ಬೆಂಗಳೂರು: “ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದಿ. ಎಚ್.ಎಸ್. ದೊರೆಸ್ವಾಮಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಹೋರಾಟದ ಹಾದಿ ಮತ್ತು ಆದರ್ಶಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಲೇ ಇರುತ್ತವೆ” ಎಂದು ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅಭಿಪ್ರಾಯಪಟ್ಟರು.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮೇ 26, 2026ರಂದು ಆಯೋಜಿಸಲಾಗಿದ್ದ ‘ಎಚ್.ಎಸ್. ದೊರೆಸ್ವಾಮಿ ಅವರಿಗೆ ಕರ್ನಾಟಕದ ಗೌರವಾರ್ಪಣೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೊರೆಸ್ವಾಮಿ ಅವರಿಗೆ ಕೇವಲ 25 ವರ್ಷ ವಯಸ್ಸು. ಅಂದಿನಿಂದ ಆರಂಭಿಸಿ ನೂರು ವರ್ಷ ದಾಟಿದ ಮೇಲೂ ಅವರು ಸಮಾಜಕ್ಕಾಗಿ ನಿರಂತರವಾಗಿ ಹೋರಾಡುತ್ತಲೇ ಬದುಕಿದರು. ಅವರು ಏಕಕಾಲದಲ್ಲಿ ಗಾಂಧಿವಾದಿಯೂ ಆಗಿದ್ದರು, ಕಮ್ಯುನಿಸ್ಟ್ ಸಿದ್ಧಾಂತವನ್ನೂ ಅಪ್ಪಿಕೊಂಡಿದ್ದರು ಎಂದರು.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅವರು ಅತ್ಯಂತ ತೀವ್ರ ಸ್ವರೂಪದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಬ್ರಿಟಿಷರ ವಿರುದ್ಧದ ಹೋರಾಟಕ್ಕಾಗಿ ಅವರು ಬಾಂಬುಗಳನ್ನು ಸಿದ್ಧಪಡಿಸುತ್ತಿದ್ದರು. ಆದರೆ, ಆ ಬಾಂಬುಗಳನ್ನು ಅವರು ಯಾರನ್ನೂ ಕೊಲ್ಲಲು ಬಳಸಲಿಲ್ಲ; ಬದಲಿಗೆ ಬ್ರಿಟಿಷ್ ಸರ್ಕಾರದ ಪ್ರಮುಖ ದಾಖಲೆಗಳನ್ನು ನಾಶಪಡಿಸಲು ಬಳಸುತ್ತಿದ್ದರು. ಈ ಕಾರಣಕ್ಕಾಗಿ ಅವರು ಜೈಲು ಶಿಕ್ಷೆಯನ್ನು ಸಹ ಅನುಭವಿಸಿದ್ದರು” ಎಂದು ತೀಸ್ತಾ ಸೆಟಲ್ವಾಡ್ ಸ್ಮರಿಸಿದರು.
ಮುಂದುವರಿದು, ಗಿರಣಿ ಕಾರ್ಮಿಕರ ಹಕ್ಕುಗಳಿಗಾಗಿ ಕಾಮ್ರೇಡ್ ಶಂಕರ್ ಅವರ ಜೊತೆಗೂಡಿ ದೊರೆಸ್ವಾಮಿ ಅವರು ನಡೆಸಿದ ಹೋರಾಟಗಳನ್ನು ತೀಸ್ತಾ ನೆನಪಿಸಿಕೊಂಡರು.
“ಮಹಾತ್ಮ ಗಾಂಧೀಜಿಯವರ ಹತ್ಯೆಯ ಕುರಿತು ದೊರೆಸ್ವಾಮಿ ಅವರು ಮಹತ್ವದ ಲೇಖನವೊಂದನ್ನು ಬರೆದಿದ್ದರು. ಗಾಂಧಿ ಹತ್ಯೆಗೂ ಮುನ್ನ ನಾಥೂರಾಂ ಗೋಡ್ಸೆ ಕರ್ನಾಟಕಕ್ಕೆ ಬಂದಿದ್ದ ಹಾಗೂ ಈ ಭೀಕರ ಹತ್ಯೆಯ ಸಂಚು ಕರ್ನಾಟಕದಲ್ಲೇ ರೂಪಿತವಾಗಿತ್ತು ಎಂಬ ಆಘಾತಕಾರಿ ವಿಷಯಗಳನ್ನು ಅವರು ಆ ಲೇಖನದಲ್ಲಿ ಸವಿವರವಾಗಿ ಪ್ರಸ್ತಾಪಿಸಿದ್ದರು” ಎಂದು ತೀಸ್ತಾ ಸೆಟಲ್ವಾಡ್ ತಿಳಿಸಿದರು.
