ಕೂಡಲೇ 4G, 5G ಸೇವೆ ನೀಡುವುದರ ಮೂಲಕ ಸಾರ್ವಜನಿಕ ಉದ್ಯಮವಾದ BSNL ಉಳಿಸಬೇಕು ಎಂದು ಒತ್ತಾಯಿಸಿ ಬಿಎಸ್‌ಎನ್‌ಎಲ್ ಅಧಿಕಾರಿಯೇತರ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಇಂದು ದೇಶಾದ್ಯಂತ ಮಾನವ ಸರಪಳಿ ಪ್ರತಿಭಟನೆ ನಡೆಯಿತು.
ಬೆಂಗಳೂರಿನ ಕಬ್ಬನ್ ಪಾರ್ಕ್ ಎದುರು ಭಿತ್ತಿಫಲಕ ಹಿಡಿದು ಬಿಎಸ್‌ಎನ್‌ಎಲ್ ನೌಕರರು ಪ್ರತಿಭಟನೆ ನಡೆಸಿದರು. ಬಿಎಸ್‌ಎನ್‌ಎಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಕೆ.ಗುಂಡಣ್ಣ ಮಾತನಾಡಿ, “ಖಾಸಗಿ ಟೆಲಿಕಾಂ ಸಂಸ್ಥೆಗಳು ಈಗಾಗಲೇ 5G ಸೇವೆ ನೀಡುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಇನ್ನೂ 4G ಸೇವೆ ನೀಡಲು ಸಾಧ್ಯವಾಗಿಲ್ಲ. 4ಜಿ ಸೇವೆ ನೀಡಲು ಇನ್ನು 18 ತಿಂಗಳು ಬೇಕಾಗಬಹುದು ಎಂದು ಮಾಹಿತಿ ಸಿಕ್ಕಿದೆ. ಕೇವಲ 4ಜಿ ಸೇವೆ ನೀಡಲು ಒಂದೂವರೆ ವರ್ಷ ಬೇಕಾಗುತ್ತದೆ ಅಂದರೆ ಅಷ್ಟರಲ್ಲಿ ಬಿಎಸ್‌ಎನ್‌ಎಲ್ ಸಂಪೂರ್ಣ ನಿರ್ನಾಮವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
4G, 5G ಸೇವೆ ಇಲ್ಲದ ಏಕೈಕ ಕಾರಣಕ್ಕಾಗಿ ಪ್ರತಿ ತಿಂಗಳು ಲಕ್ಷಾಂತರ ಗ್ರಾಹಕರು ಬಿಎಸ್‌ಎನ್‌ಎಲ್ ತ್ಯಜಿಸುತ್ತಿದ್ದಾರೆ. ಹೀಗಾಗಿ ಬಿಎಸ್‌ಎನ್‌ಎಲ್ ಉಳಿಸಿಕೊಳ್ಳಲು ನಿರಂತರ ಹೋರಾಟಕ್ಕೆ ಮುಂದಾಗಿದ್ದೇವೆ. ಇದೇ ತಿಂಗಳ 16 ರಂದು ಪ್ರತಿ ರಾಜ್ಯಗಳ ರಾಜ್ಯಪಾಲರಿಗೆ ಮನವಿ ನೀಡುತ್ತೇವೆ. ಜುಲೈ 7 ರಂದು ನವದೆಹಲಿಯ ಸಂಚಾರ್ ಭವನ್ ಚಲೋ ಹೋರಾಟ ನಡೆಯಲಿದೆ ಎಂದರು.
4G, 5G ಸೇವೆ ಜೊತೆಗೆ ನಮ್ಮ ಹಳೆಯ ಬೇಡಿಕೆಗಳಾದ 2017ರ ಜನವರಿಯಿಂದ 3ನೇ ವೇತನ ಪರಿಷ್ಕರಣೆ ಆಗಬೇಕಿದೆ. ಮಾತುಕತೆಗಳು ಮುಗಿದರೂ ಬಿಎಸ್‌ಎನ್‌ಎಲ್ ಮ್ಯಾನೇಜ್‌ಮೆಂಟ್ ಕಡೆ ಕ್ಷಣದಲ್ಲಿ ವಂಚಿಸುತ್ತಿದೆ. ಇನ್ನು ಪಿಂಚಣಿ ಪರಿಷ್ಕರಣೆ ಕೂಡ ಆಗಬೇಕು. ಈ ಮೂರು ಹಕ್ಕೊತ್ತಾಯಗಳ ಈಡೇರಿಕೆಗೆ ಹೋರಾಟ ಮಾಡುತ್ತಿದ್ದೇವೆ ಎಂದರು.
