ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹಗೊಳಿಸಿರುವುದರ ಹಿಂದೆ ಪಿತೂರಿ ನಡೆದಿದೆ ಎಂದು ಆರೋಪಿಸಿ ಇಂಡಿಯಾ ಒಕ್ಕೂಟದ ಸಂಸದರು ಇಂದು (ಆ.8) ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು ಮತ್ತು ವಿನೇಶ್ ಅವರಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು.
ಕಲಾಪದ ವೇಳೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಎನ್‌ಸಿಪಿ (ಎಸ್‌ಪಿ), ಜೆಎಂಎಂ, ಆರ್‌ಜೆಡಿ ಮತ್ತು ಎಸ್‌ಪಿ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಿಂದ ಹೊರನಡೆದರು.
“ವಿನೇಶ್ ಫೋಗಟ್ ಅವರಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಎಲ್ಲಾ ಪ್ರತಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಿಂದ ಹೊರನಡೆದಿವೆ. ಮೋದಿ ಸಾಂತ್ವನದ ಟ್ವೀಟ್ ಮಾಡಿದ್ದಾರೆ. ಸಾಂತ್ವನದ ಟ್ವೀಟ್ ಕೆಲಸ ಮಾಡುವುದಿಲ್ಲ ಮೋದಿ ಜೀ, ಅವರಿಗೆ ನ್ಯಾಯ ಸಿಗಬೇಕು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
“ಪಿತೂರಿಯ ಭಾಗವಾಗಿ ಮೊದಲು ಆ ಮಗಳನ್ನು ದೆಹಲಿಯ ಬೀದಿಯಲ್ಲಿ ಎಳೆದಾಡಲಾಯಿತು. ಈಗ ಅನರ್ಹಗೊಳಿಸಲಾಗಿದೆ. ಆದರೆ, ಸರ್ಕಾರ ಮೂಕಪ್ರೇಕ್ಷಕವಾಗಿದೆ. ಇದು ಭಾರತದ ಕ್ರೀಡಾ ಇತಿಹಾಸದಲ್ಲಿ ಕರಾಳ ದಿನ. ದೇಶದ ಕ್ರೀಡಾಪಟುಗಳನ್ನು ವಿಫಲಗೊಳಿಸಿದ ಸರ್ಕಾರವನ್ನು 140 ಕೋಟಿ ಭಾರತೀಯರು ಕ್ಷಮಿಸುವುದಿಲ್ಲ” ಎಂದು ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ವಿನೇಶ್ ಫೋಗಟ್ ಅನರ್ಹತೆಯ ಬಗ್ಗೆ ಹೇಳಿಕೆ ನೀಡಿದ್ದು, ಕುಸ್ತಿಪಟುಗಳಿಗೆ ನೀಡಲಾದ ಎಲ್ಲಾ ನೆರವಿನ ಬಗ್ಗೆ ವಿವರಿಸಿದ್ದಾರೆ. ಆದರೆ, ಇದಕ್ಕೆ ವಿರೋಧ ಪಕ್ಷದ ಸಂಸದರು ಅತೃಪ್ತಿ ವ್ಯಕ್ತಪಡಿಸಿ ಸದನದಿಂದ ಹೊರನಡೆದ್ದಾರೆ.
ರಾಜ್ಯಸಭೆಯಲ್ಲಿ ವಿನಿಯೋಗ ವಿಧೇಯಕ-2024 ರ ಮೇಲಿನ ಚರ್ಚೆಯ ಸಂದರ್ಭದಲ್ಲಿ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು “ವಿನೇಶ್ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದರು. ಆದರೆ, ಸಭಾಪತಿ ಜಗದೀಪ್ ಧನಕರ್ ವಿರೋಧಿಸಿದರು. ಈ ವೇಳೆ ಇಂಡಿಯಾ ಒಕ್ಕೂಟದ ಸಂಸದರು ಸದನದಿಂದ ನಿರ್ಗಮಿಸಿದ್ದಾರೆ.
“ವಿನೇಶ್ ಫೋಗಟ್ ವಿಚಾರ ತುಂಬಾ ಪ್ರಮುಖವಾಗಿದ್ದು, ಅದರ ಹಿಂದೆ ಯಾರಿದ್ದಾರೆಂದು ನಮಗೆ ತಿಳಿಯಬೇಕಿದೆ” ಎಂದು ಖರ್ಗೆ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ,”ತಮಗೆ ಮಾತ್ರ ನೋವಾಗುತ್ತಿದೆ ಎಂದು ಅವರು (ವಿಪಕ್ಷಗಳು) ಅಂದುಕೊಂಡಿದ್ದಾರೆ. ರಾಷ್ಟ್ರಪತಿ, ಪ್ರಧಾನಿ ಮತ್ತು ನಾನು ಸೇರಿದಂತೆ ಇಡೀ ದೇಶಕ್ಕೆ ನೋವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಆಕೆಗೆ (ಫೋಗಟ್) ಅಗೌರವ ತೋರಿದಂತೆ” ಎಂದಿದ್ದಾರೆ.
ಇದನ್ನೂ ಓದಿ : ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ನೋಟಿಸ್ ನೀಡಿದ ಕಾಂಗ್ರೆಸ್