2021ನೇ ಸಾಲಿನ ಬೇಂದ್ರೆ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿರುವ ಹಿರಿಯ ಕವಿ ಮತ್ತು ನಾಟಕಕಾರ ಪ್ರೊ. ಎಚ್ ಎಸ್ ಶಿವಪ್ರಕಾಶ್ ಅವರನ್ನು ಯುವ ಕವಿ ರಾಜೇಂದ್ರ ಪ್ರಸಾದ್ ಸಂದರ್ಶಿಸಿದ್ದಾರೆ.

ಆರ್.ಪಿ: ಕನ್ನಡನಾಡಿನಲ್ಲಿ ಪ್ರಶಸ್ತಿ, ಪುರಸ್ಕಾರ/ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷತೆಗಳು ನೇರಾನೇರ ರಾಜಕೀಯ ಅನುಯಾಯಿಗಳ ಫಲಾನುಭವಿ ಆಗುತ್ತಿರುವ ಹೊತ್ತಿನಲ್ಲಿ ನಿಮಗೆ ’ಬೇಂದ್ರೆ ರಾಷ್ಟೀಯ ಪುರಸ್ಕಾರ’ ದೊರೆತಿದೆ. ಈ ಹೊತ್ತಿನಲ್ಲಿ ನಿಮ್ಮ ಮನಸಿನೊಳಗಿನ ತಳಮಳ ಏನು?

ಶಿವಪ್ರಕಾಶ್: ನನಗೆ ಅಂತಹ ತಳಮಳ ಏನಿಲ್ಲ. ಯಾಕೆಂದರೆ ಯಾವುದೇ ಪ್ರಶಸ್ತಿ, ಅಧ್ಯಕ್ಷತೆ ಇತ್ಯಾದಿಗಳಲ್ಲಿ ಯಾವ ಆಸಕ್ತಿಯೂ ನನಗಿಲ್ಲ. ಅದಕ್ಕಾಗಿ ಲಾಬಿ ಮಾಡಿಲ್ಲ. ಈ ಹಿಂದೆ ಬೇಂದ್ರೆ ಪ್ರಶಸ್ತಿ ಯಾರಿಗೆ ಬಂದಿದೆ ಅನ್ನುವುದೇ ತಿಳಿದಿಲ್ಲ. ಹಾಗೆ ನೋಡಿದ್ರೆ ಇವತ್ತಿಗೆ ಪ್ರಸಿದ್ಧರಾಗಿರುವ ಕೆಲವು ಕವಿಗಳಿಗೆ ಸಿಕ್ಕಿರುವ ಪುರಸ್ಕಾರಗಳಲ್ಲಿ ಶೇ.20ರಷ್ಟು ಕೂಡ ನನಗೆ ಬಂದಿಲ್ಲ. ಅದಕ್ಕಾಗಿ ನಾನು ಹಂಬಲಿಸಿಲ್ಲ. ಹಾಗಾಗಿ ಈ ವಿಚಾರಗಳ ಕುರಿತಂತೆ ನನಗೆ ತಳಮಳ ಇಲ್ಲ. ಜನ ನನ್ನ ಕಾವ್ಯ ಓದಬೇಕು, ಅದರಿಂದ ಏನಾದರು ಅವರ ಜೀವನದಲ್ಲಿ ಮತ್ತು ಆಲೋಚನೆಗಳಲ್ಲಿ ಬದಲಾವಣೆ ಆಗಬೇಕು ಅಂತ ಬಯಸಿದ್ದೆ. ಅಂತಹದ್ದು ಆಗಿದೆ. ನನ್ನ ಕಾವ್ಯ, ನಾಟಕ ಅಂಕಣಗಳನ್ನ, ಬತ್ತೀಸರಾಗ ಕೃತಿಯನ್ನ ಓದುವ ಬಹಳಷ್ಟು ಜನರು ಇದ್ದಾರೆ. ಹಲವು ರೀತಿಯ ಓದುಗರನ್ನು ಮುಟ್ಟಲು ನನಗೆ ಸಾಧ್ಯವಾಗಿದೆ. ನಾನು ಜನಪ್ರಿಯತೆಗಾಗಿ ಬರೆಯಲಿಲ್ಲ. ನವೋದಯದವರನ್ನು ಬಿಟ್ಟರೆ ಉಳಿದವರು ಅಂದರೆ ನವ್ಯದರೆಲ್ಲಾ ಸಾಹಿತ್ಯದ ಮೂಲಕವೇ ಜನರನ್ನು ಮುಟ್ಟಲಿಲ್ಲ. ಕೆಲವರು ಪತ್ರಿಕೆಗಳನ್ನು ತರುವ ಮೂಲಕ ಮುಟ್ಟಿದರು, ಕೆಲವರು ವಾಚಕರ ವಾಣಿಯಲ್ಲಿ ರೋಚಕವಾಗಿ ಬರೆಯುವ ಮೂಲಕ ಮುಟ್ಟಿದರು. ಆದರೆ ನಾನು ಇದ್ಯಾವುದೇ ರಾಜಿಗಳಿಗೆ ಸಿದ್ಧನಿರಲಿಲ್ಲ. ಸಾಹಿತ್ಯದ ಮೂಲಕವೇ ಜನರನ್ನ ಮುಟ್ಟಿದ್ದೀನಿ, ಅಷ್ಟು ಸಾಕು. ಪ್ರಶಸ್ತಿ/ಪುರಸ್ಕಾರ ಬಂದರೆ ಸಂತೋಷ. ಇಲ್ಲವಾದರೆ ಆ ಬಗ್ಗೆ ದುಃಖವೇನಿಲ್ಲ.

