ದಕ್ಷಿಣ ಕನ್ನಡದಲ್ಲಿ ಕೋಮುವಾದದ ಸಾಮಾಜಿಕ ಹಿನ್ನೆಲೆ; ಮೊದಲ ಕೋಮುಗಲಭೆ!

ವಾಸ್ತವವಾಗಿ ಕರಾವಳಿಯಲ್ಲಿ ಕೋಮುವಾದದ ಮೂಲ ಇರುವುದೇ ಅಕ್ರಮ ವ್ಯವಹಾರ ಸಂಬಂಧಿ ಮಾಫಿಯಾದಲ್ಲಿ. ಧರ್ಮಕ್ಕೂ ಅದಕ್ಕೂ ನೇರ ಸಂಬಂಧವೇ ಇಲ್ಲ.

0

ಕರಾವಳಿಯಲ್ಲಿ ಕೋಮುವಾದದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿಯನ್ನೂ ಗಮನಿಸಬೇಕು. ಹಿಂದೆ ಬಹುತೇಕ ಗ್ರಾಮೀಣ ಹಿಂದೂಗಳು ಕೃಷಿ ಮತ್ತು ಹೈನುಗಾರಿಕೆ ಮುಂತಾದ ಕೃಷಿ ಸಂಬಂಧಿ ಉದ್ಯೋಗಗಳು, ಮೂರ್ತೆದಾರಿಕೆ, ಮೀನುಗಾರಿಕೆ, ಕುಂಬಾರಿಕೆಯಂತಹಾ ಜಾತಿ ಸಂಬಂಧಿ ಉದ್ಯೋಗಗಳಲ್ಲಿ ತೊಡಗಿದ್ದರು. ಮುಸ್ಲಿಮರು ಮೀನು, ದಿನಸಿ ಸೇರಿದಂತೆ ಬೇರೆಬೇರೆ ವ್ಯಾಪಾರಗಳಲ್ಲಿ ತೊಡಗಿದ್ದರು. ಈ ಉದ್ಯೋಗಗಳು ಪರಸ್ಪರ ಪೂರಕವಾಗಿದ್ದುದರಿಂದ ಯಾವುದೇ ಸ್ಪರ್ಧೆ ಇಲ್ಲದೇ ಸಾಮರಸ್ಯ ನೆಲೆಸಿತ್ತು.

ಇದನ್ನು ಇಂದಿಗೂ ನಡೆಯುತ್ತಿರುವ ಮೀನುಗಾರಿಕೆಯ ವೃತ್ತಿಯಲ್ಲಿ ಗಮನಿಸಬಹುದು. ಮೊಗವೀರ ಸಮುದಾಯದ ಮುಖ್ಯ ಉದ್ಯೋಗವೇ ಮೀನುಗಾರಿಕೆ. ಗಂಡಸರು ಮೀನು ಹಿಡಿಯುವ ಕೆಲಸವನ್ನು ಮಾಡಿದರೆ, ಮಹಿಳೆಯರು ಕರಾವಳಿ ಭಾಗದಲ್ಲಿ ಮೀನು ಮಾರಾಟ ಮಾಡುತ್ತಾರೆ. ಅವರೇ ದೈನಂದಿನ ವ್ಯವಹಾರದಲ್ಲಿ ಗಂಡಸರಿಗೆ ಸರಿಸಾಟಿಯಾಗಿ ಪಾಲುಗೊಳ್ಳಬೇಕಾಗಿರುವುದರಿಂದ ದಿಟ್ಟತನಕ್ಕೆ ಹೆಸರಾಗಿದ್ದಾರೆ. ಆದರೆ, ಒಳಭಾಗದ ಹಳ್ಳಿಗಳಿಗೆ ಮೀನು ಪೂರೈಕೆ, ಮಾರಾಟ ಮಾಡುವವರಲ್ಲಿ 99 ಶೇಕಡಾ ಮುಸ್ಲಿಮರೇ ಆಗಿದ್ದಾರೆ. ಈ ಎರಡೂ ವೃತ್ತಿಗಳು ಪರಸ್ಪರ ಪೂರಕವಾಗಿದ್ದು, ಸೌಹಾರ್ದ ಅನಿವಾರ್ಯವಾಗಿದೆ. ಆದರೆ, ವ್ಯವಹಾರ ಸಂಬಂಧಿ ಚೌಕಾಶಿಯ ಜೊತೆಗೆ, ಪರಸ್ಪರ ಅಸೂಯೆಗಳೂ ಇರುತ್ತವೆ. ಇದು ಕೋಮುಗಲಭೆಗಳ ಸಂದರ್ಭದಲ್ಲಿ ಭುಗಿಲೇಳುತ್ತದೆ. ಅಷ್ಟೇ ಬೇಗನೇ ತಣಿಯುತ್ತದೆ ಕೂಡಾ. ಮೊಗವೀರರು ಸ್ವಭಾವತಃ ಕಪಟವಿಲ್ಲದ, ನೇರ ಮಾತಿನ ಶಾಂತಿಪ್ರಿಯರು. ಆದರೆ, ಬೇಗನೇ ಸಿಟ್ಟಿಗೆದ್ದು ಅಷ್ಟೇ ಬೇಗ ತಣಿಯುವವರು.

