Homeಅಂಕಣಗಳುಸಿದ್ದರಾಮಯ್ಯ ರಾವಣನಂತಲ್ಲಾ!

ಸಿದ್ದರಾಮಯ್ಯ ರಾವಣನಂತಲ್ಲಾ!

- Advertisement -
- Advertisement -

ಪಾಪಾಸು ಕಳ್ಳಿಯ ಟಿಸಿಲಿನಂತಿರುವ ಬಿಜೆಪಿಯ ಭಜರಂಗಿ ಪಡೆ ಹಿಜಾಬ್‌ಗೆ ಕೈಹಾಕಿ ಎಳೆದು ನಂತರ, ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಮರ ಅಂಗಡಿಗಳಿರಬಾರದೆಂದು ಬೊಬ್ಬೆಹೊಡೆದ ಕೂಡಲೇ ಕರ್ನಾಟಕದ ತುಂಬೆಲ್ಲಾ ಬೊಬ್ಬೆಯದನಿ ಕೇಳಿತಲ್ಲಾ. ಏಕೆಂದರೆ ಈ ಬಿಜೆಪಿ ಅಥವಾ ಇನ್ನಾವುದೇ ಅದರ ಅಂಗ ಸಂಸ್ಥೆಗಳಿಗೆಲ್ಲಾ ಸ್ವಿಚ್‌ಬೋರ್ಡಿರುವುದು ಒಂದೇ ಜಾಗದಲ್ಲಿ. ಅದನ್ನು ಒತ್ತಿದ ಕೂಡಲೇ ಇಡೀ ನಾಡಿನ ತುಂಬೆಲ್ಲಾ ಒಂದೇ ಗಳಿಗೆಯಲ್ಲಿ ಮತೀಯ ತಲೆಗಳಿಗೆ ವಿದ್ಯುತ್ ಹರಿದಂತಾಗಿ ಶಾರ್ಟ್ ಸರ್ಕ್ಯೂಟ್ ಆಗುವುದು ಹಿಂದಿನಿಂದಲೂ ನಡೆದು ಬಂದಿದೆಯಂತಲ್ಲಾ. ಆದರೇನು ಈಗ ಇಂತಹ ಸ್ವಿಚ್ ಲೈನನ್ನ ಮಾಧ್ಯಮದವರೂ ಎಳೆದುಕೊಂಡು ಇಡೀ ದಿನ ಅಳೆದು, ಸುರಿದು, ಕೇರಿ, ತೂರಿ, ಅಯ್ಯೋಪಾಪಾ ಎಂಬ ಉದ್ಘಾರಕ್ಕೆ ತುತ್ತಾಗಿವೆಯಲ್ಲಾ. ಸಿದ್ದು ಜಗದ್ಗುರುಗಳು ಕೇಸರಿ ಬಟ್ಟೆ ತಲೆ ಮೇಲೆ ಹಾಕುವುದಿಲ್ಲವೆ ಎಂಬ ಮಾತೇ ಕಾರಣವಾಗಿ, ಮಾಧ್ಯಮದವರು ಮನಸೊ ಇಚ್ಛೆ ವದರೀ ವದರೀ ಜಗದ್ಗುರುಗಳನ್ನ ಎಬ್ಬಿಸಿ ಸಿದ್ದು ಮೇಲೆ ದಾಳಿ ಮಾಡಿಸಿದವಲ್ಲಾ. ವಾಸ್ತವವಾಗಿ ರಾಮಚಂದ್ರಾಪುರ ಮಠ, ಉಡುಪಿ ಮಠದ ಯತಿಗಳಿದ್ದವರೆಲ್ಲಾ ಸುಮ್ಮನಿದ್ದು ಎಡೂರಪ್ಪನವರಿಂದ ಧನ ಸಹಾಯ ಪಡೆದ ಧರ್ಮಗುರುಗಳೇ ಸಿದ್ದು ಮೇಲೆ ಬಿದ್ದಿದ್ದು ನೋಡಿ ಈ ಬಿಜೆಪಿಗಳಿಗೆ ಪರಮಾನ್ನ ಉಂಡಷ್ಟು ಖುಷಿಯಾಯ್ತಂತಲ್ಲಾ. ಥೂತ್ತೇರಿ.

