Homeಮುಖಪುಟಹಗೆ ಸಾಧಿಸಿದ ನಿಮ್ಮ ಎದುರು, ಕೇರಳವ ನಾವು ಮತ್ತೆ ಕಟ್ಟುತ್ತೇವೆ

ಹಗೆ ಸಾಧಿಸಿದ ನಿಮ್ಮ ಎದುರು, ಕೇರಳವ ನಾವು ಮತ್ತೆ ಕಟ್ಟುತ್ತೇವೆ

- Advertisement -
- Advertisement -

ಪ್ರತೀ ಸಲ ಅಲ್ಲಿಗೆ ಹೋದಾಗ ನಾನು ಅಳುತ್ತಿದ್ದೆ, ಆಗೆಲ್ಲ ನನ್ನ ಜೊತೆ ಅಳುತ್ತಿದ್ದುದು ಆ ನನ್ನ ನದಿಯೊಂದೇ! ನನ್ನ ಕಣ್ಣೀರಿಗೆ ಕಣ್ಣೀರಾಗುತ್ತಿದ್ದ ಆ ನನ್ನ ನದಿಯೇ ಒಂದು ದಿನ ನನ್ನನ್ನು ಅಳಿಸಲಿದೆ ಎಂಬ ಕಲ್ಪನೆಯೇ ನನಗಿರಲಿಲ್ಲ. ಆದರೆ ಆಗಸ್ಟ್ 17ರ ರಾತ್ರಿ ನದಿ ನನ್ನ ಗೆಳೆಯನೊಬ್ಬನನ್ನು ತನ್ನೊಳಗೆ ಸೆಳೆದುಕೊಂಡಿತು. ನನಗೆ ಫೋನ್ ಮಾಡಿದ ಗೆಳೆಯ `ನದಿಯ ಮಟ್ಟ ಏರುತ್ತಿದೆ. ನಮ್ಮ ಮನೆ ಸುರಕ್ಷಿತವಾಗಿಲ್ಲ, ನಮ್ಮ ದೋಣಿಗಳು ಹೊರಗಿವೆ’ ಎಂದು ಹೇಳಿದ. ನನ್ನನ್ನು ನನ್ನನ್ನಾಗಿಸಿದ ಆ ನದಿಯೇ ನಮ್ಮ ಮನೆಯನ್ನು ಧ್ವಂಸ ಮಾಡಲಿದೆ ಎಂಬುದನ್ನು ನಂಬಲಾಗಲಿಲ್ಲ. ನಾನು ದೇವರನ್ನು ನಂಬೋದಿಲ್ಲ, ಆದರೆ ಬೆಂಗಳೂರಿನಲ್ಲಿ ಕುಳಿತು ನನ್ನ ಗೆಳತಿಯಾದ ನದಿಯಲ್ಲಿ ವಿನಂತಿಸಿಕೊಂಡೆ ‘ನಿನ್ನ ಮಡಿಲಲ್ಲಿ ಬೆಳೆದ ನಮ್ಮ ಜೀವಗಳನ್ನು ನೀನು ತೆಗೆದುಕೊಳ್ಳುವುದಿಲ್ಲ ಅಲ್ಲವೇ’ ಎಂದು.
ನಾವು ಕೇರಳಿಗರು ಯಾವುದೇ ವರ್ಗ ತಾರತಮ್ಯವಿಲ್ಲದೇ ಒಬ್ಬರಿಗೊಬ್ಬರು ಜೊತೆಯಾಗಿ ಬೆಳೆದವರು. ಎಲ್ಲರೂ ಜೊತೆಗೇ ದುಡಿದೆವು. ನಾನು ಬೆಂಗಳೂರಿನಲ್ಲಿ ಕೂತಿರುವಾಗ, ಮನೆ ಮುಳುಗುವ ಮಟ್ಟಕ್ಕೆ ನೀರು ನುಗ್ಗಿದ ನನ್ನ ಮನೆ ಸುತ್ತ ಪಹರೆ ಕಾಯುತ್ತಾ, ನನ್ನ ಅಮ್ಮನನ್ನು ರಕ್ಷಿಸಿದ ಅವನು ಹಿಂದುವೋ, ಮುಸ್ಲಿಮನೋ, ಕಾಂಗ್ರೆಸಿಗನೊ, ಬಿಜೆಪಿಯವನೊ, ಯಾವುದೂ ಆಗಿರಲಿಲ್ಲ, ಅವರೆಲ್ಲ ನನ್ನಂತೆಯೇ ನನ್ನ ತಾಯಿಯ ಮಕ್ಕಳಾಗಿದ್ದರು. ಇಂಥಾ ಮನುಷ್ಯ ಪ್ರೀತಿಯಿಂದಲೇ ಹುಟ್ಟಿಕೊಂಡದ್ದು ನನ್ನ ಕೇರಳ ರಾಜ್ಯ.