ಇದನ್ನೂ ಓದಿ: ಕೋಮುವಾದದ ಕುರಿತು: ರಾಜ್ಯದ ಮುಖ್ಯಮಂತ್ರಿಗಳಿಗೆ ನೆಹರೂ ಪತ್ರಗಳು

ಈ ಕಾರಣದಿಂದಲೋ ತಿಳಿಯದು- ಜಿಲ್ಲೆಯಲ್ಲಿ ಕೋಮು ಗಲಭೆಗಳು ನಡೆದಾಗ ಅವು ಹೆಚ್ಚಿನ ತೀವ್ರತೆ ಪಡೆಯುತ್ತಿದ್ದುದು ಮೊಗವೀರ ಮತ್ತು ಮುಸ್ಲಿಂ ಸಮುದಾಯಗಳು ಹೆಚ್ಚಾಗಿರುವ ಸ್ಥಳಗಳಲ್ಲಿ ಎಂಬ ಕುತೂಹಲಕಾರಿ ಅಂಶವನ್ನು ಗಮನಿಸಬಹುದು. (ಉದಾಹರಣೆಗೆ ಸಮುದ್ರ ದಡದ ಉದ್ದಕ್ಕೂ ಇರುವ ಬೈಕಂಪಾಡಿ, ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಉಳ್ಳಾಲ ಇತ್ಯಾದಿ). ಈ ಮೂಲಕ ಕೋಮುವಾದದ ಸಮಸ್ಯೆಯು ಒಂದು ರೀತಿಯ ಮನೋವೈಜ್ಞಾನಿಕ ಆಯಾಮ ಹೊಂದಿರುವುದನ್ನು ಕಾಣಬಹುದು. ಕೋಮುಗಲಭೆಗಳ ಸಂದರ್ಭಗಳಲ್ಲಿ, ಒಳನಾಡುಗಳ ಹಳ್ಳಿಗಳಲ್ಲಿ ಮುಸ್ಲಿಂ ಮೀನು ವ್ಯಾಪಾರಿಗಳ ಮೇಲೆ ನಡೆದ ಅಪ್ರಚೋದಿತ ದಾಳಿಗಳನ್ನು ಗಮನಿಸಬಹುದು.

