ಟಿಪ್ಪು ಸುಲ್ತಾನ್ ಜಯಂತಿ ಕುರಿತು ವಿವಾದಾತ್ಮಕ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರುದ್ಧದ ದೂರನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
2017ರಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಟಿಪ್ಪು ಜಯಂತಿ ಸಂದರ್ಭದಲ್ಲಿ ಆಚರಣೆಯನ್ನು ಬಹಿಷ್ಕರಿಸುವ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಿದ್ದರು. ಜೊತೆಗೆ 18 ನೇ ಶತಮಾನದ ಮೈಸೂರು ರಾಜ ಟಿಪ್ಪು ಸುಲ್ತಾನ್ ವಿರುದ್ಧ ಮಾಡಿದ ಆರೋಪಗಳಿಗೆ ಸಂಬಂಧಿಸಿದ್ದ ದೂರನ್ನು ಕೆಳ ನ್ಯಾಯಾಲಯವು ಈ ಹಿಂದೆ ವಜಾಗೊಳಿಸಿತ್ತು.
ಈ ಸಂಬಂಧ ಆರ್‌ಟಿಐ ಕಾರ್ಯಕರ್ತ ಎ.ಆಲಂ ಪಾಷಾ, ಶಾಸಕರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ದೂರಗೆ ಸಾಕ್ಷಿಯಾಗಿ ನವೆಂಬರ್ 10, 2017 ರಂದು ನಿಗದಿಯಾಗಿದ್ದ ಟಿಪ್ಪು ಜಯಂತಿ ಆಚರಣೆ ಬಗ್ಗೆ ಅಕ್ಟೋಬರ್ 22, 2017 ರಂದು ಹೆಗಡೆ ಮತ್ತು ಸಿ.ಟಿ ರವಿ ಅವರ ವಿವಾದಾತ್ಮಕ ಟ್ವೀಟ್‌ಗಳನ್ನು ಒಳಗೊಂಡಿರುವ ಸುದ್ದಿ ವರದಿಯನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಟಿಪ್ಪು ಸುಲ್ತಾನರ ಬಲವಂತದ ಮತಾಂತರ ಚರ್ಚೆಯೊಳಗಿನ ವಾಸ್ತವಗಳು!
ಧರ್ಮಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಈ ಹೇಳಿಕೆಗಳು ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಅಪರಾಧಗಳಾಗಿವೆ ಎಂದು ಪಾಷಾ ತನಿಖೆಗೆ ಕೋರಿದ್ದರು. ಆದರೆ, 10 ನೇ ಎಸಿಎಂ ನ್ಯಾಯಾಲಯ ನವೆಂಬರ್ 4, 2017 ರಂದು ದೂರನ್ನು ತಳ್ಳಿಹಾಕಿತ್ತು.
ಆ ಸಮಯದಲ್ಲಿ ಹೆಗಡೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಪಿಸಿಆರ್ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್, ಅರ್ಜಿದಾರರು ದೂರು ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಹೀಗಾಗಿ, ದೂರು ವಿಚಾರಣೆಗೆ ಅರ್ಹವಲ್ಲ ಎಂದು ಅರ್ಜಿ ತಿರಸ್ಕರಿಸಿತ್ತು.
‘ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156 (ಸಿ) ಪ್ರಕಾರ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಈ ವಿಷಯವನ್ನು ಸಂಬಂಧಿಸಿದ ನ್ಯಾಯಾಲಯಕ್ಕೆ ರವಾನಿಸಲಾಗಿದೆ. ಕಾನೂನಿನ ಪ್ರಕಾರ ಹೊಸ ದೂರನ್ನು ಪರಿಗಣಿಸುವಂತೆ ತಿಳಿಸಿದೆ ಎಂದು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ಪೀಠ ತಿಳಿಸಿದೆ.
ಇದನ್ನೂ ಓದಿ: ವೀರ ಹೋರಾಟಗಾರ ’ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ: ವಿಧಾನ ಪರಿಷತ್ ಬಿಜೆಪಿ ಸದಸ್ಯ

ಸದ್ಯಕ್ಕೆ ಇದೊಂದು ಆಶಾದಾಯಕ ಬೆಳೆವಣಿಗೆ. ಇತಿಹಾಸ ಪುರುಷರನ್ನು ಅವಹೇಳನ ಮಾಡುವುದು ಇನ್ನಾದರೂ ನಿಲ್ಲಲಿ.