PC: [email protected]

ರಾಜ್ಯದಲ್ಲಿ ಅಕಾಲಿಕ ಮಳೆಗೆ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದ್ದು, ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಜಮೀನುಗಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ, ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ.

ನಿರಂತರ ಸುರಿದ ಮಳೆಯಿಂದಾಗಿ ರೈತರ ಬೆಳೆಯಲ್ಲಿ ಶೇ. 60 ರಷ್ಟು ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಸಾಲಮಾಡಿ ರೈತರು ಕಲ್ಕತ್ತಾದಿಂದ ಹೂಗಿಡಗಳನ್ನು ತರಿಸಿ ಹೊಲದಲ್ಲಿ ಹಾಕಿದ್ದರು. ಮಳೆಯಿಂದಾಗಿ ಬೆಳೆಪೂರ್ತಿ ಕೊಚ್ಚಿಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

’ಕಳೆದ 25 ದಿನಗಳಿಂದ ಮಳೆಯಾಗುತ್ತಿದ್ದು ಬೆಳೆ ನಾಶವಾಗಿದೆ. ಸರ್ಕಾರ ಈಗಾಗಲೇ ಬೆಳೆನಷ್ಟದ ಸಮೀಕ್ಷೆ ಮಾಡಿಸಬೇಕಿತ್ತು, ಜಿಲ್ಲಾ ಉಸ್ತುವಾರಿ ಸಚಿವರು, ಮಂತ್ರಿಗಳು ರೈತರ ಸಂಕಷ್ಟ ಆಲಿಸಬೇಕಿತ್ತು. ಇದ್ಯಾವುದನ್ನೂ ಸರ್ಕಾರ ಮಾಡಿಲ್ಲ’ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಳೆ ಹಾನಿ ಸಮೀಕ್ಷೆ ಮಾಡಿಸಿ ತಕ್ಷಣ ಪರಿಹಾರ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ


ಇನ್ನೂ ತಡಮಾಡದೆ ರಾಜ್ಯ ಸರ್ಕಾರ ತಕ್ಷಣ ಬೆಳೆನಷ್ಟದ ಸಮೀಕ್ಷೆ ಮಾಡಿ, ರೈತರಿಗೆ ಪರಿಹಾರದ ಹಣ ನೀಡಬೇಕು ಎಂದು ಮುಖ್ಯಮಂತ್ರಿಯವರನ್ನು ಒತ್ತಾಯಿಸಿರುವ ಸಿದ್ದರಾಮಯ್ಯ,2015-16 ರಲ್ಲಿ ರಾಯಚೂರು, ಸಿಂಧನೂರು ಭಾಗದಲ್ಲಿ ಆಲಿಕಲ್ಲು ಮಳೆಯಿಂದಾಗಿ ಭತ್ತದ ಬೆಳೆನಷ್ಟವಾಗಿತ್ತು, ಆಗ ನಮ್ಮ ಸರ್ಕಾರ ಪ್ರತೀ ಹೆಕ್ಟೇರ್ ಗೆ ರೂ. 25,000 ಪರಿಹಾರ ನೀಡಿತ್ತು. ಎನ್.ಡಿ.ಆರ್.ಎಫ್ ನಾರ್ಮ್ಸ್ ನಲ್ಲಿ ಸೂಚಿಸಿರುವುದಕ್ಕಿಂತ ಹೆಚ್ಚು ಪರಿಹಾರ ನಾವು ನೀಡಿದ್ದೆವು ಎಂದು ಹೇಳಿದ್ದಾರೆ.

’ಈಗ ಬಿಜೆಪಿಯವರು ನಷ್ಟದಲ್ಲಿರುವ ರೈತರಿಗೆ ಗರಿಷ್ಠ ಪರಿಹಾರ ನೀಡಬೇಕು. ತಮ್ಮದು ರೈತರ ಸರ್ಕಾರ ಎಂದು ಹೇಳಿ ರೈತರಿಗೆ ಟೋಪಿ ಹಾಕುವ ಕೆಲಸ ಮಾಡಬಾರದು.ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡುತ್ತೇನೆ’ ಎಂದಿದ್ದಾರೆ.

ಕಳೆದ ನವೆಂಬರ್‌ 11 ರಂದು ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದರು. ರಾಜ್ಯದ ಹಲವೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಡಿಕೆ, ಭತ್ತ, ಜೋಳ, ಕಾಫಿ, ಕರಿಮೆಣಸು ಬೆಳೆದ ರೈತರು ಬೆಳೆನಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಗಳನ್ನು ಈ ಕೂಡಲೆ ಸಮೀಕ್ಷೆ ಮಾಡಿಸಿ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು.


ಇದನ್ನೂ ಓದಿ: ರೈತರ ಹೋರಾಟವನ್ನು ಇಡೀ ದೇಶ ಇಂದು ಹೆಮ್ಮೆಯಿಂದ ಸ್ಮರಿಸುತ್ತಿದೆ: ಸಿದ್ದರಾಮಯ್ಯ

LEAVE A REPLY

Please enter your comment!
Please enter your name here