ಮನಸ್ಸುಗಳ ಬೆಸೆಯುವ ಸೌಹಾರ್ದದ ಕನಸುಗಾರ ಇಬ್ರಾಹಿಂ ಸುತಾರ…

ಸುತಾರರ `ನಾವೆಲ್ಲಾ ಭಾರತೀಯರೆಂಬ ಭಾವ ಮೂಡಲಿ’ ಎನ್ನುವ ಪದ ಉತ್ತರ ಕರ್ನಾಟಕದ ಭಜನಾ ಮಂಡಳಿಗಳ ರಾಷ್ಟ್ರಗೀತೆಯಂತೆ ಜನಪ್ರಿಯವಾಗಿದೆ.

ಎಲೆಮರೆ – 12

ಅರುಣ್‌ ಜೋಳದ ಕೂಡ್ಲಿಗಿ

ಈಚೆಗೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿರೋಧ ಹೆಚ್ಚಾದ ಕಾರಣ, ಮುಸ್ಲಿಮರಿಂದಲೆ ಈ ಕಾಯ್ದೆಯನ್ನು ಬೆಂಬಲಿಸುವ ಹಾಗೆ ಸುಳ್ಳಿನ ನಿರೂಪಣೆಗಳನ್ನು ಕಟ್ಟತೊಡಗಿದರು. ಇಂತಹ ಹುನ್ನಾರಕ್ಕೆ ಉತ್ತರ ಕರ್ನಾಟಕದ ಸೌಹಾರ್ದದ ಕವಿ ಇಬ್ರಾಹಿಂ ಸುತಾರರೂ ಬಲಿಯಾದರು. `ಯಾವ ಭಾರತೀಯ ಮುಸಲ್ಮಾನರಿಗೂ ಪೌರತ್ವ ಕಾಯಿದೆಯಿಂದ ತೊಂದರೆ ಆಗುವುದಿಲ್ಲ, ಸಮಾಜದಲ್ಲಿ ಸುಳ್ಳು ಸುದ್ದಿ ಯಾರು ಹಬ್ಬಿಸಬಾರದು. ನಾವೆಲ್ಲರು ಭಾರತೀಯರೆ’ ಎಂಬ ಹೇಳಿಕೆಯನ್ನು Ibrahim Sutar ಎನ್ನುವ ಪೇಸ್‍ಬುಕ್ ಪೇಜಲ್ಲಿ ಹಾಕಲಾಗಿತ್ತು. ಇದನ್ನು ನೋಡಿದ ನನಗೆ ಇಬ್ರಾಹಿಂ ಸುತಾರರು ಹೀಗೆ ಹೇಳಿರಲಿಕ್ಕಿಲ್ಲ ಎಂದು ಸ್ವತಃ ಹಿಂಬ್ರಾಹಿಂ ಸುತಾರರ ಬಳಿ ಮಾತನಾಡಿದೆ. ತಿಳಿದ ಸಂಗತಿಯೆಂದರೆ ಸುತಾರರ ಹೆಸರಲ್ಲಿ ಯಾವುದೇ ಅಧಿಕೃತ ಪೇಸ್‍ಬುಕ್ ಪೇಜ್ ಇರಲಿಲ್ಲ. ಅವರ ಹೆಸರಿನ ಫೇಕ್‍ಪೇಜಲ್ಲಿ ಈ ಅಭಿಪ್ರಾಯ ಹಂಚಿಕೆಯಾಗಿತ್ತು. ಈ ಕಾರಣಕ್ಕೆ ಸುತಾರರು ಮಹಾಲಿಂಗಪುರ ಠಾಣೆಯಲ್ಲಿ ಕೇಸ್ ದಾಖಲಿಸಿ, ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದರು. ಸೌಹಾರ್ದ ಸಮಾಜಕ್ಕಾಗಿ ದುಡಿಯುವ ಸುತಾರ ಇವರನ್ನು ಮೂಲಭೂತವಾದಿಗಳು ಹೀಗೆ ದುರ್ಬಳಕೆ ಮಾಡಿಕೊಂಡಿದ್ದರು.