ಆದರೆ, ಜಿಲ್ಲೆಯಲ್ಲಿ ಇನ್ನೊಂದು ವ್ಯಾವಹಾರಿಕ ವೈರುಧ್ಯವನ್ನು ಕಾಣಬಹುದು. ಗೌಡ ಸಾರಸ್ವತ ಸಮುದಾಯದ ಬಹುತೇಕ ಜನರು ಅಂಗಡಿ ವ್ಯಾಪಾರವನ್ನು ಅವಲಂಬಿಸಿದವರು. ಅದೇ ರೀತಿಯಲ್ಲಿ ಮುಸ್ಲಿಮರು ಕೂಡಾ ವ್ಯಾಪಾರವನ್ನೇ ಅವಲಂಬಿಸಿರುವುದರಿಂದ ಹಿತಾಸಕ್ತಿ ಸಂಘರ್ಷಗಳು ಇರುತ್ತವೆ. ಜಿಲ್ಲೆಯಲ್ಲಿರುವ ಪೇಟೆಗಳ ರಚನೆಯನ್ನು ಗಮನಿಸಬಹುದು. ಮುಖ್ಯಪೇಟೆಯನ್ನು ಮೇಲಿನ ಪೇಟೆ ಎಂದು ಕರೆಯಲಾಗುತ್ತಿದ್ದು, ಅಲ್ಲಿ ಜಿಎಸ್‌ಬಿ ಸಮುದಾಯದ ಪ್ರಾಬಲ್ಯ ಇರುತ್ತದೆ. ಅದೇ ರಸ್ತೆಯ ಇನ್ನೊಂದು ಭಾಗದಲ್ಲಿ ತಪ್ಪದೇ ಒಂದು ‘ಕೆಳಗಿನ ಪೇಟೆ’ ಇದ್ದು, ಅಲ್ಲಿ ಮುಸ್ಲಿಮರ ಪ್ರಾಬಲ್ಯ ಇರುತ್ತದೆ. ಮೇಲಿನ ಪೇಟೆಯಲ್ಲಿ ದೇವಾಲಯಗಳೂ, ಕೆಳಗಿನ ಪೇಟೆಯಲ್ಲಿ ಮಸೀದಿಗಳೂ ಇರುತ್ತವೆ.

ಬಂಟ್ವಾಳ ಪೇಟೆ

ಕೋಮುಗಲಭೆಗಳು, ತಂಟೆಗಳು ಇಂತಹಾ ಪೇಟೆಗಳಲ್ಲಿ ಹೆಚ್ಚಾಗಿ ಮೊದಲಾಗಿ ಭುಗಿಲೇಳುತ್ತಿದ್ದವು. (ಉದಾಹರಣೆಗೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್-ಕೈಕಂಬ, ಬಂಟ್ವಾಳ, ಕಲ್ಲಡ್ಕ, ಪಾಣೆಮಂಗಳೂರು, ವಿಟ್ಲ, ಮಂಗಳೂರಿನ ಬಂದರು-ಕಾರ್‌ಸ್ಟ್ರೀಟ್, ಪುತ್ತೂರು ತಾಲೂಕಿನ ಪೇಟೆ, ಉಪ್ಪಿನಂಗಡಿ, ಸುಳ್ಯ ತಾಲೂಕು ಕೇಂದ್ರ ) ಇಲ್ಲಿನ ಹಿಂದೂ-ಮುಸ್ಲಿಂ ವ್ಯಾಪಾರಿಗಳು ನೇರವಾಗಿ ಗಲಭೆಗಳಲ್ಲಿ ಭಾಗವಹಿಸಿರುವುದಾಗಲೀ, ಬಂಧನಕ್ಕೆ ಒಳಗಾಗಿರುವುದಾಗಲೀ ತೀರಾ ಅಪರೂಪ. ಆದರೆ, ಹಿನ್ನೆಲೆಯಲ್ಲಿ ಅವರ ಪಾತ್ರವಿರುವುದು ಕಂಡುಬರುತ್ತದೆ. ಅಲ್ಲಿ ನಡೆಯುವ ಗಲಭೆಗಳಲ್ಲಿ ಭಾಗವಹಿಸುವವರು ಸಾಮಾನ್ಯ ಮುಸ್ಲಿಮರು ಮತ್ತು ಬಿಲ್ಲವ, ಕುಲಾಲ, ಮೊಗವೀರ ಇತ್ಯಾದಿಯಾಗಿ ಗ್ರಾಮೀಣ ಸಮುದಾಯದ ಹಿಂದುಳಿದವರು.

