Homeಮುಖಪುಟತಜ್ಞರ ವರದಿಯನ್ನು ನಿರಾಕರಿಸುತ್ತಿರುವ ಐಸಿಎಂಆರ್‌: ವೈದ್ಯಕೀಯ ತಜ್ಞರು ವರ್ಸಸ್ ರಾಜಕೀಯ

ತಜ್ಞರ ವರದಿಯನ್ನು ನಿರಾಕರಿಸುತ್ತಿರುವ ಐಸಿಎಂಆರ್‌: ವೈದ್ಯಕೀಯ ತಜ್ಞರು ವರ್ಸಸ್ ರಾಜಕೀಯ

- Advertisement -
- Advertisement -

ಜೂನ್ ೧೪ರಂದು ಹಲವಾರು ಪತ್ರಿಕೆಗಳಲ್ಲಿ ಒಂದು ವರದಿ ಪ್ರಕಟವಾಯಿತು. ಅಷ್ಟೆಲ್ಲಾ ಪತ್ರಿಕೆಗಳಲ್ಲಿ ಒಮ್ಮೆಗೇ ಆ ವರದಿ ಬರಲು ಕಾರಣವಿತ್ತು. ಅದರ ಮೂಲ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಆಗಿದ್ದುದರಿಂದ ಎಲ್ಲರೂ ಪ್ರಕಟಿಸಿದರು. ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು) ರಚಿಸಿದ ಒಂದು ತಜ್ಞರ ಸಮಿತಿಯು ಮುಂದಿಟ್ಟಿರುವ ಅಧ್ಯಯನ ವರದಿಯ ಪ್ರಕಾರ ನವೆಂಬರ್ ಮಧ್ಯಭಾಗದಲ್ಲಿ ಭಾರತದಲ್ಲಿ ಕೊರೊನಾ ಸೋಂಕಿನ ಶಿಖರ ಕಂಡುಬರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಅದರ ಮರುದಿನ, ಜೂನ್ ೧೫ರಂದು ಐಸಿಎಂಆರ್ ಒಂದು ಟ್ವೀಟ್‌ನ ಮುಖಾಂತರ ಇದನ್ನು ಅಲ್ಲಗಳೆಯಿತು. ಅವರ ಪ್ರಕಾರ ’ಇತರ ಸಹತಜ್ಞರಿಂದ ಇನ್ನೂ ಪರಾಮರ್ಶನೆಗೊಳಗಾಗದ ಈ ವರದಿಯು ಐಸಿಎಂಆರ್‌ದ್ದಲ್ಲ ಮತ್ತು ಇದು ಐಸಿಎಂಆರ್‌ನ ಅಧಿಕೃತ ತಿಳುವಳಿಕೆಯೂ ಅಲ್ಲ’. ಒಂದು ಟ್ವೀಟ್‌ನ ಮುಖಾಂತರ ಐಸಿಎಂಆರ್ ಹೀಗೆ ಹೇಳಿತ್ತು.

