Homeಮುಖಪುಟವಂದೇ ಭಾರತ್‌ಗೆ ಒತ್ತು ನೀಡಿ ಉಳಿದ ರೈಲುಗಳನ್ನು ಕಡೆಗಣಿಸುತ್ತಿದ್ದಾರೆಯೇ ಮೋದಿ?

ವಂದೇ ಭಾರತ್‌ಗೆ ಒತ್ತು ನೀಡಿ ಉಳಿದ ರೈಲುಗಳನ್ನು ಕಡೆಗಣಿಸುತ್ತಿದ್ದಾರೆಯೇ ಮೋದಿ?

- Advertisement -
- Advertisement -

ಒಡಿಶಾದಲ್ಲಿ ಶುಕ್ರವಾರ ಮೂರು ರೈಲುಗಳು ಡಿಕ್ಕಿಯಾಗಿ ಕನಿಷ್ಠ 288 ಜನರು ಸಾವನ್ನಪ್ಪಿದ್ದಾರೆ ಮತ್ತು 900 ಜನರು ಗಾಯಗೊಂಡಿದ್ದಾರೆ. ಇದು ಭಾರತದ ಅತ್ಯಂತ ಕೆಟ್ಟ ರೈಲ್ವೆ ದುರಂತಗಳಲ್ಲಿ ಒಂದಾಗಿದೆ.

ಈ ಅಪಘಾತವು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮಾತ್ರವಲ್ಲದೆ, ಭಾರತೀಯ ರೈಲ್ವೆಯನ್ನು ಕಾಡುತ್ತಿರುವ ಇತರ ಸಮಸ್ಯೆಗಳತ್ತಲೂ ಬೊಟ್ಟು ಮಾಡಿದೆ. ಜನಸಂದಣಿ, ರೈಲಿನ ವಿಳಂಬದಂತಹ ಸಮಸ್ಯೆಗಳನ್ನು ಇದು ಎತ್ತಿ ಹಿಡಿದಿದೆ. ಇವುಗಳು ದೀರ್ಘಕಾಲದ ಕಳವಳಕಾರಿ ಸಂಗತಿಗಳಾದರೂ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಇಚ್ಛಾಶಕ್ತಿಯು ಈ ಸಮಸ್ಯೆಗಳ ಮೇಲೆ ಕೇಂದ್ರೀಕೃತವಾಗಿಲ್ಲ. ಆದರೆ ವಂದೇ ಭಾರತ್‌ ರೈಲಿಗೆ ಒತ್ತು ಸಿಕ್ಕಿದೆ.

ವಂದೇ ಭಾರತ್‌ಗೆ ಒತ್ತು

‘ಎಕನಾಮಿಕ್ ಟೈಮ್ಸ್’ ವರದಿ ಪ್ರಕಾರ ರೈಲ್ವೇ ಇಲಾಖೆಯು ಪ್ರತಿ ವಂದೇ ಭಾರತ್ ರೈಲಿಗಾಗಿ 115 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ. ಇದೇ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಈ ರೈಲುಗಳ ಮೇಲೆ ಸರ್ಕಾರ ಗಮನಹರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಹಲವಾರು ವಂದೇ ಭಾರತ್ ಮಾರ್ಗಗಳನ್ನು ಪ್ರಾರಂಭಿಸಿದ್ದಾರೆ, ರೈಲುಗಳ ಪ್ರಯೋಜನಗಳ ಬಗ್ಗೆ ಪಟ್ಟುಬಿಡದೆ ಪ್ರಚಾರವನ್ನು ನಡೆಸುತ್ತಿದ್ದಾರೆ.

ಫೆಬ್ರವರಿಯಲ್ಲಿ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ 2.4 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಾಗ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, “ವಂದೇ ಭಾರತ್ ರೈಲುಗಳ ಉತ್ಪಾದನೆಯನ್ನು ಹೆಚ್ಚಿಸಲು ಹಣವನ್ನು ಬಳಸಲಾಗುವುದು” ಎಂದು ಒತ್ತಿ ಹೇಳಿದರು.

ವಂದೇ ಭಾರತ್ ಟಿಕೆಟ್‌ ದರಗಳು ಭಾರತೀಯ ರೈಲ್ವೆಯ ಸಾಮಾನ್ಯ ರೈಲುಗಳಿಗಿಂತ ಹೆಚ್ಚಾಗಿದೆ. ಈ ರೈಲು 2019-20ರಲ್ಲಿ 808 ಕೋಟಿ ಪ್ರಯಾಣಿಕರನ್ನು ಒತ್ತು ಸಾಗಿಸಿದೆ. ವಿಶೇಷವಾಗಿ ಬಡವರಿಗೆ ಇದು ವೆಚ್ಚದಾಯಕವಾಗಿದೆ.

