Homeಚಳವಳಿಹಿಂದಿ ಹೇರಿಕೆ: ಜೋಪಾನ, ತ್ರಿಭಾಷಾ ಸೂತ್ರದ ಕುರಿತ ಶಿಫಾರಸು ಹಾಗೆಯೇ ಉಳಿದುಕೊಂಡಿದೆ.

ಹಿಂದಿ ಹೇರಿಕೆ: ಜೋಪಾನ, ತ್ರಿಭಾಷಾ ಸೂತ್ರದ ಕುರಿತ ಶಿಫಾರಸು ಹಾಗೆಯೇ ಉಳಿದುಕೊಂಡಿದೆ.

- Advertisement -
- Advertisement -

| ಅಖಿಲ್ ಭರತನ್ | ಐಐಟಿ ಮದ್ರಾಸ್

ಅನುವಾದ: ನಿಖಿಲ್ ಕೋಲ್ಪೆ

ಹೊಸ ಕರಡು ಶಿಕ್ಷಣ ನೀತಿ- ಅದರಲ್ಲೂ ವಿಶೇಷವಾಗಿ ಭಾಷಾ ಶಿಕ್ಷಣದ ಕುರಿತ ಅದರ ದೃಷ್ಟಿಕೋನದಲ್ಲಿ ಅಚ್ಚರಿ ಹುಟ್ಟಿಸುವಂತದ್ದೇನಾದರೂ ಇದೆಯೇ? ವರ್ಷಗಳಿಂದ ಬಿಜೆಪಿಯ ಭಾಷಾ ಶಿಕ್ಷಣ ನೀತಿಗಳನ್ನು ಅನುಸರಿಸುತ್ತಾ ಬಂದಿರುವವರು ಖಡಾಖಂಡಿತವಾಗಿ ಇಲ್ಲವೆಂದೇ ಹೇಳಬಹುದು. ದಕ್ಷಿಣ ಭಾರತೀಯ ರಾಜ್ಯಗಳ, ಅದರಲ್ಲೂ ಮುಖ್ಯವಾಗಿ ತಮಿಳುನಾಡಿನ ಒತ್ತಡದಿಂದಾಗಿ ಕೇಂದ್ರ ಸರಕಾರವು ಸ್ವಲ್ಪ ಮಟ್ಟಿಗೆ ಬಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ‘ಭಾಷೆಗಳ ಆಯ್ಕೆಯಲ್ಲಿ ಸಡಿಲತೆ’ ಎಂಬ ಪರಿಷ್ಕೃತ ಕರಡಿನ ಅಧ್ಯಾಯದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ ಭಾಷೆಗಳ ಉಲ್ಲೇಖವನ್ನು ಕೈಬಿಡಲಾಗಿದೆ. ಆದರೆ, ತ್ರಿಭಾಷಾ ಸೂತ್ರದ ಕುರಿತ ಶಿಫಾರಸು ಹಾಗೆಯೇ ಉಳಿದುಕೊಂಡಿದೆ. ಹಿಂದಿ ಹೇರಿಕೆಯ ಮೂಲಬೇರು ಇರುವುದೇ ಈ ತ್ರಿಭಾಷಾ ಸೂತ್ರದಲ್ಲಿ. ಅದರ ಹೊರತಾಗಿ ಈ ಮೂರನೇ ಭಾಷೆಗೆ ಒತ್ತು ನೀಡಿರುವುದಕ್ಕೆ ಬೇರಾವುದೇ ಕಾರಣ ಕಾಣಸಿಗದು.