ಆರ್.ಪಿ: ಬೇಂದ್ರೆ ಅವರ ವ್ಯಕ್ತಿತ್ವ ಅಥವಾ ಅವರ ಕಾವ್ಯದ ಓದಿನ ಪ್ರಭಾವ ನಿಮ್ಮ ಮೇಲೆ ಆಗಿದ್ದು ಉಂಟೇ? ಈ ಒಡನಾಟದ ಬಗ್ಗೆ ಚೂರು ವಿವರವಾಗಿ ಹೇಳಿ.

ಶಿವಪ್ರಕಾಶ್: ಓದಿದ್ದೆ.. ಓದಿದ್ದೆ. ಬಾಲ್ಯದಲ್ಲಿ ನಾನು ಶಾಲೆಯ ಪಠ್ಯದಲ್ಲಿ ಇರುವ ಕನ್ನಡ ಕಾವ್ಯ ಬಿಟ್ಟು ಆಚೆಗೆ ಓದಿರಲಿಲ್ಲ. ಕವಿತೆ ಬರೆಯೋಕೆ ಶುರು ಮಾಡಿದಾಗ ಇಂಗ್ಲಿಷ್ ಮತ್ತು ಕನ್ನಡ ಕಾವ್ಯವನ್ನು ಏಕಕಾಲದಲ್ಲಿ ಓದೋಕೆ ಶುರು ಮಾಡಿದೆ. ಅವಾಗ ನನಗಿನ್ನೂ 18-19 ವಯಸ್ಸು. ಮೊದಲು ಅಡಿಗರನ್ನು ಆಮೇಲೆ ಕೆ ಎಸ್ ನರಸಿಂಹಸ್ವಾಮಿಯವರನ್ನು ಓದೋಕೆ ಶುರು ಮಾಡಿದೆ. ಆಮೇಲೆ ಬೇಂದ್ರೆಯವರನ್ನು. ’ಬೆಳಗು’ (ಮೂಡಲ ಮನೆಯ ಮುತ್ತಿನ ಹನಿಯ) ಕವಿತೆಯನ್ನು ಪಠ್ಯದಲ್ಲಿ ಓದಿದ್ದೆ. ಆಮೇಲೆ ’ಜೋಗಿ’ ಪದ್ಯವನ್ನು ಓದಿ ಮಂತ್ರಮುಗ್ಧನಾಗಿಬಿಟ್ಟೆ. ಈ ಕವಿಯ ಎಲ್ಲ ಕಾವ್ಯವನ್ನು ಓದಬೇಕು ಅಂತ 2-3 ವರ್ಷ ಬೇಂದ್ರೆ ಕಾವ್ಯದ ಜೊತೆಗೆ ಅನುಸಂಧಾನವನ್ನು ಮಾಡಿದೆ. ಆ ಅವಧಿಯಲ್ಲಿ ನನಗೆ ತುಮಕೂರಿನಲ್ಲಿ ಕೆಲಸ ಸಿಕ್ಕಿತು. ಅಲ್ಲಿ ವಿ. ಚಿಕ್ಕವೀರಯ್ಯನವರು ಸಿಕ್ಕರು. ಅವರಂತೂ ’ಬೇಂದ್ರೋನ್ಮತ್ತರು’. ಅವರೊಂದಿಗೆ ಹೆಚ್ಚು ಓದುತ್ತ ಮಾತಾಡುತ್ತ ಬೇಂದ್ರೆ ಕಾವ್ಯದ ಬಗೆಗೆ ತಿಳಿದುಕೊಂಡೆ. ಆದರೆ ಅವರಷ್ಟು ಉನ್ಮತ್ತನಾಗಲು ಸಾಧ್ಯವಾಗಲಿಲ್ಲ. ಬೇಂದ್ರೆ ದೊಡ್ಡವರು ಆದರೆ, ಕಡಿಮೆ ಬರೆದಿದ್ದ ಮಧುರಚೆನ್ನರು ಅವರಷ್ಟೇ ದೊಡ್ಡವರು ಅಂತ ನನ್ನ ಗುರುಗಳಾದ ಗೋಪಾಲ ಕೃಷ್ಣ ಅಡಿಗರು ಹೇಳುತ್ತಿದ್ದರು. ಬೇಂದ್ರೆಯವರ ವಿಶೇಷತೆ ಏನು ಅಂದ್ರೆ, ಅನೇಕ ತೆರನಾದ ಛಂಧೋಬದ್ಧತೆಗಳನ್ನು ಅವರ ಕಾವ್ಯದಲ್ಲಿ ಪ್ರಯೋಗ ಮಾಡ್ತಾ ಇದ್ದರು. ಇದು ನನ್ನನ್ನು ಬೆರಗುಗೊಳಿಸೋದು. ನೋಡಿ ಬೇಂದ್ರೆ ಅವರ ಹತ್ರ ’ಭಾಷೆ’ ಇತ್ತು, ಕುವೆಂಪು ಅವರ ಹತ್ರ ’ದರ್ಶನ’ ಇತ್ತು. ಇವೆರಡೂ ಪ್ರತಿಭೆ ಒಂದಾಗಿ ಒಬ್ಬರಲ್ಲಿ ಇದ್ದಿದ್ದರೆ ಬಹಳ ಮಹತ್ವದ ಕಾವ್ಯ ಸೃಷ್ಟಿ ಆಗುತ್ತಿತ್ತು ಅನಿಸುತ್ತೆ. ಈ ಇಬ್ಬರಿಂದ ನಾನು ಕಲಿತಿದ್ದೀನಿ.

