Homeಅಂಕಣಗಳುಗೌರಿ ಕಾರ್ನರ್: ಹೆಲೆನ್ ಎಂಬ ಹೆಮ್ಮೆಯ ಪತ್ರಕರ್ತೆ...

ಗೌರಿ ಕಾರ್ನರ್: ಹೆಲೆನ್ ಎಂಬ ಹೆಮ್ಮೆಯ ಪತ್ರಕರ್ತೆ…

ಪ್ರಸ್ತುತ ಟೀಕಾ ಪ್ರಹಾರದಿಂದಾಗಿ ಹೆಲೆನ್ ಬಲವಂತವಾಗಿ ನಿವೃತ್ತಿ ಹೊಂದಿದ್ದರೂ ಅವರು ಹಿಂದಿನಿಂದಲೂ ದಿಟ್ಟೆದೆಯ ಪತ್ರಕರ್ತೆಯಾಗಿದ್ದರು; ಅಮೆರಿಕದ ಅಧ್ಯಕ್ಷರನ್ನು ಜಾಲಾಡುತ್ತಿದ್ದರು; ಎಂದಿಗೂ ಜನಪರವಾದ ನಿಲುವನ್ನು ಹೊಂದಿದವರಾಗಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಹೆಲೆನ್ ಪ್ರಶ್ನೆ ಕೇಳಿದರೆ ಅಮೆರಿಕ ಅಧ್ಯಕ್ಷರೇ ನಡುಗುತ್ತಿದ್ದರು.

- Advertisement -
- Advertisement -

ಆಕೆಯ ಹೆಸರು ಹೆಲೆನ್ ಥಾಮಸ್. ಈಗ ಬರೋಬ್ಬರಿ 89 ವರ್ಷ ವಯಸ್ಸಾಗಿರುವ ಹೆಲೆನ್ ಮೊನ್ನೆಮೊನ್ನೆಯವರೆಗೂ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಐದು ಗಂಟೆಗೆ ತಮ್ಮ ಕಚೇರಿಗೆ ಹಾಜರಾಗುತ್ತಿದ್ದರು. ಅಲ್ಲಿ ಜಗತ್ತಿನ ಮೂಲೆಮೂಲೆಗಳಿಂದ ಬಂದಿದ್ದ ಸುದ್ದಿಗಳನ್ನೆಲ್ಲ ಓದಿದ ನಂತರ ತಮ್ಮ ’ಬೀಟ್’ ಮೇಲೆ ಹೊರಡುತ್ತಿದ್ದರು. ಕಳೆದ ನಾಲ್ಕೈದು ದಶಕಗಳಿಂದ ಅವರ ’ಬೀಟ್’ ಜಾಗ ಅಮೆರಿಕದ ಅಧ್ಯಕ್ಷ ಅಥವಾ ಅವರ ಸರ್ಕಾರ ವೈಟ್‌ಹೌಸ್‌ನಲ್ಲಿ ಪ್ರತಿದಿನ ನಡೆಸುವ ಪತ್ರಿಕಾ ಸಭೆಗಳು. ಆ ಪತ್ರಿಕಾ ಸಭೆಗಳಲ್ಲಿ ಹಾಜರಾಗುತ್ತಿದ್ದ ಪತ್ರಕರ್ತರಲ್ಲಿ ಹೆಲೆನ್ ಅತಿ ಹಿರಿಯರಾಗಿದ್ದ ಕಾರಣ ಅವರಿಗೆ ಮೊದಲನೆ ಸಾಲಿನಲ್ಲೇ ಒಂದು ಕುರ್ಚಿಯನ್ನು ನಿಗದಿಪಡಿಸಲಾಗಿತ್ತು. ಮಾತ್ರವಲ್ಲ, ಇತರ ಕುರ್ಚಿಗಳ ಮೇಲೆ ಆಯಾ ಪತ್ರಕರ್ತರು ಪ್ರತಿನಿಧಿಸುವ ಸುದ್ದಿ ಏಜೆನ್ಸಿಗಳ ಅಥವಾ ಮಾಧ್ಯಮಗಳ ಹೆಸರುಗಳನ್ನು ಬರೆಸಿದ್ದರೆ ಹೆಲೆನ್ ಅವರ ಕುರ್ಚಿಗೆ ಆಕೆಯ ಹೆಸರನ್ನೇ ಬರೆಸಲಾಗಿತ್ತು. ಅದರರ್ಥ ಆಕೆ ಅಂಕಣಕಾರರಾಗಿದ್ದ ಹರ್ಸ್ಟ್ ಮಾಧ್ಯಮ ಸಮೂಹಕ್ಕಿಂತ ಹೆಲೆನ್ ಥಾಮಸ್ ಮುಖ್ಯವಾಗಿದ್ದರು ಎಂದು.

