HomeUncategorizedಕರ್ಣನ್ ಸಿನಿಮಾ ವಿಮರ್ಶೆ-2; ದೃಶ್ಯರೂಪಕಗಳೊಂದಿಗೆ ಕಾವ್ಯಾತ್ಮಕವಾಗಿರುವ ಪ್ರತಿರೋಧದ ಕಥೆ

ಕರ್ಣನ್ ಸಿನಿಮಾ ವಿಮರ್ಶೆ-2; ದೃಶ್ಯರೂಪಕಗಳೊಂದಿಗೆ ಕಾವ್ಯಾತ್ಮಕವಾಗಿರುವ ಪ್ರತಿರೋಧದ ಕಥೆ

- Advertisement -
- Advertisement -

ಕಲೆ, ಸಾಹಿತ್ಯ ಎನ್ನುವುದು ಆಯಾ ಕಾಲಘಟ್ಟದ ಜ್ವಲಂತ ಸಮಸ್ಯೆಗಳನ್ನು ಪ್ರತಿನಿಧಿಸುವಂತಿರಬೇಕು ಎನ್ನುತ್ತಾನೆ ರಷ್ಯಾದ ರಂಗಕರ್ಮಿ ಸ್ತಾನಿಸ್ಲಾವ್ಸ್ಕಿ. ಈ ನೆಲೆಯಲ್ಲಿ, ಆರಂಭದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದ ತಮಿಳಿನ ‘ಕರ್ಣನ್’ ಸಿನಿಮಾ ಯಶಸ್ವಿಯಾಗಿದೆ.

ಯುವ ನಿರ್ದೇಶಕ ಮಾರಿ ಸೆಲ್ವರಾಜ್ ನಿರ್ದೇಶನದ ಎರಡನೇ ಸಿನಿಮಾ ಇದು. ತಮ್ಮ ಮೊದಲ ಸಿನಿಮಾ ‘ಪರಿಯೇರುಮ್ ಪೆರುಮಾಳ್’ ಮೂಲಕ ತಮಿಳು ಮಾತ್ರವಲ್ಲದೇ ಇಡೀ ಭಾರತೀಯ ಸಿನಿಮಾ ರಂಗದಲ್ಲೇ ಒಂದು ರೀತಿಯ ಸಂಚಲನವನ್ನುಂಟುಮಾಡಿದ್ದರು. ಅಂಬೇಡ್ಕರ್‌ವಾದವನ್ನು ಮೈಗೂಡಿಸಿಕೊಂಡಿರುವ ಮಾರಿ ತಮ್ಮ ಮೊದಲನೇ ಚಿತ್ರದಲ್ಲಿಯೇ ಅದನ್ನು ನಿರೂಪಿಸಿದ್ದರು. ಈಗ ಭಾರತದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಎಲ್ಲಿದೆ ಎನ್ನುವ ಜಾಣ ಕುರುಡರಿಗೆ ಜಾತಿಯ ಬದಲಾದ ಕರಾಳ ಸ್ವರೂಪವನ್ನು ಎತ್ತಿತೋರಿಸುವಲ್ಲಿ ಯಶಸ್ವಿಯಾಗಿದ್ದರು. ಇದನ್ನು ಹೊಸ ಚಿತ್ರದಲ್ಲಿ ವಿಭಿನ್ನ ಸ್ತರದಲ್ಲಿ ಮುಂದುವರೆಸಿದ್ದಾರೆ. ‘ಕರ್ಣನ್’ ಸಿನಿಮಾ ಜಾತಿ ದೌರ್ಜನ್ಯದ ಕರಾಳತೆಯನ್ನು ದಿಟ್ಟವಾಗಿ ಬಿಚ್ಚಿಡುತ್ತದೆ. ಸಿನಿಮಾದ ಉದ್ದಕ್ಕೂ ಯಾವ ಜಾತಿಗಳ ಹೆಸರನ್ನೂ ಹೇಳದೇ, ಅದರೆ ಜಾತಿ ವ್ಯವಸ್ಥೆಯ ತಾರತಮ್ಯವನ್ನು, ಕ್ರೌರ್ಯವನ್ನು, ಶೋಷಕರ ಹಿಂಸೆಯನ್ನು ನೋಡುಗರ ಮನಸ್ಸಿಗೆ ನಾಟುವಂತೆ ದಾಟಿಸಿರುವುದು ನಿರ್ದೇಶಕನ ಜಾಣ್ಮೆ. ಸಿನಿಮಾದ ಉದ್ದಗಲಕ್ಕೆ ನಿರ್ದೇಶನ ಮಾತ್ರವಲ್ಲದೇ ಚಿತ್ರಕಥೆ, ಸಂಗೀತ, ಸಿನಿಮಾಟೋಗ್ರಫಿ, ಹಾಡುಗಳಿಗೆ ಸಾಹಿತ್ಯ, ಕಲಾ ನಿರ್ದೇಶನ, ನೃತ್ಯ ಸಂಯೋಜನೆ, ಪಾತ್ರವರ್ಗ ಆಯ್ಕೆ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಶ್ರಮ ಮತ್ತು ಕುಸುರಿ ಕಾಣುತ್ತದೆ. ಇಂತಹ ವಿಷಯಾಧಾರಿತ ಚಿತ್ರವನ್ನು ನಿರ್ಮಿಸಿರುವ ಕಲೈಪ್ಪುಲಿ ಎಸ್ ದಾನು ಕೂಡ ಸಂವೇದನಾಶೀಲತೆ ಮೆರೆದಿದ್ದಾರೆ.

ಭಾರತೀಯ ಸಿನಿಮಾದ ಸಿದ್ಧ ಮಾದರಿಯನ್ನು ಒಡೆದವರಲ್ಲಿ ಮಾರಿ ಸೆಲ್ವರಾಜ್ ಕೂಡ ಒಬ್ಬರು. ಮೊದಲ ಚಿತ್ರದಿಂದಲೂ ಪ್ರಯೋಗಕ್ಕೆ ಒಡ್ಡಿಕೊಂಡವರು. ಇನ್ನು ಕರ್ಣನ್ ಚಿತ್ರದಲ್ಲಿ ಸುಮಾರು 500 ಕಲಾವಿದರಿದ್ದು, 6-8 ಕಲಾವಿದರನ್ನು ಬಿಟ್ಟರೆ ಉಳಿದ ಸುಮಾರು 490 ಕಲಾವಿದರೆಲ್ಲರೂ ಹೊಸಬರು. ಇವರನ್ನು ತನ್ನ ಕಥೆಯ ಓಘಕ್ಕೆ ಒಗ್ಗಿಸಿಕೊಂಡಿರುವ ನಿರ್ದೇಶಕನಲ್ಲಿ ಹೊಸತನದ ಚೈತನ್ಯವಿದೆ ಮತ್ತು ಈ ಎಲ್ಲ ಹೊಸ ನಟರ ಸಹಜ ಅಭಿನಯ ಸಿನಿಮಾವನ್ನು ನೈಜತೆಯೆಡೆಗೆ ಸಾಗಿಸಿದೆ.

