Homeಕರ್ನಾಟಕಕಸಾಪ ನೂತನ ಅಧ್ಯಕ್ಷರ ಶುದ್ಧ ಕನ್ನಡ ವ್ಯಾಮೋಹ ಮತ್ತು ಭಾಷೆಯ ಜಾಯಮಾನ

ಕಸಾಪ ನೂತನ ಅಧ್ಯಕ್ಷರ ಶುದ್ಧ ಕನ್ನಡ ವ್ಯಾಮೋಹ ಮತ್ತು ಭಾಷೆಯ ಜಾಯಮಾನ

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾದ ಮಹೇಶ್ ಜೋಶಿಯವರು ಇತ್ತೀಚೆಗೆ ಧಾರಾವಾಡದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ, “ನಮ್ಮಲ್ಲಿ ಪ್ರದೇಶಗಳಿಗೆ ಅನುಗುಣವಾಗಿ ಉಚ್ಚಾರಣೆ ಬದಲಾಗುತ್ತವೆ. ಆದರೆ ಶುದ್ಧ ಹಾಗೂ ಸ್ಪಷ್ಟ ಕನ್ನಡವನ್ನು ನಾವು ಉಳಿಸಬೇಕು. ಇಡೀ ಜಗತ್ತಿನಲ್ಲಿ ಸಂಸ್ಕೃತ ಹಾಗೂ ಕನ್ನಡ ಭಾಷೆಗಳು ಮಾತ್ರ ಅತ್ಯಂತ ಶುದ್ಧ ಎಂಬ ಕೀರ್ತಿಗೆ ಪಾತ್ರವಾಗಿವೆ. ನಾವು ಅದರ ವೈಶಿಷ್ಟ್ಯವನ್ನು ಕಾಪಾಡಬೇಕಿದೆ” ಎಂದಿದ್ದಾರೆ.

ಮುಂದುವರಿದು, “ರಾಜಧಾನಿ ಬೆಂಗಳೂರಿನಲ್ಲಿ ‘ಅ’ಕಾರ ಹಾಗೂ ‘ಹ’ಕಾರ ವ್ಯತ್ಯಾಸ ತಿಳಿದ ಕನ್ನಡಿಗರು, ಶುದ್ಧ ಕನ್ನಡ ಕನ್ನಡ ಗೊತ್ತಿರುವವರ ಸಂಖ್ಯೆ ಶೇ 26ರಷ್ಟು ಮಾತ್ರ” ಎಂದು ಹೇಳಿರುವುದು ಕನ್ನಡಿಗರ ವಿರೋಧಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ‘ಹ’ ಎಂಬುದಿಲ್ಲ, ಅದು ಸಂಸ್ಕೃತದಿಂದ ಬಂದ ಪದ ಎಂಬ ಚರ್ಚೆಗಳಿವೆ. ಯಾವುದೇ ಭಾಷೆಯಲ್ಲಿ ಶುದ್ಧ, ಅಶುದ್ಧ ಎಂಬುದಿಲ್ಲ ಎಂದು ಭಾಷಾ ವಿಜ್ಞಾನಿಗಳು, ವಿಚಾರವಂತರು ಹೇಳುತ್ತಲೇ ಬಂದಿದ್ದಾರೆ.

ಜನಪದರ ಭಾಷಾ ಬಳಕೆಯನ್ನು ಅಲ್ಲಗಳೆದು ಶಿಷ್ಟ ಭಾಷೆಯನ್ನೇ ಶುದ್ಧ ಎಂದು ಪ್ರತಿಪಾದಿಸುವವರು ಮಾತ್ರ ಕನ್ನಡದಲ್ಲಿ ‘ಶುದ್ಧ, ಅಶುದ್ಧ’, ‘ಅ’ಕಾರ, ‘ಹ’ಕಾರಗಳ ಉಚ್ಚಾರಣೆ ಇತ್ಯಾದಿಗಳ ಮೇಲೆ ವಿವಾದ ಸೃಷ್ಟಿಸುವುದು ನಡೆಯುತ್ತಲೇ ಇದೆ.