ಇದನ್ನೂ ಓದಿ: ಬೇಂದ್ರೆ-125 ವಿಶೇಷ: ಬೇಂದ್ರೆ ಎಂಬ ಧಾರವಾಡೀ ಗಾರುಡಿಗತನ

ಆರ್.ಪಿ: ನಿಮ್ಮಿಷ್ಟದ ಬೇಂದ್ರೆ ಕವಿತೆಗಳು ಯಾವು?

ಶಿವಪ್ರಕಾಶ್: ಮೊದಮೊದಲು ಅವರ ’ಮಾಯಕಿನ್ನರಿ’ ಬಹಳ ಇಷ್ಟ ಆಗ್ತಿತ್ತು. ಅದರ ಚೆಂದ ಶಬ್ದಗಳ ನಾಟ್ಯ ಬಹಳ ಇಷ್ಟವಾಗಿತ್ತು. ಆದರೆ ಈಚೆಗೆ ಅದು ಸಂಪೂರ್ಣ ಪುರುಷ ಪ್ರಧಾನವಾದ ದೃಷ್ಟಿಯ ಕವಿತೆ ಅನಿಸತೊಡಗಿದೆ. ಆಮೇಲೆ ಜೋಗಿ ಬಹಳ ಇಷ್ಟವಾಗಿತ್ತು. ಜೋಗಿ ಒಂದು ಬೆರಗು ಹುಟ್ಟಿಸುತ್ತೆ. ಆದರೆ ಮಧುರಚೆನ್ನರ ಕಾವ್ಯದ ತರಹ ಅನುಭಾವದ ಮುಂದಿನ ಹಂತಕ್ಕೆ ಕೊಂಡೊಯ್ಯವಲ್ಲವೇನೋ ಎಂಬ ಅನುಮಾನ ನನಗಿದೆ. ಆಮೇಲೆ ’ಏಳು ಕನ್ನಿಕೆಯರು’ ಕವಿತೆ. ಬೇಂದ್ರೆಯವರಲ್ಲಿ ಪ್ರತಿಭೆಯ ಮಿಣುಕುಗಳು, ಮಿಂಚುಗಳು ಕಾಣಿಸ್ತಾವೆ. ಆದರೆ ಕುವೆಂಪು ಅವರಲ್ಲಿ ಇರುವ ಘನಿಕೃತವಾದ ದರ್ಶನ ಅಥವಾ ಮಧುರಚೆನ್ನರ ಅನುಭಾವ ಕಾಣೋದಿಲ್ಲ. ಆದರೆ ಬೇಂದ್ರೆ ಅವರ ಭಾಷಿಕವಾದ ಚಾಕಚಕ್ಯತೆ ಏನಿದೆ, ಅದು ಕೂಡ ಮುಖ್ಯ. ಬಹುಶಃ ಜೈಮಿನಿ ಭಾರತ ಬರೆದ ಲಕ್ಷ್ಮೀಶನ ನಂತರ ಭಾಷೆಯ ಜೊತೆಗೆ ಆಟವಾಡಿದ ಕವಿ ಬೇಂದ್ರೆ ಅವರೇ ಅನಿಸತ್ತೆ.

