ನ್ಯೂಜೆರ್ಸಿಯ ನ್ಯೂವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಭಾರತೀಯ ವಿದ್ಯಾರ್ಥಿಯೊಬ್ಬರಿಗೆ ಕೈಕೋಳ ಹಾಕಿ, ನೆಲಕ್ಕೆ ಕೆಡವುವ ಮೂಲಕ ಬಂಧಿಸಿದ ಆತಂಕಕಾರಿ ವಿಡಿಯೋ ವೈರಲ್ ಆಗಿದ್ದು, ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತಾವಾಸದಿಂ ತ್ವರಿತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜೂನ್ 7ರಂದು ನಡೆದ ಈ ಘಟನೆಯ ವಿಡಿಯೋವನ್ನು ಭಾರತೀಯ-ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಎಲ್ಲೆಡೆ ವೈರಲ್ ಆಗಿದೆ.
ಆ ರಾತ್ರಿ ವಿದ್ಯಾರ್ಥಿಗೆ ವಿಮಾನ ಹತ್ತಲು ಸಮಯ ನಿಗದಿಯಾಗಿತ್ತು. ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು, ಬಳಿಕ ಬಿಟ್ಟು ಕಳಿಸಿದ್ದಾರೆ ಎಂದು ಜೈನ್ ಹೇಳಿದ್ದಾರೆ.
ಕುನಾಲ್ ಜೈನ್ ಹಂಚಿಕೊಂಡಿರುವ ವಿಡಿಯೋದಲ್ಲಿ ವಿದ್ಯಾರ್ಥಿ ನೆಲದ ಮೇಲೆ ಬಿದ್ದು ಅಳುತ್ತಿರುವು ಮತ್ತು ಅಧಿಕಾರಿಗಳು ಆತನ ಹತ್ತಿರದಲ್ಲಿ ನಿಂತಿರುವುದನ್ನು ನೋಡಬಹುದು. ಘಟನೆಯನ್ನು ನೇರವಾಗಿ ಕಂಡ ಜೈನ್, ವಿದ್ಯಾರ್ಥಿಯ ಪರಿಸ್ಥಿತಿಯ ಬಗ್ಗೆ ದುಃಖ ವ್ಯಕ್ತಪಡಿಸುತ್ತಾ, “ನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿಯನ್ನು ಕೈಕೋಳ ಹಾಕಿ ಅಪರಾಧಿಯಂತೆ ನಡೆಸಿಕೊಳ್ಳುವುದನ್ನು ನಾನು ನೋಡಿದೆ” ಎಂದು ಬರೆದುಕೊಂಡಿದ್ದಾರೆ.
“ಅವನು (ವಿದ್ಯಾರ್ಥಿ) ಕನಸುಗಳನ್ನು ಬೆನ್ನಟ್ಟುತ್ತಾ ಬಂದವನು, ಹಾನಿ ಮಾಡಲು ಅಲ್ಲ. ಒಬ್ಬ ಅನಿವಾಸಿ ಭಾರತೀಯನಾಗಿ ನಾನು ಅಸಹಾಯಕನಾಗಿದ್ದೆ, ಎದೆ ಒಡೆದಂತೆ ಆಯಿತು. ಇದು ಮಾನವ ದುರಂತ” ಎಂದು ಕುನಾಲ್ ಜೈನ್ ಹೇಳಿದ್ದಾರೆ.
ವಿದ್ಯಾರ್ಥಿಯ ಕುಟುಂಬಕ್ಕೆ ನಡೆದ ಘಟನೆಗಳ ಬಗ್ಗೆ ಮಾಹಿತಿಯಿಲ್ಲ ಎಂದು ಜೈನ್ ಹೇಳಿದ್ದಾರೆ. “ಈ ಬಡ ಮಗುವಿನ ಪೋಷಕರಿಗೆ ಅವನಿಗೆ ಏನಾಗುತ್ತಿದೆ ಎಂದು ತಿಳಿದಿರುವುದಿಲ್ಲ” ಎಂದು ಜೂನ್ 9ರಂದು ಬೆಳಿಗ್ಗೆ 4:43ಕ್ಕೆ ಹಂಚಿಕೊಂಡ ಪೋಸ್ಟ್‌ನಲ್ಲಿ ಜೈನ್ ಬರೆದಿದ್ದಾರೆ.
This poor kids parent won’t know what’s happening to him. @IndianEmbassyUS @DrSJaishankar he was to be boarded last night in the same flight with me but he never got boarded. Someone needs to find out what’s going on with him at New Jersey authorities. I found him disoriented. pic.twitter.com/kpMiy9Trsp
— Kunal Jain (@SONOFINDIA) June 8, 2025
ವಾಷಿಂಗ್ಟನ್ ಡಿ.ಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಟ್ಯಾಗ್ ಮಾಡಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಜೈನ್ ಒತ್ತಾಯಿಸಿದ್ದರು.
ಪೋಸ್ಟ್‌ಗೆ ಪ್ರತಿಕ್ರಿಯಿಸಿದ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, “ನ್ಯೂವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಪ್ರಜೆಯೊಬ್ಬರು ಸಮಸ್ಯೆ ಎದುರಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಲಾಗಿದೆ. ಈ ಸಂಬಂಧ ನಾವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ” ಎಂದು ಹೇಳಿದೆ.
We have come across social media posts claiming that an Indian national is facing difficulties at Newark Liberty International Airport. We are in touch with local authorities in this regard.
The Consulate remains ever committed for the welfare of Indian Nationals.@MEAIndia…
— India in New York (@IndiainNewYork) June 9, 2025
ಸದಾ ಭಾರತೀಯ ಪ್ರಜೆಗಳ ನೆರವಿಗೆ ಬದ್ಧ ಎಂದು ಕಾನ್ಸುಲೇಟ್ ಭರವಸೆ ನೀಡಿದೆ.
ವಲಸಿಗರ ವಿರುದ್ಧ ಶೋಧ ಕಾರ್ಯಾಚರಣೆಗೆ ವಿರೋಧ: ಲಾಸ್ ಏಂಜಲೀಸ್‌ನಲ್ಲಿ ತೀವ್ರಗೊಂಡ ಪ್ರತಿಭಟನೆ