ಸುರಕ್ಷತಾ ಮಾನದಂಡಗಳಲ್ಲಿ ಕುಸಿತ

ವಂದೇ ಭಾರತ್ ಉತ್ತೇಜನದ ನಡುವೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳು ಗಮನ ಸೆಳೆಯುತ್ತವೆ. ಕಳೆದ ಕೆಲವು ವರ್ಷಗಳಿಂದ ರೈಲ್ವೆ ಅಪಘಾತಗಳು ಹೆಚ್ಚಿವೆ ಎಂದು ಈ ವರದಿ ತೋರಿಸುತ್ತದೆ. ರೈಲ್ವೇ ಸಚಿವಾಲಯದ ಸುರಕ್ಷತಾ ಪರಿಶೀಲನಾ ದತ್ತಾಂಶವನ್ನು ಉಲ್ಲೇಖಿಸಿದ ಬಿಸಿನೆಸ್ ಸ್ಟ್ಯಾಂಡರ್ಡ್‌ನಲ್ಲಿನ ವರದಿಯ ಪ್ರಕಾರ, “2022-23ರಲ್ಲಿ 37% (ಅವಘಡ) ಏರಿಕೆಯಾಗಿದೆ.”

ಕಳೆದ 10 ವರ್ಷಗಳಲ್ಲಿ ರೈಲು ಅಪಘಾತಗಳು ಸುಮಾರು 2.6 ಲಕ್ಷ ಸಾವುಗಳಿಗೆ ಕಾರಣವಾಗಿವೆ ಎಂದು ಅಪರಾಧ ಬ್ಯೂರೋ ಅಂಕಿಅಂಶಗಳು ಹೇಳುತ್ತಿವೆ. ಪ್ರಯಾಣಿಕರ ರೈಲು ಸೇವೆಗಳು ಗಮನಾರ್ಹವಾಗಿ ಕಡಿಮೆಯಾದಾಗ (ಕೋವಿಡ್ -19 ಸಾಂಕ್ರಾಮಿಕದ ಎರಡು ವರ್ಷಗಳ ಹೊರತುಪಡಿಸಿ) ಕಳೆದ ಐದು ವರ್ಷಗಳಲ್ಲಿ ರೈಲು ಅಪಘಾತಗಳಿಗೆ ಸಂಬಂಧಿಸಿದ ಸಾವುಗಳು ಸ್ವಲ್ಪಮಟ್ಟಿಗೆ ಏರಿದೆ.

ಅನುದಾನ ಕಡಿತದಿಂದ ಸುರಕ್ಷತೆಗೆ ಕುತ್ತು

2017 ಮತ್ತು 2021ರ ನಡುವಿನ ರೈಲು ಅಪಘಾತಗಳು ಹೆಚ್ಚಿನದಾಗಿ ಟ್ರ್ಯಾಕ್ ದೋಷಗಳಂತಹ ಯಾಂತ್ರಿಕ ವೈಫಲ್ಯಗಳಿಂದ ಸಂಭವಿಸಿವೆ. ಆದರೆ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2022-23ರ ಬಜೆಟ್‌ನಲ್ಲಿ ಟ್ರ್ಯಾಕ್ ನವೀಕರಣಗಳಿಗಾಗಿ ಬಜೆಟ್ ಹಂಚಿಕೆಯಲ್ಲಿ 3,222.4 ಕೋಟಿ ರೂ.ಗಳಷ್ಟು ಕಡಿತಗೊಳಿಸಲಾಗಿದೆ.

ಭಾರತದ ಮುಖ್ಯ ಲೆಕ್ಕ ಪರಿಶೋಧನಾ ಸಂಸ್ಥೆಯಾದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ತನ್ನ 2022ರ ವರದಿಯಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದೆ. ರೈಲುಗಳ ಹಳಿತಪ್ಪುವಿಕೆ ಕುರಿತು ಹೈಲೇಟ್ ಮಾಡಿದೆ. ಕೆಲವು ರೈಲ್ವೆ ವಲಯಗಳು 2017-18 ಮತ್ತು 2019-20 ರ ನಡುವೆ ಈ ಉದ್ದೇಶಕ್ಕಾಗಿ (ಟ್ರ್ಯಾಕ್ ನವೀಕರಣ) ನಿಗದಿಪಡಿಸಿದ ಕೆಲವು ನಿಧಿಯನ್ನೂ ಹಿಂತಿರುಗಿಸಿವೆ.

“ನಿಧಿ ಹಂಚಿಕೆಯಲ್ಲಿನ ಕುಸಿತ ಮತ್ತು ಮಂಜೂರು ಮಾಡಿದ ನಿಧಿಯು ಬಳಕೆಯಾಗದಿರುವುದು ಟ್ರ್ಯಾಕ್ ನವೀಕರಣ ಕಾರ್ಯಗಳು ಸಕಾಲಿಕವಾಗಿ ಪೂರ್ಣಗೊಳ್ಳದಿರುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ” ಎಂದು ಲೆಕ್ಕಪರಿಶೋಧಕರು ಎಚ್ಚರಿಸಿದ್ದಾರೆ.