ಇತ್ತೀಚೆಗೆ ಆಧುನಿಕರಣ, ನಗರೀಕರಣದ ಕಾರಣದಿಂದ ಸಾಂಪ್ರದಾಯಿಕ ಉದ್ಯೋಗಗಳು ನಶಿಸಿ, ಹೊಸಹೊಸ ರೀತಿಯ ಉದ್ಯೋಗ, ಉದ್ದಿಮೆ, ವ್ಯಾಪಾರಗಳನ್ನು ಅವಲಂಬಿಸಬೇಕಾಗಿರುವುದರಿಂದ ಅವುಗಳಿಗಾಗಿ ವಿವಿಧ ಸಮುದಾಯಗಳ ನಡುವೆ ಉಂಟಾಗುವ ಪೈಪೋಟಿ, ವ್ಯವಹಾರಗಳು ಕೋಮುಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತವೆ ಎಂಬುದನ್ನು ಗಮನಿಸಬೇಕು. ಅಲ್ಲದೇ ಹಿಂದೂ ಹುಡುಗಿ-ಮುಸ್ಲಿಂ ಹುಡುಗ ಇತ್ಯಾದಿ ಗುಮ್ಮಗಳನ್ನು ಸೃಷ್ಟಿಸಿ ಬಿಸಿರಕ್ತದ ಹಿಂದುಳಿದ ಯುವಕರನ್ನು ಉದ್ರೇಕಿಸಲಾಗುತ್ತಿದೆ.

ಬಂದ್ ವೇಳೆ ಕಲ್ಲಡ್ಕ ಪೇಟೆ.

ರಾಜಕೀಯ ಕಾರಣಗಳಿಗಾಗಿ ವಿವಿಧ ಪಕ್ಷಗಳು ಮತ್ತು ಸಂಘಟನೆಗಳು ಇಂತಹ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಿವೆ. ಕೋಮು ಧ್ರುವೀಕರಣ ಮತ್ತು ಮತಬ್ಯಾಂಕ್ ರಾಜಕಾರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಸಮಸ್ಯೆ ಉಲ್ಭಣಿಸುವುದಕ್ಕೆ ಕಾರಣಗಳಾಗಿವೆ. ರಾಜಕೀಯ ಪಕ್ಷಗಳ ಅಪರಾಧೀಕರಣ, ಕ್ರಿಮಿನಲ್‌ಗಳಿಗೆ ರಾಜಕೀಯ ಆಶ್ರಯ, ಪೊಲೀಸ್ ಕೆಲಸಗಳಲ್ಲಿ ಪ್ರಭಾವಿ ರಾಜಕಾರಣಿಗಳ ಹಸ್ತಕ್ಷೇಪ, ಠಾಣೆಗಳಿಗೆ ಮುತ್ತಿಗೆ ಹಾಕಿ ಒತ್ತಡ ಹೇರುವ ತಂತ್ರ, ಕೋಮು ಉದ್ವಿಗ್ನತೆಯನ್ನು ಶಮನ ಮಾಡುವ ಬದಲು ಇನ್ನಷ್ಟು ಪ್ರಚೋದನೆ ನೀಡುವ ಉದ್ರೇಕಕಾರಿ ಭಾಷಣಗಳನ್ನು ಮಾಡುವುದು ಇತ್ಯಾದಿಗಳೂ ಕೋಮುವಾದದ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿವೆ. ಗಾಂಜಾ ಇತ್ಯಾದಿ ಮಾದಕ ವಸ್ತುಗಳ ಮಾರಾಟ ಜಾಲಗಳು, ಬೇರೆಬೇರೆ ರೀತಿಯ ಅಕ್ರಮ ದಂಧೆಗಳು ತಮ್ಮ ಪಾಲು ಸಲ್ಲಿಸಿವೆ. ವಾಸ್ತವವಾಗಿ ಕರಾವಳಿಯಲ್ಲಿ ಕೋಮುವಾದದ ಮೂಲ ಇರುವುದೇ ಅಕ್ರಮ ವ್ಯವಹಾರ ಸಂಬಂಧಿ ಮಾಫಿಯಾದಲ್ಲಿ. ಧರ್ಮಕ್ಕೂ ಅದಕ್ಕೂ ನೇರ ಸಂಬಂಧವೇ ಇಲ್ಲ. ಈ ಕುರಿತು ಪ್ರತ್ಯೇಕ ಲೇಖನವನ್ನೇ ಬರೆಯಬಹುದು.