ಕಳೆದ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯೂ ಇಂತಹದ್ದೇ ವಿವಾದಕ್ಕೆ ಕಾರಣವಾಗಿತ್ತು. ಈಗ ಕಸಾಪ ಅಧ್ಯಕ್ಷರು ಶುದ್ಧ ಕನ್ನಡದ ವರಸೆ ಶುರು ಮಾಡಿ, ಟೀಕೆಗೆ ಒಳಗಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ಆಯೋಜಿಸಿದ್ದಾಗ ಚಿಂತಕರು ‘ನಾನುಗೌರಿ.ಕಾಂ’ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಈ ಅಭಿಪ್ರಾಯಗಳು ಮಹೇಶ್‌ ಜೋಶಿಯವರ ವಿಚಾರಕ್ಕೂ ಅನ್ವಯವಾಗುತ್ತಿರುವುದರಿಂದ ಪರಿಷ್ಕರಿಸಿ ಮರು ಪ್ರಕಟಿಸಲಾಗುತ್ತಿದೆ.

‘ನಾನುಗೌರಿ.ಕಾಂ’ನೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್‌, ಭಾಷಾತಜ್ಞ ಡಾ.ರಂಗನಾಥ್‌ ಕಂಟನಕುಂಟೆ ಅವರು ಹಂಚಿಕೊಂಡ ವಿಚಾರಗಳು ಇಲ್ಲಿವೆ.


ಇದನ್ನೂ ಓದಿರಿ: ಬರಿದೇ ಬಾರಿಸದಿರು ತಂಬೂರಿ


ಕನ್ನಡದಲ್ಲಿ ಶೇ. 19ರಷ್ಟು ಪದಗಳು ಮಾತ್ರ ಕನ್ನಡದ್ದಾಗಿವೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಜೀವಂತ ಭಾಷೆಯೊಳಗೆ ಶುದ್ಧವಾದ ಭಾಷೆ ಎಂಬುದು ಯಾವುದೂ ಇಲ್ಲ. ಜಗತ್ತಿನ ಯಾವುದಾದರೂ ಭಾಷೆ ಮಡಿವಂತಿಕೆಯನ್ನು ಇಟ್ಟುಕೊಂಡರೆ ಆ ಭಾಷೆ ಸಾಯುತ್ತದೆ. ಅದಕ್ಕೆ ಬಹುದೊಡ್ಡ ಉದಾಹರಣೆ ಸಂಸ್ಕೃತ. ಅದು ಸತ್ತಿದೆ. ಸಂಸ್ಕೃತಕ್ಕೆ ಜೀವ ಕೊಡಲಿಕ್ಕೆ ಪ್ರಯತ್ನ ಪಟ್ಟರೂ ಅದು ಗ್ರಂಥಿಕವಾಗಿ ಉಳಿಯುತ್ತದೆ ಹೊರತು, ಮೌಖಿಕವಾಗಿ ಬಳಕೆಗೆ ಬರುವುದಿಲ್ಲ, ಬಳಕೆಗೆ ಬಂದಿದೆ ಎಂದು ಹೇಳುತ್ತಿದ್ದರೆ ಅದು ದೊಡ್ಡ ಸುಳ್ಳು.

ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಕನ್ನಡದಲ್ಲಿ ಇಂದು ಕನ್ನಡ ಶಬ್ದಗಳು ಉಳಿದಿರುವುದು ಶೇ. 19ರಷ್ಟು ಮಾತ್ರ. ಮಿಕ್ಕೆಲ್ಲವೂ ಅನ್ಯಭಾಷೆಯ ಶಬ್ದಗಳಾಗಿವೆ. ಹೇರಳವಾಗಿ ಸಂಸ್ಕೃತದಿಂದ ಕನ್ನಡ ಶಬ್ದಗಳನ್ನು ತೆಗೆದುಕೊಂಡಿದ್ದೇವೆ. ‘ಅನ್ನ’ ಕನ್ನಡ ಅಲ್ಲ, ‘ಸೂರ್ಯ’ ಕನ್ನಡ ಅಲ್ಲ, ‘ಚಂದ್ರ’ ಕನ್ನಡ ಅಲ್ಲ, ‘ಲೋಕ’ ಕನ್ನಡ ಅಲ್ಲ. ಇವೆಲ್ಲವೂ ಸಂಸ್ಕೃತದಿಂದ ಬಂದಿರುವ ಪದಗಳು. ‘ಸುಮಾರು’ ಎನ್ನುವ ಶಬ್ದವೂ ಕನ್ನಡ ಅಲ್ಲ. ‘ಸುಮಾರು’ ಎಂಬ ಶಬ್ದವನ್ನು ಫ್ರೆಂಚ್‌ನಿಂದ ತೆಗೆದುಕೊಳ್ಳಲಾಗಿದೆ. ಪೊಲೀಸ್ ಎಂಬ ಶಬ್ದಕ್ಕೆ ‘ಆರಕ್ಷಕ’ ಎಂದು ಬಳಸುತ್ತಾರೆ. ‘ಆರಕ್ಷಕ’ ಸಂಸ್ಕೃತ ಶಬ್ದ. ‘ಪೊಲೀಸ್‌’ ಇಂಗ್ಲಿಷ್‌ ಶಬ್ದ. ಕನ್ನಡಿಗರಿಗೆ ಗೊತ್ತಿರುವುದು ‘ಪೊಲೀಸ್‌’ ಹೊರತು, ‘ಆರಕ್ಷಕ’ ಅಲ್ಲ. ಕನ್ನಡಿಗರಿಗೆ ಗೊತ್ತಿರುವುದು ‘ಇಂಜಿನಿಯರ್‌ ’ಶಬ್ದವೇ ಹೊರತು, ‘ಅಭಿಯಂತರ’ ಅಲ್ಲ. ಆದ್ದರಿಂದ ‘ಇಂಜಿನಿಯರ್‌’, ‘ಪೊಲೀಸ್‌’, ‘ಕಾಲೇಜ್‌’ ಇಂತಹ ಶಬ್ದಗಳೆಲ್ಲವೂ ಕನ್ನಡವಾಗಿಬಿಟ್ಟಿವೆ. ಈ ಶಬ್ದಗಳಲ್ಲದ ಸಂಸ್ಕೃತ ಶಬ್ದಗಳು ಕನ್ನಡ ಆಗಿಲ್ಲ.

ಭಾಷೆ ನಿರಂತರ ಬದಲಾಗುವ ವಿದ್ಯಮಾನ: ಪ್ರೊ.ರಾಜೇಂದ್ರ ಚೆನ್ನಿ

ಭಾಷೆಯನ್ನು ಅಧ್ಯಯನ ಮಾಡುವ ಎಲ್ಲ ಭಾಷಾ ತಜ್ಞರಿಗೆ ಗೊತ್ತಿರುವ ಹಾಗೆ ಭಾಷೆ ಎನ್ನುವುದು ನಿರಂತರವಾಗಿರುವ ಬದಲಾಗುತ್ತಿರುವ, ಹೆಚ್ಚು ಕಡಿಮೆ ದಿನ ದಿನವೂ ಪರಿವರ್ತನೆಯಾಗುವ ಒಂದು ವಿದ್ಯಮಾನವಾಗಿದೆ. ಹೀಗಾಗಿ ಜಗತ್ತಿನ ಯಾವುದೇ ಭಾಷೆ (ಅದು ಗ್ರೀಕ್‌, ಲ್ಯಾಟೀನ್‌ ಥರದ ಕ್ಲಾಸಿಕಲ್‌ ಭಾಷೆಗಳಾಗಿರಬಹುದು ಅಥವಾ ಲಿಪಿ ಇಲ್ಲದೆ ಆಡುಮಾತಿನಲ್ಲಿರುವ ಭಾಷೆಯೇ ಆಗಿರಬಹುದು) ಯಾವಾಗಲೂ ಬದಲಾಗುತ್ತಿರುತ್ತವೆ, ಬೆಳೆಯುತ್ತಿರುತ್ತವೆ, ಅವುಗಳಲ್ಲಿ ಬೇರೆ ಬೇರೆ ಭಾಷೆಗಳಿಂದ, ಬೇರೆ ಬೇರೆ ಸಾಮಾಜಿಕ ಲೋಕಗಳಿಂದ ಹೊಸ ಶಬ್ದಗಳು, ಹೊಸ ಅಭಿವ್ಯಕ್ತಿಯ ಕ್ರಮಗಳು ಸೇರಿಕೊಳ್ಳುತ್ತಿರುತ್ತವೆ. ಇತಿಹಾಸ ಹೇಳುವಂತೆ ಯಾವುದೇ ಭಾಷೆ ಶುದ್ಧ ಭಾಷೆ ಅಲ್ಲವೇ ಅಲ್ಲ.