*******

ಇನ್ನ ಬಿಜೆಪಿ ಪಾರ್ಟಿಯ ಅಧ್ಯಕ್ಷ ನಳೀನ್ ಕಟೀಲು ಎಂಬ ಬೃಹಸ್ಪತಿಗಳು ಸಿದ್ದುವನ್ನು ರಾವಣನಿಗೆ ಹೋಲಿಸಿದ್ದಾರೆ. ದಕ್ಷಿಣ ಕನ್ನಡದ ಈತ ಯಕ್ಷಗಾನವನ್ನು ನೋಡಿಯಾದರೂ ರಾವಣನ ಬಗ್ಗೆ ತಿಳಿದುಕೊಳ್ಳಬೇಕಿತ್ತು. ವಾಸ್ತವವಾಗಿ ಸಿದ್ದುಗೆ ರಾವಣನನ್ನು ಹೋಲಿಸಿದ್ದೇ ಸರಿಯಿಲ್ಲವೆಂಬುದು ರಾವಣಾಭಿಮಾನಿಗಳ ಅಭಿಪ್ರಾಯ. ರಾವಣ ಅಪ್ಪಟ ಶಿವಭಕ್ತ, ಸಂಗೀತಗಾರ, ವೀಣೆ ಶೇಷಣ್ಣನಿಗಿಂತ ಒಳ್ಳೆ ವೈಣಿಕ, ಒಳ್ಳೆಯ ನೃತ್ಯಪಟು. ಅಜೇಯನೆನಿಸಿಕೊಂಡಿದ್ದ ಒಳ್ಳೆ ಆಡಳಿತಗಾರ ಕುಬೇರನನ್ನ ಸೋಲಿಸಿ ಪುಷ್ಪಕ ವಿಮಾನವನ್ನ ಪಡೆದವನು. ಭುಜಂಗ ಸ್ತ್ರೋತ್ರ ರಚಿಸಿದ ಕರ್ತೃ. ಜ್ವಲಿಸುವ ಅಗ್ನಿಯಂತಿದ್ದ
ರಾಜಲಕ್ಷಣದಿಂದ ಶೋಭಿತನಾಗಿದ್ದ ತನ್ನ ರಾಜ್ಯದಲ್ಲಿ ಮಹಿಳಾ ಮೀಸಲಾತಿ ತಂದಿದ್ದ ಪ್ರಥಮ ದೊರೆ. ಲಂಕೆಯನ್ನ ರಕ್ಷಿಸಲು ಲಂಕಿಣಿ ನಿಲ್ಲಿಸಿದ್ದ. ದಂಡಕಾರಣ್ಯ ರಕ್ಷಿಸಲು ತಾಟಕಿ ನೇಮಿಸಿದ್ದ. ಲಂಕೆಯ ಹೆಬ್ಬಾಗಿಲು ಕಾಯಲು ಸಿಂಹಿಣಿ ನೇಮಿಸಿದ್ದ. ಅಶೋಕ ವನ ನೋಡಿಕೊಳ್ಳಲು ತ್ರಿಜಟಿಯನ್ನು ಬಿಟ್ಟಿದ್ದ. ನಮ್ಮ ಪುರಾಣಕಾಲದ ರಾವಣನೆ ಮೊದಲು ಮಹಿಳಾ ಮೀಸಲಾತಿ ಜಾರಿಗೆ ತಂದವನು. ಇಂತಹ ವಿಪ್ರೋತ್ತಮನಿಗೆ ಕುರುಬ ಸಮುದಾಯದವರ ಪೈಕಿಯಾದ ಸಿದ್ದರಾಮಯ್ಯನವರನ್ನ ಹೋಲಿಸಬಾರದಿತ್ತೆಂದು ರಾಮಾಯಣ ಪ್ರಿಯ ವಿಪ್ರೊತ್ತಮರು ಕಟಿಲರ ಬಗ್ಗೆ ಕೆಂಡಾಮಂಡಲವಾಗಿ ದ್ದಾರಂತಲ್ಲಾ. ಥೂತ್ತೇರಿ.