ಸದರಿ ತಜ್ಞ ವರದಿಯನ್ನು ತಯಾರು ಮಾಡಿದ್ದವರಲ್ಲಿ ದೇಶದ ಎರಡು ಪ್ರತಿಷ್ಠಿತ ಸಂಸ್ಥೆಗಳ ಪ್ರಮುಖ ತಜ್ಞರು, ಲಂಡನ್‌ನ ಒಬ್ಬ ತಜ್ಞರು ಮತ್ತು ಸ್ವತಃ ಐಸಿಎಂಆರ್ ರಚಿಸಿದ್ದ ರಾಷ್ಟ್ರೀಯ ಕೋವಿಡ್ ಟಾಸ್ಕ್ ಫೋರ್ಸ್‌ನ ’ಆಪರೇಷನ್ಸ್ ರಿಸರ್ಚ್ ಗ್ರೂಪ್‌ನ ಮುಖ್ಯಸ್ಥ’ ನರೇಂದ್ರ ಅರೋರಾ ಸಹಾ ಇದ್ದರು. ಈ ವರದಿಯು ಅಧಿಕೃತ ವರದಿಯಾಗಿಲ್ಲದಿದ್ದಲ್ಲಿ ಅದನ್ನು ಬಹಿರಂಗಗೊಳಿಸಲಾಯಿತೇಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿತು. ಈ ರೀತಿ ಕೆಲವು ಸಮಸ್ಯೆಗಳಾಗುವುದು ಸಹಜ ಎಂದುಕೊಳ್ಳುವುದಾದಲ್ಲಿ, ಜೂನ್ ೭-೮ರಂದೂ ಇಂತಹುದೇ ಒಂದು ಬೆಳವಣಿಗೆ ನಡೆದಿತ್ತು. ಭಾರತದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿರುವ ನಗರಗಳು ಮತ್ತು ಮಧ್ಯಮ ಪ್ರಮಾಣ ಹಾಗೂ ಕಡಿಮೆ ಪ್ರಮಾಣದ ಸೋಂಕಿರುವ ನಗರಗಳಲ್ಲಿ ನಡೆಸಿದ ಒಂದು ಅಧ್ಯಯನ ವರದಿಯು ಜೂನ್ ೭ರಂದು ಹೊರಬಿದ್ದಿತ್ತು. ಅದರ ಪ್ರಕಾರ ಹಾಟ್‌ಸ್ಪಾಟ್ ನಗರಗಳಲ್ಲಿನ ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಶೇ.೧೫ರಿಂದ ಶೇ.೩೦ರಷ್ಟು ಜನರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ. ಇದನ್ನು ಸದರಿ ತಜ್ಞರು ಸುಖಾಸುಮ್ಮನೆ ಹೇಳಿದ್ದಲ್ಲ. ಅಂತಹ ಪ್ರದೇಶಗಳಲ್ಲಿನ ಜನರ ರಕ್ತವನ್ನು ತೆಗೆದುಕೊಂಡು ಪರೀಕ್ಷಿಸಿ, ಅವರ ದೇಹದಲ್ಲಿ ಕೊರೊನಾ ಸೋಂಕು ಬಂದು ಹೋಗಿರುವುದಕ್ಕೆ ನಿದರ್ಶನವಾಗಿ ಆಂಟಿಬಾಡಿಗಳಿರುವುದನ್ನು ಪತ್ತೆ ಹಚ್ಚಿ ಅಭಿಪ್ರಾಯ ಮುಂದಿಟ್ಟಿದ್ದರು.

ಆದರೆ ಮರುದಿನ ಜೂನ್ ೮ರಂದು ಇದನ್ನೂ ಐಸಿಎಂಆರ್ ನಿರಾಕರಿಸಿತು. ಇಂಡಿಯನ್ ಎಕ್ಸ್‌ಪ್ರೆಸ್‌ನ ಪ್ರಕಾರ ಈ ವರದಿಯನ್ನು ಪ್ರಧಾನಮಂತ್ರಿ ಕಚೇರಿ ಮತ್ತು ಒಕ್ಕೂಟ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಯವರಿಗೂ ಈ ವರದಿಯನ್ನು ಸಲ್ಲಿಸಲಾಗಿತ್ತು. ಐಸಿಎಂಆರ್, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ವಿಶ್ವ ಆರೋಗ್ಯ ಸಂಸ್ಥೆಯ ಭಾರತ ಕಚೇರಿ ಹಾಗೂ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ೭೦ ಜಿಲ್ಲೆಗಳ ೨೪,೦೦೦ ಜನರ ರಕ್ಷವನ್ನು ಸಂಗ್ರಹಿಸಿ ಈ ಅಧ್ಯಯನ ನಡೆಸಿದೆಯೆಂದೂ ಹೇಳಲಾಗಿತ್ತು. ದೇಶದ ಒಟ್ಟು ಕೊರೊನಾ ಸೋಂಕಿತರ ಪೈಕಿ ಶೇ.೭೦ರಷ್ಟು ಜನರಿದ್ದ ಮುಂಬಯಿ, ಅಹಮದಾಬಾದ್, ಪುಣೆ, ದೆಹಲಿ, ಕೊಲ್ಕೊತ್ತಾ, ಇಂದೋರ್, ಥಾಣೆ, ಜೈಪುರ, ಚೆನ್ನೈ ಮತ್ತು ಸೂರತ್‌ಗಳಲ್ಲಿನ ತಲಾ ೧೦ ಕಂಟೈನ್‌ಮೆಂಟ್ ಪ್ರದೇಶಗಳಿಂದ ತಲಾ ೫೦೦ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಇದಲ್ಲದೇ ಇನ್ನೂ ಕಡಿಮೆ ಹಬ್ಬಿದ್ದ ೨೧ ರಾಜ್ಯಗಳ ೬೦ ಜಿಲ್ಲೆಗಳಲ್ಲೂ ಅಧ್ಯಯನ ನಡೆಸಿತ್ತು.