ಕೇವಲ ವಯಸ್ಸು ಅಥವಾ ಹಿರಿತನದಿಂದಾಗಿ ಹೆಲೆನ್ ಥಾಮಸ್ ಅವರಿಗೆ ಇಂತಹ ವಿಶೇಷ ಗೌರವಗಳು ಪ್ರಾಪ್ತಿಯಾಗಿರಲಿಲ್ಲ, ಬದಲಾಗಿ ಅವುಗಳನ್ನು ಹೆಲೆನ್ ತಮ್ಮ ಪರಿಶ್ರಮದಿಂದಲೇ ಗಳಿಸಿಕೊಂಡಿದ್ದರು. ಆ ಮೂಲಕ ಆಮೆರಿಕದ ರಾಜಧಾನಿಯಾದ ವಾಷಿಂಗ್ಟನ್‌ನ ಪತ್ರಿಕಾ ತಂಡದ ವರಿಷ್ಠರೆಂದೇ ಪರಿಗಣಿಸಲ್ಪಟ್ಟಿದ್ದರು. ಕೆಲ ತಲೆಮಾರಿನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದರು. ಅದರಲ್ಲೂ ಮಹಿಳೆಯರಿಗೆ ರೋಲ್ ಮಾಡೆಲ್ ಆಗಿದ್ದರು.

ಇಂತಹ ಹೆಲೆನ್ ಅವರನ್ನು ಇತ್ತೀಚೆಗೆ ಬಲವಂತವಾಗಿ ನಿವೃತ್ತಗೊಳಿಸಲಾಯಿತು. ಅವರು ಕೂರುತ್ತಿದ್ದ ವೈಟ್‌ಹೌಸ್ ಕುರ್ಚಿಯ ಮೇಲಿದ್ದ ಅವರ ಹೆಸರನ್ನು ಅಳಿಸಿಹಾಕಲಾಯಿತು. ಸ್ವತಃ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ “ಹೆಲೆನ್ ಹೊರಟುಹೋಗಿದ್ದು ಸ್ವಾಗತಾರ್ಹ ಎಂದು ಘೋಷಿಸಿದರು. ಹೆಲೆನ್‌ರನ್ನು ಆಹ್ವಾನಿಸಿದ್ದ ಕಾರ್ಯಕ್ರಮಗಳಿಂದ ಅವರ ಹೆಸರನ್ನು ಕೈಬಿಡಲಾಯಿತು. ಕೆಲ ಕಾಲೇಜುಗಳು ಹೆಲೆನ್ ಥಾಮಸ್ ಹೆಸರಲ್ಲಿ ತಮ್ಮ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರಶಸ್ತಿಗಳನ್ನು ರದ್ದುಗೊಳಿಸಿದವು.

