ಜನವರಿ 16 ರಂದು ದೆಹಲಿಯ ಸಿಂಘು ಗಡಿ ಪ್ರತಿಭಟನಾ ಸ್ಥಳದಿಂದ ಬಂಧಿಸಲ್ಪಟ್ಟ 24 ವರ್ಷದ ದಲಿತ ಕಾರ್ಮಿಕ ಸಂಘಟಕರಾದ ಶಿವಕುಮಾರ್ ಅವರಿಗೆ ಹರಿಯಾಣ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಸರ್ಕಾರಿ ವೈದ್ಯರ ತಂಡ ಹೇಳಿರುವುದಾಗಿ ಆರ್ಟಿಕಲ್ 14 ವರದಿ ಮಾಡಿದೆ.

ಈ ಕುರಿತು ಸಾಕ್ಷ್ಯ ನೀಡಿರುವ ವೈದ್ಯರು, “ಶಿವಕುಮಾರ್ ದೇಹದಲ್ಲಿ ಅನೇಕ ಗಾಯಗಳಾಗಿವೆ. ಅವರ ಕಾಲ್ಬೆರಳುಗಳು ಕಿತ್ತುಹೋಗಿವೆ. ಪೊಲೀಸ್ ಕಸ್ಟಡಿಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳಕ್ಕೊಳಗಾಗಿದ್ದಾರೆ” ಎಂದು ಚಂಡೀಗಡದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ನಾಲ್ಕು ಪುಟಗಳ ವರದಿಯಲ್ಲಿ ತಿಳಿಸಲಾಗಿದೆ.

ಈ ವರದಿಯನ್ನು ಫೆಬ್ರವರಿ 23 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಸೋನಿಪತ್ ಜಿಲ್ಲಾ ಜೈಲಿನ ಅಧೀಕ್ಷಕರು ಸಲ್ಲಿಸಿದ್ದಾರೆ. ಅಲ್ಲಿ ಶಿವಕುಮಾರ್‌ರನ್ನು 23 ದಿನಗಳಿಂದ ಜೈಲಿನಲ್ಲಿರಿಸಲಾಗಿದೆ.

ಶಿವಕುಮಾರ್‌ರವರ ಅಧಿಕೃತ ಬಂಧನಕ್ಕೂ ಮುನ್ನ ಒಂದು ವಾರದ ಮೊದಲೇ ಆತನನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ಅವರ ಕುಟುಂಬ ಮತ್ತು ವಕೀಲರು ಆರೋಪಿಸಿದ್ದಾರೆ. ಇದು ನಿಜವಾಗಿದ್ದರೆ, ಅವರು ಏಳು ದಿನಗಳ ಕಾಲ ಅಕ್ರಮ ಬಂಧನದಲ್ಲಿದ್ದರು ಆರ್ಟಿಕಲ್ 14 ಆತಂಕ ವ್ಯಕ್ತಪಡಿಸಿದೆ. ಶಿವಕುಮಾರ್ ಅವರ ದೇಹದ ಮೇಲಿನ ಎಲ್ಲಾ ಗಾಯಗಳು “ಎರಡು ವಾರಗಳಿಗಿಂತಲೂ ಹಳೆಯವು ಮತ್ತು ಮೊಂಡಾದ ವಸ್ತು / ಆಯುಧದಿಂದ ಉಂಟಾಗಿವೆ” ಎಂದು ವೈದ್ಯಕೀಯ ವರದಿ ಹೇಳಿದೆ.

ಮನೋವೈದ್ಯರನ್ನು ಒಳಗೊಂಡ ವೈದ್ಯರ ತಂಡವು ಶಿವಕುಮಾರ್ ಅನುಭವಿಸಿದ “ಕ್ರೂರತೆಯ ಫ್ಲ್ಯಾಷ್‌ಬ್ಯಾಕ್” ನಿಂದ ನಂತರದ ಆಘಾತಕಾರಿ ಒತ್ತಡದ ಕಾಯಿಲೆಯ ಲಕ್ಷಣಗಳನ್ನು ದಾಖಲಿಸಿದೆ. ಅವರು “ದುಃಖ ಮತ್ತು ತೊಂದರೆಗೀಡಾಗಿದ್ದಾರೆ” ಎಂದು ವೈದ್ಯರು ಗಮನಿಸಿದರು ಮತ್ತು ಪರೀಕ್ಷಿಸುವಾಗ ಅಳುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ‘ಪೊಲೀಸ್‌ ಠಾಣೆಯಲ್ಲಿ ತನಗೆ ಥಳಿಸಲಾಗಿದೆ’- ಹೈಕೋರ್ಟ್‌ನಲ್ಲಿ ಹೋರಾಟಗಾರ್ತಿ ನೊದೀಪ್

ಅನೇಕ ತರಚಿದ ಗಾಯಗಳು, ತೀವ್ರವಾದ ಗಾಯಗಳು ಮತ್ತು ಆಳವಾದ ಮಾನಸಿಕ ಯಾತನೆಗಳ ಉದಾಹರಣೆಗಳನ್ನು ಉಲ್ಲೇಖಿಸಿ, ಅವರ ವಕೀಲರು ಫೆಬ್ರವರಿ 24 ರಂದು ಶಿವಕುಮಾರ್ ಅವರನ್ನು ಸ್ಥಳಾಂತರಿಸಲು ಹರಿಯಾಣ ಸರ್ಕಾರಕ್ಕೆ ಆದೇಶ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅವರನ್ನು ಅವರ ತಂದೆ ಅಥವಾ ವಕೀಲರು ಸಹ ಭೇಟಿಯಾಗಲು ಹರಿಯಾಣ ಪೊಲೀಸರು ಅನುಮತಿಸಿಲ್ಲ, ಅವರಿಗೆ ತಕ್ಷಣ ಚಿಕಿತ್ಸೆಯ ಅಗತ್ಯವಿದೆ ಎಂದು ಕುಟುಂಬ ಹೇಳಿದೆ.