ಪ್ರೊ.ರಾಜೇಂದ್ರ ಚೆನ್ನಿ

ಶುದ್ಧ ಅನ್ನುವಂತಹದ್ದು, ಭಾಷೆ ಬೆಳೆದು, ಬಹಳ ವರ್ಷಗಳಾದ ಮೇಲೆ, ಕೆಲವು ಶಾಸ್ತ್ರಜ್ಞರು, ಪಂಡಿತರು ಸೇರಿಕೊಂಡು ಮಾಡಿದ್ದಾಗಿದೆ. ಇದು ಭಾಷೆಯ ಮೂಲ ಲಕ್ಷಣ ಅಲ್ಲ. ಶುದ್ಧ, ಅಶುದ್ಧ ಎನ್ನುವುದು ಶಾಸ್ತ್ರ ಮತ್ತು ವ್ಯಾಕರಣಗಳಿಂದ ಬರುವಂತಹ ಕೃತ್ತಿಮ ಚೌಕಟ್ಟು. ಯಾವುದೇ ಭಾಷೆಯಾದರೂ ಶುದ್ಧ, ಅಶುದ್ಧ ಎಂಬುದು ಚರ್ಚೆಗೆ ಬಂದರೆ ಸಮಾಜದಲ್ಲಿರುವ ಅಸಮಾನತೆ ಪ್ರವೇಶಿಸುತ್ತದೆ. ಇಂಗ್ಲಿಷ್‌ ಅನ್ನೇ ಉದಾಹರಣೆಯಾಗಿ ನೋಡುವುದಾದರೆ ಬಿಬಿಸಿಯಲ್ಲಿ ಕೇಳುವುದು, ಪುಸ್ತಕದಲ್ಲಿ ಓದುವುದು ಮಾತ್ರ ಇಂಗ್ಲಿಷ್‌ ಭಾಷೆ ಅಲ್ಲ. ಕನ್ನಡ ಭಾಷೆಯಲ್ಲಿರುವಂತೆಯೇ ಪ್ರಾದೇಶಿಕ ವೈವಿಧ್ಯಗಳಿವೆ. ಅಲ್ಲಿ ಬಡಜನರು ಮಾತನಾಡುವ ಕ್ರಮವೇ ಬೇರೆ, ಶ್ರೀಮಂತ, ಶಿಕ್ಷಿತ ಜನರು ಮಾತನಾಡುವ ಕ್ರಮವೇ ಬೇರೆ. ಅಶಿಕ್ಷಿತ, ಕೆಳವರ್ಗಗಳಲ್ಲಿನವರು, ಸಾಮಾನ್ಯರು ಬಳಸುವ ಭಾಷೆಯನ್ನು ಅಶುದ್ಧ ಎನ್ನುವಂತಹದ್ದು ಫ್ಯಾಸಿಸ್ಟ್‌ ಮನೋಭಾವ. ಇದನ್ನು ಯಾವಾಗಲೂ ವಿರೋಧಿಸಬೇಕು. ಸಂಸ್ಕೃತದಿಂದ ಬಂದಿರುವ ಪದಗಳೇ ಶುದ್ಧ ಕನ್ನಡ (ಅಚ್ಚ ಕನ್ನಡ), ನಮ್ಮ ಆಡುಮಾತಿನ ಭಾಷೆಯನ್ನು ಅಶುದ್ಧ ಕನ್ನಡ ಎನ್ನುವ ಕಡೆಗೆ ಇರುವ ಇವರು ಹೋಗುತ್ತಾರೆ ಅನಿಸುತ್ತದೆ.