ಮುಖ್ಯ ರಸ್ತೆಯಿಂದ ದೂರವಿರುವ ಪೊಡಿಯಾಂಗುಳಂನ ಜನರು ಸಮಾಜದ ಮುಖ್ಯವಾಹಿನಿಯಿಂದಲೂ ಹೊರಗುಳಿದಿದ್ದಾರೆ. ಅಥವಾ ಅವರನ್ನು ಊರಿನಿಂದ ಹೊರಗಿಡಲಾಗಿದೆ. ಇವರು ಬಸ್ ಹತ್ತಬೇಕಾದರೆ ಕಿಲೋಮೀಟರ್‌ಗಟ್ಟಲೇ ನಡೆದುಬರಬೇಕು. ಹಾಗೆ ಬಂದರೂ ಅಲ್ಲಿ ಬಸ್ ನಿಲ್ದಾಣವಿಲ್ಲ. ಹಾಗಾಗಿ ಅಲ್ಲಿ ಬಸ್ ನಿಲ್ಲುವದಿಲ್ಲ. ಹೀಗಿರುವಾಗ ಪಕ್ಕದ ಮೇಲೂರಿನ ಬಸ್ ನಿಲ್ದಾಣಕ್ಕೆ ಬಹುದೂರ ನಡೆದುಬರಬೇಕು. ಆದರೆ ಅಲ್ಲಿನ ಮೇಲ್ವರ್ಗದವರು ಇವರ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತಿರುತ್ತಾರೆ. ಜೊತೆಗೆ ಪೊಡಿಯಾಂಗುಳಂನಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವುದನ್ನು ಪರೋಕ್ಷವಾಗಿ ತಡೆಯುತ್ತಿರುತ್ತಾರೆ. ಇದರ ಹಿಂದಿನ ಉದ್ದೇಶ, ಆ ಊರಿನ ಜನರು ಈಗಾಗಲೇ ಎದೆಯೆತ್ತಿ ಮಾತನಾಡುತ್ತಿದ್ದಾರೆ; ಇನ್ನು ಬಸ್ ಸೌಲಭ್ಯ ಸಿಕ್ಕಿದರೆ ನಮ್ಮ ಸಮಕ್ಕೆ ನಿಲ್ಲುತ್ತಾರೆ ಎಂಬುದು! ಹೀಗಾಗಲು ಬಿಡಬಾರದು ಎನ್ನುವುದು ಪಕ್ಕದ ಊರಿನವರ ಶೋಷಕ ಸಮುದಾಯಕ್ಕೆ ಸೇರಿದವರ ಮನಸ್ಥಿತಿ ಮತ್ತು ಕುತಂತ್ರ. ಹಲವು ವರ್ಷಗಳಿಂದ ಇದನ್ನು ಅನುಭವಿಸಿಕೊಂಡು ಬಂದ ಪೊಡಿಯಾಂಗುಳಂನ ಹಿರಿಯರು ಇದು ತಮ್ಮ ಹಣೆಬರಹ ಎಂದು ಅನುಭವಿಸುತ್ತಿರುತ್ತಾರೆ. ಆದರೆ ಅಲ್ಲಿನ ಯುವಕರಿಗೆ ಈ ಸಂಕೋಲೆಗಳಿಂದ ಹೊರಬರಬೇಕು ಎನ್ನುವ ಹಂಬಲ. ಅನ್ಯಾಯಗಳನ್ನು ಸಹಿಸಿಕೊಳ್ಳದೆ ಪ್ರತಿಭಟಿಸುವ ಮತ್ತು ಈ ಯುವಕರ ಗುಂಪಿಗೆ ಸ್ಫೂರ್ತಿ ನೀಡುವಂತೆ ನಾಯಕತ್ವ ವಹಿಸುವವನೇ ಕರ್ಣನ್. ಬಸ್ ನಿಲ್ಲಿಸದ ಕಾರಣಕ್ಕೆ ಫಿಟ್ಸ್ (ಮೂರ್ಛೆರೋಗ) ಬಾಧಿತ ತನ್ನ ತಂಗಿಯನ್ನು ಬದುಕಿಸಿಕೊಳ್ಳಲಾಗದ ಕರ್ಣನ್ ಒಳಗೊಳಗೇ ಕುದಿಯುತ್ತಿರುತ್ತಾನೆ. ಆದರೆ ಕಾಡು ಕಡಿದು, ಆ ಸೌದೆಯನ್ನು ಬೇಯಿಸಿ ಇದ್ದಿಲು ಮಾಡುವ ಕೆಲಸವನ್ನು ನೆಚ್ಚಿಕೊಂಡಿರುವ ಊರಿನವರಿಗೆ ತಮ್ಮಲ್ಲಿ ಒಬ್ಬರಾದರೂ ಸರ್ಕಾರಿ ಕೆಲಸಕ್ಕೆ ಹೋಗಲಿ ಎನ್ನುವ ಹಂಬಲ. ಜೊತೆಗೆ ನೆರೆಯೂರಿನವರ ಭಯ. ಹಾಗಾಗಿ ಆ ಊರಿನ ಹಿರಿಯರು ಯಾವುದೇ ಗಲಭೆಗಳಿಗೆ ಎಡೆಮಾಡಿಕೊಡದಂತೆ ಈ ಯುವಕರನ್ನು ತಡೆಯುತ್ತಿರುತ್ತಾರೆ. ಈ ಕಟ್ಟಳೆಯನ್ನು ಒಂದು ಸಂದರ್ಭದಲ್ಲಿ ಮೀರುವ ಯುವಕರು ಬಸ್ ಒಂದನ್ನು ನುಚ್ಚುನೂರು ಮಾಡುತ್ತಾರೆ. ಅಲ್ಲಿಂದ ಅಸಲಿ ಕಥೆ ಆರಂಭ. ತನ್ನೂರಿನವರಿಗಾಗಿ ತನಗೆ ಸಿಕ್ಕಿದ ಸಿಆರ್‌ಪಿಎಫ್ ಕೆಲಸವನ್ನು ತೊರೆಯುವ ಕಥಾನಾಯಕ ನಿಜಕ್ಕೂ ಕರ್ಣನೆ. ಮೇಲ್ವರ್ಗದ ಊರಿನವರ ಪಿತೂರಿ ಮತ್ತು ಪ್ರಭುತ್ವ-ಅಧಿಕಾರಶಾಹಿಗಳ ದಬ್ಬಾಳಿಕೆ ಒಂದುಗೂಡಿ ಇಡೀ ಊರನ್ನೇ ನಾಶಮಾಡಲು ಪಣತೊಟ್ಟಿದೆ. ಇದರಿಂದ ಹಳ್ಳಿಗರು ಹೇಗೆ ಪಾರಾಗುತ್ತಾರೆ ಎನ್ನುವುದು ಚಿತ್ರದ ಉಳಿದ ಕಥೆ.

ಮೇಲುನೋಟಕ್ಕೆ ಸಿನಿಮಾ ಕಥೆ ಸಾಮಾನ್ಯ ಎಳೆಯನ್ನು ಹೊಂದಿದ್ದರೂ ಸಹ ಅಲ್ಲಿನ ಪಾತ್ರಗಳು ಮಾತನಾಡುವ ವಿಷಯ ಗಾಢವಾದ ಬೇರೆಯದೇ ಕಥೆಯೊಂದನ್ನು ಹೇಳುತ್ತದೆ. “ನಾವು ಬಸ್‌ಅನ್ನು ಪುಡಿ ಮಾಡಿದ್ದಕ್ಕೆ ಅವರು ನಮ್ಮ ಮೇಲೆ ಈ ರೀತಿ ದೌರ್ಜನ್ಯ ಮಾಡುತ್ತಿಲ್ಲ. ನಾವು ಪ್ರಶ್ನಿಸುತ್ತಿರುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ, ಅವರ ಮುಂದೆಯೇ ನಾವು ತಲೆಗೆ ಮುಂಡಾಸು ಕಟ್ಟಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ, ನಾವು ಬದಲಾಯಿಸಿಕೊಂಡಿರುವ ಹೆಸರು ಅವರ ಕಣ್ಣು ಕುಕ್ಕುತ್ತಿದೆ; ಹಾಗಾಗಿ ನಮ್ಮ ಮೇಲೆ ಈ ರೀತಿಯ ದೌರ್ಜನ್ಯ ಮಾಡುತ್ತಿದ್ದಾರೆ” ಎನ್ನುವ ಸಂಭಾಷಣೆಗಳು ಸಿನಿಮಾದ ಸಾರವನ್ನು ಹೇಳುತ್ತದೆ. ಮೇಲ್ವರ್ಗದವರ ಕಾಲಿಗೆ ಕೆಳವರ್ಗದವರು ಬೀಳುವುದನ್ನು ವಿರೋಧಿಸುವ ಕರ್ಣನ್, ತನ್ನೂರಿನ ಜನರನ್ನೇ ಒಗ್ಗೂಡಿಸಿ, ವಾಸ್ತವದ ಅರಿವು ಮೂಡಿಸಿ ಹೋರಾಟಕ್ಕೆ ಸಜ್ಜಾಗುವುದು ಎಲ್ಲೆ ಮೀರಿದ ಜಾತಿ ದೌರ್ಜನ್ಯದ ವಿರುದ್ಧ ಬೇಕಿರುವ ಪ್ರತಿರೋಧದ ಬಗ್ಗೆ ನಮ್ಮ ಚಿಂತನೆಗಳನ್ನು ಕೆರಳಿಸಿ ಪ್ರಚೋದಿಸುತ್ತದೆ.

ಮೇಲ್ಜಾತಿ ಜನಗಳು ನೇರವಾಗಿ ಇವರ ಮೇಲೆ ಎರಗದಿದ್ದರೂ ಪ್ರಭುತ್ವ-ಅಧಿಕಾರಶಾಹಿತ್ವದ ಸಹಾಯದೊಂದಿಗೆ ಏನೆಲ್ಲಾ ಮಾಡಬಹುದು ಎಂಬುದನ್ನು ಸಿನಿಮಾದಲ್ಲಿ ಸಮರ್ಥವಾಗಿ ಹಿಡಿಯಲಾಗಿದೆ. ಪೊಲೀಸರು ಮತ್ತು ಜಿಲ್ಲಾಧಿಕಾರಿಯನ್ನು ಛೂ ಬಿಡುವ ಮೇಲ್ವರ್ಗದವರು ನಿಂತು ಆಟ ನೋಡುತ್ತಿರುತ್ತಾರೆ. ಇದು ಈ ಚಿತ್ರದ ವಿಶೇಷವೆಂದರೂ ಅತಿಶಯೋಕ್ತಿಯಾಗಲಾರದು. ಏಕೆಂದರೆ ಈ ಹಿಂದಿನ ದಲಿತ ಸಂವೇದನೆಯ ಚಿತ್ರಗಳಲ್ಲಿ ಎರಡು ಸಮುದಾಯಗಳ ನಡುವಿನ ಸಂಘರ್ಷವನ್ನು ನೇರವಾಗಿ ತರಲಾಗುತ್ತಿತ್ತು. ಮಾರಿ ಸೆಲ್ವರಾಜ್ ಒಂದು ಹೆಜ್ಜೆ ಮುಂದೆ ಹೋಗಿ ಜಾತಿ ದೌರ್ಜನ್ಯವನ್ನು ಪೋಷಿಸುವ ಪ್ರಭುತ್ವದ ವ್ಯವಸ್ಥೆಗೂ ಕಥೆಯನ್ನು ವಿಸ್ತರಿಸುತ್ತಾರೆ.

ಕಥೆ ಹೊಸೆಯುವುದರಲ್ಲಷ್ಟೇ ಅಲ್ಲದೆ ಹಲವು ವಿಭಾಗಗಳಲ್ಲಿ ಹಾಕಿರುವ ಶ್ರಮ ಎದ್ದು ಕಾಣುತ್ತದೆ. ಚಿತ್ರಕ್ಕಾಗಿ 100 ಮನೆಗಳುಳ್ಳ ಒಂದು ಗ್ರಾಮವನ್ನೇ ನಿರ್ಮಿಸಿರುವ ನಿರ್ದೇಶಕ, ಕಥೆಗೆ ಬೇಕಾದ ಹಾಗೆ ಕಾಲಘಟ್ಟ (1997) ಮತ್ತು ಅಂದಿನ ಸ್ಥಿತಿಗತಿಯನ್ನು ಕಣ್ಣಿಗೆ ಕಟ್ಟುವಂತೆ ತೆರೆಯ ಮೇಲೆ ಮೂಡಿಸಿದ್ದಾರೆ. ತಿರುನಲ್ವೇಲಿಯ ಭಾಷೆ, ಸೊಗಡು, ಉಡುಗೆ ತೊಡುಗೆ, ಸಂಸ್ಕೃತಿ-ಸಂಪ್ರದಾಯ ಎಲ್ಲವನ್ನೂ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮದ ಪರಿಸರವನ್ನು ಕಟ್ಟಿಕೊಟ್ಟಿರುವ ರೀತಿ ಅನನ್ಯ. ಇದಕ್ಕೆ ಸಿನಿಮಾಟೋಗ್ರಾಫರ್ ತೇನಿ ಈಶ್ವರ್ ಅವರ ಕೆಲಸವೂ ಶ್ಲಾಘನೀಯ. ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ತುಂಬಾ ಸೂಕ್ಷ್ಮವಾಗಿ ಹಾಡುಗಳ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಾದೇಶಿಕ ಸೊಗಡನ್ನು ಹಾಸಿ ಹೊದ್ದಿರುವ 4 ಹಾಡುಗಳು ಸಿನಿಮಾ ಬಿಡುಗಡೆಗೆ ಮೊದಲೇ ಸಾಕಷ್ಟು ಹಿಟ್ ಆಗಿದ್ದವು. ಪ್ರತಿಯೊಂದು ಹಾಡಿನಲ್ಲೂ ವಿಭಿನ್ನತೆಯಿದೆ. ಜೊತೆಗೆ ಮಿಕ್ಸಿಂಗ್ ಕೂಡ ತುಂಬಾ ಸ್ಪಷ್ಟವಾಗಿತ್ತು. ಹಿನ್ನೆಲೆ ಸಂಗೀತವೂ ಕಥೆಯ ಜೀವನಾಡಿಯಾಗಿ ಕೆಲಸ ಮಾಡಿದ್ದು, ಮಾರಿ ಸೆಲ್ವರಾಜ್ ಮತ್ತು ಯುಗಭಾರದಿಯವರ ಸಾಹಿತ್ಯ ಇನ್ನಷ್ಟು ಬಲ ತುಂಬಿದೆ. ‘ಕಂಡಾ ವರಚೊಲ್ಲುಂಗ’ ಹಾಡಿನಲ್ಲಿ ಕರ್ಣನ್ ಪಾತ್ರವನ್ನು ಕಟ್ಟಿಕೊಟ್ಟಿದ್ದರೆ, ‘ಮಂಜಾಣತ್ತಿ ಪುರಾಣಂ’ ಹಾಡಿನ ಮೂಲಕ ಸಮುದಾಯದ ಸೊಗಡನ್ನು ಕಟ್ಟಿಕೊಡಲಾಗಿದೆ. ‘ತಟ್ಟಾನ್ ತಟ್ಟಾನ್’ ಹಾಡಿನಲ್ಲಿ ಪ್ರೀತಿ, ಪ್ರಕೃತಿ ಸೌಂದರ್ಯವನ್ನು ಸಿನಿಮಾದ ಮೂಡ್‌ಗೆ ಹೊಂದಿಸಿ ರೂಪಿಸಲಾಗಿದೆ. ಇನ್ನು ‘ಉಟ್ರಾದೀಂಗ ಯಪ್ಪೋವ್’ ರ‍್ಯಾಪ್ ಹಾಡನ್ನು ಬಿಡಿಯಾಗಿ ಕೇಳಿದಾಗ ಚಿತ್ರಕ್ಕೆ ಹೊಂದಿಕೊಳ್ಳುವುದಿಲ್ಲ ಎನಿಸುತ್ತದೆ. ಆದರೆ ಕೊರಿಯೋಗ್ರಾಫರ್ ಕೈಚಳಕದಿಂದಾಗಿ ಈ ಹಾಡು ವಿಭಿನ್ನವಾಗಿ ಚಿತ್ರಕ್ಕೆ ಹೊಂದಿಕೊಂಡಿದೆ. ಧನುಷ್, ಲಾಲ್, ಯೋಗಿ ಬಾಬು, ರಜೀಶಾ, ಗೌರಿ, ನಟರಾಜನ್, ಜಿಎಂ ಕುಮಾರ್ ಮುಂತಾದವರೆಲ್ಲರೂ ತಮ್ಮ ಅದ್ಭುತ ನಟನೆಯಿಂದ ಪಾತ್ರಗಳನ್ನು ಜೀವಿಸಿದ್ದಾರೆ.

