Homeಮುಖಪುಟನಿತೀಶ್ ಕುಮಾರ್ - ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಬಲವೇ?

ನಿತೀಶ್ ಕುಮಾರ್ – ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಬಲವೇ?

- Advertisement -
- Advertisement -

2024ರ ಲೋಕಸಭಾ ಚುನಾವಣೆಯ ತಯಾರಿಯನ್ನು ವಿರೋಧ ಪಕ್ಷಗಳು ಎರಡು ವರ್ಷ ಮುಂಚೆಯೇ ಆರಂಭಿಸಿವೆ. ವಿಭಿನ್ನ ಸಂಯೋಜನೆಗಳಲ್ಲಿ ವಿಭಿನ್ನ ಆಯಾಮದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಕಾಂಗ್ರೆಸ್ ಪಕ್ಷ ’ಭಾರತ್ ಜೋಡೋ ಯಾತ್ರಾ’ ಹೆಸರಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಆರಂಭಿಸಿದೆ. 2500 ಕಿಲೋಮೀಟರ್ ಉದ್ದದ ಈ ಕಾಲ್ನಡಿಗೆ ಜಾಥಾದ ನಾಯಕತ್ವವನ್ನು ಖುದ್ದು ರಾಹುಲ್ ಗಾಂಧಿ ವಹಿಸಿಕೊಂಡಿದ್ದಾರೆ. ಈ ಪಾದಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡರೆ ಇದೊಂದು ಚರಿತ್ರಾರ್ಹ ಯಾತ್ರೆ ಎನಿಸಿಕೊಳ್ಳಲಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಈಗ ಆರು ದಿನಗಳನ್ನು ಪೂರೈಸಿರುವ ಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಹರಿದುಬರುತ್ತಿದ್ದು ಕಾಂಗ್ರೆಸ್ ಪಕ್ಷ ಕ್ರಿಯಾಶೀಲವಾದಂತೆ ಕಂಡುಬರುತ್ತಿದೆ. ಸಾಮಾಜಿಕ ಸಂಘಟನೆಗಳು, ಜನಪರ ಚಿಂತಕರು ಗಣನೀಯ ಸಂಖ್ಯೆಯಲ್ಲಿ ’ಭಾರತ್ ಜೋಡೋ ಯಾತ್ರೆ’ಯನ್ನು ಬೆಂಬಲಿಸಿ ಭಾಗವಹಿಸುತ್ತಿರುವುದು ಈ ಪಾದಯಾತ್ರೆಯಲ್ಲಿ ಎದ್ದುಕಾಣುತ್ತಿರುವ ವಿದ್ಯಮಾನ. ಈ ಯಾತ್ರೆಗೆ ಜನಸಾಮಾನ್ಯರು ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ಆರೆಸ್ಸೆಸ್-ಬಿಜೆಪಿ ನಾಯಕರ ಚಿಂತೆಗೆ ಕಾರಣವಾಗಿದೆ.