ಅದಕ್ಕಿಂತ ಮೊದಲು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತಮೊದಲಾಗಿ ಕೋಮುಗಲಭೆ ಆರಂಭವಾದ ಹಿನ್ನೆಲೆಯನ್ನು ಪರಿಶೀಲಿಸುವುದು ಅಗತ್ಯ. 1968ರಲ್ಲಿ ಮಂಗಳೂರಿನ ಬಂದರು ಪ್ರದೇಶದಲ್ಲಿ ಕೋಮುಗಲಭೆ ನಡೆದು ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದ. ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾದ ಮೊದಲ ಗಲಭೆ. ಆದರೆ, ನಂತರ ದಕ್ಷಿಣ ಕನ್ನಡದಲ್ಲಿ ಗಂಭೀರ ಕೋಮುಗಲಭೆಗಳು ಕೆಲವರ್ಷ ನಡೆದಿರಲಿಲ್ಲ.

ಇದನ್ನೂ ಓದಿ: ಕರಾವಳಿಯಲ್ಲಿ ಕೋಮು ಸಾಮರಸ್ಯದ ಇತಿಹಾಸ : ಈಗಲೂ ಕಾಲ ಮಿಂಚಿಲ್ಲ…

1975ರ ಹೊತ್ತಿಗೆ, ಅಂದರೆ ತುರ್ತು ಪರಿಸ್ಥಿತಿಯ ಹೊತ್ತಿಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಬಲವಾಗಿದ್ದು, ಬಹುತೇಕ ಎಲ್ಲಾ ಮುಸ್ಲಿಮರು, ಕ್ರೈಸ್ತರು ಹಾಗೂ ಬಹುಸಂಖ್ಯಾತ ಹಿಂದೂಗಳು ಕಾಂಗ್ರೆಸನ್ನು ಬೆಂಬಲಿಸುತ್ತಿದ್ದರು. ಮುಸ್ಲಿಂ ಲೀಗ್ ಇದ್ದರೂ, ಪ್ರಬಲವಾಗಿರಲಿಲ್ಲ. ಕಾಂಗ್ರೆಸ್‌ಗೆ ಎದುರಾಳಿಯಾಗಿ ಇದ್ದದ್ದು, ಆರೆಸ್ಸೆಸ್ ಮತ್ತು ಸಂಘ ಪರಿವಾರದ ಬೆಂಬಲವಿರುವ ಹಿಂದೂವಾದಿ ಜನಸಂಘ. ಅದು ನಂತರ ಪ್ರತಿಪಕ್ಷಗಳ ಕೂಟವಾದ ಜನತಾ ಪಕ್ಷದಲ್ಲಿ ವಿಲೀನವಾಗಿ, ಆ ಬಳಿಕ ವಿಭಜನೆಗೊಂಡು ಈಗಿನ ಭಾರತೀಯ ಜನತಾಪಕ್ಷವಾಗಿ, ತನ್ನನ್ನು ಹಿಂದೂ ಪಕ್ಷ ಎಂದು ಘೋಷಿಕೊಂಡಿತು.

