Homeಮುಖಪುಟಪ್ಯಾಲೇಸ್ತೀನ್ A-Z - ಮೊಸಾಬ್ ಅಬು ತೋಹಾ

ಪ್ಯಾಲೇಸ್ತೀನ್ A-Z – ಮೊಸಾಬ್ ಅಬು ತೋಹಾ

- Advertisement -
- Advertisement -

A

ಮನುಷ್ಯ ನಿರ್ಮಿತ ಸಿಡಿಲೊಂದು, ಕತ್ತಲ ಸಂಜೆಯೊಂದರಲ್ಲಿ ಕಿಚನ್, ಬೀದಿಗಳು, ಮತ್ತು ಆಕಾಶದಲ್ಲಿ ಮಿಂಚಿದಾಗ, ಕಪ್‌ಬೋರ್ಡ್‌ಗಳು ಜೋರಾಗಿ ಅಲುಗಾಡಿ ಮತ್ತು ಪಾತ್ರೆಗಳು ಒಡೆದುಹೋಗಿ, ಟೇಬಲ್‌ನಿಂದ ಕೆಳಗೆ ಬಿದ್ದ ಒಂದು ಆಪಲ್ (APPLE).

ನಾನು (I am) ನುಚ್ಚುನೂರಾಗಿ, ಯಾವಾಗ ನಾನು (I am) ವರ್ತಮಾನದಲ್ಲಿ ಇರುವುದಿಲ್ಲವೋ, ಆಗ ವರ್ತಮಾನ ಕಾಲದ “I”ಅನ್ನು (ನಾನು) ಫಾಲೋ ಮಾಡುವ ಕೂಡು ಕ್ರಿಯಾಪದ Am (ಆಮ್).

B

ನನ್ನ ದೇಶ ಅಥವಾ ನನ್ನ ಭಾಷೆಯನ್ನು ಹೆಸರಿಸದ ಮತ್ತು ನಾನೇನೋ ಈ ಭೂಮಿ ತಾಯಿಯ ಮೇಲೆ ಅನೈತಿಕ ಕೂಸು ಎಂಬಂತೆ, ನನ್ನ ಹುಟ್ಟೂರೊಂದನ್ನು ಬಿಟ್ಟು ಉಳಿದೆಲ್ಲಾ ಪ್ರದೇಶಗಳ ಭೂಪಟಗಳನ್ನು ಹೊಂದಿರುವ ಬುಕ್ (BOOK).

ಭೂಪಟದ ಮೇಲೆ ಬೂದಿಯಿಂದ ಎಳೆದ ಕಲ್ಪಿತ ಗೆರೆಗಳು ಮತ್ತು ಭೂಮಿಯ ಮೇಲೆ ಬುಲೆಟ್‌ಗಳಿಂದ ಹೊಲಿದ ಗೆರೆಗಳು ಬಾರ್ಡರ್‌ಗಳು (BORDERS).

C

ನಾಶಗೊಂಡ ಕಟ್ಟಡಗಳು ಅಥವಾ ಸ್ಮಶಾನಗಳ ಮುಂದೆ ಗುಂಪುಕಟ್ಟಿಕೊಂಡು ಪ್ರವಾಸಿಗರು ಫೋಟೋ ತೆಗೆದುಕೊಳ್ಳುವ ಸಿಟಿ (CITY) ಗಾಜಾ.

ನನ್ನ ಮನಸ್ಸಿನಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ದೇಶ (COUNTRY). ಅದರ ಬಾವುಟಕ್ಕೆ ಮುಕ್ತವಾಗಿ ಹಾರಾಡಲು ಇಲ್ಲಿ ಎಲ್ಲೂ ಅವಕಾಶವಿಲ್ಲ, ಆದರೆ ದೇಶವಾಸಿಗಳ (COUNTRYMEN) ಶವಪೆಟ್ಟಿಗೆಗಳ (COFFINS) ಮೇಲೆ ಜಾಗವಿದೆ.

D

ದಾರ್ (DAR) ಅಂದರೆ ಮನೆ. 1948ರಲ್ಲಿ ಯಾಫ್ಫಾ ಬೀಚ್ ಬಳಿಯ ತಮ್ಮ ಮನೆಯನ್ನ ನನ್ನ ಅಜ್ಜಿತಾತಂದಿರು ಹಿಂದಕ್ಕೆ ಬಿಟ್ಟುಹೋದರು. ತನ್ನ ತಂದೆ ಹೇಳಿದ ಮರ ಮನೆ ಮುಂದಿನ ವಿಶಾಲ ಜಾಗದಲ್ಲಿದೆ ನಿಂತಿತ್ತು.

ಆಲ್-ಮಿಷಲ್ ಸಾಂಸ್ಕೃತಿಕ ಕೇಂದ್ರದಲ್ಲಿ ಹಾಡುಗಳನ್ನು ಕೇಳುವ ಅಥವಾ ನಾಟಕಗಳನ್ನು ನೋಡುವ, ಮಕ್ಕಳ ಮತ್ತವರ ತಂದೆ ತಾಯಿಗಳ ಕನಸುಗಳು (DREAMS). ಆಗಸ್ಟ್ 2018ರಲ್ಲಿ ಇಸ್ರೇಲ್ ಅದನ್ನು ನಾಶಗೊಳಿಸಿತು. ಆದರೆ ಗಾಜಾದಲ್ಲಿ ಇನ್ನೂ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಗಾಜಾನೆ ಒಂದು ರಂಗಮಂಚ.

E

ಕರೆಂಟ್ ಇದ್ದಾಗ ನಾನು ಬಳಸುತ್ತಿದ್ದ ಈಮೇಲ್ (EMAIL) ಅಕೌಂಟ್; ನಾನು ಸಾಗರದಾಚೆಯ ಗಾಳಿಯನ್ನು ಮೂಸಲು ಅನುವು ಮಾಡುತ್ತಿದ್ದ ಆ ಈಮೇಲ್. ನಾವು ಕೊನೆಯದಾಗಿ 2000ದ ಇಸವಿಯಲ್ಲಿ ನೋಡಿದ ನನ್ನ ಆಂಟಿಗೆ, ಫೋಟೋಗಳನ್ನು ಕಳುಹಿಸಲು ಅದನ್ನು ಬಳಸಿದ್ದೆ.

ಅದು ಯಾವ ವಿಮಾನ ಎಂದು ಗುರುತಿಸಲು ಎಷ್ಟು ಸುಲಭ (EASY): ಎಫ್-16, ಹೆಲಿಕಾಪ್ಟರ್ ಅಥವಾ ಡ್ರೋನ್? ಅದು ಯಾವ ಬಗೆಯ ಬುಲೆಟ್ ಆಗಿತ್ತು: ಗನ್‌ಬೋಟ್‌ನದ್ದೋ, ಎಂ-16 ಟ್ಯಾಂಕ್‌ನದ್ದೋ ಅಥವಾ ಅಪಾಚೆಯದ್ದೋ? ಎಲ್ಲಾ ಸದ್ದಿನಲ್ಲಿಯೆ ಗೊತ್ತಾಗುತ್ತದೆ.

F

ಶಾಲೆಯ, ನೆರೆಹೊರೆಯ ಮತ್ತು ಬಾಲ್ಯದ ಗೆಳೆಯರು (FRIENDS). ಗಾಜಾದ ನನ್ನ ಮನೆಯ ವಾಸದಕೋಣೆಯಲ್ಲಿರುವ ಪುಸ್ತಕಗಳು, ನನ್ನ ನೋಟ್‌ಬುಕ್‌ನಲ್ಲಿರುವ ಪದ್ಯಗಳು ಇನ್ನೂ ಏಕಾಂಗಿಯಾಗಿವೆ. 2014ರ ದಾಳಿಯಲ್ಲಿ ನಾನು ಕಳೆದುಕೊಂಡ ಮೂವರು ಗೆಳೆಯರು: ಎಜ್ಜತ್, ಅಮ್ಮರ್ ಮತ್ತು ಇಸ್ಮಾಯಿಲ್. ಎಜ್ಜತ್ ಅಲ್ಜೀರಿಯಾದಲ್ಲಿ ಹುಟ್ಟಿದ್ದ, ಅಮ್ಮರ್ ಜೋರ್ಡನ್‌ನಲ್ಲಿ ಮತ್ತು ಇಸ್ಮಾಯಿಲ್ ಫಾರ್ಮ್ ಒಂದರಲ್ಲಿ. ನಾವು ಅವರನ್ನೆಲ್ಲಾ ತಣ್ಣಗಿನ ನೆಲದಲ್ಲಿ ಹೂಳಿದೆವು.

ಮೆಡಿಟರೇನಿಯನ್‌ನಲ್ಲಿ ಇಸ್ರೇಲಿ ಗನ್‌ಬೋಟ್‌ಗಳು ಸಮುದ್ರಜೀವಿಗಳ ಬಗ್ಗೆ ಕಾಳಜಿ ವಹಿಸುವುದರಿಂದ, ಮೀನುಗಾರರು (FISHERMEN) ನಮ್ಮ ಸಮುದ್ರದಲ್ಲಿ ಹಿಡಿಯಲಾಗದ ಮೀನುಗಳು (FISH). ಅವರು ಒಮ್ಮೆ ಗಾಜಾ ಬೀಚ್‌ನಲ್ಲಿ ಶೆಲ್‌ಗಳನ್ನು ಸಿಡಿಸುವ ಮೂಲಕ ಫಿಶಿಂಗ್ ಮಾಡಿದರು, ಮತ್ತು ಜೂನ್ 2006ರಲ್ಲಿ ಹೂಡ ಘಾಲಿಯ ತನ್ನ ತಂದೆ, ಮಲತಾಯಿ ಮತ್ತು ಐದು ಜನ ಸಹೋದರ(ರಿ)ರನ್ನು ಕಳೆದುಕೊಂಡಳು. ಅವರ ಶವಯಾತ್ರೆಯಲ್ಲಿ ಸ್ಮಶಾನದವರೆಗೂ ನಾನು ನಡೆದೆ. ಅವರ ಬಟ್ಟೆಗಳ ಮೇಲೆ ರಕ್ತ ಇನ್ನೂ ಫ್ರೆಶ್ ಆಗಿತ್ತು. ವಾಸನೆಯನ್ನು ಅಡಗಿಸಲು ಅವರು ಒಂದಷ್ಟು ಪರ್ಫ್ಯೂಮ್ ಉಯ್ದಿದ್ದರು. ದಿನಕಳೆದಂತೆ ಪರ್ಫ್ಯೂಮ್ ಮೇಲಿನ ನನ್ನ ದ್ವೇಷ ತೀವ್ರವಾಗುತ್ತಾ ಹೋಯ್ತು.

G

ಹೇಗಿದ್ದೀಯ, ಮೊಸಾಬ್? ಐ ಆಮ್ ಗುಡ್ (GOOD). ನಾನು ಈ ಪದವನ್ನು ದ್ವೇಷಿಸುತ್ತೇನೆ. ನನ್ನಲ್ಲಿ ಆ ಪದಕ್ಕೆ ಯಾವ ಅರ್ಥವೂ ಇಲ್ಲ. ಯುವರ್ ಇಂಗ್ಲಿಷ್ ಇಸ್ ಗುಡ್, ಮೊಸಾಬ್! ಥ್ಯಾಂಕ್ಸ್.

ಯು.ಎಸ್.ನ ವೀಸಾ ಅರ್ಜಿಯನ್ನು ತುಂಬಲು ನನಗೆ ಹೇಳಿದಾಗ, ನನ್ನ ದೇಶ, ಪ್ಯಾಲೆಸ್ತೀನ್, ಪಟ್ಟಿಯಲ್ಲಿರಲಿಲ್ಲ. ಆದರೆ ನಾನು ಲಕ್ಕಿ, ನನ್ನ ಜೆಂಡರ್ (GENDER) ಇತ್ತು.

H

ಗಾಜಾದ ಆಕಾಶದಲ್ಲಿ ಹೆಲಿಕಾಪ್ಟರ್ (HELICAPTOR) ಒಂದು ಬಂದು ನಿಂತಿತೆಂದರೆ, ಅದು ರಾಕೆಟ್ ಒಂದನ್ನು ಶೂಟ್ ಮಾಡುತ್ತದೆ ಎಂದು ನಮಗೆ ತಿಳಿದಿದೆ. ಅದರ ಗುರಿ ಗೋಲಿ ಆಡುತ್ತಿರುವ ಅಥವಾ ಬೀದಿಯಲ್ಲಿ ಫುಟ್‌ಬಾಲ್ ಆಡುತ್ತಿರುವ ಮಕ್ಕಳಿಗೆ ಹತ್ತಿರವಿದೆಯೇ ಎಂದು ಅದು ನೋಡುವುದಿಲ್ಲ.

ನನ್ನ ಫ್ರೆಂಡ್ ಎಲಿಸ್ ನನಗೆ ಹೇಳಿದ್ದು, ಹೆ (HEY) ಒಂದು ಅಶಿಷ್ಟ ಮಾತು ಮತ್ತು ಅದನ್ನು ಬಳಸಬಾರದು ಎಂದು. “ಇವತ್ತು ಇಂಗ್ಲಿಷ್ ಬರವಣಿಗೆಯಲ್ಲಿ ಏನೆಲ್ಲಾ ಬರೆಯಲಾಗುತ್ತದೆ ಎಂಬುದರ ಬಗ್ಗೆ ಇಂಗ್ಲಿಷ್ ಪಾಠ ಮಾಡುವವರು ತಲೆಸುತ್ತಿ ಬೀಳುತ್ತಾರೆ” ಎಂದು ಆಕೆ ಹೇಳಿದ್ದಳು.

I

ಕಟ್ಟಡಗಳ ಗೋಡೆಗಳ ಮೇಲಿನ ಚಿತ್ರಗಳು (IMAGES), ಇಸ್ರೇಲಿ ಸ್ನೈಪರ್ ಒಂದು ಶೂಟ್ ಮಾಡಿದ ಮಗು ಅಥವಾ ಶಾಲೆಗೆ ಹೋಗುವಾಗ ಬಾಂಬ್ ದಾಳಿಯಿಂದ ಮೃತಪಟ್ಟು ಮಗುವಿನದ್ದು. ಶಾಲೆಯಲ್ಲಿ ಆಕೆಯ ಡೆಸ್ಕ್ ಮೇಲೆ ಆಕೆಯ ಚಿತ್ರವನ್ನು ಇಡಲಾಗಿತ್ತು. ಗಾಳಿ ಆಕೆಯ ಚೇರ್ ಮೇಲೆ ಕುಳಿತಿರುವಾಗ, ಆಕೆಯ ಚಿತ್ರ ಬ್ಲ್ಯಾಕ್ ಬೋರ್ಡ್‌ಅನ್ನು ದಿಟ್ಟಿಸುತ್ತಿತ್ತು.

ನನ್ನ ಕನಸುಗಳಲ್ಲಿ ನನಗೆ ಏನಾಗಿರಬಹುದು ಎಂಬ ಕರಾಳ ಕಲ್ಪನೆಗಳು ಬಂದಾಗ ನಾನು ಕಾಯಿಲೆಯಿಂದ (ILL) ಎಚ್ಚರಗೊಳ್ಳುತ್ತೇನೆ, ಎಲ್ಲಿಂದಲೋ ಬಂದ ಬುಲೆಟ್ ಗಾಜನ್ನು ಒಡೆದು ನುಗ್ಗಿ ಬರುವಾಗ ನಾನು ಅಕಸ್ಮಾತ್ ಕಿಟಕಿಯ ಬಳಿ ಕೆಲವು ಸೆಕೆಂಡುಗಳ ನಿಂತಿದ್ದರೆ ಏನಾಗುತ್ತಿತ್ತು.

ಇದನ್ನೂ ಓದಿ: ಗಾಝಾದಲ್ಲಿ ಮಕ್ಕಳ ರಕ್ತಪಾತಕ್ಕೆ ಅಮೆರಿಕ ನೇರ ಹೊಣೆ: ಪ್ಯಾಲೆಸ್ತೀನ್

J

ಯುಎಸ್‌ನ ನನ್ನ ಗೆಳೆಯನಿಗೆ ಒಮ್ಮೆ ಗಾಜಾದ ನನ್ನ ಡೆಸ್ಕ್‌ನ ಫೋಟೋವನ್ನು ಕಳುಹಿಸಿದೆ. ನಾನು ಓಕೆಯಾಗಿದ್ದೇನೆ ಎಂದು ತೋರಿಸಬೇಕಿತ್ತು. ಡೆಸ್ಕ್ ಮೇಲೆ ಕೆಲವು ಪುಸ್ತಕಗಳಿದ್ದವು, ನನ್ನ ಲ್ಯಾಪ್‌ಟಾಪ್ ಮತ್ತು ಒಂದು ಗ್ಲಾಸ್ ಸ್ಟ್ರಾಬೆರ್ರಿ ಜ್ಯೂಸ್ (JUICE).

ಆ ಫೋಟೋ ಕಳುಹಿಸಿದಾಗ, ನಾನು ಜಾಬ್‌ಲೆಸ್ (JOBLESS) ಆಗಿದ್ದೆ. ಗಾಜಾದಲ್ಲಿ ಸುಮಾರು 47 ಶೇಕಡಾ ಜನಕ್ಕೆ ಉದ್ಯೋಗವಿಲ್ಲ. ಆದರೆ ಈ ಸಾಲುಗಳನ್ನು ಬರೆಯುವಾಗ, ನಾನು ಒಂದು ಸಾಹಿತ್ಯ ಪತ್ರಿಕೆ ಶುರು ಮಾಡಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕೆ ಏನು ಹೆಸರಿಡಬೇಕೆಂದು ಇನ್ನೂ ತಿಳಿದಿಲ್ಲ.

K

1948ರಲ್ಲಿ ನನ್ನ ತಾತ ಯಾಫ್ಫಾದ ಮನೆಯ ಕೀ (KEY)ಅನ್ನು ತನ್ನ ಜತೆಗೆ ಇಟ್ಟುಕೊಂಡಿದ್ದ (KEPT). ಅವರು ಕೆಲವು ದಿನಗಳಲ್ಲಿ ಹಿಂದಿರುಗಬಹುದೆಂದು ಅವನು ಎಣಿಸಿದ್ದ. ಅವನ ಹೆಸರು ಹಸನ್. ಮನೆಯನ್ನು ನಾಶಗೊಳಿಸಲಾಯಿತು. ಅದರ ಜಾಗದಲ್ಲಿ ಬೇರೆಯವರು ಹೊಸ ಮನೆ ಕಟ್ಟಿದರು. 1986ರಲ್ಲಿ ಗಾಜಾದಲ್ಲಿ ಹಸನ್ ಮೃತನಾದ. ಕೀ ತುಕ್ಕು ಹಿಡಿದಿದೆ, ಆದರೆ ಇನ್ನೂ ಎಲ್ಲೋ ಇದೆ, ಹಳೆಯ ಮರದ ಬಾಗಿಲಿನ ನಿರೀಕ್ಷೆಯಲ್ಲಿ.

ಗಾಜಾದಲ್ಲಿ ನೀನು ಮಾಡಿದ ತಪ್ಪಾದರೂ ಏನು ಎಂಬುದು ತಿಳಿದಿರುವುದಿಲ್ಲ. ಕಾಫ್ಕ (KAFKA) ಕಾದಂಬರಿಯೊಂದರಲ್ಲಿ ಬದುಕುತ್ತಿರುವಂತೆ ಭಾಸವಾಗುತ್ತದೆ.

L

ನಾನು ಅರೇಬಿಕ್ ಮತ್ತು ಇಂಗ್ಲಿಷ್ ಮಾತಾಡ್ತೀನಿ, ಆದರೆ ನನ್ನ ಹಣೆಬರಹ ಯಾವ ಭಾಷೆಯಲ್ಲಿ (LANGUAGE) ಬರೆಯಲಾಗಿದೆ ಎಂಬುದು ತಿಳಿದಿಲ್ಲ. ನಾನು ಏನನ್ನಾದರೂ ಬದಲಾಯಿಸಬಹುದೆ ಎಂಬುದು ಕೂಡ ನನಗೆ ಅಸ್ಪಷ್ಟ.

ಲೈಟ್ (LIGHT) ಅನ್ನುವುದು ಭಾರ ಅಥವಾ ಕತ್ತಲಿಗೆ ವಿರೋಧ ಪದ. ಗಾಜಾದಲ್ಲಿ ಎಲೆಕ್ಟ್ರಿಸಿಟಿಯನ್ನು ಕಟ್ ಮಾಡಿದಾಗ, ಹಾಡಹಗಲಿನಲ್ಲೂ ನಾವು ಲೈಟುಗಳನ್ನು ಆನ್ ಮಾಡಿರುತ್ತೇವೆ. ಆ ರೀತಿಯಲ್ಲಿ, ಪವರ್ ವಾಪಸ್ ಬಂದಾಗ ತಿಳಿಯುತ್ತೆ.

M

ಮರ್ಹಬ (MARHABA) ಅಂದರೆ ಹಾಯ್ ಅಥವಾ ಸ್ವಾಗತ. ನಾವು ಕಾಣುವ ಎಲ್ಲರಿಗೂ ಮರ್ಹಬ ಎಂದು ಹೇಳುತ್ತೇವೆ. ಅದು ಬೆಚ್ಚಗಿನ ಅಪ್ಪುಗೆಯಂತೆ. ಆದರೆ, ಸೈನಿಕರು ಅಥವಾ ಅವರ ಬುಲೆಟ್ಸ್ ಅಥವಾ ಅವರ ಬಾಂಬ್‌ಗಳು ನಮ್ಮನ್ನು ಭೇಟಿ ಮಾಡಲು ಬಂದಾಗ ನಾವು ಅದನ್ನು ಬಳಸುವುದಿಲ್ಲ. ಅಂತಹ ಅತಿಥಿಗಳು ತಮ್ಮ ಅಮೇಧ್ಯವನ್ನು ಬಿಟ್ಟು ಹೋಗುವದಷ್ಟೆ ಅಲ್ಲ, ನಮ್ಮಲ್ಲಿ ಇರುವುದನ್ನೆಲ್ಲ ಕಸಿದುಕೊಳ್ಳುತ್ತಾರೆ.

ಶಾಲೆಗೆ ಹೋಗುವುದಕ್ಕೂ ಮುಂಚೆ ನಮ್ಮಪ್ಪ ಬಾದಾಮಿ ಹಾಲು (MILK) ಮಾಡಿಕೊಡುತ್ತಿದ್ದರು. ನಾನು ಮೂರನೇ ಕ್ಲಾಸಿನಲ್ಲಿದ್ದೆ, ನಮ್ಮಮ್ಮ ನನ್ನ ಸಹೋದರನನ್ನು ನೋಡಿಕೊಂಡು ಆಸ್ಪತ್ರೆಯಲ್ಲಿದ್ದರು. ನನ್ನ ಸಹೋದರ 2016ರಲ್ಲಿ ಮೃತಪಟ್ಟ.

N

2014ರಲ್ಲಿ ಸುಮಾರು 2139 ಜನರನ್ನು ಕೊಲ್ಲಲಾಯಿತು, ಅದರಲ್ಲಿ 579 ಮಕ್ಕಳು, ಸುಮಾರು 11,100 ಜನ ಗಾಯಗೊಂಡರು, 13,000 ಕಟ್ಟಡಗಳನ್ನು ನಾಶ ಮಾಡಲಾಯಿತು. ನಾನು ಮೂವರು ಗೆಳೆಯರನ್ನು ಕಳೆದುಕೊಂಡೆ. ಆದರೆ ಇದು ಅಂಕಿಗಳ (NUMBERS) ಬಗೆಗಿನ ಕಥೆಯಲ್ಲ. ವರ್ಷಗಳ ಬಗ್ಗೆಯೂ ಅಲ್ಲ, ಅವುಗಳು ಅಂಕಿಗಳಲ್ಲ.

ಮರದ ಎರಡು ತುಂಡುಗಳನ್ನು ಕೂಡಿಸಲು ಅಥವಾ ಗೋಡೆಯ ಮೇಲೆ ಯಾವುದಾದರೂ ವಸ್ತುವನ್ನು ತೂಗಿಹಾಕಲು ಮೊಳೆಯನ್ನು (NAIL) ಬಳಸುತ್ತಾರೆ. 2009ರಲ್ಲಿ, ನನ್ನ ಮನೆಯ ಹತ್ತಿರ ಇಸ್ರೇಲಿಗಳು ಆಂಬುಲೆನ್ಸ್ ಒಂದರ ಮೇಲೆ ಮೊಳೆಗಳ ಬಾಂಬ್‌ನಿಂದ ದಾಳಿ ಮಾಡಿದರು. ಕೆಲವರನ್ನು ಹತ್ಯೆ ಮಾಡಲಾಯಿತು. ನನ್ನ ಪಕ್ಕದ ಮನೆಯಲ್ಲಿ ಹೊಸದಾಗಿ ಪೇಂಟ್ ಮಾಡಿದ ಗೋಡೆಯಲ್ಲಿ ನಾನು ಎಷ್ಟೊಂದು ಮೊಳೆಗಳನ್ನು ನೋಡಿದೆ.

O

ಯಾಫ್ಫ ಜಗತ್ತಿನಾದ್ಯಂತ ತನ್ನ ಕಿತ್ತಳೆಗಳಿಗೆ (ORANGES) ಪ್ರಸಿದ್ಧ. ನನ್ನ ಅಜ್ಜಿ ಖಾದ್ರ, 1948ರಲ್ಲಿ ತನ್ನ ಜತೆಗೆ ಕೆಲವು ಕಿತ್ತಳೆ ಹಣ್ಣುಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದಳು, ಆದರೆ ಶೆಲ್ಲಿಂಗ್ ಸಿಕ್ಕಾಪಟ್ಟೆ ಹೆವಿಯಾಗಿತ್ತು. ಕಿತ್ತಲೆಗಳು ನೆಲಕ್ಕೆ ಬಿದ್ದವು, ಭೂಮಿ ಅವುಗಳ ರಸವನ್ನು ಕುಡಿಯಿತು. ಅದು ಸಿಹಿಯಾಗಿತ್ತು, ನನಗೆ ಖಾತರಿಯಿದೆ.

ಗಾಜಾದಲ್ಲಿ, ನಮ್ಮ ಪಕ್ಕದ ಮನೆಯ ಮುನೀರ್ ನಮಗೆ ಕಟ್ಟಿಕೊಟ್ಟಿದ್ದ ಮಣ್ಣಿನ ಒಲೆಯನ್ನು (OVEN) ನಾವು ಹೊಂದಿದ್ದೇವೆ. ನನ್ನ ಅಮ್ಮ ಬೇಕ್ ಮಾಡಬೇಕಾದರೆ, ಬ್ರೆಡ್‌ಗೆ ಶಾಖ ಕೊಡಲು ನಾನು ಸೌದೆ ಅಥವಾ ಕಾರ್ಡ್ ಬೋರ್ಡ್ ಒಲೆಗೆ ಹಾಕುತ್ತಿದ್ದೆ. ಸೌದೆ ಒಣಗಿದ ಈ ಗಿಡಗಳದ್ದಾಗಿರುತ್ತಿತ್ತು: ಪೆಪ್ಪರ್, ಬದನೆ ಮತ್ತು ಜೋಳದ ತೆನೆಗಳದ್ದು.

P

ಒಂದು ಸಾಲಿನಲ್ಲಿ ಪದಗಳನ್ನು ಜೋಡಿಸುವುದಷ್ಟೆ ಪದ್ಯವಲ್ಲ (POEM). ಅದು ಬಟ್ಟೆ. ಮಹಮೌದ್ ದರ್ವಿಷ್ ತನ್ನ ಗಡಿಪಾರಿನ ಅಜ್ಞಾತವಾಸದಲ್ಲಿ, ಜಗತ್ತಿನ ಎಲ್ಲಾ ಪದಗಳನ್ನು ಬಳಸಿಕೊಂಡು, ತನ್ನ ಮನೆ ಕಟ್ಟಿಕೊಳ್ಳಲು ಬಯಸಿದ್ದರು. ನನ್ನ ರಕ್ತನಾಳಗಳಿಂದ ನನ್ನ ಪದ್ಯಗಳನ್ನು ಹೆಣೆಯುತ್ತೇನೆ. ಘನ ಮನೆಯಂತೆ ನಾನು ಪೊಯೆಮ್ ಒಂದನ್ನು ಕಟ್ಟಬೇಕು, ಆದರೆ ಅದು ನನ್ನ ಮೂಳೆಗಳಿಂದಾಗಿರಬಾರದು ಎಂಬ ನಂಬಿಕೆಯಲ್ಲಿ.

ಜುಲೈ 23, 2014ರಂದು, ನನ್ನ ಗೆಳೆಯನೊಬ್ಬ ಕರೆ ಮಾಡಿ ಹೇಳಿದ, “ಎಜ್ಜತ್‌ನನ್ನು ಹತ್ಯೆ ಮಾಡಲಾಗಿದೆ.” ನಾನು ಯಾವ ಎಜ್ಜತ್ ಎಂದು ಕೇಳಿದೆ. “ಎಜ್ಜತ್, ನಿನ್ನ ಗೆಳೆಯ.” ನನ್ನ ಫೋನ್ (PHONE) ನನ್ನ ಕೈಯ್ಯಿಂದ ಜಾರಿ ಬಿತ್ತು, ಮತ್ತೆ ನಾನು ಓಡಲು ಶುರು ಮಾಡಿದೆ, ಎಲ್ಲಿಗೆಂದು ತಿಳಿಯದೆ.

ನಿನ್ನ ಹೆಸರೇನು? ಮೊಸಾಬ್. ಎಲ್ಲಿಂದ ಬರುತ್ತಿದ್ದೀಯ? ಪ್ಯಾಲೆಸ್ತೀನ್ (PALESTINE). ನಿನ್ನ ಮಾತೃಭಾಷೆ? ಅರೇಬಿಕ್, ಆದರೆ ಅವಳಿಗೆ ಹುಷಾರಿಲ್ಲ. ನಿನ್ನ ಚರ್ಮದ ಬಣ್ಣ ಏನು? ಅದನ್ನ ನೋಡಿಕೊಳ್ಳಲು ಬೇಕಾದಷ್ಟು ಬೆಳಕಿಲ್ಲ.

Q

ನಾವು ಫುಟ್‌ಬಾಲ್ ಮ್ಯಾಚ್ ನೋಡುತ್ತಿದ್ದೆವು. ಕಾಮೆಂಟ್‌ಗಳು ಮತ್ತು ಕೂಗು ಕೋಣೆಯನ್ನು ತುಂಬಿತ್ತು. ಪವರ್ ಕಟ್ ಆಯ್ತು, ಮತ್ತಾಗ ಎಲ್ಲವೂ ಪೂರ್ಣ ಮೌನ (QUIET). ಆ ಕತ್ತಲೆಯಲ್ಲಿ ನಾವು ನಮ್ಮ ಉಸಿರಿನ ಶಬ್ದವನ್ನು ಕೇಳಬಹುದಿತ್ತು.

ಜೆರುಸೇಲಂ ಅರೇಬಿಕ್‌ನಲ್ಲಿ ಆಲ್-ಕುಡ್ಸ್ (AL-QUDS). ನಾನು ಯಾವತ್ತೂ ಆಲ್-ಕುಡ್ಸ್‌ಗೆ ಹೋಗಿಲ್ಲ. ಅದು ಗಾಜಾದಿಂದ ಸುಮಾರು 60 ಮೈಲಿ ದೂರ. 5000 ಮೈಲಿ ದೂರದಲ್ಲಿ ಬದುಕುತ್ತಿರುವ ಜನ ಅಲ್ಲಿಗೆ ಹೋಗಿ ಬದುಕಬಹುದು, ಆದರೆ ನಾನು ಅಲ್ಲಿಗೆ ಭೇಟಿ ಕೊಡುವ ಹಾಗೂ ಇಲ್ಲ.

R

ನಾನು ಹುಟ್ಟಿದ್ದು ನವೆಂಬರ್‌ನಲ್ಲಿ. ನಮ್ಮಮ್ಮ ಹೇಳಿದ್ದಳು, ನನ್ನ ಅಪ್ಪನ ಜತೆ ಬೀಚ್‌ನಲ್ಲಿ ಅವಳು ವಾಕ್ ಮಾಡುತ್ತಿದ್ದಳಂತೆ. ಬಿರುಗಾಳಿ ಬೀಸಿ ಮಳೆ ಹನಿಯುವುದಕ್ಕೆ ಶುರುವಾಯಿತು. ನಮ್ಮಮ್ಮನಿಗೆ ಹೆರಿಗೆಬೇನೆ ಶುರುವಾಗಿ, ಒಂದು ಗಂಟೆಯ ನಂತರ ಆಕೆ ನನಗೆ ಜನ್ಮವಿತ್ತಳು. ನಾನು ಮಳೆಯನ್ನು (RAIN) ಮತ್ತು ಸಮುದ್ರವನ್ನು ಪ್ರೀತಿಸುತ್ತೇನೆ, ಈ ಹಾರಿಬಲ್ ಜಗತ್ತಿಗೆ ಬರುವ ಮುಂಚೆ ನಾನು ಕೇಳಿಸಿಕೊಂಡ ಕೊನೆಯ ಎರಡು ಸಂಗತಿಗಳು.

S

ನನಗೆ ಬೀಚ್‌ಗೆ ಹೋಗಿ ಸಮುದ್ರದೊಳಗೆ (SEA) ಸೂರ್ಯ (SUN) ಮುಳುಗುವುದನ್ನು ನೋಡುವುದು ಇಷ್ಟ. ಆಕೆ ಒಳ್ಳೆಯ ಪ್ರದೇಶಗಳಲ್ಲಿ ಹೊಳೆಯಲಿದ್ದಾಳೆ, ನಾನು ನನಗೆ ಅಂದುಕೊಳ್ಳುತ್ತೇನೆ.

ನನ್ನ ಮಗನ ಹೆಸರು ಯಾಜ್ಜಾನ್. ಅವನು ಹುಟ್ಟಿದ್ದು 2015ರಲ್ಲಿ ಅಥವಾ 2014ರ ಯುದ್ಧದ ನಂತರ. ನಾವು ದಿನಗಳನ್ನು ಲೆಕ್ಕ ಇಡುವುದೇ ಹಾಗೆ. ಅವನು ಒಮ್ಮೆ ಮೋಡಗಳು ಗುಂಪನ್ನು ಕಂಡ. ಅವನು ಕಿರುಚಿದ: “ಅಪ್ಪ, ಬಾಂಬ್‌ಗಳು. ಹುಷಾರು!” ಮೋಡಗಳನ್ನು ಅವನು ಅದನ್ನು ಬಾಂಬಿನ ಹೊಗೆ(SMOKE)ಯೆಂದು ಎಣಿಸಿದ್ದ. ಪ್ರಕೃತಿ ಕೂಡ ನಮ್ಮನ್ನು ಗೊಂದಲಗೊಳಿಸುತ್ತದೆ.

T

ಬೇಸಿಗೆಯಲ್ಲಿ, ನಾನು ಟಿ(TEA)ಯನ್ನು ಮಿಂಟ್ ಜತೆಗೆ ಕುಡಿಯುತ್ತೇನೆ. ಚಳಿಗಾಲದಲ್ಲಿ, ನಾನು ಒಣಗಿದ ಸೇಜ್ ಎಲೆಗಳನ್ನು ಹಾಕಿಕೊಳ್ಳುತ್ತೇನೆ. ಯಾರಾದರೂ ಭೇಟಿ ಕೊಟ್ಟಾಗ, ಇದು ಯಾವ ದಿನ ಅಥವಾ ಡೇಟ್ ಎಷ್ಟು ಎಂದು ಕೇಳಲು ಯಾರಾದರೂ ನೆರೆಹೊರೆಯವರು ಬಂದಾಗಲೂ, ನಾನು ಅವರಿಗೆ ಟೀ ಕುಡಿಯಲು ಹೇಳುತ್ತೇನೆ. ಟೀ ಕುಡಿಯಲು ಕೊಡುವುದು ಮರ್ಹಬ ಎಂದು ಹೇಳಿದಂತೆಯೇ.

ಅವರು ಒಮ್ಮೆ ಪ್ಯಾಲೆಸ್ತೀನ್ ಒಂದಲ್ಲಾ ಒಂದು ದಿನ ನಾಳೆ (TOMORROW) ಸ್ವತಂತ್ರವಾಗುತ್ತದೆ ಅಂದರು. ನಾಳೆ ಯಾವಾಗ ಬರತ್ತೆ? ಸ್ವಾತಂತ್ರ್ಯ ಅಂದರೆ? ಅದು ಎಷ್ಟು ದಿನ ಉಳಿಯತ್ತೆ?

U

ಅವತ್ತು ಮಳೆ ಬರುತ್ತಿರಲಿಲ್ಲ, ಹೀಗಿದ್ದರೂ ನಾನು ನನ್ನ ಕೊಡೆ (UMBRELLA) ತೆಗೆದುಕೊಂಡಿದ್ದೆ. ಯಾವಾಗ ಒಂದು ಎಫ್-16 ಪಟ್ಟಣದ ಮೇಲೆ ಹಾರಿತೋ ನಾನು ಕೊಡೆಯನ್ನು ಬಿಚ್ಚಿ ಅಡಗಿಕೊಂಡೆ. ಮಕ್ಕಳು ನನ್ನನ್ನು ಜೋಕರ್ ಎಂದುಕೊಂಡರು.

ಆಗಸ್ಟ್ 2014ರಲ್ಲಿ, ಇಸ್ರೇಲ್ ನನ್ನ ವಿಶ್ವವಿದ್ಯಾಲಯದ (UNIVERSITY) ಆಡಳಿತ ಕಟ್ಟಡದ ಮೇಲೆ ಬಾಂಬ್ ಹಾಕಿತು. ಇಂಗ್ಲಿಷ್ ವಿಭಾಗ ಅವಶೇಷಗಳಾಗಿ ಬದಲಾಯಿತು. ನನ್ನ ಪದವಿ ಪ್ರಧಾನ ಸಮಾರಂಭವನ್ನು ಮುಂದೂಡಲಾಯಿತು. ಮೃತಪಟ್ಟವರ ಕುಟುಂಬದವರು ಅದರಲ್ಲಿ ಭಾಗವಹಿಸಿದರು, ಪದವಿ ಪ್ರಮಾಣಪತ್ರ ಪಡೆಯಲು ಅಲ್ಲ, ಬದಲಿಗೆ ತಮ್ಮ ಮಗುವಿನ ಫೋಟೋವನ್ನೂ ಪಡೆಯಲು.

V

ನಾವು ಕೇಂಬ್ರಿಜ್ ಇಂದ ಸಿರಕ್ಯೂಸ್‌ಗೆ ವಾಸಕ್ಕೆ ಹೋದಾಗ, U-Haul ಕಂಪನಿಯ ವ್ಯಾನ್ (VAN)ನ ಕಿಟಕಿಯಿಂದ ಹೊರಗೆ ನೋಡಿದೆ. ಅಮೆರಿಕ ಎಷ್ಟು ದೊಡ್ಡ ದೇಶ ಅಂದುಕೊಂಡೆ. ಜಿಯೋನಿಸ್ಟ್‌ಗಳು ಯಾಕೆ ಪ್ಯಾಲೆಸ್ತೀನ್‌ಅನ್ನು ಆಕ್ರಮಿಸಿಕೊಂಡರು ಮತ್ತೆ ಯಾಕೆ ಅಲ್ಲಿ ನೆಲೆಗಳನ್ನು ಕಟ್ಟಿಕೊಂಡರು ಮತ್ತು ಗಾಜಾ ಹಾಗೂ ಪಶ್ಚಿಮ ದಂಡೆಯಲ್ಲಿ ಯಾಕೆ ನಮ್ಮನ್ನು ಕೊಂದರು? ಅವರು ಯಾಕೆ ಅಮೆರಿಕದಲ್ಲಿ, ಇಲ್ಲಿ ವಾಸಿಸುವುದಿಲ್ಲ? ನಾವೇಕೆ ಇಲ್ಲಿಗೆ ಬಂದು ಬದುಕಲು ಆಗುವುದಿಲ್ಲ ಅಥವಾ ಕೆಲಸ ಮಾಡುವ ಹಾಗಿಲ್ಲ? ನನ್ನ ಗೆಳೆಯ ಇದನ್ನು ಕೇಳಿಸಿಕೊಂಡ. ಅವನು ಐರ್ಲ್ಯಾಂಡ್‌ನವನು. ನಾವಿಬ್ಬರೂ ಲಿವರ್ ಪೂಲ್ ಫುಟ್‌ಬಾಲ್ ಕ್ಲಬ್‌ಅನ್ನು ಇಷ್ಟ ಪಡುತ್ತಿದ್ದೆವು.

ಗಾಜಾದಲ್ಲಿ, ಸ್ಫೋಟಗೊಳ್ಳದ ಟ್ಯಾಂಕ್ ಶೆಲ್‌ನ ಖಾಲಿ ಜಾಗವನ್ನು ಹೂಕುಂಡದಂತೆ (VASE) ಬಳಸಿಕೊಂಡು ವ್ಯಕ್ತಿಯೊಬ್ಬ ಗುಲಾಬಿ ಗಿಡ ನೆಡುತ್ತಿರುವುದನ್ನು ನೋಡಬಹುದು.

W

ಒಂದು ದಿನ, ನಾವು ನಮ್ಮ ಮನೆಯಲ್ಲಿ ಮಲಗಿದ್ದೆವು. ಹತ್ತಿರದ ತೋಟದಲ್ಲಿ ಬೆಳಗ್ಗೆ 6 ಗಂಟೆಗೆ ಬಾಂಬೊಂದು ಬಿತ್ತು, ನಮ್ಮನ್ನು ಶಾಲೆಗೆ ಬೇಗನೆ ಎಬ್ಬಿಸುವ ಅಲಾರಾಂ ಗಡಿಯಾರದಂತೆ (WAKING).

2014ರ ಆಗಸ್ಟ್‌ನಲ್ಲಿ, ಇಸ್ರೇಲಿ ದಾಳಿಯ 51 ದಿನಗಳ ನಂತರ, ನನ್ನ ರೂಮನ್ನು ತೊರೆಯುವುದಕ್ಕೂ ಮುಂಚೆ ಅಲ್ಲಿದ್ದಕ್ಕಿಂತ ಹೆಚ್ಚು ಕಿಟಕಿಗಳು (WINDOWS) ಈಗ ಇದ್ದವು, ಮುಚ್ಚಲಾಗದ ಕಿಟಕಿಗಳು. ಚಳಿಗಾಲ (WINTER) ನಮಗೆ ದುರ್ಗಮವಾಗಿತ್ತು.

X

ಜನವರಿ 2009ರಲ್ಲಿ ನನಗೆ ಗಾಯವಾದಾಗ, ನನಗೆ 16 ವರ್ಷ, ನನ್ನನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು ಮತ್ತು ಮೊದಲ ಬಾರಿಗೆ ಎಕ್ಸ್-ರೆ (X-rayed) ತೆಗೆಯಲಾಯಿತು. ನನ್ನ ದೇಹದಲ್ಲಿ ಎರಡು ಕಡೆ ಬಾಂಬಿನ ಚೂರುಗಳಿದ್ದವು. ಒಂದು ನನ್ನ ಕತ್ತಿನಲ್ಲಿ, ಮತ್ತೊಂದು ಹಣೆಯಲ್ಲಿ. ಏಳು ತಿಂಗಳ ನಂತರ, ಅವನ್ನು ತೆಗೆದುಹಾಕಲು ನಾನು ನನ್ನ ಮೊದಲ ಸರ್ಜರಿಗೆ ಒಳಗಾದೆ. ನಾನಿನ್ನೂ ಮಗುವಾಗಿದ್ದೆ.

ಕ್ರಿಸ್‌ಮಸ್‌ಗೆ, ಗೆಳೆಯನೊಬ್ಬ ಮಕ್ಕಳಿಗೆ ಕ್ಸೈಲೋಪೋನ್ (XYLOPHONE) ಒಂದನ್ನು ಕೊಟ್ಟ. ಅದಕ್ಕೆ ಒಂದು ಚಿಕ್ಕ ಮರದ ಕೋಲಿತ್ತು. ಕ್ಸೈಲೋಪೋನ್‌ನ ಬಾರ್‌ಗಳು ವಿವಿಧ ಉದ್ದದಲ್ಲಿದ್ದವು ಮತ್ತು ಬಣ್ಣಗಳಲ್ಲಿ, ಕೆಂಪು, ಹಳದಿ, ಹಸಿರು, ನೀಲಿ, ನೇರಳೆ ಮತ್ತು ಬಿಳಿ. ಗಾಜಾದಲ್ಲಿನ ಅಜ್ಜ-ಅಜ್ಜಿಯರಿಗೆ ಮಕ್ಕಳು ಅದನ್ನು ತೋರಿಸಿದರು, ಮಕ್ಕಳು ಮುಖದಲ್ಲಿ ಮಂದಹಾಸ ಕಂಡು ಅವರ ಕಣ್ಣುಗಳು ಕುಣಿದಾಡಿದವು.

