ದೇಶದಲ್ಲಿ ಏರಿಕೆಯಾದ ಕೊರೊನಾ ಪ್ರಕರಣಗಳು: ಕೇರಳದ ಪಾಲು 75% ಕ್ಕೂ ಅಧಿಕ

ಕೋವಿಡ್ ಸಾಂಕ್ರಾಮಿಕದ ಮೊದಲ ಅಲೆ ಅಪ್ಪಳಿಸಿದಾಗಿನಿಂದ ಇದುವರೆಗೂ ಪುನಃ ಸಹಜಸ್ಥಿತಿಗೆ ಬರಲಾಗದೆ ಓಲಾಡುತ್ತಿರುವುದು ಕಲಿಕೆಯ ಜಗತ್ತು. ಶಾಲಾ-ಕಾಲೇಜುಗಳ ನಿಯಮಿತ ವೇಳಾಪಟ್ಟಿಗಳು ಗಾಳಿಗೆ ತೂರಿಹೋಗಿ, ಬಹುಕಾಲದಿಂದ ಕನವರಿಸುತ್ತಾ ಕಾಪಿಟ್ಟುಕೊಂಡು ಬಂದಿದ್ದ ಭವಿಷ್ಯದ ಕುರಿತ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಬದುಕುಗಳು ಡೋಲಾಯಮಾನವಾಗಿವೆ. ಜಗತ್ತಿನಾದ್ಯಂತ ಕಳೆದ ಒಂದೂವರೆ ವರ್ಷದಲ್ಲಿ ಕೋವಿಡ್ ಸಂಬಂಧಿ ಆರೋಗ್ಯ ಮತ್ತು ಜೀವನೋಪಾಯದ ವಿಷಯದ ಕುರಿತಾಗಿ ವ್ಯಕ್ತಗೊಂಡಿರುವ ಆತಂಕಗಳ ನಂತರದಲ್ಲಿ ಅತಿಹೆಚ್ಚು ಆತಂಕ ಕಂಡುಬಂದಿರುವುದು ಮಕ್ಕಳ ಕಲಿಕೆಯ ಕುರಿತಾಗಿ.

ವಿಶೇಷವಾಗಿ, ಸರ್ಕಾರಗಳ ಮತ್ತು ಶಿಕ್ಷಣ ಸಚಿವರುಗಳ ಗಮನ ಕೇವಲ ಶಿಕ್ಷಣದ ಹೊಸ ನೀತಿಗಳನ್ನು ಸಾಂಕ್ರಾಮಿಕದ ಕಾಲದಲ್ಲಿ ಧಿಡೀರನೆ ಜಾರಿಗೆ ತರುವುದರ ಮೇಲೆ ಹಾಗೂ ಪರೀಕ್ಷೆಗಳನ್ನು ಎಲ್ಲರ ವಿರೋಧದ ನಡುವೆಯೂ ಜಾಳುಜಾಳಾಗಿ ನಡೆಸುವುದರ ಮೇಲೆಯೇ ಕೇಂದ್ರೀಕರಿಸಿರುವಾಗ, ವಿದ್ಯಾರ್ಥಿಗಳು, ಪೋಷಕರು ಮತ್ತು ಕಾಳಜಿಯುಳ್ಳವರಲ್ಲಿ ಈ ಆತಂಕ ದುಪ್ಪಟ್ಟಾಗಿದೆ. ಆದ್ದರಿಂದ, ಕೋವಿಡ್‌ನಂತಹ ಜಾಗತಿಕ ಸಾಂಕ್ರಾಮಿಕದ ಕಾಲದಲ್ಲಿ ಕಲಿಕೆಯ ಸಾಧ್ಯತೆಗಳನ್ನು ಹೊಸದೇ ಆಯಾಮದಿಂದ ಪರಿಶೀಲಿಸಬೇಕೆಂಬ ಒತ್ತಡವನ್ನು ಹೇರಲೇಬೇಕಾದ ಸಂದರ್ಭವಿದು.