ರಾಹುಲ್ ಗಾಂಧಿ

ಮತ್ತೊಂದೆಡೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರಿತವಾಗಿ ವಿರೋಧ ಪಕ್ಷಗಳು ಒಂದುಗೂಡುವ ಕಸರತ್ತು ಆರಂಭವಾಗಿದೆ. ನಿತೀಶ್‌ರ ಜೆಡಿಯು ಪಕ್ಷ ಬಿಜೆಪಿಗೆ ಸರಿಯಾದ ಗುನ್ನ ಇಟ್ಟು ವಿರೋಧ ಪಕ್ಷಗಳ ಪಾಳಯಕ್ಕೆ ಲಾಗಹೊಡೆದು ಆರ್‌ಜೆಡಿ, ಕಾಂಗ್ರೆಸ್‌ಗಳ ಜೊತೆ ಸೇರಿ ಹೊಸ ಮೈತ್ರಿ ಸರ್ಕಾರ ರಚಿಸಿದ್ದು ಕೇವಲ ಬಿಹಾರ ರಾಜ್ಯವೊಂದಕ್ಕೆ ಸೀಮಿತವಾದ ರಾಜಕೀಯ ವಿದ್ಯಮಾನವಲ್ಲ, ಈ ಮೈತ್ರಿಯ ಹಿಂದೆ 2024ರ ರಾಷ್ಟ್ರೀಯ ರಾಜಕಾರಣದ ಲೆಕ್ಕಾಚಾರ ಬಹುಮುಖ್ಯವಾಗಿ ಕೆಲಸ ಮಾಡಿದೆ ಎಂಬ ಮಾತು ಆಗಲೇ ಕೇಳಿಬಂದಿತ್ತು. ಹೊಸ ಸರ್ಕಾರ ರಚಿಸಿದ ಒಂದೆರಡು ವಾರಗಳಲ್ಲೇ ನಿತೀಶ್ ಪಾಟ್ನಾದಿಂದ ಹೊರಬಿದ್ದು ದೇಶ ಸಂಚಾರ ಆರಂಭಿಸಿರುವುದು ಆ ಮಾತನ್ನು ರುಜುವಾತು ಮಾಡಿದೆ. 2024ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ವಿರೋಧ ಪಕ್ಷಗಳನ್ನು ಒಂದುಗೂಡಿಸುವ ಕೆಲಸದಲ್ಲಿ ನಿತೀಶ್ ಬಹಳ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಇಲ್ಲಿ ಮತ್ತೊಂದು ಅಂಶವನ್ನು ನಾವು ಗಮನಿಸಲೇಬೇಕು. ಗೋದಿ ಮೀಡಿಯಾದ ನಿರೂಪಕರು ವಿರೋಧ ಪಕ್ಷಗಳ ವಕ್ತಾರರ ಮುಂದೆ ಪದೇಪದೇ ಒಡ್ಡುತ್ತಿದ್ದ ಪ್ರಶ್ನೆ: ’ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು?’, ’ಪ್ರಧಾನಿ ಮೋದಿ ಅಲ್ಲವಾದರೆ ಯಾರಿದ್ದಾರೆ?’- ಎಂಬುದು. ಉತ್ತರ ಕಾಣದ ಒಗಟಿನಂಥಾ ಪ್ರಶ್ನೆಗೆ ಇದೀಗ ಬಹುಮಟ್ಟಿಗೆ ಉತ್ತರ ಸಿಕ್ಕಂತಾಗಿದೆ. ನಿತೀಶ್ ಕುಮಾರ್ ಅವರ ಹೆಸರನ್ನಾಗಲಿ ಅಥವಾ ಇನ್ನಾರದೇ ಹೆಸರನ್ನಾಗಲಿ ಪ್ರಧಾನಿ ಅಭ್ಯರ್ಥಿ ಎಂದು ವಿರೋಧ ಪಕ್ಷಗಳು ಘೋಷಿಸುವ ಪರಿಸ್ಥಿತಿಯಲ್ಲಿಲ್ಲ ಎಂಬುದು ನಿಜ. ಆದರೆ ವಿವಿಧ ವಿರೋಧ ಪಕ್ಷಗಳ ನಾಯಕರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ, ವಿವಿಧ ಪಕ್ಷಗಳನ್ನು ಒಂದುಕಡೆಗೆ ತರಬಲ್ಲ ಸಮನ್ವಯಕಾರ ಯಾರಾದರೂ ಇದ್ದರೆ ಅದು ನಿತೀಶ್ ಕುಮಾರ್ ಮಾತ್ರ ಎಂಬುದು ಎಲ್ಲ ರಾಜಕೀಯ ವಿಶ್ಲೇಷಕರ ಅಭಿಮತ.

