Homeಕರ್ನಾಟಕಭಾರತ್‌ ಜೋಡೋ ಯಾತ್ರೆ ಯಶಸ್ವಿಗೆ ಕೆಪಿಸಿಸಿಯಿಂದ ಸಮಿತಿಗಳ ರಚನೆ: ಡಿ.ಕೆ.ಶಿವಕುಮಾರ್‌

ಭಾರತ್‌ ಜೋಡೋ ಯಾತ್ರೆ ಯಶಸ್ವಿಗೆ ಕೆಪಿಸಿಸಿಯಿಂದ ಸಮಿತಿಗಳ ರಚನೆ: ಡಿ.ಕೆ.ಶಿವಕುಮಾರ್‌

- Advertisement -
- Advertisement -

ಕಾಂಗ್ರೆಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ (ಭಾರತ್ ಜೋಡೋ ಯಾತ್ರೆ) ಕರ್ನಾಟಕದಲ್ಲೂ ಸಾಗುವ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕೆಲ ಸಮಿತಿಗಳನ್ನು ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಕಾರ್ಯಕ್ರಮದ ಕುರಿತು ಮಾಹಿತಿಯನ್ನು ಮಾಧ್ಯಮಗಳಿಗೆ ಅವರು ನೀಡಿದ್ದಾರೆ. ಪ್ರಚಾರದ ಜವಾಬ್ದಾರಿಯನ್ನು ರಾಮಲಿಂಗಾರೆಡ್ಡಿ ಅವರಿಗೆ, ಬಳ್ಳಾರಿ ಬೃಹತ್ ಸಮಾವೇಶದ ಜವಾಬ್ದಾರಿಯನ್ನು ಪ್ರಚಾರ ಸಮಿತಿ ಅಧ್ಯಕ್ಷರ ನೇತೃತ್ವದ ಸಮಿತಿಗೆ ವಹಿಸಲಾಗಿದೆ. ಸಂಚಾರ ವ್ಯವಸ್ಥೆಯನ್ನು ರೇವಣ್ಣ ಅವರಿಗೆ, ಪ್ರತಿನಿತ್ಯದ ಸಭೆಗಳ ಜವಾಬ್ದಾರಿಯನ್ನು ಕೃಷ್ಣ ಭೈರೇಗೌಡ ಅವರ ನೇತೃತ್ವದ ಸಮಿತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಾಸ್ತವ್ಯ ವ್ಯವಸ್ಥೆಗೆ ದಿನೇಶ್ ಗುಂಡೂರಾವ್ ಅವರ ಸಮಿತಿ, ಮೈಸೂರು ಚಾಮರಾಜನಗರ ಭಾಗದ ಉಸ್ತುವಾರಿಯನ್ನು ಧ್ರುವನಾರಾಯಣ ಅವರ ಸಮಿತಿ, ಮೈಸೂರು ನಗರದ ಉಸ್ತುವಾರಿ ಮಹದೇವಪ್ಪ ಹಾಗೂ ಯತೀಂದ್ರ ಅವರಿಗೆ, ಮಂಡ್ಯ ಭಾಗದ ಉಸ್ತುವಾರಿ ಚಲುವರಾಯಸ್ವಾಮಿ, ತುಮಕೂರು ಭಾಗಕ್ಕೆ ಡಾ.ಜಿ.ಪರಮೇಶ್ವರ್, ಚಳ್ಳಕೆರೆ ಭಾಗದಲ್ಲಿ ಸಲೀಂ ಅಹ್ಮದ್ ಅವರು ಸ್ಥಳೀಯ ಶಾಸಕರ ಜತೆ ಜವಾಬ್ದಾರಿ ನಿಭಾಯಿಸುತ್ತಾರೆ. ರಾಯಚೂರು ಉಸ್ತುವಾರಿಯನ್ನು ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಮಹಿಳೆಯರ ಸಂಘಟನೆಗೆ ಐದಾರು ತಂಡಗಳನ್ನು ರಚಿಸಲಾಗಿದೆ. ಗಾಂಧಿ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಿ.ಎಲ್. ಶಂಕರ್ ಅವರ ಉಸ್ತುವಾರಿ ನೀಡಲಾಗಿದೆ. ಉಳಿದ ಜವಾಬ್ದಾರಿಗಳನ್ನು ಬೇರೆ ಶಾಸಕರುಗಳಿಗೆ ನೀಡಲಾಗುವುದು. ಪದಾಧಿಕಾರಿಗಳು ತಮ್ಮ ಕ್ಷೇತ್ರಗಳಲ್ಲಿ ಸಂಘಟನೆ ಮಾಡಲಿದ್ದಾರೆ ಎಂದಿದ್ದಾರೆ.