ಕರ್ನಾಟಕ ಸರ್ಕಾರ ಮೊದಲ ಅಲೆಯ ಕೋವಿಡ್ ಸಂದರ್ಭದಿಂದಲೂ ತರಗತಿಗಳು ಮತ್ತು ಪರೀಕ್ಷೆಗಳನ್ನು ನಡೆಸುವ ವಿಚಾರದಲ್ಲಿ ಹಲವು ವಿವಾದಗಳಿಗೆ ತುತ್ತಾಗಿದೆ. ಮೊದಲ ಅಲೆಯಲ್ಲಿ ಕೋವಿಡ್‌ಅನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಜಗತ್ತಿನ್ನೂ ದಿಗ್ಭ್ರಾಂತಿಯಲ್ಲಿರುವಾಗಲೇ, ಎಲ್ಲ ಬಗೆಯ ಅಪಾಯವನ್ನೂ ಆಹ್ವಾನಿಸುವ ರೀತಿಯಲ್ಲಿ ಹಠಕ್ಕೆ ಬಿದ್ದವರಂತೆ ಕರ್ನಾಟಕ ಸರ್ಕಾರ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಿತು. ಅದನ್ನೇ ತಮ್ಮ ಸರ್ಕಾರದ ಸಾಧನೆಯೆಂಬಂತೆ ದೊಡ್ಡದಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿತು. ಅದೇ ಮಾದರಿಯಲ್ಲಿ ಈ ಬಾರಿ ಹಠಕ್ಕೆ ಬಿದ್ದು ಹತ್ತನೇ ತರಗತಿ ಪರೀಕ್ಷೆಗಳನ್ನು- ಎಲ್ಲ ವಿಷಯಗಳನ್ನೂ ಕೇವಲ ಎರಡು ದಿನಗಳಲ್ಲಿ ಅರ್ಧಕ್ಕಿಂತ ಕಡಿಮೆ ಅಂಕಗಳಿಗೆ ಬರೆಸುವ ವಿಧಾನದಲ್ಲಿ- ನಡೆಸಲಿದೆ.

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಏಕೆ ನಡೆಸುವುದಿಲ್ಲ, ಕೇವಲ ಹತ್ತನೇ ತರಗತಿಗೆ ಮಾತ್ರ ಯಾಕೆ ಪರೀಕ್ಷೆ ಎಂಬುದಕ್ಕೆ ಯಾವುದೇ ಸಮಾಧಾನಕರ ಉತ್ತರ ಶಿಕ್ಷಣ ಸಚಿವರಿಂದ ಬಂದಿಲ್ಲ. ವಾಸ್ತವದಲ್ಲಿ, ಈಗಿನ ಶಿಕ್ಷಣ ಪದ್ಧತಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂಕಗಳು ವೃತ್ತಿಪರ ಶಿಕ್ಷಣಕ್ಕೆ ಕೀಲಕವೆಂಬ (’ಅನಪೇಕ್ಷಿತ’) ಸಂದರ್ಭ ಇದ್ದಾಗಿಯೂ, ಆ ಪರೀಕ್ಷೆಗಳನ್ನು ರದ್ದುಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಅತ್ಯಂತ ತರಾತುರಿಯಲ್ಲಿ ನಡೆಸಲು ಸರ್ಕಾರ ಮುಂದಾಗಿದೆ. ಸಂಬಂಧಪಟ್ಟ ಎಲ್ಲರ ಆರೋಗ್ಯ ಭದ್ರತೆಯನ್ನೂ ಕಡೆಗಣಿಸಿ ಈ ಪರೀಕ್ಷೆಗಳನ್ನು ನಡೆಸಬೇಕಾದ ಅಗತ್ಯವಾದರೂ ಏನು ಎಂಬುದು ಈವರೆಗೆ ಸ್ಪಷ್ಟಗೊಂಡಿಲ್ಲ.

