Homeರಾಜಕೀಯಡಿಸಿ-ಎಸ್ಪಿಯನ್ನು ಕೋರ್ಟ್ ಕಟಕಟೆಗೆ ತಂದು ನಿಲ್ಲಿಸಿದ ಮಾತೆ ಮಾಣಿಕಮ್ಮನ ಹೆಬಿಯಸ್ ಕಾರ್ಪಸ್

ಡಿಸಿ-ಎಸ್ಪಿಯನ್ನು ಕೋರ್ಟ್ ಕಟಕಟೆಗೆ ತಂದು ನಿಲ್ಲಿಸಿದ ಮಾತೆ ಮಾಣಿಕಮ್ಮನ ಹೆಬಿಯಸ್ ಕಾರ್ಪಸ್

- Advertisement -
- Advertisement -

ವಿಶ್ವಾರಾಧ್ಯ ಸತ್ಯಂಪೇಟೆ |

ಯಾನಾಗುಂದಿಯ ಮಾಣಿಕಮ್ಮಳನ್ನು ಟ್ರಸ್ಟ್‍ನವರು ಕೂಡಿ ಹಾಕಿದ್ದಾರೆ ಎಂಬ ಸಂಗತಿ ಕೋರ್ಟ್ ಕಟಕಟೆಯಲ್ಲಿದೆ. ಕಳೆದ ವಾರ ಇಲ್ಲಿನ ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ ಮತ್ತು ಎಸ್‍ಪಿ ಯಡಾಮಾರ್ಟಿನ್ ಮಾರ್ಬ ನ್ಯಾಮಗಂಗ್ ಕೋರ್ಟಿಗೆ ಹಾಜರಾಗಿ ಮಾಣಿಕೇಶ್ವರಿ ಸ್ವಾಮೀಜಿ ಆರೋಗ್ಯ ವರದಿಯನ್ನು ಸಲ್ಲಿಸಿದ್ದಾರೆ. ಮಾಣಿಕಮ್ಮರ ಎಡ ಕಾಲಿಗೆ ನೋವಾಗಿದ್ದು, ಅವರು ವೈದ್ಯಕೀಯ ತಪಾಸಣೆಗೆ ಒಪ್ಪುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಿಡಗುಂದ ಶಿವಕುಮಾರ ಎಂಬ ವ್ಯಕ್ತಿ ಹೆಬಿಯಬಸ್ ಕಾರ್ಪಸ್ ಅರ್ಜಿ ಸಲ್ಲಿಸದೆ ಇದ್ದಿದ್ದರೆ ಮಾಣಿಕಮ್ಮ ಮತ್ತೆ ಸುದ್ದಿ ಆಗುತ್ತಿರಲಿಲ್ಲ. ಪ್ರತಿವರ್ಷದ ಶಿವರಾತ್ರಿಯ ದಿನ ಮಾತ್ರ ಎಲ್ಲರಿಗೆ ದಿವ್ಯ (?) ದರ್ಶನ ನೀಡಿ, ಮಾಣಿಕೇಶ್ವರಿ ಭೂಗತ (ನೆಲಮಾಳಿಗೆಯ ವಾಸ) ರಾದವರು ಮತ್ತೆ ಬರುವುದು ಮತ್ತೊಂದು ವರ್ಷಕ್ಕೆ. ಇದು ಅನೂಚಾನವಾಗಿ ನಡಕೊಂಡು ಬಂದು ಸಾಕಷ್ಟು ವರ್ಷಗಳೆ ಕಳೆದುಹೋಗಿವೆ. ಮಾಣಿಕಮ್ಮಳಿಗೆ ವೈಯಕ್ತಿಕವಾಗಿ ಇದರಿಂದ ಲಾಭ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಟ್ರಸ್ಟ್ ಕಮಿಟಿಯವರು ಹಾಗೂ ಅವರ ಸುತ್ತಮುತ್ತ ಠಳಾಯಿಸಿದ ಭಕ್ತ(?) ಮಂಡಳಿ ಮಾತ್ರ ಮಾಣಿಕಮ್ಮಳನ್ನು ಉಪಯೋಗಿಸಿಕೊಂಡದ್ದು ಸುಳ್ಳಲ್ಲ.

