Homeಕ್ರೀಡೆಕ್ರಿಕೆಟ್ಶಮಿ ದಾಳಿಗೆ ಕಿವೀಸ್ ತತ್ತರ: ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಶಮಿ ದಾಳಿಗೆ ಕಿವೀಸ್ ತತ್ತರ: ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

- Advertisement -
- Advertisement -

2023ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಭಾರತದ ಬೌಲರ್ಸ್ ಒತ್ತಡ ಎದುರಿಸಿದರು. ಆರಂಭದಲ್ಲಿ ಭಾರತ ಮೇಲುಗೈ ಸಾಧಿಸಿದ್ದರೂ, ಬಳಿಕ ನ್ಯೂಜಿಲೆಂಡ್ ಬ್ಯಾಟರ್ಸ್‌ಗಳು ಸ್ಕ್ರೀಸ್‌ಗೆ ಅಂಟಿಕೊಂಡು ನಿಂತರು. ಆದರೆ ಮೊಹಮ್ಮದ್ ಶಮಿ ಮಾರಕ ದಾಳಿಯಿಂದಾಗಿಯೇ ಭಾರತ ಗೆಲುವು ಕಂಡಿತು.

ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ದದ ಪಂದ್ಯವೂ ಸೇರಿದಂತೆ ಭಾರತದ ಪಂದ್ಯಗಳೆಲ್ಲವೂ ಒನ್ ಸೈಡೆಡ್ ಆಗಿತ್ತು. ಆದರೆ ಸೆಮಿಫೈನಲ್ ಸವಾಲು ಸುಲಭವಾಗಿರಲಿಲ್ಲ. ಡರಿಲ್ ಮೆಚಿಲ್ ಶತಕ, ನಾಯಕ ವಿಲಿಯಮ್ಸನ್ ಹಾಫ್ ಸೆಂಚುರಿ ನಡುವೆಯೂ ಭಾರತದ ಸಂಘಟಿತ ದಾಳಿ ಫಲ ನೀಡಿತು. ನ್ಯೂಜಿಲೆಂಡ್ ತಂಡವನ್ನು 327 ರನ್‌ಗೆ ಕಟ್ಟಿಹಾಕಿತು. ಈ ಮೂಲಕ 70 ರನ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.

ಭಾರತದ ಪರ ಅದ್ಭುತ ಬ್ಯಾಟಿಂಗ್ ಮೂಡಿಬಂದಿತು. ವಿರಾಟ್ ಕೊಹ್ಲಿ ಶತಕ, ಶ್ರೇಯಸ್ ಅಯ್ಯರ್ ಸೆಂಚುರಿ, ಶುಭಮನ್ ಗಿಲ್ 80 ರನ್ ಸೇರಿದಂತೆ ಟೀಂ ಇಂಡಿಯಾದ ಸ್ಫೋಟಕ ಬ್ಯಾಟಿಂಗ್‌ನಿಂದ 397 ರನ್ ಸಿಡಿಸಿತ್ತು. ನ್ಯೂಜಿಲೆಂಡ್ ತಂಡಕ್ಕೆ 398 ರನ್ ಟಾರ್ಗೆಟ್ ನೀಡಲಾಗಿತ್ತು.

ಭಾರತ ತಂಡ ನೀಡಿದ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದರು. 30 ರನ್ ಸಿಡಿಸುವಷ್ಟರಲ್ಲೇ ನ್ಯೂಜಿಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಶಮಿ ದಾಳಿಗೆ ಡೆವೋನ್ ಕೊನ್ವೆ ವಿಕೆಟ್ ಪತನಗೊಂಡಿತು. ಡೆವೋನ್ 13 ರನ್ ಗಳಿಸಿ ಔಟಾದರು.

ಮತ್ತೆ ದಾಳಿ ಮುಂದುವರಿಸಿದ ಮೊಹಮ್ಮದ್ ಶಮಿ ಅದ್ಭುತ ಫಾರ್ಮ್‌ನಲ್ಲಿದ್ದ ರಚಿನ್ ರವೀಂದ್ರ ವಿಕೆಟ್ ಕಬಳಿಸಿದರು. ರಚಿನ್ ಕೂಡ 13 ರನ್‌ಗೆ ಔಟಾದರು. 39 ರನ್‌ಗೆ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡರಿಲ್ ಮೆಚೆಲ್ ಜೊತೆಯಾಟ ಟೀಂ ಇಂಡಿಯಾಗೆ ಭಯ ಹುಟ್ಟಿಸಿತು. ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ 2023ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಭಾರತ ತಂಡದ ಬೌಲರ್ಸ್ ಸುಸ್ತಾದರು.

