ನವೆಂಬರ್ 2019 ರಲ್ಲಿ ರಾಮ ಜನ್ಮಭೂಮಿ ವಿವಾದವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಗೊಳಿಸಿದ ನಂತರ, ಹನುಮಾನ್ ಜನ್ಮಭೂಮಿಯ ಬಗ್ಗೆ ಹೊಸ ವಿವಾದವೊಂದು ಭುಗಿಲೆದ್ದಿದೆ. ಎರಡು ರಾಜ್ಯಗಳ ನಡುವಿನ ಈ ವಿವಾದ ಮತ್ತಷ್ಟು ದೊಡ್ಡದಾಗುವ ಸಾಧ್ಯತೆಯಿದೆ.
ಆಂಧ್ರಪ್ರದೇಶ ಮತ್ತು ಕರ್ನಾಟಕದ ಎರಡು ಹಿಂದೂ ಟ್ರಸ್ಟ್‌ಗಳ ನಡುವೆ ಈ ವಿವಾದ ಉಂಟಾಗಿದ್ದು, ತಮ್ಮ ಊರಿನಲ್ಲಿರುವ ಬೇರೆ ಬೇರೆ ಸ್ಥಳಗಳನ್ನು ಹನುಮಾನ್ ಜನ್ಮಸ್ಥಳವೆಂದು ವಾದಿಸುತ್ತಿವೆ.
ಒಂದು ಹೆಜ್ಜೆ ಮುಂದೆ ಹೋಗಿರುವ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ, ತಿರುಮಲ ಬೆಟ್ಟದಲ್ಲಿನ ದೇವಾಲಯ ಮತ್ತು ಯಾತ್ರಾಸ್ಥಳವಾದ ಅಂಜನಾದ್ರಿಯನ್ನು ಭವ್ಯವಾಗಿ ಅಭಿವೃದ್ಧಿಪಡಿಸಲು ಬುಧವಾರದಂದು (ಫೆ.16) ಸಮಾರಂಭ ಒಂದನ್ನು ಆಯೋಜಿಸಿದೆ. ಕಳೆದ ವರ್ಷ ಟಿಟಿಡು ಏಪ್ರಿಲ್‌ನಲ್ಲಿ ರಾಮನವಮಿಯಂದು ತಿರುಮಲ ಅಂಜನಾದ್ರಿಯನ್ನು ಹನುಮಂತನ ಜನ್ಮಸ್ಥಳ ಎಂದು ಘೋಷಿಸಿದೆ.
ಆದರೆ ರಾಜ್ಯದ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದನ್ನು ಒಪ್ಪುವುದಿಲ್ಲ. ಈ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಸಂಸ್ಥಾಪಕ ಸ್ವಾಮಿ ಗೋವಿಂದಾನಂದ ಸರಸ್ವತಿ ಇಂದು (ಫೆ.14) ತಿರುಮಲಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಜೋಡಿಗಳು ಪಾರ್ಕ್‌ನಲ್ಲಿ ಸುತ್ತಾಡುವುದು ಕಂಡರೆ ಅವರ ಕಾಲುಗಳನ್ನು ಮುರಿಯುತ್ತೇವೆ: ಶಿವಸೇನೆ ಎಚ್ಚರಿಕೆ
ವಾಲ್ಮೀಕಿ ರಾಮಾಯಣವು ಹನುಮಂತನು ಕಿಷ್ಕಿಂಧೆಯ ಅಂಜನಹಳ್ಳಿಯಲ್ಲಿ ಜನಿಸಿದನೆಂದು ಹೇಳುತ್ತದೆ, ಇದು ಹಂಪಿ ಬಳಿಯ ತುಂಗಭದ್ರಾ ನದಿಯ ದಡದಲ್ಲಿದೆ ಎಂದು ನಂಬಲಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಈ ವಿವಾದ ಬಗೆಹರಿಸಲು ಚರ್ಚೆ ನಡೆದರೂ ಮುಗಿಯುವ ಹಂತಕ್ಕೆ ಬರಲಿಲ್ಲ.