ಕಲ್ಲಡ್ಕ: ಕರಾವಳಿ ಪೇಟೆಗಳಲ್ಲಿ ಆಗಾಗ ಕಾಣುವ ದೃಶ್ಯ.

ಆ ಹೊತ್ತಿನಲ್ಲಿ ಮಂಗಳೂರು, ಕಲ್ಲಡ್ಕ, ಪಾಣೆಮಂಗಳೂರು, ವಿಟ್ಲ, ಬಂಟ್ವಾಳ, ಉಪ್ಪಿನಂಗಡಿ ಮತ್ತು ಪುತ್ತೂರಿನಲ್ಲಿ ಕೋಮುವಾದಿ ಧ್ರುವೀಕರಣದ ಪ್ರಯತ್ನಗಳು ಜೋರಾಗಿ ನಡೆಯುತ್ತಿದ್ದವು. ಮೇಲ್ಜಾತಿಯವರೇ ಇದರ ಸೂತ್ರದಾರರು. ಅಲ್ಲಿ ಆರೆಸ್ಸೆಸ್, ಸಂಘಟನಾತ್ಮಕವಾಗಿ ಹೆಚ್ಚಿನ ಬಲ ಹೊಂದಿತ್ತು. ಮುಸ್ಲಿಮರಲ್ಲಿ ಹೇಳಿಕೊಳ್ಳುವ ಸಂಘಟನೆಗಳು ಇರಲಿಲ್ಲವಾದರೂ, ದೊಡ್ಡ ಸಂಖ್ಯೆ ಮತ್ತು ಕಾಂಗ್ರೆಸ್ ಬೆಂಬಲದಿಂದ ಅವರು ರಾಜಕೀಯವಾಗಿ ಸಾಕಷ್ಟು ಸಶಕ್ತರಾಗಿದ್ದರು. ವಿಟ್ಲ ವಿಧಾನಸಭಾ ಕ್ಷೇತ್ರವು ಲಂಕೇಶ್ ಅವರಿಗೆ ನಿಕಟರಾಗಿದ್ದ ಬಿ.ಎ. ಉಮ್ಮರಬ್ಬ ಸಹಿತ ಹಲವಾರು ಮುಸ್ಲಿಂ ಶಾಸಕರನ್ನು ಆಯ್ಕೆ ಮಾಡಿದ್ದು, ಜನರು ಸಾಮಾನ್ಯವಾಗಿ ಕೋಮುವಾದಿಗಳಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.

ಇಂತಹಾ ಸಂದರ್ಭದಲ್ಲಿ ಕಲ್ಲಡ್ಕದಲ್ಲಿ ಇಸ್ಮಾಯಿಲ್ ಎಂಬ ವ್ಯಾಪಾರಿಯೊಬ್ಬರು ಕಾಂಗ್ರೆಸ್‌ನಲ್ಲಿ ಪ್ರಬಲ ನಾಯಕನಾಗಿ ಬೆಳೆಯುತ್ತಾ, ಪೊಲೀಸ್ ವಲಯದಲ್ಲೂ ಪ್ರಭಾವ ಹೊಂದಿದ್ದರು. ತುರ್ತು ಪರಿಸ್ಥಿತಿಯ ಆ ಸಂದರ್ಭದಲ್ಲಿ ಪ್ರತಿಪಕ್ಷಗಳ ಅನೇಕ ನಾಯಕರು, ಹಿಂದೂ ಸಂಘಟನೆಗಳ ನಾಯಕರು ಆಂತರಿಕ ಭದ್ರತಾ ಕಾಯಿದೆ (Maintenance of Internal Security Act-MISA) ಅನ್ವಯ ಬಂಧಿತರಾಗಿದ್ದರು. ಇದಕ್ಕೆ ಇಸ್ಮಾಯಿಲ್ ಅವರ ಕುಮ್ಮಕ್ಕು ಕಾರಣ ಎಂದು ಈ ಸಂಘಟನೆಗಳವರು ಭಾವಿಸಿದ್ದರು.