“ದೊರೆಸ್ವಾಮಿ ಅವರು ತಮ್ಮ ಇಳಿವಯಸ್ಸಿನಲ್ಲೂ ಕರ್ನಾಟಕದಲ್ಲಿ ನಡೆದ ಭೂ ವಂಚಿತರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಭಾಷಣ ಮಾಡಿದ್ದು ನನಗೆ ಇಂದಿಗೂ ನೆನಪಿದೆ. ರಾಜ್ಯದ ಕನಿಷ್ಠ ಒಂದು ಲಕ್ಷ ಹೆಕ್ಟೇರ್ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡಬೇಕು ಎಂದು ಅವರು ಪ್ರಬಲವಾಗಿ ಆಗ್ರಹಿಸುತ್ತಿದ್ದರು. ಸರ್ಕಾರಿ ಜಾಗ ಎಂದರೆ ಅದು ಜನರ ಜಾಗ ಎಂಬ ಗಟ್ಟಿ ನಿಲುವು ಅವರದಾಗಿತ್ತು” ಎಂದ ಅವರು, ದೊರೆಸ್ವಾಮಿ ಅವರ ನೆನಪಿನಲ್ಲಿ ಸ್ಮಾರಕ ಭವನ ನಿರ್ಮಾಣವಾಗಬೇಕು ಎಂಬ ಟ್ರಸ್ಟಿನ ಹಕ್ಕೊತ್ತಾಯವನ್ನು ಬೆಂಬಲಿಸಿದರು. ಆ ಭವನವು ಮುಂದಿನ ದಿನಗಳಲ್ಲಿ ಎಲ್ಲಾ ಪ್ರಜಾಪ್ರಭುತ್ವವಾದಿ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಬೇಕು ಎಂದು ಆಶಿಸಿದರು.
ಕರ್ನಾಟಕದ ನಾಗರಿಕ ಸಮಾಜದ ಜಾಗೃತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ತೀಸ್ತಾ, “ಬಾಬಾಬುಡನ್ಗಿರಿ ವಿವಾದ ಇರಬಹುದು, ಹಿಜಾಬ್ ವಿಚಾರ ಇರಬಹುದು ಅಥವಾ ಅಲ್ಪಸಂಖ್ಯಾತರ ಮೇಲಿನ ದಾಳಿಗಳೇ ಇರಬಹುದು; ಕರ್ನಾಟಕದ ನಾಗರಿಕ ಸಮಾಜವು ಪ್ರತಿಯೊಂದು ಅನ್ಯಾಯದ ವಿರುದ್ಧವೂ ಸದಾ ದನಿ ಎತ್ತುತ್ತಾ ಬಂದಿದೆ. ಈ ಸಮಾಜವು ಜನರ ಮೂಲಭೂತ ಹಕ್ಕುಗಳಿಗಾಗಿಯೂ ಇದೇ ರೀತಿ ದನಿ ಎತ್ತುವ ಅಗತ್ಯವಿದೆ” ಎಂದರು.
