ಕೊಡಗು ದುರಂತದ ಹೊಣೆ ಮತ್ತು ಪುನರ್ ನಿರ್ಮಾಣದ ಸವಾಲುಗಳು

ಕೊಡಗಿನ ದುರಂತಕ್ಕೆ ಎಲ್ಲರೂ ಸ್ಪಂದಿಸಿದ್ದಾರೆ. ಕೇರಳದ ದುರಂತದ ಮುಂದುವರಿಕೆಯೋ ಎಂಬಂತೆ ಕೊಡಗಿನ ಭೂಕುಸಿತ ಘಟಿಸಿದೆ. ನೂರಾರು ಜನ ಮನೆ ತೋಟ ಕಳೆದುಕೊಂಡಿದ್ದರೆ, ಸಾವಿರಾರು ಜನ ಪ್ರಕೃತಿಯ ಮುನಿಸಿಗೆ ಹೆದರಿ ಊರು ಬಿಟ್ಟಿದ್ದಾರೆ. ಸಂಪರ್ಕ ರಸ್ತೆಗಳೆನ್ನುವ ರಸ್ತೆಗಳೆಲ್ಲವೂ ಕುಸಿದು ಹೋಗಿವೆ. ಮುಖ್ಯತಃ ಬಯಲು ಸೀಮೆ ಮತ್ತು ಕರಾವಳಿಯನ್ನು ಸಂಪರ್ಕಿಸುವ ಜೀವ ನಾಡಿಯಂತಿರುವ ಮುಖ್ಯ ಹೆದ್ದಾರಿಗಳು ಸಂಪೂರ್ಣ ನಾಶವಾಗಿವೆ. ಒಟ್ಟಾರೆ ನಷ್ಟವನ್ನು ಅಂದಾಜು ಮಾಡಲು ಇನ್ನಷ್ಟು ಸಮಯ ಬೇಕು. ಕೊಡಗಿನ ದುರಂತದ ತುರ್ತು ಪರಿಹಾರಗಳಿಗೆ ಎಲ್ಲರೂ ಸ್ಪಂದಿಸುತ್ತಿರುವುದು ಶ್ಲಾಘನೀಯ. ಅದರಿಂದಾಚೆ, ಈ ವರ್ಷಾಂತ್ಯದ ವರೆಗೆ ಮತ್ತು ದೀರ್ಘಕಾಲೀನ ಪರಿಹಾರಗಳ ಬಗ್ಗೆಯೂ ಯೋಚಿಸಬೇಕಾಗಿದೆ.
ಈ ಭೂಕುಸಿತ ಅರ್ಧಕ್ಕರ್ಧ ಮನುಷ್ಯ ಹಸ್ತಕ್ಷೇಪದಿಂದ ಎಂಬುದು ನಿರ್ವಿವಾದ. ಕೊಡಗಿನ ಸ್ಥಳೀಯ ಸಂಸ್ಕøತಿ ಉಳಿದ ಮಲೆನಾಡಿನ ಹಾಗೆ ಬಯಲು ಸೀಮೆಗಿಂತ ಭಿನ್ನ. ಎಲ್ಲರೂ ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುತ್ತಾರೆ. ಅದಕ್ಕೆ ರಸ್ತೆಯನ್ನೂ ಮಾಡಿಕೊಳ್ಳುತ್ತಾರೆ. ಇವೆರಡಕ್ಕೂ ಮನೆ ಹಿಂದಿನ ಗುಡ್ಡವನ್ನು ಬಗೆಯಬೇಕು! ಹಾಗೇ ಸರ್ಕಾರೀ ರಸ್ತೆಗಳು ಅಗಲೀಕರಣಗೊಂಡು ನಿರ್ಮಾಣಗೊಂಡಲ್ಲೆಲ್ಲಾ ರಸ್ತೆಗಳನ್ನು ಭೂಮಿ ನುಂಗಿ ಹಾಕಿದೆ. ಜೆಸಿಬಿಯಂಥಾ ಯಂತ್ರಗಳನ್ನು ಬಳಸಿದ ಕಾರಣ ಭೂಮಿ ಒತ್ತಡಕ್ಕೊಳಗಾಗಿದೆ ಎಂಬ ಅಂಶ ಚರ್ಚಿಸಬೇಕಾದ ಸಂಗತಿ.