ಒಂದು ರಾತ್ರಿ ಇಸ್ಮಾಯಿಲ್ ಅವರನ್ನು ‘ಪೊಲೀಸ್’ ಜೀಪ್, ಪೋಲೀಸ್ ಉಡುಪಿನಲ್ಲಿ ಬಂದವರು ಕರೆದೊಯ್ದಿದ್ದರು. ಅವರ ಶವ ನಂತರ ಕೊಳೆತ ಸ್ಥಿತಿಯಲ್ಲಿ ನದಿಯಲ್ಲಿ ಪತ್ತೆಯಾಗಿತ್ತು. ಇಸ್ಮಾಯಿಲ್ ಕೊಲೆ ಪ್ರಕರಣ ಎಂದು ಕುಖ್ಯಾತವಾದ ಈ ಪ್ರಕರಣದಲ್ಲಿ, ಪೊಲೀಸರು ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳ ಹಿಂದೂ ಸಂಘಟನೆಗಳ ಕೆಲವು ಪ್ರಮುಖ ನಾಯಕರನ್ನು ಬಂಧಿಸಿದ್ದರು. ಅವರಲ್ಲಿ ಕೆಲವರು ಅಮಾಯಕ ಆದರೆ, ಸಂಘಟನೆಗಳ ಬೆಂಬಲಿಗ ವ್ಯಾಪಾರಿಗಳೂ ಇದ್ದರು. ಆಗ ತುರ್ತು ಪರಿಸ್ಥಿತಿ ಇದ್ದುದರಿಂದ ಪೊಲೀಸರನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇರಲಿಲ್ಲ. ಕೊಲೆಯಿಂದಾಗಿ ಮುಸ್ಲಿಮರಿಗೂ, ಬಂಧನದಿಂದಾಗಿ ಹಿಂದೂಗಳಿಗೂ ಅಸಮಾಧಾನ ಒಳಗೊಳಗೇ ಹೊಗೆಯಾಡುತ್ತಿತ್ತು.

ಕಲ್ಲಡ್ಕದಲ್ಲಿ ಗಲಭೆ ಸಂದರ್ಭ ಅಶ್ರುವಾಯು

ಇದು ಕೋಮುಗಲಭೆಯ ರೂಪದಲ್ಲಿ ಹೊರಹೊಮ್ಮಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು, 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ. ಮೊರಾರ್ಜಿ ದೇಸಾಯಿ ಸರಕಾರ ಅದೇ ವರ್ಷ ಅಕ್ಟೋಬರ್ 4ರಂದು ಇಂದಿರಾಗಾಂಧಿಯವರನ್ನು ಬಂಧಿಸಿತು. ಮರುದಿನ ಪ್ರತಿಭಟನೆಯಾಗಿ ಕಾಂಗ್ರೆಸ್ ಅಂಗಡಿಮುಂಗಟ್ಟುಗಳನ್ನು ಮುಚ್ಚಲು ಹೊರಟಿತು. ಹಿಂದೂ ಬಾಹುಳ್ಯವಿದ್ದ ಮೇಲಿನ ಪೇಟೆ, ಮುಸ್ಲಿಂ ಪ್ರಾಬಲ್ಯದ ಕೆಳಗಿನ ಪೇಟೆಗಳು ಇದ್ದಂತಹಾ ಪಾಣೆಮಂಗಳೂರು, ಬಂಟ್ವಾಳ, ಬಿ.ಸಿ.ರೋಡ್ ಮುಂತಾದ ಹಲವಾರು ಪೇಟೆಗಳಲ್ಲಿ ಇದು ಅಪಾಯಕಾರಿಯಾಗಿತ್ತು. ಏಕೆಂದರೆ, ಅಂಗಡಿಗಳನ್ನು ಮುಚ್ಚಿಸಲು ಹೊರಟ ಕಾಂಗ್ರೆಸಿಗರಲ್ಲಿ ಮುಸ್ಲಿಮರೇ ಹೆಚ್ಚಾಗಿದ್ದರು. ಕಾಂಗ್ರೆಸ್‌ನ ಹಿಂದೂ ಬೆಂಬಲಿಗರು ಗ್ರಾಮೀಣರು.