ಕರ್ಣನ್ ಶೀರ್ಷಿಕೆ ಘೋಷಣೆ ಆದಾಗಲಿಂದಲೂ ಕುತೂಹಲ ಹುಟ್ಟಿಸಿತ್ತು. ಸಿನಿಮಾ ಕಥೆಗೂ ಮಹಾಭಾರತಕ್ಕೂ ಸಂಬಂಧವಿರಬಹುದೇ ಎಂಬ ಸಂದೇಹಗಳನ್ನೂ! ಸಿನಿಮಾ ಪೌರಾಣಿಕವಲ್ಲದಿದ್ದರೂ ಇಲ್ಲಿನ ಪಾತ್ರಗಳು ಮಹಾಭಾರತದ ಪಾತ್ರಗಳ ಛಾಯೆಯನ್ನು ಹೊಂದಿದೆ. ಅನ್ಯಾಯದ ವಿರುದ್ಧ ಸಿಡಿಯುವ ಕರ್ಣನ್ ಪಾತ್ರಕ್ಕೆ ಬೆಂಬಲವಾಗಿ ನಿಲ್ಲುವವನು ಊರ ಮುಖಂಡ ದುರ್ಯೋಧನ. ಕರ್ಣನನ್ನು ಪ್ರೀತಿಸುವವಳು ದ್ರೌಪದಿ. ಎರಡು ಊರುಗಳ ನಡುವೆ ಬಂದು ಗಲಭೆಗೆ ಕಾರಣವಾಗುವ ಪೊಲೀಸ್ ಅಧಿಕಾರಿ ಕಣ್ಣಬಿರಾನ್ (ತಮಿಳಿನಲ್ಲಿ ಕೃಷ್ಣನನ್ನು ಕಣ್ಣ ಎಂದು ಕರೆಯುತ್ತಾರೆ), ಅಭಿಮನ್ಯು ಮುಂತಾದ ಪಾತ್ರಗಳು ಮಹಾಭಾರತವನ್ನು ನೆನಪಿಸುತ್ತವೆ. ಇದು ಪಾತ್ರಗಳ ವಿಷಯವಾದರೆ, ಚಿತ್ರಕಥೆಯಲ್ಲಿ ಅತ್ಯದ್ಭುತ ರೂಪಕಗಳ ಮೂಲಕ ದೃಶ್ಯ ಹೆಣೆಯುವ ಮಾರಿ ಸೆಲ್ವರಾಜ್ ಸಿನಿಮಾವನ್ನು ಒಂದು ಕಾವ್ಯವನ್ನಾಗಿಸಿದ್ದಾರೆ. ಕತ್ತೆಯ ಕಾಲುಗಳನ್ನು ಕಟ್ಟಿರುವುದು, ತಲೆಯಿಲ್ಲದ ದೇವರ ವಿಗ್ರಹ, ಚಿತ್ರದ ನಡುವೆ ಆಗಾಗ ಬಂದು ಹೋಗುವ ಮುಖವಾಡ ಹಾಕಿರುವ ಬಾಲಕಿ, ಖಡ್ಗ, ಮೀನು, ಆನೆ, ಹಂದಿ, ಹದ್ದು, ಕೋಳಿ ಮುಂತಾದವುಗಳೆಲ್ಲವೂ ಸಿನಿಮಾದ ಅರ್ಥ ವಿಸ್ತರಣೆಯನ್ನು ಹೆಚ್ಚಿಸಿವೆ. ತಳಸಮುದಾಯದವರು ಹೆಚ್ಚೆಂದರೆ ಮಿಲಿಟರಿ ಅಥವಾ ಕಾಸ್ಟೆಬಲ್ ವೃತ್ತಿಯನ್ನೇ ಇಂದಿಗೂ ಸರ್ಕಾರಿ ಕೆಲಸ ಎಂದುಕೊಂಡಿದ್ದಾರೆ. ತಳಸಮುದಾಯವದರು ಈ ಕೆಲಸಕ್ಕೆ ಹೇಗೆಲ್ಲಾ ಹಂಬಲಿಸುತ್ತಿದ್ದಾರೆ ಎಂಬ ಎಳೆಯೂ ಕಾಡುವಂತೆ ಮೂಡಿರುವುದು ವಿಶೇಷ.

ಇನ್ನೂ ಏನೋ ಇರಬೇಕಿತ್ತು ಎನ್ನುವ ಅಂಶಗಳಲ್ಲಿ, ಪೊಡಿಯಾಂಗುಳಂ ಗ್ರಾಮಸ್ಥರ ವೃತ್ತಿಯ ಬಗ್ಗೆ ಇನ್ನಷ್ಟು ಸ್ಪಷ್ಟನೆ ಕೊಡಬೇಕಿತ್ತು ಎಂಬುದು ಒಂದು. ಅವರ ಕೆಲಸದ ಪರಿಸರವನ್ನು ಇನ್ನಷ್ಟು ವಿವರಗಳಲ್ಲಿ ಕಟ್ಟಿಕೊಡಬಹುದಿತ್ತು. ನಾಯಕ ನಟಿಯ ಪಾತ್ರವನ್ನೂ ಇನ್ನಷ್ಟು ಸಶಕ್ತವಾಗಿ ಬರೆಯಬಹುದಿತ್ತು ಎಂಬುದು ಮತ್ತೊಂದು. ಹೀಗೆ ಕೆಲವು ಸಣ್ಣಪುಟ್ಟ ಕೊರತೆಗಳನ್ನು ಬಿಟ್ಟರೆ ‘ಕರ್ಣನ್’ ಒಂದು ಉತ್ತಮ ಸಿನಿಮಾ ಎನ್ನುವುದರಲ್ಲಿ ಸಂದೇಹವಿಲ್ಲ.

ಕೊನೆಯದಾಗಿ, ಮಾರಿ ಸೆಲ್ವರಾಜ್ ಅವರ ಮೊದಲ ಚಿತ್ರ ಪರಿಯೇರು ಪೆರುಮಾಳ್ ಸಿನಿಮಾಕ್ಕಿಂತ ಮೊದಲೇ ಈ ಕರ್ಣನ್ ಕಥೆ ಹುಟ್ಟಿಕೊಂಡಿದ್ದು ಎಂದು ನಿರ್ದೇಶಕರೇ ಒಂದೆಡೆ ಹೇಳುತ್ತಾರೆ. ಆದರೆ ಕರ್ಣನ್ ಸಿನಿಮಾದಲ್ಲಿನ ಪ್ರತಿರೋಧಕ್ಕೂ ಪರಿಯೇರುಂ ಪೆರುಮಾಳ್ ಸಿನಿಮಾದಲ್ಲಿನ ಪ್ರತಿರೋಧಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕರ್ಣನ್ ಕಥೆಯಲ್ಲಿಯನ ಪ್ರತಿರೋಧದಿಂದ ಪರಿಯೇರುಂ ಪೆರುಮಾಳ್ ಕಥೆಗೆ ನಿರ್ದೇಶಕನ ಜರ್ನಿ ಮತ್ತು ಮಾಗುವಿಕೆ ಎದ್ದು ಕಾಣುತ್ತದೆ. ಅಥವಾ ಇತಿಹಾಸ ಮತ್ತು ಪ್ರಸಕ್ತದ ನಡುವೆ ತೊಯ್ದಾಡುವ ಮನಸ್ಸಿನ ಸೃಜನಶೀಲ ಶೋಧ ಮತ್ತು ಪ್ರತಿರೋಧ ಕೂಡ ಇದಾಗಿರಬಹುದು. ಏನೇ ಆದರೂ ದಲಿತ ಸಂವೇದನೆ ಮತ್ತು ಅದರ ಪ್ರತಿರೋಧದ ನೆಲೆಗಟ್ಟುಗಳು ಹೀಗೆ ಹೆಚ್ಚೆಚ್ಚು ದೃಶ್ಯರೂಪದಲ್ಲಿ ಮೂಡಿದಷ್ಟು ಸಂವೇದನಾಶೀಲ ಸಮಾಜದ ಕಡೆ ಚಲಿಸಲು ಮೆಟ್ಟಿಲು ಕಟ್ಟಿದಂತೆ!

  • ಪ್ರತಾಪ್ ಹುಣಸೂರು

ಇದನ್ನೂ ಓದಿ: ‘ಕರ್ಣನ್’ ಸಿನಿಮಾ ವಿಮರ್ಶೆ; ಘನತೆಗಾಗಿ ತಳ ಸಮುದಾಯದ ಪ್ರತಿರೋಧದ ಸೃಜನಶೀಲ  ಅಭಿವ್ಯಕ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...