ಕಾಫಿ ತೋಟಗಳ ಎಗ್ಗಿಲ್ಲದ ವಿಸ್ತರಣೆ ಇನ್ನೊಂದು ಕಾರಣ. ಈ ವಿಸ್ತರಣೆಯಲ್ಲಿ ಜಮೀನಿನಲ್ಲಿದ್ದ ಕಾಡುಮರಗಳನ್ನು ಬಹುತೇಕ ಟಿಂಬರ್ ಅಂತ ಮಾರಿಯಾಗಿದೆ. ಅಲ್ಲಿ ಉಳಿದಿರುವುದು ಸಿಲ್ವರ್‍ನಂಥಾ ಮೃದು ಮರಗಳು ಮಾತ್ರಾ. ಕೊಡಗಿನ ಮಣ್ಣು ಕೊಂಚ ಮರಳು ಮಿಶ್ರಿತ. ಅದು ಲ್ಯಾಟರೈಟ್ ಕುಲಕ್ಕೆ ಸೇರಿದ್ದಲ್ಲ. ಕೊಡಗಿನ ಅಂಚಿನ ಭಾಗಗಳು ತಾಂತ್ರಿಕವಾಗಿ ಲ್ಯಾಟರೈಟ್ ಆದರೂ ಅದರಲ್ಲಿ ಕ್ಲೇ ಅಂಶ ಯಥೇಚ್ಛ ಇದೆಯಂತೆ. ಈ ಕಾರಣಕ್ಕೇ ಅದು ಬೇಗ ಸಡಿಲವಾಗುತ್ತದೆ. ಮರಗಳು ದೈತ್ಯಾಕಾರವಾಗಿ ಬೆಳೆಯಲೂ ಇದೇ ಕಾರಣ. ಬೇರು ಇಳಿಸುವುದು ಸುಲಭ. ಇವು ಗ್ರಾಮೀಣ ಪರಿಸರದ ಭೂಕುಸಿತದ ಬಗ್ಗೆ.
ಇನ್ನು ಮಡಿಕೇರಿಯಂಥಾ ಪಟ್ಟಣದಲ್ಲಿ ಹೊಸ ಬಡಾವಣೆಗಳ ಮನೆಗಳನ್ನು ಕಟ್ಟುವಾಗ ಜಲ್ಲಿ ಸಿಮೆಂಟ್ ಕಬ್ಬಿಣದ ಮೇಲೆ ವಿಶ್ವಾಸವಿಟ್ಟೇ ಕಟ್ಟಿದ್ದು ಹೊರತು, ಮಣ್ಣಿನ ಗುಣ ಸ್ವಭಾವದ ಬಗ್ಗೆ ಯಾವ ಎಂಜಿನಿಯರೂ ತಲೆ ಕೆಡಿಸಿಕೊಂಡಿಲ್ಲ. ಬೆಂಕಿ ಪೊಟ್ಟಣ ಇಟ್ಟ ಹಾಗೆ ಗುಡ್ಡದ ಇಳಿಜಾರು ಪೂರ್ತಿ ಮನೆಗಳು ಕಟ್ಟಿದ ರೀತಿ ಅಪಾಯವನ್ನು ಮೈಮೇಲೆ ಎಳೆದುಕೊಂಡ ಪರಿಯನ್ನು ಅನಾವರಣಗೊಳಿಸಿದೆ.
ಕುಶಾಲನಗರದಂಥಾ ಊರುಗಳಲ್ಲಿ ನದೀ ಪಾತ್ರದ ಗದ್ದೆಗಳಲ್ಲಿ ಲೇ ಔಟ್ ಮಾಡುವ ಖಯಾಲಿ ಶುರುವಾಗಿದ್ದೇ, ಈ ಬಾರಿ ಅಲ್ಲೆಲ್ಲಾ ನೀರು ನುಗ್ಗಲು ಕಾರಣವಾಗಿದೆ.
ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮಟ್ಟದ ರಸ್ತೆಗಳನ್ನು ನಿರ್ಮಿಸಿದ ರೀತಿ ಎಷ್ಟು ಅವೈಜ್ಞಾನಿಕ ಎಂಬುದಕ್ಕೆ ಈ ರಸ್ತೆಗಳೆಲ್ಲಾ ಸರ್ವ ನಾಶವಾಗಿರುವುದೇ ಪುರಾವೆ. ಇವನ್ನು ಪೋಸ್ಟ್‍ಮಾರ್ಟಮ್ ಎಂದು ಭಾವಿಸೋಣ.