ನಾವು ಬದುಕುತ್ತಿರುವ ಈ ಕಾಲದಲ್ಲಿ ಆಧ್ಯಾತ್ಮ ಭಕ್ತಿ ಎನ್ನುವ ಸಂಗತಿಗಳು ಮಾರುಕಟ್ಟೆಯ ಸರಕಾಗಿವೆ. ಇವುಗಳು ಜನರನ್ನು ಕಂದಾಚಾರಗಲ್ಲಿ ಮುಳುಗಿಸುತ್ತಿವೆ. ಇದು ಮುಂದುವರಿದು ಜಾತೀಯತೆ, ಧಾರ್ಮಿಕ ಮೂಲಭೂತವಾದವನ್ನು ಹೆಚ್ಚಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರವಚನ, ಆಧ್ಯಾತ್ಮ, ಭಕ್ತಿಯ ದಾರಿಯಲ್ಲಿ ಸಾಮಾಜಿಕ ಸುಧಾರಣೆಯ ಕನಸನ್ನು ಹೊತ್ತವರೂ ಇದ್ದಾರೆ. ಹೀಗೆ ಪ್ರವಚನದ ಮೂಲಕ ಸಮಾಜ ಸೇವೆ, ಸಮಸಮಾಜದ ಕನಸು, ಧಾರ್ಮಿಕ ಸಾಮರಸ್ಯವನ್ನು ಹೆಚ್ಚಿಸುವ, ಜಾತಿಯ ತರತಮಗಳನ್ನು ಕಡಿಮೆ ಮಾಡುವ ನೆಲೆಯಲ್ಲಿ ಸಾಮುದಾಯಿಕ ಬದಲಾವಣೆಗೆ ತಮ್ಮದೇ ಆದ ಮಹತ್ತರ ಕಾಣಿಕೆ ಸಲ್ಲಿಸುತ್ತಿರುವವರಲ್ಲಿ ಇಬ್ರಾಹಿಂ ಸುತಾರರು ಗಮನ ಸೆಳೆಯುತ್ತಾರೆ.

ಸುತಾರ ಅವರನ್ನು ನೇರವಾಗಿ ಸಾಮಾಜಿಕ ಚಳವಳಿಯ ಚೌಕಟ್ಟಿನಲ್ಲಿ ಇರಿಸಲಾಗದು. ಆದರೆ ಅವರ ಬದುಕಿನ ತಿರುವುಗಳನ್ನು ನೋಡುತ್ತಾ ಹೋದರೆ, ಸಾಮಾಜಿಕ ಜೀವನದಲ್ಲಿ ಅವರ ಮಹತ್ವ ಅರಿವಾಗುತ್ತದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ ನೆಲೆಸಿದ ಇವರು ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಬಹುಪಾಲು ಹಳ್ಳಿಗಳು ವರ್ಷಕ್ಕೆ ಒಮ್ಮೆಯಾದರೂ ಸುತಾರ ಅವರ ಪ್ರವಚನ ಕೇಳಬೇಕು ಎನ್ನುವುದು ವಾರ್ಷಿಕ ಆಚರಣೆಯಾಗಿದೆ. ಅಂತೆಯೇ ಸುತಾರರ ದಿನಚರಿಯನ್ನು ಗಮನಿಸಿದರೆ ಬಿಡುವಿಲ್ಲದ ಓಡಾಟವೂ ಕಾಣುತ್ತದೆ. ಇಂತಹ ಇಬ್ರಾಹಿಂ ಸುತಾರರ ಒಟ್ಟು ತಿಳಿವನ್ನು ರೂಪಿಸಿದ ಬಾಲ್ಯದ ಅನುಭವಗಳು ಕುತೂಹಲಕಾರಿಯಾಗಿವೆ.

ಸುತಾರ ಅವರು ರಚಿಸುವ ಕಾವ್ಯ ಅಥವಾ ವಚನಗಳನ್ನು `ಬಸವ’ ಎಂಬ ಅಂಕಿತದಲ್ಲಿ ಬರೆಯುತ್ತಿದ್ದಾರೆ. ಪ್ರವಚನಗಳಲ್ಲಿ ಸಾಮಾಜಿಕ ಪ್ರಸಕ್ತ ವಿದ್ಯಮಾನದ ಸಂಗತಿಗಳನ್ನು ತರುವ ಕ್ರಮ ಕೂಡ ಇದೆ. ಈ ಅರ್ಥದಲ್ಲಿ ಅವರೊಬ್ಬ ಜನಪದ ಕವಿ. ಜನಪದ ಸಂವಹನದ ದಾರಿಯನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಈ ನೆಲೆಯಲ್ಲಿ ದೇವದಾಸಿ ಪದ್ಧತಿಯ ವಿರುದ್ಧ, ಜಾತಿ ಪದ್ಧತಿಯ ವಿರುದ್ಧ ಜನಜಾಗೃತಿ ಮೂಡಿಸುವುದು, ಸಾಕ್ಷರತಾ ಕಾರ್ಯಕ್ರಮದಲ್ಲಿ ಶಿಕ್ಷಣದ ಮಹತ್ವ ಸಾರುವುದು ಇತ್ಯಾದಿ. ತೀರಾ ಸಾಂಪ್ರದಾಯಿಕ ಸಂಗತಿಗಳನ್ನು ಮಾತ್ರ ಸಂವಹನ ಮಾಡಲು ಸಾಧ್ಯವಿದ್ದ ದಾರಿಯಲ್ಲಿಯೇ ಈ ಬಗೆಯ ಪ್ರಯೋಗ ಮಾಡಿರುವುದು ಮುಖ್ಯವಾಗಿದೆ. ಅಂತೆಯೇ ಈ ಪ್ರಯೋಗ ಕೂಡ ಧರ್ಮಸೂಕ್ಷ್ಮದಿಂದ ಕೂಡಿದೆ. ಜಾತಿಪದ್ಧತಿಯನ್ನು ವಿರೋಧಿಸುವಾಗ ಮೇಲುಜಾತಿಗಳನ್ನು ಗುರಿಯಾಗಿಟ್ಟುಕೊಳ್ಳುವಂತಿಲ್ಲ. ಬದಲಾಗಿ ಉದಾರವಾದಿ ನೆಲೆಯಲ್ಲಿ ಇದನ್ನು ನಿಭಾಯಿಸಿದ್ದಾರೆ. ಕಾರಣ ಸುತಾರರ ಪ್ರವಚನಗಳ ಪ್ರಾಯೋಜಕರು ಸಾಮಾನ್ಯವಾಗಿ ಮೇಲುಜಾತಿಯ ಮಠಗಳು ಎನ್ನುವುದನ್ನು ಗಮನಿಸಬೇಕು.

ಇಬ್ರಾಹಿಂ ಸುತಾರ ಅವರು ಮಾಡಿದ ಪ್ರವಚನದ ದಾರಿ ಒಂದು ಬಗೆಯ ಚಳವಳಿಯ ದಾರಿಯೂ ಆಗಿದೆ. ಇಲ್ಲಿ ಸಾಹಿತ್ಯ ಓದುಬರಹದಿಂದ ದಕ್ಕುವ ವೈಚಾರಿಕತೆ ಮೂಡದಿರಬಹುದು, ಆದರೆ ಕೆಲವು ಬಿಗಿಯಾದ ಕಟ್ಟುಗಳು ಸಡಿಲವಾಗುವ ಅರ್ಥದಲ್ಲಿ ಈ ಬದಲಾವಣೆಯನ್ನು ಗ್ರಹಿಸಬೇಕಾಗಿದೆ. ಮುಖ್ಯವಾಗಿ ಸುತಾರ ತರಹದ ಪ್ರವಚನ ಮಾದರಿಯಲ್ಲಿ ಇತರರು ಎದುರಿಸದ ಕೆಲವು ಬಿಕ್ಕಟ್ಟುಗಳನ್ನು ಇವರೊಬ್ಬ ಮುಸ್ಲಿಂ ಆದ ಕಾರಣಕ್ಕೆ ಎದುರಿಸಬೇಕಿತ್ತು. ಆದರೆ ಅದನ್ನವರು ತುಂಬಾ ಜಾಗರೂಕತೆಯಿಂದ ದಾಟಿದ್ದಾರೆ. ಈ ಮಧ್ಯೆಯೂ ಅವರು `ನಿಮ್ಮನೊಡನಿದ್ದೂ ನಿಮ್ಮಂತಾಗದೆ’ ಎನ್ನುವಂತಹ ಕವಿ ನಿಸಾರ್ ಅಹಮದ್ ತರಹದ ಬಿಕ್ಕಟ್ಟನ್ನು ಸೂಕ್ಷ್ಮವಾಗಿ ಎದುರುಗೊಂಡಿದ್ದಾರೆ.

ಇಲ್ಲಿ ಮುಖ್ಯವಾಗಿ ಜನರ ನಂಬಿಕೆಯ ದಾರಿಗಳಲ್ಲಿ ನಡೆಯುತ್ತಲೇ ಅವರ ಲೋಕದೃಷ್ಟಿಯನ್ನು ತಿದ್ದುವ ರೀತಿ ಇದಾಗಿದೆ. ಅಂದರೆ ಜನರು ಸಾಂಪ್ರದಾಯಿಕವಾಗಿ ಭಕ್ತಿ, ಭಜನೆ, ಪ್ರವಚನಗಳ ಜತೆ ಬೆಸೆದುಕೊಂಡ ನಂಬಿಕೆಯ ಲೋಕಗಳನ್ನು ಬಳಸಿಕೊಂಡೇ ಧಾರ್ಮಿಕ ಕಟ್ಟಳೆಗಳನ್ನೂ, ಜಾತಿಯ ಕಟ್ಟಳೆಗಳನ್ನೂ, ಲಿಂಗದ ಕಟ್ಟಳೆಗಳನ್ನೂ, ವರ್ಗಶ್ರೇಣಿಯ ಕಟ್ಟಳೆಗಳನ್ನೂ, ಮೂಢನಂಬಿಕೆಗಳನ್ನು ಮೀರುವ ತಿಳಿವನ್ನು ಬಿತ್ತರಿಸುವುದಾಗಿದೆ.