ಆರ್.ಪಿ: ಬೇಂದ್ರೆಯವರು ಕೂಡ ಆಧ್ಯಾತ್ಮ ಪಥದಲ್ಲಿ ಮುನ್ನಡೆದಿದ್ದರು. ಉದಾ: ಅವರು ಅರವಿಂದರಿಂದ ಬಹಳ ಪ್ರಭಾವಿತರಾಗಿದ್ದರು. ನಿಮಗೆ ಬೇಂದ್ರೆಯವರ ಕಾವ್ಯದಲ್ಲಿ ಆಧ್ಯಾತ್ಮ ಹೇಗೆ ಕಾಣುತ್ತಿದೆ?

ಶಿವಪ್ರಕಾಶ್: ನಾನು ಅರವಿಂದರನ್ನು, ವಿವೇಕಾನಂದರನ್ನು ಸಣ್ಣ ವಯಸ್ಸಿನಲ್ಲಿಯೇ ಓದಿದ್ದೆ. ವಿವೇಕಾನಂದರು ಯೌವ್ವನದಲ್ಲಿ ನಮ್ಮ ಆದರ್ಶಗಳನ್ನು ಪ್ರೇರೆಪಿಸಿದ್ದು ನಿಜ. ಅರವಿಂದರ ದರ್ಶನ ನನಗೆ ಬಹಳ ಅಮೂರ್ತವಾಗಿ ಕಾಣಿಸಿತು. ಅವರ ಸಾವಿತ್ರಿ ಮಹಾಕಾವ್ಯ ಕೂಡ ಹಾಗೆ ಕಂಡಿತು. ಹಾಗಾಗಿ ಇವರ ಪ್ರಭಾವ ನನ್ನ ಕಾವ್ಯದ ಮೇಲೆ ಆಗಲಿಲ್ಲ. ನನ್ನ ಆಧ್ಯಾತ್ಮ ಬಂದಿದ್ದು ಇಂಗಿಷ್‌ನಲ್ಲಿ ಬರೆದ, ಪಶ್ಚಿಮದಿಂದ ಪ್ರಭಾವಿತರಾದ ಗುರುಗಳಿಂದ ಅಲ್ಲ. ನನ್ನ ಆಧ್ಯಾತ್ಮ ಬಂದಿದ್ದು ಅಕ್ಕಮಹಾದೇವಿ, ಬಸವಣ್ಣ, ಶಿಶುನಾಳ ಶರೀಫ, ಕಡಕೋಳ ಮಡಿವಾಳಪ್ಪ, ಮಲೆ ಮಾದೇಶ್ವರ, ಮಂಟೇಸ್ವಾಮಿ ಮತ್ತು ನನ್ನ ಸ್ವಂತ ಆಧ್ಯಾತ್ಮಿಕ ಅನುಭಾವದಿಂದ. ನನಗೆ ಅನುಭಾವ ಅನ್ನುವುದು ಯಾವತ್ತು ಪುಸ್ತಕದ ಬದನೇಕಾಯಿ ಆಗಿರಲಿಲ್ಲ. ಅದು ಅನುಭವದ ಒಂದು ಅನ್ವೇಷಣೆಯ ಸಂಗತಿಯಾಗಿತ್ತು.

ಆರ್.ಪಿ: ನೀವು ಹುಟ್ಟಿದ್ದು ಬೆಳೆದಿದ್ದು ಬದುಕಿದ್ದು ಬೆಂಗಳೂರು ತುಮಕೂರು ಜಿಲ್ಲೆಗಳ ಭಾಗವಾದರೂ ನಿಮಗೆ ಉತ್ತರ ಕರ್ನಾಟಕದ ಹಲವಾರು ಭಾಗಗಳು ಬಹಳ ಇಷ್ಟ. ಬಹಳ ಗೆಳೆಯರು ನಿಮಗೆ ಅಲ್ಲಿದ್ದಾರೆ. ಹಾಗೆಯೆ ನಿಮಗೆ ಧಾರವಾಡದಲಿ ವಿಶೇಷ ನಂಟು ಏನಾದರೂ ಇದೆಯೇ?