ನಮ್ಮ ಭಾರತೀಯ ಮನಸ್ಸುಗಳು ಉದ್ವೇಗ, ಭಾವಾವೇಶಕ್ಕೆ ಒಳಗಾಗುವುದು ಸಹಜ. ಅಸಹಜ ಚಟುವಟಿಕೆಯ ಯಾರಾದರೂ ಕಂಡರೆ, ಮಾತನಾಡದೆ ದಿವ್ಯ ಮೌನವನ್ನು ತಬ್ಬಿಕೊಂಡಿದ್ದರೆ, ಅಕಳಾ ಸಕಳಾ ಮಾತಾಡುತ್ತ, ಕೆಲವರಿಗಷ್ಟೆ ಬಯ್ಯುವುದು, ಒಡೆಯೋದು ಮಾಡುತ್ತಿದ್ದರೆ ಅಂಥವರು ನೋಡ ನೋಡುತ್ತಲೆ ದೈವತ್ವದ ಪಟ್ಟ ಏರಿಬಿಟ್ಟಿರುತ್ತಾರೆ. ದೈವತ್ವದ ಪಟ್ಟಗಟ್ಟಿದ ಐನಾತಿ ಆಸಾಮಿಗಳೆ ಅದಕ್ಕೊಂದು ಟ್ರಸ್ಟ್ ಮಾಡಿ ಧಾರ್ಮಿಕ ವ್ಯಾಪಾರ ಶುರು ಮಾಡಿಯೇ ಬಿಡುತ್ತಾರೆ. ಕಾಯಿ, ಕರ್ಪೂರ, ಊದು ಬತ್ತಿ , ದರ್ಶನ, ಪ್ರಸಾದ, ದಾಸೋಹ ಎಂಬ ಪದಗಳು ಸೇರಿಕೊಂಡು ಎಲ್ಲರೂ ನೋಡನೋಡುತ್ತಲೆ ಅಲ್ಲೊಂದು ಸುಕ್ಷೇತ್ರ ಎಂಬ ಬೋರ್ಡ್ ತಗುಲಿಬಿಡುತ್ತದೆ. ಜನಸಾಮಾನ್ಯರು ನೆರೆಯುವ ಯಾವ ಸ್ಥಳವನ್ನೂ ಬಿಟ್ಟುಕೊಡದ ರಾಜಕಾರಣಿಗಳು ಅಲ್ಲಿಗೆ ಅಂಡಲೆಯತೊಡಗುತ್ತಾರೆ. ಆಶ್ವಾಸನೆಗಳ ಸುರಿಮಳೆ ಸುರಿಯುತ್ತದೆ. ಎಂ.ಪಿ. ಎಂ.ಎಲ್.ಎ. ಅನುದಾನಗಳು ಹರಿದು ಬರುತ್ತವೆ. ನೋಡ ನೋಡುತ್ತಲೆ ಕಲ್ಯಾಣ ಮಂಟಪಗಳು ಸೃಷ್ಠಿಯಾಗುತ್ತವೆ. ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಕಟ್ಟಡಗಳು ಕಟ್ಟಲ್ಪಡುತ್ತವೆ.