ಪ್ರಗತಿ ಎನ್ನುವ ಹೆಸರಿನಲ್ಲೇ ನಾವು ಸಾಕಷ್ಟು ತಪ್ಪು ಮಾಡಿದ್ದೇವೆ. ನಮ್ಮ ನದಿಗಳನ್ನು ಮಾರಬಹುದೆಂಬುದನ್ನು ಕಂಡುಕೊಂಡೆವು, ಆಮೇಲೆ ಮರಳನ್ನೂ ಮಾರಬಹುದೆಂಬುದು ತಿಳಿಯಿತು. ರಮಣೀಯ ಬೆಟ್ಟಗುಡ್ಡದ ತುದಿಗಳು ಲಕ್ಷಾಂತರ ಹಣ ತಂದುಕೊಡಬಲ್ಲವೆಂದು ಅರಿವಾಯಿತು. ಆನಂತರ ನಮ್ಮ ಗುಡ್ಡಗಳು ಬರೀ ಗ್ರಾನೈಟ್‍ನ ತುಣುಕುಗಳಂತೆ ಕಾಣಿಸಲಾರಂಭಿಸಿದವು. ಈ ಹಾದಿಯಲ್ಲಿ ನಮ್ಮ ಗಿರಿಗಳನ್ನು ಪ್ರೀತಿಸುವುದನ್ನೇ ಮರೆತುಬಿಟ್ಟೆವು. ಅಷ್ಟಾದರು ನಾವು ಮನುಷ್ಯರಾಗಿ ಪರಸ್ಪರ ಪ್ರೀತಿಸುವುದನ್ನು ಎಂದಿಗೂ ಮರೆಯಲಿಲ್ಲ.
ನಮ್ಮ ಕಡೆ ಹೀಗೊಂದು ಕಥೆಯಿದೆ. ಸಮುದ್ರವನ್ನೇ ಕಾಣದ ಹಳ್ಳಿಯೊಂದರಿಂದ ಒಬ್ಬನನ್ನು ಸಮುದ್ರ ನೋಡಿಬರಲು ಕಳುಹಿಸಿದರಂತೆ. ವಾಪಾಸಾದಾಗ ಅವನ ಸುತ್ತ ನೆರೆದ ಹಳ್ಳಿಗರು `ಹೇಗಿದೆ ಸಮುದ್ರ?’ ಎಂದು ಕೇಳಿದರಂತೆ. `ಸಮುದ್ರ ಸುಮಾರಾಗಿದೆ. ಆದರೆ ಇನ್ನೂ ಚೆನ್ನಾಗಿರಬಹುದಾಗಿತ್ತು’ ಎಂಬ ಉಪದೇಶ ಹೊಡೆದನಂತೆ. ಈಗ ಕೇರಳದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ರಾಜ್ಯದ ಹೊರಗಿನಿಂದ ಬಂದವರು ಮತ್ತು ಕೇಂದ್ರ ಸರ್ಕಾರದ ಅಭಿಪ್ರಾಯಗಳನ್ನು ಕೇಳಿ ಈ ಕಥೆ ನೆನಪಾಯಿತು.