ಶಿವಕುಮಾರ್‌ರವರ ಸಹ ಕಾರ್ಯಕರ್ತೆ ದಲಿತ ನೊದೀಪ್ ಕೌರ್ (25) ಅವರನ್ನು ಬಂಧಿಸಿದಾಗ ಎಫ್‌ಐಆರ್‌ನಲ್ಲಿ ಶಿವಕುಮಾರ್‌ರವರನ್ನು ಹೆಸರಿಸಿಲ್ಲ. ಆದರೆ ನೊದೀಪ್ ಕೌರ್ ಬಂಧನದ ನಂತರ ಅವರ ಮೇಲೆ ಜನವರಿ 12 ರಂದು ಎಫ್ಐಆರ್ ಸಲ್ಲಿಸಿದ್ದು, ಕೊಲೆ ಯತ್ನ ಮತ್ತು ಸುಲಿಗೆ ಸೇರಿದಂತೆ 11 ಅಪರಾಧಗಳನ್ನು ಪಟ್ಟಿ ಮಾಡಿದೆ. ಕೌರ್ ಅವರ ಕುಟುಂಬವೂ ಸಹ ಹರಿಯಾಣ ಪೊಲೀಸರು ಆಕೆಗೆ ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದೆ. ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದಾರೆ.

ಭೂಹೀನ ದಲಿತ ಕೃಷಿ ಕೆಲಸಗಾರ ಮತ್ತು ಅರೆಕಾಲಿಕ ಭದ್ರತಾ ಸಿಬ್ಬಂದಿಯ ಮಗ ಶಿವಕುಮಾರ್ ಅವರು 2016 ರಲ್ಲಿ ಸೋನಿಪತ್‌ನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ-ಉಪಕರಣಗಳನ್ನು ನಿರ್ವಹಿಸುವ ತರಬೇತಿಯಲ್ಲಿ ಪದವಿ ಪಡೆದರು. ಕುಂಡ್ಲಿಯಲ್ಲಿ ಎಲ್‌ಇಡಿ ದೀಪಗಳು ಮತ್ತು ವಾಹನ ಭಾಗಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಎರಡು ವರ್ಷ ಕೆಲಸ ಮಾಡಿದರು. 2018 ರಲ್ಲಿ ಮಜ್ದೂರ್ ಅಧಿಕಾರ ಸಂಘಟನ್ (ಎಂಎಎಸ್) ಸಂಘಟನೆ ಸೇರಿದರು.

ರೈತ ಪ್ರತಿಭಟನೆಯನ್ನು ಬೆಂಬಲಿಸಿ ಕುಂಡ್ಲಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯ ಕಾರ್ಮಿಕರ ಗುಂಪಿನೊಂದಿಗೆ ನೊದೀಪ್ ಕೌರ್ ಸಿಂಘು ಗಡಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಅವರು, ಕಾರ್ಮಿಕರು ಸಹ ರೈತರಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಕಾರ್ಮಿಕರು ಕಾರ್ಖಾನೆಯ ಮಾಲಿಕರಿಂದ ಶೋಷಣೆಗೆ ಒಳಗಾಗಿದ್ದಾರೆ, ಅವರ ವೇತನವನ್ನು ತಡೆಹಿಡಿಯಲಾಗಿದೆ ಮತ್ತು ಅವರನ್ನು ಉದ್ಯೋಗಗಳಿಂದ ಕಿತ್ತು ಎಸೆಯಲಾಗಿದೆ ಎಂದು ಆರೋಪಿಸಿದ್ದರು. ಆ ನಂತರ ಅವರನ್ನು ಬಂಧಿಸಲಾಗಿತ್ತು.

ಎಫ್‌ಐಆರ್‌ಗಳಲ್ಲಿ ಶಿವ ಕುಮಾರ್‌ ಹೆಸರಿಲ್ಲದಿದ್ದರೂ ಸಹ ನೊದೀಪ್ ಕೌರ್‌ ಬಂಧಿಸಿದ ನಾಲ್ಕು ದಿನಗಳ ನಂತರ ಪೊಲೀಸರು ಕುಂಡ್ಲಿಯ ಪಕ್ಕದ ಸಿಂಘು ಗಡಿಯಿಂದ ಶಿವಕುಮಾರ್‌ರವರನ್ನು ಸಹ ಬಂಧಿಸಿದ್ದಾರೆ.


ಇದನ್ನೂ ಓದಿ; ಸಿಂಘು ಗಡಿ: ದಲಿತ ಕಾರ್ಮಿಕ ಹೋರಾಟಗಾರ್ತಿ ನೊದೀಪ್ ಕೌರ್‌ ಬಂಧನ ಯಾಕಾಗಿದೆ?

LEAVE A REPLY

Please enter your comment!
Please enter your name here