ಹಿಂದಿಯನ್ನು ಪ್ರಾದೇಶಿಕ ಭಾಷೆಯಾಗಿ ಹೊಂದಿರದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಉದ್ದೇಶ ಸುಸ್ಪಷ್ಟವಾಗದೆ. ಅದು ರಾಷ್ಟ್ರೀಯತೆಯ ವಿಕ್ಷಿಪ್ತ ವ್ಯಾಖ್ಯೆಯಿಂದ ಹುಟ್ಟಿಕೊಂಡಿದೆ. ಭಾರತದಲ್ಲಿ ಆಳುವ ಪಕ್ಷದ ತಾತ್ವಿಕತೆಯಾಗಿರುವ ಹಿಂದೂತ್ವವು ಮೂರು ಅಂಶಗಳಿಂದ ನಿರ್ದೇಶಿತವಾಗಿದೆ. ಅವುಗಳೆಂದರೆ ಹಿಂದೂ ಮತ್ತು ಹಿಂದಿ. ಇವುಗಳಲ್ಲಿ ಹಿಂದಿ ಎಂಬುದು ಅವರ ದೃಷ್ಟಿಯಲ್ಲಿ ನೈಜ ಭಾರತೀಯರ ಭಾಷೆ ಮತ್ತು ಸಂಸ್ಕೃತಿ ಎಂದಾಗಿದೆ. ಹಿಂದೂ ರಾಷ್ಟ್ರೀಯವಾದಿಗಳಿಗೆ ಅವರ ದೃಷ್ಟಿಯಿಂದ ಈ ಮೂರು ಅಂಶಗಳು ರಾಷ್ಟ್ರದ ಆಧಾರ ಸ್ಥಂಭಗಳಾಗಿವೆ. ಪ್ರಾದೇಶಿಕ ವೈವಿಧ್ಯಗಳ ಹೊರತಾಗಿಯೂ, ಅವುಗಳಿಗೆ ಅವಕಾಶ ನೀಡಿದರೂ ಕೂಡಾ ಈ ದೃಷ್ಟಿಕೋನದ ಪ್ರಕಾರ ದೇಶವು ಈ ಮೂರು ಅಂಶಗಳಿಂದ ನಿರ್ದೇಶಿತವಾಗಬೇಕು. ಅವುಗಳ ಪ್ರಕಾರ ರಾಷ್ಟ್ರದ ಎಲ್ಲಾ ಪ್ರಜೆಗಳು ಭಾರತೀಯ ರಾಜ್ಯದ ಜೊತೆ ಹಿಂದಿಯಲ್ಲಿ ಸಂವಹನ ನಡೆಸಬೇಕು ಮತ್ತು ಈ ಹಿಂದಿ ಸಾದ್ಯಂತವಾಗಿ ಸಂಸ್ಕೃತೀಕರಣಗೊಂಡ ಹಿಂದಿಯಾಗಿದೆ.

ಬಿಜೆಪಿಯ ಹಿಂದಿ ಮೋಹವು ಅದರ ಹುಟ್ಟಿಗಿಂತ ಹಿಂದಿನದ್ದಾಗಿದೆ. ಅದರ ಅಪ್ಪನಾಗಿರುವ ಜನಸಂಘವು 1965 ಜುಲೈ 10ರ ಗೊತ್ತುವಳಿಯೊಂದರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಿಂದಿ ಹೇರಿಕೆಯಿಂದ ಹಿಂದೆ ಸರಿಯುತ್ತಿದೆ ಎಂದು ಆರೋಪಿಸಿತ್ತು. ಅದು ಹೀಗೆ ಹೇಳುತ್ತದೆ:

“ಒಂದೇ ಒಂದು ಭಾರತೀಯ ಹಿಂದೀಯೇತರ ರಾಜ್ಯವು ಬಯಸುವ ತನಕ ಇಂಗ್ಲಿಷ್ ಭಾಷೆಯು ಕೇಂದ್ರದಲ್ಲಿ ಮುಂದುವರಿಯಬೇಕೆಂದು ಹೇಳುವುದು ಕೇಂದ್ರದ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಜಾಗದಲ್ಲಿ ಹಿಂದಿ ಬರಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಮಂಡಳಿ ಪ್ರಾಮಾಣಿಕವಾಗಿ ಬಯಸುತ್ತಿಲ್ಲ ಎಂಬುದರ ಸೂಚಿಯಾಗಿದೆ.”