ಆದರೆ, ಕೇರಳ ಈ ಪ್ರವಾಹಕ್ಕೆ ಹೇಗೆ ಸ್ಪಂದಿಸಿತು? ಅಲ್ಲಿ ಒಂದು ಸರಕಾರವಿದೆ, ವಿರೋಧಪಕ್ಷಗಳಿವೆ ಮತ್ತು ಆ ನೆಲದ ಜನರಿದ್ದಾರೆ. ಬಿಕ್ಕಟ್ಟು ಬಂದಾಗ ಇವರ್ಯಾರೂ ಭಿನ್ನಾಭಿಪ್ರಾಯ ಹುಡುಕಿ ಕೂರುವುದಿಲ್ಲ. ಪರಿಹಾರ ಕಾರ್ಯದ ನೇತೃತ್ವ ವಹಿಸಿಕೊಂಡ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರ ಬೆನ್ನಿಗೆ ನಿಂತರು. ಬಲಪಂಥೀಯರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಯಾವುದೇ ಬಿಕ್ಕಟ್ಟು ಬಂದಾಗ ಕೇಂದ್ರ ಸರಕಾರದ ಮೇಲೆಯೇ ರಾಜ್ಯಗಳು ಅವಲಂಬಿತವಾಗಬೇಕು, ಮುಖ್ಯವಾಗಿ ಮೋದಿ ನೇತೃತ್ವದದಲ್ಲೇ ರಕ್ಷಣಾ ಕಾರ್ಯಾಚರಣೆ ನಡೆದಂತೆ ಒಂದು ಖೊಟ್ಟಿ ಇಮೇಜು ಸೃಷ್ಟಿಯಾಗಬೇಕೆಂಬ ಅವರ ವಿಕೃತಿ ಅಲ್ಲಿ ಫಲಿಸಲಿಲ್ಲ. ಕೇರಳದ ಜನ ಸಂಕಷ್ಟದಲ್ಲಿರುವ ತಮ್ಮವರಿಗಾಗಿ ಮಿಡಿಯುವ ಕರ್ತವ್ಯದ ನಡುವೆ ಯಾರನ್ನೋ ಹೀರೊ ಮಾಡುವ ಕಾಲಹರಣಕ್ಕೆ ಕೈಹಾಕದೆ ಒಬ್ಬರಿಗೊಬ್ಬರು ಕೈಕೈ ಬೆಸೆದದ್ದನ್ನು ಸಹಿಸಿಕೊಳ್ಳದ ಮಂದಿ ಕೇರಳ ಜನರ ವಿರುದ್ಧ ವಿಷ ಉಗುಳುತ್ತಿದ್ದಾರೆ.
ರಕ್ಷಣಾ ಕಾರ್ಯಾಚರಣೆಗಾಗಿ ನೌಕಾಪಡೆ ಮತ್ತು ಸೇನೆಯನ್ನು ಕಳುಹಿಸಿ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪದೇಪದೇ ಕೇಳಿದರು. ಕೇರಳ ದುರಂತದಿಂದ ತಮಗೆ ಅಷ್ಟೇನು ಲಾಭವಿಲ್ಲ ಮತ್ತು ಅದಕ್ಕಿಂತ ಮುಖ್ಯವಾಗಿ ಅಲ್ಲಿನ ಸರ್ಕಾರದ ಮೇಲೆ ಕೆಟ್ಟ ಹೆಸರು ತರಲು ಒಳ್ಳೆ ಅವಕಾಶ ಎಂದು ಬಗೆದ ಬಲಪಂಥೀಯ ಸರಕಾರ ಮತ್ತು ಕೇರಳದ ಸಂಘಪರಿವಾರದವರು ಕೇರಳ ಸಿಎಂರ ಮನವಿಯನ್ನು ತಿರಸ್ಕರಿಸಿದರು.
ತಾವು ನೆರವು ನೀಡದೆಹೋದರೆ ಸಾವುಗಳ ಸಂಖ್ಯೆ ಸಾವಿರಕ್ಕೂ ದಾಟಿ, ಜನ ಆ ಸರ್ಕಾರದ ವಿರುದ್ಧ ದಂಗೆಯೇಳುತ್ತಾರೆ ಎಂಬುದವರ ಲೆಕ್ಕಾಚಾರವಾಗಿತ್ತು. ಆದರೆ ರಾಜ್ಯದ ಮೀನುಗಾರ ಸಮುದಾಯ ಕಾರ್ಯರೂಪಕ್ಕೆ ಬಂತು. ಕೇಂದ್ರದ ವಿಳಂಬ ನಿರೀಕ್ಷೆಯಲ್ಲಿ ಕಾಲ ದೂಡದೆ ತಮ್ಮ ದೋಣಿಗಳನ್ನೇ ಪ್ರವಾಹದ ನೀರಿಗಿಳಿಸಿ ಜನರ ರಕ್ಷಣೆಗೆ ಮುಂದಾದರು. ಇಲ್ಲದೇ ಹೋಗಿದ್ದರೆ ಸಾವಿರದ ಗಡಿಯನ್ನು ದಾಟಬಹುದಾಗಿದ್ದ ಸಾವಿನ ಸಂಖ್ಯೆ ಮುನ್ನೂರ ಆಸುಪಾಸಿಗೇ ಸೀಮಿತವಾಯ್ತು. ಆ ಜೀವಗಳ ಬಗ್ಗೆಯೂ ಅಪಾರ ನೋವಿದೆ.