ನಳಿನ್

*******

ಪುರಾಣಪ್ರಿಯರು ರಾಜಕೀಯ ವಿಶ್ಲೇಷಕರ ಪ್ರಕಾರ ಸಿದ್ದು ಪ್ರೊತ್ಸಾಹಿಸಿದ್ದು ಒಂದೆರಡು ಮಹಿಳೆಯರನ್ನ ಮಾತ್ರ. ಆ ಪೈಕಿ ಜಯಮಾಲ ಮಂಜುಳ ಮಾನಸೆ, ಕೆ.ಆರ್ ಪೇಟೆ ಮೀನಾಕ್ಷಿ ಮತ್ತಿನ್ನಿಬ್ಬರು ಮಹಿಳಾ ಮಣಿಗಳನ್ನು ಬಿಟ್ಟರೆ ರಾವಣನಂತೆ ಇಡೀ ರಾಜ್ಯ ನೋಡಿಕೊಳ್ಳಲು ಮಹಿಳೆಯರನ್ನ ನೇಮಿಸಲಿಲ್ಲ. ಈ ಹೋಲಿಕೆ ತಪ್ಪು. ಇನ್ನ ಸಿದ್ದು ರಂಗದ ಕುಣಿತಕ್ಕೆ ಮೀಸಲೇ ಹೊರತು ನೃತ್ಯಪಟುವಲ್ಲ. ಇನ್ನು ವೀಣೆಗೂ ತಂಬೂರಿ ಸರೋಟ್‌ಗೂ ವ್ಯತ್ಯಾಸ ಸಿದ್ದುರವರಿಗೆ ಗೊತ್ತೋ ಇಲ್ಲವೋ ಅವರೇ ಬಲ್ಲರು. ಒಳ್ಳೆ ಆಡಳಿತಗಾರ ಎಂಬುದನ್ನ ಒಪ್ಪಿಕೊಳ್ಳಬೇಕು. ಇನ್ನು ಅವರ ಬಜೆಟ್ ಮಂಡನೆ ಭುಜಂಗ ಸ್ತ್ರೋತ್ರಕ್ಕೆ ಸಮ ಅನ್ನಬಹುದು. ಸದನದಲ್ಲಿ ಅಗ್ನಿಯಂತೆ ಜ್ವಲಿಸಿದರೂ ಜೊತೆಯಲ್ಲಿ ಕುಳಿತು ಹೊಟ್ಟೆತುಂಬಾ ಭೋಜನ ಬಾರಿಸುವ ವ್ಯಕ್ತಿ. ರಾವಣನಂತೆ ರಾಜ ಲಕ್ಷಣವೇನೂ ಸಿದ್ದು ಮುಖದಲ್ಲಿಲ್ಲ. ಇನ್ನ ಕುಬೇರನನ್ನು ಸೋಲಿಸಿ ಪುಷ್ಪಕ ವಿಮಾನ ಪಡೆದ ರಾವಣನಿಗೆ ಸಿದ್ದು ಹೋಲಿಸುವುದಾದರೆ, ದೇವು ಫ್ಯಾಮಿಲಿಯನ್ನ ಮೂಲೆಗೆ ಸರಿಸಿ ವಿರೋಧಪಕ್ಷದ ಸಾರಥ್ಯ ಪಡೆದದ್ದು. ಸೀತಾಪಹರಣದಂತ ಕೃತ್ಯ ಎಸಗಿದವರಲ್ಲ. ಆದ್ದರಿಂದ ಕಟೀಲರ ವ್ಯಾಖ್ಯಾನಕ್ಕೆ ಇತ್ತು ಸಿದ್ದು ಅಭಿಮಾನಿಗಳು ಮತ್ತು ಅತ್ತ ವಿಪ್ರೋತ್ತಮರು ಶ್ಯಾನೆ ಸಿಟ್ಟಾಗಿದ್ದಾರಂತಲ್ಲಾ.