ರಾತ್ರಿ ಬೆಳಗಾಗುವುದರೊಳಗೆ ಹೆಲೆನ್‌ರನ್ನು ಹೀಗೆ ಅವಮಾನಿಸಿದ್ದಕ್ಕೆ, ಪತ್ರಕರ್ತರೇ ಅವರನ್ನು ದೂರ ಮಾಡಿದ್ದಕ್ಕೆ, ಅಮೆರಿಕದ ಸರ್ಕಾರ ಮತ್ತು ಮಾಧ್ಯಮಗಳು ಆಕೆಯನ್ನು ಹುಚ್ಚಿ ಎಂಬಂತೆ ಚಿತ್ರಿಸಿದ್ದಕ್ಕೆ ಕಾರಣ ಹೆಲನ್ ಅವರು “ಪ್ಯಾಲೆಸ್ಟೇನ್‌ನಿಂದ ಯಹೂದಿಯರು ತೊಲಗಬೇಕು” ಎಂಬ ಹೇಳಿಕೆ ನೀಡಿದ್ದು.

ಒಂದೆರಡು ವಾರಗಳ ಹಿಂದೆ ವೈಟ್‌ಹೌಸ್‌ನಲ್ಲಿನ ಪತ್ರಿಕಾ ಸಭೆ ಮುಗಿಸಿ ಹೆಲೆನ್ ಅವರು ಕಷ್ಟಪಟ್ಟು ರಸ್ತೆಯತ್ತ ನಡೆಯುತ್ತಾ ಬರುತ್ತಿದ್ದರು. ಆಗ ಅವರ ಮುಂದೆ ವಿಡಿಯೋ ಕ್ಯಾಮೆರಾ ಹೊತ್ತು ಪ್ರತ್ಯಕ್ಷನಾದ ಯಹೂದಿ ರಾಬೈ ಒಬ್ಬ ಹೆಲೆನ್‌ರನ್ನು “ಇಸ್ರೇಲ್ ಜನರಿಗೆ ನಿಮ್ಮ ಸಂದೇಶವೇನು?” ಎಂದು ಕೇಳಿದ, ಅದಕ್ಕೆ ಹಲೆನ್ “ಪ್ಯಾಲೆಸ್ಟೇನಿನಿಂದ ಯಹೂದಿಗಳು ತೊಲಗಬೇಕು” ಅಂದರು.
“ಹೌದಾ? ಯಾಕೆ?” ಎಂದ ರಾಬೈ.
“ಅವರು ಅಲ್ಲಿನ ಜಾಗವನ್ನು ಆಕ್ರಮಣ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮರೆಯಬೇಡಿ…..”
“ಅವರು ಎಲ್ಲಿಗೆ ಹೋಗಬೇಕು?”
“ತಮ್ಮ ತಮ್ಮ ದೇಶಗಳಿಗೆ….. ಜರ್ಮನಿ, ಪೋಲೆಂಡ್, ಅಮರಿಕಗಳಿಗೆ ಹಿಂದಿರುಗಬೇಕು….”

ಈ ಚಿಕ್ಕ ಸಂಭಾಷಣೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದ ರಾಬೈ ಅದನ್ನು ಇಂಟರ್‌ನೆಟ್‌ನಲ್ಲಿ ಹಾಕಿದ. ಅದು ಎಲ್ಲೆಡೆ ಹಬ್ಬಿದಂತೆ ಹೆಲೆನ್ ವಿರುದ್ಧದ ದಾಳಿಗಳೂ ಶುರುವಾದವು.

ಅಮೆರಿಕದ ಆಪ್ತ ದೇಶವಾದ ಇಸ್ರೇಲ್ ವಿರುದ್ಧ ಇಂತಹ ಮಾತು ಆಡುವುದೆಂದರೇನು? ಯಹೂದಿಯರನ್ನು ಹೆಲೆನ್ ಹೀಗೆ ಅವಮಾನಿಸಿದ್ದನ್ನು ಹೇಗೆ ಸಹಿಸಲು ಸಾಧ್ಯ? ಎಂದೆಲ್ಲಾ ಅಮೆರಿಕದ ಸರ್ಕಾರ ಮತ್ತು ಮಾಧ್ಯಮಗಳ ವಿರುದ್ಧ ಕಿಡಿಕಾರಿದವು.

ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತೆಂದರೆ ಇದಾದ ಮಾರನೆ ದಿನವೇ ಹೆಲೆನ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು. ವಾಷಿಂಗ್ಟನ್‌ನಲ್ಲಿ ಅತಿ ಶ್ರೇಷ್ಠ ಪತ್ರಕರ್ತರಾಗಿದ್ದ ಹೆಲೆನ್ ಒಂದು ಪುಟ್ಟ ಸಂಭಾಷಣೆಯಿಂದಾಗಿ ಅತಿ ಕನಿಷ್ಠ ಪತ್ರಕರ್ತೆಯಾದರು.

ಪ್ರಸ್ತುತ ಟೀಕಾ ಪ್ರಹಾರದಿಂದಾಗಿ ಹೆಲೆನ್ ಬಲವಂತವಾಗಿ ನಿವೃತ್ತಿಹೊಂದಿದ್ದರೂ ಅವರು ಹಿಂದಿನಿಂದಲೂ ದಿಟ್ಟೆದೆಯ ಪತ್ರಕರ್ತೆಯಾಗಿದ್ದರು; ಅಮೆರಿಕದ ಅಧ್ಯಕ್ಷರನ್ನು ಜಾಲಾಡುತ್ತಿದ್ದರು; ಎಂದಿಗೂ ಜನಪರವಾದ ನಿಲುವನ್ನು ಹೊಂದಿದವರಾಗಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಹೆಲೆನ್ ಪ್ರಶ್ನೆ ಕೇಳಿದರೆ ಅಮೆರಿಕ ಅಧ್ಯಕ್ಷರೇ ನಡುಗುತ್ತಿದ್ದರು.

ಅಮೆರಿಕದ ಹಾಲಿ ಅಧ್ಯಕ್ಷ ಒಬಾಮಾ ಕೂಡ ಹೆಲೆನ್ ಅವರ ಪ್ರಶ್ನೆಯೊಂದರಿಂದ ತಬ್ಬಿಬ್ಬಾದವರು. ಅದು ನಡೆದದ್ದು ಹೀಗೆ: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಒಬಾಮಾ ನಡೆಸಿದ ಪ್ರಥಮ ಪತ್ರಿಕಾಗೋಷ್ಠಿ ಅದಾಗಿತ್ತು. ಸಾಂಪ್ರದಾಯಿಕವಾಗಿ ಮೊದಲನೆ ಪ್ರಶ್ನೆ ಕೇಳುತ್ತಿದ್ದ ಹೆಲನ್‌ರನ್ನು ಉದ್ದೇಶಿಸಿ ಒಬಾಮ ಅವರು “ಹೆಲೆನ್, ನಾನು ಪುಳಕಿತನಾಗಿದ್ದೇನೆ. ನಿಮ್ಮ ಪ್ರಶ್ನೆಯೇ ನನ್ನ ಅಧ್ಯಕ್ಷಾವಧಿಯ ಉದ್ಘಾಟನೆ” ಎಂದು ಹೇಳಿ ಪ್ರಶ್ನೆಯನ್ನು ಕೇಳುವಂತೆ ಹೆಲೆನ್ ಅವರಿಗೆ ಸೂಚಿಸಿದರು. ಪ್ರಾಯಶಃ ಒಬಾಮಾ ಅವರು ಅಂದಿನ ಜಾಗತಿಕ ಆರ್ಥಿಕ ಬಿಕ್ಕಟ್ಟು ಕುರಿತು ಹೆಲೆನ್ ಪ್ರಶ್ನೆ ಕೇಳಬಹುದೆಂದು ಊಹಿಸಿದ್ದರು. ಆದರೆ ಒಬಾಮಾರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ ಹೆಲೆನ್ “ಮಧ್ಯಪ್ರಾಚ್ಯ ದೇಶಗಳಲ್ಲಿ ಯಾವ ಯಾವ ದೇಶಗಳು ಅಣ್ವಸ್ತ್ರಗಳನ್ನು ಹೊಂದಿವೆ?” ಎಂದು ನೂತನ ಅಧ್ಯಕ್ಷ ಒಬಾಮಾರನ್ನು ಕೇಳಿದರು. ಭಾರೀ ಪ್ರಾಮಾಣಿಕನಂತೆ, ಹೊಸ ಆಂದೋಲನವನ್ನೇ ಸೃಷ್ಟಿಸುವವನಂತೆ, ಜಗತ್ತಿನ ಎಲ್ಲ ಅನ್ಯಾಯಗಳನ್ನು ಸರಿಪಡಿಸುವವನಂತೆ ಪೋಸು ಕೊಡುತ್ತಿದ್ದ ಒಬಾಮಾ, ಇಸ್ರೇಲ್ ದೇಶವು ಅಣುಅಸ್ತ್ರಗಳನ್ನು ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಎಂದು ಪರೀಕ್ಷಿಸುವ ಪ್ರಶ್ನೆ ಹೆಲೆನ್‌ರದ್ದಾಗಿತ್ತು. ಹೆಲೆನ್‌ರ ನಿರೀಕ್ಷೆಯನ್ನು ಸುಳ್ಳಾಗಿಸಿದ ಒಬಾಮಾ “ಈ ಪ್ರಶ್ನೆಗೆ ’ಊಹೆ’ಯ ಉತ್ತರವನ್ನು ನೀಡಲು ನಾನು ಬಯಸುವುದಿಲ್ಲ ಎಂದು ಹೇಳಿ ಜಾರಿಕೊಂಡಿದ್ದರು. ಹೆಲೆನ್‌ರ ಮೊದಲ ಪ್ರಶ್ನೆಗೆ ದಂತಭಗ್ನ ಅನುಭವಿಸಿದ ಒಬಾಮಾ ಆನಂತರದ ತಮ್ಮ ಯಾವ ಪತ್ರಿಕಾಗೋಷ್ಠಿಗಳಲ್ಲೂ ಹೆಲೆನ್‌ರಿಂದ ಪ್ರಶ್ನೆಗಳನ್ನು ಸ್ವೀಕರಿಸಲಿಲ್ಲ.