ಟಿಟಿಡಿ ಸಮಿತಿಯು (ಕಳೆದ ತಿಂಗಳು ನಿಧನರಾದ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ವಿ ಮುರಳೀಧರ ಶರ್ಮಾ ಅವರ ನೇತೃತ್ವದ) ಪುರಾತನ ಗ್ರಂಥಗಳು ಮತ್ತು ತಾಮ್ರ-ಲೇಖನದಂತಹ ಪ್ರಾಚೀನ ಗ್ರಂಥಗಳು ಈಗ ತಿರುಮಲ ಎಂದು ಕರೆಯಲ್ಪಡುವ ಅಂಜನಾದ್ರಿಯನ್ನು ಹನುಮಂತನ ಜನ್ಮಸ್ಥಳವೆಂದು ಸ್ಪಷ್ಟವಾಗಿ ಉಲ್ಲೇಖಿಸುತ್ತವೆ ಎಂದಿದೆ.
ಏಪ್ರಿಲ್‌ನಲ್ಲಿ ಟಿಟಿಡಿ ಅಂಜನಾದ್ರಿಯೇ ಹನುಮಾನ್ ಜನ್ಮಸ್ಥಳ ಎಂದು ಸಾರುವ ಕಿರುಪುಸ್ತಕವನ್ನು ಪ್ರಕಟಿಸಿತ್ತು. ಈ ಕಿರುಪುಸ್ತಕವು ಡಿಸೆಂಬರ್ 2020 ರಲ್ಲಿ ರಚಿತವಾದ ಎಂಟು ಸದಸ್ಯರ ಸಮಿತಿಯು ಸಲ್ಲಿಸಿದ ವರದಿಯನ್ನು ಆಧರಿಸಿದೆ. ಇದಕ್ಕೆ ಪ್ರತಿಯಾಗಿ ರಾಜ್ಯದ ಹನುಮನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಟಿಟಿಡಿಗೆ ಆರು ಪುಟಗಳ ಪತ್ರದೊಂದಿಗೆ ಪ್ರತಿವಾದ ಹೂಡಿ, ಚರ್ಚೆ ನಡೆಸಿತ್ತು.
ಹಲವಾರು ವೈದಿಕ ಮತ್ತು ಪುರಾಣದ ವಿದ್ವಾಂಸರು ಒಪ್ಪಿಕೊಂಡಿರುವ ಪೌರಾಣಿಕ, ಸಾಹಿತ್ಯಿಕ, ಪುರಾತತ್ವ ಮತ್ತು ಭೌಗೋಳಿಕ ಪುರಾವೆಗಳ ಮೇಲೆ ಟಿಟಿಡಿ ತನ್ನ ಹಕ್ಕನ್ನು ಆಧರಿಸಿದೆ ಮತ್ತು ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳುತ್ತದೆ.
ಟಿಟಿಡಿ ಬುಧವಾರ ನಡೆಸಲಿರುವ ಸಮಾರಂಭದಲ್ಲಿ ಶಾರದಾ ಪೀಠಾಧಿಪತಿ ಸ್ವರೂಪೇಂದ್ರ ಸರಸ್ವತಿ, ಚಿತ್ರಕೂಟದ ತುಳಸಿ ಪೀಠದ ರಾಮಭದ್ರಾಚಾರ್ಯ ಮಹಾರಾಜರು, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸ್ವಾಮಿ ಗೋವಿಂದ್ ದೇವ್ ಗಿರಿ ಮತ್ತು ದೇಶದ ಇತರ ಭಾಗಗಳ ಸ್ವಾಮೀಜಿಗಳು, ಟಿಟಿಡಿ ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಶಾಲೆಯಲ್ಲಿ ಹಿಜಾಬ್‌ಗೆ ನಿರಾಕರಣೆ, ಪರೀಕ್ಷೆ ಬರೆಯದೆ ವಾಪಸ್ ತೆರಳಿದ 13 ವಿದ್ಯಾರ್ಥಿನಿಯರು