ಇದನ್ನೂ ಓದಿರಿ: ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ!- ಎಚ್.ಡಿ.ಕುಮಾರಸ್ವಾಮಿ ಆಕ್ರೋಶ


ಭಾಷಾ ಜಾಯಮಾನದ ಅರಿವಿರಲಿ: ಬಂಜಗೆರೆ

ಜನ ಬಳಸುವ ಒಂದು ಭಾಷೆ ಇರುತ್ತದೆ. ಆ ಭಾಷೆ ಯಾವ್ಯಾವ ಶಬ್ದಗಳನ್ನು ತನ್ನೊಳಗೆ ಒಳಗೊಳ್ಳುತ್ತದೆಯೋ ಅದೆಲ್ಲವೂ ಕೂಡ ಬಳಸುತ್ತಾ ಬಳಸುತ್ತಾ ಭಾಷೆಯ ಜಾಯಮಾನಕ್ಕೆ ಬಂದು ಬಿಡುತ್ತವೆ. ಕೆಲವು ಅಕ್ಷರಸ್ಥರು ಕನ್ನಡಕ್ಕೆ ಕೃತಕವಾಗಿ ಇಂಗ್ಲಿಷ್ ಭಾಷೆಯ ಶಬ್ದಗಳನ್ನು ಸೇರಿಸುತ್ತಿರುತ್ತಾರೆ. ಅದು ಜನಸಾಮಾನ್ಯರ ಕ್ರಮ ಅಲ್ಲ. ಜನಸಾಮಾನ್ಯರು ಮಾತನಾಡುವಾಗ ಕೆಲವು ಉರ್ದು ಪದ, ಪಾರ್ಸಿ ಪದ, ಕೆಲವು ಇಂಗ್ಲಿಷ್ ಪದ ಸೇರಬಹುದು.

ಸಾಮಾನ್ಯವಾಗಿ ಎರವಲು ತೆಗೆದುಕೊಂಡಾಗ ಅವರು ಕನ್ನಡದ ಜಾಯಮಾನಕ್ಕೆ ಆ ಪದವನ್ನು ಒಗ್ಗಿಸಿಬಿಡುತ್ತಾರೆ. ತತ್ಸಮವೋ, ತದ್ಭವವೋ ಆಗಿಬಿಡುತ್ತದೆ. ಬಸ್ಸು, ಕಾರು ಇದಕ್ಕೆ ಉದಾಹರಣೆಗಳು. ಆದರೆ ಕೃತಕವಾಗಿ, ವಿಪರೀತ ಇಂಗ್ಲಿಷ್‌ ಪದಗಳನ್ನು ಸೇರಿಸಿ ಮಾತನಾಡುವುದು ಕನ್ನಡ ಜಾಯಮಾನವಲ್ಲ. ಈ ವಿವೇಕವನ್ನು ನಾವು ಇಟ್ಟುಕೊಳ್ಳಬೇಕು.

