ಕೃಷಿ ಕಾಯ್ದೆಗಳನ್ನು ವಿರೋಧಿಸಿದ್ದ ಹರಿಯಾಣದ ಪಕ್ಷೇತರ ಶಾಸಕ ಬಲ್‌ರಾಜ್ ಕುಂಡು ಅವರ ಮನೆ, ಕಛೇರಿ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ. ರೋಹ್ಟಕ್‌ನಲ್ಲಿರುವ ಅವರ ಸಹೋದರರು, ಹಿಸಾರ್‌ನ ಹನ್ಸಿಯಲ್ಲಿರುವ ಅವರ ಅಳಿಯಂದಿರು ಮತ್ತು ಗುರುಗ್ರಾಮ್ ಸೇರಿದಂತೆ ಶಾಸಕರಿಗೆ ಸಂಬಂಧಿಸಿದ ಎಲ್ಲಾ ಕಡೆ ದಾಳಿ ನಡೆಸಲಾಗಿದೆ.

ಸುಮಾರು 100 ಅಧಿಕಾರಿಗಳ ತಂಡವು ಶಾಸಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದೆ. ಆದರೆ ಶಾಸಕರ ರೋಹ್ಟಕ್ ಕಚೇರಿಯನ್ನು ನೋಡಿಕೊಳ್ಳುವ ದೇವೇಂದರ್ ಸಿಂಗ್ ಇದನ್ನು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಿದ್ದಾರೆ.

“ಶಾಸಕರು ತಮ್ಮ ಗುರುಗ್ರಾಮ್ ನಿವಾಸದಲ್ಲಿದ್ದಾರೆ. ಅವರ ಕುಟುಂಬದ ಇತರ ಸದಸ್ಯರು ರೋಹ್ಟಕ್‌ನಲ್ಲಿರುವ ಮನೆಯಲ್ಲಿದ್ದಾರೆ. ನಾವು ಐಟಿ ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದ್ದೇವೆ. ಆದರೆ ಇದು ಮೂರು ಕೃಷಿ ಕಾನೂನುಗಳ ವಿರುದ್ಧ ಮತ್ತು ರೈತರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ಶಾಸಕರ ಮೇಲೆ ನಡೆಸುತ್ತಿರುವ ಉದ್ದೇಶಪೂರ್ವಕ ದಾಳಿಯಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಹಾಗೇ ಮುಂದುವರೆಸಬೇಕು ಎಂದೇನಿಲ್ಲ: ಪ್ರಧಾನಿ ಮೋದಿ

ರೋಹ್ಟಕ್‌ನ ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ, ಬಲರಾಜ್ ಕುಂಡು ಅವರಿಗೆ ಬಿಜೆಪಿಯು ಟಿಕೆಟ್ ನಿರಾಕರಿಸಿದ ನಂತರ 2019 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಹರಿಯಾಣದಲ್ಲಿ ಸರ್ಕಾರ ರಚಿಸಲು ಬಹುಮತದ ಕೊರತೆಯುಂಟಾಗಿತ್ತು. ಹಾಗಾಗಿ ಕುಂಡು ಬಿಜೆಪಿ-ಜೆಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ನಂತರ, ಸಹಕಾರ ಸಂಘಗಳ ಮಾಜಿ ರಾಜ್ಯ ಸಚಿವ ಮನೀಶ್ ಗ್ರೋವರ್ ಅವರು ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದ ಅವರು, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಗ್ರೋವರ್ ವಿರುದ್ಧ ತನಿಖೆ ಆರಂಭಿಸಲಿಲ್ಲ ಎಂದು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡರು. ಈಗ ಕುಂಡು ಹಲವಾರು ವಿಷಯಗಳಲ್ಲಿ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಕಳೆದ 92 ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಇವರಿಗೆ ಬೆಂಬಲ ಸೂಚಿಸಲು ಶಾಸಕರು ಟಿಕ್ರಿ ಗಡಿಯಲ್ಲಿರುವ ರೈತರಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಜೊತೆಗೆ ಬಿಕೆಯು ಮುಖಂಡ ರಾಕೇಶ್‌ ಟಿಕಾಯತ್ ಅವರ ಮಹಾಪಂಚಾಯತ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರದಲ್ಲಿರುವ ವಿವಿಧ ಕಾಲೇಜುಗಳ ಹೆಣ್ಣುಮಕ್ಕಳಿಗೆ ಸೇವೆ ಸಲ್ಲಿಸಲು ಶಾಸಕರ ಸುಮಾರು 12 ಬಸ್‌ಗಳು ಉಚಿತವಾಗಿ ಕಾರ್ಯನಿರ್ವಹಿಸುತ್ತಿವೆ.


ಇದನ್ನೂ ಓದಿ: ಅವೈಜ್ಞಾನಿಕ ಪಠ್ಯಕ್ರಮ, ಯುಜಿಸಿ ರಾಯಭಾರಕ್ಕೆ ತೀವ್ರ ವಿರೋಧ: ಇಂದಿನ ಗೋ-ಪರೀಕ್ಷೆ ರದ್ದು

LEAVE A REPLY

Please enter your comment!
Please enter your name here