PC : The Denver Post

ಇದರಿಂದ ಹೆಲೆನ್ ಅವರಿಗೆ ಬೇಸರವಾಗಿದ್ದರೂ ಅದನ್ನು ತೋರ್ಪಡಿಸಲಿಲ್ಲ. ಬದಲಾಗಿ ಮುಕ್ತತೆ ಮತ್ತು ಪಾರದರ್ಶಕತೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದ ಒಬಾಮಾರ ಆಡಳಿತವು ಮಾಹಿತಿ ನೀಡುವ ಬಗ್ಗೆ ಕಂಜೂಸಿತನ ಮಾಡುತ್ತಿದ್ದುದ್ದರ ಬಗ್ಗೆ ಹೆಲೆನ್ ಆಕ್ಷೇಪ ವ್ಯಕ್ತಪಡಿಸಿದ್ದರು. “ವೈಟ್‌ಹೌಸ್‌ನಿಂದಲೇ ಎಲ್ಲಾ ಮಾಹಿತಿಗಳ ಮೇಲೆ ಹಿಡಿತ ಸಾಧಿಸಲಾಗಿದೆ. ಹಿಂದಿನ ಸರ್ಕಾರಗಳೂ ಹೀಗೇ ಮಾಡಿದ್ದವು ನಿಜ, ಆದರೆ ಯಾವ ಸರ್ಕಾರವೂ ಈ ಮಟ್ಟದಲ್ಲಿ ಮಾಡಿರಲಿಲ್ಲ. ಮುಕ್ತತೆ ಮತ್ತು ಪಾರದರ್ಶಕತೆ ಬಗ್ಗೆ ಮಾತನಾಡುವ ಜನರೇ ಹೀಗೆ ಮಾಡುತ್ತಾರೆಂಬುದನ್ನು ನಂಬಲಿಕ್ಕಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಹೆಲೆನ್, “ರಿಚರ್ಡ್ ನಿಕ್ಸನ್ (ಅಮೆರಿಕದ ಮಾಜಿ ಅಧ್ಯಕ್ಷ) ಕೂಡ ಮಾಧ್ಯಮಗಳ ಮೇಲೆ ಹಿಡಿತ ಹೊಂದಲು ಯತ್ನಿಸಿದ್ದರು. ಆದರೆ ಅವರು ಕೂಡ ಒಬಾಮಾನಂತೆ ಹಿಡಿತ ಸಾಧಿಸಿರಲಿಲ್ಲ ಎಂದು ಅಸಮಾಧಾನಪಟ್ಟಿದ್ದರು.