ಸುತಾರರು `ಪಾರಮಾರ್ಥ ಲಹರಿ ತತ್ವಪದಗಳು’ `ತತ್ವಜ್ಞಾನಕ್ಕೆ ಎಲ್ಲರೂ ಅಧಿಕಾರಿಗಳು’ `ನಾವೆಲ್ಲಾ ಭಾರತೀಯರು’ ಎಂಬ ಕಾವ್ಯ ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ `ನಾವೆಲ್ಲಾ ಭಾರತೀಯರೆಂಬ ಭಾವ ಮೂಡಲಿ’ ಎನ್ನುವ ಪದ ಉತ್ತರ ಕರ್ನಾಟಕದ ಭಜನಾ ಮಂಡಳಿಗಳ ರಾಷ್ಟ್ರಗೀತೆಯಂತೆ ಜನಪ್ರಿಯವಾಗಿದೆ. ಸುತಾರರು ನವಮೌಖಿಕ ಮಾಧ್ಯಮಗಳಲ್ಲಿ ಹೆಚ್ಚು ಪ್ರಸಾರವಾಗಿದ್ದಾರೆ. ಹಾಗಾಗಿ ಈತನಕ 20 ಧ್ವನಿಸುರುಳಿಗಳು ಬಿಡುಗಡೆಯಾಗಿವೆ. ಇದರ ಪ್ರಭಾವದಿಂದ ಸುತಾರರ ಪ್ರವಚನ ಮತ್ತು ಪದಗಳು ಮೊಬೈಲ್‍ನಲ್ಲಿಯೂ, ಟಿವಿಗಳಲ್ಲಿಯೂ ವ್ಯಾಪಕವಾಗಿ ಹರಡಿವೆ.

ಸುತಾರರು ತಮ್ಮ ಪ್ರವಚನದ ಜತೆ ಸಾಮಾಜಿಕ ಕಾಳಜಿಯ ಕಡೆ ಮುಖ ಮಾಡಿರುವುದು ಮುಖ್ಯವಾಗಿದೆ. ಇಲ್ಲಿ ಅವರು ಸಾಮೂಹಿಕ ಹಿತದ ಕೆಲಸಗಳಿಗೆ ಹೆಚ್ಚು ಗಮನಹರಿಸಿದ್ದಾರೆ. ರಸ್ತೆ ಮಾಡಿಸಿದ್ದು, ಶಾಲೆ ಕಟ್ಟಿಸಿದ್ದು, ಕುಡಿಯುವ ನೀರಿನ ಟ್ಯಾಂಕ್ ಕಟ್ಟಿಸಿದ್ದು ಇತ್ಯಾದಿಗಳು. ಇಂತಹ ಕೆಲಸಗಳಿಗೆ ಬಂದೊದಗಿದ ಸಂದರ್ಭಗಳು, ಇಂತಹ ಸಂದರ್ಭವನ್ನು ಸುತಾರರು ನಿಭಾಯಿಸಿದ ಬಗೆ ಎರಡೂ ಭಿನ್ನವಾಗಿದೆ.

ಸುತಾರರನ್ನು ಉತ್ತರ ಕರ್ನಾಟಕದಲ್ಲಿ `ಕನ್ನಡದ ಕಬೀರ’ನೆಂದು ಗುರುತಿಸುತ್ತಾರೆ. ಈ ಬಗ್ಗೆ ರಂಜಾನ್ ದರ್ಗಾ ಅವರು `ಸಂತ ಕಬೀರ ದುಷ್ಟಶಕ್ತಿಗಳನ್ನು ಎದುರುಹಾಕಿಕೊಂಡು ವೈಚಾರಿಕತೆಯ ಮಾನವ ಏಕತೆಯನ್ನು ಸಾಧಿಸಿದರೆ, ಇವರು ಯಾರನ್ನೂ ಎದುರು ಹಾಕಿಕೊಳ್ಳದೆ ಮಾನವ ಏಕತೆಯನ್ನು ಸಾಧಿಸುವ ಕ್ರಮ ಆಪ್ಯಾಯಮಾನವಾಗಿದೆ’ ಎನ್ನುತ್ತಾರೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here