ಅಂದರೆ ಸರ್ಕಾರದಿಂದಲೇ ಅಧಿಕೃತವಾಗಿ ಈ ಸಮೀಕ್ಷೆ ನಡೆದಿತ್ತೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಜೂನ್ ೯ರಂದು ’ಇವೆಲ್ಲಾ ಊಹಾಪೋಹ ಅಷ್ಟೇ. ಇನ್ನೂ ಅಂತಿಮ ವರದಿ ಬಂದಿಲ್ಲ’ ಎಂದು ಐಸಿಎಂಆರ್ ಟ್ವೀಟ್ ಮಾಡಿತು. ವರದಿಯಲ್ಲೂ ಸಹಾ ಕೊಲ್ಕೊತ್ತಾ ಮತ್ತು ಸೂರತ್‌ಗಳ ವರದಿ ಇನ್ನೂ ಬಂದಿಲ್ಲವೆಂದು ಹೇಳಲಾಗಿತ್ತಾದ್ದರಿಂದ ಈ ಟ್ವೀಟ್‌ಗೆ ಒಂದು ಕಾರಣವಿತ್ತೆಂದುಕೊಳ್ಳೋಣ. ಆದರೆ ಅಲ್ಲಿಂದಾಚೆಗೆ ಒಂದು ವಾರವಾದರೂ ಆ ’ಅಂತಿಮ ವರದಿ’ ಇನ್ನೂ ಹೊರಗೆ ಬಂದಿಲ್ಲ.

ಅಷ್ಟೇ ಅಲ್ಲದೇ ಈಗಿನ ಇನ್ನೊಂದು ವರದಿಯನ್ನೂ ಅಧಿಕೃತವಲ್ಲವೆಂದು ತಳ್ಳಿ ಹಾಕಲಾಗುತ್ತಿದೆ.