Y

ನನ್ನ ಮಗಳ ಹೆಸರು ಯಾಫ್ಫಾ (YAFFA). ಅವಳು ಮಾತನಾಡಿದಾಗ ನಾನು ನನ್ನ ಕಿವಿಯನ್ನು ಅವಳ ಬಾಯಿಯ ಹತ್ತಿರ ಇಡುತ್ತೇನೆ, ಮತ್ತು ನನಗೆ ಯಾಫ್ಫಾ ಸಮುದ್ರ ಕೇಳಿಸುತ್ತದೆ, ದಡಕ್ಕೆ ಅಪ್ಪಳಿಸುತ್ತಿರುವ ಅಲೆಗಳ ಶಬ್ದ. ನಾನು ಅವಳ ಕಣ್ಣುಗಳನ್ನು ನೋಡುತ್ತೇನೆ ಮತ್ತು ನಾನಾಗ ಮರಳಿನಲ್ಲಿ ಅಚ್ಚು ಒತ್ತಿರುವ ನನ್ನ ತಾತ ಅಜ್ಜಿಯರ ಹೆಜ್ಜೆಗಳನ್ನು ಕಾಣುತ್ತೇನೆ.

ನೀನು (YOU) ಗಾಜಾ ಹೇಗೆ ತೊರೆದು ಬಂದೆ? ನೀನು ವಾಪಸ್ ಹೋಗುವ ಪ್ಲಾನ್ ಇದೆಯಾ? ನೀನು ಯುಎಸ್‌ನಲ್ಲಿಯೇ ಉಳಿಯಬೇಕು. ನೀನು ಗಾಜಾಗೆ ವಾಪಸ್ ಹೋಗುವ ಬಗ್ಗೆ ಚಿಂತಿಸಬಾರದು. ಜನರು ನನಗೆ ಹೇಳುವ ಸಂಗತಿಗಳು.

Z

ನಾನು ಐದನೇ ತರಗತಿಯಲ್ಲಿ ಇರುವಾಗ, ನಮ್ಮ ವಿಜ್ಞಾನ ಟೀಚರ್ ನಾನು ಜೂಗೆ (ZOO) ಭೇಟಿ ಕೊಡಬೇಕೆಂದು ಹೇಳಿದ್ದರು, ಪ್ರಾಣಿಗಳನ್ನು ನೋಡಲು, ಅವುಗಳ ಶಬ್ದವನ್ನು ಕೇಳಿಸಿಕೊಳ್ಳಲು, ಅವು ಹೇಗೆ ನಡೆಯುತ್ತವೆ ಮತ್ತು ಮಲಗುತ್ತವೆ ಎಂಬುದನ್ನು ವೀಕ್ಷಿಸಲು. ನಾನು ಅಲ್ಲಿಗೆ ಹೋದಾಗ, ಅವಕ್ಕೆ ತುಂಬಾ ಬೋರಾಗಿತ್ತು. ನನ್ನ ಕಡೆಗೆ ಬೆನ್ನು ತಿರುಗಿಸಿದವು. ಪಂಜರದ ಪ್ರದೇಶದಲ್ಲಿ ಅವು ಪಂಜರಗಳಲ್ಲಿ ಬದುಕಿದ್ದವು.

ನಾವು ಬಹುತೇಕ ಅಂಕಿತ ನಾಮಗಳು ಮುಂದೆ ಜೀರೋ (ZERO) article ಬಳಸುತ್ತೇವೆ. (a, the, an ಬೇಕಾಗಿಲ್ಲ.) ನನ್ನ ಹೆಸರಾಗಲಿ, ನನ್ನ ದೇಶದ ಹೆಸರಾಗಲಿ, ಅದಕ್ಕೆ ಮುಂಚಿತವಾಗಿ ಒಂದು ಹೆಚ್ಚುವರಿ ಜೀರೋ ಇದೆ, ವಿದೇಶಗಳಿಗೆ ಕಾಲ್ ಮಾಡುವಾಗ ಇರುವಂತೆ. ಆದರೆ ನಮ್ಮನ್ನು ಸಮುದ್ರದ ತಳಕ್ಕೆ ಎಸೆಯಲಾಗಿದೆ, ನಾನು ಏನು ಹೇಳುತ್ತಿದ್ದೇನೆ ಅರ್ಥವಾಯಿತೆ?

ಕನ್ನಡಕ್ಕೆ: ಗುರುಪ್ರಸಾದ್ ಡಿ.ಎನ್

ಮೊಸಾಬ್ ಅಬು ತೋಹಾ

ಮೊಸಾಬ್ ಅಬು ತೋಹಾ
ಪ್ಯಾಲೆಸ್ತೀನಿ ಕವಿ ಮತ್ತು ಗಾಜಾ ಪಟ್ಟಿಯಲ್ಲಿ ಗ್ರಂಥಪಾಲಕ. ಮೇಲಿನ ಪದ್ಯವನ್ನು ಅವರ ’ಥಿಂಗ್ಸ್ ಯು ಮೆ ಫೈಂಡ್ ಹಿಡನ್ ಇನ್ ಮೈ ಇಯರ್’ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ತಾಯಿಯೊಬ್ಬಳು ತನ್ನ ಮಗುವಿಗೆ ಅಮಾನುಷವಾಗಿ ಥಳಿಸಿದ್ದಾಳೆ ಎನ್ನಲಾದ ವಿಡಿಯೋ ಕರ್ನಾಟಕದ್ದಲ್ಲ

0
ಕಳೆದ ಕೆಲ ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ತಾಯಿಯೋರ್ವಳು ತನ್ನ ಮಗನಿಗೆ ನಿರ್ಧಯವಾಗಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಒಂದು ನಿಮಿಷ ಮೂವತ್ತು ಸೆಕೆಂಡ್‌ನ ವಿಡಿಯೋದಲ್ಲಿ ತಾಯಿ ತನ್ನ ಮಗನ ಎದೆಯ ಮೇಲೆ ಕುಳಿತು...