ಮುಂದಿನ ಸರಣಿ ಸಮಸ್ಯೆಗಳೇನು ಎಂಬುದನ್ನು ಗಮನಿಸೋಣ. ಈ ಬಾರಿಯ ಮಳೆಯಿಂದಾಗಿ ಕಾಫಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನೆಲ ಕಚ್ಚುವ ಸಾಧ್ಯತೆ ನಿಚ್ಚಳವಾಗಿದೆ. ತೋಟಗಳೆಲ್ಲಾ ಅಸ್ತವ್ಯಸ್ತ ಆಗಿರುವ ಕಾರಣ ಇದನ್ನೇ ನಂಬಿರುವ ಸಾವಿರಾರು ಕೂಲಿಕಾರ ಕುಟುಂಬಗಳು ಬೀದಿಗೆ ಬೀಳುತ್ತಾರೆ, ಮುಂದಿನ ಮೂರು ನಾಲ್ಕು ತಿಂಗಳು ಕೂಲಿ ಸೃಷ್ಟಿಯಾಗುವ ಸಾಧ್ಯತೆಗಳೇ ಇಲ್ಲ. ಇದರೊಂದಿಗೆ ಆದಿವಾಸಿಗಳು, ದಲಿತ ಕಾರ್ಮಿಕರ ಗುಡಿಸಲುಗಳೆಲ್ಲಾ ಮೂರಾಬಟ್ಟೆ ಆಗಿರುವ ವರದಿಗಳಿವೆ. ಇವೆಲ್ಲಾ ಫೋಟೋಜೆನಿಕ್ ಅಲ್ಲದ ಕಾರಣ ಟಿವಿ ಚಾನೆಲುಗಳ ಕಣ್ಣಿಗೆ ಬಿದ್ದಿಲ್ಲ.
ಊರಿನ ಸಂಪರ್ಕ ರಸ್ತೆಗಳೆಲ್ಲಾ ನಾಶವಾಗಿರುವ ಕಾರಣ ಹೊರಹೋಗಲೂ ವ್ಯವಸ್ಥೆ ಇಲ್ಲ. ಸ್ಥಳೀಯವಾಗಿ ಸಂಪನ್ಮೂಲಗಳೂ ಇಲ್ಲ. ನೆನಪಿಡಿ, ಮಳೆಗಾಲದ ಅರ್ಧ ಮಾತ್ರಾ ಮುಗಿದಿದೆ. ಸುಮಾರಾಗಿ ಕಾವೇರಿ ಸಂಕ್ರಮಣದವರೆಗೂ ಕೊಡಗಲ್ಲಿ ಮಳೆ ಬರುತ್ತಿರುತ್ತದೆ. ಈ ಒಂದೊಂದು ಮಳೆಯೂ ಹಸಿ ಮಣ್ಣನ್ನು ಇನ್ನಷ್ಟು ತೇವಗೊಳಿಸುವ ಶಕ್ತಿ ಹೊಂದಿದೆ.
ಅರ್ಥಾತ್ ಈ ಕುಟುಂಬಗಳಿಗೆ ಮುಂದಿನ ಕನಿಷ್ಠ ಆರು ತಿಂಗಳು ಸಹಾಯ ಹಸ್ತ ಬೇಕು. ಅಷ್ಟೇ ಅಲ್ಲ, ಮನೆ, ರಸ್ತೆ ನಿರ್ಮಿಸುವುದೆಂದರೆ ಏನಿದ್ದರೂ ಸಂಕ್ರಾಂತಿ ಕಳೆಯಬೇಕು. ಅಂದರೆ ಈ ಬೇಸಿಗೆಯಲ್ಲಿ ದೊಡ್ಡ ಪ್ರಮಾಣದ ಆರ್ಥಿಕ ಸಹಾಯ ಬೇಕು. ಮಲೆನಾಡಿನಲ್ಲಿ ಮನೆ ಕಟ್ಟಿಸುವುದೆಂದರೆ ಮನೆಯೊಂದಕ್ಕೆ ಕನಿಷ್ಠ ಐದು ಲಕ್ಷ ಬೇಕು. ಇನ್ನು ಭೂಕುಸಿತ ನಿರೋಧಕ ರೀತಿಯಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಮರುಚಿಂತನೆ ನಡೆಯಬೇಕಾಗಿದೆ. ಇದು ಗ್ರಾಮೀಣ ಪರಿಸರದ ಬಡವರ ಬದುಕು ಕಟ್ಟುವ ಬಗ್ಗೆ. ನಾಶವಾದ ತೋಟಗಳ ಮರು ಸೃಷ್ಟಿಗೆ ರ್ದೀಕಾಲೀನ ಹಣಕಾಸಿನ ನೆರವು ಬೇಕು.