ಒಂದು ವೇಳೆ ಸರ್ಕಾರಕ್ಕೆ ಇವುಗಳನ್ನು ಹೊರಗೆ ಪ್ರಕಟಿಸಬಾರದೆಂಬ ಉದ್ದೇಶವಿದ್ದರೆ ಹೊರಗೆ ಬಂದದ್ದು ಹೇಗೆ? ’ಲೀಕ್’ ಆಯಿತೇ? ಇಲ್ಲ. ಸ್ವತಃ ಪಿಟಿಐ ಎರಡನೆಯ ವರದಿಯನ್ನು ಬಹಿರಂಗಗೊಳಿಸಿತ್ತು. ಅಂದರೆ ಸರ್ಕಾರಕ್ಕೆ ಇದು ಪ್ರಕಟವಾಗುವುದು ಬೇಕಿತ್ತೆ. ಅದಕ್ಕೆ ಕಾರಣ ಹೀಗಿರಬಹುದು. ಲಾಕ್‌ಡೌನ್ ಮಾಡಿದ್ದರಿಂದಾಗಿ ದೇಶದಲ್ಲಿ ಕೊರೊನಾ ಸೋಂಕಿನ ಹಬ್ಬುವಿಕೆಯ ಶಿಖರ (ಪೀಕ್) ಮುಟ್ಟಲು ೩೪ರಿಂದ ೭೬ ದಿನಗಳಷ್ಟು (ಲಾಕ್‌ಡೌನ್ ೨೦%ಇಂದ ೮೦% ವರೆಗೆ ಎಷ್ಟು ಪರಿಣಾಮಕಾರಿಯಾಗಿದೆಯೆಂಬುದರ ಆಧಾರದ ಮೇಲೆ ಅಷ್ಟಷ್ಟು) ನಿಧಾನವಾಗಿದೆಯೆಂದು ಹೇಳಿ, ಲಾಕ್‌ಡೌನ್‌ನ ಸಮರ್ಥನೆಯನ್ನು ಆ ವರದಿಯು ಮಾಡಿತ್ತು. ಲಾಕ್‌ಡೌನ್‌ನ ಕಾರಣದಿಂದಾಗಿ ಸೋಂಕು ಹರಡುವುದು (ನಿಲ್ಲುವುದಿಲ್ಲವಾದರೂ) ನಿಧಾನವಾಗುತ್ತದೆ ಎಂಬುದನ್ನು ಯಾರೂ ನಿರಾಕರಿಸಿಲ್ಲ. ಆದರೂ ಲಾಕ್‌ಡೌನ್‌ನಿಂದಾದ ಸಮಸ್ಯೆಗಳ ಕುರಿತು ಹೆಚ್ಚೆಚ್ಚು ವರದಿಗಳು ಬರುತ್ತಿರುವ ಹೊತ್ತಿನಲ್ಲಿ ಇದನ್ನು ಬಳಸಿಕೊಳ್ಳುವ ಆತುರವನ್ನು ಸರ್ಕಾರವು ತೋರಿದಂತಿದೆ.

ಅಷ್ಟೇ ಅಲ್ಲದೇ, ಸದರಿ ವರದಿಯಲ್ಲಿ ’ಲಾಕ್‌ಡೌನ್‌ನ ಕಾರಣದಿಂದಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸೂಕ್ತವಾಗಿ ಬಲಪಡಿಸಿಕೊಳ್ಳಲಾಯಿತು’ ಎಂತಲೂ ಹೇಳಲಾಗಿದೆ. ಬಹುಶಃ ಇದೂ ಸಹಾ ಸರ್ಕಾರಕ್ಕೆ ಬಳಸಿಕೊಳ್ಳಲು ಆಕರ್ಷಕವಾಗಿ ಕಾಣಿಸಿತೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಿದ್ದ ಮೇಲೆ ಸರ್ಕಾರವೇಕೆ ಇದರಿಂದ ಹಿಂದಕ್ಕೆ ಹೋಯಿತು ಎಂಬುದಕ್ಕೆ ಕಾರಣ ಹುಡುಕಬೇಕಾಗುತ್ತದೆ. ವರದಿಯಲ್ಲೇ ಇದಕ್ಕೂ ಉತ್ತರವಿದ್ದಂತಿದೆ. ಮಾರ್ಚ್ ಲಾಕ್‌ಡೌನ್‌ನ ನಂತರದಲ್ಲೇ ಆ ಸಂದರ್ಭಕ್ಕೆ ಅಗತ್ಯವಿದ್ದ ವ್ಯವಸ್ಥೆಯನ್ನು ಸರ್ಕಾರವು ಮಾಡಿಕೊಂಡಿತೆಂದು ಹೇಳುವ ವರದಿಯು, ನವೆಂಬರ್ ಮೊದಲ ವಾರದ ನಂತರ (ಅಂದರೆ ಮುಂದಿನ ೫ ತಿಂಗಳ ನಂತರ!!) ದೇಶದಲ್ಲಿ ಐಸೋಲೇಷನ್ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್‌ಗಳ ಪ್ರಮಾಣ ೫.೪, ೪.೬ ಮತ್ತು ೩.೯ ತಿಂಗಳವರೆಗೆ ಸಾಲದೇ ಬರುತ್ತದೆ ಎಂದು ಹೇಳುತ್ತದೆ!!!