ಇದೇ ವೇಳೆ ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತದ ವೈಖರಿ ನಮಗೆ ಅಚ್ಚರಿ ಮೂಡಿಸುತ್ತಿದೆ. ಇಲ್ಲಿ ಜಾತ್ಯತೀತ ಸರ್ಕಾರ ಅಧಿಕಾರದಲ್ಲಿದೆ ಎಂದು ನಾವು ಭಾವಿಸಿದ್ದೆವು. ಆದರೆ, ಇಲ್ಲಿ ಪ್ಯಾಲೆಸ್ತಿನ್ ಪರ ಹೋರಾಟ ನಡೆಸಲು ಅವಕಾಶ ನೀಡದಿರಲು ಕಾರಣವೇನು? ದ್ವೇಷ ಭಾಷಣಗಳನ್ನು ತಡೆಯಲು ಮತ್ತು ಅಲ್ಪಸಂಖ್ಯಾತರ ರಕ್ಷಣೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಏಕೆ ಮುಂದಾಗುತ್ತಿಲ್ಲ?” ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ನನಗೆ ಇಂದಿಗೂ ನೆನಪಿದೆ. ತಾವು ನೀಡಿದ ಭರವಸೆಯಂತೆ ಅವರು ಎರಡು ಪ್ರಮುಖ ಕಾಯ್ದೆಗಳನ್ನು ಹಿಂಪಡೆಯಲೇಬೇಕು. ಮೊದಲನೆಯದಾಗಿ ಜಾನುವಾರು ಹತ್ಯೆ ಪ್ರತಿಬಂಧಕ ತಿದ್ದುಪಡಿ ಕಾಯ್ದೆ ಹಾಗೂ ಎರಡನೆಯದಾಗಿ ಮತಾಂತರ ನಿಷೇಧ ಕಾಯ್ದೆ. ಪ್ರಣಾಳಿಕೆಯಲ್ಲಿ ಈ ಆಶ್ವಾಸನೆ ನೀಡಲಾಗಿದ್ದರೂ, ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದರ ಜೊತೆಗೆ, ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ” ಎಂದು ಆಕ್ರೋಶ ಹೊರಹಾಕಿದರು. ಕಳೆದ ಎರಡು ತಿಂಗಳುಗಳಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಹಲವು ಸಭೆಗಳನ್ನು ನಡೆಸಿ ದನಿ ಎತ್ತಿದ್ದಾರೆ; ಅವರ ಎಲ್ಲಾ ಹಕ್ಕೊತ್ತಾಯಗಳು ನ್ಯಾಯಯುತವಾಗಿವೆ ಎಂದು ಅವರು ಬೆಂಬಲಿಸಿದರು.
ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಸ್ಐಆರ್ (SIR) ಪ್ರಕ್ರಿಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ತೀಸ್ತಾ ಸೆಟಲ್ವಾಡ್, “ಭಾರತದಲ್ಲಿ ಪ್ರಸ್ತುತ ಎಸ್ಐಆರ್ ಮೂಲಕ ನಾಗರಿಕರ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಕಾನೂನುಬಾಹಿರ ಹಾಗೂ ಸಂವಿಧಾನ ವಿರೋಧಿ ಪ್ರಕ್ರಿಯೆಯಾಗಿದ್ದು, ಹತ್ತಾರು ದೋಷಗಳಿಂದ ಕೂಡಿದೆ. ಭಾರತದ ಪ್ರಜೆಯಲ್ಲದವರಿಗೆ ಮತದಾನದ ಹಕ್ಕು ಇರಬಾರದು ಎಂಬ ವಾದ ಸರಿಯೇ. ಆದರೆ, ಅದಕ್ಕಾಗಿ ನಾಗರಿಕತ್ವವನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಇದರೊಂದಿಗೆ ಬೆಸೆಯುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದರು.
ಮತದಾರರ ಪಟ್ಟಿಯ ಪಾರದರ್ಶಕತೆಯ ಬಗ್ಗೆ ಒತ್ತಿ ಹೇಳಿದ ಅವರು, “ಮತದಾರರ ಪಟ್ಟಿಯು ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಗಾಗಬೇಕು. ಮತದಾರರ ಪಟ್ಟಿಯನ್ನು ಎಲ್ಲರಿಗೂ ಓದಲು ಸುಲಭವಾಗುವಂತಹ (Readable Format) ಮಾದರಿಯಲ್ಲಿ ನೀಡಬೇಕು. ಕಳೆದ ಚುನಾವಣೆಯಲ್ಲಿ ಸುಮಾರು 99 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ ಮತಗಳ ಅಂತರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮತಗಳನ್ನು ಆಯಾ ಕ್ಷೇತ್ರಗಳ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲದೆ, ಎಲ್ಲಾ ಧರ್ಮಗಳ ಜನರ ಮತಗಳೂ ಇದರಿಂದ ಕಣ್ಮರೆಯಾಗಿವೆ ಎಂದರು.
ಅಲ್ಪಸಂಖ್ಯಾತರನ್ನು ಮತದಾನದ ಪ್ರಕ್ರಿಯೆಯಿಂದ ಹೊರಗಿಟ್ಟರೆ ಏನಾಗುತ್ತದೆ ಎಂದು ಕೆಲವರು ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಆಲೋಚನೆಯಾಗಿದ್ದು, ಇದರ ವಿರುದ್ಧ ಇಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ” ಎಂದು ಕರೆ ನೀಡಿದರು.