ಘರ್ಷಣೆಗಳು ನಡೆದು, ಇಡೀ ಪ್ರಕರಣ ಕೋಮುಗಲಭೆಯ ರೂಪ ಪಡೆಯಿತು. ಬೇಕಾಬಿಟ್ಟಿ ವದಂತಿಗಳು ಹಬ್ಬಿ ಗ್ರಾಮೀಣ ಪ್ರದೇಶಗಳಿಂದ ಯುವಕರು ಬರುತ್ತಿದ್ದಂತೆ, ಗಲಭೆ ಗಂಭೀರ ಸ್ವರೂಪ ಪಡೆದು ಎಲ್ಲಡೆ ವ್ಯಾಪಿಸಿತು. ಬಿ.ಸಿ. ರೋಡ್ ಕೈಕಂಬದ ಮಸೀದಿ ಸೇರಿದಂತೆ ಹಲವು ಪೂಜಾಸ್ಥಳಗಳ ಮೇಲೆ ದಾಳಿ, ಕಲ್ಲೆಸೆತ ಇತ್ಯಾದಿ ನಡೆದು ಹಲವರು ಗಂಭೀರವಾಗಿ ಗಾಯಗೊಂಡರು. ಈ ಸಂದರ್ಭದಲ್ಲಿ ಹಲವರನ್ನು ಪೊಲೀಸರು ಬಂಧಿಸಿದರು. ಆದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದುದರಿಂದ ಹಿಂದೂ ಮತ್ತು ಮುಸ್ಲಿಂ ಬಂಧಿತರ ನಡುವೆ ಪೊಲೀಸರು ತಾರತಮ್ಯ ನಡೆಸುತ್ತಿದ್ದಾರೆ ಎಂದೂ, ಕಾಂಗ್ರೆಸ್ ಮುಸ್ಲಿಮರನ್ನು ಮಾತ್ರ ರಕ್ಷಿಸುತ್ತಿದೆ ಎಂದೂ ವದಂತಿ ಹಬ್ಬಿಸಲಾಯಿತು. ಆಗ ಉಂಟಾದ ಕಂದರ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದ್ದು, ಹಿಂದೂವಾದಿ ಸಂಘಟನೆಗಳು ಪ್ರಾಬಲ್ಯ ಹೆಚ್ಚಿಸುತ್ತಾಬಂದಿವೆ. ಒಂದು ಬಣ್ಣದ ಕೋಮುವಾದ ಇನ್ನೊಂದು ಬಣ್ಣದ ಕೋಮುವಾದವನ್ನು ಹುಟ್ಟುಹಾಕುತ್ತದೆ ಮತ್ತು ಅವು ಪರಸ್ಪರರ ಕಾರಣದಿಂದ ಬೆಳೆಯುತ್ತದೆ ಎಂಬುದಕ್ಕೆ ಸರಿಯಾಗಿ ಮುಸ್ಲಿಮರಲ್ಲಿಯೂ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಇವುಗಳು ಕಾಂಗ್ರೆಸಿಗೆ ವಿರೋಧವಾಗಿದ್ದು, ತೀವ್ರಗಾಮಿ ನಿಲುವನ್ನು ಹೊಂದಿದ್ದವು. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆದುನಿಂತಿರುವ ಕೋಮುವಾದದ ಸಮಸ್ಯೆಯ ಅಡಿಪಾಯ ಇರುವುದು ಇಲ್ಲಿಯೇ!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here