ಕವಿ ಕೆ.ಬಿ.ಸಿದ್ದಯ್ಯ ನೆನಪಿನಲ್ಲಿ ತುಮಕೂರಿನಲ್ಲಿ ಮೂರು ದಿನಗಳ ನಾಟಕೋತ್ಸವ..

ಜನವರಿ 6,7,8ರಂದು ಆರ್ಕೆಡಿಯಾದಲ್ಲಿ ಪಕ್ ಸಂಗೀತ, ’ಬೆಂದ ಕಾಳು ಆನ್ ಟೋಸ್ಟ್' ಮತ್ತು ರೆಕ್ಸ್ ಅವರ್ಸ್ ಡೈನೋ ನಾಟಕ ಎಂಬ ಮೂರು ವಿಶಿಷ್ಟಿ ನಾಟಕಗಳ ಪ್ರದರ್ಶನ ನಡೆಯಲಿದೆ.

0

ಇತ್ತೀಚಿಗೆ ಅಗಲಿ ಬಕಾಲ ಕವಿ ಎಂದೇ ಖ್ಯಾತರಾದ ಕೆ.ಬಿ.ಸಿದ್ದಯ್ಯ ಅವರಿಗೆ ರಂಗ ನಮನ ಸಲ್ಲಿಸುವ ಉದ್ದೇಶದಿಂದ ಲೋಕಚರಿತ ರಂಗ ಕೇಂದ್ರ ಚಿಕ್ಕದಾಳವಟ್ಟ, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ತುಮಕೂರು ಮತ್ತು ರಂಗಾಯಣ ಮೈಸೂರು ಆಶ್ರಯದಲ್ಲಿ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜನವರಿ 6, 7 ಮತ್ತು 8ರಂದು ಮೂರು ದಿನಗಳ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ.

ಜನವರಿ 6ರಂದು ಸಂಜೆ 6.30ಕ್ಕೆ ನಾಟಕೋತ್ಸವ ಸಮಾರಂಭ ಆರಂಭವಾಗಲಿದ್ದು ಜಿಲ್ಲಾ ಪಂಚಾಯತ್ ಸದಸ್ಯ ಕೆಂಚಮಾರಯ್ಯ ಉದ್ಘಾಟಿಸಿಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು ಅಪ್ಪಿನಕಟ್ಟಿ, ಕೈಗಾರಿಕೋದ್ಯಮಿ ಡಿ.ಟಿ. ವೆಂಕಟೇಶ್, ಉಪನ್ಯಾಸಕ ಕೊಟ್ಟಾ ಶಂಕರ್, ಟಿ.ಎಸ್.ಚೈತ್ರ ಭಾಗವಹಿಸುವರು. ಕಾರ್ಯಕ್ರಮದ ನಂತರ ’ಆರ್ಕೆಡಿಯಾದಲ್ಲಿ ಪಕ್ ಸಂಗೀತ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಎಸ್.ರಾಮನಾಥ್ ನಾಟಕ ರಚನೆ ಮಾಡಿದ್ದು, ಚಂದ್ರದಾಸನ್ ನಿರ್ದೇಶಿಸಿದ್ದಾರೆ.

ಜನವರಿ 7ರಂದು ಸಂಜೆ 6.30ಕ್ಕೆ ನಾಟಕಕಾರ ಗಿರೀಶ್ ಕಾರ್ನಾಡ್ ವಿರಚಿತ ’ಬೆಂದಕಾಳು ಅನ್ ಟೋಸ್ಟ್’ ನಾಟಕ ಪ್ರದರ್ಶನವಿದೆ. ಇದಕ್ಕೂ ಮೊದಲು ನಡೆಯಲಿರುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆ ವಹಿಸುವರು. ರಂಗ ಸಂಘಟಕ ಉಗಮ ಶ್ರೀನಿವಾಸ್, ರಂಗಕರ್ಮಿ ಪಿ.ಮಂಜುನಾಥ್, ಉಪನ್ಯಾಸಕ ರಾಮಚಂದ್ರಪ್ಪ ಪಾಲ್ಗೊಳ್ಳುವರು.