ಇಷ್ಟೆಲ್ಲ ಪ್ರವರ ಹೇಳುವ ಮುಖ್ಯ ಉದ್ದೇಶವಿಷ್ಟೆ : ಮಾಣಿಕಮ್ಮ ಮಾತೆ ಮಾಣಿಕೇಶ್ವರಿ ಆಗುವಾಗಲೂ ಇಷ್ಟೆಲ್ಲ ಘಟನೆಗಳು ನಡೆದು ಹೋಗಿವೆ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಲ್ಲಾಬಾದ ಗ್ರಾಮದ ಬುಗ್ಗಪ್ಪ ಆಶಮ್ಮ ದಂಪತಿಗಳ ನಾಲ್ಕನೆಯ ಮಗುವೆ ಮಾಣಿಕಮ್ಮ. ಮಾಣಿಕಮ್ಮ ಸಣ್ಣ ಮಗುವಾಗಿರುವಾಗಲೆ ಅಪೌಷ್ಠಿಕತೆಯಿಂದ ಬಳಲುತಿದ್ದಳಂತೆ. ಬಡತನದ ಕಾರಣದಿಂದ ಬಡ ದಂಪತಿಗಳು ತಮ್ಮ ಮಕ್ಕಳಿಗೆ ಗಮನಕೊಡುವುದು ಆಗಲಿಲ್ಲ. ಆ ನೋವಿನಲ್ಲೋ ಏನೋ ಮಾಣಿಕಮ್ಮಳಿಗೆ ಅನಾಥ ಪ್ರಜ್ಞೆ ಕಾಡತೊಡಗಿತು. ಇಡೀ ದಿನ ಯಾರೊಂದಿಗೂ ಬೆರೆಯದೆ ಮೌನವಾಗಿರುವುದು. ತನ್ನಷ್ಟಕ್ಕೆ ತಾನೇ ಏನೇನೋ ಮಾತಾಡಿಕೊಳ್ಳುವುದು. ಯಾರೂ ಕಾಣದಾದಾಗ ಮರದ ಬೊಡ್ಡೆಯನ್ನು ಏರಿ ಗಿಡದ ಟೊಂಗೆಯ ಮೇಲೆ ಕುಳಿತು ಬಿಡೋದು. ಆಹಾರ ಉಂಡರೂ ಅಷ್ಟೆ , ಬಿಟ್ಟರೂ ಅಷ್ಟೇ ಎಂಬ ನಿರ್ಲಕ್ಷ್ಯ. ತಂದೆ ತಾಯಿಗಳು ಒತ್ತಾಯದಿಂದ ಮಾತಾಡಿದರೆ ಮರ್ಜಿಯಿಂದ ಮಾತನಾಡುವಾಕೆ. ಮಾಣಿಕಮ್ಮಳ ಈ ನಡಾವಳಿಗಳು ಸಹಜವಾಗಿ ತಂದೆ ತಾಯಿಗಳಲ್ಲಿ ಆತಂಕ ಹುಟ್ಟಿಸಿವೆ. ಆಗವರು ದೇವರು-ದಿಂಡಿರು ಅಂತ ಕಂಡಕಂಡ ಕಡೆ ಸುತ್ತಾಡಿದ್ದಾರೆ. ಆದರೂ ಮಾಣಿಕಮ್ಮ ಸಹಜ ಸ್ಥಿತಿಗೆ ಬರದಾದಾಗ ದೆವ್ವವೇನಾದರೂ ತಮ್ಮ ಮಗಳಿಗೆ ಹೊಕ್ಕಿರಬೇಕೆಂದು ದೆವ್ವ ಬಿಡಿಸುವವರ ಹತ್ತಿರವೂ ಹೋಗಿದ್ದರಂತೆ.