ಬಂಜಗೆರೆ ಜಯಪ್ರಕಾಶ್‌

ಸರಿ-ತಪ್ಪು ಇದೆ, ಶುದ್ಧ-ಅಶುದ್ಧ ಇಲ್ಲ: ಭಾಷಾತಜ್ಞ ರಂಗನಾಥ್‌ ಕಂಟನಕುಂಟೆ

ಭಾಷೆ ಒಳಗೆ ಶುದ್ಧ, ಅಶುದ್ಧ ಎಂಬುದು ತಪ್ಪು ಕಲ್ಪನೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಭಾಷೆಯಲ್ಲಿ ಸರಿ, ತಪ್ಪು ಎಂಬುದಿದೆ. ಉದಾಹರಣೆಗೆ ‘ತಿಮ್ಮ’ ಎಂಬುದನ್ನು ‘ತಮ್ಮ’ ಎಂದು ಬರೆಯಲು ಬರುವುದಿಲ್ಲ. ವ್ಯಾಕರಣದಲ್ಲಿ ಅದು ತಪ್ಪಾಗುತ್ತದೆ. ಶುದ್ಧ, ಅಶುದ್ಧ ಎಂದು ಬಂದಾಗ ಅಲ್ಪಪ್ರಾಣ, ಮಹಾಪ್ರಾಣದ ಪ್ರಶ್ನೆ ಬರುತ್ತದೆ. ‘ಶುದ್ಧ’ ಎಂದು ಕರೆಯಬೇಕಾ, ‘ಶುದ್ದ’ ಎಂದು ಕರೆಯಬೇಕಾ ಎಂಬ ಪ್ರಶ್ನೆ ಬರುತ್ತದೆ. ‘ಪ್ರಕಾಸ’ ಎಂದು ಕರೆಯಬೇಕಾ, ‘ಪ್ರಕಾಶ’ ಎಂದು ಕರೆಯಬೇಕಾ ಎಂಬ ಪ್ರಶ್ನೆ ಬರುತ್ತದೆ.

ರಂಗನಾಥ್ ಕಂಟನಕುಂಟೆ

ಕನ್ನಡದಲ್ಲಿ ‘ಪ್ರಕಾಸ,’ ‘ಪ್ರಕಾಶ’ ಎರಡೂ ಬಳಕೆಯಲ್ಲಿವೆ. ಮಳವಳ್ಳಿ, ಮಂಡ್ಯ ರಾಮನಗರ, ಚೆನ್ನಪಟ್ಟಣ ಈ ಭಾಗದಲ್ಲಿ ಪ್ರಕಾಸ, ರಮೇಸ ಎನ್ನುತ್ತಾರೆ. ಇದನ್ನು ತಪ್ಪು ಎಂದು ಹೇಳಲು ಬರಲ್ಲ. ಅದು ಪ್ರಾದೇಶಿಕ ಗುರುತು. ನಮ್ಮಲ್ಲಿ ತಿಳಿವಳಿಕೆ ಇಲ್ಲದವರು ‘ಪ್ರಕಾಸ’ ಎಂದರೆ ನಗುತ್ತಾರೆ. ಹೀಗಾಗಿ ಶುದ್ಧ, ಅಶುದ್ಧ ಎನ್ನಲು ಬರುವುದಿಲ್ಲ. ವ್ಯಾಕರಣ ಮೂಲ ನಿಯಮಗಳನ್ನು ಉಲ್ಲಂಘಿಸಲು ಆಗಲ್ಲ.

ಬಸ್ಸು, ರೈಲು, ಕಾರು, ಕಂಪ್ಯೂಟರ್ ಈ ರೀತಿ ಈ ಪದಗಳನ್ನು ಕನ್ನಡದ್ದಾಗಿಯೇ ಬಳಸುತ್ತೇವೆ. ಈ ರೀತಿ ಬಳಸುವುದರಿಂದ ಕನ್ನಡ ಕೆಟ್ಟು ಹೋಯಿತು ಎಂದು ಕೆಲವರು ಹೇಳುತ್ತಾರೆ. ಹಾಗೆ ಹೇಳಲು ಸಾಧ್ಯವಿಲ್ಲ. ಎಲ್ಲ ಕಾಲದಲ್ಲೂ, ಎಲ್ಲ ಭಾಷೆಯಲ್ಲೂ ಕೊಡುಕೊಳುಗೆ ನಡೆಯುತ್ತಲೇ ಇರುತ್ತದೆ. ಹಿಂದಿಯಲ್ಲಿರುವ ಶೇ. 75ರಷ್ಟು ಪದಗಳು ಸಂಸ್ಕೃತದ್ದಾಗಿವೆ. ಸಂಸ್ಕೃತದಲ್ಲಿರುವ ಪದಗಳು ಪಾಕೃತ, ಪಾಳಿ ಇತ್ಯಾದಿ ಭಾಷೆಗಳದ್ದು. ಇಂಗ್ಲಿಷ್‌ನಲ್ಲಿರುವ ಪದಗಳು ಹೆಚ್ಚಿನವು ಲ್ಯಾಟೀನ್‌, ಗ್ರೀಕ್‌ ಭಾಷೆಯದ್ದಾಗಿವೆ.

