ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಇನ್ನುಳಿದ ಇಬ್ಬರು ಆಯುಕ್ತರ ಭಿನ್ನಮತವನ್ನು ಸಂಪೂರ್ಣವಾಗಿ ತಳ್ಳಿಹಾಕಿ ಗೌಪ್ಯವಾಗಿ ‘ಎಸ್ಐಆರ್’ (SIR) ಪ್ರಕ್ರಿಯೆ ನಡೆಸಿರುವುದು ದೇಶದ ನಾಗರಿಕರಿಗೆ ಆಘಾತ ತಂದಿದೆ. ಹೀಗಾಗಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನಾಯಕರು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, “ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಉಳಿಸುವ ಮಹತ್ತರ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿರುತ್ತದೆ. ಆದರೆ, ಇಂದು ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಹಾಗೂ ಒಬ್ಬ ನಾಯಕನಿಗಾಗಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗಿದೆ. ಗ್ಯಾನೇಶ್ ಕುಮಾರ್ ಕೈಗೊಂಡ ಏಕಪಕ್ಷೀಯ ನಿರ್ಧಾರಗಳಿಂದಾಗಿ ಬಿಹಾರದಲ್ಲಿ 63 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಹಾಗೂ ಕರ್ನಾಟಕ ಒಂದರಲ್ಲೇ ಬರೋಬ್ಬರಿ 1.07 ಕೋಟಿ ಮತಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದೆ,” ಎಂದು ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಎಚ್ಚರಿಸಿದ್ದ ಸತ್ಯ ಈಗ ಜಗಜ್ಜಾಹೀರು:
“ರಾಹುಲ್ ಗಾಂಧಿ ಅವರು 2025 ರ ಫೆಬ್ರವರಿಯಲ್ಲೇ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಈ ಅಪಾಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದಾಗ್ಯೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಯಾವುದೇ ಗೌರವವಿಲ್ಲದೆ ಆಯೋಗವು ನಿಯಮಬಾಹಿರವಾಗಿ ನಡೆದುಕೊಂಡಿದೆ. ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಬಂದಿರುವ ತನಿಖಾ ವರದಿಗಳು ಚುನಾವಣಾ ಆಯೋಗದ ಸಂವಿಧಾನ ವಿರೋಧಿ ನಡೆಯನ್ನು ಸ್ಪಷ್ಟವಾಗಿ ನಿರೂಪಿಸಿವೆ,” ಎಂದರು.
ಮುಂದುವರಿದು ಮಾತನಾಡಿದ ಅವರು, “ಇದು ಅಕ್ಷರಶಃ ದೇಶದ್ರೋಹದ ಕೆಲಸ. ಈ ಅಕ್ರಮಕ್ಕೆ ಕುಮ್ಮಕ್ಕು ನೀಡಿರುವ ಪ್ರಧಾನಮಂತ್ರಿಗಳು, ಗೃಹಸಚಿವರ ನಡೆ ಹಾಗೂ ಚುನಾವಣಾ ಆಯೋಗದ ಕಾರ್ಯವನ್ನು ದೇಶದ್ರೋಹವೆಂದೇ ಪರಿಗಣಿಸಬೇಕಾಗುತ್ತದೆ. 2023 ರಲ್ಲಿ ಸಂಸತ್ತಿನಲ್ಲಿ ತಂದ ಶಾಸನಬದ್ಧ ಬದಲಾವಣೆಯಿಂದಾಗಿ ಚುನಾವಣಾ ಆಯುಕ್ತರ ಮೇಲೆ ತಕ್ಷಣಕ್ಕೆ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲು ಆಡಳಿತಾತ್ಮಕ ತೊಡಕುಗಳಿವೆ. ಹೀಗಾಗಿ ಗ್ಯಾನೇಶ್ ಕುಮಾರ್ ಅವರಿಂದ ತಕ್ಷಣ ರಾಜೀನಾಮೆ ಪಡೆದು ಅವರನ್ನು ಬಂಧಿಸಬೇಕು,” ಎಂದು ಒತ್ತಾಯಿಸಿದರು.
ನಾಳೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ
ಸಂವಿಧಾನ ವಿರೋಧಿ ಈ ನಡೆಯನ್ನು ಖಂಡಿಸಿ ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಎಲ್ಲಾ ಜಾತ್ಯತೀತ ಹಾಗೂ ವಿಪಕ್ಷಗಳಿಗೂ ಈ ಹೋರಾಟಕ್ಕೆ ಆಹ್ವಾನ ನೀಡಲಾಗಿದೆ. “ಒಂದು ವೇಳೆ ನಾವು ಈಗ ಧ್ವನಿ ಎತ್ತದಿದ್ದರೆ, ಮುಂದಿನ ದಿನಗಳಲ್ಲಿ ಚುನಾವಣೆ ಎಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಲಿದೆ,” ಎಂದು ಬಿ.ಕೆ. ಹರಿಪ್ರಸಾದ್ ಎಚ್ಚರಿಸಿದರು. ಮೊದಲ ಹಂತದಲ್ಲಿ ನಾಳೆ ಬೆಂಗಳೂರಿನಲ್ಲಿ ಹಾಗೂ ಎರಡನೇ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಂಟಿ ಪ್ರತಿಭಟನೆ ನಡೆಯಲಿದೆ.
ಫಾರಂ 6 ಬದಲಾವಣೆ & ದಲಿತ, ಅಲ್ಪಸಂಖ್ಯಾತರ ಮತಗಳ ಗಾಯಬ್:
“ಆಯೋಗದ ಸದಸ್ಯರಾದ ಸುಖ್ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು 10 ತಿಂಗಳಲ್ಲಿ 14 ಬಾರಿ ಬರೆದ ಆಕ್ಷೇಪಣಾ ಟಿಪ್ಪಣಿಗಳನ್ನೂ ಲೆಕ್ಕಿಸದೆ, ಅವರ ಅನುಮತಿಯೇ ಇಲ್ಲದೆ ‘ಫಾರಂ 6’ (Form 6) ಅನ್ನು ಮಾರ್ಪಾಡು ಮಾಡಲಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಅವರು ಮತಗಳ್ಳತನದ ವಿರುದ್ಧ ಧ್ವನಿ ಎತ್ತಿದಾಗ ಗ್ಯಾನೇಶ್ ಕುಮಾರ್ ಕ್ಷಮೆಗೆ ಆಗ್ರಹಿಸಿದ್ದರು. ಆದರೆ ಇಂದು ಇಡೀ ದೇಶದ ಮುಂದೆ ಅಸಂವಿಧಾನಿಕವಾಗಿ ನಡೆದುಕೊಂಡಿರುವ ಗ್ಯಾನೇಶ್ ಕುಮಾರ್ ಯಾವ ಕ್ಷಮೆಗೂ ಅರ್ಹರಲ್ಲ,” ಎಂದು ಚಾಟಿ ಬೀಸಿದರು.
ತಮ್ಮ ಬಳಿ ಇರುವ ದಾಖಲೆಗಳನ್ನು ಪ್ರದರ್ಶಿಸಿದ ಹರಿಪ್ರಸಾದ್, “ನನ್ನ ಬಳಿ ಯಾವುದೇ ಸಹಿ ಇಲ್ಲದೆ ಡಿಲೀಟ್ ಆಗಿರುವ 65 ಸಾವಿರ ಮತಗಳ ಅರ್ಜಿಗಳಿವೆ. ಬೆಳಗಾವಿ ಬಿಜೆಪಿ ಶಾಸಕ ಅಭಯ್ ಪಾಟೀಲ್ 2500 ಮತದಾರರ ಹೆಸರು ತೆಗೆದುಹಾಕಲು ಪತ್ರ ಬರೆದಿದ್ದನ್ನು ನಾನು ಬಹಿರಂಗಪಡಿಸಿದ್ದೆ. ಬಬಲೇಶ್ವರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದಾದ್ಯಂತ ಮುಖ್ಯವಾಗಿ ಅಲ್ಪಸಂಖ್ಯಾತರು ಹಾಗೂ ದಲಿತರ ಮತಗಳನ್ನು ಯೋಜಿತವಾಗಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ತಪ್ಪು ಇರುವುದು ಮತಪಟ್ಟಿಯಲ್ಲಲ್ಲ, ಬದಲಿಗೆ ಆಯೋಗದ ‘ಎಸ್ಐಆರ್’ (SIR) ಪ್ರಕ್ರಿಯೆಯಲ್ಲಿ. ನಾವು ಆಯೋಗವನ್ನು ಪ್ರಶ್ನಿಸಿದರೆ, ಆಯೋಗದ ಪರವಾಗಿ ಬಿಜೆಪಿಯವರು ಉತ್ತರ ನೀಡುತ್ತಿರುವುದು ಇವರಿಬ್ಬರ ಅಂತರಂಗದ ಬಾಂಧವ್ಯವನ್ನು ಎತ್ತಿಹಿಡಿಯುತ್ತದೆ,” ಎಂದು ಟೀಕಿಸಿದರು.