ಮಾಡುವ ಪ್ರಯತ್ನಗಳೆಲ್ಲ ಮುಗಿದಾದ ಮೇಲೆ ಕೊನೆಗೆ ಮದುವೆಯನ್ನಾದರೂ ಮಾಡಿ ನೋಡೋಣ ಎಂದು ಹತ್ತನೆ ವಯಸ್ಸಿನಲ್ಲಿ ಮದುವೆಯನ್ನೂ ಮಾಡಿದ್ದಾರೆ. ಆದರೆ ಇದಾವುದೂ ಮಾಣಿಕಮ್ಮಳಿಗೆ ಸರಿಹೊಂದದಾದಾಗ ಗೌಂಟಿ ಔಷಧಿ ಕೊಡುತ್ತಿದ್ದ ಗುರುಮಿಠಕಲ್‍ನ ಖಾಸಾ ಮಠದ ಹಿಂದಿನ ಶಾಂತವೀರ ಸ್ವಾಮಿಗಳ ಹತ್ತಿರ ಬಿಟ್ಟು ಬಂದಿದ್ದಾರೆ. ಔಷಧ ಕೊಟ್ಟರೂ ಯಾವ ಪರಿಣಾಮ ಆಗದಾದಾಗ ಅವರು ಕೈಚೆಲ್ಲಿ ಇದು ದೇವರ ಮಗುವೆಂದು ಭಾವಿಸಬೇಕು ಎಂದಿದ್ದಾರೆ. ಮಾಣಿಕಮ್ಮಳಿಗೆ ಕಾವಿ ಬಟ್ಟೆ ಧರಿಸಿ ಸನ್ಯಾಸ ದೀಕ್ಷೆ ನೀಡಿದ್ದಾರೆ. ತಮ್ಮ ಮಠದ ಮೇಲ್ಗಡೆಯ ಗವಿಯಂತಿರುವ ರೂಮ್ ನಲ್ಲಿ ಉಳಕೊಳ್ಳಲು ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ.

ಒಟ್ಟಿನಲ್ಲಿ ಮಾನಸಿಕ ಅಸಮತೋಲನ ಹೊಂದಿದ ಹುಡುಗಿಯೊಬ್ಬಳು ಕಾವಿ ಧರಿಸಿದ ಮೇಲೆ, ಸನ್ಯಾಸಿ ಎಂದು ಕಂಡ ಮೇಲೆ ಶಿಥಿಲ ಮನಸ್ಸುಗಳು ಮುಗಿಬಿದ್ದಿವೆ. ಆಕೆ ಊಟವನ್ನೂ ಮಾಡದೆ, ನೀರನ್ನೂ ಕುಡಿಯದೆ ಇರಬಲ್ಲಳು ಎಂದು ಡಂಗೂರ ಸಾರಿದಂತೆ ಕಿವಿಯಿಂದ ಕಿವಿಗೆ ಸುದ್ದಿಯಾಯಿತು. ಅಸಹಜ ಸುದ್ದಿಗೆ ಕಿವಿಗೊಡುವ, ಪವಾಡ ಪುರುಷರನ್ನು ನೋಡಲೇಬೇಕೆಂದು ಕೌತುಕ ಹೊಂದಿರುವ ಜನ ಜಂಗುಳಿ ನೆರೆಯತೊಡಗಿತು. ಸುತ್ತಮುತ್ತ ಪುಂಡು ಪೋಕರಿಗಳು ಸೇರಿಕೊಂಡರು. ಗೋಬೆಲ್ ನೀತಿ ಇಲ್ಲಿ ಕೆಲಸ ಮಾಡಿತು. ನೋಡ ನೋಡುತ್ತಿರುವಂತೆ ಮಾಣಿಕಮ್ಮ ಮಾಣಿಕೇಶ್ವರಿ ಆದಳು. ಮಕ್ಕಳನ್ನು ಹಡೆಯದಿದ್ದರೂ ಮಾತೆಯಾದಳು. ಆಕೆ ವಾಸಿಸುತ್ತಿದ್ದ ಕ್ಷೇತ್ರ ಸುಕ್ಷೇತ್ರವಾಯಿತು. ಇಲ್ಲಿಗೆ ಬರದೆ ಇರುವ, ಆಕೆಯ ಆಶೀರ್ವಾದ ಪಡೆಯದೆ ಇರುವ ಯಾವ ರಾಜಕಾರಣಿಗಳು ನಮ್ಮ ಭಾಗದಲ್ಲಿ ಇಲ್ಲ ಎಂದರೆ ತಪ್ಪಾಗುವುದಿಲ್ಲ. ಯಡಿಯೂರಪ್ಪನವರಂತೂ ಮಾಣಿಕೇಶ್ವರಿಯ ದರ್ಶನ ಪಡೆದುದೆ ತನ್ನ ಜೀವನದ ಸುಕೃತ ಫಲ ಎಂದು ಎದ್ದು ಹೋದದ್ದು ಯಾರೂ ಮರೆತಿಲ್ಲ. ಈ ಭಾಗದ ಶ್ರೀಮಂತ ಕುಳಗಳೆಲ್ಲ ಮಾಣಿಕೇಶ್ವರಿ ಟ್ರಸ್ಟ್ ಕಮಿಟಿಯನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡು ತಮ್ಮ ಕಪ್ಪು ವಹಿವಾಟನ್ನು ವೈಟ್ ಮಾಡಿಕೊಂಡ ಎಷ್ಟೋ ಉದಾಹರಣೆಗಳು ಸಿಗುತ್ತವೆ. ಕಲಬುರ್ಗಿಯ ಉದ್ಯಮಿ ಗಳಂಗಳಪ್ಪ ಪಾಟೀಲ ಎಂಬ ಆಸಾಮಿ ದಾಸೋಹ ಸಮಿತಿಗೆ ಚೇರಮನ್ ಆಗಿ ಮಾಡಿದ ಆಟಗಳು ಜನರಿಗೆ ಗೊತ್ತು. ಮಾಜಿ ಮಂತ್ರಿಯೋರ್ವರ ಚಿಕ್ಕಪ್ಪ ಬಸವರಾಜಪ್ಪಗೌಡ ದರ್ಶನಾಪುರ ಮಾಣಿಕಮ್ಮನ ಹೆಸರಿನ ಮೇಲೆ ಉಂಡೆ ನಾಮ ಹಾಕಿದ್ದನ್ನು ಜನ ಮರೆತಿರಲಾರರು. ಆದರೆ ಇವರೆಲ್ಲರಿಗಿಂತಲೂ ಹೆಚ್ಚು ಬಲಶಾಲಿಯೆಂದರೆ ಆಂಧ್ರದ ಶಿವಯ್ಯ ಎಂಬ ಮಾಜಿ ಬ್ಯಾಂಕ್ ನೌಕರ. ಈ ಪಾಕಡ ಆಸಾಮಿ ಮಾಣಿಕಮ್ಮಳನ್ನು ವಜ್ರದ ಕವಚದಲ್ಲಿಟ್ಟು ನೋಡಿಕೊಂಡು ಬರುತ್ತಿದ್ದಾನೆ.