ಶಿವಪ್ರಕಾಶ್: ಆ ತರಹ ಏನಿಲ್ಲ. ಚಿಕ್ಕ ವಯಸ್ಸಿನಲ್ಲಿ ಮುರುಘಾ ಮಠದ ಮೃತ್ಯುಂಜಯ ಸ್ವಾಮಿಗಳು ನನಗೆ ಆಶೀರ್ವಾದ ಮಾಡಿದ್ದರು. ಆಮೇಲೆ ಧಾರವಾಡದ ಸುತ್ತಮುತ್ತಲ ಶಿವಯೋಗಿಗಳ, ಅವಧೂತರ ಪರಂಪರೆ ಬಗ್ಗೆ ನನಗೆ ಬಹಳ ಆಸಕ್ತಿ ಇತ್ತು. ಅನೇಕ ಗುರುಗಳ ಗದ್ದುಗೆಗಳಿಗೆ ಹೋಗಿಬಂದಿದೀನಿ. ಅವರ ಅನುಗ್ರಹವಾಗಿದೆ. ಅದಲ್ಲದೇ ಹೀರೆ ಸಾವಣಗಿ, ಅಥಣಿ ಶಿವಯೋಗಿಗಳು, ಹುಬ್ಬಳಿ ಸಿದ್ಧರೂಢರು, ಶಿರಹಟ್ಟಿ ಫಕೀರೇಶ್ವರರ ಪ್ರಭಾವವಿದೆ. ಹೊರತಾಗಿ ಬೇಂದ್ರೆ ಕಾವ್ಯದ ದೃಷ್ಟಿಯಿಂದ ಧಾರವಾಡದ ನೆಂಟು ಇಲ್ಲ. ಇನ್ನೊಬ್ಬರು ಧಾರವಾಡದವರು ಕುಮಾರಸ್ವಾಮಿಗಳು ಅಂತಿದ್ದರು. ಶರಣರ ಬಗ್ಗೆ, ಆಧ್ಯಾತ್ಮದ ಬಗ್ಗೆ ಇಂಗ್ಲಿಷ್‌ನಲ್ಲಿ ಒಳ್ಳೆಯ ಪುಸ್ತಕಗಳನ್ನು ಬರೆದಿದ್ದರು. ಅವರಿಂದ ನಾನು ಶಿವಯೋಗಿ ದೀಕ್ಷೆ ಕೂಡ ಪಡೆದಿದ್ದೆ.

ಆರ್.ಪಿ: 15 ವರ್ಷಗಳ ಅವಧಿಯಲ್ಲಿ 14 ನಾಟಕಗಳನ್ನು ಬರೆದ ನೀವು ಕಳೆದ ಇಪ್ಪತ್ತು ವರ್ಷಗಳಿಂದ ನಾಟಕವನ್ನು ಮತ್ತೆ ಕೈಗೆತ್ತಿಕೊಳ್ಳಲೇ ಇಲ್ಲ ಯಾಕೆ? ಅಥವಾ ಈಚೆಗೆ ಬರೆಯುವ ಪ್ರಯತ್ನವೇನದರೂ ಆಗಿದೆಯೇ?

ಶಿವಪ್ರಕಾಶ್: 2000 ಇಸವಿ ಆಮೇಲಿಂದ ನನಗೆ ಹಳೇ ಯಶಸ್ಸನ್ನೇ ಮುಂದುವರಿಸುವ ಇಷ್ಟ ಇರಲಿಲ್ಲ. ಹೊಸ ತರಹದ್ದು ಬರೆಯಬೇಕು ಅಂತ ಕಾದೆ. 2012ರಲ್ಲಿ ’ಮಸ್ತಕಾಭಿಷೇಕ’ ಹೆಸರಲ್ಲಿ ಒಂದು ಬರೆದೆ. ಅದು ಪ್ರಕಟವಾಗಿಲ್ಲ. ಆದರೆ ಇಂಗ್ಲಿಷ್‌ಗೆ ಅನುವಾದವಾಗಿ ದೆಹಲಿಯಲ್ಲಿ ಪ್ರಯೋಗವಾಗಿದೆ. ಹೆಚ್ಚಿಗೆ ನಾಟಕ ಬರೆವ ಉದ್ದೇಶ ಇಲ್ಲ. ಬರೆದರೆ ಇವೆಲ್ಲಕ್ಕಿಂತ ಭಿನ್ನವಾಗಿ ಬರೆಯಬೇಕು ಅಂತ ಎರಡು ನನ್ನ ಮನಸ್ಸಲ್ಲಿ ಇವೆ. ಒಂದು: ಶ್ರೀಕೃಷ್ಣನ ಕೊನೆಯ ದಿನಗಳನ್ನು ಕುರಿತು ಅವನ ಮುತ್ಸದ್ಧಿತನ ಮತ್ತು ಯಾದವೀ ಕಲಹವನ್ನು ಆತನು ಕಂಡ ಬಗೆಯನ್ನು ಕುರಿತು ಬರೆಯಬೇಕು. ಮತ್ತೊಂದು ಶೇಕ್ಸ್‌ಪಿಯರ್‌ನ ’ಪೆರಿಕ್ಲಿಸ್’ ನಾಟಕವನ್ನು ಶಾನು ಮಹಾತ್ಮೆ ಅಥವಾ ರಾಜಾ ವಿಕ್ರಮನ ಕಥೆ ಏನಿದೆ ಅದಕ್ಕೆ ಅನ್ವಯಿಸಿ ಬರೆಯಬೇಕು ಅನ್ನಿಸ್ತಾ ಮನಸಲ್ಲಿದೆ. ನೋಡಬೇಕು.

