ ವಿಡಿಯೋಗಳು ಕೋಟ್ಯಂತರ ಸಂಖ್ಯೆಯಲ್ಲಿ ವೀಕ್ಷಿಸಲ್ಪಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿಯುತ್ತಿದೆ.

ಧ್ರುವ್‌ ರಾಠೀ ವಿಶೇಷತೆಯೇನು?

ಧ್ರುವ್‌ ರಾಠೀ ವಿಡಿಯೋಗಳ ಬಗ್ಗೆ ಇಷ್ಟು ಮೆಚ್ಚುಗೆ ಬರಲು ಹಲವು ಕಾರಣಗಳಿವೆ. ಇಂದಿನ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಆಳುವ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿವೆ. ಬೇಕಂತಲೇ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಜನರ ದಿಕ್ಕು ತಪ್ಪಿಸುತ್ತಿವೆ. ಪಕ್ಷದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಬಹಳಷ್ಟು ಪ್ರಜ್ಞಾವಂತರಿಗೆ ಪರ್ಯಾಯ ನಂಬಿಕಾರ್ಹ ಸುದ್ದಿ ಮೂಲಗಳ ಅಗತ್ಯ ಬಿದ್ದಿದೆ. ಅಂತಹ ನಂಬಿಕಾರ್ಹ ಮೂಲಗಳಾಗಿ ಈಗಾಗಲೇ ಪ್ರತೀಕ್ ಸಿನ್ಹಾ ನಡೆಸುವ ಆಲ್ಟ್ ನ್ಯೂಸ್, ಸಿದ್ದಾರ್ಥ್ ವರದರಾಜನ್‍ರವರ ವೈರ್.ಇನ್, ನ್ಯೂಸ್ ಲ್ಯಾಂಡ್ರಿ, ಸ್ಕ್ರೋಲ್.ಇನ್ ಮುಂತಾದ ಜಾಲತಾಣಗಳು ಕೆಲಸ ಮಾಡುತ್ತಿವೆ. ಇವುಗಳ ಜೊತೆಗೆ ಯಾವುದೇ ವಿಷಯದ ಬಗ್ಗೆ ಎಲ್ಲಾ ಕೋನಗಳಿಂದ ಸಾಕಷ್ಟು ಅಧ್ಯಯನ ನಡೆಸಿ, ಅತ್ಯಂತ ಕಡಿಮೆ ಪದಗಳಲ್ಲಿ ಸುಲಲಿತವಾಗಿ ಮತ್ತು ಸರಳವಾಗಿ ಅಷ್ಟೇ ಪರಿಣಾಮಕಾರಿಯಾಗಿ ಹಿಂದಿ ಭಾಷೆಯಲ್ಲಿ ಬಹಳ ಆತ್ಮವಿಶ್ವಾಸದಿಂದ ಮಾತನಾಡಿ ವಿಡಿಯೋ ಎಡಿಟ್ ಮಾಡುವುದು ಧ್ರುವ್‌ ರಾಠೀಯ ಹೆಗ್ಗಳಿಕೆಯಾಗಿದೆ.

