ಲಾಸ್ ಏಂಜಲೀಸ್‌ನಲ್ಲಿ ವಲಸಿಗರ ಶೋಧ ಕಾರ್ಯಾಚರಣೆ ವಿರುದ್ದ ಭುಗಿಲೆದ್ದಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಈ ನಡುವೆ ಹೆಚ್ಚುವರಿಯಾಗಿ 2000 ನ್ಯಾಷನಲ್ ಗಾರ್ಡ್ಸ್ ಮತ್ತು 700 ನೌಕಾಪಡೆ ಸಿಬ್ಬಂದಿಯನ್ನು ನಿಯೋಜಿಸಲು ಡೊನಾಲ್ಡ್ ಟ್ರಂಪ್ ಆಡಳಿತ ಸೋಮವಾರ ಆದೇಶಿಸಿದೆ.
ಟ್ರಂಪ್ ನಡೆಯನ್ನು ವಿರೋಧಿಸಿಕೊಂಡು ಬಂದಿರುವ ಕ್ಯಾಲಿಫೋರ್ನಿಯಾದ ಗವರ್ನರ್ ಗ್ಯಾವಿನ್ ನ್ಯೂಸಮ್, ಈ ಕ್ರಮ ಅಜಾಗರೂಕ ಮತ್ತು ನಮ್ಮ ಸೈನಿಕರಿಗೆ ಅಗೌರವ ಎಂದು ಸಾಮಾಜಿಕ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಇದು ಸಾರ್ವಜನಿಕರ ಸುರಕ್ಷತೆಯ ಕ್ರಮವಲ್ಲ. ಬದಲಾಗಿ, ಅಪಾಯಕಾರಿ ಮತ್ತು ಅಧ್ಯಕ್ಷರ ದುರಹಂಕಾರದ” ಕ್ರಮ. ಟ್ರಂಪ್ ಅಮೆರಿಕದ ನೆಲಕ್ಕೇ 4000 ಸೈನಿಕರನ್ನು ಕಳುಹಿಸುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ” ಎಂದು ನ್ಯೂಸಮ್ ಟೀಕಿಸಿದ್ದಾರೆ.
ದೇಶದಲ್ಲಿ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಲಾಸ್ ಏಂಜಲೀಸ್‌ಗೆ ಟ್ರಂಪ್ ಶನಿವಾರ 2,000 ನ್ಯಾಷನಲ್ ಗಾರ್ಡ್ಸ್ ಸಿಬ್ಬಂದಿ ನಿಯೋಜಿಸಿದ್ದಾರೆ. ಈ ಪೈಕಿ ಭಾನುವಾರ ಸುಮಾರು 300 ಸಿಬ್ಬಂದಿ ಫೆಡರಲ್ ಕಟ್ಟಡಗಳು ಮತ್ತು ಅಧಿಕಾರಿಗಳನ್ನು ರಕ್ಷಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ನ್ಯಾಷನಲ್ ಗಾರ್ಡ್ಸ್‌ಗೆ ಸಹಾಯ ಮಾಡಲು ಸೋಮವಾರ 700 ಯುಎಸ್ ಮೆರೈನ್ ಕಾರ್ಪ್ಸ್ (ಯುಎಸ್ಎಂಸಿ)ಸಿಬ್ಬಂದಿಯನ್ನು ಲಾಸ್ ಏಂಜಲೀಸ್‌ಗೆ ಕಳುಹಿಸಲಾಗಿದೆ.
ಟ್ರಂಪ್ ಪ್ರತಿಭಟನೆ ಹತ್ತಿಕ್ಕಲು ಗಾರ್ಡ್ಸ್ ಬಳಸುತ್ತಿರುವುದರ ವಿರುದ್ದ ಕ್ಯಾಲಿಫೋರ್ನಿಯಾ ಮೊಕದ್ದಮೆ ಹೂಡಿದೆ ಎಂದು ವರದಿಯಾಗಿದೆ. ನಾಲ್ಕನೇ ದಿನವಾದ ಸೋಮವಾರ ಕೂಡ ಲಾಸ್ ಏಂಜಲೀಸ್‌ನ ಬೀದಿಗಳಲ್ಲಿ ವಲಸಿಗರ ವಿರುದ್ಧದ ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ನಡೆದಿದೆ.
ಸೋಮವಾರದ ಪ್ರತಿಭಟನೆಗಳು ಅಷ್ಟೇನೂ ಗದ್ದಲದಿಂದ ಕೂಡಿರಲಿಲ್ಲ. ಸಾವಿರಾರು ಜನರು ಸಿಟಿ ಹಾಲ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದರು ಮತ್ತು ನಗರದಾದ್ಯಂತ ಕೆಲಸದ ಸ್ಥಳಗಳ ಮೇಲೆ ದಾಳಿ ನಡೆಸಿದ ನಂತರ ಕೆಲವು ವಲಸಿಗರನ್ನು ಬಂಧಿಸಲಾಗಿರುವ ಬಂಧನ ಕೇಂದ್ರವನ್ನು ಒಳಗೊಂಡಿರುವ ಫೆಡರಲ್ ಸಂಕೀರ್ಣದ ಹೊರಗೆ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ.
ಅಮೆರಿಕ| ಭಾರತೀಯ ವಿದ್ಯಾರ್ಥಿಗೆ ಕೈಕೋಳ ಹಾಕಿ, ನೆಲಕ್ಕೆ ಕೆಡವಿ ದೌರ್ಜನ್ಯ; ರಾಯಭಾರ ಕಚೇರಿ ಪ್ರತಿಕ್ರಿಯೆ