ಶರದ್ ಪವಾರ್

ತನ್ನ ಅವಕಾಶವಾದಿ ಲೆಕ್ಕಾಚಾರಗಳಿಂದಾಗಿ ನಿತೀಶ್ ಕುಮಾರ್ ನಿನ್ನೆಮೊನ್ನೆಯವರೆಗೆ ಬಿಜೆಪಿಯ ಸಖ್ಯದಲ್ಲಿದ್ದರಾದರೂ ಕೋಮುವಾದಿ ರಾಜಕಾರಣವನ್ನು ಬೆಂಬಲಿಸಿದವರಲ್ಲ ಎಂಬುದು ಸಮಾಧಾನಕರ ಸಂಗತಿ. ಮೋದಿಯ ಎದುರಾಳಿ ಚಹರೆಯಾಗಿ ನಿತೀಶ್ ಕುಮಾರ್ ಅವರಿಗೆ ಬಹಳಷ್ಟು ಸಕಾರಾತ್ಮಕ ಅಂಶಗಳಿವೆ. ನಿತೀಶ್ ಇಂಜಿನಿಯರಿಂಗ್ ಪದವೀಧರ, ಎಂಟನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗದ್ದುಗೆಯೇರಿದವರು. ಜೊತೆಗೆ ಉತ್ತಮ ಆಡಳಿತಗಾರ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಬಿಹಾರದ ಗೂಂಡಾ ರಾಜ್?ಅನ್ನು ಕಟ್ಟುನಿಟ್ಟಾಗಿ ನಿಭಾಯಿಸಿದ ಇಮೇಜು ಪಡೆದುಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಿತೀಶ್ ಸಾಮಾಜಿಕವಾಗಿ ಅತಿ ಹಿಂದುಳಿದ ಕುರ್ಮಿ ಜಾತಿಯ ಹಿನ್ನೆಲೆಯಿಂದ ಬಂದವರು. ಮೋದಿ ಹಿಂದುಳಿದ ಜಾತಿಯ ನಾಯಕ ಎಂಬುದು ಪ್ರಚಾರದಲ್ಲಿದೆಯಾದರೂ ನಿತೀಶ್ ಮೂರ್ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿರುವ ಜಾತಿಸಮೂಹದ ಬೆಂಬಲ ಹೊಂದಿರುವ ನಾಯಕ. ಮೇಲಾಗಿ ನಿತೀಶ್ ಭಾರತದ ಹಿಂದಿ ಪಟ್ಟಿಯಿಂದ ಬಂದಿರುವ ಹಿಂದಿ ಭಾಷಿಕ ಎಂಬ ಅಂಶ ಬಿಜೆಪಿ ಪ್ರಾಬಲ್ಯ ಇರುವ ಹಿಂದಿ ಭಾಷಿಕ ರಾಜ್ಯಗಳಲ್ಲಿ ಪರಿಣಾಮ ಬೀರಬಲ್ಲುದು.

ರಾಜಕೀಯ ತಂತ್ರಗಾರಿಕೆಯಲ್ಲಿ ವಿಶೇಷ ನೈಪುಣ್ಯತೆ ಹೊಂದಿರುವ ಹಿರಿಯ ರಾಜಕಾರಣಿ ಶರದ್ ಪವಾರ್ ಈ ಎಲ್ಲ ಬೆಳವಣಿಗೆಗಳ ಹಿಂದೆ ಇದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಎಲ್ಲರೊಂದಿಗೆ ಹೊಂದಿಕೊಂಡು ಸಂಭಾಳಿಸಿಕೊಂಡು ಹೋಗಬಲ್ಲ ಮೃದು ಭಾಷಿ ನಿತೀಶ್ ಅವರನ್ನು ಮುಂದಿಟ್ಟು ಮೈತ್ರಿ ರಂಗ ರಚಿಸುವ ವ್ಯೂಹ ತಂತ್ರ ಹೆಣೆಯಲಾಗಿದೆ ಎಂದು ಬಹುತೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯಪಡುತ್ತಿದ್ದಾರೆ. ಬಿಹಾರದಲ್ಲಿ ದಿಢೀರನೆ ಅಧಿಕಾರ ಕಳೆದುಕೊಂಡಿದ್ದು ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ರಾಜಕೀಯ ಆಧಿಪತ್ಯಕ್ಕೆ ಸವಾಲೊಡ್ಡಬಹುದಾದ ಈ ಬೆಳವಣಿಗೆ ನಿಜಕ್ಕೂ ಬಿಜೆಪಿ-ಆರೆಸ್ಸೆಸ್ ನಾಯಕರ ನಿದ್ದೆಗೆಡಿಸಿದೆ.