ವಾಸ್ತವವಾಗಿ ಉತ್ತರ ಭಾರತದ ಈ ದಮನಕಾರಿ ಪಥಸಂಚಲನಕ್ಕೆ ಅಡ್ಡಿಯಾದದ್ದೇ ಹಿಂದಿ ಹೇರಿಕೆಯ ಕುರಿತು ತಮಿಳುನಾಡಿನಂತಹ ದಕ್ಷಿಣದ ರಾಜ್ಯಗಳ ಬಲವಾದ ವಿರೋಧ. ಭಾರತೀಯ ಜನರ ಮೇಲೆ ಹಿಂದಿ ಹೇರಿಕೆಗೆ ಪ್ರಯತ್ನ ಮಾಡಿರುವುದರಲ್ಲಿ ಬಿಜೆಪಿ ಮಾತ್ರವೇ ಇರುವುದಲ್ಲ; ಕಾಂಗ್ರೆಸ್ ಕೂಡಾ ಈ ವಿಷಯದಲ್ಲಿ ತನ್ನದೇ ಪಾತ್ರ ವಹಿಸಿದೆ ಎಂಬುದು ಸ್ಪಷ್ಟ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪುರುಷೋತ್ತಮದಾಸ್ ಟಂಡನ್ ಅವರಂತಹ ವ್ಯಕ್ತಿಗಳು ಕೂಡಾ ಹಿಂದಿ ಹೇರಿಕೆಯ ಮುಂಚೂಣಿಯಲ್ಲಿದ್ದರು. ಸಿ. ರಾಜಗೋಪಾಲಾಚಾರಿಯಂತಹ ತಮಿಳು ಕಾಂಗ್ರೆಸಿಗ ಕೂಡಾ ತಮಿಳು ಜನರ ಮೇಲೆ ಹಿಂದಿ ಹೇರಲು ಪ್ರಯತ್ನಿಸಿದ ವ್ಯಕ್ತಿಯಾಗಿದ್ದರು. 1937, 1946, 1963, 1965, 1967, 1986 ಮತ್ತು 2014ರಲ್ಲಿ ಪಠ್ಯಕ್ರಮದೊಳಗೆ ಹಿಂದಿಯನ್ನು ನುಸುಳಿಸುವ ಪ್ರಯತ್ನಗಳು ನಡೆದು ಪ್ರತಿಭಟನೆಯಿಂದಾಗಿ ಅವುಗಳನ್ನು ಹಿಂದೆಗೆಯಲಾಗಿತ್ತು.

ಹೊಸ ಶಿಕ್ಷಣ ನೀತಿ ಕರಡು ಧೋರಣೆಗಳು

ಈಗ ವಿವಾದಾಸ್ಪದವಾಗಿರುವ ಧೋರಣೆಯಂತೆಯೇ ನೀರಿನ ಆಳ ನೋಡುವ ಮತ್ತು ಈ ನಡೆಗೆ ಎಷ್ಟರ ಮಟ್ಟಿಗೆ ವಿರೋಧ ವ್ಯಕ್ತವಾಗುತ್ತದೆ ಎಂದು ಅಳೆಯುವ ಉದ್ದೇಶ ಹೊಂದಿವೆ. ತಾತ್ಕಾಲಿಕ ಹಿಂದೆಗೆತವನ್ನು ಇಂತಹ ಶಕ್ತಿಗಳ ವಿರುದ್ಧ ಅಂತಿಮ ವಿಜಯವೆಂದು ಭ್ರಮಿಸಲಾಗದು. ಈ ದೇಶದ ಪ್ರತಿಯೊಂದು ಮಗುವಿಗೆ ಹಿಂದಿ ಕಲಿಸಬೇಕು ಎಂಬ ಬಗ್ಗೆ  ಬಿಜೆಪಿ ಸ್ಪಷ್ಟವಾಗಿದೆ. ಹಿಂದಿಯನ್ನು ಏಕೈಕ ಭಾಷೆಯಾಗಿಸಬೇಕು ಎಂಬ ಪ್ರಯತ್ನದಲ್ಲಿ ಅದು ಉತ್ತರ ಭಾರತದಲ್ಲಿ ಮೈಥಿಲಿ, ಭೋಜಪುರಿ, ಮಾರ್ವಾಡಿ ಮುಂತಾದ ಭಾಷೆಗಳ ಜಾಗವನ್ನು ಕಬಳಿಸಿದೆ. ಇಂತಹ ಹೆಚ್ಚಿನ ಭಾಷೆಗಳನ್ನು ಮೂಲೆಗೆ ಸರಿಸುವ ಪ್ರಯತ್ನ ಬಹುತೇಕ ಪೂರ್ಣಗೊಂಡಿದೆ.