ಜನವರಿ 8ರಂದು ಸಂಜೆ 6.30ಕ್ಕೆ ’ಡೈನೋ ಏಕಾಂಗಿ ಪಯಣ’ ನಾಟಕ ಪ್ರದರ್ಶನವಿದೆ. ಶ್ರವಣಕುಮಾರ್ ಪರಿಕಲ್ಪನೆ ಮತ್ತು ನಿರ್ದೇಶನ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅನಿಲ್‍ಕುಮಾರ್ ಚಿಕ್ಕದಾಳವಟ್ಟ 9481715022, ರವಿಶಂಕರ್ ರಂಗಾಯಣ 7676360812, ಮಲ್ಲಿಕಾರ್ಜುನ 9743851885 ಸಂಪರ್ಕಿಸಲು ಕೋರಿದೆ.

ನಾಟಕಗಳ ಪರಿಚಯ

’ಆರ್ಕೇಡಿಯಾದಲ್ಲಿ ಪಕ್ ಸಂಗೀತ’

ಇದು ಪ್ರಧಾನ ಹಾಸ್ಯ ನಾಟಕ. ಎಲಿಜಬೆತ್ ಕಾಲದ ಆಸು ಪಾಸಿನ ಮುಖ್ಯ ಬರಹಗಾರ ಫಿಲಿಫ್ ಸಿಡ್ನಿ ಮತ್ತು ಜಗತ್ತಿನ ಶ್ರೇಷ್ಠ ನಾಟಕಕಾರ ಶೇಕ್ಸ್ ಪಿಯರ್ ಸ್ಫೂರ್ತಿಗೊಂಡು ಎಲ್ಲರ ರಂಜನೆಗೊದಗುವ ರುಚಿಕರ ಕಥೆಯಿದು. ಹಳೆ ಕಾಲದ ಆರ್ಕೇಡಿಯಾ ನಾಡಿನ ಪ್ರೀತಿ, ಪ್ರೇಮ, ಮೋಹ, ಸೇಡು, ರಾಜಕಾರಣಗಳ ಹೂರಣವುಳ್ಳ ಆರ್ಕೇಡಿಯಾದ ಕುಲೀನ ಮನೆತನದ ರೋಚಕ ಕಥೆಯೆ ಮಿಂಚಿನ ತುಂಟತನಕ್ಕೆ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ನಾಟಕದ ಪಕ್, ಮ್ಯಾಕ್‍ಬೆತ್ ನಾಟಕದ ಜಕ್ಕಿಣಿಯರ ಮಾಯದ ನಿಗೂಢತೆಗಳು ಆವರಿಸಿಕೊಂಡಿದ್ದು, ಜೂಲಿಯಸ್ ಸೀಸರ್, ಈಡಿಪಸ್, ಕಿಂಗ್‍ಲಿಯರ್‍ನ ಫಾಲ್‍ಸ್ಟಫ್ ಇತ್ಯಾದಿ ಹಲವು ನಾಟಕಗಳ ಪಾತ್ರಗಳು ಅರಳಿವೆ.