********

ಕಟೀಲರ ಇನ್ನೊಂದು ಮಾತು, ರಾಮ ಜನರನ್ನು ನಂಬುತ್ತಿದ್ದ ಎಂಬುದು. ಇದರ ಅನಾಹುತವೆಂದರೆ ಅಗಸನ ಮಾತನ್ನು ನಂಬಿ ತುಂಬು ಗರ್ಭಿಣಿ ಸೀತೆಯನ್ನು ಕಾಡಿನ ಮಧ್ಯೆ ಬಿಟ್ಟು ಬಂದಿದ್ದು, ಮೊದಲು ಹನ್ನೆರಡು ವರ್ಷ ವನವಾಸ, ಆ ನಂತರ ಮತ್ತೆ ವನವಾಸ ಅನುಭವಿಸಿದ ಸೀತೆ ಕಡೆಗೆ ಸಾಕಪ್ಪ ಈ ರಾಮನ ಸಹವಾಸ ಎಂದು ತವರು ಮನೆಗೆ ಹೋಗಿ ತರಕಾರಿ ಬೆಳೆದುಕೊಂಡು ಕಾಲ ಹಾಕಿದಳಲ್ಲಾ. ಈ ಸಾಲುಗಳ ಬಗ್ಗೆ ಅನುಮಾನವಿದ್ದವರು ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಓದುವುದು ಒಳ್ಳೆಯದು. ಅಂದ ಹಾಗೆ ಅವರಣವನ್ನು ತಲೆಮೇಲೆ ಹೊತ್ತುಕೊಂಡು ಮಾರಿದೆ ಸಂಘಪರಿವಾರ ಸಮೂಹ ಉತ್ತರಕಾಂಡದ ಬಗ್ಗೆ ಉಸಿರೆತ್ತಿಲ್ಲವಂತಲ್ಲಾ. ಇದೆಲ್ಲಕಿಂತ ಮಜಾ ಅಂದರೆ ಬಷೀರಣ್ಣನವರು ರಾಮಾಯಣವನ್ನು ವ್ಯಾಖ್ಯಾನಿಸಿರುವ ಪರಿ ಭೈರಪ್ಪನವರಿಗೆ ಹತ್ತಿರವಾಗಿದೆಯಲ್ಲಾ. “ನೋಡಿ ಸಾರ್ ಒಬ್ಬ ಮನುಷ್ಯ ತಂಗಿಗಾಗಿ ತನ್ನ ಪ್ರಾಣವನ್ನೇ ಕೊಟ್ಟು ರಾಜ್ಯನೂ ಕಳಕೊಂಡ. ತಂದೆ ಮಾಡಿದ ಕೆಲ್ಸಕ್ಕೆ ರಾಜ್ಯ ಬಿಟ್ಟು ಬಂದ ರಾಮ ದೊಡ್ಡವುನೊ, ರಾವಣ ದೊಡ್ಡವುನೊ, ನೀವೇ ಹೇಳಿ ಸಾರ್. ಪಾಪ ಶೂರ್ಪನಕಿ ಸ್ಟೋರಿ ಈ ಕಾಲದಲ್ಲಿ ಅಸಿಡ್ ದಾಳಿಗೆ ತುತ್ತಾಗಿ ಬುರ್ಖಾ ಹಾಯ್ಕಂಡು ಓಡಾಡ್ತರಲ್ಲ, ಅಂತ ಹೆಂಗಸರ ಕತೆ ಆಗಿರಬೌದು, ಯಾವುದಾದ್ರು ಹುಡುಗಿ ಲವ್ ಮಾಡು ಅಂದ್ರೆ ಆಗಲ್ಲ ಸ್ವಲ್ಪ ಪ್ರಾಬ್ಲಂ ಅನ್ನಬೇಕು ಸಾರ್! ಮೂಗುಕುಯ್ದಾಕ್‌ಬುಡದ” ಎಂದು ಚಿಂತಾಕ್ರಾಂತರಾದರಲ್ಲಾ. ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಇವರೆಲ್ಲಾ ಸಂತೆಗೆ ಬಂದ ಹಗಲುಗಳ್ಳರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...