ತಮ್ಮದೇ ಪಕ್ಷದ ಪ್ರಧಾನಮಂತ್ರಿ ಸಿಬಿಎಸ್ಸಿ ಮತ್ತು ಐಸಿಎಸ್ಸಿಗಳ 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಮಾಡಿರುವುದರಿಂದ, ರಾಜ್ಯದ ಶಿಕ್ಷಣ ಸಚಿವರು ಇಲ್ಲಿ 12ನೇ ತರಗತಿ (ಎರಡನೇ ಪಿಯುಸಿ)ಗೆ ಪರೀಕ್ಷೆಗಳನ್ನು ನಡೆಸುವ ಆಭಾಸಕರ ನಿರ್ಧಾರ ಕೈಬಿಟ್ಟು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮಾತ್ರ ನಡೆಸುತ್ತಿರುವುದರ ಹಿಂದಿರುವ ವಿವೇಕವೇನು ಎಂಬುದು ತಿಳಿಯುವುದಿಲ್ಲ.

ಈ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಹಸನ ಕೋವಿಡ್ ಸಂದರ್ಭದ ಶಿಕ್ಷಣದ ಸುತ್ತಲಿನ ಒಂದು ಪ್ರಶ್ನೆಯಾದರೆ, ಕಲಿಕೆಗಿಂತಲೂ ಪರೀಕ್ಷೆಗಳಿಗೇ ಹೆಚ್ಚು ಮಹತ್ವ ಕೊಡುವ ನಮ್ಮ ಭಾರತೀಯ ಶಿಕ್ಷಣ ವ್ಯವಸ್ಥೆಯ ವಿಪರ್ಯಾಸಕರ ವಾಸ್ತವವು ಆಗಿದೆ. ಈ ಸಂದರ್ಭದಲ್ಲೂ ಅದು ಇನ್ನಷ್ಟು ಢಾಳಾಗಿ ಕಾಣುವಂತೆ ಮುಂದುವರೆದಿರುವುದು ಮತ್ತೊಂದು ದುಃಖಕರ ಸಂಗತಿ. 2020ರ ಡಿಸೆಂಬರ್‌ನಲ್ಲೇ ಯೂನಿಸೆಫ್ ಬಿಡುಗಡೆ ಮಾಡಿದ ವರದಿಯೊಂದರಲ್ಲಿ, ’ಸುರಕ್ಷಿತ ಶಾಲಾಕೊಠಡಿ’ಗಳನ್ನು ರೂಪಿಸುವುದು ಈ ಕಾಲದಲ್ಲಿ ಸರ್ಕಾರಗಳ ಮೇಲಿರುವ ಅತಿಮುಖ್ಯ ಹೊಣೆಗಾರಿಕೆಯೆಂದು ಸ್ಪಷ್ಟವಾಗಿ ಹೇಳಿದೆ. ಅಷ್ಟೇಅಲ್ಲದೆ, ಅದನ್ನು ಹೇಗೆ ಸಾಧಿಸಬಹುದೆಂಬುದಕ್ಕೆ ನಿರ್ದಿಷ್ಟವಾದ ಮಾರ್ಗಸೂಚಿಗಳನ್ನೂ ಕೊಟ್ಟು, ನೇರವಾದ ತರಗತಿಯ ಕಲಿಕೆಯನ್ನು ಸುರಕ್ಷಿತ ವಾತಾವರಣದ ಜೊತೆಗೆ ಸಾಧ್ಯವಾಗಿಸಬಹುದೆಂಬುದನ್ನು ನಿದರ್ಶನಗಳ ಸಮೇತ ತೋರಿಸಿದೆ (ಯೂನಿಸೆಫ್ ವರದಿ-ಡಿಸೆಂಬರ್ 7, 2020).