ಸೀತಾರಾಂ ಯೆಚೂರಿ

ನಿತೀಶ್ ಕಳೆದ ವಾರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇದು ಮಾಮೂಲಿ ಪ್ರವಾಸವಾಗಿರದೆ ಅವರು ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿಯಾಗಿದ್ದಾರೆ. ’ಈ ಭೇಟಿಯ ಉದ್ದೇಶ ರಾಜಕೀಯವಲ್ಲದೆ ಬೇರೇನಲ್ಲ, 2024ರ ಲೋಕಸಭಾ ಚುನಾವಣೆಗೆ ಪೂರ್ವ ತಯಾರಿಯಾಗಿ ಎಲ್ಲ ವಿರೋಧ ಪಕ್ಷಗಳನ್ನು ಒಟ್ಟಿಗೆ ತರುವುದು ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸುಮಾರು 50 ನಿಮಿಷಗಳ ಮಾತುಕತೆ ನಡೆಸಿದ್ದಾರೆ; ಸೀತಾರಾಂ ಯೆಚೂರಿಯವರದ್ದು ಸಕಾರಾತ್ಮಕ ಭೇಟಿಯಾಗಿತ್ತು. ಇಂದಿನ ಸನ್ನಿವೇಶದಲ್ಲಿ ಎಲ್ಲ ವಿರೋಧ ಪಕ್ಷಗಳು ಒಂದಾಗುವುದು ಅನಿವಾರ್ಯವೆಂದೆನಿಸಿ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿಕೊಟ್ಟು ಮಾತುಕತೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತೆಲಂಗಾಣ ಕೆ.ಚಂದ್ರಶೇಖರ ರಾವ್‌ರನ್ನು ಭೇಟಿ ಮಾಡಲು ಹಲವು ರಾಜ್ಯಗಳಲ್ಲಿ ಸುತ್ತಾಡಿದ್ದಾರೆ. ಅಲ್ಲದೆ ಒಂದುಕಾಲದ ಜನತಾ ಪರಿವಾರದ ನಾಯಕರಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಹರಿಯಾಣದ ನಾಯಕ ಚೌಟಾಲ ಅಂಥವರನ್ನೂ ಭೇಟಿಯಾಗಿ ಚರ್ಚಿಸಿದ್ದಾರೆ. ಕೆಸಿಆರ್ ಈಗಾಗಲೇ ’ಬಿಜೆಪಿ ಮುಕ್ತ ಭಾರತ’ ಯಾತ್ರೆ ಕೈಗೊಳ್ಳುವುದಾಗಿ ಘೋಷಿಸಿ, ಬಿಜೆಪಿಯೊಂದಿಗೆ ಸಂಘರ್ಷಕ್ಕೆ ಇಳಿದಿರುವುದನ್ನು ಗಮನಿಸಬಹುದು.