ತನ್ನ ಬಲವಾದ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಅಸ್ತಿತ್ವದ ಹೊರತಾಗಿಯೂ ಮರಾಠಿ ಭಾಷೆಯು ಹಿಂದಿಯಿಂದ ಬಲವಾದ ಅಪಾಯವನ್ನು ಎದುರಿಸುತ್ತಿದೆ. ದಕ್ಷಿಣ ಭಾರತವು ಮಾತ್ರ ಇಂತಹಾ ಹೇರಿಕೆಯ ಪ್ರಯತ್ನವನ್ನು ತಡೆಯುವುದರಲ್ಲಿ ಈ ತನಕದ ಮಟ್ಟಿಗೆ ಯಶಸ್ವಿಯಾಗಿದೆ. ಹಿಂದಿಯನ್ನು ಇತರ ಭಾಷೆಗಳ ಮೇಲೆ ಹೇರಲು ಯತ್ನಿಸುವವರು ಜನರ ಮೇಲೆ ಹೊರಗಿನ ಭಾಷೆಯನ್ನು ಹೇರುವ ಪ್ರಯೋಗಗಳಲ್ಲಿ ವಿಫಲವಾದ ಜಾಗತಿಕ ಪ್ರಯತ್ನಗಳನ್ನು ನೋಡಬೇಕು. ಒಂದು ಉಪಖಂಡದ ವಾಸಿಗಳಾಗಿ ಇಂತಹ ಪ್ರಯತ್ನಗಳ ಪರಿಣಾಮವನ್ನು ನೋಡಲು ನಾವು ಜಾಗತಿಕ ಯಾತ್ರೆಯನ್ನೇನೂ ಮಾಡಬೇಕಿಲ್ಲ.

ಅಂತರಾಷ್ಟ್ರೀಯ ಮಾತೃಭಾಷೆಗಳ ದಿನವು ಇದೇ ಉಪಖಂಡದ ಕ್ರೂರ ಇತಿಹಾಸದಲ್ಲಿ ತನ್ನ ಮೂಲವನ್ನು ಹೊಂದಿದೆ. ಪಾಕಿಸ್ತಾನದ ಆಳುವ ಪ್ರತಿಷ್ಟಿತ ವರ್ಗವು ತನ್ನ ವೈವಿಧ್ಯಮಯ ದೇಶವನ್ನು ಒಗ್ಗೂಡಿಸುವ ಅಂಶವಾಗಿ ಒಂದು ಭಾಷೆಯನ್ನು ಹೇರುವಲ್ಲಿ ತೋರಿದ ಅತಿ ಉತ್ಸಾಹವು ಪೂರ್ವ ಪಾಕಿಸ್ತಾನದಲ್ಲಿ ಬಂಗಾಳಿ ಭಾಷಾ ಚಳವಳಿಯನ್ನು ಹುಟ್ಟುಹಾಕಿತು. ಇದೇ ಚಳವಳಿಯು ಮುಂದೆ ರಾಜಿಯಾಗದ ಕ್ರೂರ ಆಡಳಿತವನ್ನು ಎದುರಿಸುವ ಅನಿವಾರ್ಯತೆಗೆ ಸಿಲುಕಿ ಪ್ರತ್ಯೇಕವಾದಿ ಚಳವಳಿಯಾಗಿ ಪರಿವರ್ತನೆಯಾಯಿತು. ಪರಿಣಾಮವಾಗಿ 1971ರಲ್ಲಿ ಬಾಂಗ್ಲಾದೇಶದ ಜನನವಾಯಿತು. ಯುನೆಸ್ಕೋ 1999ರಲ್ಲಿ ಘೋಷಣೆ ಮಾಡಿದ ಅಂತರರಾಷ್ಟ್ರೀಯ ಮಾತೃಭಾಷಾ ದಿನವು ಕೇವಲ ಮಾತೃಭಾಷೆಗಳನ್ನು ರಕ್ಷಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ಒಂದು ದೇಶದ ಸೌಹಾರ್ದತೆ ಮತ್ತು ಅಖಂಡತೆಯನ್ನು ಖಾತರಿಪಡಿಸಲು ಪ್ರಜಾಸತ್ತಾತ್ಮಕ ತಿಳುವಳಿಕೆಯ ಅಗತ್ಯವನ್ನದು ಒತ್ತಿಹೇಳುತ್ತದೆ.