ಇತ್ತೀಚೆಗೆ ಅಮೆರಿಕ ಕಂಡ ಅತಿ ದುಷ್ಟ ಅಧ್ಯಕ್ಷ ಜಾರ್ಜ್ ಬುಷ್ ಕೂಡ ಹೆಲೆನ್‌ರ ನೈತಿಕ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ. ಬುಷ್‌ನ ಅಧಿಕಾರಾವಧಿಯಲ್ಲಿ ಹೆಲೆನ್ ಅವರಿಗೆ ಪ್ರತಿನಿತ್ಯದ ಪತ್ರಿಕಾ ಸಭೆಗಳಲ್ಲಿ ತಮ್ಮ ಸಾಂಪ್ರದಾಯಿಕ ಮೊದಲ ಸಾಲಿನ ಸ್ಥಾನ ಸಿಗುತ್ತಿದ್ದರೂ ಅಪರೂಪವಾಗಿ ನಡೆಯುತ್ತಿದ್ದ ಪತ್ರಿಕಾಗೋಷ್ಠಿಗಳಲ್ಲಿ ಅವರನ್ನು ಕೊನೆ ಸಾಲಿನಲ್ಲಿ ಕೂರಿಸಲಾಗುತ್ತಿತ್ತು. ಹೀಗೆ ಯಾಕಾಗುತ್ತಿದೆ ಎಂದು ಯಾರೋ ಹೆಲೆನ್ ಅವರನ್ನು ಕೇಳಿದಾಗ “ಅವರಿಗೆ ನಾನು ಅಂದರೆ ಇಷ್ಟವಿಲ್ಲ. ಏಕೆಂದರೆ ನಾನು ಕಠಿಣವಾದ ಪ್ರಶ್ನೆಗಳನ್ನು ಕೇಳುತ್ತೇನೆ” ಎಂದು ವಿವರಿಸಿದ್ದರು.

