ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ ನೀಡಿ: ರಾಜ್ಯಗಳಿಗೆ ಸುಪ್ರೀಂ ಆದೇಶ

ಯಾವುದೇ ಗುರುತನ್ನು ಕೇಳದೇ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ಮತ್ತು ಅಧಿಕಾರಿಗಳು ಗುರುತಿಸಿರುವ ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ ವಿತರಣೆ ಮಾಡುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಆದೇಶ ನೀಡಿದೆ. ಜೊತೆಗೆ, ಈ ಅವಧಿಯಲ್ಲಿ ಪಡಿತರವನ್ನು ಪಡೆದ ಲೈಂಗಿಕ ಕಾರ್ಯಕರ್ತೆಯರ ಸಂಖ್ಯೆಯ ವಿವರಗಳನ್ನು ನೀಡಿ, ನಾಲ್ಕು ವಾರಗಳಲ್ಲಿ ಅನುಸರಣೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೂ ಆಗ್ರಹಿಸಿದೆ.

ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಅಜಯ್ ರಾಸ್ತೋಗಿ ಅವರನ್ನೊಳಗೊಂಡ ನ್ಯಾಯಪೀಠವು “ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗೆ ಹಣಕಾಸಿನ ನೆರವು ನೀಡಬಹುದೇ ಎಂಬ ಅಂಶದ ಬಗ್ಗೆ ನಂತರ ವ್ಯವಹರಿಸುವುದಾಗಿ” ಹೇಳಿದೆ.

ಕೊರೊನಾ ಸಾಂಕ್ರಾಮಿಕ ರೋಗದ ಕಾರಣ ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಯನ್ನು ಧ್ವನಿಸುವ ಮನವಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿ, ಲೈಂಗಿಕ ಕಾರ್ಯಕರ್ತೆಯರಿಗೂ ಪಡಿತರ ಚೀಟಿ ಮತ್ತು ಇತರ ಸೌಲಭ್ಯಗಳನ್ನು ಅವರು ಹೇಗೆ ಒದಗಿಸುತ್ತಾರೆ ಎಂಬ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ರಾಜ್ಯಗಳನ್ನು ಕೇಳಿದೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.

ಇದನ್ನೂ ಓದಿ: ಮಹಿಳೆಯರು ವೇಶ್ಯೆರಾಗಬೇಕೆಂದು ಕಾರ್ಲ್ ಮಾರ್ಕ್ಸ್ ಎಲ್ಲಿಯೂ ಹೇಳಿಲ್ಲ : ಹಾಗಾದರೆ ಗುರುಮೂರ್ತಿಯವರು ಸುಳ್ಳು ಹೇಳಿದ್ದೇಕೆ?? – ಹರ್ಷ ಕುಮಾರ್‌…

“ನೆರವು ನೀಡಲು ರಾಜ್ಯಗಳು ಮುಂದೆ ಬರುತ್ತಿವೆ ಎಂಬ ಅಂಶಗಳ ಬಗ್ಗೆ ನಮಗೆ ತಿಳಿದಿದೆ. ಆದರೆ ಸಮಸ್ಯೆಯೆಂದರೆ ಈ ಲೈಂಗಿಕ ಕಾರ್ಯಕರ್ತೆಯರಿಗೆ ಯಾವುದೇ ಗುರುತಿನ ಪುರಾವೆಗಳಿಲ್ಲ. ಆದ್ದರಿಂದ, ಎಲ್ಲರಿಗೂ ಪಡಿತರವನ್ನು ನೀಡಬೇಕು. ಇದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂದು ರಾಜ್ಯಗಳು ನಮಗೆ ತಿಳಿಸಬೇಕು” ಎಂದು ನ್ಯಾಯಪೀಠ ಹೇಳಿದೆ.

ಲೈಂಗಿಕ ಕಾರ್ಯಕರ್ತರಿಗೆ ರಾಜ್ಯಗಳು ಪಡಿತರವನ್ನು ನೀಡುತ್ತಿದ್ದರೆ ಆಕ್ಷೇಪವಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲರು ಹೇಳಿದ್ದಾರೆ.

ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯಂತೆ (ನ್ಯಾಯಾಲಯಗಳ ಸ್ನೇಹಿತ) ಸುಪ್ರೀಂ ಕೋರ್ಟ್‌ಗೆ ಸಹಾಯ ಮಾಡುತ್ತಿರುವ ವಕೀಲ ಪಿಜುಶ್ ಕುಮಾರ್ ರಾಯ್, “ಲೈಂಗಿಕ ಕಾರ್ಯಕರ್ತೆಯರಿಗೆ ಹಣಕಾಸಿನ ನೆರವು ನೀಡುವ ಸಲುವಾಗಿ, ಗುರುತಿನ ಪುರಾವೆಗಳನ್ನು ಒತ್ತಾಯಿಸದೆ ಬ್ಯಾಂಕ್ ಖಾತೆಗಳನ್ನು ಸಹ ತೆರೆಯಬೇಕು” ಎಂದು ಹೇಳಿದರು.

ಇದನ್ನೂ ಓದಿ: ಪ್ಲೇಗ್ ವೇಳೆ ವೇಶ್ಯೆಯರು & ಯಹೂದಿಗಳನ್ನು ಬಲಿಪಶು ಮಾಡಲಾಗಿತ್ತು! ಕೊರೋನ ವೇಳೆಯಲ್ಲಿ?

ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಗಮನಕ್ಕೆ ತೆಗೆದುಕೊಂಡಿತ್ತು. ಗುರುತಿನ ಪುರಾವೆಗಳನ್ನು ಒತ್ತಾಯಿಸದೆ ಮಾಸಿಕ ಪಡಿತರ ವಿತರಣೆ ಮತ್ತು ಹಣ ವರ್ಗಾವಣೆಯ ವಿಧಾನಗಳ ಬಗ್ಗೆ ತಿಳಿಸುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಿತು.

ಎನ್‌ಜಿಒ ಒಂದರ ಪರವಾಗಿ ಹಾಜರಾದ ಹಿರಿಯ ವಕೀಲ ಆನಂದ್ ಗ್ರೋವರ್, “ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣದ 1.2 ಲಕ್ಷ ಲೈಂಗಿಕ ಕಾರ್ಯಕರ್ತರನ್ನೊಳಗೊಂಡು ನಡೆಸಿದ ಸಮೀಕ್ಷೆಯಲ್ಲಿ, ಶೇ. 96 ಪ್ರತಿಶತದಷ್ಟು ಜನರು ಸಾಂಕ್ರಾಮಿಕ ರೋಗದಲ್ಲಿ ತಮ್ಮ ಗಳಿಕೆಯ ಮೂಲವನ್ನು ಕಳೆದುಕೊಂಡಿದ್ದಾರೆ” ಎಂದು ವಾದಿಸಿದ್ದರು.

ಇದನ್ನೂ ಓದಿ: “ಬರುತ್ತೀಯಾ?.. ಕೂರುತ್ತೀಯಾ?: ಭಾರತೀಯ ಸೂಳೆಲೋಕದ ಕಥೆಗಳು” ಪುಸ್ತಕದ ಮುನ್ನುಡಿ

ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ನೇಮಕಗೊಂಡಿರುವ ಹಿರಿಯ ವಕೀಲ ಜಯಂತ್ ಭೂಷಣ್, “ಗುರುತಿನ ಪುರಾವೆಗೆ ಒತ್ತಾಯಿಸದೆ ಪಡಿತರ ಚೀಟಿಗಳನ್ನು ನೀಡಿದರೆ ಲೈಂಗಿಕ ಕಾರ್ಯಕರ್ತೆಯರ ದುಃಸ್ಥಿತಿಯನ್ನು ಪರಿಹರಿಸಬಹುದು” ಎಂದು ಹೇಳಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳನ್ನು ಎತ್ತಿಹಿಡಿಯಲು ಉನ್ನತ ನ್ಯಾಯಾಲಯವನ್ನು ಕೋರಿ, ದೇಶದಾದ್ಯಂತ 9 ಲಕ್ಷಕ್ಕೂ ಹೆಚ್ಚಿರುವ ಮಹಿಳಾ ಮತ್ತು ಟ್ರಾನ್ಸ್‌ಜೆಂಡರ್ ಲೈಂಗಿಕ ಕಾರ್ಯಕರ್ತರಿಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ‘ದರ್ಬಾರ್ ಮಹಿಳಾ ಸಮನ್ವಯ ಸಮಿತಿ’ ಎಂಬ ಎನ್‌ಜಿಒ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.


ಇದನ್ನೂ ಓದಿ: ಮಹಿಳೆ ಮತ್ತು ಬಿಕ್ಕಟ್ಟಿನ ಕಾಲದ ಸಂದಿಗ್ಧಗಳು! – ಮಲ್ಲಿಗೆ ಸಿರಿಮನೆ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts