ದೇಶದಲ್ಲಿ ಮಾನವೀಯತೆಯೇ ದೊಡ್ಡ ಅಪಾಯದಲ್ಲಿದೆ: ಕನ್ಹಯ್ಯ ಕುಮಾರ್ ಸಂದರ್ಶನ

ಗೌರಿ ಲಂಕೇಶರು ಹತ್ಯೆಯಾದ ಸೆಪ್ಟೆಂಬರ್ 5ರಂದು ನಡೆದ ‘ಗೌರಿ ನೆನಪು’ ಕಾರ್ಯಕ್ರಮಕ್ಕೆ ಬಂದಿದ್ದ ಕನ್ಹಯ್ಯ ಕುಮಾರ್ ಅವರು ನಾನುಗೌರಿ.ಕಾಂಗೆ ನೀಡಿದ ಸಂದರ್ಶನ ಇಲ್ಲಿದೆ. ವಿದ್ಯಾರ್ಥಿ ಯುವಜನ ಚಳವಳಿಯಲ್ಲಿ ಸಕ್ರಿಯವಾಗಿರುವ ಸರೋವರ್ ಬೆಂಕಿಕೆರೆ ನಮಗಾಗಿ ಈ ಸಂದರ್ಶನವನ್ನು ಮಾಡಿಕೊಟ್ಟಿದ್ದಾರೆ.

ಪ್ರಶ್ನೆ: ಲೋಕಸಭಾ ಚುನಾವಣೆಯಲ್ಲಿ ನೀವು ಸ್ಪರ್ಧೆ ಮಾಡಿದ್ರಿ ಹಾಗೂ ಭಾರಿ ಪ್ರಚಾರದ ನಂತರವೂ ನಿಮಗೆ ಸೋಲಾಯಿತು. ಒಟ್ಟಾರೆ ಚುನಾವಣೆ ಅನುಭವ ಹೇಗಿತ್ತು?
ಕನ್ಹಯ್ಯ: ಚುನಾವಣೆಯಲ್ಲಿ ಒಬ್ಬರು ಗೆಲ್ಲಬೇಕು ಮತ್ತು ಇತರರು ಸೋಲಬೇಕು. ಈ ಸಂದರ್ಭವು ನಾವು ಸೋಲುವ ಕಾಲವಾಗಿದೆ. ನಾವು ಜವಾಬ್ದಾರಿಯಿಂದ ಇದನ್ನು ಸ್ವೀಕರಿಸಿ ನೋಡುವುದಾದರೆ ನಾವು ಮಾಡಬೇಕಿರುವ ಕೆಲಸವನ್ನು ಸರಿಯಾಗಿ ಮಾಡದೇ ಇದ್ದಾಗ ಸ್ವಾಭಾವಿಕವಾಗಿ ನಮ್ಮ ಎದುರಾಳಿಗಳಿಗೆ ಗೆಲ್ಲುವ ಅವಕಾಶ ಹೆಚ್ಚಾಗಿಯೇ ಇರುತ್ತದೆ. ಹಾಗಾಗಿಯೇ ಇಂದು ಭಾಜಪ ಹಾಗೂ ಆರ್‍ಎಸ್‍ಎಸ್ ಅಧಿಕಾರದಲ್ಲಿದೆ. ಇದು ಒಂದು ಚಕ್ರ ಇದ್ದಂತೆ. ಈಗ ಈ ಚಕ್ರದಲ್ಲಿ ಅವರು ಮೇಲಿದ್ದಾರೆ ಮತ್ತು ಈ ಚಕ್ರದಲ್ಲಿ ಇವರ ಸುತ್ತು ಮುಗಿದಿದೆ. ನೋಡಿ ಇದು ಬರೀ ದೇಶದ ವಿದ್ಯಮಾನವಲ್ಲ. ಬಲಪಂಥೀಯರು ಜಾಗತಿಕ ಮಟ್ಟದಲ್ಲಿಯೇ ಅಧಿಕಾರಕ್ಕೆ ಬರುತ್ತಿದ್ದಾರೆ. ಇವರು ಪ್ರತಿಪಾದಿಸುವ ರಾಷ್ಟ್ರೀಯವಾದವು ಹೇಗೆ ಬಂದದ್ದು ಎಂಬುದನ್ನು ನೋಡಿ. ಇದು ಕೈಗಾರಿಕಾ ಕ್ರಾಂತಿಯ ಜೊತೆ ಹುಟ್ಟಿಕೊಂಡಿದ್ದಾಗಿದೆ. ಕೈಗಾರಿಕಾ ಕ್ರಾಂತಿಯ ನಂತರ ವಸಾಹತುಗಳು ಹುಟ್ಟಿಕೊಂಡವು. ಭಾರತವು ಇಂಗ್ಲೆಂಡ್‍ನ ವಸಾಹತು ಆಗಿತ್ತು. ಬ್ರಿಟಿಷರ ವಿರುದ್ಧದ ಭಾರತವು ಸ್ವಾತಂತ್ರ್ಯ ಪಡೆದುಕೊಂಡಾಗ ಪ್ರಗತಿಪರ, ಪ್ರಜಾತಂತ್ರವಾದಿ, ಎಡಚಳವಳಿ ಹಾಗೂ ಸಮಾಜವಾದಿಗಳು ಅಧಿಕಾರವನ್ನು ಹಿಡಿದರು. ಜಾತ್ಯತೀತವನ್ನು ನಾವು ಸಂವಿಧಾನದಲ್ಲಿ ತಂದುಕೊಂಡೆವಾದರು ಜನರಿಗೆ ಆ ಕುರಿತು ಶಿಕ್ಷಣವನ್ನು ನೀಡಲಿಲ್ಲ. ನಮ್ಮ ಸಂಸ್ಥೆಗಳನ್ನು ಜಾತ್ಯತೀತವನ್ನಾಗಿ ಮಾಡಲಿಲ್ಲ. ಕ್ರಮೇಣ ಕಾಂಗ್ರೆಸ್ ವಿರೋಧಿ ಹೋರಾಟಗಳು ಪ್ರಾರಂಭವಾದಾಗ ಬಲಪಂಥೀಯರು ವೇಷ ಮರೆಸಿಕೊಂಡು ಬಂದು ಸೇರಿಕೊಂಡರು ಮತ್ತು ಕಾಂಗ್ರೆಸ್ ವಿರೋಧಿ ಹೋರಾಟದ ಸಂಪೂರ್ಣ ಲಾಭವನ್ನು ಪಡೆದುಕೊಂಡು ತಾವೀಗ ಅಧಿಕಾರಕ್ಕೆ ಬಂದು ಕೂತಿದ್ದಾರೆ.

ಎಡ ಪ್ರಜಾತಂತ್ರವಾದಿಗಳು ಸಂಸ್ಥೆಗಳನ್ನು ಜಾತ್ಯತೀತವನ್ನಾಗಿ ಮಾಡಲು ಸೋತಿದ್ದರಿಂದ ಇಂದು ನಾವು ಸೋಲುವ ದಡದಲ್ಲಿ ಬಂದು ನಿಂತಿದ್ದೇವೆ. ನಾವು ಸಂಖ್ಯಾ ಬಲದಿಂದ ಗೆದ್ದೇಬಿಡುತ್ತೇವೆ ಅಂದುಕೊಳ್ಳಿ. ಆಗಲೂ ಅದು ನಮ್ಮ ಗೆಲುವು ಆಗಿರುವುದಿಲ್ಲ. ಯಾಕೆಂದರೆ ಇಡೀ ದೇಶದಲ್ಲಿ ನಾವು ಗೆದ್ದಿರುವುದಿಲ್ಲ ಹಾಗೂ ಚುನಾವಣೆಯಲ್ಲಿ ಒಂದೆರಡು ಸೀಟು ಗೆಲ್ಲುತ್ತೇವೆಯೇ ಹೊರತು ನಿಜವಾದ ಸಂಘರ್ಷವನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. 2014ರ ನಂತರದಲ್ಲಿ ಭಾರಿ ಸೋಲಿನ ನಂತರದಲ್ಲಾದರೂ ವಿರೋಧ ಪಕ್ಷದಲ್ಲಿರುವ ಎಡಪಕ್ಷಗಳು ಇದನ್ನು ಅರ್ಥಮಾಡಿಕೊಳ್ಳದಿರುವುದು ದುರಂತ. ಇನ್ನು ಚುನಾವಣೆಯ ಅನುಭವದ ಕುರಿತು ಹೇಳಬೇಕೆಂದರೆ, ಫೀಲ್ಡ್ ನಲ್ಲಿ ಜನರು ತಮ್ಮ ನಿಜವಾದ ಸಮಸ್ಯೆಗಳ ಪ್ರಶ್ನೆಗಳಿಗೆ ಸ್ಪಂದಿಸುತ್ತಿದ್ದಾರೆ ಅನ್ನುವುದು ಅರ್ಥವಾಯಿತು. ಚುನಾವಣೆಯ ವಿಷಯ ಹಿಂದೂಮುಸ್ಲಿಂ ಆಗಿದ್ದರೂ ಸಹ ಜನರಿಗೆ ಒಳ್ಳೆ ಆರೋಗ್ಯ ನೀಡುವ ಆಸ್ಪತ್ರೆಗಳು ಬೇಕು, ಶಾಲೆಗಳು ಬೇಕು ಎನ್ನುವ ಪ್ರಶ್ನೆ ಇದ್ದೇ ಇತ್ತು.

ನೋಡಿ ಬಿಜೆಪಿ ಅವರ ಸ್ಥಿತಿ ಏನಿತ್ತು? ಅವರ ಮೊದಲ ಚುನಾವಣೆಯಲ್ಲಿ ಅವರು ಗೆದ್ದಿದ್ದು ಕೇವಲ 2 ಸೀಟುಗಳನ್ನು. ಆದರೆ ಈಗ ಅವರು 300ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದುಕೊಂಡಿದ್ದಾರೆ. ಇದರಿಂದ ನಿರಾಶರಾಗಬಾರದು, ನಿರಾಸೆ ಆಗುತ್ತಿರುವುದು ಯಾಕೆ? ಯಾಕೆಂದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿ ಹೋದರೆ ಆಗುವುದಿಲ್ಲ. ವರ್ಷದ 12 ತಿಂಗಳೂ ಸಹ ಜನರ ಬಳಿ ಹೋಗಬೇಕಿರುತ್ತದೆ. ಮತ್ತೊಂದು ಅನುಭವ ಹೇಳಬೇಕೆಂದರೆ ಚುನಾವಣೆಯಲ್ಲಿ ಸಂಪನ್ಮೂಲಗಳ ಕುರಿತು ಬಹಳ ಪ್ರಶ್ನೆಗಳು ಬರುತ್ತದೆ. ಹಣ ಹೇಗೆ ಬಂತು, ಎಲ್ಲಿಂದ ಬಂತು ಎನ್ನುವ ಪ್ರಶ್ನೆಗಳು. ಆದರೆ ನನಗೆ ಅಂತಹ ತೊಂದರೆಗಳು ಆಗಲಿಲ್ಲ. ಯಾಕೆಂದರೆ ನಾನು ಜನರ ಹಣದಿಂದಲೇ ಚುನಾವಣೆ ಸ್ಫರ್ಧೆ ಮಾಡಿದ್ದೆ ಮತ್ತು ಚುನಾವಣೆ ನನ್ನ ಕೇರಿಯರ್ ಆಗಿರಲಿಲ್ಲ. ಜನಾಂದೋಲನ ನನ್ನ ಕೇರಿಯರ್ ಆಗಿತ್ತು. ಆದರೆ ಒಂದು ಮಾತು ನಿಜ. ನಾನು ಚುನಾವಣೆಯಲ್ಲಿ ದೊಡ್ಡ ಪೈಪೋಟಿ ನೀಡಲಾಗಲಿಲ್ಲ. ಯಾಕೆಂದರೆ ನಾವು ಮಾಧ್ಯಮವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಚುನಾವಣಾಧಿಕಾರಿಗಳನ್ನು, ಪತ್ರಕರ್ತರನ್ನು ಖರೀದಿ ಮಾಡಲು ಸಾಧ್ಯವಾಗಲಿಲ್ಲ ಮತ್ತು ಅದನ್ನು ನಾವು ಮಾಡುವುದಿಲ್ಲ. ನನ್ನದು ಜನಾಂದೋಲನವೇ ದಾರಿ ಆಗಿರುವುದರಿಂದ ಸಂಘರ್ಷ ಜಾರಿಯಲ್ಲಿದೆ. ಚುನಾವಣೆಯಲ್ಲಿ ಗೆಲ್ಲುವುದೇ ಮುಖ್ಯವಾಗಿದ್ದರೆ ಬಿಜೆಪಿ ಸೇರಿಬಿಡಬಹುದಾಗಿತ್ತು. ಉದಾಹರಣೆಗೆ ಕರ್ನಾಟಕದ ರಾಜಕಾರಣಿಗಳನ್ನು ನೋಡಿ. ಇಲ್ಲಿಯತನಕ ಚುನಾವಣೆವರೆಗೂ ಏನು ಅಂತ ಯೋಚನೆ ಮಾಡುತ್ತಿದ್ದರು ಇದೀಗ ಚುನಾವಣೆ ನಂತರವೇನು ಎನ್ನುವುದು ಯೋಚಿಸುತ್ತಿದ್ದೇವೆ. ಇದು ಬಹಳ ಮುಖ್ಯವಾದದ್ದು.

ಪ್ರಶ್ನೆ: ದೇಶದಲ್ಲಿ ಪ್ರಗತಿಪರವಾಗಿ ಯೋಚಿಸುವ ಹಲವಾರು ಸಂಘಟನೆಗಳಿವೆ. ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡೇ ಒಂದಾಗಿ ಮಾಡಬಹುದಾದ ಕೆಲಸಗಳು ಯಾವುದಿದೆ? ಎಲ್ಲರೂ ಒಟ್ಟುಗೂಡಬಹುದಾದ ಕೇಂದ್ರಬಿಂದು ಯಾವುದು?
ಕನ್ಹಯ್ಯ: ನೋಡಿ ದೇಶದಲ್ಲಿ ಜಾತಿ, ಧರ್ಮ, ರಾಷ್ಟ್ರೀಯತೆ, ಭಾಷೆ, ಲಿಂಗ ಇತ್ಯಾದಿ ಹಲವಾರು ವಿಷಯಗಳ ಕುರಿತು ಸಂಘರ್ಷಗಳಿವೆ. ನಾಳೆದಿನ ಪ್ರಕೃತಿಯಲ್ಲಿ ಏರುಪೇರಾಗಿ ಮನುಷ್ಯರ ಉಳಿವಿಗೇ ತೊಂದರೆಯಾಗುತ್ತದೆ ಎನ್ನುವ ಸಂದರ್ಭ ಬಂದರೆ ಈ ಎಲ್ಲಾ ಸಂಘರ್ಷಗಳು, ಭಿನ್ನಾಭಿಪ್ರಾಯಗಳು ಯಾವೂ ಉಳಿಯುವುದಿಲ್ಲ. ನಾವು ಭಿನ್ನಾಭಿಪ್ರಾಯಗಳನ್ನು ಇಲ್ಲವಾಗಿಸುವ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ದೇಶದಲ್ಲಿ ಮಾನವೀಯತೆಯೇ ದೊಡ್ಡ ಅಪಾಯದಲ್ಲಿದೆ. ಈ ಎಡ, ಬಲ, ಮಧ್ಯ ಪಂಥ ಇತ್ಯಾದಿಗಳೆಲ್ಲಾ ರಷ್ಯ ಕ್ರಾಂತಿಯ ನಂತರದಲ್ಲಿ ಹುಟ್ಟಿಕೊಂಡಂತಹ ವ್ಯಾಖ್ಯಾನಗಳು. ಇಂದು ಅಧಿಕಾರದಲ್ಲಿರುವ ಶಕ್ತಿಗಳು ಈ ಪಂಥ, ವ್ಯಾಖ್ಯಾನಗಳ ಮೇಲೆ ದಾಳಿ ಮಾಡುತ್ತಿಲ್ಲ. ಅವರು ಫ್ರೆಂಚ್ ಕ್ರಾಂತಿಯ ಫಲವಾಗಿ ಬಂದ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಹಾಗೂ ಭ್ರಾತೃತ್ವದ ಆಶಯದ ಮೇಲೆ ದಾಳಿಯನ್ನು ಮಾಡುತ್ತಿದ್ದಾರೆ. ನಾವಿಂದು ಎಡ, ಕ್ರಾಂತಿಕಾರಿ ಎಡ, ಪ್ರಗತಿಪರರು, ಪ್ರಜಾತಂತ್ರವಾದಿಗಳು, ಹೀಗೆ ಬೇರೆ ಬೇರೆ ಸಿದ್ಧಾಂತವಾದಿಗಳು ಭಿನ್ನಾಭಿಪ್ರಾಯಗಳ ಜೊತೆ ನಮ್ಮಲ್ಲೇ ಜಗಳವಾಡುತ್ತಿರುವ ಸಂದರ್ಭದಲ್ಲಿ ನಮ್ಮೆಲ್ಲರ ನಿಜವಾದ ಶತ್ರು ಅಧಿಕಾರ ಹಿಡಿಯುತ್ತಿದ್ದಾರೆ ಮತ್ತು ಅದೊಂದು ಸರ್ವಾಧಿಕಾರವಾಗಿ ಬೆಳೆಯುತ್ತಿದೆ. ಈ ಸಮಯದಲ್ಲಿ ಗೆರಿಲ್ಲ ಯುದ್ಧದಂತಹ ಹೋರಾಟಗಳು ನಡೆಯುವುದಿಲ್ಲ. ಈಗೇನಿದ್ದರೂ ಇಂಟರ್ನೆಟ್ ಗೆರಿಲ್ಲ ಯುದ್ಧಗಳು ನಡೆಯುತ್ತವೆ. ಅಲ್ಲಿ ಹೆಚ್ಚಾಗಿ ನಾವು ಇಲ್ಲ. ಹಾಗಾಗಿ ಅವರು ಗೆಲ್ಲುತ್ತಿದ್ದಾರೆ.

ಎಡ, ಕ್ರಾಂತಿಕಾರಿ ಎಡ, ಪ್ರಗತಿಪರರು, ಪ್ರಜಾತಂತ್ರವಾದಿಗಳು ಇತ್ಯಾದಿ ಯಾವುದೇ ಭಿನ್ನಾಭಿಪ್ರಾಯವಿದ್ದರು ಮಾನವೀಯ ಮೌಲ್ಯಗಳ ಮೇಲೆ ದಾಳಿಗಳು ನಡೆಸುವ ಶಕ್ತಿಗಳೆ ಈ ಎಲ್ಲರನ್ನು ಒಂದು ಮಾಡಿಬಿಡುತ್ತಾರೆ. ಮತ್ತು ನನ್ನ ಮಾತಿನ ಮೇಲೆ ನಂಬಿಕೆ ಇಡಿ ಇದು ಹೀಗೆಯೇ ಒಂದಾಗುತ್ತದೆ ಮತ್ತು ಆಗಿಯೇ ಆಗುತ್ತದೆ. ಇನ್ನೊಂದು ಮಾತು ನಿಮಗೆ ನಾನು ಹೇಳಬೇಕು. ಈ ಸಂದರ್ಭದಲ್ಲಿ ಈ ಮಾತನ್ನು ಬಹಳ ಜನರು ಒಪ್ಪುವುದಿಲ್ಲ ಅನಿಸುತ್ತೆ. “ಮುಂದಿನ ಕೆಲವು ದಿನಗಳಲ್ಲಿ ಯಾವ ಪಾರ್ಟಿಗಳು ಉಳಿಯುವುದಿಲ್ಲ, ಬಿಜೆಪಿಯೂ ಸಹ ಉಳಿಯುವುದಿಲ್ಲ”. ಯಾಕೆಂದರೆ ಇವೆಲ್ಲವೂ ಕೈಗಾರಿಕೀರಣದ ನಂತರದಲ್ಲಿ ಹುಟ್ಟಿಕೊಂಡ ಪಕ್ಷವಾಗಿದೆ. ರಷ್ಯ ಕ್ರಾಂತಿಯ ನಂತರದಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಶಕ್ತಿಗಳು ಸಹ ಪ್ರಜಾಪ್ರಭುತ್ವದ ಮುಖವಾಡ ಹಾಕಿಕೊಳ್ಳಬೇಕಾಯಿತು. ಹಾಗಾಗಿಯೇ ಇವರುಗಳು ಅಧಿಕಾರಕ್ಕೆ ಬರಲು ಇಷ್ಟೊಂದು ಸಮಯ ಬೇಕಾಯಿತು. ಆದರೆ ಅಧಿಕಾರಕ್ಕೆ ಬಂದ ನಂತರದಲ್ಲಿ ಪ್ರಜಾತಂತ್ರವನ್ನು ನಿರಾಕರಿಸುವ, ಪೌರತ್ವ ಕಲ್ಪನೆಯನ್ನು ಕಿತ್ತುಹಾಕುವ, ಮಾನವೀಯತೆಯನ್ನು ಕೊಲ್ಲುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಇದೇ ಅಂಶಗಳು ಮಾನವೀಯತೆಯನ್ನು ಉಳಿಸುವ ಪ್ರಜಾತಂತ್ರವಾದಿಗಳನ್ನು ಒಂದು ಮಾಡುತ್ತದೆ.

ಪ್ರಶ್ನೆ: ಆರ್ಥಿಕ ಕುಸಿತದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ವ್ಯತ್ಯಾಸವಿದೆಯೇ?
ಕನ್ಹಯ್ಯ: ಮೋದಿಯ ಜಾಗದಲ್ಲಿ ನಾನೇ ಇದ್ದರೂ ಇವತ್ತು ಆರ್ಥಿಕ ಕುಸಿತ ಆಗುತ್ತಿತ್ತು. ಯಾಕೆಂದರೆ ನವ ಉದಾರವಾದದಿಂದಾಗಿ ಜಗತ್ತೇ ಒಂದು ಹಳ್ಳಿ ಆಗಲಿದೆ ಎಂದು ನಂಬಿಸಿ ಬಂಡವಾಳಿಗರ ಪರವೇ ನೀತಿಗಳನ್ನು ರೂಪಿಸಿರುವ ಪರಿಣಾಮ ಇದಾಗಿದೆ. ಹಾಗಾದರೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ವ್ಯತ್ಯಾಸ ಇಲ್ಲವೇ ಎಂದರೆ ಖಂಡಿತಾ ಇದೆ. ಕಾಂಗ್ರೆಸ್ ಅಡಳಿತದಲ್ಲಿ ಚೆನ್ನಾಗಿರಲಿಲ್ಲ ಅನ್ನೋದು ನಿಜ. ಆದರೆ ಬಿಜೆಪಿ ಕಾಲದಲ್ಲಿ ಆರ್ಥಿಕತೆ ಅತ್ಯಂತ ಕಳಪೆಯಾಗಿದೆ. ಕಾಂಗ್ರೆಸ್ ಕಾಲದಲ್ಲಿ ಜಾರಿಗೆ ಬಂದ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ನೀವು ನೋಡಬಹುದಾಗಿದೆ. ಆದರೆ ಇವತ್ತಿನ ಬಿಜೆಪಿ ಆಡಳಿತದಲ್ಲಿ ನೀವು ಕಲ್ಯಾಣ ಕಾರ್ಯಕ್ರಮಗಳು, ಯೋಜನೆಗಳನ್ನು ಒಂದಾದರು ಹೆಸರಿಸಿ ನೋಡೋಣ. ನೀವು ಉಜ್ವಲ ಯೋಜನೆಯನ್ನು ಕಲ್ಯಾಣ ಕಾರ್ಯಕ್ರಮ ಅಲ್ವ ಎಂದು ಕೇಳಬಹುದು. ಆದರೆ ಈ ಯೋಜನೆಯಲ್ಲಿ ನೀವು ಗ್ರಾಹಕರೇ ಹೊರತು ಪೌರತ್ವದ ಹಕ್ಕುಗಳನ್ನು ಹೊಂದಿರಲು ಸಾಧ್ಯವಿಲ್ಲ. ನಿಮ್ಮ ಎಲ್ಲಾ ಮಾಹಿತಿಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ ಹಾಗೂ ಅದನ್ನು ಖಾಸಗೀ ಕಂಪನಿಗಳಿಗೆ ಮಾರುತ್ತಿದೆ. ಹಾಗೆ ನೋಡಿದರೆ ಆರ್ಥಿಕ ನೀತಿಗಳನ್ನು ಕಾಂಗ್ರೆಸ್ ಅಥವಾ ಬಿಜೆಪಿ ರೂಪಿಸುವುದಿಲ್ಲ ಈ ದೇಶದ ದೊಡ್ಡ ಕಾರ್ಪೊರೇಟ್ ಬಂಡವಾಳಿಗರು ನೀತಿಗಳನ್ನು ರೂಪಿಸುತ್ತಿದ್ದಾರೆ.

ಪ್ರಶ್ನೆ: ಕಳೆದ 45 ವರ್ಷದಲ್ಲೇ ಹೆಚ್ಚು ನಿರುದ್ಯೋಗ ಇದ್ದಾಗಲೂ ಯುವಜನರು ಇದರ ಕುರಿತು ಚಿಂತನೆ ಮಾಡುತ್ತಿರುವಂತೆ ಕಾಣುತ್ತಿಲ್ಲವಲ್ಲ?
ಕನ್ಹಯ್ಯ: ಚಿಂತೆ ಮಾಡುತ್ತಿಲ್ಲ ಎಂದು ಯಾರು ಹೇಳಿದ್ದು? ಯುವಜನರು ಚಿಂತಿತರಾಗಿದ್ದಾರೆ. ಆದರೆ ಅವರ ಚಿಂತೆಯನ್ನು ಬೇರೆ ದಿಕ್ಕಿಗೆ ತಿರುಗಿಸಲಾಗುತ್ತಿದೆ. ಯಾವಾಗೆಲ್ಲಾ ನೀವು ಜನರ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತುತ್ತೀರೋ ಆಗೆಲ್ಲಾ ಅವರು ಬೇರೆ ಭಾವನಾತ್ಮಕ ವಿಚಾರಗಳನ್ನು ತಂದು ಮುಂದಿಡುತ್ತಾರೆ. ಉದ್ಯೋಗದ ಪ್ರಶ್ನೆ ಬಂದಾಗ ಅವರು ಕಾಶ್ಮೀರದ ಕುರಿತು ನಿಮ್ಮ ನಿಲುವೇನು ಎಂದು ಕೇಳುತ್ತಾರೆ. ಈ ಸದ್ಯಕ್ಕೆ ಕೆಲವರು ಮೋದಿಯನ್ನು ಸೂಪರ್‍ಪವರ್ ಎನ್ನುವ ಭ್ರಮೆಯಲ್ಲಿ ಇದ್ದಾರೆ. 60 ವರ್ಷಗಳಲ್ಲಿದ್ದ ಸಮಸ್ಯೆಯನ್ನು ಮೋದಿ ಬಗೆಹರಿಸಿದ್ದಾರೆ, ಕಾಶ್ಮೀರದ ಸಮಸ್ಯೆ ಸರಿಹೋಗಿದೆ ಅಂತೆಲ್ಲಾ ಇವರು ಅಂದುಕೊಂಡಿದ್ದಾರೆ. ಹಾಗಾಗಿ ಈ ಆರ್ಥಿಕ ಹಿಂಜರಿತ ಉದ್ಯೋಗ ಕಡಿತವೂ ಸರಿ ಹೋಗಿಬಿಡುತ್ತದೆ ಎಂದು ನಂಬಿದ್ದಾರೆ. ಆದರೆ ಕಾಶ್ಮೀರ ವಿಚಾರದಂತೆ ಆರ್ಥಿಕತೆ ಮತ್ತು ನಿರುದ್ಯೋಗದ ವಿಚಾರ ಅಷ್ಟು ಸುಲಭಕ್ಕೆ ಬಗೆಹರಿಯುವುದಿಲ್ಲ.

ಪ್ರಶ್ನೆ: ಇವತ್ತಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಯುವಜನರು ಬಲಪಂಥೀಯರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಎಡ ಪ್ರಗತಿಪರ ಸಿದ್ಧಾಂತದಲ್ಲಿ ಯುವಜನರನ್ನು ಸೆಳೆದುಕೊಳ್ಳಲು ಯಾವ ರೀತಿಯ ಬದಲಾವಣೆಯನ್ನು ತಂದುಕೊಳ್ಳಬೇಕಿದೆ?
ಕನ್ಹಯ್ಯ: ಎಡ ಮತ್ತು ಬಲ ಎನ್ನುವ ಎರಡು ಧ್ರುವಗಳು ಇಲ್ಲವೇ ಇಲ್ಲ. ಆ ರೀತಿ ಇದೆ ಎಂದು ಹೇಳುವುದಾದರೆ ಅದು ಬಲಪಂಥೀಯರ ವಾದವಾಗಿರುತ್ತದೆ. ನೋಡಿ ಯಾವುದಾದರು ಒಂದು ವಸ್ತು ಇಲ್ಲ ಎನ್ನುವುದಾದರೆ ಅದು ಇಲ್ಲ ಅಷ್ಟೆ. ಅದರೆ ಅದು ಇಲ್ಲ ಎಂದು ಪದೇಪದೇ ಹೇಳುತ್ತಾರೆ, ಪ್ರತಿದಿನ ರಾತ್ರಿ 9 ಗಂಟೆಯ ಸುದ್ದಿ ಟಿವಿಯಲ್ಲಿ ಎಡಪಂಥ ಇನ್ನು ಇಲ್ಲ ಎನ್ನುವ ಕಾರ್ಯಕ್ರಮ ಮಾಡುತ್ತಾರೆಂದರೆ ಅವರ ಉದ್ದೇಶವೇ ಬೇರೆ ಎನ್ನುವುದು ನಾವು ಅರ್ಥಮಾಡಿಕೊಳ್ಳಬೇಕು. ಅವರ ಉದ್ದೇಶ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದಲ್ಲ. ಬದಲಾಗಿ ಪ್ರಶ್ನೆಯನ್ನೇ ಗೊಂದಲಗೊಳಿಸಿ ಮತ್ತೊಂದೆಡೆ ಎಳೆದುಕೊಂಡು ಹೋಗುವುದಾಗಿದೆ. ಧ್ರುವೀಕರಣ ಎಡ ಮತ್ತು ಬಲ ಎಂದು ಇಲ್ಲ. ಧ್ರುವೀಕರಣ ಇರುವುದು ಮಾಹಿತಿ ಮತ್ತು ತಪ್ಪಾದ ಮಾಹಿತಿ ಮಧ್ಯೆ. ಇಂದು ಮಾಹಿತಿ ಸರಬರಾಜು ಮಾಡುವ ಪರಿಕರಗಳು ಅದೆಷ್ಟು ಆಧುನೀಕರಣಗೊಂಡಿವೆ ಎಂದರೆ ಸುಳ್ಳುಮಾಹಿತಿಯೇ ಹೆಚ್ಚು ಓಡಾಡುತ್ತಿದೆ ಮತ್ತು ಇದರ ಬಲಿಪಶುಗಳು ಯುವಜನರಾಗಿದ್ದಾರೆ. ಸರಿಯಾದ ಮಾಹಿತಿಯನ್ನು ಹೊಂದಿರುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ ಮತ್ತು ತಪ್ಪು ಮಾಹಿತಿಯನ್ನು ಹೊಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಿಂದಾಗಿ ಜನರಿಗೆ ಮೂಲಭೂತ ವಿಷಯಗಳ ಬಗ್ಗೆಯೇ ಜ್ಞಾನ ಇರುವುದಿಲ್ಲ. ಉದಾಹರಣೆಗೆ ನೀವು ಎಡ ಮತ್ತು ಬಲ ಎಂದು ಪ್ರಶ್ನೆ ಶುರು ಮಾಡಿದ್ರಿ. ನಿಮಗೇ ಆ ಪ್ರಶ್ನೆಯನ್ನು ತಿರುಗಿಸಿ ದೇಶದಲ್ಲಿ ಎಷ್ಟು ಎಡ ಸಿದ್ಧಾಂತದ ಧಾರೆಗಳಿವೆ ಎಂದು ಕೇಳಿದ್ರೆ ನೀವು ಉತ್ತರ ಕೊಡಲು ಸಾಧ್ಯವಾಗುವುದಿಲ್ಲ.

ಇಲ್ಲಿ ವಿಭಾಗ ಇರುವುದು ಸರಿ ಮತ್ತು ತಪ್ಪಿನ ಮಧ್ಯೆ. ವಿಭಾಗವಿರುವುದು ನ್ಯಾಯ ಮತ್ತು ಅನ್ಯಾಯದ ಮಧ್ಯೆ. ಪ್ರಜಾತಂತ್ರ ಹಾಗೂ ಸರ್ವಾಧಿಕಾರದ ಮಧ್ಯೆ. ವಿವಿಧತೆ ಮತ್ತು ಏಕಸ್ವಾಮ್ಯ ಇವುಗಳ ಮಧ್ಯೆ ವಿಭಾಗವಿದೆಯೇ ಹೊರತು ಸಿದ್ಧಾಂತಗಳ ನಡುವೆ ಇಲ್ಲ. ಹಾಗಾಗಿ ನೀವು ಈ ಎಡ ಮತ್ತು ಬಲ ಎನ್ನುವ ವಿಭಾಗೀಕರಣದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ.

ಪ್ರಶ್ನೆ: ಗೌರಿ ಲಂಕೇಶ್ ಅವರ ಹಂತಕರನ್ನು ಹಿಡಿಯಲಾಗಿದೆ, ನಿಜವಾದ ಅಪರಾಧಿಗಳನ್ನು ಕಾನೂನು ಹಿಡಿದಿದೆ ಎಂದು ನಿಮಗೆ ಅನಿಸುತ್ತಾ?
ಕನ್ಹಯ್ಯ: ಇಲ್ಲ. ಗಾಂಧಿಯನ್ನು ಕೊಂದ ಗೋಡ್ಸೆ ನಿಜವಾದ ಅಪರಾಧಿಯೇ? ಅಲ್ಲ. ಗೌರಿ ಲಂಕೇಶರ ಪ್ರಕರಣದಲ್ಲಿ ನಿಜವಾದ ಅಪರಾಧಿಗಳನ್ನು ಹಿಡಿದು ಶಿಕ್ಷಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಕರ್ನಾಟಕ ಪೊಲೀಸ್ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಆದರೆ ಈಗ ಸರ್ಕಾರ ಬದಲಾಗಿರುವ ಸಂದರ್ಭದಲ್ಲಿ ಇನ್ನು ಮುಂದೆ ನಿಜವಾದ ಅಪರಾಧಿಗಳು ಹಾಗಿರಲಿ ಕೆಳಹಂತದ ಸಣ್ಣಪುಟ್ಟ ಅಪರಾಧಿಗಳು ಸಿಗುವುದು ಕಷ್ಟವಿದೆ. ನಾನು ಇದನ್ನು ಭಾವೋದ್ವೇಗಕ್ಕೆ ಒಳಗಾಗದೆ ಪ್ರಜ್ಞಾಪೂರ್ವಕವಾಗಿ ಹೇಳುತ್ತಿದ್ದೇನೆ. “ಗೌರಿ ಲಂಕೇಶರಿಗೆ ನ್ಯಾಯ ಸಿಗುವುದು ಸುಲಭವಿಲ್ಲ. ನನ್ನ ಪ್ರಕಾರ ಗೌರಿ ಲಂಕೇಶ್ ಅವರು ನಂಬಿದ್ದ ಮೌಲ್ಯಗಳನ್ನು ಮುಂದೆ ತೆಗೆದುಕೊಂಡು ಹೋಗುವುದೇ ಅವರಿಗೆ ಸಿಗುವ ನಿಜವಾದ ನ್ಯಾಯವಾಗಿದೆ.”

ಪ್ರಶ್ನೆ: ನಿಮ್ಮ ರಾಜಕೀಯ ಜೀವನದ ಬಗ್ಗೆ ನಮಗೆ ಗೊತ್ತೇ ಇದೆ. ನಿಮ್ಮ ವೈಯಕ್ತಿಕ ಜೀವನದ ಭವಿಷ್ಯದ ಬಗ್ಗೆ ಏನಾದರೂ ಯೋಜನೆಗಳು ರೂಪಿಸಿದ್ದೀರ?
ಇವತ್ತಿನ ಸ್ಥಿತಿಯಲ್ಲಿ ವೈಯಕ್ತಿಕ ಜೀವನ ಹಾಗೂ ರಾಜಕೀಯ ಜೀವನ ಎರಡೂ ಬೇರೆ ಬೇರೆ ಆಗಿಲ್ಲ ಅಂತ ಅನಿಸುತ್ತೆ. ನನ್ನ ರಾಜಕೀಯ ಜೀವನವೇ ವೈಯಕ್ತಿಕವಾಗಿಬಿಟ್ಟಿದೆ. ಆದರೂ ಎರಡೂ ಬೇರೆಬೇರೆಯಾಗಿ ಇಡಲು ಪ್ರಯತ್ನ ಪಡುತ್ತಿದ್ದೇನೆ. ನೋಡಿ ರಾಜಕೀಯವಾಗಿ ಭಿನ್ನಾಭಿಪ್ರಾಯ ಇದ್ದಾಗಲೂ ಅವರೊಂದಿಗೆ ವೈಯಕ್ತಿಕ ಹಾಗೂ ಸಾಮಾಜಿಕವಾದ ಒಳ್ಳೆಯ ಸ್ನೇಹ ಇಟ್ಟುಕೊಳ್ಳಬೇಕಿರುತ್ತೆ. ಆದರೆ ಸಮಾಜ ಯಾವ ರೀತಿ ಧ್ರುವೀಕರಣವಾಗುತ್ತಿದೆ ಅಂದರೆ ನಿಮಗೇ ಅನುಭವ ಆಗಿರುತ್ತದೆ. ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿ ದಾಳಿಗಳು ನಡೆಯುತ್ತಿರುತ್ತೆ, ಫೇಸ್ಬುಕ್ ಹಾಗೂ ವಾಟ್ಸಾಪ್ ಗ್ರೂಪುಗಳಿಂದ ನಿಮ್ಮನ್ನು ಕಿತ್ತುಹಾಕುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಏನು ಮಾಡಲು ಸಾಧ್ಯ? ಆಗ ರಾಜಕೀಯ ಮತ್ತು ವೈಯಕ್ತಿಕ ಎರಡೂ ಒಂದೇ ಆಗಿಬಿಡುತ್ತದೆ. ಆಗಲೂ ನಾವು ಪ್ರಯತ್ನ ಪಡುತ್ತಿರಬೇಕು. ಮತ್ತು ಆ ಪ್ರಯತ್ನವೂ ಕೂಡ ರಾಜಕೀಯ ತಿಳಿವಳಿಕೆಯಿಂದಲೇ ಆಗುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here