2017-18ರಿಂದ 2020-21ರವರೆಗಿನ 1,129 ಹಳಿತಪ್ಪಿ ತಪ್ಪಿದ ಪ್ರಕರಣಗಳಲ್ಲಿ ಶೇ. 26%ರಷ್ಟು ಪ್ರಕರಣಗಳು ಟ್ರ್ಯಾಕ್ ನವೀಕರಣ ವಿಷಯಕ್ಕೆ ಸಂಬಂಧಿಸಿವೆ ಎಂದು ಲೆಕ್ಕಪರಿಶೋಧಕರು ಹೇಳಿದ್ದಾರೆ.

ಇದನ್ನೂ ಓದಿರಿ: ಇಸ್ಕಾನ್ ಮಂದಿರವನ್ನು ಮಸೀದಿ ಎಂದ ಶಕುಂತಲಾ; ತುಮಕೂರು ಬಿಜೆಪಿ ನಾಯಕಿ ಮೇಲೆ ಒಡಿಸ್ಸಾ ಪೊಲೀಸರ ಹದ್ದಿನ ಕಣ್ಣು

“ರೈಲ್ವೆ ಆಡಳಿತವು ರೈಲ್ವೆಯ ಸ್ಥಾಯಿ ಸಮಿತಿಯ [2016-’17] ಅವಲೋಕನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ. ಟ್ರ್ಯಾಕ್ ನವೀಕರಣಗಳಿಗೆ ಸಂಬಂಧಿಸಿದಂತೆ ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ಹೆಚ್ಚಿಸುವ ಅಗತ್ಯವಿದೆ” ಎಂದಿದ್ದಾರೆ ಲೆಕ್ಕಪರಿಶೋಧಕರು.

ಹಣಕಾಸಿನ ಕಡಿತದ ಜೊತೆಗೆ, ನೇಮಕಾತಿಯ ಕೊರತೆಯು ಸುರಕ್ಷತೆಯಲ್ಲಿನ ಲೋಪವನ್ನು ಎತ್ತಿ ಹಿಡಿಯುತ್ತದೆ. ಕೇಂದ್ರ ವಲಯದಲ್ಲಿ ಖಾಲಿ ಇರುವ 28,650 ಹುದ್ದೆಗಳಲ್ಲಿ ಅರ್ಧದಷ್ಟು ಹುದ್ದೆಗಳು ಸುರಕ್ಷತಾ ಕೆಲಸಗಳಿಗೆ ಸಂಬಂಧಿಸಿವೆ. ವಿವಿಧ ರೀತಿಯ ಇನ್ಸ್‌ಪೆಕ್ಟರ್‌ಗಳು, ಚಾಲಕರು, ರೈಲು ಪರೀಕ್ಷಕರು ಸೇರಿದಂತೆ ಮೊದಲಾದ ಸಿಬ್ಬಂದಿ ಸುರಕ್ಷತಾ ವರ್ಗಕ್ಕೆ ಸೇರುತ್ತಾರೆ.

ದರ ಏರಿಕೆ, ಪರಿಸ್ಥಿತಿ ಹದಗೆಡುವುದೇ?

ಇತ್ತೀಚಿನ ತಿಂಗಳುಗಳಲ್ಲಿ 130 ಹೆಚ್ಚು ರೈಲುಗಳಿಗೆ “ಸೂಪರ್‌ಫಾಸ್ಟ್” ಸ್ಥಾನಮಾನ ನೀಡಿ, ಅವುಗಳ ದರವನ್ನು ಹೆಚ್ಚಿಸಲಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಹೆಚ್ಚಿನ ದರಗಳ ಹೊರತಾಗಿಯೂ, ಸ್ಲೀಪರ್ ಕೋಚ್‌ಗಳು ಸಹ ಕಿಕ್ಕಿರಿದು ತುಂಬಿರುತ್ತವೆ, ಕಳಪೆ ನಿರ್ವಹಣೆ ಇರುತ್ತದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾ ಬಂದಿದ್ದಾರೆ.

ಶುಕ್ರವಾರ ಅಪಘಾತಕ್ಕೆ ಒಳಗಾದ ರೈಲುಗಳಲ್ಲಿ ಒಂದಾದ ಕೋರಮಂಡಲ್ ಎಕ್ಸ್‌ಪ್ರೆಸ್ ಬಗ್ಗೆಯೇ ಹಲವು ದೂರುಗಳು ಬಂದಿವೆ. ರೈಲು ವಿಳಂಬ ಮತ್ತೊಂದು ಸಮಸ್ಯೆಯಾಗಿದೆ.

ವರದಿ ಕೃಪೆ: ಸ್ಕ್ರಾಲ್.ಇನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...