ಇದು ಅತಿಶಯೋಕ್ತಿಯಾಗಿರಲಿಲ್ಲ. ಅಮೆರಿಕದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಜಾರ್ಜ್ ಬುಷ್ ಮೂರು ವರ್ಷಗಳ ಕಾಲ ಹೆಲೆನ್ ಅವರಿಂದ ಯಾವ ಪ್ರಶ್ನೆಯನ್ನೂ ಸ್ವೀಕರಿಸಿರಲಿಲ್ಲ. ಆದರೆ ಅದ್ಯಾಕೋ 2006ರಲ್ಲಿ ಹೆಲೆನ್ ಅವರಿಗೆ ಪ್ರಶ್ನೆ ಕೇಳುವ ಅವಕಾಶವನ್ನು ಬುಷ್ ನೀಡಿದರು. ಹೆಲೆನ್ ಆ ಅವಕಾಶವನ್ನು ವ್ಯರ್ಥಗೊಳಿಸಲಿಲ್ಲ. “ಅಧ್ಯಕ್ಷರೆ, ಇರಾಕ್ ಮೇಲಿನ ಯುದ್ಧ ಸಾರುವ ನಿಮ್ಮ ನಿರ್ಧಾರದಿಂದಾಗಿ ಸಾವಿರಾರು ಅಮೆರಿಕನ್ನರು ಮತ್ತು ಇರಾಕಿಗಳು ಸಾವನ್ನಪ್ಪಿದ್ದಾರೆ; ತಮ್ಮ ಜೀವನಪರ್ಯಂತ ಸಾವಿರಾರು ಅಮೆರಿಕನ್ನರು ಮತ್ತು ಇರಾಕಿಗಳು ಅಂಗವಿಕಲರಾಗಿದ್ದಾರೆ. ಈ ಯುದ್ಧಕ್ಕೆ ನೀವು ಸಾರ್ವಜನಿಕವಾಗಿ ನೀಡಿರುವ ಪ್ರತಿಯೊಂದು ಸಬೂಬು ಸತ್ಯವಲ್ಲವೆಂದು ಸಾಬೀತಾಗಿದೆ. ನನ್ನ ಪ್ರಶ್ನೆ ಇಷ್ಟೇ: ಯಾವ ಕಾರಣಕ್ಕೆ ನೀವು ಈ ಯುದ್ಧವನ್ನು ಸಾರಿದ್ದೀರಿ? ನೀವು ವೈಟ್‌ಹೌಸಿಗೆ ಹೆಜ್ಜೆ ಇಟ್ಟಾಗಿನಿಂದ ನೀವು, ನಿಮ್ಮ ಸಚಿವ ಸಂಪುಟ, ನಿಮ್ಮ ಗೂಢಚರ್ಯ ಅಧಿಕಾರಿಗಳು… ಎಲ್ಲರೂ ಈ ಯುದ್ಧವನ್ನು ಸಮರ್ಥಿಸಿಕೊಂಡಿದ್ದೀರಿ. ಆದರೆ ಅದಕ್ಕೆ ನಿಜವಾದ ಕಾರಣಗಳೇನು? ಇದು ತೈಲಕ್ಕಾಗಿ ಅಲ್ಲ. ಇಸ್ರೇಲಿಗಾಗಿ ಅಲ್ಲ, ಬೇರೆ ಇನ್ಯಾವುದೇ ಕಾರಣಕ್ಕಾಗಿ ಅಲ್ಲ ಎಂದಿದ್ದೀರಿ. ಹಾಗಾದರೆ ಈ ಯುದ್ಧಕ್ಕೆ ಕಾರಣವೇನು?”

ಸಹಜವಾಗಿಯೇ ಹೆಲೆನ್‌ರ ಈ ಪ್ರಶ್ನೆಗೆ ಬುಷ್ ನೇರವಾಗಿ, ಸತ್ಯವಾಗಿ ಉತ್ತರಿಸಲಿಲ್ಲ. ಬದಲಾಗಿ ‘ಭಯೋತ್ಪಾದನೆ ವಿರುದ್ಧದ ಸಮರ’ ಎಂದು ಹೇಳಿ ಸದ್ದಾಂ ಹುಸೇನ್ ವಿರುದ್ಧ ಬಡಬಡಿಸಿದ್ದ. ಆನಂತರ ಬುಷ್ ಎಂದೂ ಹೆಲೆನ್‌ರಿಂದ ಪ್ರಶ್ನೆಗಳನ್ನು ಆಹ್ವಾನಿಸಲಿಲ್ಲ! ತನಗನ್ನಿಸಿದ್ದನ್ನು ನೇರವಾಗಿ ಹೇಳುವ ಹೆಲೆನ್ ಒಮ್ಮೆ “ಅಮೆರಿಕದ ಇತಿಹಾಸದಲ್ಲೇ ಅತಿ ಕೆಟ್ಟ ಅಧ್ಯಕ್ಷನನ್ನು ಕಾಣುತ್ತಿದ್ದೇವೆ” ಎಂದು ಬುಷ್ ಬಗ್ಗೆ ಹೇಳಿದ್ದರು. ಇನ್ನೊಂದು ಬಾರಿ ಒಬಾಮಾ ವಿರುದ್ಧ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದ್ದ ಡಿಕ್ ಜೆನಿ ಬಗ್ಗೆ “ಆತ ಸ್ಪರ್ಧಿಸುವ ಸುದ್ದಿ ಕೇಳಿಬಂದ ದಿನ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಮಗೆ ಮತ್ತೊಬ್ಬ ಸುಳ್ಳುಗಾರ ಅಧ್ಯಕ್ಷನಾಗುವುದು ಬೇಕಿಲ್ಲ ಎಂದಿದ್ದರು.

ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಬಗ್ಗೆ ಎಲ್ಲ ಮಾಹಿತಿಯನ್ನು ಜನರಿಗೆ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕರ್ತವ್ಯ ಪತ್ರಕರ್ತರದ್ದು ಎಂಬ ನಂಬಿಕೆ ಹೆಲೆನ್‌ರದ್ದು. ಹಾಗೆಯೇ ಓರ್ವ ಚುನಾಯಿತ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಆತ ಸರ್ವಾಧಿಕಾರಿಯಾಗದಂತೆ ತಡೆಯುವುದೂ ಪತ್ರಿಕೋದ್ಯಮದ ಜವಾಬ್ದಾರಿ ಎಂಬುದು ಅವರ ನಿಲುವು. ಅವರ ಇಂತಹ ಅಭಿಪ್ರಾಯಗಳಿಂದಾಗಿಯೇ ಅವರು 89 ವರ್ಷ ವಯಸ್ಸಿನಲ್ಲೂ ಇನ್ನೂ ಚುರುಕಾಗಿ ಯೋಚಿಸುತ್ತಾರೆ. ಪತ್ರಿಕಾ ಧರ್ಮವನ್ನು ಪಾಲಿಸುತ್ತಾರೆ. ಜನ ಪರವಾಗಿ ನಿಂತು ಅಧಿಕಾರಿ ವರ್ಗವನ್ನು ಪ್ರಶ್ನಿಸುತ್ತಾರೆ.

ಹೆಲೆನ್ ಥಾಮಸ್ ಅವರ ಬಗ್ಗೆ ವಾಷಿಂಗ್ಟನ್ ಪತ್ರಿಕಾ ವಲಯದಲ್ಲಿ ಒಂದು ದಂತಕತೆ ಇದೆ. ಆ ಕತೆ ಹೀಗಿದೆ: “ಭೂಮಂಡಲವನ್ನು ಸೃಷ್ಟಿಸಿದ ನಂತರ ದೇವಾನುದೇವ ತಾನು ಈ ಕಾರ್ಯವನ್ನು ಚೆನ್ನಾಗಿ ಮಾಡಿ ಮುಗಿಸಿದ್ದೇನೆ ಎಂದು ಘೋಷಿಸಿದನಂತೆ. ಆಗ ಆತನ ಹೇಳಿಕೆಯನ್ನು ಪರೀಕ್ಷಿಸಲು ಹೆಲೆನ್ ಥಾಮಸ್ ಅವರನ್ನು ಕಳುಹಿಸಲಾಯಿತಂತೆ. ಅಲ್ಲಿಗೆ ಹೋದ ಹೆಲೆನ್ ಪತ್ರಿಕಾ ಧರ್ಮವನ್ನು ಎಷ್ಟು ಚೆನ್ನಾಗಿ ಪಾಲಿಸಿದರೆಂದರೆ ಅವರೇ ಸೇಬಿನಲ್ಲಿದ್ದ ಹುಳುವನ್ನು ಮತ್ತು ಹುಲ್ಲಿನಲ್ಲಿದ್ದ ಹಾವನ್ನೂ ಪತ್ತೆಹಚ್ಚಿ ದೇವಾನುದೇವನ ಸೃಷ್ಟಿ ಸಮರ್ಪಕವಾಗಿಲ್ಲ ಎಂಬುದನ್ನು ಜಗತ್ತಿಗೆ ತೋರಿಸಿದರಂತೆ!”

ಅಜ್ಜಿ ಹೆಲೆನ್ ಥಾಮಸ್ ಎಲ್ಲಾ ಪತ್ರಕರ್ತರಿಗೆ ಮುಂದೆಯೂ ಸ್ಫೂರ್ತಿ ನೀಡಲಿ…

(ಜೂನ್ 30, 2010ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಆಯ್ದಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಸೌಹಾರ್ದ ಗಿರಿಯಲ್ಲಿ ನಿಸರ್ಗದ ’ನೀಲಿಗ್ಯಾನ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...