ಸೂಕ್ತ ಪೂರ್ವಸಿದ್ಧತೆಗಳಿಲ್ಲದೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆರೋಗ್ಯ ರಕ್ಷಣೆಯನ್ನು ಬದಿಗೊತ್ತಿ ಹತ್ತನೇ ತರಗತಿಯ ಪರೀಕ್ಷೆಗಳನ್ನು ನಡೆಸಿದರು ಎಂದಿಟ್ಟುಕೊಳ್ಳಿ; ಈಗಾಗಲೇ 16 ತಿಂಗಳುಗಳಿಂದ ಕಲಿಕೆಯಿಲ್ಲದೇ ಕಾಲಕಳೆಯುತ್ತಿರುವ ಮಕ್ಕಳಿಗೆ-ವಿಶೇಷವಾಗಿ ಆನ್‌ಲೈನ್ ಶಿಕ್ಷಣದಂತಹ ಅನುಕೂಲಗಳಿಲ್ಲದ ಸರ್ಕಾರಿ ಶಾಲೆಯ ಮಕ್ಕಳಿಗೆ- ನಿರಂತರವಾಗಿ ತರಗತಿಗಳನ್ನೇಕೆ ನಡೆಸಲಿಲ್ಲ ಎಂಬುದು ಬಹುಮುಖ್ಯವಾದ ಪ್ರಶ್ನೆಯಲ್ಲವೇ? ಶಾಲೆಯನ್ನು ನಡೆಸುವಾಗ ಆರೋಗ್ಯ ರಕ್ಷಣೆಯ ವಿಷಯ ಪ್ರಸ್ತಾಪಿಸುತ್ತಾ, ಮೇಲೆ ಹೇಳಲಾದ ಯೂನಿಸೆಫ್‌ನ ಮಾರ್ಗಸೂಚಿಯಲ್ಲಿ “191 ದೇಶಗಳಲ್ಲಿ ಡಬ್ಲುಎಚ್‌ಓ ನಡೆಸಿದ ಸಮೀಕ್ಷೆಯು ನೀಡಿರುವ ನಿಖರ ಅಂಕಿಸಂಖ್ಯೆಗಳು ತೋರಿಸುವಂತೆ, ಶಾಲೆಗಳು ನಡೆಯುವುದು ಅಥವಾ ನಡೆಯದಿರುವುದಕ್ಕೂ, ಸಮುದಾಯದ ಮಟ್ಟದಲ್ಲಿ ಕೋವಿಡ್ ಹಬ್ಬುವುದಕ್ಕೂ ನೇರಾನೇರ ಸಂಬಂಧವಿಲ್ಲ” ಎಂದಿರುವುದನ್ನು ಗಮನಿಸಬೇಕು.