ಬಿಎಸ್‌ಎನ್‌ಎಲ್ ಮುಳುಗುತ್ತಿರುವ ಹಡಗು
ಕರ್ನಾಟಕ ರಾಜ್ಯ ಪೊಲೀಸರು ತಾವು ಬಳಸುತ್ತಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್)ನ ತಮ್ಮ ಎಲ್ಲಾ 38,000 ಅಧಿಕೃತ ಮೊಬೈಲ್ ಫೋನ್ ಸಿಮ್ ಕಾರ್ಡ್‌ಗಳನ್ನು ರಿಲಯನ್ಸ್ ಜಿಯೋಗೆ ಪೋರ್ಟ್ ಮಾಡಲು ಕಳೆದ ಫೆಬ್ರವರಿ ತಿಂಗಳಿನಲ್ಲಿಯೇ ನಿರ್ಧರಿಸಿದ್ದಾರೆ.
“ಪೊಲೀಸ್ ವ್ಯವಸ್ಥೆಯಂತಹ ತುರ್ತು ಸೇವೆಗೆ ನೆಟ್‌ವರ್ಕ್ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಲಭ್ಯವಿರುವ ನೆಟ್‌ವರ್ಕ್‌ನ ದಕ್ಷತೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ವಾಣಿಜ್ಯಿಕ ನಿರ್ಧಾರವಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಖಾಸಗಿ ಸಂಸ್ಥೆಗಳು 5G ಸೇವೆಗಳನ್ನು ನೀಡುತ್ತಿದ್ದರೆ, ಬಿಎಸ್‌ಎನ್‌ಎಲ್ ಇನ್ನೂ 4G ಸೇವೆಗಳನ್ನೂ ನೀಡುತ್ತಿಲ್ಲ. ನಮ್ಮಂಥವರ ತುರ್ತು ಸೇವೆಗೆ ಇದು ತೊಂದರೆಯುಂಟುಮಾಡಿದೆ. ವಾಣಿಜ್ಯ ಮೌಲ್ಯಮಾಪನದ ನಂತರ, ‘ಕರ್ನಾಟಕ ಟ್ರಾನ್ಸ್‌ಪರೆನ್ಸಿ ಇನ್ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಆಕ್ಟ್’ 1999ರ ಪ್ರಕಾರ ರಿಲಯನ್ಸ್ ಜಿಯೋವನ್ನು ಪರ್ಯಾಯ ಸೇವಾ ಪೂರೈಕೆದಾರರಾಗಿ ಆಯ್ಕೆ ಮಾಡಲಾಗಿದೆ” ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಭಾರತೀಯ ರೈಲ್ವೇ ಮತ್ತು ತೆಲಂಗಾಣ ಪೊಲೀಸ್ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಇಲಾಖೆಗಳಲ್ಲಿ ರಿಲಯನ್ಸ್ ಜಿಯೋಗೆ ಪೋರ್ಟ್ ಆಗಲು ನಿರ್ದೇಶನ ನೀಡಲಾಗಿದೆ. ಒಟ್ಟಾರೆಯಾಗಿ ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಯೊಂದು ಸರ್ಕಾರದ ನಿರ್ಲಕ್ಷ್ಯ ಮತ್ತು ಖಾಸಗಿಯವರ ಲಾಬಿಗೆ ಕೊನೆಯುಸಿರೆಳೆಯುವ ಸ್ಥಿತಿಗೆ ಬಂದು ತಲುಪಿದೆ.
ಇದನ್ನೂ ಓದಿ: BSNL ದುಸ್ಥಿತಿಗೆ ಕೇಂದ್ರ ಸರ್ಕಾರವೇ ಹೊಣೆ: ಹಾಗಾದರೆ ಯಾರು ದೇಶದ್ರೋಹಿಗಳು?