ನಿತ್ಯವೂ ಮಾಣಿಕಮ್ಮ ಎಲ್ಲರಿಗೂ ಕಾಣಿಸಿದರೆ ಅದರಲ್ಲಿ ಸ್ವಾರಸ್ಯ ಇರುವುದಿಲ್ಲ, ಸೊಗಸೂ ಇರುವುದಿಲ್ಲ ಎಂಬುದನ್ನು ಮನಗಂಡ ಆಸಾಮಿಗಳು ಆಕೆ ನೆಲ ಮಹಡಿಯಲ್ಲಿಯೇ ವಾಸಿಸುವಂತೆ ಅನಧಿಕೃತ ದಿಗ್ಭಂಧನ ಹಾಕಿದ್ದಾರೆ. ಬೌದ್ಧಿಕ ಬೆಳವಣಿಗೆ ಹೊಂದಿರದ ಮಾಣಿಕಮ್ಮಳಿಗೆ ಸೆರೆಮನೆಯೆ ಅರಮನೆಯಾಗಿ ಗೋಚರವಾದರೆ ಅಚ್ಚರಿಯಿಲ್ಲ. ಹೆಚ್ಚು ಓದಿರದ, ಯಾರ ಸಾಂಗ್ಯವನ್ನೂ ಬಯಸದ, ಯಾರೊಂದಿಗೂ ಅನುಭಾವ ಮಾಡಲು ಸಾಧ್ಯವಿರದ ಮಹಿಳೆ ವರ್ಷಕ್ಕೆ ಒಂದು ಬಾರಿ ಗುಹೆಯಿಂದ ಹೊರಬಂದು ಹೇಳುವ ಮಾತುಗಳಲ್ಲಿ ಅಂಥ ಅನುಭಾವದ ನುಡಿಗಟ್ಟುಗಳು ಇರಲು ಸಾಧ್ಯವೆ ? ಆಕೆಯ ಮಾತುಗಳನ್ನು ಕೇಳಿದ ಯಾರಾದರೂ ಪ್ರಶ್ನಿಸಬಹುದಾಗಿವೆ. ಆಕೆಯ ಮಾನಸಿಕ ಮಟ್ಟ ಎಂಥದ್ದು ಎಂದು ಯಾರಾದರೂ ಅರಿಯಬಹುದು.