ಇದು ಆಶ್ಚರ್ಯಕರವಾಗಿದೆ. ಏಕೆಂದರೆ ದಿಢೀರನೆ ಹೇರಲಾದ ಲಾಕ್‌ಡೌನ್‌ನಿಂದ ಸೋಂಕೂ ಹರಡದೇ ಇದ್ದಾಗ ಸಾರ್ವಜನಿಕ ಆರೋಗ್ಯ ಕ್ರಮಗಳು ಮತ್ತು ವ್ಯವಸ್ಥೆಯನ್ನು ಸೂಕ್ತವಾಗಿ ಮಾಡಿಕೊಳ್ಳಲಾಗಿದ್ದರೆ, ಮುಂದಿನ ೫ ತಿಂಗಳಲ್ಲಿ ಅಗತ್ಯವಿರುವಷ್ಟು ವ್ಯವಸ್ಥೆಯನ್ನು ಸರ್ಕಾರವೇಕೆ ಮಾಡಲು ಸಾಧ್ಯವಾಗುವುದಿಲ್ಲ? ಇದರ ಅರ್ಥ ದೊಡ್ಡ ಪ್ರಮಾಣದಲ್ಲಿ ಸಾವುಗಳು ಸಂಭವಿಸಬಹುದು ಎಂದೇ? ಈಗಾಗಲೇ ಮುಂಬಯಿಯ ಶೇ.೯೦ರಷ್ಟು ವೆಂಟಿಲೇಟರ್‌ಗಳು ತುಂಬಿವೆ ಎಂಬ ವರದಿಗಳು ಬಂದಿವೆ. ಜೊತೆಗೆ ಕೆಲವು ಕೋಟಿ ಜನರು ನವೆಂಬರ್ ಹೊತ್ತಿಗೆ ಸೋಂಕನ್ನು ಹೊಂದಿರುತ್ತಾರೆ ಎಂದೂ ವರದಿಯು ಹೇಳಿದೆ. ಬಹುಶಃ ಈ ಕಾರಣಕ್ಕೇ ಸರ್ಕಾರದ ಮುಖ್ಯ ಸ್ಥಾನದಲ್ಲಿರುವವರು ಐಸಿಎಂಆರ್‌ಗೆ ವರದಿಯಿಂದ ದೂರ ಕಾಪಾಡಿಕೊಳ್ಳಲು ಸೂಚಿಸಿದ್ದಂತಿದೆ.

ನಾವು ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶ ವರದಿಯಲ್ಲಿದೆ. ಅದೇನೆಂದರೆ ಒಟ್ಟು ಜಿಡಿಪಿಯ ೬.೨% ಅಷ್ಟು ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ವ್ಯಯಿಸಬೇಕಾಗುತ್ತದೆಂದು ಹೇಳಿದೆ. ಹಾಲಿ ಅದರ ಪ್ರಮಾಣ (ಬಜೆಟ್‌ನ ಅಂಕಿಅಂಶದ ಪ್ರಕಾರ) ೧.೩% ಮಾತ್ರ ಆಗಿದೆ. ಕೋವಿಡ್ ಎದುರಿಸಲು ಸರ್ಕಾರವು ವೈದ್ಯಕೀಯ ವ್ಯವಸ್ಥೆಗೆ ಮುಡಿಪಿಟ್ಟಿರುವ ಹಣದ ೭೫ ಪಟ್ಟನ್ನು ಖರ್ಚು ಮಾಡಬೇಕೆಂದು ಇದರ ಅರ್ಥ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ೨೫,೫೩೪ ಶತಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡಬೇಕೆಂಬ ವರದಿಯು ಸರ್ಕಾರಕ್ಕೆ ಅಪ್ಯಾಯಮಾನವಾಗಿ ತೋರಿರಲಿಕ್ಕಿಲ್ಲ.

ತಜ್ಞರು ವರ್ಸಸ್ ರಾಜಕೀಯ ನಾಯಕರು ಎಂಬ ಸನ್ನಿವೇಶವೂ ಹೊಸತೇನಲ್ಲ. ಇದು ಇಂಗ್ಲೆಂಡಿನಲ್ಲೂ ತಲೆದೋರಿತ್ತೆಂದು ಅಲ್ಲಿನ ಗೆಳೆಯರು ಹೇಳುತ್ತಾರೆ. ಏಕೆಂದರೆ ’ನೋಡಿ ಪರಿಸ್ಥಿತಿ ಇಷ್ಟು ಭೀಕರವಾಗಬಹುದು’ ಎಂಬ ತಜ್ಞರ ವರದಿಯನ್ನು ದೇಶವನ್ನು ಮುನ್ನಡೆಸುತ್ತಿರುವ ನಾಯಕರು ಹಾಗೆಯೇ ಮುಂದಿಡಲಾಗದು. ಏಕೆಂದರೆ ಅವರು ಜನರಲ್ಲಿ ವಿಶ್ವಾಸವನ್ನೂ ಮೂಡಿಸುತ್ತಾ, ಹಂತ ಹಂತವಾದ ತಯಾರಿಯನ್ನು ಮಾಡಿಕೊಳ್ಳುತ್ತಾ ಮುನ್ಸಾಗಬೇಕಿರುತ್ತದೆ. ಆದರೆ ಇಲ್ಲಿ ಪರಿಸ್ಥಿತಿ ಉಲ್ಟಾ ಆಗಿದೆ. ಸರ್ಕಾರವೇ ಹೆಚ್ಚೆಚ್ಚು ಭೀತಿಯನ್ನು ಮೂಡಿಸುತ್ತಾ ಇದೆ. ಸರ್ಕಾರದ ತಪ್ಪುಗಳನ್ನೂ ಸಾಧನೆಗಳೆಂಬಂತೆ ಬಿಂಬಿಸುವ ಶೇ.೯೦ರಷ್ಟು ಮಾಧ್ಯಮ ಸಂಸ್ಥೆಗಳ ಮೂಲಕ ಸರ್ಕಾರವು ಕೊರೊನಾವನ್ನು ಒಂದು ಸಾಮಾಜಿಕ ಸಮಸ್ಯೆ ಮಾಡಿಬಿಟ್ಟಿದೆ.

ಕೊರೊನಾ ಲಾಕ್‌ಡೌನ್‌ನಿಂದ ಆರ್ಥಿಕ ಹಿಂಜರಿತ ಉಂಟಾಗುವುದಿಲ್ಲವೆಂದು ಆರ್ಥಿಕ ಖಾತೆಯ ರಾಜ್ಯ ಸಚಿವ ಹೇಳಿದರೆ, ಸರ್ಕಾರದ ಪರವಾಗಿ ಮಾತನಾಡುವ ಅಧಿಕೃತ ವ್ಯಕ್ತಿಗಳು ಸೋಂಕಿನ ಸಾಮುದಾಯಿಕ ಹರಡುವಿಕೆ ಆಗಿಲ್ಲವೆಂದು ಹೇಳುತ್ತಾರೆ. ಹಾಗಾಗಿಯೇ ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ಶೇ.೩೦ರಷ್ಟು ಜನರಿಗೆ ಸೋಂಕು ಹರಡಿ ಹೋಗಿದೆ ಎಂಬ ವರದಿಯನ್ನು ಸರ್ಕಾರದ ಸಂಸ್ಥೆಗಳು ನಿರಾಕರಿಸುತ್ತಿವೆ ಎಂಬ ಸಂಶಯ ದೃಢವಾಗುತ್ತದೆ. ಇಲ್ಲಿ ವಾಸ್ತವವನ್ನು ಒಪ್ಪಲು ಸರ್ಕಾರಕ್ಕೇಕೆ ಭಯ ಎಂಬುದೇ ಅರ್ಥವಾಗುವುದಿಲ್ಲ. ಒಂದು ವೇಳೆ ೧ ಕೋಟಿ ಜನರಿಗೆ ಈಗಾಗಲೇ ಭಾರತದಲ್ಲಿ ಸೋಂಕು ಬಂದಿದೆ ಎಂಬುದೇ ಭಯದ ವಿಚಾರವಲ್ಲ. ಏಕೆಂದರೆ ಅವರಲ್ಲಿ ಶೇ.೮೦ರಷ್ಟು ಜನರಿಗೆ ಏನೂ ಆಗಿಲ್ಲ ಎಂಬುದು ಕಣ್ಣಿಗೆ ರಾಚುತ್ತಿದೆ.