ಯುರೋಪಿನ ಕಥೆಯಾದರೂ ಸಾಂಪ್ರದಾಯಿಕ ಭಾರತೀಯ ನಿರೂಪಣಾ ಶೈಲಿಯಲ್ಲಿ ನಾಟಕ ಹೆಣೆಯಲಾಗಿದ್ದು, ಸಮಕಾಲೀನ ಅಭಿರುಚಿಯ ಸಂಗೀತ ಮತ್ತು ನೃತ್ಯವನ್ನು ಸಂಯೋಜಿಸಲಾಗಿದೆ. ಹಾಡು, ನೃತ್ಯ, ಆಕರ್ಷಕ ಪರಿಕರ, ರಂಗಸಜ್ಜಿಕೆಗಳೆಲ್ಲವೂ ಎಲ್ಲಾ ಪ್ರಕಾರದ ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯುವ ಆಶಯ ಹೊಂದಿದೆ. ದೂರದ ಆರ್ಕೇಡಿಯಾದ ರಾಜ ಮನೆತನದ ಕಥೆಯೊಂದು ಎಲ್ಲ ದೇಶ-ಕಾಲಗಳ ಕಥೆಯಾಗುವ ಸೋಜಿಗದ ತಮಾಷೆಯನ್ನು ನಾಟಕವು ಹಾಸ್ಯದ ಫಲುಕುಗಳಿಂದ, ಸಂಗೀತ, ನೃತ್ಯದ ಝಲಕ್‍ನೊಂದಿಗೆ ಪ್ರಸ್ತುತ ಪಡಿಸುತ್ತದೆ. ’ರಂಗದ ಮೇಲಿನ ಎಲ್ಲ ಬಣ್ಣಗಳು, ಸಾರಿ ಹೇಳಲಿ ಮಾನವತೆಯ, ಎಲ್ಲರ ಮನೆಯ ಎಲ್ಲ ಕಿಟಕಿಗಳು, ಎಲ್ಲಾ ದಿಕ್ಕಿಗೆ ತೆರೆದಿರಲಿ” ಎನ್ನುವ ಜೀವನ ಪ್ರೀತಿಯ ಆಶಯ ನಾಟಕದ್ದಾಗಿದೆ.

’ಬೆಂದ ಕಾಳು ಆನ್ ಟೋಸ್ಟ್’

ಸದ್ಯ ನಾಗರೀಕ ಬದುಕು ನಾಗಾಲೋಟದಲ್ಲಿ ಮಂಕು ಕವಿದ ಸಾವಿರಾರು ತಲೆಗಳಿಗೆ ಸ್ವಾದಿಷ್ಟ ಆಹಾರವಾಗುತ್ತಿರುವ ಮಾಯಾನಗರಿಯ ನಿಜ ಬಿಕ್ಕಟ್ಟಿನೆಡೆಗೆ ಸೃಜನಶೀಲ ನಾಟಕದ ಮೂಲಕ ಒಂದು ನೋಟವಾಗಿದೆ. ಹೊಟ್ಟೆ ಬಟ್ಟೆಗಳ ಹಸಿವಿನಿಂದ ಹಿಡಿದು ಮುಗಿಲು ಮುಟ್ಟುವ ಸ್ಟೇಟಸ್‍ನ ದಾಹಕ್ಕೆ ನಾನಾ ಚಿಟ್ಟೆಗಳ ನಗರ ಮಕರಂದದ ಶೋಕಿಯಾಸೆಗೆ ಊರು ಬಿಟ್ಟ ಹೈವೇಗಳ ಅಮಲಿಗೆ ಕಪಟ ಕಳ್ಳಾಟಗಳ ತಾಪಕ್ಕೆ ಗಿಜಿಗುಡುವ ನಗರ ಬೇಕು ಬೇಕೆಂಬ ಕೊಳ್ಳುಬಾಕರ ದಾಹಕ್ಕೆ ತುತ್ತಾಗಿ ತತ್ತರಿಸುತ್ತಿರುವ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಸಂಪನ್ನವಾಗಿದ್ದ ಬೆಂದಕಾಳೂರೆಂಬ ನಗರದ ಚಿತ್ರಣವಿದು.