ಮತ್ತೂ ಒಂದು ಪ್ರಮುಖ ವಿಚಾರ, ಶಾಲೆಗಳು ಭಾರತದಂತಹ ದೇಶದಲ್ಲಿ ಕೇವಲ ಕಲಿಕೆಯ ಕೇಂದ್ರಗಳಷ್ಟೇ ಅಲ್ಲ ಎಂಬುದು. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನಸಮುದಾಯಗಳಿರುವ ನಮ್ಮ ದೇಶದಂತಹ ದೇಶಗಳಲ್ಲಿ, ಶಾಲೆಗಳು ಮಕ್ಕಳಿಗೆ ಓದು, ಬರಹ ಮತ್ತು ಲೆಕ್ಕಹಾಕುವುದನ್ನು ಕಲಿಸುವ ಕಲಿಕಾ ಕೇಂದ್ರಗಳಷ್ಟೇ ಅಲ್ಲ. ಅವು ಮಕ್ಕಳಿಗೆ ಅತ್ಯಗತ್ಯ ಪೌಷ್ಠಿಕಾಂಶಗಳನ್ನು ಪೂರೈಸುವ ಪೋಷಣಾ ಕೇಂದ್ರಗಳೂ ಹೌದು. ಸಮಾಜದೊಂದಿಗೆ ಬೆರೆಯುವಿಕೆಯನ್ನು ಖಾತ್ರಿಪಡಿಸುವ ಮತ್ತು ಆ ಮೂಲಕ ಅವರ ವ್ಯಕ್ತಿತ್ವ ವಿಕಾಸಗೊಳ್ಳುವ ಬೆಳವಣಿಗೆಯ ಕೇಂದ್ರಗಳೂ ಹೌದು. ಎಲ್ಲಕ್ಕಿಂತ ಮುಖ್ಯವಾಗಿ ಅವರ ಮೇಲಾಗಬಹುದಾದ ದೈಹಿಕ-ಮಾನಸಿಕ ದೌರ್ಜನ್ಯ ಅಥವಾ ಕಿರುಕುಳಗಳನ್ನು ಯಾವುದಾದರೊಂದು ರೂಪದಲ್ಲಿ ಪತ್ತೆಹಚ್ಚಿ ಅವುಗಳಿಂದ ಮಕ್ಕಳನ್ನು ರಕ್ಷಿಸುವ ರಕ್ಷಾಕವಚಗಳೂ ಹೌದು. ಹೀಗೆ ಬಡದೇಶವೊಂದರಲ್ಲಿ ಶಾಲೆ ಬಹುರೂಪಿಯಾದ ಪಾತ್ರವನ್ನು ವಹಿಸುತ್ತದೆ. ಕೋವಿಡ್ ಕಾರಣಕ್ಕಾಗಿ ಸಂಪೂರ್ಣವಾಗಿ ತರಗತಿಗಳನ್ನು ರದ್ದುಪಡಿಸುವಾಗ ಈ ಎಲ್ಲದಕ್ಕೂ ಪರ್ಯಾಯಗಳೇನು ಎಂಬ ಬಗ್ಗೆ ಕನಿಷ್ಟ ಕಾಳಜಿಯನ್ನೂ ಸರ್ಕಾರಗಳು ತೋರಿಸಲಿಲ್ಲವೆಂಬುದರ ಬಗ್ಗೆ ಈಗಾಗಲೇ ಶಿಕ್ಷಣಾಸಕ್ತರು ಮತ್ತು ತಜ್ಞರು ಸಾಕಷ್ಟು ಗಟ್ಟಿಯಾಗಿ ಟೀಕಿಸಿದ್ದಾರೆ. ಆದರೂ ಇವೆಲ್ಲವಕ್ಕೂ ಸರ್ಕಾರಗಳು ’ಜಾಣಮೌನ’ವನ್ನೇ ಉತ್ತರವನ್ನಾಗಿ ಮಾಡಿಕೊಂಡಿವೆ.

ಯಾವ ಟೀಕೆಗಳನ್ನೂ ನೇರವಾಗಿ ತಾಗಿಸಿಕೊಳ್ಳದೆ, ತಮಗೆ ಬೇಕಾದ ಬಹುಸಂಖ್ಯಾತ ಜನವಿರೋಧಿ ಶಿಕ್ಷಣನೀತಿಗಳನ್ನು ತರುವುದರಲ್ಲಿ ಮಾತ್ರ ಅಪಾರ ಮುತುವರ್ಜಿ ವಹಿಸುತ್ತಿವೆ. ಹೊಸ ಶಿಕ್ಷಣ ನೀತಿಯನ್ನು ಈವರೆಗೆ ಸಂಸತ್ತಿನಲ್ಲಿ ಒಮ್ಮೆಯೂ ಮುಕ್ತ ಚರ್ಚೆಗೆ ತೆಗೆದುಕೊಳ್ಳದೆ ಈಗಾಗಲೇ ಅದನ್ನು ತಮ್ಮದೇ ಪಕ್ಷದ ರಾಜ್ಯ ಸರ್ಕಾರಗಳ ಮೂಲಕ ಜಾರಿಮಾಡುವುದರಲ್ಲೂ ಕೇಂದ್ರವು ಮುಂದಡಿಯಿಟ್ಟಿದೆ. ಅದೇ ರೀತಿ ಕೋವಿಡ್ ಕಾಲದಲ್ಲಿ ಆನ್‌ಲೈನ್ ಶಿಕ್ಷಣವೇ ಸುರಕ್ಷಿತವೆಂಬ ’ಮಹಾಮಂತ್ರ’ವನ್ನು ಪಠಿಸುತ್ತಾ, ಬಹುಕಾಲದಿಂದ ತಾವು ಮುಂದೆ ತಳ್ಳಬೇಕೆಂದಿದ್ದ ಅಸಮಾನತೆಯ ಮತ್ತೊಂದು ಅಸ್ತ್ರವನ್ನು ಯಶಸ್ವಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಬೇರೂರಿಸಲಾಗಿದೆ. ಇದರಿಂದ ಈಗಾಗಲೇ ಏರ್ಪಟ್ಟಿದ್ದ ಖಾಸಗಿ-ಸರ್ಕಾರಿ ಎಂಬ ಅಸಮಾನತೆಯ ಬಿರುಕುಗಳು ಇನ್ನಷ್ಟು ಆಳವಾಗುತ್ತಾ ಹೋಗಿ, ಅವು ಶಾಶ್ವತಗೊಳ್ಳುವ ಅಪಾಯ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರಶ್ನಿಸುವ ದನಿಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಿರುವುದು ತುರ್ತು ಅಗತ್ಯವಾಗಿದೆ.