ಪಾಕಿಸ್ತಾನವು ಒಂದು ಏಕೀಕೃತ ರಾಷ್ಟ್ರ-ದೇಶವನ್ನು ಸೃಷ್ಟಿಸುವ ಯತ್ನದಲ್ಲಿ ಉರ್ದುವನ್ನು ತನ್ನ ರಾಷ್ಟ್ರಭಾಷೆಯಾಗಿ ಘೋಷಿಸಿತೆಂಬುದನ್ನು ಇಲ್ಲಿ ನೆನಪಿಸಬೇಕಾಗಿದೆ. ಪೂರ್ವ ಪಾಕಿಸ್ತಾನದ ಜನತೆ ಉರ್ದುವಿಗೆ ಹೆಚ್ಚುವರಿಯಾಗಿ ಕನಿಷ್ಟ ಬಂಗಾಳಿಯನ್ನು ರಾಷ್ಟ್ರಭಾಷೆಗಳಲ್ಲಿ ಒಂದೆಂದು ಘೋಷಿಸಬೇಕೆಂಬ ಬೇಡಿಕೆಯಿಟ್ಟರು. ನಂತರ ಹುಟ್ಟಿಕೊಂಡ ಸಾಮೂಹಿಕ ಪ್ರತಿಭಟನೆಯು ಬೇರೆಬೇರೆ ರೂಪಗಳನ್ನು ಪಡೆದುಕೊಂಡಿತು. 1952ರ ಫೆಬ್ರವರಿ 21ರಂದು ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಲಾಯಿತು. ಐವರು ಸತ್ತು ನೂರಾರು ಜನರು ಗಾಯಗೊಂಡರು. 2000ದಿಂದೀಚೆಗೆ ಈ ದಿನವನ್ನು ಅಂದರೆ ಫೆಬ್ರವರಿ 21ನ್ನು ವಿಶ್ವದಾದ್ಯಂತ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ಉಪಖಂಡದಲ್ಲಿ ನಡೆದ ಇನ್ನೊಂದು ಸನ್ನಿವೇಶವನ್ನು ನೆರೆಯ ಶ್ರೀಲಂಕಾದ ಬರ್ಬರ ಇತಿಹಾಸದಲ್ಲಿ ನೋಡಬಹುದು. ಅಲ್ಲಿನ ಅಂತರ್ಯುದ್ಧವು ದೇಶವನ್ನು ವಿಭಜಿಸಿ ಕ್ರೂರ ಹಿಂಸೆಯತ್ತ ತಳ್ಳಿತು. ಅಧಿಕೃತ ಭಾಷಾ ಕಾಯಿದೆ ನಂ. 33 ಎಂಬುದು 1956ರಲ್ಲಿ ಆಗಿನ ಸಿಲೋನಿನ ಸಂಸತ್ತಿನಲ್ಲಿ ಅಂಗೀಕಾರವಾದ ಕಾಯಿದೆ. ಅದು ಸಿಂಹಳೀ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿ ತಮಿಳಿಗೆ ಅದು ಅರ್ಹವಾಗಿದ್ದ ಸ್ಥಾನಮಾನವನ್ನು ನಿರಾಕರಿಸಿತು. ಇದುವೇ ಮುಂದೆ ಪ್ರತ್ಯೇಕತಾವಾದಕ್ಕೆ ಕಾರಣವಾಯಿತು.

ಭಾರತದಲ್ಲಿ ಹಿಂದಿ ಪ್ರದೇಶದ ಭಾರೀ ಬಹುಮತದ ಕಾರಣದಿಂದಾಗಿ ಭಾರತದ ಸಂವಿಧಾನದ ಅಧಿಕೃತ ಭಾಷಾ ಭಾಗ ಮತ್ತು ಇತರ ಕಾನೂನುಗಳು ಈಗಾಗಲೇ ಹಿಂದಿಯ ಪರವಾಗಿವೆ. ಇಂತಹಾ ಅಂಶಗಳಿಂದ ಸನ್ನದ್ಧವಾಗಿ ಕೇಂದ್ರ ಸರಕಾರಗಳು ದೇಶದಾದ್ಯಂತದ ಪಠ್ಯ ಕ್ರಮದಲ್ಲಿ ಹಿಂದಿಯನ್ನು ಹೇರುವ ಪ್ರಯತ್ನಗಳನ್ನು ಬೆಂಬಿಡದೇ ಮಾಡುತ್ತಾಬಂದಿವೆ. ಭಾರೀ ಹಣಕಾಸಿನ ಬೆಂಬಲವಿರುವ ಹಿಂದಿ ಪ್ರಚಾರಸಭಾ ಕಾಯಿದೆಯು ಭಾರತ ಸರಕಾರ ಹಿಂದಿ ಮಾತನಾಡದವರ ಮೇಲೆ ಹಿಂದಿಯನ್ನು ಹೇರುವ ಇನ್ನೊಂದು ವಿಧಾನವಾಗಿದೆ.