ಇದು ಹೈಟೆಕ್‍ನೆಡೆಗಿನ ದಾಂಗುಡಿಯಲ್ಲಿ ನಗರೀಕರಣದ ಒರಟು-ಗಡಸು ಓಟಕ್ಕೆ ಹೊಸಕಿ ಹೋದ ನಾಜೂಕು ಮನಸ್ಸುಗಳ, ನವಿರು ಕನಸುಗಳ ಭೀಕರ ವಾಸ್ತವತೆಯ ಕಥೆ ಮತ್ತು ತುಳಿಸಿಕೊಂಡ ಆಸೆಯ ಚಿಗುರುಗಳು ಕತ್ತೆತ್ತುವ ವಿಕಾರ ಪ್ರಯತ್ನದ ದರ್ಶನ. ನಗರವೆಂಬ ದೈತ್ಯನ ಪ್ರಾಣ ಪಕ್ಷಿಯನ್ನು ಹಿಡಿದಿಟ್ಟಿರುವ ಮೊಬೈಲ್, ಕಂಪ್ಯೂಟರ್ ಪೆಟ್ಟಿಗೆಗಳು ಬೀಸಿರುವ ಡಿಜಿಟಲ್ ಜಾಲಕ್ಕೆ ಕ್ರೂರವಾಗಿ ಬಲಿಯಾಗುವ ಕೋಮಲ ಕರುಳುಗಳ ಹಸಿ ಚಿತ್ರಣವಿದು.

ದೂರದಿಂದ ಓರಣಗೊಂಡ ಗಾಜಿನಂತೆ ಹೊಳೆಯುವ ನಗರಜೀವನದ ಕಲ್ಪನೆಯ ಒಳಗೆ ಮಿಡುಕುತ್ತಿರುವ ಹಲವಾರು ಕರಾಳ ಪಾತ್ರಗಳನ್ನು ಮತ್ತು ಸನ್ನಿವೇಶಗಳನ್ನು ನಾಟಕ ಉಸಿರಾಡುತ್ತದೆ. ತೀವ್ರ ಏಕತಾನತೆಯಲ್ಲಿ ಎಂದೂ ಆತ್ಮೀಯ ಒತ್ತಾಸೆ ಸಿಗದೆ ನಗರದ ಕೃತಕತೆಗೆ ರೋಸಿ ಹೋದ ಅಂಜನಾ ಯಶಸ್ಸಿನ ಮೆಟ್ಟಿಲುಗಳನ್ನೇರುವ ಹಪಾಹಪಿಯಲ್ಲಿ, ದೂರದ ಸಿಂಗಾಪುರಕ್ಕೆ ಹಾರುವ ಆತುರದಲ್ಲಿ ದಾರಿ ತಪ್ಪಿ ದಿಗ್ಭ್ರಮೆಗೊಳಗಾದರೂ ಮತ್ತೆ ಸಾಧನೆಗಳ ತಡೆಗಳನ್ನು ಮೀರಿ ಈಜಲು ಛಾತಿ ಗಟ್ಟಿಯಾಗಿಸಿಕೊಳ್ಳುವ ಸುಮ್ಮನೆ ಅನ್ಯರೊಂದಿಗೆ ಚೆಲ್ಲಾಟವಾಡುವ ವಿಚಿತ್ರ ಗೀಳೇ ಮೂರ್ತಗೊಂಡ ಪ್ರಭಾಕರ್ ತನ್ನ ಸ್ವಂತ ಬದುಕಲ್ಲಿ ಕಾಣುವ ದುರಂತ,

ಎಂತಾ ಸವಾಲನ್ನೂ ಸಂಭಾಳಿಸಬಲ್ಲ ಚಾಲಾಕಿತನದ ಮತ್ತು ಎಲ್ಲೂ ನುಸುಳಬಲ್ಲ ವಿಮಲಾ, ಪಟ್ಟಣದ ಜೀವನ ಸಿಗದೆ ಅಸೂಯೆಯ ಕೂಪದಲ್ಲಿ ನರಳುವ ಚಿನ್ನಸ್ವಾಮಿ, ಬದುಕಿನ ವಿಕ್ಷಿಪ್ತತೆಗೆ, ಭೀಕರತೆಗೆ ಸಾಕ್ಷಿಯಾಗಿ ಅದನ್ನು ಗಿಟಾರ್‍ನಲ್ಲಿ ನುಡಿಸುವ ಹಂಬಲದ ಕುಣಾಲ್, ಇತ್ಯಾದಿ ಹಲವು ಪಾತ್ರ ವೈವಿಧ್ಯಗಳ ಒಡಲಾಳದ ಹಸಿವು, ಆಶೆ, ಹತಾಶೆಗಳೇ ನಿಮ್ಮೆದುರಿನ “ಬೆಂದ ಕಾಳು ಆನ್ ಟೋಸ್ಟ್”.