ಆರ್.ಪಿ: ಮರುರೂಪಗಳು ಪ್ರಕಟವಾಗಿ ಎರಡು ದಶಕದ ನಂತರ ಈಚೆಗೆ ನಾಕೈದು ವರ್ಷಗಳಲ್ಲಿ ನಿಮ್ಮ ಅನುವಾದ ಹೆಚ್ಚಾಗಿದೆ. ಅದಕ್ಕೆ ಏನಾದ್ರು ಕಾರಣ ಇದೆಯೇ? ಹಾಗೆಯೆ ಅವು ಹೆಚ್ಚು ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ದೇಶ ಭಾಷೆ ಮತ್ತು ಸಂಸ್ಕೃತಿಗಳ ಅಷ್ಟು ಪ್ರಸಿದ್ಧರಲ್ಲದ ಕವಿಗಳ ಅನುವಾದವಾಗಿದೆ.

ಶಿವಪ್ರಕಾಶ್: ತುಂಬಾ ಮಾಡಿದ್ದೀನಿ. ಆದರೆ ಈಚೆಗೆ ನಾನು ಮಾಡಿದ ಈ ಅನುವಾದಗಳನ್ನು ಕಾಪಿ ಮಾಡುವ ಸಹಾಯಕ ಇಲ್ಲದೇ ಫೇಸ್ಬುಕ್‌ನಲ್ಲಿ ಅಲ್ಲಿ ಇಲ್ಲಿ ಚದುರಿಹೋಗಿವೆ. ಅದೆಲ್ಲವನ್ನು ಸೇರಿಸಿದರೆ ಮರುರೂಪಗಳು ಕೃತಿಗಳಿಂತಲೂ ದುಪ್ಪಟ್ಟು ಆದ ಮತ್ತೊಂದು ಕೃತಿ ಸಿದ್ಧವಾಗುತ್ತದೆ. ನನಗೆ ಮೊದಲಿಂದಲೂ ದಕ್ಷಿಣ ಅಮೆರಿಕ ಬಗ್ಗೆ ವಿಶೇಷ ಆಸಕ್ತಿ. ಅಲ್ಲಿನ ನಾಗರಿಕತೆ ಪಶ್ಚಿಮದ ನಾಗರಿಕತೆಗಿಂತ ವಿಭಿನ್ನವಾದ್ದು. ಪಶ್ಚಿಮದಿಂದ ನಮಗೆ ಬರಬೇಕಾದ್ದು ಅಗತ್ಯಕ್ಕಿಂತ ಜಾಸ್ತಿ ಬಂದುಬಿಟ್ಟಿದೆ. ಆದರೆ ದಕ್ಷಿಣ ಅಮೆರಿಕ, ನ್ಯೂಜಿಲ್ಯಾಂಡ್, ಕೊರಿಯಾ, ಜಪಾನ್ ಸೇರಿದಂತೆ ಏಶಿಯಾ ಹಲವು ದೇಶಗಳ ರತ್ನ ಭಂಡಾರದಿಂದ ನಾವು ಹೆಕ್ಕಿ ತರಬೇಕಿದೆ. ನವೋದಯದವರು ನೋಡಿ, ಅವರು ಬರೀ ಇಂಗ್ಲಿಷ್‌ನಿಂದ ಅಲ್ಲ ಗ್ರೀಕ್, ಫ್ರೆಂಚ್, ರಷ್ಯನ್‌ನಿಂದ ಅನುವಾದ ಮಾಡ್ತಾ ಇದ್ರು. ಆದರೆ ಇದನ್ನು ಬರೀ ಇಂಗ್ಲಿಷ್‌ಗೆ ಕುಗ್ಗಿಸಿದ ಮಹಾನ್ ಕುತ್ಸಿತ ಸಾಧನೆ ನಮ್ಮ ನವ್ಯದವರದ್ದು.

ಆರ್.ಪಿ: JNU ಇಂದ ನಿವೃತ್ತರಾಗಿ ಏಳೆಂಟು ತಿಂಗಳು ಕಳೆಯುವುದರೊಳಗೆ ಕೋವಿಡ್ ಬಂದು ಲಾಕ್‌ಡೌನ್ ಆಯಿತು. ಒಬ್ಬ ಸೃಜನಶೀಲರಾಗಿ ಈ ಅವಧಿಯಲ್ಲಿ ನಿಮ್ಮ ಬದುಕಿನ ಅನುಭವ ಹೇಗಿತ್ತು?