ಶತಕದ ಬಳಿಕವೂ ಅಬ್ಬರಿಸುತ್ತಿದ್ದ ಡರಿಲ್ ಮಿಚೆಲ್ ಭಾರತಕ್ಕೆ ಆತಂಕ ಹೆಚ್ಚಿಸುತ್ತಲೇ ಇದ್ದರು. ಮಿಚೆಲ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ ತಂಡದಲ್ಲಿ ಸೋಲಿನ ಭೀತಿ ಆರಂಭವಾಗಿತ್ತು. ಇತ್ತ  ವಿಲಿಯಮ್ಸನ್ ಹಾಗೂ ಮಿಚೆಲ್ ಜೊತೆಯಾಟದಿಂದ ನ್ಯೂಜಿಲೆಂಡ್‌ಗೆ ಗೆಲುವಿನ ಆತ್ಮವಿಶ್ವಾಸ ಹೆಚ್ಚಿತ್ತು. ಆದರೆ ಮೊಹಮ್ಮದ್ ಶಮಿ 134 ರನ್ ಸಿಡಿಸಿ ಗಟ್ಟಿಯಾಗಿ ನಿಂತಿದ್ದ ಮಿಚೆಲ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರ ಪರಿಣಾಮ ನ್ಯೂಜಿಲೆಂಡ್ ದಾಖಲೆಯ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತ್ತು.

ಕೇನ್ ವಿಲಿಯಮ್ಸನ್ 69 ರನ್ ಸಿಡಿಸಿ ನಿರ್ಗಮಿಸಿದರು. ಮಿಚೆಲ್ ಹಾಗೂ ಕೇನ್ 181 ರನ್ ಜೊತೆಯಾಟ ಅಂತ್ಯಗೊಂಡಿತು. ಇತ್ತ ಭಾರತ ತಂಡ ಗೆಲುವಿನತ್ತ ಮುಖ ಮಾಡಿತು. ವಿಲಿಯಮ್ಸನ್ ಬೆನ್ನಲ್ಲೇ ಟಾಮ್ ಲಾಥಮ್ ವಿಕೆಟ್ ಕಬಳಿಸಿದ ಶಮಿ, ಭಾರತಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು. ಇತ್ತ ಡರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಜೊತೆಯಾಟ ಆರಂಭಗೊಂಡಿತು. ಈ ಜೋಡಿಯನ್ನು ಜಸ್ಪ್ರೀತ್ ಬುಮ್ರಾ ಬ್ರೇಕ್ ಮಾಡಿದರು.

ಪಿಲಿಪ್ಸ್ 41 ರನ್ ಸಿಡಿಸಿ ಔಟಾದರು. ಮಾರ್ಕ್ ಚಂಪನ್ ಕೇವಲ 2 ರನ್ ಸಿಡಿಸಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ ಹಾಗೂ ಫರ್ಗ್ಯೂಸನ್ ವಿಕೆಟ್ ಕಬಲಿಸದ ಶಮಿ, ನ್ಯೂಜಿಲೆಂಡ್ ತಂಡವನ್ನು 48.5 ಓವರ್‌ಗಳಲ್ಲಿ 327 ರನ್‌ಗೆ ಆಲೌಟ್ ಮಾಡಿದರು.  ಭಾರತ 70 ರನ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿತು. 2011ರ ಬಳಿಕ ಭಾರತ ವಿಶ್ವಕಪ್ ಟೂರ್ನಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು.

ಮೊಹಮ್ಮದ್ ಶಮಿ 7 ವಿಕೆಟ್ ಕಬಳಿಸಿ ಮಿಂಚಿದರು. ವಿಶ್ವಕಪ್ ಟೂರ್ನಿಯಲ್ಲಿ ಅತೀ ಕಡಿಮೆ ಇನ್ನಿಂಗ್ಸ್ನಲ್ಲಿ 50 ವಿಕೆಟ್ ಸಾಧನೆ ಮಾಡಿದ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ. ಶಮಿ 17 ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಸಾಧನೆ ಮಾಡಿದ್ದಾರೆ.