ನರೇಂದ್ರ ಮೋದಿ ಎರಡನೇ ಅವಧಿಗೆ ಆಯ್ಕೆಯಾದ ಬೆನ್ನಲ್ಲೇ ಹಿಂದಿ ಹೇರಿಕೆಯ ಮತ್ತೊಂದು ಪ್ರಯತ್ನ ನಡೆದಿದೆ. ಆದರೆ ಈ ಬಾರಿ ವಿರೋಧ ತಮಿಳುನಾಡಿನಲ್ಲಿ ಮಾತ್ರ ಕಂಡುಬಂದಿಲ್ಲ. ಅದು ಕರ್ನಾಟಕ, ಬಂಗಾಳ ಮತ್ತು ಮಹಾರಾಷ್ಟ್ರದಲ್ಲೂ ಕಂಡುಬಂದಿದೆ. ಭಾರತವು ಒಂದು ಬಹುಭಾಷೆಗಳ, ಬಹುರಾಷ್ಟ್ರೀಯತೆಗಳ ದೇಶವೆಂಬುದನ್ನು ಕೇಂದ್ರದಲ್ಲಿರುವವರು ತಿಳಿದುಕೊಳ್ಳಬೇಕು. ಈ ತಿಳುವಳಿಕೆಯನ್ನು ಸಂವಿಧಾನ ಮತ್ತು ಕಾನೂನುಗಳಲ್ಲಿಯೂ ಅಳವಡಿಸಬೇಕು. ನಿರಂತರ ಭಾಷಾ ದಬ್ಬಾಳಿಕೆಯ ಸಮಸ್ಯೆಗೆ ಕೊನೆಗೂ ಇತಿಶ್ರೀ ಹಾಡಬೇಕು.

ನಾವು ಬಹುಭಾಷೀಯ ರಾಜ್ಯಗಳನ್ನು ಒಪ್ಪುವ ನಿಟ್ಟಿನಲ್ಲಿ ಒಂದು ಸಮಾಜವಾಗಿ ಇನ್ನಷ್ಟೇ ಬೆಳೆಯಬೇಕಾಗಿದೆ. ದೇಶ-ರಾಷ್ಟ್ರವು ಒಂದಾಗಿರಲು ಒಂದೇ ಭಾಷೆ ಅಗತ್ಯ ಎಂಬ ಪರಿಕಲ್ಪನೆಯೇ ದೂರವಾಗಬೇಕು. ಅದನ್ನು ಬರೇ ಬಾಯ್ಮಾತಲ್ಲಷ್ಟೇ ಹೇಳಿದರೆ ಸಾಕಾಗದು. ಅದನ್ನು ಸಾಂವಿಧಾನಿಕ ಮತ್ತು ಕಾನೂನು ವ್ಯವಸ್ಥೆಯಲ್ಲಿಯೂ ಅಳವಡಿಸಿಕೊಳ್ಳಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