“ಅಷ್ಟದಿಕ್ಪಾಲಕರು ಈ ಭೂಮಿಯನ್ನು ಹೊತ್ತುಕೊಂಡು ಕುಳಿತಿದ್ದಾರೆ. ಅವರಿಗೆ ನೀವೆಲ್ಲ ಕೃತಜ್ಞತೆಯಿಂದ ಬದುಕಬೇಕು. ವಿನಾಶಕಾಲೇ ವಿಪರೀತ ಬುದ್ಧಿ ಎಂದು ಜನರು ನಡೆಯುತ್ತಿದ್ದಾರೆ. ಇದು ಒಳ್ಳೆಯದಲ್ಲ. ನಮ್ಮ ಭಾರತದಂತಹ ದೇಶ ಎಲ್ಲೂ ಇಲ್ಲ. ನೀವೆಲ್ಲ ಸಾಧು ಸತ್ಪುರುಷರಿಗೆ ದಾನ ಧರ್ಮ ಮಾಡಬೇಕು. ಸಾಧು ಸನ್ಯಾಸಿಗಳಿಗೆ ಯಾವ ಕುಲಗೋತ್ರ ಇರುವುದಿಲ್ಲ. ಎಲ್ಲರೂ ದೇವರ ಮಕ್ಕಳು. ಅಹಿಂಸೆ ನಮ್ಮ ಧರ್ಮವಾಗಬೇಕು. ಯಾವುದೆ ಪ್ರಾಣಿ ಹತ್ಯೆ ಮಾಡಬಾರದು. ಪ್ರಾಣಿ ಪಕ್ಷಿಗಳನ್ನು ಕೊಂದು ತಿನ್ನುವುದು ಪಾಪ. ಇದು ದೇವರಿಗೆ ಇಷ್ಟವಾಗಲಾರದು. ಮದ್ಯ ಮಾಂಸಗಳನ್ನು ಮನುಷ್ಯ ಮುಟ್ಟಬಾರದು.”

“ಸತ್ತ ಮೇಲೆ ಏನೂ ಬರುವುದಿಲ್ಲ. ನಮ್ಮದೆಂದು ಕಾಣುವ ಹಣ ಸಂಪತ್ತು ಹೆಂಡತಿ ಮಕ್ಕಳು ಸಂಸಾರ ನಮ್ಮದಲ್ಲ. ನಿತ್ಯವೂ ಶಿವಧ್ಯಾನ ಮಾಡು ನಿನಗೆ ಒಳ್ಳೆಯದಾಗುತ್ತದೆ” ಎಂದು ಮುಂತಾಗಿ ಆಕೆ ಹೇಳಿದ ಮಾತುಗಳ ಅರ್ಥವನ್ನು ಗ್ರಹಿಸಿ, ವಾಕ್ಯಗಳಲ್ಲಿ ಇಲ್ಲಿ ನೀಡಲಾಗಿದೆ ; ಆಕೆ ಹೇಳಿದಂತೆ ಬರೆದರೆ ಅದು ಯಾರಿಗೂ ಅರ್ಥವಾಗುವುದಿಲ್ಲ ಎಂಬ ಕಾರಣಕ್ಕೆ.

ಇಪ್ಪತ್ತೊಂದನೆಯ ಶತಮಾನದ ಕಂಪ್ಯೂಟರ್ ಯುಗದಲ್ಲಿಯೂ ಜನರು ಇನ್ನೂ ಮೌಢ್ಯದ ಜಿಡ್ಡಿನಿಂದ ಹೊರಬಂದಿಲ್ಲ. ಶಿಶುವಿನಹಾಳ ಶರೀಫ ಸಾಹೇಬರು ಹೇಳಿದಂತೆ ಜನರ ಮನೆಯ ಮಾಳಿಗೆ ಅಜ್ಞಾನದಿಂದ ಇನ್ನೂ ಸೋರುತ್ತಲೆ ಇದೆ. ಸುಮ್ಮನೆ ಕುಳಿತಲ್ಲಿಯೆ ಕುಳಿತವನು. ಮಾತನಾಡದವನು. ಊಟ ಬಿಟ್ಟವನು. ನೀರು ಕುಡಿಯದವನು. ತನ್ನಷ್ಟಕ್ಕೆ ತಾನೇ ನಕ್ಕು ಸುಮ್ಮನಾಗುವವನು ಈ ದೇಶದಲ್ಲಿ ಬಹುದೊಡ್ಡ ವ್ಯಕ್ತಿಯಾಗಿ, ಪವಾಡ ಪುರುಷನಾಗಿ ಮಿಂಚುತ್ತಾನೆ. ಇಂಥ ಹಲವಾರು ಸಂಗತಿಗಳು ನಮ್ಮ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಇವುಗಳ ಸಾಲಿನಲ್ಲಿ ಮಾತೆ ಮಾಣಿಕೇಶ್ವರಿಯೂ ಒಬ್ಬಳು ಅಷ್ಟೆ!

ವಿಶ್ವದ ಅನೇಕ ಕಡೆ ಹಸಿವಿನಿಂದ ಬಳಲುವ, ಕಂಗೆಟ್ಟು ಸಾಯುವ, ನೀರಿಗಾಗಿ ಘನಘೋರವಾದ ಅಂತರಯುದ್ಧಗಳೆ ನಡೆದಿವೆ. ನಿಜಕ್ಕೂ ಮಾತೆ ಮಾಣಿಕೇಶ್ವರಿ ಊಟ ನೀರು ಬಿಟ್ಟು ಇಷ್ಟು ದಿನಗಳವರೆಗೆ ಬದುಕಿದ್ದೆ ಆದರೆ ವಿಜ್ಞಾನಕ್ಕೊಂದು ಸವಾಲು. ಈ ಸವಾಲನ್ನು ಸ್ವೀಕರಿಸಿ ಊಟ ಮಾಡದೆ, ನೀರು ಕುಡಿಯದೆ ಬದುಕುವುದು ಹೇಗೆ ? ಎಂಬ ಫಾರ್ಮುಲಾವನ್ನು ಮಾತೆ ಮಾಣಿಕೇಶ್ವರಿಯಿಂದ ಪಡೆದುಕೊಳ್ಳಬೇಕು. ಇದರಿಂದ ಮಾತೆಯ ಖ್ಯಾತಿ ಜಗದ್ವಿಖ್ಯಾತವಾಗುತ್ತದೆ. ವಿಶ್ವಕ್ಕೂ ಭಾರತ ಆಗ ಗುರುವಾಗುತ್ತದೆ, ಅಲ್ಲವೆ?