ಶಿವಪ್ರಕಾಶ್: ಅನುಭವ ಕೆಲವು ವಿಚಾರದಲ್ಲಿ ಬಹಳ ಭಯಂಕರವಾಗಿತ್ತು. ಕೆಲವುದರಲ್ಲಿ ಇತ್ಯಾತ್ಮಕವಾಗಿತ್ತು. ಲಾಕ್‌ಡೌನ್ ಆಗುವುದಕ್ಕಿಂತ ಒಂದು ತಿಂಗಳ ಹಿಂದೆ, ಆ ತಿಂಗಳ ಮೊದಲಭಾಗದಲ್ಲಿ ಜಪಾನಿನ ಪೂಜಿಯಾಮದ ಬಳಿ ಇದ್ದೆ. ಕೊನೆಯ ಭಾಗದಲ್ಲಿ ಅದಕ್ಕೆ ವಿರುದ್ಧ ದಿಕ್ಕಿನ ಚಿಲಿ ದೇಶದ ಆಂಡೀಸ್ ಪರ್ವತಗಳ ತಪ್ಪಲಿನಲ್ಲಿ ಇದ್ದೆ. ಹೀಗೆ ಸದಾ ದೇಶ ವಿದೇಶಗಳನ್ನು ಸಂಚಾರ ಮಾಡುತ್ತಾ ಇದ್ದ ನನಗೆ ಮನೆಯೇ ಒಂದು ಜಗತ್ತು ಆಗಿಬಿಡ್ತಲ್ಲ. ಕಡೆಗೆ ಬರ್ತಾ ಬರ್ತಾ ಈ ದೇಹವೇ ಒಂದು ಜಗತ್ತು ಅನಿಸಲು ಶುರುವಾಯ್ತು. ಈ ಬಗ್ಗೆ ಹಲವಾರು ಕವಿತೆಗಳನ್ನು ಬರೆದಿದ್ದೀನಿ. ಅವೆಲ್ಲ ನನ್ನ ಮುಂದಿನ ಸಂಕಲನದಲ್ಲಿ ಪ್ರಕಟವಾಗಲಿವೆ. ನಾವು ಒಬ್ಬರೊಬ್ಬರನ್ನು ಮುಟ್ಟುವ ಅನುಭವದ ಸ್ವರೂಪವೇ ಬದಲಾಗಿಬಿಟ್ಟಿತು.

ಇದನ್ನೂ ಓದಿ: ಪ್ರತಿಭಟಿಸಿದ ಬೇಂದ್ರೆ ಕಾವ್ಯ : ಬಡವರಬಗ್ಗರ ತುತ್ತಿನ ಚೀಲವ ಮಾತ್ರ ’ಬರಿದೋ ಬರಿದು’

ಆರ್.ಪಿ: ಕನ್ನಡದ ಹೊಸ ಕಾವ್ಯ ಬೆಳೆ ಹೇಗಿದೆ? ಅದರ ದಿಕ್ಕು ದಿಗಂತಗಳ ಬಗ್ಗೆ ನಿಮ್ಮ ಅನಿಸಿಕೆಯೇನು? ಹೊಸ ತಲೆಮಾರು ಬೇಂದ್ರೆ ಅವರ ಕಾವನ್ನು ಓದುವ ಅಗತ್ಯ ಮತ್ತದರ ಅರಿವಿನ ಬಗ್ಗೆ ಚೂರು ನಿಷ್ಠುರವಾಗಿಯೇ ಅಭಿಪ್ರಾಯ ಹೇಳಿ