ಎಲ್ಲಕ್ಕಿಂತ ಬಹಳ ಮಹತ್ವವಾದ ಅಂಶವೆಂದರೆ ಉತ್ತರಪ್ರದೇಶದ ಲಕ್ನೋದಲ್ಲಿ ಮುಲಾಯಂ ಸಿಂಗ್ ಮತ್ತು ಅಖಿಲೇಶ್ ಅವರೊಂದಿಗಿನ ಭೇಟಿ. ಲೋಕಸಭೆಗೆ ಬರೋಬ್ಬರಿ 80 ಸಂಸದರನ್ನು ಕಳಿಸಿಕೊಡುವ ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳು ಐಕ್ಯ ಹೋರಾಟ ನಡೆಸಿದರೆ ಬಿಜೆಪಿಗೆ ಬಹು ದೊಡ್ಡ ಹೊಡೆತ ನೀಡಬಲ್ಲುದು ಎಂಬ ಲೆಕ್ಕಾಚಾರವಿದೆ. ನಿತೀಶ್ ಭೇಟಿಯ ಸಂದರ್ಭದಲ್ಲಿ ಲಕ್ನೋದ ಸಮಾಜವಾದಿ ಪಕ್ಷದ ಕಚೇರಿಯ ಮುಂಭಾಗ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಹಾಕಲಾಗಿತ್ತು ಎಂಬುದೂ ವಿಶೇಷವಾದ ಸಂಗತಿಯೇ!

‘ಯುಪಿ + ಬಿಹಾರ್ = ಗಯೀ ಮೋದಿ ಸರಕಾರ್’ ಅಂದರೆ ಉತ್ತರಪ್ರದೇಶ ಮತ್ತು ಬಿಹಾರದ ಶಕ್ತಿಗಳು ಒಂದಾದರೆ ಮೋದಿ ಸರ್ಕಾರ ತೊಲಗುತ್ತೆ ಅನ್ನೋ ಅರ್ಥದ ಈ ಪೋಸ್ಟರ್ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು.

ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು? ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯ ಯಾರಿಗಿದೆ? ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಸೀತಾರಾಂ ಯೆಚೂರಿ ಕೊಟ್ಟ ಉತ್ತರವನ್ನು ಉಲ್ಲೇಖಿಸುವುದು ಸೂಕ್ತ. -ನಮ್ಮ ದೇಶದ ರಾಜಕೀಯ ಚರಿತ್ರೆಯನ್ನು ಒಮ್ಮೆ ತಿರುಗಿ ನೋಡಿದರೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಲವಾರು ಯಶಸ್ವಿ ಸರ್ಕಾರಗಳು ರಚನೆಯಾಗಿದ್ದು ಚುನಾವಣೋತ್ತರ ಮೈತ್ರಿಗಳಿಂದ. ದೇವೇಗೌಡ ನೇತೃತ್ವದ ಸರ್ಕಾರ, ವಾಜಪೇಯಿ ನೇತೃತ್ವದ ಸರ್ಕಾರ ಹಾಗೂ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರಗಳು ರಚನೆಯಾಗಿದ್ದು ಚುನಾವಣೆಗಳ ಫಲಿತಾಂಶ ಹೊರಬಿದ್ದ ನಂತರ ಏರ್ಪಟ್ಟ ಮೈತ್ರಿಗಳಿಂದ. ಈಗಿನ ಪರಿಸ್ಥಿತಿ ಕೂಡ ಹಾಗೆಯೇ ಇದೆ.

ಮಮತಾ ಬ್ಯಾನರ್ಜಿ

ಭಾರತದ ರಾಜಕಾರಣದಲ್ಲಿ ಬಿಜೆಪಿಯ ಪ್ರಾಬಲ್ಯ 2024ರಲ್ಲೂ ಮುಂದುವರಿಯುತ್ತದೆ ಎಂಬುದು ಸಾಮಾನ್ಯ ಗ್ರಹಿಕೆಯಾಗಿತ್ತು. ಆದರೆ ಬಿಹಾರದಲ್ಲಾದ ರಾಜಕೀಯ ಬದಲಾವಣೆ ಈ ಸಾಮಾನ್ಯ ಗ್ರಹಿಕೆಯನ್ನು ಬದಲಾಯಿಸಿದೆ. ಬಿಜೆಪಿಗೆ ಇಂದು ಬಿಹಾರದಲ್ಲಿ ಯಾವುದೇ ಮೈತ್ರಿ ಪಕ್ಷ ಜೊತೆಯಲ್ಲಿಲ್ಲ. 2024ರ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವುದು ಅನಿವಾರ್ಯವಾಗಿದೆ. ಈ ಸನ್ನಿವೇಶದಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆಲ್ಲುವುದೂ ಕಷ್ಟವಾಗಲಿದೆ. ಇದು ಇತರೆ ಹಲವು ರಾಜ್ಯಗಳ ವಿಷಯದಲ್ಲೂ ಹೀಗೇ ಇದೆ.

