ಕೊರೊನಾ ಲಾಕ್‌ಡೌನ್ ಹಿನ್ನೆಲೆ ಪರಿಹಾರ ಪ್ಯಾಕೇಜ್ ಸೇರಿದಂತೆ ವಿವಿಧ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಕರೆಯ ಮೇರೆಗೆ ಅತಿಥಿ ಉಪನ್ಯಾಸಕರು ರಾಜ್ಯ ವ್ಯಾಪಿ ಆನ್‌ಲೈನ್ ಪ್ರತಿಭಟನೆ ನಡೆಸಿದ್ದಾರೆ.

ಕೊರೊನಾ ಹಿನ್ನಲೆಯಲ್ಲಿ ಉದ್ಯೋಗವಿಲ್ಲದೇ ಇರುವ ಅತಿಥಿ ಉಪನ್ಯಾಸಕರಿಗೆ ‘ಪರಿಹಾರ ಪ್ಯಾಕೇಜ್’ ಘೋಷಣೆ ಮಾಡಬೇಕು. ಕೊರೊನಾದಿಂದ ಮೃತಪಟ್ಟ ಅತಿಥಿ ಉಪನ್ಯಾಸಕರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಈಗ ನಡೆಯುತ್ತಿರುವ ಆನ್‌ಲೈನ್ ತರಗತಿಗಳಿಗೆ ಈ ಹಿಂದೆ ಕಾರ್ಯನಿರ್ವಹಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ನಿಯೋಜಿಸಿ, ಸೇವಾಭದ್ರತೆ ಖಾತ್ರಿಪಡಿಸಬೇಕು ಎಂದು ಅತಿಥಿ ಉಪನ್ಯಾಸಕರು ಆಗ್ರಹಿಸಿದ್ದಾರೆ.

ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರು ತಾವಿರುವ ಊರು, ಪಟ್ಟಣ ಹಾಗೂ ನಗರಗಳಲ್ಲಿ ಬೇಡಿಕೆಯ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ಸರ್ಕಾರ ತಮ್ಮ ಸಮಸ್ಯೆಯನ್ನು ಪರಿಗಣಿಸಿ ಪರಿಹರಿಸುವಂತೆ ಮನವಿ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆ ಕುರಿತು ಪ್ರಚಾರ ನಡೆಸಿದರು. ಕೆಲವು ಕಡೆಗಳಲ್ಲಿ  ನಿಯೋಗದ ಮೂಲಕ ಜಿಲ್ಲಾ ಮತ್ತು ತಾಲೂಕಿನ ಅಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಇದನ್ನೂ ಓದಿ: ಕನ್ನಡವನ್ನು ಕೊಳಕು ಭಾಷೆ ಎಂದು ತೋರಿಸಿದ್ದ ವೆಬ್‌ಸೈಟ್, ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್

ರಾಜ್ಯವ್ಯಾಪಿ ಸುಮಾರು 14,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು 413 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಲಾಕ್‌ಡೌನ್ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರನ್ನು ಸೇವೆಗೆ ನಿಯೋಜಿಸಿದ್ದರಿಂದ, ಸರಿಯಾದ ವೇತನ ಸಿಗದೇ ಸಮಸ್ಯೆಗಳು ಉಲ್ಬಣಗೊಂಡಿವೆ. ಈ ಅವಧಿಯಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ, ಹಲವಾರು ಅತಿಥಿ ಉಪನ್ಯಾಸಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊರೊನಾ ಹಿನ್ನೆಲೆ ಎಷ್ಟೋ ಅತಿಥಿ ಉಪನ್ಯಾಸಕರು ಹಣ್ಣು-ಹಂಪಲು, ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಹೊರೆಯ ಜೊತೆಯಲ್ಲಿ ಮಾನಸಿಕ ಒತ್ತಡವೂ ಅವರನ್ನು ತೀವ್ರವಾಗಿ ಕುಗ್ಗಿಸಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

2020-21ನೇ ಸಾಲಿನ ಪದವಿ ತರಗತಿಗಳು ಪ್ರಾರಂಭವಾದಾಗ ಇಲಾಖೆ ಕೇವಲ ಶೇ.50ರಷ್ಟು ಅತಿಥಿ ಉಪನ್ಯಾಸಕರನ್ನು ಸೇವೆಗೆ ನಿಯೋಜನೆಗೊಳಿಸಿತ್ತು. ನಂತರ ಆಗ್ರಹದ ಮೇರೆಗೆ ಎಲ್ಲರನ್ನೂ ಸೇವೆಗೆ ಸೇರಿಸಿಕೊಂಡಿದೆ. ಪ್ರತಿ ಬಾರಿಯು ನಾವು ನಮ್ಮ ಬೇಡಿಕೆಗಳ ಈಡೇರಿಕೆಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಕೊರೊನಾ ಸಾಂಕ್ರಾಮಿಕ ನಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಪ್ರಸ್ತುತ ಸೆಮಿಸ್ಟರ್‌ಗಳಿಗೆ ಈ ಹಿಂದೆ ಕಾರ‍್ಯನಿರ್ವಹಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು ಸೇವೆಗೆ ಸೇರಿಸಿಕೊಳ್ಳಲು ಹಾಗೂ ಆನ್‌ಲೈನ್ ತರಗತಿಗಳನ್ನು ನಡೆಸಲು ಅವರ ಸೇವೆ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ ಹಲವಾರು ಅತಿಥಿ ಉಪನ್ಯಾಸಕರನ್ನು ಈವರೆಗೂ ಸೇವೆಗೆ ಸೇರಿಸಿಕೊಂಡಿಲ್ಲ. ಕೊರೊನಾದಿಂದ ಮೃತಪಟ್ಟ ಅತಿಥಿ ಉಪನ್ಯಾಸಕರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಆದ್ದರಿಂದ ಈ ಕೂಡಲೇ ನಮ್ಮ ಈ  ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅತಿಥಿ ಉಪನ್ಯಾಸಕರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ರಾಯಚೂರು, ವಿಜಯಪುರ. ಕಲಬುರ್ಗಿ, ಬಳ್ಳಾರಿ, ದಾವಣಗೆರೆ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ಧಾರವಾಡ, ಬೆಳಗಾವಿ, ರಾಮನಗರ, ಕೊಪ್ಪಳ, ಬೀದರ್ ಮುಂತಾದ ಜಿಲ್ಲೆಗಳಲ್ಲಿ ಅತಿಥಿ ಉಪನ್ಯಾಸಕರು ತಾವಿರುವ ಸ್ಥಳದಿಂದಲೇ ಪ್ರತಿಭಟನೆ ನಡೆಸಿದ್ದಾರೆ.


ಇದನ್ನೂ ಓದಿ: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಆನ್‌ಲೈನ್ ಪ್ರತಿಭಟನೆ

LEAVE A REPLY

Please enter your comment!
Please enter your name here