ಶಿವಪ್ರಕಾಶ್: ಕವಿತೆ ಎಲ್ಲಿ ಬರೆದರೂ ಕವಿತೆಯೇ. ಕೆಲವರು ಫೇಸ್‌ಬುಕ್ ಕವಿತೆಯನ್ನು ಒಪ್ಪುವುದಿಲ್ಲ. ಕಳೆ ಅನ್ನುವುದು ಎಲ್ಲ ಕಡೆಯೂ ಇದ್ದೇ ಇರತ್ತೆ, ಅದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ಸೋಶಿಯಲ್ ಮಿಡಿಯಾ ವೇದಿಕೆಗಳು ಪ್ರಜಾಸತ್ತಾತ್ಮಕವಾದ ಅಭಿವ್ಯಕ್ತಿಗೆ ಅವಕಾಶವನ್ನು ಒದಗಿಸಿಕೊಟ್ಟಿವೆ. ಹತ್ತು ವರ್ಷಗಳ ಹಿಂದೆ ಇದ್ದಷ್ಟು ನಿರಾಸೆ ಇಂದು ನನಗಿಲ್ಲ. ಬಹಳಷ್ಟು ಯುವಜನರು ಗೆಲುವಾಗಿ ಬರೀತಾ ಇದ್ದಾರೆ. ಆದರೆ ಬಹುತೇಕ ಈ ಯುವಜನರು ಬರೀತಾ ಇರೋದು ನವ್ಯರ ಲೈಂಗಿಕ ಪ್ರಧಾನ ದೃಷ್ಟಿ ಮತ್ತು ನುಡಿಗಟ್ಟುಗಳಿಂದ, ಇನ್ನು ಕೆಲವರು ಬಂಡಾಯದ ಹೇಳಿಕೆಗಳಿಂದ. ಆಮೇಲೆ ಸಾಮಯಿಕ ಪ್ರತಿಕ್ರಿಯೆಯೇ ಸಾಹಿತ್ಯದ ಒಂದು ದೊಡ್ಡ ಕರ್ತವ್ಯ ಅಂತ ಅಂದುಕೊಂಡುಬಿಟ್ಟರೆ ಅದು ವಾಚಕರ ವಾಣಿ ಮಟ್ಟಕ್ಕೆ ಇಳಿದುಹೋಗತ್ತೆ. ಕನ್ನಡ ಕಾವ್ಯದಲ್ಲಿ ಒಂಥರಾ ದಿಗ್ಮೂಢತೆ ಕಾಣುತ್ತಾ ಇದೆ. ಕಾವ್ಯದ ಯಾವುದಾದರೊಂದು ದನಿಯ ಜಾಡು ಹಿಡಿದು ಹೊರಟರೆ ನಮ್ಮ ದನಿಯ ಜಾಡು ನಮಗೆ ಸಿಗತ್ತೆ. ಉದಾ: ನಾನು ಮೊದಲು ಕೆ ಎಸ್ ನರಸಿಂಹಸ್ವಾಮಿ ಅವರ ಕವಿತೆಗಳನ್ನು ಅನುಕರಣೆ ಮಾಡಿ ಬರಿತಾ ಇದ್ದೆ. ಆದರೆ ಇದು ನನ್ನ ಮಾದರಿಯ ಕವಿತೆ ಅಲ್ಲ ಅನ್ನಿಸಿತು. ಆಮೇಲೆ ಅನ್ನದೇ ಕಾವ್ಯದ ದನಿಯನ್ನು ಹುಡುಕಿಕೊಂಡೆ. ಆದರೆ ಇಂತಹ ಪ್ರಯೋಗಶೀಲತೆ ಯಾಕೋ ಕಾಣಿಸ್ತಾ ಇಲ್ಲ.

ಹೌದು ಬೇಂದ್ರೆಯವರ ಕಾವ್ಯವನ್ನು ಹೊಸ ತಲೆಮಾರು ಓದಬೇಕು. ಅನೇಕ ಲಯಗಳನ್ನು, ಛಂದೋಪ್ರಕಾರಗಳನ್ನು, ಅನೇಕ ವಸ್ತುಗಳನ್ನ ಬಳಸಿರುವ ಅವರ ಕಾವ್ಯದ ವಿಪುಲತೆ ಏನಿದೆ ಅದನ್ನು ತಿಳಿಯಬೇಕು.

ರಾಜೇಂದ್ರ ಪ್ರಸಾದ್

ರಾಜೇಂದ್ರ ಪ್ರಸಾದ್
ಹೊಸ ತಲೆಮಾರಿನ ಕವಿ. ಕಾವ್ಯ, ತತ್ವಶಾಸ್ತ್ರ, ಕರ್ನಾಟಕ ಸಂಗೀತ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು, ಭೂಮಿಗಂಧ, ಕೋವಿ ಮತ್ತು ಕೊಳಲು, ಲಾವೋನ ಕನಸು, ಬ್ರೆಕ್ಟ್ ಪರಿಣಾಮ ನೀರೊಳಗೆ ಮಾಯದ ಜೋಳಿಗೆ ಕವನ ಸಂಕಲನಗಳನ್ನು ಹೊರತಂದಿದ್ದಾರೆ. ‘ಸಂಕಥನ’ ಸಾಹಿತ್ಯ ಪತ್ರಿಕೆ ಸಂಪಾದಕ


ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜೇಂದ್ರ ಪ್ರಸಾದ್
+ posts

2 COMMENTS

  1. ರಾಜೇಂದ್ರ , ಅನುಭಾವಿ ಕವಿ ಶಿವಪ್ರಸಾದ್ ಅವರ ಕಾವ್ಯದ ಬಗೆಗಿನ ಒಳನೋಟ ಸಂದರ್ಶನದಲ್ಲಿ ಸುಂದರವಾಗಿ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here