ಮೈತ್ರಿ ಪಕ್ಷಗಳ ಜೊತೆ ಬಿಜೆಪಿಯ ಅತಿಯಾದ ಆಧಿಪತ್ಯ ಧೋರಣೆಯಿಂದಾಗಿ, ಅದರಲ್ಲೂ ನಿರ್ದಿಷ್ಟವಾಗಿ ಮೋದಿ-ಶಾ ಜೋಡಿಯ ನಿರಂಕುಶ ರೀತಿಯ ನಿರ್ವಹಣೆಯಿಂದಾಗಿ ಎನ್‌ಡಿಎ ಎಂಬ ಮೈತ್ರಿಕೂಟ ಈಗ ವಾಸ್ತವದಲ್ಲಿ ಕೆಲಸ ಮಾಡುತ್ತಿಲ್ಲ. ಒಂದಾದ ನಂತರ ಒಂದರಂತೆ ವಿವಿಧ ಪಕ್ಷಗಳು ಬಿಜೆಪಿಯನ್ನು ತೊರೆದಿದ್ದರಿಂದಾಗಿ ಈಗ ನಾಮಕಾವಸ್ಥೆಯ ಮೈತ್ರಿಕೂಟವಾಗಿ ಉಳಿದಿದೆ.

ನಿತೀಶ್ ನೇತೃತ್ವದ ಬೆಳವಣಿಗೆ ಯಾವ ದಿಕ್ಕಿನಲ್ಲಿ ಪರ್ಯಾವಸಾನ ಆಗುತ್ತದೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟವಾದರೂ ರಾಜಕೀಯ ಬದಲಾವಣೆ ಬಯಸುವ ಹಲವರಲ್ಲಿ ಈ ವಿದ್ಯಮಾನ ಒಂದಷ್ಟು ಆಶಾಭಾವನೆಯನ್ನು ಹುಟ್ಟುಹಾಕಿದೆ. ಇಂಥ ಸನ್ನಿವೇಶದಲ್ಲಿ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟಕ್ಕೆ ಇಳಿದರೆ ದೇಶಕ್ಕೆ ಗಂಡಾಂತರವಾಗಿ ಪರಿಣಮಿಸಿರುವ ಆರೆಸ್ಸೆಸ್-ಬಿಜೆಪಿ ಪಕ್ಷಗಳನ್ನು ನಿಗ್ರಹಿಸಬಹುದು


ಇದನ್ನೂ ಓದಿ: ‘ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಪ್ರಯತ್ನ’: ಪ್ರಕರಣ ದಾಖಲಿಸಿದ ಪಂಜಾಬ್ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕದನ ವಿರಾಮಕ್ಕೆ ಕರೆ ನೀಡುವ UN ನಿರ್ಣಯಕ್ಕೆ ವಿಟೊ ಅಧಿಕಾರ ಬಳಸಿ ಯುಎಸ್‌ ತಡೆ

0
ಗಾಝಾ ಪಟ್ಟಿಯ ಮೇಲೆ ಇಸ್ರೇಲ್‌ ನಿರಂತರ ದಾಳಿ ಮಾಡುತ್ತಿದೆ. ಯುದ್ಧ ಘೋಷಣೆ ಬಳಿಕ ಪ್ಯಾಲೆಸ್ತೀನ್‌ನಲ್ಲಿ 17,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 4 ದಿನಗಳ ಕದನ ವಿರಾಮದ ಬಳಿಕ ಇಸ್ರೇಲ್‌ ಮತ್ತೆ ಯುದ್ಧವನ್ನು ಮುಂದುವರಿಸಿದೆ....