ರೆಕ್ಸ್ ಅವರ್ಸ್ ಡೈನೋ ನಾಟಕ 

ಸಂಬಂಧಗಳ ಜಾಲದಲ್ಲಿ ಸಿಲುಕಿ ಒಂಟಿಯಾಗಿರುವ ಆಧುನಿಕ ಮನುಷ್ಯ ಸಮಾಜವನ್ನು ಪ್ರಕೃತಿಯು ಇನ್ನೂ ಕಲ್ಪಿಸಿಯೇ ಇರದ ಕಾಲದ ಕಥೆ “ರೆಕ್ಸ್ ಅವರ್ಸ್- ಡೈನೋ ಏಕಾಂಗಿ ಪಯಣ”. ಜೀವ ರಹಸ್ಯಗಳಲ್ಲೇ ಅಮೋಘ ಬೆರಗಿನ ಪ್ರಾಣಿ ಸಂತತಿ-ಡೈನೋಸರ್ ನಿರ್ಣಾಯಕ ವಿಕಾಸದ ಹಂತದಲ್ಲಿ ಜೀವಿಸುವ ಸಮಯದ ಕಲ್ಪನೆಯೇ “ರೆಕ್ಸ್ ಅವರ್ಸ್”. ಮನುಷ್ಯ ಸಂತತಿಗಿಂತ ಎಷ್ಟೋ ಶತಮಾನಗಳಾಚೆಗೆ ಬರೀ ಗುಡ್ಡ, ಕಲ್ಲು, ಪೊದೆ ದಪ್ಪ ದಪ್ಪ ಮರಗಳು, ವಿರಳ ಒಡನಾಡಿಗಳ ಪರಿಸರದಲ್ಲಿ ದಟ್ಟ ತೊಡರುಗಳ ಹಾದಿಯಲ್ಲಿ ತನ್ನ ಬದುಕಿನ ಕ್ರಮವನ್ನು ಬೆಸೆದುಕೊಂಡು ಪ್ರತ್ಯೇಕಗೊಂಡ ಸೃಷ್ಟಿಯ ಬಲಿಷ್ಠ ಕುಡಿಯೊಂದು ಎದುರಿಸುವ ಪ್ರಾಕೃತಿಕ ಹೋರಾಟದ ಕಥೆಯಿದು.