17ನೇ ತಾರೀಕಿನ ರಾತ್ರಿ ನೀರಿನ ಮಟ್ಟ ಏರುತ್ತಿರುವಾಗ ನನ್ನ ಸ್ನೇಹಿತ ಅರವಿಂದಮ್ ಜೊತೆ ಫೋನಿನಲ್ಲಿ ಮಾತಾಡಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ‘ನಾನು ನಿಮ್ಮ ಮನೆಯೆದುರುಗಡೆಯೇ ಗಸ್ತು ತಿರುಗುತ್ತಿದ್ದೇನೆ. ನೀರಿನ ಮಟ್ಟ ಹೆಚ್ಚಿದಲ್ಲಿ ಅಮ್ಮನನ್ನು (ನನ್ನ ತಾಯಿ) ಸುರಕ್ಷಿತ ಜಾಗಕ್ಕೆ ಕೊಂಡೊಯ್ಯುತ್ತೇನೆ’ ಎಂದಿದ್ದ.
ಮಾರನೇಯ ದಿನ ನನ್ನ ಹಳ್ಳಿಯೊಂದಿಗೆ ಎಲ್ಲಾ ಸಂಪರ್ಕ ಕಡಿದುಬಿತ್ತು. ಗೆಳೆಯರೆಲ್ಲ ಸೇರಿಕೊಂಡು ನನ್ನ ಅಮ್ಮನನ್ನು ಸುರಕ್ಷಿತವಾಗಿರುವ ನನ್ನ ಚಿಕ್ಕಮ್ಮನ ಮನೆಗೆ ಕರೆದೊಯ್ದಿದ್ದಾರೆಂಬುದು ತಿಳಿದದ್ದು ಪೂರ್ತಿ ಒಂದು ದಿನದ ಪರದಾಟದ ನಂರವಷ್ಟೆ.
ಇಂಥಾ ಪರಿಸ್ಥಿತಿಯಲ್ಲಿ ನಾವೆಲ್ಲ ಒಟ್ಟಾಗಿದ್ದೇವೆ ಎಂದ ಮಾತ್ರಕ್ಕೆ ನಮ್ಮಿಂದ ಯಾವ ತಪ್ಪೂ ಆಗಿಲ್ಲ ಅಂತೇನಲ್ಲ. 2010ರಲ್ಲಿ ಆಗಿನ ಪರಿಸರ ಸಚಿವ ಜೈರಾಮ್ ರಮೇಶ್ ತಮಿಳುನಾಡಿನ ಕೊಟ್ಟಗಿರಿಯಲ್ಲಿ ಒಂದು ಸಭೆ ಕರೆದು ಕೇರಳದಿಂದ ಮಹಾರಾಷ್ಟ್ರಕ್ಕೆ ಹೋಗುವ 1500 ಕಿಲೋಮೀಟರ್ ವ್ಯಾಪ್ತಿಯ ಪಶ್ಚಿಮ ಘಟ್ಟಗಳ ಸಮೀಕ್ಷೆ ನಡೆಸಲು ಗಾಡ್ಗಿಳ್ ಸಮಿತಿ ರಚಿಸಿದರು. ಎಗ್ಗಿಲ್ಲದೆ ನಡೆಯುತ್ತಿರುವ ಕ್ವ್ಯಾರಿ ಉದ್ಯಮ ಆರ್ಥಿಕ ಅಸಮಾನತೆ ಸೃಷ್ಟಿಸುತ್ತಿರುವುದಲ್ಲದೆ ಘನಘೋರ ಪರಿಸರ ಬಿಕ್ಕಟ್ಟಿಗೂ ಕಾರಣವಾಗಲಿದೆ ಎಂದು ಆ ವರದಿ ಸಾರಿಹೇಳಿತು. ಅರಣ್ಯಗಳನ್ನು ಕತ್ತರಿಸುತ್ತ ಬೆಳೆಯಿತು ಲಾಭಕೋರ ಪ್ಲಾಂಟೇಷನ್ ಮುಂದೊಂದು ದಿನ ನಮ್ಮ ಗುಡ್ಡಗಾಡು ನೆಲದಲ್ಲು ಪ್ರವಾಹದ ತಂದೊಡ್ಡಬಹುದೆಂಬುದು ನಮಗೆ ಅರಿವಾಗಲೇ ಇಲ್ಲ. ಆಣೆಕಟ್ಟುಗಳೂ ಸೇರಿದಂತೆ ಆಧುನಿಕ ಅಭಿವೃದ್ಧಿ ಅಪಾಯವಾಗಬಹುದು ಎಂದು ಗಾಡ್ಗಿಲ್ ಸಮಿತಿ ಹೇಳಿತ್ತು. ಗುಡ್ಡಗಳು ಕೆಳಗೆ ಬೀಳುತ್ತಿರುವಾಗ ಜನರು ತಮ್ಮ ಮೊಬೈಲ್ ಫೋನ್‍ಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು!