ದೇವರು ಸತ್ಯ ಎಂದೆ ಓಡಾಡುತ್ತಿದ್ದ ಮಹಾತ್ಮ ಗಾಂಧೀಜಿ ಕೊನೆಗೆ ಹೇಳಿದ್ದು ಸತ್ಯವೇ ದೇವರು ಎಂದು. ಆಹಾರ ನೀರು ಬಿಟ್ಟು ಬೋಧಿವೃಕ್ಷದ ಕೆಳಗೆ ತಪಸ್ಸಿಗೆ ಕುಳಿತ ಬುದ್ಧ, ಕೂಡಲೆ ಸತ್ಯ ಅರಿತುಕೊಂಡ. ನೀರು ಆಹಾರವಿಲ್ಲದೆ ಈ ದೇಹ ಬಹಳ ದಿನ ಜೀವಿಸಲಾರದು. ಜೀವನ ತುಂಬಾ ಪವಿತ್ರವಾದುದು. ಇದನ್ನು ಸುಖಾಸುಮ್ಮನೆ ಕಳಕೊಳ್ಳಬಾರದು. ಹೃದಯದಲ್ಲಿ ತುಂಬಿದ ಅಂತಃಕರಣ, ಪ್ರೀತಿ, ವಿಶ್ವಾಸ, ಪ್ರೇಮಗಳನ್ನು ಈ ನೆಲದಲ್ಲಿ ಚೆಲ್ಲಬೇಕು ಎಂದು ತೀರ್ಮಾನಿಸಿದ. ನಿನಗೆ ನೀನೇ ಬೆಳಕು ಅಂದ. ಸತ್ಯವೇ ಶಿವವು , ಸುಂದರವೂ ಆಗಿರುತ್ತದೆ.

ತಪಶಕ್ತಿ ಇದೆ ಎಂದು ತನ್ನಷ್ಟಕ್ಕೆ ತಾನು ನಂಬಿರುವ ಮಾಣಿಕೇಶ್ವರಿ ತಿರುಗಾಡುವಾಗ ಜಾರಿ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ತನ್ನ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಸರಿ ಮಾಡುವ ಮಾಣಿಕಮ್ಮ ತನ್ನ ಕಾಲನ್ನು ತಾನು ದುರಸ್ತಿ ಮಾಡಿಕೊಳ್ಳಬಾರದೆ? ತನ್ನ ಸುತ್ತಮುತ್ತ ಪಾಪಸುಕಳ್ಳಿಯಂತೆ ಹಬ್ಬಿರುವ ಮನೆ ಮುರುಕರನ್ನು ದೂರ ಸರಿಸಿ ವ್ಯವಸ್ಥೆಯನ್ನು ಸರಿ ಪಡಿಸಬಾರದೆ? ಎಂಬ ನಮ್ಮ ಪ್ರಶ್ನೆಗಳು ಸಂತೆಯಲ್ಲಿ ಕೇಳಿದಂತಾಗುತ್ತಿವೆ.
ಜನ ಮರುಳೋ ಜಾತ್ರ ಮರುಳೋ….. ಸಿದ್ದೇಶ್ವರಾ ಅನ್ನುವುದೊಂದೆ ಈಗ ನಮಗೆ ಉಳಿದಿರುವುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Ammanavara bagge real story barididdiraa!
    Thanks
    Maathaji yavara pavaadagala bagge
    Innu innu hechu Lekanagalannu baredu nimma pathrike puneetha vaaguthade.
    Nimma lekhana ondu kade maathra
    Aalochisi baredoddiraa

    Innondu mukha Maathajiyarannu Nambi aneka mahimeglannu kandu ,
    Avaranne nambiruva daivabhakthara bagge enu aalochisalillave?

    Maathajiyavar Shivaratriya Divya Darshanada hinnale enu gothaa?

    NTR, Gundurao Anthava mahan mukyamanthrigala smmukadalli

    Pavada thoriso shivarathriyandu
    Ondu roominlla Dyanasaktharagi
    Divya darshana kottu Bhakthara manasinalli bhakthi thumbidaga
    Neevu Ee Bharathambe punyabhoomiyalli innuuu huttiddiroo ? Illavo nanage gothilla

    Ottinalli nimmantha Vicharadhareyannu odi bereyarige
    Novuntagade iddare nimma lekhanakke value baruthe

    Jai Manikeswari

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...