ಪೂರ್ವಗ್ರಹಪೀಡಿತರಾಗದೇ ಎಲ್ಲಾ ಸಿದ್ಧಾಂತಗಳನ್ನು ಸಮಗ್ರವಾಗಿ ನೋಡುವುದು, ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಳ್ಳದೇ ಎಲ್ಲಾ ಪಕ್ಷಗಳ ತಪ್ಪುಗಳನ್ನು ವಿಮರ್ಶೆ ಮಾಡುವುದು, ಆ ಪಕ್ಷಗಳ ಮಾಡುವ ಒಳ್ಳೆಯ ಕೆಲಸಗಳನ್ನು ಮುಕ್ತಕಂಠದಿಂದ ಶ್ಲಾಘಿಸುವುದು, ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಟೀಕೆ ಮಾಡುವುದು ಧ್ರುವ್‌ ರಾಠೀಯ ವಿಶೇಷತೆ. ಒಂದು ವಿಡಿಯೋ ಮಾಡಲು ಹೆಚ್ಚು ಕಮ್ಮಿ ಒಂದು ವಾರದಷ್ಟು ಸಮಯ ತೆಗೆದುಕೊಳ್ಳುವ ಅವರು ಅರ್ಧಕ್ಕಿಂತ ಹೆಚ್ಚಿನ ಸಮಯವನ್ನು ಆ ವಿಷಯದ ಅಧ್ಯಯನಕ್ಕೆ ಮೀಸಲಿಡುತ್ತಾರೆ. ಆರಂಭದಲ್ಲಿ ತನ್ನ ಐ ಫೋನ್ ಸ್ವತಃ ರೆಕಾರ್ಡ್ ಮಾಡಿ, ತಾನೇ ಎಡಿಟ್ ಮಾಡಿ ವಿಡಿಯೋ ತಯಾರಿಸುತ್ತಿದ್ದ ಅವರು, ಈಗ ಸಂಶೋಧಕರು, ವಿಡಿಯೋ ಎಡಿಟ್ ಮಾಡುವವರು ಸೇರಿದಂತೆ 5-6 ಜನರ ತಂಡವನ್ನು ಜೊತೆಗಿಟ್ಟುಕೊಂಡಿದ್ದಾರೆ. ವಿಡಿಯೋದ ಕ್ವಾಲಿಟಿ, ತನ್ನ ಸಮಚಿತ್ತದ ಮಾತಿಗೆ ಪೂರಕ ದಾಖಲೆಗಳ ಸ್ಲೈಡ್‍ಗಳು, ಸರಾಸರಿ 10 ನಿಮಿಷ ವಿಡಿಯೋ ಮಾಡುವುದು ಅವರ ವಿಶೇಷತೆಗಳಾಗಿವೆ.

ಸದ್ಯ ಜರ್ಮನಿಯಲ್ಲಿ ನೆಲೆಸಿರುವ ಅವರು ಆಗಾಗ್ಗೆ ಭಾರತಕ್ಕೆ ಭೇಟಿ ಕೊಡುತ್ತಿರುತ್ತಾರೆ. ಸಾರ್ವತ್ರಿಕ ಶಿಕ್ಷಣ, ಉತ್ತಮ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಕಾಳಜಿ ಈ ಮೂರು ಮುಖ್ಯ ವಿಷಯಗಳಿಗೆ ಒತ್ತುಕೊಡಬೇಕು ಎಂಬುದು ಅವರ ಆಶಯ. ಇತಿಹಾಸ, ಜಾಗತಿಕ ರಾಜಕೀಯ, ಆರ್ಥಿಕತೆ, ವಿಜ್ಞಾನ, ಗ್ರೌಂಡ್ ರಿಪೋರ್ಟ್, ಪ್ರಚಲಿತ ವಿಷಯಗಳು, ಸಾಮಾಜಿಕ-ಸಾಂಸ್ಕೃತಿಕ ವಿಷಯಗಳ ಕುರಿತು ಅವರು ಮಾಡಿದ ಒಂದೊಂದು ವಿಡಿಯೋ ಸಹ ಸರಾಸರಿ 40 ಲಕ್ಷದಷ್ಟು ವೀಕ್ಷಣೆಯನ್ನು ಪಡೆದಿವೆ.