ಈಗ ನನ್ನಲ್ಲಿ ಒಂದು ಪ್ರಶ್ನೆ ಹುಟ್ಟುತ್ತಿದೆ, ನನ್ನ ಎಲ್ಲಾ ಗಿರಿಗಳು ನೆಲಸಮವಾಗುವ ದಿನವನ್ನೂ ನಾನು ಕಾಣುವಂತಾಗುವುದೇ?
ಬಲಪಂಥೀಯ ಸರಕಾರಕ್ಕೆ ನಮ್ಮ ಮೇಲೆ ಯಾಕಿಷ್ಟು ಅಸಹನೆ. ನೌಕಾಪಡೆಯ ಪೈಲಟ್ ಆಗಿರುವ ನನ್ನ ಕಸಿನ್ ಒಬ್ಬ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸುತ್ತೇನೆ. ‘ಅಣ್ಣಾ, ಒಬ್ಬ ಆರ್ಮಿ ಪೈಲಟ್ ಆಗಿರುವುದಕ್ಕೆ ನನ್ನನ್ನು ನಾನು ಶಪಿಸುತ್ತಿದ್ದೇನೆ, ಏಕೆ ಗೊತ್ತಾ? ನಾನು ನನ್ನವರ ನೆರವಿಗೆ ಧಾವಿಸಬೇಕೆಂದು ತುದಿಗಾಲಲ್ಲಿದ್ದರು, ಅಲ್ಲಿಗೆ ಹೋಗುವ ಆದೇಶಕ್ಕಾಗಿ ಕಾಯುತ್ತಾ ಕೂರಬೇಕಾಗಿದೆ’!
ಈ ದೇಶದ ನಾಗರಿಕನಾಗಿ ನನಗೊಂದು ಪ್ರಶ್ನೆ ಕಾಡುತ್ತಿದೆ. ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಬೆಂಬಲವನ್ನು ನಿರಾಕರಿಸುವಂತಹ ಯಾವ ತಪ್ಪು ನಾವು ಮಾಡಿದ್ದೇವೆ? ಸೇನೆಯ ವಿಮಾನ ಹಾರಿಸಿ, ತನ್ನ ಜನರನ್ನು ರಕ್ಷಿಸುವ ಆಸೆಯಿಂದ ತುದಿಗಾಲಲಲ್ಲಿ ನಿಂತಿರುವ ಅವನಿಗೆ ಕೇಂದ್ರದಿಂದ ಯಾಕಿಲ್ಲ ಬೆಂಬಲ? ನಾವು ಎಂದೂ ಬಿಜೆಪಿ ಸರಕಾರವನ್ನು ಆಯ್ಕೆ ಮಾಡಲಿಲ್ಲ ಎನ್ನುವ ಕಾರಣದಿಂದಲೇ? ನೆನಪಿಡಿ ಇದೊಂದು ಪ್ರವಾಹ, ನಮ್ಮ ಇಂಟರ್‍ನೆಟ್ ಸಂಪರ್ಕ ಬಂದಕೂಡಲೇ ಅದೇ ಪ್ರವಾಹದಂತೇ ನಿಮ್ಮನ್ನು ಕೊಚ್ಚಿಕೊಂಡು ಹೋಗುತ್ತೇವೆ. ಈಗಾಗಲೇ ನಿಮ್ಮ ದುಷ್ಟ ಸಂಚನ್ನು ಟ್ರಾಲ್ ಮಾಡಲು ಶುರುಮಾಡಿದ್ದೇವೆ. ಮಲೆಯಾಲಿಗಳ ನಗುವನ್ನು ಕಿತ್ತುಕೊಳ್ಳಲು ನಿಮಗೆ ಸಾಧ್ಯವಿಲ್ಲ. ಯಾಕೆಂದರೆ ಅದು ಸೋದರತೆಯ ತಳಪಾಯದ ಮೇಲೆ ಹುಟ್ಟಿದ ನಗು.