ಈ ಯಾತ್ರೆಗೆ ಪ್ರಿಯಾಂಕಾ ಗಾಂಧಿ ಅವರು ಆಗಮಿಸುತ್ತಾರಾ ಎಂಬ ಪ್ರಶ್ನೆಗೆ, “ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಪಾದಯಾತ್ರೆಗೆ ಆಗಮಿಸುತ್ತಾರೆ ಎಂಬ ಸುದ್ದಿ ಇದೆ. ಬಹುತೇಕ ರಾಷ್ಟ್ರೀಯ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ನಿಮ್ಮ ವೇಗಕ್ಕೆ ಬೇರೆಯವರು ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದೀರಿ ಎಂದು ಕೇಳಿದಾಗ, “ನಮ್ಮ ನಾಯಕರು ಸ್ಪಂದಿಸುತ್ತಿಲ್ಲ ಎಂದು ಹೇಳಿದವರು ಯಾರು? ಎಲ್ಲರೂ ಸ್ಪಂದಿಸುತ್ತಾ ಕೆಲಸ ಮಾಡುತ್ತಿದ್ದಾರೆ. ನನ್ನ ವೇಗ ಹೆಚ್ಚಾಗಿರಬಹುದು. ಕೆಲವರಿಗೆ ಅವರ ಕ್ಷೇತ್ರದಲ್ಲಿನ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲವನ್ನೂ ನನ್ನಿಂದಲೇ ಮಾಡಲು ಆಗುವುದಿಲ್ಲ. ನಮ್ಮ ನಾಯಕರು ಅವರವರ ಕೆಲಸ ಮಾಡುತ್ತಿದ್ದಾರೆ. ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿ ಕ್ಷೇತ್ರಕ್ಕೂ ಹೋಗಬೇಕು, ಪ್ರಧಾನ ಕಾರ್ಯದರ್ಶಿಗಳು ಪ್ರತಿ ಪಂಚಾಯ್ತಿಗೆ ಹೋಗುವ ಜವಾಬ್ದಾರಿ ನೀಡಿದ್ದೇವೆ. ಆ ಪ್ರಕಾರ ಅವರು ಸಂಘಟನೆ ಮಾಡಬೇಕು. ಸಂಘಟನೆ ಇಲ್ಲದೇ ಯಶಸ್ಸು ಸಿಗುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆಯ ಸಭೆಯ ನಿಮ್ಮ ಮಾತಿನಲ್ಲಿ, ಬೇರೆಯವರು ಸಹಕಾರ ನೀಡುತ್ತಿಲ್ಲ ಎಂಬ ನೋವಿತ್ತು ಎಂದು ಹೇಳಿದಾಗ, “ನನಗೆ ಅಸಹಕಾರದ ನೋವಿಲ್ಲ. ಸರ್ಕಾರ ಅಧಿವೇಶನ ಕರೆದಾಗ ಕೇವಲ ವಿರೋಧ ಪಕ್ಷದ ನಾಯಕರೇ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಅವರಿಗೆ ನಾನು ಸೇರಿದಂತೆ 69 ಶಾಸಕರ ಸಹಕಾರ ಇರಬೇಕು. ಇನ್ನು ಸರ್ಕಾರದ ಪರ ನೂರಕ್ಕೂ ಹೆಚ್ಚು ಶಾಸಕರಿದ್ದರೂ ಸಚಿವರುಗಳು ಅಧಿವೇಶನಕ್ಕೆ ಬರುತ್ತಿಲ್ಲ. ಅವರು ಸರ್ಕಾರದ ಸಾಧನೆ ಕಾರ್ಯಕ್ರಮ ಮಾಡಿದಾಗ ಎಷ್ಟು ಜನ ಸಚಿವರು ಹೋಗಿದ್ದರು? ಏನಾಯ್ತು? ಎಷ್ಟು ಜನ ಇದ್ದರು. ಯಡಿಯೂರಪ್ಪ ಅವರ ಭಾಷಣ ಮುಗಿದ ನಂತರ ಎಲ್ಲರೂ ಖಾಲಿ ಆದರು. ಇದರ ಬಗ್ಗೆ ಯಾಕೆ ಮಾತನಾಡುವುದಿಲ್ಲ? ಅದನ್ನು ಅಸಹಕಾರ ಚಳವಳಿ ಎನ್ನುತ್ತೀರಾ? ನಾನು ನಮ್ಮ ಪದಾಧಿಕಾರಿಗಳಿಗೆ ಅವರ ಜವಾಬ್ದಾರಿ ತಿಳಿಸಿದ್ದೇನೆ ಅಷ್ಟೇ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿರಿ: ಭಾರತ್ ಜೋಡೋ ಯಾತ್ರೆ: ಆರೆಸ್ಸೆಸ್‌‌ ಚಡ್ಡಿಗೆ ಬೆಂಕಿ ಹಚ್ಚಿದ ಕಾಂಗ್ರೆಸ್; ಬಿಜೆಪಿ ಟೀಕೆ