ಇನ್ನೊಂದೆಡೆ ಸಂಪರ್ಕ ರಸ್ತೆಗಳನ್ನು ಸರ್ಕಾರ ಮರು ನಿರ್ಮಿಸಲು ಸಮರೋಪಾದಿಯಲ್ಲಿ ತಯಾರಾಗಬೇಕು. ಮಡಿಕೇರಿ-ಸುಳ್ಯ, ಮಡಿಕೇರಿ-ಸೋಮವಾರಪೇಟೆ-ಸಕಲೇಶಪುರ ; ಬಿಸಿಲೆ- ಸುಬ್ರಮಣ್ಯ ರಸ್ತೆಗಳು ಸಂಪೂರ್ಣ ಪಾತಾಳಕ್ಕಿಳಿದಿವೆ. ಇವನ್ನು ನಿರ್ಮಿಸಲು ವೆಚ್ಚ ಮಾಡಿದ್ದಕ್ಕಿಂತ ಹೆಚ್ಚು ರಿಪೇರಿ ಮಾಡಲು ವೆಚ್ಚ ಮಾಡಬೇಕಿದೆ. ಮತ್ತೆ ಅದೇ ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ನಿರ್ಮಿಸಿದರೆ ಘೋರ ಭವಿಷ್ಯದ ಅಪಾಯಕ್ಕೆ ಮುನ್ನುಡಿ ಬರೆದ ಹಾಗೆಯೇ ಸೈ. ಅಂದರೆ ಇಡೀ ಪುನರ್ನಿರ್ಮಾಣ ಪರಿಸರ ಸಂವೇದೀ ಸೂಕ್ಷ್ಮಗಳನ್ನು ಒಳಗೊಳ್ಳಬೇಕಾಗಿದೆ.
ಪರಿಹಾರ ಕಾಮಗಾರಿಗಳ ಜವಾಬ್ದಾರಿ ಗಮನಿಸಿದರೆ, ಲೋಕೋಪಯೋಗಿ ಇಲಾಖೆ, ಸಮಾಜಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಜವಾಬ್ದಾರಿ ಹೆಚ್ಚು. ಅನುದಾನವೂ ಇದೇ ರಿತಿಯಲ್ಲಿ ಹರಿದು ಬರಲಿದೆ. ಈ ಇಲಾಖೆಗಳಿಗೆ ಅನುಕಂಪ ಬಿಡಿ, ದಕ್ಷತೆ ಇರುವ ಪುರಾವೆಯೂ ಇಲ್ಲ. ಇದರೊಂದಿಗೇ ಕೊಕ್ಕೆ ಹಾಕುವ ಮೂಲಕ ಕಾಮಗಾರಿಗಳನ್ನು ತ್ರಿಶಂಕು ಸ್ಥಿತಿಯಲ್ಲಿಡುವ ಸಾಮಥ್ರ್ಯ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಗಳಿಗಿವೆ. ಇವೆರಡೂ ಇಲಾಖೆಗಳ ಆದಾಯ ಮೂಲವೇ ಇದು. ಈ ಇಲಾಖೆಗಳಿಗೆ ಇಡೀ ಕೊಡಗು ಜಿಲ್ಲೆಯೇ ಒಂದು ಊಟದ ತಟ್ಟೆಯ ಹಾಗೆ ಕಂಡರೆ ಅಚ್ಚರಿ ಇಲ್ಲ!
ರೈತರ ಸಾಲಮನ್ನಾ ಮಾಡಿ ಈಗಾಗಲೇ ನಿರ್ಧನ ಯೋಗದಲ್ಲಿರುವ ರಾಜ್ಯ ಸರ್ಕಾರ ಪರಿಹಾರ ಕಾಮಗಾರಿಗಳಿಗೆ ಕನಿಷ್ಠ 2-3 ಸಾವಿರ ಕೋಟಿ ವಿನಿಯೋಗಿಸಬೇಕಿದೆ. ಕೇಂದ್ರದ ಅನುದಾನ ದೊಡ್ಡ ಮಟ್ಟದಲ್ಲಿ ಬಂದರೆ ಪರಿಸ್ಥಿತಿ ಸುಧಾರಿಸೀತು. ಆದರೆ ಪುನರ್ನಿರ್ಮಾಣ ಏನಿದ್ದರೂ ಜನವರಿಯಿಂದಾಚೆ ಎಂಬ ಸತ್ಯದೊಂದಿಗೆ ಲೋಕಸಭಾ ಚುನಾವಣೆಯ ಭರಾಟೆ ನೆನಪಿಸಿಕೊಂಡರೆ ಪರಿಹಾರ ಎಷ್ಟರ ಮಟ್ಟಿಗೆ ಸಕಾಲದಲ್ಲಿ ಪೂರೈಸೀತು ಎಂಬ ಚಿಂತೆ ನಮ್ಮನ್ನು ಕಾಡಬೇಕು.
ಆದ್ದರಿಂದಲೇ ನಾವು ಈ ಆಡಳಿತ ಯಂತ್ರದ ನಡೆಗಳ ಮೇಲೆ ಕಣ್ಣಿಡಲು ಸನ್ನದ್ಧರಾಗಬೇಕಿದೆ.

 

– ಕೆ.ಪಿ.ಸುರೇಶ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here