ಇಂದು ಯಾವುದೇ ವಿಷಯದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಬೇಕಾದರೆ ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ. ಅಷ್ಟು ಕಷ್ಟ ತೆಗೆದುಕೊಳ್ಳುವ ಬದಲು ಧ್ರುವ್‌ ರಾಠೀ ವಿಡಿಯೋ ನೋಡಿದರೆ ಸಾಕು ಎನ್ನುವವರಿದ್ದಾರೆ. 2013ರಿಂದ ಈ ಯೂಟ್ಯೂಬ್ ಚಾನಲ್ ನಡೆಸುತ್ತಿರುವ ಧೃವ್ ರಾಠೀ ಪ್ರಚಲಿತ ವಿಷಯಗಳ ಬಗ್ಗೆಯೇ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿದ್ದಾರೆ. ಅಂದರೆ ಸಹಜವಾಗಿ ಪ್ರಸ್ತುತ ಮೋದಿ ಸರ್ಕಾರದ ನೀತಿ-ನಿರೂಪಣೆಗಳನ್ನು, ಸುಳ್ಳುಗಳನ್ನು ಆಧಾರ ಸಮೇತ ಬಯಲು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಕ್ತರು ಮಾಡುವ ಟ್ರೋಲ್‍ಗಳಿಗೆ ತಲೆಕೆಡಿಸಿಕೊಳ್ಳದ ಧೃವ್ ನಾನು ಬಾಬರ್ ಏನು ಮಾಡಿದ, ನೆಹರು ಏನು ಮಾಡಿದರು ಎಂಬುದರ ಮೇಲೆ ಸಮಯ ವ್ಯರ್ಥ ಮಾಡುವುದಿಲ್ಲ. ಮುಂದೆ ಯಾವುದೇ ಸರ್ಕಾರ ಬಂದರೂ ಅವರ ಮಾಡುವ ಕೆಲಸಗಳ ಆಧಾರದ ಮೇಲೆ ಒಬ್ಬ ಪ್ರಜೆಯಾಗಿ ಸರಿ ತಪ್ಪುಗಳನ್ನು ವಿಶ್ಲೇಷಿಸುತ್ತೇನೆ ಅನ್ನುತ್ತಾರೆ.

ಧೃವ್‌ರಾಠೀಗೆ ಯಾರು ಫಂಡ್ ಮಾಡುತ್ತಾರೆ?

ಹಿಂದೆ ಅವರ ಎಲ್ಲಾ ವಿಡಿಯೋಗಳ ಕಮೆಂಟ್‍ಗಳಲ್ಲಿ ಒಂದು ಸಾಮಾನ್ಯವಾದುದಿರುತ್ತದೆ. ಅದು ಅವರಿಗೆ ಯಾರು ಫಂಡ್ ಮಾಡುತ್ತಾರೆ ಎಂಬುದಾಗಿರುತ್ತದೆ. ಅವರ ಮಾತುಗಳನ್ನು ಸಹಿಸದ ಕೆಲವರು ಕಾಂಗ್ರೆಸ್ ಫಂಡ್ ಮಾಡುತ್ತದೆ, ಆಮ್ ಆದ್ಮಿ ಪಾರ್ಟಿ ಫಂಡ್ ಮಾಡುತ್ತದೆ ಎಂದು ಆರೋಪ ಮಾಡುತ್ತಾರೆ. ಬಿಬಿಸಿ ಸೇರಿದಂತೆ ಹಲವು ವಾಹಿನಿಗಳಿಗೆ ನೀಡಿರುವ ಸಂದರ್ಶನದಲ್ಲಿ ಇದಕ್ಕೆ ಧೃವ್ ಸ್ಪಷ್ಟನೆ ನೀಡಿದ್ದಾರೆ. ಕೋಟ್ಯಾಂತರ ವೀವ್ಸ್ ಆಗುವ ವಿಡಿಯೋಗಳಲ್ಲಿನ ಜಾಹೀರಾತಿನಿಂದ ಬರುವ ಹಣದ ಜೊತೆಗೆ ತನ್ನ ಕೆಲಸ ಇಷ್ಟವಾದಲ್ಲಿ ಪೇಟ್ರಿಯನ್.ಕಾಮ್ ಮೂಲಕ ಹಣ ನೀಡಿ ಬೆಂಬಲಿಸಿ ಎಂದು ಧ್ರುವ್‌ ಮನವಿ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಅವರ ಒಂದೊಂದು ವಿಡಿಯೋಗೂ ಹಲವು ಕಂಪನಿಗಳು, ಹೋಟೆಲ್‌ಗಳು, ಪರ್ಯಾಯ ಮಾಧ್ಯಮಗಳು ಸ್ಪಾನ್ಸರ್ ಮಾಡುವ ಮಟ್ಟಿಗೆ ಅವರು ಬೆಳೆದು ನಿಂತಿದ್ದಾರೆ.