 1. ಹಿಂದಿ ಹೇರಿಕೆ ಹಿಂದೆ ಗಟ್ಟಿಯಾದ ಹತೋಟಿಕೂಟ ಯಾವುದು?
  ಈ ಹಿಂದೆ‌ ೧೯೯೨-೯೩ರ ಸಾಲಿನಲ್ಲಿ ನಮ್ಮಲ್ಲಿ ಹಿಂದಿಯನ್ನು ಕಲಿಕೆಯಲ್ಲಿ ಅಂದರೆ ಆವರೆಗೆ ಹಯ್ ಸ್ಕೂಲಿನ ತರಗತಿಗಳಲ್ಲಿ ೫೦ ಅಂಕಗಳಿಗೆ ಇದ್ದ ಹಿಂದಿ ಪೇಪರನ್ನು ೧೦೦ ಅಂಕಗಳಿಗೆ ಹೆಚ್ಚಿಸಿದ ಹೊತ್ತಿನಲ್ಲಿ ಇದನ್ನು ಹಿಂಪಡೆಯಲು ಒತ್ತಾಯಿಸಿ ಹಲಹಂತದ ಹೋರಾಟಗಳನ್ನು ಇಲ್ಲಿ ನೆನೆಯಬೇಕು.
  ಇದು ಕಲಿಕೆ ಅಂಗಳದಲ್ಲಿ ಹಿಂದಿ ಬಗೆಗಿನ ಮಾತಾಯ್ತು. ಹಿಂದಿ ಪೇಪರ್ ೧೦೦ ಅಂಗಗಳಿಗೆ ಇದೆ.ಇದು ಕಲಿಕೆಯಲ್ಲಿ ಕನ್ನಡದವರಿಗಾದ ಡೊಡ್ಡ ಹಿನ್ನಡೆ. ಈ ಬಗೆಗೆ ಅಂದು ಅಂತಾ ಬಲವಾದ ಬೆಂಬಲ ಈ ನಾಡಿನೆಲ್ಲಡೆ ಕಂಡುಬರಲಿಲ್ಲ. ಹಿಂದಿ(ಬಿ.ಎಡ್) ಹೆಸರಲ್ಲಿ ಕೆಲ ಕೋರ್ಸಗಳನ್ನು ಮಾಡಿ ಎಲ್ಲಾ ಹಯ್ ಸ್ಕೂಲುಗಳಲ್ಲಿ ಹಿಂದಿ ನೆಲೆಯೂರಿಸಲು ಟೀಚರ್ಸ ಗಳನ್ನು ಒದಗಿಸಲು ಅಣಿಮಾಡಲಾಯ್ತು.
  ಹಾಗೆ ಮುಂದುವರೆದು ನಮ್ಮಲ್ಲಿನ ಬ್ಯಾಂಕ್ ಕೆಲಗಳನ್ನು ಡಿಲ್ಲಿ ಸುತ್ತಲಿನ ಹಿಂದಿಮಂದಿಗೆ ದೊರಕುವಂತೆ ಮಾಡಲು ೨೦೧೩ವರೆಗೆ ಇದ್ದ ಕಟ್ಟುಪಾಡುಗಳನ್ನು ಬದಲಿಸಲಾಗಿದೆ.ಅಂದರೆ
  ಬ್ಯಾಂಕಿಂಗ್ ಕರ್ನಾಟಕ ವಲಯಲ್ಲಿ ಬರುವ ಕೆಲಸಗಳಿಗೆ ಕನ್ನಡವನ್ನು ಹತ್ತನೇ ತರಗತಿವರೆಗೆ ಒಂದು languageಆಗಿ ಓದಿರಬೇಕೆಂಬ ಕಟ್ಟುಪಾಡನ್ನು ತೆಗೆದು ಕೇವಲ ಹಿಂದಿ,ಇಂಗ್ಲೀಶಿನಲ್ಲಿ ಮಾತ್ರ exam ಬರೆಯುವಂತೆ ಮಾಡಿರುವ ತಿದ್ದುಪಡಿ ಹಿಂದೆ ಇರುವ ಹುನ್ನಾರದ ಬಗೆಗೆ ನಮ್ಮ ಮೀಡಿಯಾಗಳು ಇಣುಕಿ ನೋಡಲೇ ಇಲ್ಲ.ಹಿಂದಿ ಮನೆಮಾತಿನವರಾದ ಡೆಲ್ಲಿ ಸುತ್ತಲಿನ ಹಾಗು ಇಂಗ್ಲೀಶು ಬಲ್ಲವರು ಮಾತ್ರ ಕೆಲಸಗಿಟ್ಟಿಸಿದರು, ಕನ್ನಡಿಗರು ವಂಚಿತರಾದರು. ನಮ್ಮ ಊರಿನ ಬ್ಯಾಂಕ್ ಗಳಲ್ಲಿ ನಮ್ಮ ಮಾತುಬರದವರು ಕೂತರು.
  ಹಾಗಾಗಿ, ಈಗ ಆಗಿರುವ ವಂಚನೆಯನ್ನು ಸರಿಮಾಡುವ ಹೆಜ್ಜೆಯನ್ನು ಮುಂದುಮಾಡುವುದೇ ನಮಗುಳಿದಿರುವ ದಾರಿ.ಯಾವುದೀ ದಾರಿ???

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...