ಸಚಿನ್ ದಾಖಲೆ ಮುರಿದ ವಿರಾಟ್

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ಸ್ಟಾರ್‌ ವಿರಾಟ್‌ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಹೆಸರಲ್ಲಿ ಎರಡು ದಶಕ ಕಾಲ ಉಳಿದಿದ್ದ ವಿಶ್ವ ದಾಖಲೆಯನ್ನು ವಿರಾಟ್‌ ಕೊಹ್ಲಿ ಅಳಿಸಿಹಾಕಿದ್ದಾರೆ.

2003ರ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್ ಭಾರತ ತಂಡದ ಪರ 673 ರನ್‌ಗಳನ್ನು ಬಾರಿಸಿದ್ದರು. ಈ ದಾಖಲೆಯನ್ನು 2023ರಲ್ಲಿ ವಿರಾಟ್ ಕೊಹ್ಲಿ 711* ರನ್‌ ಗಳಿಸುವ ಮೂಲಕ ಸಚಿನ್ ದಾಖಲೆ ಮುರಿದಿದ್ದಾರೆ. 13ನೇ ಆವೃತ್ತಿಯ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಿಸಿದ 113 ಎಸೆತಗಳಲ್ಲಿ 9 ಫೋರ್‌ ಮತ್ತು 2 ಸಿಕ್ಸರ್‌ನೊಂದಿಗೆ 117 ರನ್‌ ಬಾರಿಸಿದ ವಿರಾಟ್‌ ಕೊಹ್ಲಿ, ಈ ಮನಮೋಹಕ ಇನಿಂಗ್ಸ್‌ ವೇಳೆ ದಾಖಲೆಗಳ ಮೇಲೆ ದಾಖಲೆ ಬರೆದರು.

ಇದು ವಿರಾಟ್‌ ಕೊಹ್ಲಿ ಬಾರಿಸಿದ ವಿಶ್ವ ದಾಖಲೆಯ 50ನೇ ಒಡಿಐ ಶತಕವಾಗಿದೆ. ಇದರೊಂದಿಗೆ ಸಚಿನ್ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆಯನ್ನೂ ಅಳಿಸಿಹಾಕಿದ್ದಾರೆ. ಈ ಶತಕದ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಆಡಿದ 10 ಪಂದ್ಯಗಳಲ್ಲಿ ಒಟ್ಟು 3 ಶತಕಗಳೊಂದಿಗೆ 101.57ರ ಸರಾಸರಿಯಲ್ಲಿ ಒಟ್ಟಾರೆ 711 ರನ್‌ ಬಾರಿಸಿದ್ದಾರೆ. ವಿಶ್ವಕಪ್‌ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 700ಕ್ಕೂ ಹೆಚ್ಚು ರನ್‌ ಗಳಿಸಿದ ಮೊದಲ ಬ್ಯಾಟರ್‌ ಎಂಬ ದಾಖಲೆ ಈಗ ಕೊಹ್ಲಿ ಪಾಲಾಗಿದೆ.

ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌

ವಿಶ್ವಕಪ್‌ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್‌ ಗಳಿಸಿದ ದಾಖಲೆ ಕೂಡ ವಿರಾಟ್‌ ಕೊಹ್ಲಿ ಪಾಲಾಗಿದೆ. ಇದಕ್ಕೂ ಮುನ್ನ 7 ಬಾರಿ ಈ ಸಾಧನೆ ಮಾಡಿ ಸಚಿನ್‌ ಮತ್ತು ಬಾಂಗ್ಲಾದೇಶದ ಆಲ್‌ರೌಂಡರ್ ಶಕಿಬ್ ಅಲ್ ಹಸನ್‌ ಜೊತೆಗೆ ದಾಖಲೆ ಹಂಚಿಕೊಂಡಿದ್ದರು. ಇದೀಗ 3 ಶತಕ ಮತ್ತು 5 ಅರ್ಧಶತಕಗಳೊಂದಿಗೆ ಒಟ್ಟಾರೆ 8 ಬಾರಿ ಒಂದೇ ಆವೃತ್ತಿಯಲ್ಲಿ 50ಕ್ಕೂ ಹೆಚ್ಚು ರನ್‌ ಬಾರಿಸಿ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...