ಮುಖ್ಯವಾಗಿ, ಶಿಕ್ಷಣದ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಅದಕ್ಕೆ ಸಂಬಂಧಪಟ್ಟ ಎಲ್ಲ ಹಕ್ಕುಬಾಧ್ಯಸ್ಥರನ್ನೂ (ಸ್ಟೇಕ್ ಹೋಲ್ಡರ್ಸ್‌) ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸುವ ಅಗತ್ಯ ಇದೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ತಜ್ಞರನ್ನೊಳಗೊಂಡ ಎಲ್ಲರ ಅನಿಸಿಕೆ ಅಭಿಪ್ರಾಯಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲೇಬೇಕೆಂಬ ನ್ಯಾಯಯುತವಾದ ಒತ್ತಾಯವನ್ನು ಈ ಬಗ್ಗೆ ಕಾಳಜಿಯುಳ್ಳ ಎಲ್ಲರೂ ಮುಂದಿಡುವುದು ಅವಶ್ಯಕವಾದ ಹೆಜ್ಜೆ. ಈಗಿರುವ ಪ್ರಶ್ನೆಯೆಂದರೆ, ಏಕಾಧಿಪತ್ಯವೇ ತಮ್ಮ ಆಡಳಿತದ ಉಸಿರಾಗಿಸಿಕೊಂಡಿರುವವರು ಆಳುತ್ತಿರುವಾಗ ಇಂತಹ ಪ್ರಜಾತಂತ್ರದ ಪ್ರಯತ್ನಗಳಿಗೆ ಜಾಗವಿದೆಯೇ? ಆ ರೀತಿಯಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಮಟ್ಟಿಗೆ ಚಳವಳಿಗಳ ಮತ್ತು ಜೀವಪರರ ಪ್ರಯತ್ನಗಳು ಬಲಗೊಳ್ಳಬಲ್ಲವೇ?

(ಪ್ರಜಾವಾಣಿ ಫೇಸ್ ಬುಕ್ ಲೈವ್‌ನಲ್ಲಿ ನಡೆದ ಇದೇ ವಿಷಯದ ಕುರಿತ ಸಂವಾದದ ಸಂದರ್ಭದಲ್ಲಿ ಸಿದ್ಧಪಡಿಸಿದ ಬರಹ)

ಮಲ್ಲಿಗೆ ಸಿರಿಮನೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ಇದನ್ನೂ ಓದಿ: ಕೊರೊನಾ 3ನೇ ಅಲೆ: ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ಐಎಂಎ ಎಚ್ಚರಿಕೆ

LEAVE A REPLY

Please enter your comment!
Please enter your name here