ಸರ್ಕಾರವು ಅವರು ಸಮಸ್ಯೆಯ ವ್ಯಾಪ್ತಿಯನ್ನು ಜನರ ಮುಂದೆ ಇಟ್ಟು, ನಾವು ಅದಕ್ಕೆ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ನೀವು ಹೀಗೆ ಮಾಡಬೇಕು ಎಂದು ಜನರಿಗೆ ಹೇಳಬೇಕು. ಅದನ್ನು ಮಾಡಲು ಸರ್ಕಾರಕ್ಕೆ ಬಹಳ ಹಿಂಜರಿಕೆಯಿದ್ದಂತಿದೆ. ತಜ್ಞರನ್ನು, ರಾಜ್ಯ ಸರ್ಕಾರಗಳನ್ನು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ನಿಭಾಯಿಸುವ ಬದಲಿಗೆ ರಾಜಕೀಯ ಅನುಕೂಲ, ಅನಾನುಕೂಲಗಳ ವಿಚಾರವೇ ಪ್ರಧಾನವಾಗಿರಬಹುದು ಎಂದು ಭಾವಿಸಲು ಸಾಕಷ್ಟು ಪುರಾವೆಗಳು ಸಿಗುತ್ತಿವೆ. ಮೇಲಿನ ಎರಡು ವರದಿಗಳ ವಿಚಾರದಲ್ಲಿ ಸರ್ಕಾರವು ಐಸಿಎಂಆರ್ ಮೂಲಕ ನಡೆದುಕೊಂಡ ರೀತಿಯು ಅದನ್ನು ದೃಢಪಡಿಸುತ್ತವೆ.

ಅದೇನೇ ಇರಲಿ, ಮೇಲಿನ ಎರಡೂ ವರದಿಗಳು ಸೋಂಕಿನ ಈಗಿನ ವಿಸ್ತಾರ, ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ಹರಡಬಹುದಾದ ರೀತಿ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಾಕಷ್ಟು ಬೆಳಕು ಚೆಲ್ಲಿವೆ. ನವೆಂಬರ್ ಹೊತ್ತಿಗೂ ಸರ್ಕಾರವು ಸಿದ್ಧತೆ ಮಾಡಿಕೊಳ್ಳದಿರಬಹುದು ಎಂಬ ದೇಶದ ತಜ್ಞರ ಆತಂಕವನ್ನು, ರಾಜಕೀಯ ನಾಯಕರು ಸುಳ್ಳು ಮಾಡುವಂತೆ ಕಾಣುತ್ತಿಲ್ಲ. ಆ ಕೆಲಸವನ್ನು ಮಾಡುವಂತೆ ಒತ್ತಾಯಿಸಲು ದೇಶದ ಪ್ರಜ್ಞಾವಂತ ಜನರು ಸುವ್ಯವಸ್ಥಿತವಾದ ಕ್ಯಾಂಪೇನ್ ಮಾಡುವ ಅಗತ್ಯವಂತೂ ಕಾಣುತ್ತಿದೆ.

ಡಾ.ವಾಸು.ಎಚ್.ವಿ


ಐಸಿಎಂಆರ್ ಎಷ್ಟು ಬಾರಿ ಮಾರ್ಗಸೂಚಿಗಳನ್ನು ಬದಲಾಯಿಸುತ್ತೀರಿ? ತೆಲಂಗಾಣ ಆರೋಗ್ಯ ಸಚಿವರ ಪ್ರಶ್ನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...