ಬೆಂಬಲದ ಮಹಾಪೂರ

ಅತ್ಯಂತ ಕಡಿಮೆ ವಯಸ್ಸಿನಲ್ಲಿ ದೇಶಕ್ಕೆ ತುರ್ತಾಗಿರುವ ಅತಿ ಮಹತ್ವದ ಕೆಲಸ ಮಾಡುತ್ತಿರುವುದಕ್ಕಾಗಿ ಧ್ರುವ್‌ ರಾಠೀಗೆ ಬೆಂಬಲದ ಮಹಾಪೂರವೇ ಹರಿದುಬರುತ್ತಿದೆ. ಎನ್‍ಡಿಟಿವಿಯ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ತನ್ನ ಪ್ರೈಮ್‍ಟೈಮ್‍ನಲ್ಲಿ ಅವರ ಸಂದರ್ಶನ ಮಾಡಿದ್ದಾರೆ. ಉಳಿದಂತೆ ಖ್ಯಾತ ಪತ್ರಕರ್ತೆ ಮತ್ತು ಸಂಪಾದಕಿ ಫಯಾ ಡಿಸೋಜ, ಬಿಬಿಸಿ, ನ್ಯೂಸ್‍ಲಾಂಡ್ರಿ ಮುಂತಾದವರು ಅವರ ಸಂದರ್ಶನಗಳನ್ನು ಪ್ರಕಟಿಸಿದ್ದಾರೆ. ತನ್ನ ವಿಡಿಯೋಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತಿಯಾಗಿರುವ ಬ್ರಟ್ ಇಂಡಿಯಾ ಹಲವು ಜಾಗೃತಿ ವಿಡಿಯೋಗಳನ್ನು ಧೃವ್ ಸಹಯೋಗದಲ್ಲಿ ತಯಾರಿಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಡಿಕೋಡ್ ವಿತ್ ಧ್ರುವ್ ಎಂಬ ಶೋ ನಡೆಸಿಕೊಟ್ಟಿದ್ದಾರೆ. ಸ್ಪಾರ್ಟಿಫೈನಲ್ಲಿ ಇವರ ಮಹಾಭಾರತ ಪಾಡ್‌ಕಾಸ್ಟ್‌ಗಳು ಪ್ರಸಾರವಾಗಿವೆ.

ತನ್ನ ಅಧ್ಯಯನದ ಭಾಗವಾಗಿ ಪ್ರವಾಸದ ವಿಡಿಯೋಗಳನ್ನು ಪ್ರಸಾರ ಮಾಡಲು ಧ್ರುವ್‌ ರಾಠೀ ವ್ಲೋಗ್ ಎಂಬ ಚಾನೆಲ್ ಮಾಡಿರುವ ಅವರು ಅದಕ್ಕೂ 17 ಲಕ್ಷ ಚಂದಾದಾರರನ್ನು ಪಡೆದಿದ್ದಾರೆ. ತನ್ನ ಬಹುಕಾಲದ ಗೆಳತಿ ಜೂಲಿ ಎಲ್ಬಿಆರ್ ಯೊಂದಿಗೆ ಅವರು ಪ್ರಪಂಚ ಸುತ್ತಿದ ವಿಡಿಯೋಗಳನ್ನು ನೋಡಬಹುದು. ಧ್ರುವ್‌ ರಾಠೀ ಜೂಲಿ ಎಲ್ಬಿಆರ್‌ರನ್ನು 2021ರಲ್ಲಿ ಮದುವೆಯಾದರು. ಸಣ್ಣ ವಿಡಿಯೋಗಳಿಗಾಗಿ ಧ್ರುವ್‌ ರಾಠೀ ಶಾರ್ಟ್ಸ್‌ ಚಾನೆಲ್ ಮಾಡಿದ್ದು ಅದಕ್ಕೆ ಸದ್ಯ 19 ಲಕ್ಷ ಚಂದಾದಾರರಿದ್ದಾರೆ.