‘ಅ’ಕಾರ, ‘ಹ’ ಜಾರ ತಾರತಮ್ಯ ಸಂಸ್ಕೃತದ ಸೃಷ್ಟಿ

ಕಸಾಪ ಅಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿರುವ ‘ನಾವು ದ್ರಾವಿಡ ಕನ್ನಡಿಗರು’ ಚಳವಳಿಯ ಮುಖಂಡ ಹನಕೆರೆ ಅಭಿಗೌಡ ಅವರು, ” ಕನ್ನಡದಲ್ಲಿ ‘ಹ’ ಅನ್ನುವುದೆ ಇಲ್ಲ , ಇದನ್ನು ಕುತಂತ್ರ ಸಂಸ್ಕ್ರುತ ದವರು ತುರುಕಿದ್ದಾರೆ. ಕಾಲಕಾಲಕ್ಕೆ ನುಡಿ ಸುದಾರಣೆ ಯೆಸರಲ್ಲಿ ದ್ರಾವಿಡರ ನುಡಿ ಕನ್ನಡ ಓದಲು ಬರೆಯಲು ಕಶ್ಟವಾಗುವಂತೆ ಕುತಂತ್ರದಿಂದ ಸಂಸ್ಕ್ರುತ ಯೇರಲಾಗಿದೆ ತುರುಕಲಾಗಿದೆ. ಈಗಲೂ ನಡೆಯುತಿದೆ. ಅಲ್ಪಪ್ರಾಣ ಮಾಪ್ರಾಣ, ‘ಅ’ ಕಾರ , ‘ಹ’ ಕಾರ ಎಂಬ ತಾರತಮ್ಯ ಸ್ರುಶ್ಟಿಸಲಾಗಿದೆ. ಸಂಸ್ಕ್ರುತ ದ ಮೂಲ ಗುಣವೆ ತಾರತಮ್ಯ ಸ್ರುಶ್ಟಿಸುವುದು. ಕನ್ನಡದಲ್ಲಿರುವುದು 33 ಅಕ್ಶರಗಳು ಮಾತ್ರ (ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ. ಕ ಗ ಚ ಜ. ಟ ಡ ಣ. ತ ದ ನ. ಪ ಬ ಮ. ಯ ರ ಲ ವ ಶ ಸ ಳ). ನಮ್ಮ ಬರವಣಿಗೆಯಲ್ಲಿ ತಾರತಮ್ಯ ಬಿಟ್ಟು ಮತ್ತು ಸಾದ್ಯವಾದಶ್ಟು ಸಂಸ್ಕ್ರುತ ಯಿಂದಿ ಪದಗಳ ಬಿಟ್ಟು ಬರೆದಿದ್ದೇವೆ, ನೀವು ಇದೇ ರೀತಿ ಬರೆಯಿರಿ” ಎಂದು ತಿಳಿಸಿದ್ದಾರೆ. ಜೊತೆಗೆ ಮಹಾಪ್ರಾಣ ಬಳಕೆಯನ್ನು ಅವರು ತಮ್ಮ ಪೋಸ್ಟ್‌ನಲ್ಲಿ ಬಳಸುವುದನ್ನು ನಿಲ್ಲಿಸಿದ್ದಾರೆ.

ಹನಕೆರೆ ಅಭಿಗೌಡ

ಇದನ್ನೂ ಓದಿರಿ: ರಾಜ್ಯದ 10 ಸಾವಿರ ಖಾಸಗಿ ಶಾಲೆಗಳು ಮುಚ್ಚುವ ಹಂತದಲ್ಲಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...