20,000 ಕೋಟಿಗೂ ಹೆಚ್ಚು ಲುಕ್ಸಾನಾಗಿದ್ದರು ನಾವು ಕೇಂದ್ರಕ್ಕೆ ಕೇಳಿದ್ದು 2600 ಕೋಟಿ ರೂಪಾಯಿಗಳ ನೆರವನ್ನಷ್ಟೆ. ಆದರೆ ನೀವು ಘೋಷಿಸಿದ್ದು ಕೇವಲ 100 ಕೋಟಿ. ಟೀಕೆಗಳು ಹೆಚ್ಚಾದ ನಂತರ, ಸ್ವತಃ ಪ್ರಧಾನಿ ಮೋದಿಯ ಭೇಟಿ ನಷ್ಟವನ್ನು ಕಂಡ ನಂತರವೂ ಆ ಪರಿಹಾರವನ್ನು ಹೆಚ್ಚಿಸಿದ್ದು 500 ಕೋಟಿಗಷ್ಟೇ! ಇಂಥಾ ಬಿಕ್ಕಟ್ಟಿನಲ್ಲೂ ತಾನು ನೀಡಿದ ಅಕ್ಕಿಗೆ ಅದರ ಬೆಲೆ ಕೊಟ್ಟೇ ತೀರಬೇಕೆಂದು ಆದೇಶ ಹೊರಡಿಸಿದಿರಿ. ಯು.ಎ.ಇ ನಮಗೆ 700 ಕೋಟಿಗಳ ಸಹಾಯಧನ ನೀಡುವುದಾಗಿ ಘೋಷಿಸಿತು. ಆದರೆ ಹೊರದೇಶದಿಂದ ಬರುವ ಸಹಾಯಧನದ ಪ್ರತೀ ರೂಪಾಯಿಗೂ ಅತ್ಯಂತ ಹೆಚ್ಚಿನ ತೆರಿಗೆ ವಿಧಿಸುವ ಹುನ್ನಾರ ಹೆಣೆದಿರಿ. ರಾಜಕೀಯ ಕಾರಣಕ್ಕಾಗಿ ನಮ್ಮನ್ನು ಒಂಟಿಯಾಗಿಸಲು ಯತ್ನಿಸಿದಿರಿ. ನಾವು ಒಬ್ಬಂಟಿಗರಾಗಲು ಸಾಧ್ಯವಿಲ್ಲ ಸ್ವಾಮಿ. ಏಕೆಂದರೆ ಒಗ್ಗಟ್ಟಿನ ಅಡಿಪಾಯದ ಮೇಲೆಯೇ ಒಂದು ಸಮುದಾಯವಾಗಿ ರೂಪುಗೊಂಡವರು ನಾವು. ತನ್ನನ್ನು ತಾನೇ ಮತ್ತೆ ಕಟ್ಟಿಕೊಳ್ಳಲಿದೆ ನನ್ನ ಸುಂದರ ನಾಡು….

– ಪ್ರದೀಪ್.ಕೆ.ಪಿ
ಪೆಡೆಸ್ಟ್ರಿಯನ್ ಪಿಕ್ಚರ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...