“ನಮ್ಮ ಶಾಸಕರುಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಟಾರ್ಗೆಟ್ ನೀಡಿದ್ದಾರೆ. ಶಾಸಕರು ಎಂದರೆ ಕೇವಲ ಮದುವೆ ಸಮಾರಂಭ, ಟೇಪ್ ಕಟ್ ಕಾರ್ಯಕ್ರಮಕ್ಕೆ ಹೋಗುವುದಲ್ಲ. ಮನೆ ಮನೆಗೆ ಹೋಗಿ ಬೂತ್ ಯಾತ್ರಾ ಮಾಡಬೇಕು ಎಂದು ಬಯಸುತ್ತೇನೆ. ಅವರು ಮೊದಲು ತಮ್ಮ ಹೊಲ ಚೆನ್ನಾಗಿ ಬೇಸಾಯ ಮಾಡಬೇಕು. ನಂತರ ಬಿತ್ತನೆ ಮಾಡಬೇಕು ಎಂದು ಹೇಳಿದ್ದೇನೆ” ಎಂದಿದ್ದಾರೆ.

ಇ.ಡಿ. ವಿಚಾರಣೆಗೆ ಹಾಜರಾಗುತ್ತೀರ ಎಂದು ಕೇಳಿದಾಗ, “ಮೈಸೂರು ಪ್ರವಾಸ ಮುಗಿಸಿದ ಬಳಿಕ ದೆಹಲಿಗೆ ಹೋಗಿ ಇಡಿ ತನಿಖೆ ಎದುರಿಸುತ್ತೇನೆ. ಅವರು ಯಾವ ಕಾರಣಕ್ಕೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ಅಲ್ಲಿಗೆ ಹೋಗಿ ವಿಚಾರ ತಿಳಿಯುತ್ತೇನೆ. ಯಡಿಯೂರಪ್ಪ ಅವರ ಸರ್ಕಾರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ನೀಡಿದ್ದು, ಅದನ್ನು ಪ್ರಶ್ನಿಸಿ ಹೈಕೋರ್ಟ್‌‌ನಲ್ಲಿ ಅರ್ಜಿ ಹಾಕಿದ್ದೇನೆ. ಮೊದಲ ಬಾರಿಗೆ ಇಡಿ ನೋಟಿಸ್ ಬಂದಿದೆ. ಅವರ ಬಳಿ ಎಲ್ಲಾ ಮಾಹಿತಿ ಇದೆ. ಆದರೂ ಹೊಸತಾಗಿ ಯಾಕೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗುತ್ತೇನೆ” ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...