ಧ್ರುವ್ ರಾಠೀ ಮಾತ್ರವಲ್ಲ

ಈ ರೀತಿ ಯೂಟ್ಯೂಬ್ ಚಾನಲ್ ವಿಡಿಯೋಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಧ್ರುವ್ ಮಾತ್ರವಲ್ಲ. ನೂರಾರು ಜನ ಈ ರೀತಿಯ ಕೆಲಸದಲ್ಲಿ ತೊಡಗಿದ್ದಾರೆ. ಇತ್ತೀಚಿಗೆ ಎನ್‌ಡಿಟಿವಿ ತೊರೆದ ರವೀಶ್ ಕುಮಾರ್‌ ರವರ ಚಾನೆಲ್‌ಗೆ ಈಗಾಗಲೇ 46 ಲಕ್ಷ ಚಂದಾದಾರರಿದ್ದಾರೆ. ಸ್ವತಂತ್ರ ಪತ್ರಕರ್ತರಾದ ಪುಣ್ಯ ಪ್ರಸೂನ್ ಬಾಜಪೇಯಿ, ಅಜಿತ್ ಅಂಜುಮ್ ಮುಂತಾದವರು ಇದೇ ಪ್ರಯತ್ನ ನಡೆಸುತ್ತಿದ್ದಾರೆ. ಆಕಾಶ್ ಬ್ಯಾನರ್ಜಿ ಎಂಬುವವರು ಸಹ ತಮ್ಮ ವಿಶಿಷ್ಟ ಮ್ಯಾನರಿಸಂನ ಮೂಲಕ ಟ್ರೋಲ್ ಮಾಡುತ್ತಾರೆ. ಕುನಾಲ್ ಕಮ್ರ, ಮುನಾವರ್ ಫಾರೂಕಿ ತರಹದ ಸ್ಟ್ಯಾಂಡಪ್ ಕಾಮಿಡಿಯನ್‌ಗಳು ತಮ್ಮದೇ ಪ್ರಯತ್ನ ಮುಂದುವರೆಸಿದ್ದಾರೆ.

ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದ ಎನ್‌ಡಿಟಿವಿ, ಕ್ವಿಂಟ್‌ನಂತಹ ದೈತ್ಯ ಕಂಪನಿಗಳೇ ಸದ್ಯ ಅದಾನಿ ಪಾಲಾಗಿವೆ. ರಿಲಯನ್ಸ್- ಝೀ ಸಮೂಹಗಳ ಒಡೆತನದಲ್ಲಿಯೇ ಈ ದೇಶದ ಬಹುಪಾಲು ಮಾಧ್ಯಮಗಳಿವೆ. ಇಂತಹ ಸಂದರ್ಭದಲ್ಲಿ ಸ್ವತಂತ್ರ ಪತ್ರಕರ್ತರ ಅಗತ್ಯ ಹಿಂದಿಗಿಂತಲೂ ಅತಿ ಹೆಚ್ಚಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಧೃವ್‌ ರಾಠೀ ಸೇರಿದಂತೆ ಇತರ ಎಲ್ಲಾ ಪತ್ರಕರ್ತರೂ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಬೇಕಿದೆ.

ಇದನ್ನೂ ಓದಿ: ಅದಾನಿ ಸಮೂಹದ ಬಗ್ಗೆ ಎದ್ದಿರುವ ಆರೋಪಗಳಿಗೆ ಉತ್ತರಿಸುವ ಉತ್ತರದಾಯಿತ್ವ ಯಾರದ್ದು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...