ಈ ಕಾಲ್ಪನಿಕ ಕಥೆಯಲ್ಲಿ ತಾಯಿಯಿಂದ ಬೇರ್ಪಟ್ಟ ಟಿ-ರೆಕ್ಸ್‍ನ ಒಂಟಿ ಮೊಟ್ಟೆಯ ಸಾಹಸ ಕಥೆಯನ್ನು ಹೇಳಲು ಗೊಂಬೆಗಳೇ ಪಾತ್ರಗಳಾಗಿವೆ. ಜಪಾನಿನ ಪ್ರಸಿದ್ಧ ಸಾಂಪ್ರದಾಯಿಕ ಗೊಂಬೆಯಾಟ ಪ್ರಕಾರ ಬುನ್ರಾಖುವನ್ನು ‘ರೆಕ್ಸ್ ಅವರ್ಸ್’ನಲ್ಲಿ ಅಳವಡಿಸಲಾಗಿದ್ದು ಭಾರತದ ಕಥೆಗಳಿಗನುಸಾರ ವಿನ್ಯಾಸಗೊಳಿಸಿ ಸಮಕಾಲೀನ ಶೈಲಿಗೆ ಮಾರ್ಪಾಡುಗೊಳಿಸಿರುವ ಈ ಬುನ್ರಾಖು ಗೊಂಬೆಯಾಟ ಪ್ರಕಾರ ರೆಕ್ಸ್ ಅವರ್ಸ್‍ನ ಪ್ರಸ್ತುತಿಗೆ ಜೀವಂತಿಕೆಯನ್ನು ಒದಗಿಸಿದೆ. ಪ್ರಸ್ತುತ ಪ್ರದರ್ಶನದಲ್ಲಿ ಮಾನವ ದೇಹರಚನೆಯ ಗೊಂಬೆಗಳ ಬದಲಾಗಿ ಪ್ರಾಣಿಗಳ ದೇಹರಚನೆಯ ಗೊಂಬೆಗಳನ್ನು ತಯಾರಿಸಲಾಗಿದೆ. ಇದರ ಜೊತೆಗೆ ನಾಟಕವು ಡಾರ್ವಿನ್‍ನ ವಿಕಾಸವಾದ ಸಿದ್ಧಾಂತವು ತಿಳಿಸುವ “ಬದುಕುಳಿಯುವ ಸಾಮಥ್ರ್ಯ”ಕ್ಕೆ ಒತ್ತು ನೀಡಿದ್ದು, ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ನಿಸರ್ಗಕ್ಕೆ ಎಲ್ಲಾ ಪ್ರಾಣಿಗಳ ಬದುಕು ಮತ್ತು ತ್ಯಾಗ ಪ್ರಮುಖವಾದುದು ಎನ್ನುವುದನ್ನು ಆಕರವಾಗಿರಿಸಿಕೊಂಡಿದೆ.

ಧಡೂತಿ, ದೊಡ್ಡ ದೊಡ್ಡ ಡೈನೋಸರ್‍ಗಳ ಸೆಣಸಾಟ, ಸ್ನೇಹ, ಕಾಲ್ಪನಿಕ ಸಾಹಸಗಳಿಂದ ರಂಜಿಸುವ ‘ರೆಕ್ಸ್ ಅವರ್ಸ್’ ನಾಟಕವು ಜೀವ ವೈವಿಧ್ಯವನ್ನು ಅರಿತ ಸಮತೋಲಿತ ಬಾಳ್ವೆಯ ಆಶಯವನ್ನು ಹೊಂದಿದೆ. ರೆಕ್ಸ್‍ನ ಪುಟಾಣಿ ಮರಿಯೊಂದು ತನ್ನ ಒಂಟಿ ಸ್ಥಿತಿಯಲ್ಲಿ ಪ್ರತಿಕೂಲ ಪರಿಸ್ಥಿತಿ, ಸಂಬಂಧಗಳಲ್ಲಿ ಬದುಕಿಗಾಗಿ, ಸ್ನೇಹಕ್ಕಾಗಿ ನಡೆಸುವ ಏಕಾಂಗಿ ಹೋರಾಟವು ನಿಸರ್ಗ ಸಹಜ ಚಿತ್ರಣಗಳಿಂದ ತುಂಬಿದೆ. ಸಲಹುವ ಮೂಲದಿಂದ ಬೇರ್ಪಟ್ಟ ಜೀವಿಯೊಂದು ಎದುರಿಸುವ ನೈಸರ್ಗಿಕ ಪರಿಸ್ಥಿತಿಗಳು, ನಿಸರ್ಗದನಿವಾರ್ಯ ಹಿಂಸೆ, ಬಾಂಧವ್ಯದ ಸಾಧ್ಯತೆಗಳು, ಜೀವ ಕಾಯುವ ಅಕಸ್ಮಿಕ ಘಟನೆ ಎಲ್ಲವನ್ನು ಒಳಗೊಂಡ ಏಕಾಂಗಿ ಪಯಣ ರಸಪೂರ್ಣ ಯಾತ್ರೆಯಾಗಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here